ಎಸ್.ವೈ. ಗುರುಶಾಂತ್
`ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಜಾರಿಯಾಗೋದು ಯಾವಾಗ?’ `ಗ್ಯಾರಂಟಿಗಳ ಬಗ್ಗೆ ಏನು ಗ್ಯಾರಂಟಿ?’ `ಸರ್ಕಾರ ಮಾಡೋದೇ ಗ್ಯಾರಂಟಿ ಇಲ್ಲ, ಇನ್ನು ಕೊಟ್ಟ ಗ್ಯಾರಂಟಿಗಳಿಗೆ ಏನ್ ಗ್ಯಾರಂಟಿ?’ ಇಂತಹ ಮಾತು, ಹೇಳಿಕೆಗಳು ಚುನಾವಣಾ ಫಲಿತಾಂಶ ಹೊರ ಬಿದ್ದ ಕೂಡಲೇ ಪ್ರತಿದಿನವೂ ಕೇಳಿ ಬರುತ್ತಿವೆ. ಅವು ಬಹುತೇಕ ಬಿಜೆಪಿ ಯವರ ಬಾಯಲ್ಲೇ ಕೇಳಿದವು. ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ನೀಡಿದ ಐದು ಗ್ಯಾರಂಟಿಗಳು ಹೆಚ್ಚಿನ ಮತ ತರಲು ಒಂದು ಬಹು ಮುಖ್ಯ ಕಾರಣ ಎನ್ನಲಾಗುತ್ತಿದೆ. ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಗ್ಯಾರಂಟಿ ಕೇಳುವ ಮಾತುಗಳಿಂದ ಜನರು ಕಾಂಗ್ರೆಸ್ ಗೆ ವಿರೋಧವಾಗಿ, ತಮ್ಮ ಪರವಾಗಿ ಬದಲಾಗುತ್ತಾರೆ ಎಂದು ನಂಬಿದಂತಿದೆ!
ಹೊಸ ಸರಕಾರ ನಿಶ್ಚಿತವಾದ ನಂತರ 10ಕೆ.ಜಿ. ಉಚಿತವಾಗಿ ಅಕ್ಕಿ ನೀಡುವುದು, ೨೦೦ ಯೂನಿಟ್ ವಿದ್ಯುತ್ ಉಚಿತ, ನಿರುದ್ಯೋಗಿ ಯುವಜನರಿಗೆ ರೂ.2೦೦೦ ನಿರುದ್ಯೋಗ ಭತ್ಯೆ, ಗೃಹಿಣಿಗೆ ರೂ. 3೦೦೦ ಸಹಾಯಧನ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೀಗೆ ಕೂಡಲೇ ನೀಡಬೇಕು.ಜಾರಿ ಮಾಡಲು ಇನ್ನೇನು ಪ್ರಾಬ್ಲಂ ಎನ್ನುವಂತೆ ಲೇವಡಿ ಮಾಡಿ ಪ್ರಚಾರ ಮಾಡಲಾಯಿತು. ಅದರ ಪರಿಣಾಮ ರಾಜ್ಯದ ಕೆಲವೆಡೆ ‘ಆ ಹಿಂದಿನ ತಿಂಗಳ ವಿದ್ಯುತ್ ಬಿಲ್ ಕಟ್ಟುವುದಿಲ್ಲ’ ಎಂದು ತಕರಾರು ತೆಗೆಯುವಲ್ಲಿಯೂ ಆದಂತಿದೆ. ಆದರೆ ಬಿಜೆಪಿಯ ವಾದ ವೈಖರಿಯನ್ನು ಗಮನಿಸಿದರೆ ಜನಸಾಮಾನ್ಯರಿಗೆ ಪರಿಹಾರ ಬೇಗನೆ ತಲುಪಲಿ ಎನ್ನುವುದಕ್ಕಿಂತ ಜನತೆಗೆ ಒಂದಿಷ್ಟು ಪರಿಹಾರ ಕಲ್ಪಿಸಲು ಇಚ್ಚಿಸಿದ ಸರ್ಕಾರವನ್ನು ಟೀಕಿಸುವುದು ಒಂದು ಕಡೆ ಯಾದರೆ, ಜೊತೆಗೆ ಇಂತಹ ಯೋಜನೆಗಳು ಅನವಶ್ಯಕ ಮತ್ತು ಹಾನಿಕಾರಕ ಎನ್ನುವ ಬಹುದೊಡ್ಡ ಪ್ರಚಾರ ಮತ್ತೊಂದು ಕಡೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಕಾರ ಇದಕ್ಕೆ ಮಾಡುವ ವೆಚ್ಚ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಸಾಲದ ಬಲೆಯಲ್ಲಿ ನೂಕುತ್ತದೆ ಎಂದು ಇನ್ನೊಂದು ಕಡೆ ವಾದಿಸುತ್ತಿದ್ದಾರೆ. ಒಟ್ಟು ಸಾರಾಂಶದಲ್ಲಿ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಚುನಾವಣೆಗೂ ಮೊದಲು ಪುಕ್ಕಟೆ ಯೋಜನೆಗಳನ್ನು ನಿಲ್ಲಿಸಬೇಕು ಎಂದೇ ಹೂಂಕರಿಸಿದ್ದರು. ಆದರೆ ಅದೇ ನರೇಂದ್ರ ಮೋದಿಯವರು ಕಾಂಗ್ರೆಸ್ಸಿನ ಪ್ರಣಾಳಿಕೆ ಬಿಡುಗಡೆಯಾದ ಮರು ದಿನವೇ ತಾವು ಸಹ ಅನೇಕ ಪುಕ್ಕಟೆ ನೀಡುವ ಯೋಜನೆಗಳನ್ನ ಪ್ರಕಟಿಸಿದ್ದು ವಿಚಿತ್ರವೇ ಆಗಿತ್ತು. ಇದನ್ನು ಬೊಮ್ಮಾಯಿವರು ಮತ್ತು ಬಿಜೆಪಿ ನಾಯಕರು ಮರೆತು ಬಿಟ್ಟಿದ್ದಾರೆ.
ವಿಚಿತ್ರವೆಂದರೆ, ಬಿಜೆಪಿಯ ಈ ನಾಯಕರು ನರೇಂದ್ರ ಮೋದಿ ಯವರು `ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ’ ಹಾಕುವ ಮತ್ತು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ೯ ವರ್ಷಗಳು ಕಳೆದಿದ್ದರೂ ಅವನ್ನೇಕೆ ಇನ್ನೂ ಜಾರಿ ಮಾಡಲಿಲ್ಲ ಎಂದು ಕೇಳಲಿಲ್ಲ. ಸಾರ್ವಜನಿಕವಾಗಿಯಾದರೂ ಹೋಗಲಿ ಖಾಸಗಿ ಆದರೂ ಪ್ರಧಾನಿಗಳಿಗೆ ಒತ್ತಾಯಿಸಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಅದಕ್ಕಿಲ್ಲದ ಅವಸರ ಸಿದ್ಧರಾಮಯ್ಯ. ನವರು ಅಧಿಕಾರ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಬಿಜೆಪಿ ವಾದಿಸುತ್ತಿರುವುದರ ಅರ್ಥವೇನು? ಒಣ ರಾಜಕೀಯ ಅಲ್ಲದೆ ಬೇರೇನು ಕಾಣಿಸುವುದಿಲ್ಲ.
ಮೂಲತಃ ಬಿಜೆಪಿಗೆ ಬೆಲೆ ಏರಿಕೆ, ನಿರುದ್ಯೋಗ, ಜೀವನ ನಿರ್ವಹಣೆಯ ವೆಚ್ಚಗಳ ದುಬಾರಿ ಯಂತಹ ಸಮಸ್ಯೆಗಳು, ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಏನಾದರೂ ಪರಿಹಾರ ಒದಗಿಸಿಕೊಡಬೇಕು ಎನ್ನುವ ಕಿಂಚಿತ್ತು ಕಾಳಜಿ ಇಲ್ಲ. ‘ಈ ಗ್ಯಾರಂಟಿ ಯೋಜನೆಗೆ 5೦-6೦ ಸಾವಿರ ಕೋಟಿ ರೂಪಾಯಿಗಳು ಖರ್ಚಾಗುತ್ತವೆ, ಅಭಿವೃದ್ಧಿಗೆ ಹಣ ಎಲ್ಲಿಂದ ಬರುತ್ತದೆ’ ಎಂದು ಬೊಬ್ಬೆ ಹೊಡೆಯುವ ಈ ನಾಯಕರು ಇದೇ ಬಿಜೆಪಿಯ ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ 1೦ ಲಕ್ಷಕ್ಕೂ ಅಧಿಕ ಕೋಟಿ ರೂಪಾಯಿಗಳನ್ನು ಉಚಿತವಾಗಿ ಕೊಟ್ಟಿಲ್ಲವೇ?! ಅದನ್ನು ಯಾಕೆ ಪ್ರಶ್ನಿಸುವುದಿಲ್ಲ? ಸರಕಾರದ ಹಣ ಹಾಳಾಗುತ್ತಿದೆ ಎಂದು ಕೂಗಾಡುವ ಇವರು ಈ ಸರಕಾರದ ಹಣ ಎನ್ನುವುದು ಯಾರದ್ದು? ಅದು ಜನಸಾಮಾನ್ಯರೇ ಕಟ್ಟಿದ ತೆರಿಗೆಯ ಹಣ ಅಲ್ಲವೇ? ಆರ್ಥಿಕ ಶಿಸ್ತು ಇರಬೇಕು ಎನ್ನುವುದನ್ನು ಗಮನದಲ್ಲಿರಿಸಿ ಸಂಕಟದಲ್ಲಿರುವವರಿಗೆ ಅವರ ಹಣದಿಂದಲೇ ನೆರವು ಕೊಟ್ಟರೆ ತಪ್ಪೇನಿದೆ? ನಿಜ, ಉದಾರಿಕರಣದ ನೀತಿಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್-ಬಿಜೆಪಿ ಸರ್ಕಾರಗಳು ಜನತೆಯ ಜೀವನದ ಮೂಲ ಪ್ರಶ್ನೆಗಳನ್ನು ಇತ್ಯರ್ಥ ಗೊಳಿಸಲು ಕನಿಷ್ಠ ಪರಿಹಾರ ನೀಡಲು ಪ್ರಯತ್ನಿಸುವುದಿಲ್ಲ ಎನ್ನುವ ವಾಸ್ತವೂ ಇದೆ. ಹೇಗೂ ಅಧಿಕಾರಕ್ಕೆ ಬರಲು ಜನಪ್ರಿಯ ಅಥವಾ ಜನ ಮರಳು ಯೋಜನೆಗಳನ್ನು ಪ್ರಕಟಿಸುವುದು ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಗಳ ಅಭ್ಯಾಸವಾಗಿದೆ ಎನ್ನುವುದನ್ನು ಗಮನಿಸುತ್ತಲೇ ನೆರವು ಅತ್ಯಗತ್ಯ ಎನ್ನುವುದನ್ನು ಮರೆಯಬೇಕಿಲ್ಲ.
ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲಾ ರೇಷನ್-ಪಡಿತರ ವಸ್ತುಗಳನ್ನು ಉಚಿತವಾಗಿ, ಕೆಲವು ವಿಭಾಗಗಳಿಗೆ ರಿಯಾಯಿತಿಯಾಗಿ ನೀಡಬೇಕು. ಉದ್ಯೋಗ ವಂಚಿತರಾಗಿ, ಉದ್ಯೋಗದ ಸಲುವಾಗಿ ಕಾದು ಕುಳಿತಿರುವ ನಿರುದ್ಯೋಗಿಗಳಿಗೆ ಕನಿಷ್ಠ ಆತ್ಮವಿಶ್ವಾಸ ತುಂಬಿಸಲು ನಿರುದ್ಯೋಗ ಭತ್ಯೆ ನೀಡಬೇಕೆಂದು ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನಂತಹ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಯುವಜನ ಚಳುವಳಿಗಳು ಅನೇಕ ದಶಕಗಳಿಂದ ಹೋರಾಡುತ್ತಾ ಬಂದಿವೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿರುವ ಹಲವು ದಶಕಗಳಲ್ಲೂ ಬೇಡಿಕೆಯನ್ನು ನಿರಾಕರಿಸುತ್ತಲೇ ಬಂದಿತ್ತು. ಈಗಲಾದರೂ ನಿರುದ್ಯೋಗ ಭತ್ಯೆ ನೀಡುವ ಸರ್ಕಾರದ ಕ್ರಮ ಸ್ವಾಗತಾರ್ಹ. ಅದು ಎಲ್ಲರಿಗೂ ನೀಡುವಂತಾಗಬೇಕು. ಒಟ್ಟಾರೆ, ಜನತೆಯ ಸಂಕಷ್ಟಗಳಿಗೆ ಪರಿಹಾರದ ನೆರವು ಒದಗಿಸುತ್ತಾ, ಜೊತೆಯಲ್ಲೇ ಆತ್ಮವಿಶ್ವಾಸ ಉಂಟುಮಾಡುವುದು ಮೂಲಭೂತ ಪ್ರಶ್ನೆಗಳನ್ನು ಪರಿಹರಿಸುವ ಕಾರ್ಯದೊಂದಿಗೆ ನಡೆಯಬೇಕು. ಇದೀಗ ಹತ್ತು ಜನರ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಿದೆ, ನೋಡೋಣ.