ವಾಲ್ಮೀಕಿ  ಜಯಂತಿಯನ್ನು ಏಕೆ ಮತ್ತು ಹೇಗೆ ಆಚರಿಸಬೇಕು?

-ಅರುಣ್ ಜೋಳದಕೂಡ್ಲಿಗಿ

ಆಯಾ ಊರುಗಳಲ್ಲಿ ವಾಲ್ಮೀಕಿ ಜಯಂತಿಯ ಆಚರಣೆಯ ಪರಿಣಾಮವಾಗಿ ವಾಲ್ಮೀಕಿ ಯುವಕ ಸಂಘಗಳು ಹುಟ್ಟಿಕೊಂಡಿವೆ. ಇದರಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಿ, ವರ್ಷಕ್ಕೊಮ್ಮೆ ಎಚ್ಚೆತ್ತಂತೆ ವರ್ತಿಸದೆ, ವರ್ಷವಿಡೀ ಆಯಾ ಭಾಗದಲ್ಲಿ ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಕ್ರಿಯಾಶೀಲವಾಗಬೇಕಿದೆ. ಉದಾಹರಣೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಶಾಲೆಬಿಟ್ಟ ಸಮುದಾಯದ ಮಕ್ಕಳನ್ನು ಶಾಲೆಗೆ ಸೇರಿಸುವ ಅಭಿಯಾನ, ಹೆಣ್ಣುಮಕ್ಕಳ ಶಿಕ್ಷಣ ಕುಂಠಿತವಾಗದಂತೆ ತಡೆಯುವ ಜಾಗೃತಿ, ವಿರಳವಾಗಿರುವ ದೇವದಾಸಿ ಪದ್ದತಿ ವಿರುದ್ಧದ ತಿಳಿವಳಿಕೆ, ವಸತಿ ಶಾಲೆಗಳಿಗೆ ಸಮುದಾಯದ ಮಕ್ಕಳನ್ನು ಸೇರಿಸುವ ಬಗ್ಗೆ ಜನಜಾಗೃತಿ, ವಾರ್ಷಿಕ ಬಜೆಟ್ಟಿನಲ್ಲಿ ಸಮುದಾಯದ ಹಕ್ಕೊತ್ತಾಯಗಳು ಜಾರಿಯಾಗುವಂತೆ ಒತ್ತಡ ತರುವುದು, ಹೀಗೆ ಹತ್ತಾರು ಸಮುದಾಯಮುಖಿ ಕೆಲಸಗಳಲ್ಲಿ ಸಂಘಗಳನ್ನು ತೊಡಗಿಸಲು ಜಯಂತಿ ಪ್ರೇರಣೆಯಾಗಬೇಕಿದೆ. 

ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಯನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ. ಈ ಜಯಂತಿ ಆಚರಣೆಯು ‘ವಾಲ್ಮೀಕಿ ಹೆಸರಿನ ಸಮುದಾಯದಲ್ಲಿ ತಂದ ಬದಲಾವಣೆಗಳು ಯಾವುವು? ಈ ವಾರ್ಷಿಕ ಪುನರಾವರ್ತಿತ ಆಚರಣೆ, ಸಮುದಾಯದ ತಿಳಿವಳಿಕೆಯ ಭಾಗವಾಗಿಸಿದ ಸಂಗತಿಗಳೇನು? ಈ ಆಚರಣೆಯನ್ನು ಹೇಗೆ ಮಾಡಲಾಗುತ್ತಿದೆ? ಸಮುದಾಯಕ್ಕೆ ಪ್ರಯೋಜನಕಾರಿಯಾಗುವಂತೆ ಇದನ್ನು ಮರುರೂಪಿಸಲು ಸಾಧ್ಯವೇ? ಇಂತಹ ಮೂಲಭೂತ ಸಂಗತಿಗಳ ಬಗ್ಗೆ ಪುನರವಲೋಕನ ಮಾಡುವ ಅಗತ್ಯವಿದೆ. ಈ ಅವಲೋಕನದ ಬಹುತೇಕ ಮಾತುಗಳು ಎಲ್ಲಾ ಕೆಳಜಾತಿ ಸಂಕೇತಗಳ ಜಯಂತಿಯ ಬಗೆಗೂ ಅನ್ವಯವಾಗುತ್ತವೆ.

