ಮುನೀರ್ ಕಾಟಿಪಳ್ಳ
ಹೊರಡು ಇಲ್ಲಿಂದ ಎಂದು ಆರ್ಭಟಿಸುತ್ತಿದೆ ಗುಂಪು
ಹೋಗುವುದಾದರು ಎಲ್ಲಿಗೆ ?
ಹೊರಡುವುದಾದರು ಎಲ್ಲಿಂದ ?
ಹೊರದಬ್ಬುವ ಮುಂಚೆ ನನ್ನೆರಡು
ಮಾತುಗಳನ್ನು ಕೇಳಿಸಿಕೊಳ್ಳಿ ತಮ್ಮಂದಿರೆ
ವ್ಯಾಪಾರ ಮಾಡುವಂತಿಲ್ಲ
ನೀನು ಸಿದ್ದಪಡಿಸಿದ ಆಹಾರವೂ ಹರಾಂ
ನೀನು ತೊಡುವ ಬಟ್ಟೆ, ನೀನು ನಡೆಸುವ ಆರಾಧನೆ
ಎಲ್ಲವೂ ಈ ನೆಲದಲ್ಲಿ ನಿಷೇಧಿಸಿದ್ದೇವೆ
ಎದ್ದು ಹೊರಡು ಇಲ್ಲಿಂದ
ಎಂದು ಕಣ್ಣಲ್ಲೇ ಸುಡುತ್ತಿದ್ದೀರಲ್ಲ !
ಅರೆ, ಹೋಗುವುದಾದರು ಎಲ್ಲಿಗೆ !!
ತಾಯಿ ಗರ್ಭದಿಂದ ಈ ಮಣ್ಣಿಗೇ ಬಿದ್ದವನು ನಾನು
ನನ್ನ ಅಜ್ಜನ ತಾತನದ್ದೂ ಇದೇ ಕತೆ
ಎಷ್ಟು ಪುರಾತನ ಅಂತ ಕೇಳಿದಿರಾ ?
ನಿಮ್ಮ ಇತಿಹಾಸದಷ್ಟೇ ದೀರ್ಘ
ಬೇಕಿದ್ದರೆ ನಿಮ್ಮ ಅಜ್ಜನ ತಾತನಲ್ಲಿ ಕೇಳಿರಿ
ಅಂದು ಕಾಫಿ, ಏಲಕ್ಕಿ ತೋಟದಲ್ಲಿ
ಧಣಿಗಳ ಮನೆಯ ಜೀತದ ದುಡಿಮೆಯಲ್ಲಿ
ಕುಲೀನರಿಗೆ ನಮ್ಮ ನೆರಳು ಸೋಕದಂತೆ ನಡೆಯಬೇಕಾಗಿದ್ದ ದಿನಮಾನದಲ್ಲಿ
ನಮ್ಮಜ್ಜಿಯಂದಿರು ಎದೆ ಮುಚ್ಚಲು ಮೊಲೆ ತೆರಿಗೆ ಕಟ್ಟುತ್ತಿದ್ದ ಕಾಲದಲ್ಲಿ
ನನ್ಮಜ್ಜನೂ ನಿಮ್ಮಜ್ಜನೂ ಒಬ್ಬನೇ ಆಗಿದ್ದ
ಮತ್ತೆ ನಾನು ಹೊರಡುವುದಾದರು ಎಲ್ಲಿಗೆ ?
ನನ್ನಜ್ಜ ಅಲ್ಲಾ ಕೂಗಲು ಕಲಿತ ಹೌದು
ಆತನಿಗೇನು ಸ್ವರ್ಗ ಸಾಧನೆಯ ಉತ್ಕಟ ಬಯಕೆಯಿರಲಿಲ್ಲ
ಈ ತಾರತಮ್ಯದ ನರಕದಿಂದ ತಪ್ಪಿಸಿಕೊಳ್ಳಬೇಕಿತ್ತು
ಒಂದೇ ಬಾವಿಯ ನೀರು ಕುಡಿಯುವುದು
ಒಂದೇ ಸಾಲಿನಲ್ಲಿ ಕೂತು ಉಣ್ಣುವುದು
ವಯಸ್ಸಿಗೆ ಬಂದ ಮೊಮ್ಮಗಳು ಎದೆಯ ಮೇಲೆ ಬಟ್ಟೆ ತೊಡುವುದು
ಇಷ್ಟೆ, ಹೌದು ಇಷ್ಟಕ್ಕಾಗಿಯೇ ಅತ ಸೂಫಿಯ ಸಂಗ ಮಾಡಿದ
ಈಗ ಹೊರಡುವುದಾದರು ಎಲ್ಲಿಂದ !
ಇಂದು ನಿಮ್ಮ ಕೈಗೆ ಬಡಿಗೆ ನೀಡಿದವರನ್ನು
ಒಮ್ಮೆ ಕೇಳಿ ಬಿಡಿ
ಅಂದು ಒಂದೇ ಸಾಲಿನಲ್ಲಿ ಊಟಕ್ಕೆ ಕೂತಿದ್ದರೆ
ಊರ ಬಾವಿಯ ನೀರು ಸೇದಲು ಬಿಟ್ಟಿದ್ದರೆ
ನಮ್ಮ ಅಮ್ಮಂದಿರ ಎದೆಯ ಮೇಲೆ ಬಟ್ಟೆ ಧರಿಸಲು ತೆರಿಗೆ ಹಾಕದಿರುತ್ತಿದ್ದರೆ
ಈ ಸಂತೆ ವ್ಯಾಪಾರಿಯ ಅಜ್ಜ ಸೂಫಿಯ ಸಂಗಕ್ಕೆ ಬೀಳುತ್ತಿದ್ದನೇ ?
ಅಲ್ಲಾನನ್ನು ಕೂಗುತ್ತಿದ್ದನೇ ?
ಉತ್ತರ ಸಿಗದೇ ನಾನು ಹೊರಡುವುದಾದರು ಎಲ್ಲಿಗೆ ?
ಅಂದು ಊರ ಬಾಗಿಲಿನಿಂದ ನನ್ನನ್ನೂ, ನಿಮ್ಮನ್ನೂ ಒಟ್ಟಿಗೆ ಹೊರದಬ್ಬಲಾಗಿತ್ತು
ಜಾತ್ರೆಯ ಸಂತೆಗೂ, ದೇವರ ಅಂಗಲಕ್ಕೂ ಅಂದು ನನ್ನಜ್ಜನಿಗೂ ನಿಮ್ಮಜ್ಜನಿಗೂ ಪ್ರವೇಶ ಇರಲಿಲ್ಲ
ಹಾಗೆ ಹೊರಗಟ್ಟಿದ ಜನಗಳೇ
ಇಂದು ನಿಮ್ಮ ಕೈಗೆ ಬಡಿಗೆ ನೀಡಿದ್ದಾರೆ
ನೀವು ನನ್ನ ಮೇಲೆ ಬೀಸುತ್ತಿದ್ದೀರಿ
ನಿಮ್ಮಜ್ಜ ನನ್ನಜ್ಜ ಒಬ್ಬನೇ ಆಗಿದ್ದ
ನಾನು ಹೋಗುವುದಾದರು ಎಲ್ಲಿಗೆ
ಹೊರಡುವುದಾದರು ಎಲ್ಲಿಂದ !?