ಮಣಿಪುರದಲ್ಲಿ ಶಾಂತಿ ಮರಳುತ್ತಿದೆ ಎಂದು ಪ್ರಧಾನಿಗಳಿಗೆ ಹೇಳಿದವರಾರು? ಬೃಂದಾ ಕಾರಟ್ ಪ್ರಶ್ನೆ

ಮಣಿಪುರ ಇನ್ನೂ ಕುದಿಯುತ್ತಲೇಇದೆ, ಅದಕ್ಕೆತುರ್ತಾಗಿ ಗುಣಪಡಿಸುವ ಸ್ಪರ್ಶದ ಅಗತ್ಯವಿದೆ. ಆದರೆ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅಧಿಕಾರದಲ್ಲಿ ಉಳಿದಿರುವವರೆಗೆ ಇದು ಸಾಧ್ಯವಿಲ್ಲ. ಹೀಗೆಂದು ಮೇ3 ರಿಂದ ಜನಾಂಗೀಯ ಹಿಂಸಾಚಾರವನ್ನು ನೋಡುತ್ತಿರುವ ಈ ಈಶಾನ್ಯರಾಜ್ಯಕ್ಕೆ ಭೇಟಿ ನೀಡಿದ ನಂತರ ಹಿಂದಿರುಗಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯೂಎ)  ನಿಯೋಗ ಖಡಾಖಂಡಿತವಾಗಿ ಹೇಳಿದೆ.

ಎಐಡಿಡಬ್ಲ್ಯೂಎ ಪೋಷಕಿ ಮತ್ತು  ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾಕಾರಟ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಆಗಸ್ಟ್ 16ರಂದು ದಿಲ್ಲಿಯಲ್ಲಿ ಮಾತಾಡುತ್ತ, ದೇಶವು ಮಣಿಪುರದೊಂದಿಗೆ ನಿಲ್ಲುತ್ತದೆ ಎಂದೇನೋ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸರಿಯಾಗಿಯೇ ಹೇಳಿದ್ದಾರೆ, ಆದರೆ ಕಹಿ ಸತ್ಯವೆಂದರೆ ರಾಜ್ಯ ಮತ್ತುಕೇಂದ್ರ ಸರ್ಕಾರ ಈಗ ಮಣಿಪುರದೊಂದಿಗೆ ನಿಂತಿಲ್ಲ ಎಂದರು. ಭಾರತದ ಒಂದು ರಾಜ್ಯವು ಭೌಗೋಳಿಕವಾಗಿ ಮತ್ತು ಭಾವನಾತ್ಮಕವಾಗಿ ವಿಭಜಿಸಲ್ಪಟ್ಟಿದೆ ಎಂಬುದನ್ನು ನಂಬಲಾಗದು ಎಂದು ಅವರು ಹೇಳಿದರು.

ಆಗಸ್ಟ್ 9ರಿಂದ 11 ರ ವರೆಗೆ ಮಣಿಪುರಕ್ಕೆ ಭೇಟಿ ನೀಡಿದ ಎಐಡಿಡಬ್ಲ್ಯೂಎ ನಿಯೋಗದಲ್ಲಿ ಬೃಂದಾ ಕಾರಟ್‌ರೊಂದಿಗೆ, ಎಐಡಿಡಬ್ಲ್ಯೂಎ  ಪ್ರಧಾನ ಕಾರ್ಯದರ್ಶಿ ಮಿಯಂ ಧಾವಳೆ ಮತ್ತು ಅಧ್ಯಕ್ಷೆ  ಪಿ.ಕೆ.ಶ್ರೀಮತಿ ಇದ್ದರು.

ರಾಜ್ಯದಲ್ಲಿ ಶಾಂತಿ ಮರಳುತ್ತಿದೆ ಎಂದು ಹೇಳುತ್ತಿರುವ ಪ್ರಧಾನಿ ಮೋದಿಯವರಿಗೆ ಮಣಿಪುರದ ಪರಿಸ್ಥಿತಿಯ ಬಗ್ಗೆ ಯಾರು ಸುದ್ದಿ ಕೊಡುತ್ತಿದ್ದಾರೋಗೊತ್ತಿಲ್ಲ. ಇಂಫಾಲ್‌ನಿಂದ ಹೊರಹಾಕಲ್ಪಟ್ಟವರು ಹಿಂತಿರುಗುವವರೆಗೂ ಅಲ್ಲಿ ಶಾಂತಿ ಸಾಧ್ಯವಿರುವುದಿಲ್ಲ. ಬುಡಕಟ್ಟು ಪ್ರದೇಶಗಳಿಂದ ಓಡಿಹೋದ ಜನರು ತಮ್ಮ ಮನೆಗಳಿಗೆ ಹಿಂದಿರುಗುವವರೆಗೆ ಶಾಂತಿ ಸಾಧ್ಯವಿರುವುದಿಲ್ಲ. ಇದು ಯುದ್ಧ ವಲಯವಾಗಿದೆ ಮತ್ತು ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ಮುಂದುವರೆದು ಬೃಂದಾಕಾರಟ್ ಹೇಳಿದರು.

ಎಲ್ಲೆಡೆ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ನೀವು ಇತರ ಸಮುದಾಯಕ್ಕೆ ಸೇರಿದವರಾಗಿದ್ದರೆ, ನಿಮ್ಮ ಜೀವವನ್ನು ಕಳೆದುಕೊಳ್ಳುವ  ನಿರಂತರ ಅಪಾಯವಿದೆ ಎಂದು ಅವರು ಹೇಳಿದರು.

“ನಾವು ಪರಿಹಾರ ಶಿಬಿರಗಳಲ್ಲಿ ಸಾವಿರಾರು ಮಕ್ಕಳನ್ನು ನೋಡಿದ್ದೇವೆ, ಅವರು ತಮ್ಮ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣ ಇಡೀ ವರ್ಷವನ್ನು ಕಳೆದುಕೊಂಡರು. ಈಗಾಗಲೇ ಶೋಷಣೆಗೆ ಒಳಗಾದ ಸಮುದಾಯಗಳನ್ನು ಈ ಸರ್ಕಾರ  ಮತ್ತು ಅದರ  ನೀತಿಗಳು ಅಂಚಿಗೆ ತಳ್ಳಿವೆ”ಎಂದು ಅವರು ಹೇಳಿದರು.

ಮಣಿಪುರಕ್ಕೆ ಭೇಟಿ ನೀಡಿದ ಈ ತಂಡದ ಪ್ರಕಾರ, 1000 ದಿನಗಳ ನಂತರವೂ ನ್ಯಾಯವನ್ನು ನೀಡದಿರುವುದು ಈಗಲೂ ಜನರ “ಅತಿದೊಡ್ಡ ಸಂಕಟ”.

“ನ್ಯಾಯ ಪ್ರಕ್ರಿಯೆಯು ಒಂದಿಂಚೂ ಕೂಡ ಚಲಿಸಿಲ್ಲ. ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ನ್ಯಾಯವನ್ನು ಇನ್ನೂ ನಿರಾಕರಿಸಲಾಗಿದೆ. ಅವರಿಗೆ ಯಾವುದೇ ಮುಚ್ಚುವಿಕೆ ಇರುವುದಿಲ್ಲ. ನಿನ್ನೆ (ಆಗಸ್ಟ್ 16) ಜನರು ಮರೆತು ಕ್ಷಮಿಸುವ ಮೂಲಕ ಮುನ್ನಡೆಯ ಬೇಕು ಎಂದು ಬಿರೇನ್ ಸಿಂಗ್ ಹೇಳಿದ್ದಾರೆ. ಅತ್ಯಾಚಾರ ಸಂತ್ರಸ್ತರು ತಮ್ಮದೇಹದ ಉಲ್ಲಂಘನೆಯನ್ನು ಮರೆತು ಬಿಡಬೇಕು ಎಂದು ಅವರು ಹೇಳುತ್ತಿದ್ದಾರೆಯೇ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ”ಎಂದು ಬೃಂದಾ ಹೇಳಿದರು.

ತಮ್ಮ ಜನಾಂಗ, ತಮ್ಮ ಗುರುತು ಮತ್ತು ಧರ್ಮದ ಕಾರಣದಿಂದ ತಮ್ಮ ಮೇಲೆ ಅಪರಾಧಗಳು ನಡೆದಿವೆ ಎಂದು ಜನರು ಹೇಳಿದ್ದಾರೆ ಎಂದು ಎಐಡಿಡಬ್ಲ್ಯುಎ ತಂಡ ಹೇಳಿದೆ. “ಅದು ಅಲ್ಲಿ ಸಂಭವಿಸಬಹುದಾದರೆ, ಅದು ದೇಶದ ಯಾವುದೇ ಮೂಲೆಯಲ್ಲಿ ಸಂಭವಿಸಬಹುದು. ನ್ಯಾಯಕ್ಕೆ ದೊಡ್ಡ ತಡೆ ಎಂದರೆ ಮುಖ್ಯಮಂತ್ರಿ  ಬಿರೇನ್ ಸಿಂಗ್ ಅವರೇ ಎಂಬುದನ್ನು ನಾವು ಗಮನಿಸಿದ್ದೇವೆ. ಆಡಳಿತದ ಸಂವೇದನಾ ಹೀನತೆಯು ಅವರಿಗೆ ಹೆಮ್ಮೆಯ ವಿಷಯವಾಗಿದೆ ಏಕೆಂದರೆ ಅವರಿಗೆ ಮೋದಿ ಸರ್ಕಾರದ ಬೆಂಬಲವಿದೆ, ”ಎಂದು ಅವರು ಹೇಳಿದರು.

ಬಿರೇನ್ ಸಿಂಗ್ ಕೇಂದ್ರದೊಂದಿಗೆ “ಸಹಕಾರ” ಮಾಡುತ್ತಿರುವುದರಿಂದ ಅವರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, “ಅವರು ಯಾರೊಂದಿಗೆ ಸಹಕರಿಸುತ್ತಿದ್ದಾರೆಎಂದು ನಾನು ಕೇಳ  ಬಯಸುತ್ತೇನೆ? ಭಾರತದ ಸಂವಿಧಾನದೊಂದಿಗೆ? ಸಂತ್ರಸ್ತರೊಂದಿಗೆ? ”ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಮಣಿಪುರ ಹಿಂಸಾಚಾರ ಭುಗಿಲೆದ್ದ ನಂತರ 10 ರಾಷ್ಟ್ರ, 10 ರಾಜ್ಯಗಳನ್ನು ಸುತ್ತಾಡಿದ್ದ ಪ್ರಧಾನಿ ಮೋದಿ!

ಸ್ಥಳೀಯ ಕೈಮಗ್ಗ ಉದ್ಯಮಗಳಲ್ಲಿ ಮಹಿಳೆಯರು ಉದ್ಯೋಗದಲ್ಲಿರುವ ಸ್ಥಳೀಯ ಆರ್ಥಿಕತೆಯನ್ನು ಈ ಪ್ರಕ್ಷುಬ್ಧತೆ ನಿರ್ನಾಮ ಗೊಳಿಸಿದೆ ಎಂದ ಬೃಂದಾಕಾರಟ್ “ಆಹಾರ ಧಾನ್ಯಗಳು ಪೂರೈಕೆಯಾಗದ ಕಾರಣ ದಿನಕ್ಕೆ ಒಂದು ಬಾರಿತಿನ್ನುವ ಪರಿಸ್ಥಿತಿ ತುಂಬಾ ಭೀಕರವಾಗಿದೆ ಎಂದು ಎರಡೂ ಸಮುದಾಯಗಳ ಬಡ ಮಹಿಳೆಯರು ನಮಗೆ ಹೇಳಿದರು. ಸ್ಥಳೀಯ ಲೇವಾದೇವಿದಾರರಲ್ಲಿ  ನಗದು ಖಾಲಿಯಾಗಿರುವುದರಿಂದ ಯಾವುದೇ ಸಾಲವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.

ನಿಯೋಗವು ಚುರಚಂದಪುರಕ್ಕೆ ಭೇಟಿ ನೀಡಿತು, ಇದನ್ನು ಈಗ ಸ್ಥಳೀಯರು ‘ಲಮ್‌ಕಾ’ ಎಂದು ಕರೆಯುತ್ತಾರೆ ಎಂದು ಮರಿಯಂಧವಳೆ ಹೇಳಿದರು. ಸುಮಾರು 250 ಪರಿಹಾರ  ಶಿಬಿರಗಳಲ್ಲಿ 15000ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ ಎಂದು ಅವರು ಹೇಳಿದರು.

“ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಪಾಡುಪಟ್ಟ ಯುವತಿ ಮತ್ತು ಹಿರಿಯ ಮಹಿಳೆಯನ್ನು ಭೇಟಿಯಾಗುವುದು ಹೃದಯ ವಿದ್ರಾವಕವಾಗಿತ್ತು. ಈ ಮಹಿಳೆಯರನ್ನು ಪೊಲೀಸರು ದರೋಡೆಗಿಳಿದಿದ್ದ ಜನಜಂಗುಳಿಯ ಕೈಗೆ ಒಪ್ಪಿಸಿದ್ದಾರೆ. ಅವಳನ್ನು ಉಳಿಸುವಲ್ಲಿ ಆಕೆಯ ಹದಿಹರೆಯದ ಸಹೋದರ ಮತ್ತು ತಂದೆ ಪಟ್ಟ ಹತಾಶೆಯನ್ನು ನಮಗೆ ವಿವರಿಸಿದಾಗ ನಮ್ಮ ಅನುಭವಕ್ಕೂ ಬಂತು. ಸಹೋದರನು ತನ್ನ ಸಹೋದರಿಯನ್ನು ಬಿಗಿಯಾಗಿ ಅಂಟಿಕೊಂಡನು. ಹೇಗಾದರೂ, ಸಂತ್ರಸ್ತರಿಬ್ಬರೂ ಪರಿಹಾರ ಶಿಬಿರವನ್ನು ತಲುಪಿದರು, ”ಎಂದು ಅವರು ಹೇಳಿದರು.

ತನ್ನ ಮಗ ಮತ್ತು ಗಂಡನ ಸಾವಿನಿಂದ ಅದಾಗಲೇ ಬಳಲುತ್ತಿದುದರಿಂದ ತನಗೆ ಏನಾಯಿತು ಎಂದು ತನ್ನ ತಾಯಿಗೆ ಹೇಳಲು ಸಾಧ್ಯವಾಗಲಿಲ್ಲ ಎಂದು ಯುವತಿ ಹೇಳಿದ್ದಾಳೆ ಎಂದು ಧವಳೆ ಹೇಳಿದರು. “ಹುಡುಗಿ ತನ್ನ ಭಯಾನಕ ಸತ್ವ ಪರೀಕ್ಷೆಯನ್ನು ತನ್ನೊಳಗೆ ಹಲವಾರು ದಿನಗಳವರೆಗೆ ಸಮಾಧಿ ಮಾಡಿದ್ದಳು. ವಿಡಿಯೋ ಹೊರಬಿದ್ದ  ನಂತರವೇ ತಾಯಿಗೆ ವಿಷಯ ತಿಳಿಯಿತು. ಇದು ಆಕೆಯ ಹೃದಯವನ್ನು ಮುರಿಯಿತು” ಎಂದು ಧವಳೆ ಹೇಳಿದರು.

ಎಐಡಿಡಬ್ಲ್ಯುಎ ತಂಡದ ಭೇಟಿಯ ನಂತರ ಬಿಡುಗಡೆಯಾದ ವರದಿಯು ತಾಯಿಯ ಹೇಳಿಕೆಯನ್ನು ಹೀಗೆ ಉಲ್ಲೇಖಿಸಿದೆ, “ನನ್ನ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಎಷ್ಟೇ ಹಣ ನೀಡಿದರೂ ನಮ್ಮ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ನಾವು ಈ ಸರ್ಕಾರದ ವಿರುದ್ಧ ಹೋರಾಡಲು ಸಹಾಯವನ್ನು ಬಯಸುತ್ತೇವೆ ಮತ್ತು ನಮಗಾಗಿ ಪ್ರತ್ಯೇಕ ಆಡಳಿತವನ್ನು ಬಯಸುತ್ತೇವೆ. ನನ್ನ ಮಗ ಮತ್ತು ಗಂಡನ ಮೃತ ದೇಹಗಳನ್ನು ನೋಡಲು ನಾನು ಬಯಸುತ್ತೇನೆ. ದಯವಿಟ್ಟು ಅವನ್ನು ನೋಡಲು ನನಗೆ ಸಹಾಯ ಮಾಡಿ.”

ಆಕೆಯ ಪ್ರಕಾರ, ಆ ಶವಗಳು (ಗಂಡ ಮತ್ತು ಮಗ) ಇಂಫಾಲ್‌ನ  ಶವಾಗಾರದಲ್ಲಿ  ಬಿದ್ದಿವೆ, ಏಕೆಂದರೆ ಬಿಷ್ಣುಪುರದ ಶವಾಗಾರದಲ್ಲಿ  18ಕ್ಕೆ ಮಾತ್ರ ಅವಕಾಶ ವಿದ್ದರೂ ವಾಸ್ತವವಾಗಿ 39 ದೇಹಗಳನ್ನು ಅಲ್ಲಿ ಇರಿಸಲಾಗಿತ್ತು.

ಆ ಹಿರಿಯ ಮಹಿಳೆ ಹೇಳಿದರು, “ನಾವು ಅನುಭವಿಸಿದ ಕಷ್ಟವನ್ನು ಯಾವುದೇ ಸಮುದಾಯದ ಯಾವುದೇ ಮಹಿಳೆ ಅನುಭವಿಸಬಾರದು. ನನ್ನ ಮಗ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ, ನಾನು ಅವನನ್ನು ಮಾರ್ಚ್‌ನಿಂದ ನೋಡಿಲ್ಲ, ಈಗ ನಾನು ಅವನನ್ನು ಎಂದಿಗೂ ನೋಡುವುದಿಲ್ಲ. ಇದು ಆದಷ್ಟು ಬೇಗ ಮುಗಿಯಬೇಕೆಂದು ನಾವು ಬಯಸುತ್ತೇವೆ. ”

ತಮ್ಮ ಆಗ್ರಹಗಳನ್ನು ಮುಂದಿಡುತ್ತು ಪಿ ಕೆ ಶ್ರೀಮತಿ ಅವರು ನ್ಯಾಯದ ಪ್ರಕ್ರಿಯೆ ಪ್ರಾರಂಭವಾಗುವಂತಾಗಲು ಬಿರೇನ್ ಸಿಂಗರನ್ನು ತೆಗೆದು ಹಾಕಬೇಕು ಎಂದು ಹೇಳಿದರು.

“ಪುನರ್ವಸತಿಯನ್ನು ಖಚಿತ ಪಡಿಸಲು ಹಿಂಸಾಚಾರದ ಸರಿಯಾದ ಮೌಲ್ಯಮಾಪನ ನಡೆಯಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅದಲ್ಲದೆ, ಅತ್ಯಾಚಾರ, ಕೊಲೆ, ಸಾಮೂಹಿಕ ಅತ್ಯಾಚಾರ ಮತ್ತು ಹಿಂಸಾಚಾರದ ಎಲ್ಲಾ ಅಪರಾಧಿಗಳನ್ನು ಬಂಧಿಸಬೇಕು. ಆರ್ಥಿಕ ಸ್ಥಿರತೆ ರಾಜ್ಯಕ್ಕೆ ಮರಳುವವರೆಗೆ ಎಲ್ಲಾ ನಿವಾಸಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ 10 ಕೆಜಿ ಪಡಿತರವನ್ನು ನೀಡಬೇಕು ”ಎಂದು ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *