ಡಿಯರ್‌ ಮೀಡಿಯಾದ “ವಾಟ್ಸಾಪ್” ವಿವಿ ಪ್ರತಿಭೆಗಳು!

ರಾಜಾರಾಂ ತಲ್ಲೂರು

ನಿನ್ನೆ ಉದಯವಾಣಿ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಜಾಗತಿಕ ಹಸಿವೆಯ ಇಂಡೆಕ್ಸ್‌ಗೆ ಮಾನದಂಡಗಳೇ ಸುಸೂತ್ರ ಇಲ್ಲ ಎಂದು ಅಪ್ಪಣೆ ಕೊಡಿಸಿದ್ದರೆ, ಇಂದಿನ ಕನ್ನಡ ಪ್ರಭ ತನ್ನ ಸಂಪಾದಕೀಯದಲ್ಲಿ, UNDP ವರದಿಯನ್ನೂ ನಿನ್ನೆಯ ಹಸಿವೆಯ ಇಂಡೆಕ್ಸನ್ನೂ ಜೊತೆಯಾಗಿರಿಸಿ, ವೈರುಧ್ಯ ಎಂದು ಬೊಟ್ಟು ಮಾಡಿದೆ.

ನಮ್ಮ ಮಾಧ್ಯಮದ ಸುದ್ದಿಕೋಣೆಗಳ ಸಮಸ್ಯೆ ಏನೆಂದರೆ, ಅವರ ಸುದ್ದಿಮೂಲ ಸಂಸ್ಥೆಯಿಂದ ಬಂದ ಯಾವುದೇ ಸುದ್ದಿಯನ್ನು ಅದರ ಹಿಂದು ಮುಂದು ನೋಡದೇ ಪ್ರಕಟಿಸಿಕೊಳ್ಳುವುದು ಮತ್ತು ಅದರ ಮೇಲೆ ತಮ್ಮ ವ್ಯಾಖ್ಯಾನಗಳನ್ನು ದಾಖಲಿಸುವುದು. ಒಮ್ಮೆ ಈ ವರದಿಗಳನ್ನು (ಅವು ಸಂಬಂಧಿತ ವೆಬ್ ತಾಣಗಳಲ್ಲಿ ಇಡಿಇಡಿಯಾಗಿ ಲಭ್ಯವಿವೆ!) ಮೇಲಿಂದ ಮೇಲೆ ಕಣ್ಣಾಡಿಸಿದರೂ ಇಂತಹ ಅಪದ್ಧಗಳನ್ನು ಸಂಪಾದಕೀಯವೆಂದು ಬರೆಯುವುದಿಲ್ಲ. ವಾಟ್ಸಾಪ್ ವಿವಿಯಲ್ಲಿ ರಿಫ್ರೆಷರ್ ಕೋರ್ಸ್ ಆಗಿದ್ದರೆ ಮಾತ್ರ ಇಂತಹ ಬರಹಗಳು ಸಾಧ್ಯ!

ಈಗ UNDP ವರದಿಯನ್ನು ತೆಗೆದುಕೊಳ್ಳಿ. ನಾನು ಅದರಲ್ಲಿ ಸಂಬಂಧಿತ ಚಾಪ್ಟರಿನಿಂದಲೇ ಒಂದು ಪಾರಾಗ್ರಾಫ್ ಕೆಳಗೆ ನೀಡಿದ್ದೇನೆ. ಅದು ಈ ವರದಿ ಎಷ್ಟು ಪರಿಪೂರ್ಣ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಕೊಡುತ್ತದೆ: The effects of the COVID-19 pandemic on poverty India cannot be fully assessed because 71 percent of the data from the 2019/2021 Demographic and Health Survey for the country were collected before the pandemic. But the results are striking, showing a significant reduction in all 10 MPI deprivations among poor people. Still, major challenges remain. (ಪೂರ್ಣ ವರದಿ ಓದಬಯಸುವವರಿಗೆ ಲಿಂಕ್ ಇಲ್ಲಿದೆ: https://hdr.undp.org/…/hdp-document/2022mpireportenpdf.pdf )

