“ವಶಪಡಿಸಿಕೊಳ್ಳುವ ಆರ್ಥಿಕತೆಯಿಂದ ನರಮೇಧದ ಆರ್ಥಿಕತೆಯ ಕಡೆಗೆ”
ಭಾರತ-ಪಾಕಿಸ್ತಾನ ಮತ್ತು ಆಫ್ರಿಕಾ ಮತ್ತಿತರ ಕಡೆ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಅಂತ ಯು.ಎಸ್ ಅಧ್ಯಕ್ಷ ಟ್ರಂಪ್ ಡಂಗುರ ಸಾರುತ್ತಿದ್ದಾರೆ. ಈ ಜಾಗತಿಕ ರಾಜಕೀಯ ಕಾಮೆಡಿ ಸಾಲದು ಅಂತ ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಶಲ್ ಮುನೀರ್, ಅದಕ್ಕೆ ತಮ್ಮ ಬಲವಾದ ಶಿಫಾರಸು ಕೊಟ್ಟಿದ್ದಾರೆ! ಈ ಕಾಮೆಡಿ ನೋಡಿಕೊಂಡು ಸುಮ್ಮನಿರಲಾದೆಯೋ ಏನೋ, ಜಗತ್ತಿನಾದ್ಯಂತ ಫ್ರಾನ್ಸೆಸ್ಕಾ ಅಲ್ಬನೀಸ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂಬ ಚಳುವಳಿ ಆರಂಭವಾಗಿದೆ. ಯಾರಿವರು ಫ್ರಾನ್ಸೆಸ್ಕಾ ಅಲ್ಬನೀಸ್ ? ಅವರಿಗ್ಯಾಕೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕು ಅಂತ ಚಳುವಳಿ ಆರಂಭವಾಗಿದೆ? ಶಾಂತಿ
-ವಸಂತ್ ಎನ್.ಕೆ.
ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಪ್ಯಾಲೆಸ್ಟೀನ್ ನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ತನಿಖೆ ನಡೆಸಿ ವರದಿ ಮಾಡಲು ನೇಮಕವಾದ ವಿಶ್ವಸಂಸ್ಥೆಯ ವಿಶೇಷ ಪರಿಣತಿಯ ವರದಿಗಾರರು. ಪ್ಯಾಲೆಸ್ಟೀನ್ ನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ತಳಮಟ್ಟದಲ್ಲಿ ಸಾಕ್ಷಾತ್ ಪರಿಶೀಲಿಸಿ, ಸಂಬಂಧಪಟ್ಟವರೊಂದಿಗೆ ಪರಿಣತರೊಂದಿಗೆ ಮಾತನಾಡಿ ಒಟ್ಟು ಅಂದಾಜು ಮಾಡುವ, ಕೈಗೊಳ್ಳಬೇಕಾದ ಸೂಕ್ರ ಕ್ರಮಗಳನ್ನು ಸೂಚಿಸುವ ವಿಶೇಷ ಜವಾಬ್ದಾರಿ ಇಂತಹ ವಿಶೇಷ ವರದಿಗಾರರಿಗೆ ಇರುತ್ತದೆ.
ಅಲ್ಬನೀಸ್ ಇತ್ತೀಚೆಗೆ ಪ್ಯಾಲೆಸ್ಟೀನ್ ಆಕ್ರಮಿತ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ವಿವರವಾದ ವರದಿ ಸಲ್ಲಿಸಿದ್ದು ವಿಶ್ವಸಂಸ್ಥೆ ಅದನ್ನು ಬಿಡುಗಡೆ ಮಾಡಿದೆ. ಅದು ಯು.ಎಸ್ ಮತ್ತಿತರ ಪಾಶ್ಚಿಮಾತ್ಯ ಸರಕಾರಗಳು, ಕಾರ್ಪೊರೆಟ್ ಗಳು, ಮಾಧ್ಯಮಗಳಲ್ಲಿ ನಡುಕ ತಂದಿದೆ. ಇಂತಹ ನಡುಕಕ್ಕೆ ಅದರ ತಲೆಬರಹವೇ ಸಾಕು – “ವಶಪಡಿಸಿಕೊಳ್ಳುವ ಆರ್ಥಿಕತೆಯಿಂದ ನರಮೇಧದ ಆರ್ಥಿಕತೆಯ ಕಡೆಗೆ” (From Economy Of Occupation To Economy Of Genocide). ವರದಿಯಲ್ಲಿ ಈ ನರಮೇಧದ ಆರ್ಥಿಕದಲ್ಲಿ ಭಾಗವಹಿಸಿ
ಆಕ್ರಮಿತ ಪ್ಯಾಲೆಸ್ಟೀನ್ ಪ್ರದೇಶಗಳಲ್ಲಿ ಯುದ್ಧಾಫರಾಧಗಳನ್ನು ಮಾಡುತ್ತಾ ಲಾಭ ಗಳಿಸುತ್ತಿರುವ 48 ಕಾರ್ಪೊರೆಟ್ ಗಳ ಮೇಲೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಲ್ಲಿ (ಐಸಿಸಿ) ವಿಚಾರಣೆ ನಡೆಸಬೇಕು ಎಂದು ಶಿಫಾರಸು ಮಾಡಿದೆ.
