ಬಿಜೆಪಿ ಸೋಲಿಸುವ ಭಿನ್ನದಾರಿಗಳ ನಡೆ ಯಾವ ಕಡೆ ?

ಯು ಬಸವರಾಜ

ಕೆಲವು ಮತೀಯ ಹಾಗೂ ಜಾತೀಯ ಸಂಘಟನೆಗಳನ್ನು ಬಿಟ್ಟರೇ ರಾಜ್ಯದ ಬಹುತೇಕ ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಸಂಘಟನೆಗಳು ಹಾಗೂ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಮತ್ತು ಕಾಂಗ್ರೆಸ್, ಜೆಡಿಎಸ್, ಆಪ್ ಮತ್ತಿತರೆ ಬಿಜೆಪಿಯೇತರ ಬಹುತೇಕ ಪಕ್ಷಗಳು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಈ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇದರಲ್ಲಿ ಈ ಎಲ್ಲರ ಅಭಿಪ್ರಾಯಗಳು ಸಮಾನ ಹಾಗೂ ಒಂದೇ ಆಗಿವೆ. ಇದು ಈಗಾಗಲೇ ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ. ಆದರೇ, ಈ ಶಕ್ತಿಗಳು ಬಿಜೆಪಿಯನ್ನು ಸೋಲಿಸಲು ಹಾಗೂ ಅದನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಅವರವರು ಹಿಡಿದಿರುವ ದಾರಿಗಳು ಮಾತ್ರ ಬಿನ್ನ ಬಿನ್ನವಾಗಿವೆ. ಈ ಬಿನ್ನ ಭಿನ್ನವಾದ ದಾರಿಗಳು, ನಡೆಗಳು ಈ ಎಲ್ಲರ ಗುರಿಯನ್ನು ಈಡೇರಿಸಬಲ್ಲವೇ ?! ನಮ್ಮ ಮತದಾರರು ಈ ಚುನಾವಣೆಯಲ್ಲಿ ಈ ಪ್ರಶ್ನೆಯನ್ನು ಹಾಕಿಕೊಳ್ಳ ಬೇಕಾಗಿದೆ ಮತ್ತು ಸರಿಯಾಗಿ ಉತ್ತರಿಸಿಕೊಂಡು ಮುಂದೆ ಸಾಗುವುದು ಉಚಿತವಾಗಿದೆ.

ಕಾಂಗ್ರೆಸ್ ಪಕ್ಷ ಮತ್ತು ಕೆಲವು ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಪಕ್ಷಗಳು ಮತ್ತು ಸಂಘಟನೆಗಳಾದ ಸಿಪಿಐ, ಸರ್ವೋದಯ ಕರ್ನಾಟಕ, ದಲಿತ ಸಂಘಟನೆಗಳ ಐಕ್ಯ ಸಮಿತಿ, ಕೆಲ ಬುದ್ದಿ ಜೀವಿ ವಲಯಗಳು ಕಾಂಗ್ರೆಸ್ ಒಂದೇ ಬಿಜೆಪಿಗೆ ಪರ್ಯಾಯವಾಗಿದೆ ಎನ್ನುತ್ತಿವೆ! ಪ್ರಚುರಿಸುತ್ತಿವೆ‌. ರಾಜ್ಯದ ಜೆಡಿಎಸ್ ನಂಬಲರ್ಹವಲ್ಲಾ ? ಅದು ಬಿಜೆಪಿ ಜೊತೆ ಸಖ್ಯತೆ ಹೊಂದದಿರುವ ಕುರಿತು ಗ್ಯಾರಂಟಿ ಇಲ್ಲ ! ಹೀಗಾಗಿ, ಬಿಜೆಪಿಗೆ, ಕಾಂಗ್ರೆಸ್ ಮಾತ್ರವೇ ಪರ್ಯಾವೆಂದು ಕಾಂಗ್ರೆಸ್ ಜೊತೆ ಈ ಎಲ್ಲರೂ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕ್ರಮವಹಿಸುತ್ತಿವೆ.