ಇದನ್ನೂ ಓದಿ : ಹಿಂದಿಯಲ್ಲಿ ಎಂಬಿಬಿಎಸ್‌ ಎಂಬುದು ಧೂರ್ತತನವೇ ಹೊರತು ಬೇರೇನಲ್ಲ

ಎಪ್ಪತೊಂದು ಪರ್ಸೆಂಟ್ ಹಳೇ ಡೇಟಾ ಇಟ್ಟುಕೊಂಡು ಸಿದ್ಧಗೊಂಡ ವರದಿಯನ್ನು ಓದಿಕೊಂಡು, ಕೋವಿಡ್ ಕಾಲದಲ್ಲಿ ಜನ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಕಟಕ್ಕೆ ಈಡಾಗಿದ್ದಾರೆ ಎಂಬ ಸತ್ಯ ಗೊತ್ತಿದ್ದುಕೊಂಡೂ, ದೇಶದ ಆರ್ಥಿಕಸ್ಥಿತಿ ಕೆಟ್ಟಿದೆ ಎಂಬುದಕ್ಕೆ ನೂರು ಮಾನದಂಡಗಳನ್ನು ಪ್ರತಿದಿನವೂ ಎದುರಿಟ್ಟುಕೊಂಡು, ಇಂತಹದೊಂದು “ಶ್ರೀಮಂತಿಕೆ ಹೆಚ್ಚಳದ” ವರದಿ ಮಾಡಬೇಕಿದ್ದರೆ, ಅಂತಹ ಮನಸ್ಸುಗಳಲ್ಲಿನ “ಕ್ರೌರ್ಯ” ಎಷ್ಟಿರಬೇಕು?!!

ಭಾರತದಲ್ಲಿ ನೋಟು ರದ್ಧತಿಯ ತನಕ ಬಡತನದ ಪ್ರಮಾಣ ತಗ್ಗಿದ್ದಕ್ಕೆ ದಾಖಲೆಗಳಿವೆ. ಅದಾದ ಬಳಿಕ, ಡೇಟಾ ಸಂಗ್ರಹವನ್ನು ಸಮರ್ಪಕವಾಗಿ ಮಾಡುವ ಧೈರ್ಯವನ್ನೇ ಭಾರತ ಸರ್ಕಾರ ತೋರಿಸಿಲ್ಲ. ಅದನ್ನು ವಿಶ್ವಬ್ಯಾಂಕ್, ತಾನು ಬಿಡುಗಡೆ ಮಾಡಿರುವ ಬಡತನದ ಕುರಿತಾದ ವರದಿಯಲ್ಲಿ (Poverty and shared prosperity- 2022) ಹೀಗೆ ದಾಖಲಿಸಿದೆ: This report publishes global and regional estimates based on new data for India available for 2015–19. The source of the data is the Consumer Pyramids Household Survey (CPHS), conducted by the Centre for Monitoring Indian Economy, a private data company. India has not published official survey data on poverty since 2011. Given the country’s size and importance for global and regional poverty estimates, the CPHS data help fill an important gap. ಅವರು ತಮ್ಮ ವರದಿಗೆ ಸಿ ಎಂ ಐ ಇ ಖಾಸಗಿ ಸಂಸ್ಥೆಯ ಡೇಟಾ ಅವಲಂಬಿಸಿಕೊಂಡಿದ್ದಾರೆ.

ಸುದ್ದಿಮೂಲ ಸಂಸ್ಥೆಗಳಲ್ಲಿ ಕುಳಿತ ದುರುದ್ದೇಶದ ಸುದ್ದಿ ಮಾಡುವವರನ್ನು ಸುದ್ದಿಮೂಲಗಳೆಂದು ನಂಬಿಕೊಂಡು, ಅದನ್ನೇ ಸುದ್ದಿ ಎಂದು ಡಂಗುರ ಸಾರುವ ನಮ್ಮ ಮಾಧ್ಯಮಗಳಿಗೆ ಬುದ್ಧಿ ಬರುವುದು ಯಾವಾಗಲೋ ಗೊತ್ತಿಲ್ಲ. ತಳಮಟ್ಟದಿಂದ ಅವರು ಆ ಮಟ್ಟಿಗೆ ಜನಸಂಪರ್ಕ ಕಡಿದುಕೊಂಡಿದ್ದಾರೆ ಎಂದೇ ಈ ತರಹದ ಪ್ರೊಪಗಾಂಡಾ ಸುದ್ದಿಗಳು ಬೊಟ್ಟು ಮಾಡುವುದು.

ದೇಶದ ಜನ ಬಡತನದ, ಹಸಿವಿನ ಇಕ್ಕಳದಿಂದ ಪಾರಾದರೆ ಯಾರಿಗೆ ತಾನೇ ಸಂತಸವಾಗುವುದಿಲ್ಲ ಹೇಳಿ? ವಸ್ತುಸ್ಥಿತಿಯನ್ನು ಕಣ್ಣಿಟ್ಟು ನೋಡಿ ಸಂವಿಧಾನದ ನಾಲ್ಕನೇ ಕಂಬದ ಬದ್ಧತೆ ತೋರಿಸುವ ಬದಲು, ತುತ್ತೂರಿ ಊದುವ ಈ ಸುದ್ದಿಮನೆಗಳಲ್ಲಿ ಅನ್ನ ತಿನ್ನುವವರೇ ಉಳಿದಿಲ್ಲವೆ?!!

Donate Janashakthi Media

Leave a Reply

Your email address will not be published. Required fields are marked *