ಇದನ್ನೂ ಓದಿ: ಭೂಮಿ ಗೆದ್ದ ರೈತರು | ಸರ್ಕಾರವನ್ನು ನಡುಗಿಸಿದ ಐತಿಹಾಸಿಕ ಹೋರಾಟ
ಈ ಪಟ್ಟಿಯಲ್ಲಿ ಲಾಕ್ ಹೀಡ್ ಮಾರ್ಟಿನ್ ನಂತಹ ಶಸ್ತ್ರಾಸ್ತ್ರ ಕಂಪನಿಗಳಿಂದ ಹಿಡಿದು ಗೂಗಲ್, ಫೇ್ಸ ಬುಕ್, ಮೈಕ್ರೋಸಾಫ್ಟ್, ಅಮೆಜಾನ್, ಐಬಿಎಂ ನಂತಹ ದೈತ್ಯ ಟೆಕ್ ಕಂಪನಿಗಳು ಸೇರಿವೆ. ಇವಲ್ಲದೆ ಈ ಕಂಪನಿಗಳ ಉತ್ಪನ್ನಗಳನ್ನು ನಿರ್ವಹಿಸುವ, ಅವುಗಳಲ್ಲಿ ಭಾರೀ ಹೂಡಿಕೆ ಮಾಡಿರುವ, ಇರಾಕ್ (2003) ಯುದ್ಧ ಸೇರಿದಂತೆ ಹಲವು ಯುದ್ಧಕ್ಷೇತ್ರಗಳಲ್ಲಿ ತಮ್ಮ ಪ್ರಮುಖ ಪಾತ್ರಕ್ಕೆ ಕುಖ್ಯಾತವಾದ ಎರಡು ಕಾರ್ಪೊರೆಟ್ ಗಳನ್ನು – ಬ್ಲಾಕ್ರಾಕ್ ಮತ್ತು ವ್ಯಾನ್ಗಾರ್ಡ್- ಸಹ ಹೆಸರಿಸಲಾಗಿದೆ.
ಈ ವರದಿ ಯುದ್ಧಗಳ ಹಿಂದಿರುವ ಕಾರ್ಪೊರೆಟ್ ಆರ್ಥಿಕತೆಯನ್ನು ವಿವರವಾಗಿ ಬಯಲು ಮಾಡಿದೆ. ಬೆಚ್ಚಿ ಬೀಳಿಸುವ ಈ ವರದಿಯ ಸಾರಾಂಶ ಹೀಗಿದೆ :
“ಈ ವರದಿಯು ಆಕ್ರಮಿತ ಪ್ರದೇಶದಲ್ಲಿ ಪ್ಯಾಲೆಸ್ಟೀನಿಯನ್ನರ ಸ್ಥಳಾಂತರ ಮತ್ತು ಬದಲಿಗೆ ಇಸ್ರೇಲಿಯರ ವಸತಿ ಸ್ಥಾಪಿಸುವ ಇಸ್ರೇಲಿ ವಸತಿ-ವಸಾಹತುಶಾಹಿ ಯೋಜನೆಯನ್ನು (settler-colonial Project) ಬೆಂಬಲಿಸುವ ಕಾರ್ಪೊರೇಟ್ ವ್ಯವಸ್ಥೆಯ ತನಿಖೆ ಮಾಡುತ್ತದೆ. ರಾಜಕೀಯ ನಾಯಕರು ಮತ್ತು ಸರ್ಕಾರಗಳು ತಮ್ಮ ಬಾಧ್ಯತೆಗಳಿಂದ ನುಣುಚಿಕೊಳ್ಳುತ್ತಿದ್ದು, ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಇಸ್ರೇಲ್‌ನ ಅಕ್ರಮ ವಶಪಡಿಸಿಕೊಳ್ಳುವಿಕೆ, ವರ್ಣಭೇದ ನೀತಿ ಮತ್ತು ಈಗ ನರಮೇಧದ ಆರ್ಥಿಕತೆಯಿಂದ ಲಾಭ ಗಳಿಸಿವೆ.

ಈ ವರದಿಯಿಂದ ಬಹಿರಂಗಪಡಿಸಲಾದ ಈ ಕಂಪನಿಗಳ ಶಾಮೀಲು ಮಂಜುಗಡ್ಡೆಯ ತುದಿಯಾಗಿದೆ; ಈ ಕಂಫನಿಗಳ ಮಾಲಕರು ಕಾರ್ಯನಿರ್ವಾಹಕರು ಸೇರಿದಂತೆ ಖಾಸಗಿ ವಲಯವನ್ನು ಹೊಣೆಗಾರರನ್ನಾಗಿ ಮಾಡದೆ ಅದನ್ನು ಕೊನೆಗೊಳಿಸುವುದು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕಾನೂನು ವಿವಿಧ ಹಂತದ ಜವಾಬ್ದಾರಿಯನ್ನು ಗುರುತಿಸುತ್ತದೆ – ಪ್ರತಿಯೊಂದನ್ನೂ ಪರಿಶೀಲನೆ ಮತ್ತು ಹೊಣೆಗಾರಿಕೆಯನ್ನು ನಿಗದಿ ಮಾಡುವ ಅಗತ್ಯವಿದೆ, ವಿಶೇಷವಾಗಿ ಈ ಸಂದರ್ಭದಲ್ಲಿ, ಜನರ ಸ್ವ-ನಿರ್ಣಯ ಮತ್ತು ಅಸ್ತಿತ್ವವು ಅಪಾಯದಲ್ಲಿದೆ. ನರಮೇಧವನ್ನು ಕೊನೆಗೊಳಿಸಲು ಮತ್ತು ಅದನ್ನು ಸಾಧ್ಯಮಾಡಿದ ಜಾಗತಿಕ ವ್ಯವಸ್ಥೆಯನ್ನು ಕೆಡವಲು ಇದು ಅಗತ್ಯವಾದ ಹೆಜ್ಜೆಯಾಗಿದೆ.”
ವರದಿಯಲ್ಲಿ ಈ 48 ಕಂಪನಿಗಳಲ್ಲಿ ಪ್ರತಿಯೊಂದು ನರಮೇಧದಲ್ಲಿ ಯಾವ ಪಾತ್ರ ವಹಿಸಿದೆಯೆಂದು ತನಿಖೆಯ ಆಧಾರದ ಮೇಲೆ ಮಾಹಿತಿ ನೀಡಲಾಗಿದೆ. ಉದಾ : ಗೂಗಲ್ ಗಾಜಾ ಮತ್ತಿತರ ಪ್ರದೇಶಗಳಲ್ಲಿ ಇಸ್ರೇಲಿ ಡ್ರೋನ್/ಕ್ಷಿಪಣಿ ದಾಳಿಗಳಿಗೆ ಬಲಿಗಳ ತಾಣ ಗುರುತಿಸಿಕೊಟ್ಟಿತು. ಇತ್ಯಾದಿ. ಈ ವರದಿಯ ನಂತರ ಈ 48 ಕಾರ್ಪೊರೆಟ್ ಗಳನ್ನು, ಹಿಂದೆ ದಕ್ಷಿಣ ಆಫ್ರಿಕಾದ ಜತೆ ವ್ಯವಹರಿಸುತ್ತಿದ್ದ ಕಂಫನಿಗಳಿಗೆ ಮಾಡಿದಂತೆ, ಬಹಿಷ್ಕಾರ ಚಳುವಳಿ ತೀವ್ರಗೊಳಿಸಬೇಕು ಎಂಬ ಒತ್ತಡ ಬರುತ್ತಿದೆ.
