ವಿಶ್ವಸಂಸ್ಥೆ: ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ‘ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ’ಗಳನ್ನು ಘೋಷಿಸಿದರು. ಕೋವಿಡ್-19ರ ಸಾಂಕ್ರಾಮಿಕ ವೈರಸ್ ನಿಯಂತ್ರಿಸಲು ಅವಿರತವಾಗಿ ಶ್ರಮಿಸಿದ ಭಾರತದ ಆಶಾ ಕಾರ್ಯಕರ್ತೆಯರ ಸೇವೆಗೆ ಸ್ಮರಿಸಿ ಗೌರವಿಸಿದರು.
ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕತೆಯನ್ನು ನಿಯಂತ್ರಣಕ್ಕೆ ತರಲು ಅವಿರತವಾಗಿ ಶ್ರಮಿಸಿದ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯಗಳು ತಲುಪುವಂತೆ ಮಾಡಿದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ ಆರೋಗ್ಯ ಸಂಸ್ಥೆ ಗೌರವಾದರಗಳನ್ನು ಸಲ್ಲಿಸಿದೆ.
ಇದನ್ನು ಓದಿ: ದಿನಪೂರ್ತಿ ಕೆಲಸ – ವೇತನ ಮಾತ್ರ ಕಮ್ಮಿ : ಆಶಾ ಕಾರ್ಯಕರ್ತೆಯರ ಗೋಳು ಕೇಳುವವರು ಯಾರು?
ದೇಶದಲ್ಲಿ ಕೊರೊನಾ ಸೋಂಕು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಮನೆ-ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುವ ಮೂಲಕ ಆಶಾ ಕಾರ್ಯಕರ್ತೆಯರು ಶ್ರಮಿಸಿದ್ದಾರೆ. ಗ್ರಾಮೀಣ ಭಾರತದಲ್ಲಿ ಮೊದಲ ಸಂಪರ್ಕಬಿಂದುವಾಗಿ ಕಾರ್ಯನಿರ್ವಹಿಸಿ, ಸೋಂಕು ನಿಯಂತ್ರಿಸಲು ತಮ್ಮದೇ ಆದ ಕೊಡುಗೆಯನ್ನು ಆಶಾ ಕಾರ್ಯಕರ್ತೆಯರು ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಜಾಗತಿಕ ಅಸಮಾನತೆ, ಸಂಘರ್ಷ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಿಸುತ್ತಿರುವ ವೇಳೆ ಪ್ರಪಂಚದಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಿಸಲು ಮತ್ತು ಉತ್ತೇಜಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಈ ಪ್ರಶಸ್ತಿ ಮೂಲಕ ಗುರುತಿಸುವ ಕಾರ್ಯಕ ನಡೆಯಲಿದೆ. ‘ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ’ ಪುರಸ್ಕೃತರು ತಮ್ಮ ಜೀವವನ್ನೇ ಪಣಕ್ಕಿಟ್ಟು, ಸಮಾನತೆ ಮತ್ತು ಮಾನವೀಯತೆಯಿಂದ ನಿಸ್ವಾರ್ಥ ಸೇವೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾದೇಶಿಕ ಆರೋಗ್ಯ ಸಮಸ್ಯೆಗಳ ಬದ್ಧತೆ, ನಾಯಕತ್ವ, ಜಾಗತಿಕ ಆರೋಗ್ಯ ಸುಧಾರಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸಲು ‘ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ’ ಘೋಷಿಸಲಾಗುತ್ತದೆ.
ಇದನ್ನು ಓದಿ: ಗೌರವಧನ ಹೆಚ್ಚಳ-ಕೆಲಸದ ಒತ್ತಡ ಕಡಿಮೆ ಮಾಡಲು ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಭಾರತದ ಆಶಾ ಕಾರ್ಯಕರ್ತೆಯರು ಮಾತ್ರವಲ್ಲದೇ, ಇದೇ ವೇಳೆ ದೇಶದ ತಖರ್ ಮತ್ತು ಕುಂದುಜ್ ಪ್ರಾಂತ್ಯಗಳಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳಿಂದ ಕೊಲ್ಲಲ್ಪಟ್ಟ ಅಫ್ಘಾನಿಸ್ತಾನದ ಪೋಲಿಯೋ ಲಸಿಕೆ ಕಾರ್ಮಿಕರ ತಂಡ, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಗ್ಲೋಬಲ್ ಹೆಲ್ತ್ ಅಂಡ್ ಸೋಶಿಯಲ್ ಮೆಡಿಸಿನ್ ವಿಭಾಗದ ಅಧ್ಯಕ್ಷರಾಗಿದ್ದ ಡಾ.ಪೌಲ್ ಫಾರ್ಮರ್, ಬ್ರಿಟಿಷ್ ಲೆಬನಾನಿನ ಮನೋವೈದ್ಯ ಡಾ.ಅಹ್ಮದ್ ಹಂಕಿರ್, ಕ್ಯಾಬೊ ವರ್ಡೆಯ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿ ಶ್ರೀಮತಿ ಲುಡ್ಮಿಲಾ ಸೋಫಿಯಾ ಒಲಿವೇರಾ ವರೆಲಾ, ಕುಷ್ಠರೋಗ ನಿರ್ಮೂಲನೆಗಾಗಿ ಶ್ರಮಿಸಿದ ಶ್ರೀ ಯೋಹೇ ಸಸಕಾವಾ ಅವರನ್ನು ಸಹ ಗೌರವಿಸಲಾಗಿದೆ.
ಆಶಾ ಕಾರ್ಯಕರ್ತೆಯರು, ಲಸಿಕೆ ಹಾಗೂ ತಡೆಗಟ್ಟಬಹುದಾದ ರೋಗಗಳ ವಿರುದ್ಧ ಮಕ್ಕಳಿಗೆ ತಾಯಿಯ ಆರೈಕೆ ಮತ್ತು ಪ್ರತಿರಕ್ಷಣೆ ನೀಡಲು ಕೆಲಸ ಮಾಡುತ್ತಾರೆ. ಸಮುದಾಯ ಆರೋಗ್ಯ ರಕ್ಷಣೆಯೊಂದಿಗೆ ಅಧಿಕ ರಕ್ತದೊತ್ತಡ ಮತ್ತು ಕ್ಷಯರೋಗಕ್ಕೆ ಚಿಕಿತ್ಸೆ, ಪೋಷಣೆ, ನೈರ್ಮಲ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕ್ಕಾಗಿನ ಪ್ರಚಾರದೊಂದಿಗೆ ಶ್ರಮಿಸುತ್ತಿದ್ದಾರೆ.