ಇದೊಂದು ಸರ್ಕಾರಿ ಆಚರಣೆಯಾಗಿ ನಡೆಯುತ್ತಿದೆ. ಇದರ ಹಿಂದೆ ಒಂದು ದೊಡ್ಡ ಜನಸಮುದಾಯವನ್ನು ಚುನಾವಣಾ ಮತವಾಗಿ ಓಲೈಸುವ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ. ಇದರಾಚೆ ಈ ಆಚರಣೆ ಸಮುದಾಯದೊಳಗೆ ಅನಿರೀಕ್ಷಿತ ಪರಿಣಾಮಗಳನ್ನು ಬೀರುವುದನ್ನು ತಡೆಯಲಾಗದು. ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ ಮೊದಲಾದ ರಾಷ್ಟ್ರೀಯ ಹಬ್ಬಗಳ ಹಾಗೆ ಇದು ಕೇವಲ ಸರ್ಕಾರಿ ಆಚರಣೆ ಮಾತ್ರವಲ್ಲ, ಬದಲಾಗಿ ವಾಲ್ಮೀಕಿ, ಬೇಡ ಸಮುದಾಯದ ಮನೆಮನೆಯ ಹಬ್ಬವಾಗಿ ಸಮುದಾಯದೊಳಗೆ ಚಲಿಸುತ್ತದೆ. ಈ ಚಲನೆ ಕನಿಷ್ಠ ಒಂದು ತಿಂಗಳ ತನಕ ಜೀವಂತವಿರುತ್ತದೆ.

ಸಾಮಾನ್ಯವಾಗಿ ಈಗಿನ ಆಚರಣೆಯ ಏಕರೂಪ ಹೀಗಿದೆ: ವಾಲ್ಮೀಕಿ, ರಾಮ ಲಕ್ಷ್ಮಣ ಹನುಮಂತ ಮೊದಲಾದವರ ಸ್ತಬ್ಧ ಚಿತ್ರಗಳನ್ನು ಮಾಡಿ, ವಾಲ್ಮೀಕಿ ಋಷಿಯ ಫೋಟೋದ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆ ಒಂದು ಸ್ಥಳದಲ್ಲಿ ನಿಲುಗಡೆಗೊಂಡು ವೇದಿಕೆಯ ಕಾರ್ಯಕ್ರಮ ಶುರುವಾಗುತ್ತದೆ. ಇದರಲ್ಲಿ ರಾಜಕೀಯ ಮುಖಂಡರುಗಳು, ಸಮುದಾಯದ ಹಿರಿಯರು, ನೌಕರರು ಇರುತ್ತಾರೆ. ಒಂದು ಪ್ರಧಾನ ಭಾಷಣವಿರುತ್ತದೆ. ಉಳಿದಂತೆ ಚುಟುಕು ಭಾಷಣಗಳು ಸೇರ್ಪಡೆಗೊಳ್ಳುತ್ತವೆ. ಇದರಲ್ಲಿ ಬೇಡನೊಬ್ಬ ಹೇಗೆ ಮಹರ್ಷಿ ಕವಿಯಾದ ಎನ್ನುವ ವಾಲ್ಮೀಕಿಯ ಜನಜನಿತ ಕಥೆಯನ್ನು ಉರುಹೊಡೆಯಲಾಗುತ್ತದೆ. ಸಮುದಾಯದ ಚರಿತ್ರೆಯನ್ನು ವೈಭವೀಕರಿಸಲಾಗುತ್ತದೆ. ನಂತರ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಂದ ಹಿಡಿದು ವಿಶೇಷ ಸಾಧನೆ ಮಾಡಿದ ಸಮುದಾಯದ ಕೆಲವರಿಗೆ ಸನ್ಮಾನ ಮಾಡಲಾಗುತ್ತದೆ. ಅಪವಾದವೆಂಬಂತೆ ಕೆಲವೆಡೆ ಭಿನ್ನ ಸ್ವರೂಪಗಳೂ ಇರಬಹುದು. ಆದರೆ ಬಹುಪಾಲು ಮೇಲೆ ಹೇಳಿದ ಒಂದು ಮಾದರಿ ಸಿದ್ದಗೊಂಡಿದೆ.

ಇದೀಗ ಜಯಂತಿಯನ್ನು ಎರಡು ಪ್ರಮುಖ ಆಯಾಮಗಳಲ್ಲಿ ಆಚರಿಸಲು ಸಾಧ್ಯವಿದೆ. ಮೊದಲನೆಯದು ವಾಲ್ಮೀಕಿ ಋಷಿ, ಆತನ ರಾಮಾಯಣ, ಇದರ ಮುಖ್ಯ ಪಾತ್ರ ರಾಮ, ಈ ಎಲ್ಲವನ್ನೂ ಸಂಕೇತವಾಗಿಸಿಕೊಂಡ ಹಿಂದೂ ಧರ್ಮ. ಈ ಸಮೀಕರಣ ಪ್ರಧಾನವಾದರೆ ವಾಲ್ಮೀಕಿ ಹೆಸರಿನ ಸಮುದಾಯದವರು ಹಿಂದೂ ಧರ್ಮದ ಕಟ್ಟಾಳುಗಳು ಎನ್ನುವಲ್ಲಿಗೆ ತಲುಪುತ್ತದೆ. ಹೀಗೆ ಲಗತ್ತಾದರೆ ಒಂದು ಧರ್ಮದ ಉಳಿವಿನಲ್ಲೂ ಇವರ ಪಾತ್ರದ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಒಂದು ಧರ್ಮದ ಮೂಲಭೂತವಾದಿ ಸಂಘಟನೆಗಳು ಈ ಸಮುದಾಯದ ಯುವಕರನ್ನು ಆಕರ್ಷಿಸುತ್ತವೆ. ಯಾವುದೇ ಒಂದು ಧರ್ಮದ ಬಗೆಗೆ ಮೂಢನಂಬಿಕೆಯನ್ನು ಹೊರತುಪಡಿಸಿ ಸಹಜ ಪ್ರೀತಿ, ಅಭಿಮಾನವಿದ್ದರೆ ಸಮುದಾಯಕ್ಕೆ ಹೆಚ್ಚು ತೊಂದರೆ ಇಲ್ಲ. ಆದರೆ ಈ ಧರ್ಮದ ಬಗೆಗಿನ ಅಭಿಮಾನ ಇನ್ನೊಂದು ಧರ್ಮವನ್ನು ದ್ವೇಷಿಸುವ ಹಂತ ಮುಟ್ಟಿದರೆ, ಧಾರ್ಮಿಕ ಬಲಪಂಥೀಯ ಸಂಘಟನೆಗಳಲ್ಲಿ ಸಕ್ರಿಯವಾದ ವಾಲ್ಮೀಕಿ ಸಮುದಾಯದ ಯುವಕರಿಗೆ ದೊಡ್ಡ ಗಂಡಾಂತರ ಒದಗುತ್ತದೆ. ಇದರಿಂದ ಬಿಡಿಸಿಕೊಳ್ಳುವಲ್ಲಿ ಹೈರಾಣಾಗಿ ಒಂದು ಸಮುದಾಯದ ಯುವಜನರು ದಿಕ್ಕುತಪ್ಪಬಹುದು.