ರಾಜ್ಯದ ರಾಜಕೀಯ ಸನ್ನಿವೇಶ ಏನು ಹೇಳುತ್ತದೆ:
ರಾಜ್ಯದ ರಾಜಕೀಯ ಸನ್ನಿವೇಶ ಏನು ಹೇಳುತ್ತದೆ. ವಾಸ್ತವವಾಗಿ ಗಮನಿಸಿದಲ್ಲಿ ಬಿಜೆಪಿಯನ್ನು ಸೋಲಿಸಲು ಸ್ಪರ್ಧೆಯೊಡ್ಡುವ ಪಕ್ಷ ಕಾಂಗ್ರೆಸ್ ಮಾತ್ರವೇ ಆಗಿಲ್ಲ ಎಂಬ ಸತ್ಯವನ್ನು ಅದು ತೆರೆದು ತೋರುತ್ತದೆ. ಹಿಂದಿನ ಚುನಾವಣೆಯ ಫಲಿತಾಂಶವು ಸ್ಪಷ್ಠವಾಗಿ ಅದನ್ನು ಹೇಳುತ್ತದೆ. ಬಿಜೆಪಿ ಗೆದ್ದಿರುವುದು ಕೇವಲ 102 ಸ್ಥಾನಗಳಲ್ಲಿ ಮಾತ್ರವೇ ಆಗಿದೆ. 78 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವು ಬಿಜೆಪಿ ಅಥವಾ ಕೆಲವೆಡೆ ಜೆಡಿಎಸ್ ಪಕ್ಷಗಳನ್ಬು ಸೋಲಿಸಿದೆ. ಉಳಿದ 44 ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದವರಲ್ಲಿ ಜೆಡಿಎಸ್ ಪಕ್ಷವು ಸೇರಿದಂತೆ ಹಲವರಿದ್ದಾರೆ.

ಈ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈ ಎರಡೂ ಪಕ್ಷಗಳು ಮತದಾರರಿಂದ ತಿರಸ್ಕರಿಸಲ್ಪಟ್ಟಿವೆ ಎಂಬುದನ್ನು ಗಮನಿಸಬೇಕು. ಮಾತ್ರವಲ್ಲಾ, ಇನ್ನು ಸುಮಾರು 20 ಕ್ಕೂ ಹೆಚ್ಚು ಕ್ಷೇತ್ರಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಬಲ್ಲ ಪಕ್ಷವೆಂದು ಗುರುತಿಸಲಾಗಿರುವ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರುವುದು ಕಂಡು ಬಂದಿದೆ. ಹೀಗಾಗಿ ಈ ಎಲ್ಲ 64 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ದ ಬಲವಾದ ಸ್ಪರ್ಧೆ ಒಡ್ಡಬಲ್ಲ ಮತ್ತು ಗೆಲ್ಲಬಲ್ಲ ಕಾಂಗ್ರೆಸ್ ಏತರ ಈ ಪಕ್ಷಗಳಿಗೆ ಬೆಂಬಲ ನೀಡಬೇಕೇ ಅಥವಾ ಕುರುಡಾಗಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವೇ ಬೆಂಬಲ ನೀಡಬೇಕೇ ?! ಎಂಬ ಈ ಪ್ರಶ್ನೆಯನ್ನು ರಾಜ್ಯದ ಈ ವಾಸ್ತವಿಕ ರಾಜಕೀಯ ಸನ್ನಿವೇಶವು ನಮ್ಮ ಮುಂದಿಡುತ್ತಿದೆ.

ಕಾಂಗ್ರೆಸ್ ನ್ನೇ ರಾಜ್ಯದಾದ್ಯಂತ ಬೆಂಬಲಿಸಬೇಕೆನ್ನುವವರು ಹೇಳುವುದೇನು ? 64 ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತಿತರರನ್ನು ಗೆಲ್ಲಿಸಲು ಕ್ರಮವಹಿಸಿದರೇ, ಜೆಡಿಎಸ್ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುತ್ತದೆಂಬುದೇ ಆಗಿದೆ. ಚುನಾವಣೆಯ ನಂತರ ಏನಾಗುತ್ತದೆಂದು ಈಗ ಹೇಳಲಾಗುತ್ತದೆಯೇ ? ಏನೂ ಆಗಬಹುದು.  ಕಳೆದ ಚುನಾವಣೆಯ ನಂತರ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದ್ದನ್ನು ನಾವು ನೋಡಿದ್ದೇವೆ. ಅವುಗಳೊಳಗಿನ ಅಸಂತೃಪ್ತಿಯನ್ನು ಬಳಸಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಬಲವಂತವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡು ಸರಕಾರ ನಡೆಸಿದ್ದು ಆಗಿದೆ.

ಆದ್ದರಿಂದ ಚುನಾವಣೆಯ ನಂತರ ಸರಕಾರದ ರಚನೆ ಯಾವ ರೀತಿಯಲ್ಲಾದರೂ ಆಗಬಹುದು. ಚುನಾವಣೆಯ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕೆಲಸ ಜಾತ್ಯತೀತ ಪಕ್ಷಗಳೆಂದು ಗುರುತಿಸಿಕೊಳ್ಳುವ ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಎರಡು ಪಕ್ಷಗಳ ಮೇಲಿರುತ್ತದೆ. ಅದಕ್ಕೆ ಈ ದಿನದ ರಾಜಕೀಯ ಸನ್ನಿವೇಶ ಪೂರಕವಾಗಿದೆ. ಒಕ್ಕೂಟ ಸರಕಾರದ ನೇತೃತ್ವವನ್ನು ಬಿಜೆಪಿಯೇ ವಹಿಸಿರುವುದರಿಂದ ಅದರ ದುರುಪಯೋಗ ಮತ್ತು ಅಸಪರೇಷನ್ ಕಮಲದ ಕಾರಣದಿಂದ ಬಿಜೆಪಿಯೇತರ ಶಾಸಕರು, ಎಲ್ಲಿ ಎಷ್ಠರ ಮಟ್ಟಿಗೆ ಗಟ್ಟಿಯಾಗಿ ನಿಲ್ಲಬಲ್ಲರೆಂಬುದು ಪ್ರಶ್ನಾರ್ಹವಾಗಿದೆ. ಅದೇನೇ ಇರಲಿ, ಆದರೇ, ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಕೈ ಜೋಡಿಸಬಹುದೆಂದು ಊಹಿಸಿ ಈ 64 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಾಗದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದು ಸರಿಯೇ ?! ಬಿಜೆಪಿ ಯನ್ನು ಸೋಲಿಸಲು ಕಾಂಗ್ರೆಸ್ ಗೆ ಮತ ನೀಡ ಬೇಕೆಂಬ ರೀತಿಯ ತಪ್ಪು ಮಾಡಿದ್ದರಿಂದ ಸುಮಾರು 20 ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವಂತಾಯಿತೆಂದು ಮತ್ತು ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನ ಪಡೆಯುಂತಾಯಿತೆಂದು ಅಲ್ಪ ಸಂಖ್ಯಾತ ಸಮುದಾಯದ ನಡುವೆ ಚರ್ಚೆ ನಡೆಯುತ್ತಿರುವುದನ್ನು ನಾವಿಲ್ಲಿ ಸಕಾರಾತ್ಮಕವಾಗಿ ಗುರುತಿಸ ಬೇಕಾಗಿದೆ. ಈ ಅನುಭವದಂತೆ ಸುಮಾರು ಈ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವಿಗೆ ನೆರವಾಗಿರುವುದು ಅನುಭವವಲ್ಲವೇ ? ಆ ನಿಲುಮೆಯು ಬಿಜೆಪಿ ದುರ್ಬಲ ಗೊಳ್ಳುವುದನ್ನು ತಡೆಯುವುದಿಲ್ಲವೇ ?! ಈ ಕಾರಣದಿಂದಾಗಿಯೇ ಆಪರೇಷನ್ ಕಮಲದ ಹಾಗೂ ಅಧಿಕಾರ ದುರುಪಯೋಗದ ಮೂಲಕ ಅಧಿಕಾರ ಪಡೆಯಲು ಸಾಧ್ಯವಾದುದು ?! ಈಗಿನ ಪ್ರಶ್ನೆ ಬಿಜೆಪಿಯನ್ನು ದುರ್ಬಲ ಗೊಳಿಸುವುದೋ ಅಥವಾ ಬಿಜೆಪಿ ಮತ್ತೊಂದು ಪಕ್ಷದ ಜೊತೆ ಸೇರಿ ಸರಕಾರ ರಚಿಸುವುದನ್ನು ತಡೆಯುವುದೋ ?! ಈಗಿನ ಪ್ರಶ್ನೆ ಇರುವುದು ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಿ ದುರ್ಬಲ ಗೊಳಿಸುವುದಾಗಿದೆ. ಒಟ್ಟಾರೆ ಆಪರೇಷನ್ ಕಮಲದ ಮೂಲಕವೂ ಸೇರಿ ಅದು ಸ್ವತಂತ್ರವಾಗಿ ಸರಕಾರ ರಚಿಸಿದಂತೆ ದುರ್ಬಲ ಗೊಳಿಸುವುದೇ ಆಗಿದೆ.

ಮತ್ತೊಂದು ವಿಚಾರವನ್ನು ಇಲ್ಲಿ ಗಮನಿಸಬೇಕಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಏತರ ಮೂರನೆ ಅಥವಾ ಇತರೆ ರಾಜಕೀಯ ರಚನೆ ಬೆಳೆಯುವುದು ರೂಪುಗೊಳ್ಳುವುದು ರಾಜ್ಯಕ್ಕೆ ಅವಶ್ಯವಿಲ್ಲವೆಂದು ಭಾವಿಸಲಾಗುತ್ತಿದೆಯೇ ? ಖಂಡಿತಾ ಅವರ್ಯಾರು ಈ ರೀತಿ ಆಲೋಚಿಸುತ್ತಿದ್ದಾರೆಂದು ಭಾವಿಸಬೇಕಾಗಿಲ್ಲ. ಖಂಡಿತಾ ಆ ಎಲ್ಲರು ಪರ್ಯಾಯ ರಾಜಕಾರಣ ಬಯಸುವವರೇ ?

ನಿಜಾ, ಪರ್ಯಾಯದ ಕಡೆ ಸಾಗ ಬೇಕೆಂದರೇ ದೊಡ್ಡ ಬಂಡವಾಳಿಗರು, ಕಾರ್ಪೋರೇಟ್ ಸಂಸ್ಥೆಗಳ ಲೂಟಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ದುರ್ಬಲಗೊಳ್ಳುವುದು ಅವಶ್ಯವಿವೆ ಈ ಪ್ರಕ್ರಿಯೆ ಈಗಾಗಲೇ ಬೆಳೆದು ಬಂದಿದೆ. ಅದಾಗಲೇ ದೇಶದಾದ್ಯಂತ ತೆಲಂಗಾಣಾ, ಆಂದ್ರಪ್ರದೇಶ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಮುಂತಾದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಬಂಡವಾಳದಾರ ಪಕ್ಷಗಳು ಬೆಳೆದು ಬಂದಿವೆ. ಅವುಗಳು ಈ ಮೊದಲು ಎಡಪಕ್ಷಗಳು ಪ್ರಭಲವಾಗಿರುವಾಗ ಎಡ ಪಕ್ಷಗಳ ಜೊತೆ ನಂತರ ಒಕ್ಕೂಟ ಸರಕಾರದ ಆಡಳಿತ ಪಕ್ಷಗಳ ಜೊತೆ ಸೇರಿರುವುದನ್ನು ಕಾಣುತ್ತೇವೆ. ಇದೂ ಹೀಗೆಯೇ ! ಪ್ರಾದೇಶಿಕ ಪಕ್ಷಗಳ ಜೊತೆಗಿನ ಜನ ಚಳುವಳಿಗಳು ಜನ ಪರ್ಯಾಯಕ್ಕೆ ಹಾದಿ ಮಾಡಿಕೊಡಲಿವೆ. ಈ ಕಾರಣಕ್ಕಾಗಿಯೇ ಎಡ ಪಕ್ಷಗಳ ನೇತೃತ್ವದಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಏತರ ರಾಜಕೀಯವನ್ನು ದುರ್ಬಲಗೊಳಿಸುವ ಹುನ್ನಾರ ದೇಶದಲ್ಲಿ ಬೆಳೆದು ಬಂದಿತು.

ಮತ್ತೊಂದು ವಿಚಾರ ಹೀಗೆ, ಕಾಂಗ್ರೆಸ್ ಏತರ ಪಕ್ಷಗಳನ್ನು ದುರ್ಬಲಗೊಳಿಸುವುದರಿಂದ ದೇಶದ ದೊಡ್ಡ ಬಂಡವಾಳಿಗರ ಮತ್ತು ಬಿಜೆಪಿಯ ತಂತ್ರ ಫಲಿತಕ್ಕೆ ನೆರವಾದಂತಾಗುವುದಿಲ್ಲವೆ ? ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇದನ್ನೇ ಬಯಸುತ್ತಿರುವುದಲ್ಲವೇ ? ಅವುಗಳ ಆಶಯ, ದೇಶದ ರಾಜಕಾರಣದಲ್ಲಿ ಎರಡು ಪಕ್ಷಗಳ ವ್ಯವಸ್ಥೆ ಇರಲಿ ಎಂಬುದೇ ಆಗಿದೆ. ನಮ್ಮ ಈ ನಿಲುಮೆ ಇದಕ್ಕೆ ಇಂಬು ಗೊಟ್ಟಂತಾಗುವುದಿಲ್ಲವೇ ?


ಇದು ಸಿಪಿಐಎಂ ನ ಸೈದ್ಧಾಂತಿಕ ರಾಜಿಯೇ ?!
ಖಂಡಿತಾ ಅಲ್ಲಾ ! ಕರ್ನಾಟಕದ ವಾಸ್ತವಿಕ ರಾಜಕಾರಣ ಮತ್ತು ಪರ್ಯಾಯ ರಾಜಕಾರಣ ರೂಪುಗೊಳ್ಳುವ ಪಥದ ಅರಿವಿನ ಕೊರತೆಯಿಂದ ಸಿಪಿಐಎಂ ಮೇಲೆ ಮಾಡುವ ಆರೋಪವಷ್ಠೇ ? ಜೆಡಿಎಸ್ ಪಕ್ಷವು ಈ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಸಿಪಿಐಎಂ ಪಕ್ಷವನ್ನು ಬೆಂಬಲಿಸುತ್ತಿರುವುದರಿಂದ ಅವರ ಪರವಾಗಿ ಮಾತನಾಡುತ್ತಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಿಪಿಐಎಂ ನ್ನು ಜೆಡಿಎಸ್ ಬೆಂಬಲಿಸಿರಲಿಲ್ಲ. ಜೆಡಿಎಸ್ ಸ್ಪರ್ಧೆಯ ಕಾರಣದಿಂದ ಬಾಗೇಪಲ್ಲಿ ಕ್ಷೇತ್ರದಲ್ಲಿ ಸೋಲ ಬೇಕಾಯ್ತು. ಆದಾಗಲು ಅಂದಿನ ರಾಜಕೀಯ ನಿಲುಮೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಕೇವಲ ಒಂದೆರಡು ಕ್ಷೇತ್ರಗಳ ಅಧಿಕಾರದ ಕಾರಣದಿಂದ ಸಿಪಿಐಎಂ ರಾಜ್ಯದ ಮತ್ತು ಪರ್ಯಾಯ ರಾಜಕಾರಣದ ಹಿತಾಸಕ್ತಿಯನ್ನು ಬಿಟ್ಟುಕೊಡವಷ್ಟು ದಿವಾಳಿತನ ಹೊಂದಿಲ್ಲ.

ಹೌದು, ಕೆಲ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು, ಪ್ರಗತಿಪರರು ತಮ್ಮ ಹೆಜ್ಜೆಯನ್ನು ಸರಿಯಾದ ಕಡೆ ತಿರುಗಿಸಲು ಈಗಲೂ ಕಾಲ ಮಿಂಚಿಲ್ಲ.

 

(ಲೇಖಕರು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ)

Donate Janashakthi Media

Leave a Reply

Your email address will not be published. Required fields are marked *