ಸಹಜವಾಗಿಯೇ ಟ್ರಂಪ್ ಮತ್ತು ನೇತನ್ಯಾಹು ಸರಕಾರಗಳ, ದೈತ್ಯ ಕಾರ್ಪೊರೆಟ್ ಗಳ ಆಕ್ರೋಶಕ್ಕೆ ಅಲ್ಬನೀಸ್ ಗುರಿಯಾಗಿದ್ದಾರೆ. ಯು.ಎಸ್ ವಿದೇಶ ಕಾರ್ಯದರ್ಶಿ, ಅಲ್ಬನೀಸ್ ಮೇಲೆ “ಜ್ಯೂ-ದ್ವೇಷ ಹರಡುವ ಮತ್ತು ಯು,ಎಸ್ ಹಾಗೂ ಇಸ್ರೇಲ್ ಗಳ ವಿರುದ್ಧ ರಾಜಕೀಯ ಮತ್ತು ಆರ್ಥಿಕ ಯುದ್ಧ ಮಾಡುತ್ತಿರುವ” ಆಪಾದನೆ ಹೊರಿಸಿ ಅವರ ಮೇಲೆ ‘ದಿಗ್ಬಂಧನ’ದ ಘೋಷಣೆ ಮಾಡಿದ್ದಾರೆ.
ಈ ‘ದಿಗ್ಬಂಧನ’ದ ಪರಿಣಾಮವೆಂದರೆ , ಅವರು ಮತ್ತು ಅವರ ಕುಟುಂಭದ ಯಾರೂ ಯು.ಎಸ್ ಗೆ ಪ್ರಯಾಣಿಸುವಂತಿಲ್ಲ. ಯು.ಎಸ್ ನಲ್ಲಿ ಅವರಿಗೆ ಆಸ್ತಿ ಇದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನೇತನ್ಯಾಹು ಅವರು ‘ಗಾಜಾ ನರಮೇಧದ ಅಪರಾಧಿ’ ಎಂದು ತೀರ್ಪಿತ್ತ ಐಸಿಸಿ ಯ ನ್ಯಾಯಾಧೀಶರು ಮತ್ತು ಮುಖ್ಯಸ್ಥರ ಮೇಲೆ ಈಗಾಗಲೇ ಯು.ಎಸ್ ‘ದಿಗ್ಬಂಧನ’ ಹೇರಿದ್ದರಿಂದ ಇದೇನು ಅಚ್ಚರಿಯ ವಿಷಯ ಅಥವಾ ಅನಿರೀಕ್ಷಿತವಾಗಿರಲಿಲ್ಲ. ಇಸ್ರೇಲ್ ಸರಕಾರ ಅಲ್ಬನೀಸ್ ಅವರ ಮೇಲೆ ಈಗಾಗಲೇ ನಿಷೇಧ ಹೇರಿದೆ. ಈ ನಿಷೇಧವನ್ನು ಅವರು ‘ಗಾಜಾ ದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ’ ಎಂದು ಮಾರ್ಚ್ 2024ರಲ್ಲಿ ವರದಿ ಕೊಟ್ಟಾಗ ಹೇರಿತ್ತು.
ಇದನ್ನೂ ನೋಡಿ: ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಆರಂಭವಾಗಿದ್ದು ಹೇಗೆ? – ವಿಶ್ಲೇಷಣೆ : ಎಚ್. ಆರ್. ನವೀನ್‌ಕುಮಾರ್ Janashakthi
ಇಟಲಿಯ ಕಾನೂನು ಪರಿಣತರಾದ ಅಲ್ಬನೀಸ್ 2022ರಿಂದ ಪ್ಯಾಲೆಸ್ಟೀನ್ ಮಾನವ ಹಕ್ಕು ವಿಶೇಷ ವರದಿಗಾರರಾಗಿದ್ದು, ಗಾಜಾದ ನರಮೇಧದ ವಿರುದ್ಧ ದಿಟ್ಟ ಮತ್ತು ಗಟ್ಟಿದನಿ ಎತ್ತಿದ್ದಾರೆ. ಹಾಗಾಗಿಯೇ ಅಲ್ಬನೀಸ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡುವ ಜಾಗತಿಕ ಚಳುವಳಿ ಹುಟ್ಟಿಕೊಂಡಿದೆ. ಈ ಚಳುವಳಿ ಪ್ರಶಸ್ತಿ ಕೊಡಿಸಲು ಸಫಲವಾಗುತ್ತೋ ಇಲ್ಲವೋ, ಆದರೆ ಈಗಾಗಲೇ ಗಾಜಾ ನರಮೇಧ ನಿಲ್ಲಿಸುವಲ್ಲಿ ಟ್ರಂಪ್ ‘ಶಾಂತಿಪ್ರಿಯತೆ’ ಮತ್ತು ಯು.ಎಸ್ ಸಾಮ್ರಾಜ್ಯಶಾಹಿ ಗೋಸುಂಬೆತನ ವನ್ನು ಪೂರ್ಣವಾಗಿ
ಬಯಲುಗೊಳಿಸುತ್ತಿದೆ.
ವಿಶೇಷವಾಗಿ – ಯುದ್ಧವಿರಾಮ ಒಪ್ಪಂದವನ್ನು ಇಸ್ರೇಲ್ ಮುರಿದಿರುವುದು ಮತ್ತು ವಿಶ್ವಸಂಸ್ಥೆಯ ಪರಿಹಾರ ಸಂಸ್ಥೆಯನ್ನು ನಿಷೇಧಿಸಿ “ಗಾಜಾ ಮಾನವೀಯ ಫೌಂಡೇಶನ್” ಆಹಾರ ಮತ್ತು ಇತರ ಅಗತ್ಯಗಳನ್ನು ಪೂರೈಕೆಯಲ್ಲಿ ಪೂರ್ಣ ವೈಫಲ್ಯಗಳು – ದಿನೇ ಈ ಗೋಸುಂಬೆತನವನ್ನುಬಯಲು ಮಾಡುತ್ತಿದೆ.
“ಗಾಜಾ ಮಾನವೀಯ ಫೌಂಡೇಶನ್” ಆಹಾರ ವಿತರಣೆ ಕೇಂದ್ರಗಳಿಗೆ ಬಂದ ಪ್ಯಾಲೆಸ್ಟೀನ್ ರನ್ನು ಇಸ್ರೆಲಿ ಮಿಲಿಟರಿ ಗುರಿಯಿಟ್ಟು ಕೊಲ್ಲುವ ವರದಿಗಳು ದಿನೇ ಬರುತ್ತಿವೆ. ಜೂನ್ ಮತ್ತು ಜುಲೈನಲ್ಲಿ ಈ ವರೆಗೆ ಕನಿಷ್ಠ ಇಂತಹ 800 ಕೊಲೆಗಳೂ ನಡೆದಿವೆ. ದಿನೇ ಇನ್ನೂ ನಡೆಯುತ್ತಿದೆ. “ಹಸಿವಿನಿಂದ ಸಾಯಿರಿ ಅಥವಾ ಗುಂಡಿನಿಂದ ಸಾಯಿರಿ’ ಎಂಬ ತಂತ್ರ ವನ್ನು ಇಸ್ರೇಲಿ ಸರಕಾರ ಮತ್ತು ಮಿಲಿಟರಿ ಅನುಸರಿಸುತ್ತಿದೆ, ಈ ಫೌಂಡೇಶನ್ ನ್ನು ನಿಷೇಧಿಸಬೇಕು ಎಂದು 180 ಜಾಗತಿಕ ಮಾನವೀಯ ನೆರವು ಸಂಸ್ಥೇಗಳೂ ಹೇಳಿಕೆ ನೀಡಿವೆ. ವಿಶ್ವಸಂಸ್ಥೆಯ ಪರಿಹಾರ ಸಂಸ್ಥೆ ಮತ್ತು ಮಹಾಕಾರ್ಯದರ್ಶಿಗಳು ಸಹ ಫೌಂಡೇಶನ್ ನ್ನು ಟೀಕಿಸಿದ್ದಾರೆ. ಆದರೂ ಇದು ಮುಂದುವರೆದಿದೆ. ಟ್ರಂಪ್ ಮತ್ತು ಯು.ಎಸ್ ಸರಕಾರ ಇದರ ಬಗ್ಗೆ ಮೌನವಾಗಿದೆ. ಆದರೆ ತೀವ್ರ ಅಪಾಯವನ್ನು ಲೆಕ್ಕಿಸದೆ ಇದನ್ನು ಬಯಲಿಗೆಳೆದ ಅಲ್ಬನೀಸ್ ವರದಿಯ ವಿರುದ್ಧ ಮಿಂಚಿನ ಕ್ರಮ ತೆಗೆದುಕೊಂಡಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಯಾರಿಗೆ ಕೊಡಬೇಕು – ಟ್ರಂಪ್ ಅಥವಾ ಅಲ್ಬನೀಸ್?