ಯಾವುದೇ ಧರ್ಮವನ್ನು ಭಾರತ ಸಂವಿಧಾನ ಶ್ರೇಷ್ಠ, ಕನಿಷ್ಠ ಎಂದು ಕಾಣದೆ ಸಮಾನವಾಗಿ ಗೌರವಿಸಿದೆ. ನಮ್ಮ ಸಾಂಸ್ಕೃತಿಕ ವಾತಾವರಣದಲ್ಲಿಯೂ ಜನಸಾಮಾನ್ಯರು ಇಂಥದ್ದೊಂದು ಸದ್ಭಾವನೆ ನೆಲೆಗೊಳ್ಳುವಂತೆ ಮಾಡಿದ್ದಾರೆ. ಯಾವುದೇ ಧರ್ಮವನ್ನು ದ್ವೇಷಿಸುವುದು ಸಂವಿಧಾನ ವಿರೋಧಿ ನಡೆ. ಯಾವ ಸಂವಿಧಾನ, ಯಾವ ಪ್ರಜಾಪ್ರಭುತ್ವ ವಾಲ್ಮೀಕಿ ಸಮುದಾಯಕ್ಕೆ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡವೆಂದು ಗುರುತಿಸಿ ಈ ಸಮುದಾಯದ ಅಭಿವೃದ್ಧಿಗೆ ನೆರವಾಗಿದೆಯೋ ಅವುಗಳ ವಿರುದ್ಧವೇ ಈ ಸಮುದಾಯ ನಡೆದಂತಾಗುತ್ತದೆ. ಹಾಗಾಗಿ ಮೊದಲು ವಾಲ್ಮೀಕಿ ಜಯಂತಿಯ ಆಚರಣೆಯಲ್ಲಿ ಈ ಅಪಾಯದ ಬಗ್ಗೆ ಸಮುದಾಯದ ಯುವಜನತೆಯಲ್ಲಿ ಅರಿವು ಮೂಡಿಸಬೇಕಾಗಿದೆ.

ವಾಲ್ಮೀಕಿ ಸಮುದಾಯ ತನ್ನ ಗುರುತನ್ನಾಗಿ ಮದಕರಿ ನಾಯಕನನ್ನೋ, ಸಾಂಸ್ಕೃತಿಕ ನಾಯಕ ಗಾದ್ರಿ ಪಾಲನಾಯಕನನ್ನೋ, ಆಧುನಿಕ ತಜ್ಞ ಎಲ್.ಜಿ.ಹಾವನೂರ್ ಅವರನ್ನೋ ಆಯ್ದುಕೊಂಡಿದ್ದರೆ ಈ ಜಯಂತಿಗೆ ಭಿನ್ನವಾದ ಅರ್ಥವಂತಿಕೆ ಬರುತ್ತಿತ್ತು. ಆದರೆ ಪುರಾಣ ಕಾಲದ ಮಹರ್ಷಿ ವಾಲ್ಮೀಕಿಯನ್ನು ಆಯ್ದುಕೊಂಡ ಕಾರಣ ಇದರ ಆಯಾಮ ಬಲಪಂಥೀಯರಿಗೆ ನೆರವಾಗಿದೆ. ಅಂದರೆ ವಾಲ್ಮೀಕಿ ರಚನೆಯ ಸಂಸ್ಕೃತದ ರಾಮಾಯಣದಲ್ಲಿ ಕೆಳಜಾತಿಗಳಿಗೆ ವಿರುದ್ಧವಾದ ಹಲವು ಸಂಗತಿಗಳಿವೆ. ಹೀಗಾಗಿ ಇವುಗಳನ್ನು ಅರ್ಥೈಸಿ ವಾಲ್ಮೀಕಿ ಸಮುದಾಯದ ಸದ್ಯದ ಸ್ಥಿತಿಗೆ ಮುಖಾಮುಖಿ ಮಾಡುವುದು ಕೂಡ ಸಮಸ್ಯಾತ್ಮಕವಾಗಿದೆ. ಇದಕ್ಕೆ ವಿರುದ್ಧವಾಗಿ ಈ ದೇಶದಲ್ಲಿ ಬುಡಕಟ್ಟುಗಳ, ಕೆಳಜಾತಿಗಳ ಮೌಖಿಕ ಪರಂಪರೆಯಲ್ಲಿಯೂ ನೂರಾರು ರಾಮಾಯಣಗಳಿವೆ. ಇವು ಬಹುತ್ವವನ್ನು ಪ್ರತಿನಿಧಿಸುತ್ತವೆ. ಅಂತೆಯೇ ಕೆಳಜಾತಿಗಳಿಗೆ ಪರವಾದ ಜೀವಪರ ಆಶಯಗಳಿವೆ. ಈ ಸಂದರ್ಭದಲ್ಲಿ ಇಂತಹ ಮೌಖಿಕ ರಾಮಾಯಣಗಳ ಜತೆ ವಾಲ್ಮೀಕಿ ಸಮುದಾಯ ನಿಲ್ಲುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ನಳಸಂಪರ್ಕ ಕಾಮಗಾರಿಗಳ ಗುಣಮಟ್ಟದಲ್ಲಿ ಸುಧಾರಣೆ ತರಲು ತಪಾಸಣೆ| ಸಚಿವ ಪ್ರಿಯಾಂಕ್ ಖರ್ಗೆ

ಹೀಗಾಗಿ ವಾಲ್ಮೀಕಿ ರಾಮಾಯಣವು ಅಸಂಖ್ಯ ಪಠ್ಯಗಳಲ್ಲಿ ಚಾಲ್ತಿಯಲ್ಲಿದೆ. ಇದೊಂದು ಇತಿಹಾಸವೆ, ಪುರಾಣವೆ ಮುಂತಾದ ಸಾವಿರಾರು ಪ್ರಶ್ನೆಗಳ ಸಂಶೋಧನೆಗಳು ನಡೆದಿವೆ. ಕೆಲವು ಸಂಶೋಧನೆಗಳು ಇತಿಹಾಸವೆಂದರೆ, ಬಹುಪಾಲು ಸಂಶೋಧನೆಗಳು ಇದೊಂದು ಪುರಾಣ ಎನ್ನುವಲ್ಲಿಗೆ ಮುಟ್ಟಿವೆ. ಈ ಹುಡುಕಾಟವಿನ್ನೂ ಕೊನೆಗೊಂಡಿಲ್ಲ, ಹಾಗಾಗಿ ಈ ಪುರಾಣ ಲೋಕದ ಕೊನೆಯಿಲ್ಲದ ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು ಇದರಿಂದ ಹೆಕ್ಕಿ ಯಾವುದನ್ನೂ ಖಚಿತವಾಗಿ ಹೇಳಲು ವಾಲ್ಮೀಕಿ ಸಮುದಾಯಕ್ಕೆ ಸಾಧ್ಯವಿಲ್ಲ. ಬದಲಾಗಿ ವಾಲ್ಮೀಕಿಯನ್ನು ಒಂದು ಸಂಕೇತವಾಗಿ ಪರಿಭಾವಿಸಬೇಕು. ಅಕ್ಷರ ಜ್ಞಾನದ ಶಿಕ್ಷಣಕ್ಕೆ ಅರಿವಿನ ಸಂಕೇತ ಎಂದುಕೊಳ್ಳಬೇಕಿದೆ. ಅಂತೆಯೇ ಅಕ್ಷರದ ಅರಿವನ್ನು ಮೇಲುಜಾತಿಗಳು ಹಿಡಿತದಲ್ಲಿಟ್ಟುಕೊಂಡ ಕಾಲದಲ್ಲಿಯೇ, ಜಗತ್ತಿನ ಗಮನಸೆಳೆದ ಮಹಾಕಾವ್ಯವೊಂದನ್ನು ಬೇಡ ಸಮುದಾಯದ ಕವಿಯೊಬ್ಬ ಹುಟ್ಟಿಸಿದ್ದಾನೆ ಎನ್ನುವುದನ್ನು ಈ ಸಮುದಾಯ ಚೈತನ್ಯದ ಸಂಗತಿಯನ್ನಾಗಿಸಿಕೊಳ್ಳಬೇಕಿದೆ.

ಜಯಂತಿಯ ಆಚರಣೆಯ ಎರಡನೇ ಮುಖ್ಯ ಆಯಾಮವೆಂದರೆ, ವಾಲ್ಮೀಕಿ ಹೆಸರಿನ ಜೀವಂತ ಸಮುದಾಯವೊಂದು ಈ ರಾಜ್ಯದಲ್ಲಿದೆ. ಈ ಸಮುದಾಯದ ದಿನದಿನದ ಬದುಕಿನ ಪ್ರಶ್ನೆಗಳನ್ನು ಆಚರಣೆಯ ಹೆಸರಲ್ಲಿ ಮುನ್ನೆಲೆಗೆ ತರಬೇಕಿದೆ. ಸಮುದಾಯದ ರಾಜಕೀಯ ಪಾಲ್ಗೊಳ್ಳುವಿಕೆಯ ಬಗ್ಗೆ ಅರಿವು ಮೂಡಿಸಬೇಕಿದೆ. ಈಗಾಗಲೇ ರಾಜಕೀಯ ಅಧಿಕಾರ ಹಿಡಿದ ಸಮುದಾಯದ ಜನನಾಯಕರು ಭ್ರಷ್ಟರಾಗದಂತೆ, ಸ್ವಾರ್ಥಿಗಳಾಗದಂತೆ ಜನಪರ ರಾಜಕಾರಣಿಗಳನ್ನಾಗಿ ರೂಪಿಸುವ ಬಗ್ಗೆ ವಿಮರ್ಶೆ ನಡೆಯಬೇಕಾಗುತ್ತದೆ. ಅಂತೆಯೇ ಮುಖ್ಯವಾಗಿ ಈ ಸಮುದಾಯದ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಬೇಕಿದೆ. ಕರ್ನಾಟಕದ ಯಾವ ಭಾಗದಲ್ಲಿ ಈ ಸಮುದಾಯ ಅತ್ಯಂತ ಹಿಂದುಳಿದಿದೆ, ಆ ಬಗೆಯ ಹಿಂದುಳಿಯುವಿಕೆಗೆ ಕಾರಣ ಮತ್ತು ಅದನ್ನು ಅಭಿವೃದ್ಧಿಪಡಿಸಲು ಸಮುದಾಯದ ಸಾಂಘಿಕ ಪ್ರಯತ್ನಗಳೇನು? ಎನ್ನುವ ಬಗ್ಗೆ ಸಂವಾದ ನಡೆಸಬೇಕಿದೆ. ಸಮುದಾಯದ ಮಹಿಳೆಯನ್ನು ಮುನ್ನೆಲೆಗೆ ತರುವ ಮತ್ತು ಅವರ ಸ್ವಾತಂತ್ರ್ಯವನ್ನು ಗೌರವಿಸುವ ಹಾಗೆ ಸಮುದಾಯದ ಅರಿವನ್ನು ಬದಲಾಯಿಸಬೇಕಿದೆ.

ಆಯಾ ಊರುಗಳಲ್ಲಿ ವಾಲ್ಮೀಕಿ ಜಯಂತಿಯ ಆಚರಣೆಯ ಪರಿಣಾಮವಾಗಿ ವಾಲ್ಮೀಕಿ ಯುವಕ ಸಂಘಗಳು ಹುಟ್ಟಿಕೊಂಡಿವೆ. ಇದರಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಿ, ವರ್ಷಕ್ಕೊಮ್ಮೆ ಎಚ್ಚೆತ್ತಂತೆ ವರ್ತಿಸದೆ, ವರ್ಷವಿಡೀ ಆಯಾ ಭಾಗದಲ್ಲಿ ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಕ್ರಿಯಾಶೀಲವಾಗಬೇಕಿದೆ. ಉದಾಹರಣೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಶಾಲೆಬಿಟ್ಟ ಸಮುದಾಯದ ಮಕ್ಕಳನ್ನು ಶಾಲೆಗೆ ಸೇರಿಸುವ ಅಭಿಯಾನ, ಹೆಣ್ಣುಮಕ್ಕಳ ಶಿಕ್ಷಣ ಕುಂಠಿತವಾಗದಂತೆ ತಡೆಯುವ ಜಾಗೃತಿ, ವಿರಳವಾಗಿರುವ ದೇವದಾಸಿ ಪದ್ದತಿ ವಿರುದ್ಧದ ತಿಳಿವಳಿಕೆ, ವಸತಿ ಶಾಲೆಗಳಿಗೆ ಸಮುದಾಯದ ಮಕ್ಕಳನ್ನು ಸೇರಿಸುವ ಬಗ್ಗೆ ಜನಜಾಗೃತಿ, ವಾರ್ಷಿಕ ಬಜೆಟ್ಟಿನಲ್ಲಿ ಸಮುದಾಯದ ಹಕ್ಕೊತ್ತಾಯಗಳು ಜಾರಿಯಾಗುವಂತೆ ಒತ್ತಡ ತರುವುದು, ಹೀಗೆ ಹತ್ತಾರು ಸಮುದಾಯಮುಖಿ ಕೆಲಸಗಳಲ್ಲಿ ಸಂಘಗಳನ್ನು ತೊಡಗಿಸಲು ಜಯಂತಿ ಪ್ರೇರಣೆಯಾಗಬೇಕಿದೆ.

ಯಾವುದೇ ಸಮುದಾಯಕ್ಕೆ ಜಾತಿಯ ಅಭಿಮಾನವಿರಲಿ ಅದು ಇನ್ನೊಂದು ಜಾತಿಯನ್ನು ದ್ವೇಷಿಸುವ ಹಂತ ತಲುಪದಂತಿರಬೇಕು. ಹಾಗಾಗಿ ಇತರೆ ಜಾತಿ ಸಮುದಾಯಗಳ ಬಗ್ಗೆ ಪ್ರೀತಿ ಸ್ನೇಹದ ಬೆಸುಗೆ ಸಾಧ್ಯವಾಗಬೇಕು. ವಾಲ್ಮೀಕಿ ಜಯಂತಿಯಲ್ಲಿ ಆಯಾ ಊರುಗಳ ಬೇಡ ಸಮುದಾಯದವರನ್ನು ಮಾತ್ರ ಒಳಗೊಳ್ಳದೆ ಎಲ್ಲಾ ಜಾತಿ ಸಮುದಾಯಗಳ ವಿಶ್ವಾಸ ಪಡೆದು ಕೂಡಿಕೊಂಡು ಆಚರಣೆ ಮಾಡಬೇಕಿದೆ. ಅಂತೆಯೇ ಮೇಲುಜಾತಿಗಳ ದಬ್ಬಾಳಿಕೆಗೆ ಒಳಗಾದ ಕಡೆಗಳಲ್ಲಿ ಪ್ರಜಾಸತ್ತಾತ್ಮಕ ಪ್ರತಿರೋಧವನ್ನು ದಾಖಲಿಸಬೇಕಿದೆ. ಎಷ್ಟೋ ಕಡೆಗಳಲ್ಲಿ ದಲಿತರ ಶೋಷಣೆಯಲ್ಲಿ ಹಿಂದುಳಿದ ವರ್ಗ ಮತ್ತು ಜಾತಿಗಳು ಸೇರ್ಪಡೆಗೊಂಡಿವೆ. ಅದರಲ್ಲಿ ವಾಲ್ಮೀಕಿ ಸಮುದಾಯವೂ ಒಂದು. ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತಿದ್ವೇಷಗಳು ಬೆಳೆಯದ ಹಾಗೆ ಜಾತ್ಯತೀತ ತಿಳಿವನ್ನು ಹಂಚುವ ವೇದಿಕೆಗಳಾಗಿ ಈ ಆಚರಣೆ ರೂಪುಗೊಳ್ಳಬೇಕಿದೆ. ಹೀಗೆ ವಾಲ್ಮೀಕಿ ಜಯಂತಿಯು ಪುರಾಣದ ಪುನರಾವರ್ತಿತ ಸಂಗತಿಯಾಗದೆ, ವರ್ತಮಾನದಲ್ಲಿ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳುವ ವೇದಿಕೆಯಾಗಬೇಕಿದೆ.

ವಿಡಿಯೋ ನೋಡಿ: ಕೇಂದ್ರೀಯ ವಿ.ವಿ. ‘ಸತ್ಯನಾರಾಯಣ’ನ ಗುಡಿಯಲ್ಲ – ಹೋರಾಟಗಾರರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *