ಲಿಜ್ ಟ್ರಸ್‌ಗೆ ತಿರುಗುಬಾಣವಾದ ತೆರಿಗೆ-ರಿಯಾಯತಿ

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

44 ದಿನಗಳ ಕಾಲ ಬ್ರಿಟಿಷ್‌ ಪ್ರಧಾನ ಮಂತ್ರಿಯಾಗಿದ್ದ ಟ್ರಸ್ ಅವರ ಅವರ ನಿಜವಾದ ಉದ್ದೇಶ, ಸಾಮಾನ್ಯವಾಗಿ ತಾನು ಮತ್ತು ಟೋರಿ ಪಕ್ಷವು ಸೇವೆ ಸಲ್ಲಿಸುವ ವರ್ಗದೊಳಗೆ ತನ್ನ ಬೆಂಬಲವನ್ನು ಬಲಪಡಿಸಿಕೊಳ್ಳುವುದೇ ಆಗಿತ್ತು. ವಿಪರ್ಯಾಸವೆಂದರೆ, ಈ ವರ್ಗಕ್ಕೆ ಅನುಕೂಲವಾಗಲೆಂದು ಅವರು ರೂಪಿಸಿದ ಕ್ರಮವೇ ಅವರಿಗೆ ತಿರುಗುಬಾಣವಾಯಿತು ಮತ್ತು ಅವರನ್ನು ಎಷ್ಟು ಬಲವಾಗಿ ಅದು ನಾಟಿತು ಎಂದರೆ, ಅಧಿಕಾರವನ್ನೇ ತ್ಯಜಿಸಬೇಕಾಯಿತು! ಏಕೆ? ಏಕೆಂದರೆ ಹಣಕಾಸು ಬಂಡವಾಳ ಮತ್ತು ಇಡೀ ಬಂಡವಾಳಶಾಹಿ ವರ್ಗ, ತೆರಿಗೆ ಕಡಿತದ ಮೂಲಕ ಶ್ರೀಮಂತರಿಗೆ ಲಾಭ ಮಾಡಿಕೊಡುವ ಕ್ರಮವನ್ನು ಮಾತ್ರವಲ್ಲ, ಅದೇ ಸಮಯದಲ್ಲಿ, ವಿತ್ತೀಯ ಕ್ರಮಗಳ ಮೂಲಕ ನಿರುದ್ಯೋಗವನ್ನು ಉತ್ತೇಜಿಸುವ ಕ್ರಮವನ್ನೂ ಸಹ ನಿರೀಕ್ಷಿಸುತ್ತದೆ. ಬಂಡವಾಳಶಾಹಿ ಗ್ರಹಿಕೆಯ ಪ್ರಕಾರ, ಹಣದುಬ್ಬರದ ವಿರುದ್ಧ ಹೋರಾಡುವ ಏಕೈಕ ಸಾಧನವೆಂದರೆ, ನಿರುದ್ಯೋಗ ಸೃಷ್ಟಿಯೇ. ಇದನ್ನು ಈಡೇರಿಸದಿದ್ದುದೇ ಲಿಜ್ ಟ್ರಸ್ ಅವರ ಅಕ್ಷಮ್ಯ ಅಪರಾಧ!

ಲಿಜ್ ಟ್ರಸ್ ಅಧಿಕಾರದಲ್ಲಿದ್ದ ಕೇವಲ 44 ದಿನಗಳ ನಂತರ ಬ್ರಿಟನ್ನಿನ ಪ್ರಧಾನ ಮಂತ್ರಿ ಹುದ್ದೆಗೆ ನೀಡಿದ ರಾಜೀನಾಮೆಗೆ ಸಂಬಂಧಿಸಿದಂತೆ ಕುತೂಹಲ ಕೆರಳಿಸುವ ಪ್ರಶ್ನೆಯೆಂದರೆ, ಅವರ ಆರ್ಥಿಕ ಕಾರ್ಯಕ್ರಮದಲ್ಲಿ “ಮಾರುಕಟ್ಟೆ”ಗೆ (“ಮಾರುಕಟ್ಟೆ” ಎಂಬುದನ್ನು “ಹಣಕಾಸು ಬಂಡವಾಳ” ಎಂದು ಅರ್ಥೈಸಿಕೊಳ್ಳಿ) ಅಹಿತಕರವಾಗಿದ್ದ ಅಂಶ ಯಾವುದು ಎಂಬುದು. ಶ್ರೀಮಂತರ ತೆರಿಗೆ ಇಳಿಕೆಯನ್ನು ಒಂದು ಮುಖ್ಯ ಉದ್ದೇಶವಾಗಿ ಹೊಂದಿದ್ದ ಅವರ ಆರ್ಥಿಕ ನಿಲುವು “ಮಾರುಕಟ್ಟೆ”ಯು ಆನಂದದಿಂದ ಒಪ್ಪಿಕೊಳ್ಳುವಂತಿತ್ತು. ತೆರಿಗೆ-ಕಡಿತಗಳಿಗೆ ಬೇಕಾಗುವ ಹಣವನ್ನು ವಿತ್ತೀಯ ಕೊರತೆಯ ಮೂಲಕ ಒದಗಿಸಿಕೊಳ್ಳುವ ಕ್ರಮವನ್ನು “ಮಾರುಕಟ್ಟೆ”ಯು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ, ನಿಜ. ಆದರೆ, ಒಟ್ಟು ಬೇಡಿಕೆಯನ್ನು ಉತ್ತೇಜಿಸುವುದು ಪ್ರಭುತ್ವದ ಉದ್ದೇಶವಾಗಿರದ ಸಂದರ್ಭದಲ್ಲಿ, ಶ್ರೀಮಂತರಿಗೆ ಹಣಕಾಸು ವರ್ಗಾವಣೆ ಮಾಡುವುದನ್ನೇ ಉದ್ದೇಶವಾಗುಳ್ಳ ವಿತ್ತೀಯ ಕೊರತೆಯ ಬಗ್ಗೆ “ಮಾರುಕಟ್ಟೆ”ಯ ಆಕ್ಷೇಪಣೆಗೆ ಅರ್ಥವಿಲ್ಲ. ತೆರಿಗೆ ಕಡಿತದ ಕಾರಣದಿಂದ ಕಡಿಮೆ ಬೀಳುವ ಹಣವನ್ನು ಹೊಂದಿಸಿಕೊಳ್ಳುವ ಏರ್ಪಾಟಿನ ಬಗ್ಗೆ ಯಾವ ಸೂಚನೆಯೂ ದೊರಕದೆ ಇದ್ದುದರಿಂದ, ಈ ಕೊರತೆಯ ಹಣವನ್ನು ಹೊಂದಿಸಿಕೊಳ್ಳಲು ಸರ್ಕಾರವು ಬಾಂಡ್ ಮಾರಾಟಕ್ಕೆ ಇಳಿಯಬೇಕಾಗುತ್ತದೆ ಎಂಬುದಾಗಿ ಕೆಲವರು ಮಾಡಿದ ಸೂಚನೆಗಳು ಬಾಂಡ್ ಮಾರುಕಟ್ಟೆಯನ್ನು ತಲ್ಲಣಗೊಳಿಸಿದವು. ಬಾಂಡ್ ಹೂಡಿಕೆದಾರರು ಆತಂಕಕ್ಕೊಳಗಾದರು. ತಮ್ಮಲ್ಲಿದ್ದ ಬಾಂಡ್‌ಗಳನ್ನೆಲ್ಲಾ ಮಾರಿದರು. ಬಾಂಡ್‌ಗಳ ಬೆಲೆಗಳು ಕುಸಿದವು. ಮಾರುಕಟ್ಟೆಯು ಕಂಗಾಲಾಯಿತು. ಕೊರತೆ ಬೀಳುವ ಹಣವನ್ನು ಹೊಂದಿಸಿಕೊಳ್ಳಲು ಸರ್ಕಾರವು ಬಾಂಡ್‌ಗಳನ್ನು ಬಿಡುಗಡೆ ಮಾಡುವ ಮತ್ತು ಅವುಗಳ ಮಾರಾಟವು ಸಂಭವಿಸುವ ಮೊದಲೇ, “ಮಾರುಕಟ್ಟೆ”ಯು ಕಂಗಾಲಾಯಿತು, ಏಕೆ? “ಮಾರುಕಟ್ಟೆ”ಯು ಒಂದು ವೇಳೆ ಬಾಂಡ್‌ಗಳಿಂದ ಬರುವ ಬಡ್ಡಿ ದರಗಳ ಏರಿಕೆಯನ್ನು ನಿರೀಕ್ಷಿಸಿದ್ದರೆ, ಅದು ಪೌಂಡ್-ಸ್ಟರ್ಲಿಂಗ್‌ನ ಬಲವರ್ಧನೆಗೆ ಕಾರಣವಾಗುತ್ತಿತ್ತು ಮತ್ತು ಅದರಿಂದಾಗಿ ಬ್ರಿಟನ್‌ಗೆ ಬಂಡವಾಳವು ಒಳಹರಿಯುತ್ತಿತ್ತು. ಅದರ ಬದಲಿಗೆ ನಾವು ನಿಜಕ್ಕೂ ನೋಡಿದ್ದು, ಪೌಂಡ್-ಸ್ಟರ್ಲಿಂಗ್‌ ನ ತೀವ್ರ ಕುಸಿತವನ್ನು.

ಶ್ರೀಮಂತರಿಗೆ ತೆರಿಗೆ-ರಿಯಾಯತಿ ನೀಡುವ ಒಂದು ಸ್ಪಷ್ಟ ಬಲಪಂಥೀಯ ಕಾರ್ಯಸೂಚಿಯನ್ನು ತಾನು ಅನುಸರಿಸಿದರೆ, ಬ್ರಿಟಿಷ್ ಹಣಕಾಸು ಬಂಡವಾಳದ ತವರೂರಾದ ಲಂಡನ್ ನಗರದ ಪ್ರೀತಿಗೆ ಪಾತ್ರಳಾಗಬಹುದು ಎಂಬ ಆಕಾಂಕ್ಷೆಯನ್ನು ಲಿಜ್ ಟ್ರಸ್ ಇಟ್ಟುಕೊಂಡಿದ್ದರು. ಬ್ರೆಕ್ಸಿಟ್ ನಂತರದ ಬ್ರಿಟನ್‌ನ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಬಗ್ಗೆಯೂ ಅವರು ಮಾತನಾಡುತ್ತಿದ್ದರು. ಆದರೆ, ಇಂತಹ ತೆರಿಗೆ-ರಿಯಾಯಿತಿಗಳು ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನಬಹುದು. ಪುನಶ್ಚೇತನಗೊಳಿಸುವುದು ಟ್ರಸ್ ಅವರ ಇರಾದೆಯಾಗಿದ್ದರೆ, ಅವರು ಹೆಚ್ಚು ಹೆಚ್ಚು ಸಾರ್ವಜನಿಕ ವೆಚ್ಚಗಳನ್ನು ಕೈಗೊಳ್ಳಬೇಕಾಗಿತ್ತು. ಅದು ಖಂಡಿತವಾಗಿಯೂ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತಿತ್ತು. ಆದರೆ, ಅವರ ನಿಜವಾದ ಉದ್ದೇಶ, ಸಾಮಾನ್ಯವಾಗಿ ತಾನು ಮತ್ತು ಟೋರಿ ಪಕ್ಷವು ಸೇವೆ ಸಲ್ಲಿಸುವ ವರ್ಗದೊಳಗೆ ತನ್ನ ಬೆಂಬಲವನ್ನು ಬಲಪಡಿಸಿಕೊಳ್ಳುವುದೇ ಆಗಿತ್ತು. ವಿಪರ್ಯಾಸವೆಂದರೆ, ಈ ವರ್ಗಕ್ಕೆ ಅನುಕೂಲವಾಗಲೆಂದು ಅವರು ರೂಪಿಸಿದ ಕ್ರಮವೇ ಅವರಿಗೆ ತಿರುಗುಬಾಣವಾಯಿತು ಮತ್ತು ಅವರನ್ನು ಎಷ್ಟು ಬಲವಾಗಿ ಅದು ನಾಟಿತು ಎಂದರೆ, ಅವರು 44 ದಿನಗಳ ನಂತರ ಅಧಿಕಾರವನ್ನು ತ್ಯಜಿಸಬೇಕಾಯಿತು! ಏಕೆ? ಶ್ರೀಮಂತರಿಗೆ ತೆರಿಗೆ ಕಡಿತ ಮಾಡಿದ್ದರೂ, ಖಂಡಿತವಾಗಿಯೂ ಲಿಜ್ ಟ್ರಸ್ ಅವರ ಅಕ್ಷಮ್ಯ ಅಪರಾಧವೆಂದರೆ, ಈ ತೆರಿಗೆ-ಕಡಿತಗಳಿಗೆ ಸಮನಾದ ಮೊತ್ತವನ್ನು ಸಾರ್ವಜನಿಕ ವೆಚ್ಚಗಳ ಕಡಿತದ ಮೂಲಕ ಅಥವಾ ದುಡಿಯುವ ಜನರ ಮೇಲೆ ತೆರಿಗೆ-ಹೆಚ್ಚಿಸುವ ಮೂಲಕ ಸರಿದೂಗಿಸಿಕೊಳ್ಳಲಿಲ್ಲ ಎಂಬುದು.

ವ್ಯಂಗ್ಯಚಿತ್ರ: ಕ್ರಿಸ್ತೊ ಕೊಮರ್‌ನಿಟ್ಸ್ಕಿ

ಪ್ರಶ್ನೆಯೆಂದರೆ: ಏಕೆ?

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಶ್ರೀಮಂತರ ತೆರಿಗೆಗಳನ್ನು ಕಡಿತ ಮಾಡುವ ಲಿಜ್ ಟ್ರಸ್ ಅವರ ಕಾರ್ಯಕ್ರಮವು ಎಲ್ಲರಿಗೂ ಮೊದಲೇ ಗೊತ್ತಿತ್ತು. ಪ್ರಧಾನ ಮಂತ್ರಿ ಹುದ್ದೆಯ ತಮ್ಮ ಪ್ರತಿಸ್ಪರ್ಧಿ ರಿಷಿ ಸುನಕ್ ವಿರುದ್ಧದ ಚುನಾವಣಾ ಪ್ರಚಾರದಲ್ಲಿ ಇದು ಅವರ ಮುಖ್ಯ ವಿಷಯವಾಗಿತ್ತೂ ಕೂಡ. ಆದಾಗ್ಯೂ, ಪ್ರಧಾನ ಮಂತ್ರಿಯಾದ ನಂತರ ಅವರು ಇದೇ ಪ್ರಸ್ತಾಪಗಳನ್ನು ಘೋಷಿಸಿದ ಕೂಡಲೇ, ಪ್ರಚಾರದ ಸಮಯದಲ್ಲಿ ಅವರನ್ನು ಬಿರುಸಾಗಿ ಬೆಂಬಲಿಸಿದ್ದ “ಪರಿಣಿತರು” ಮತ್ತು ಬಲಪಂಥೀಯ ಮಾಧ್ಯಮಗಳು ಅವರ ಮೇಲೆ ತಿರುಗಿಬಿದ್ದರು. ಎಲ್ಲಕ್ಕಿಂತ ಮೊದಲಿಗೆ ಅವರು ಚುನಾಯಿತರಾದದ್ದೇ ಈ ವಿಷಯವನ್ನು ಮುಂದಿಟ್ಟುಕೊಂಡು. ಪ್ರಚಾರದ ಸಮಯದಲ್ಲಿ ಅವರು ಏನು ಭರವಸೆ ನೀಡಿದ್ದರು ಮತ್ತು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನಂತರ ಅವರು ಏನು ಪ್ರಸ್ತಾಪಿಸಿದರು ಮತ್ತು ಅವುಗಳ ನಡುವೆ ಇರುವ ವ್ಯತ್ಯಾಸವಾದರೂ ಏನು? ಶ್ರೀಮಂತರಿಗೆ ತೆರಿಗೆ ಕಡಿತ ಮಾಡಿದ್ದು ಖಂಡಿತವಾಗಿಯೂ ಇಲ್ಲಿ ವಿಷಯವಲ್ಲ. ಲಿಜ್ ಟ್ರಸ್ ಅವರ ಅಕ್ಷಮ್ಯ ಅಪರಾಧವೆಂದರೆ, ಈ ತೆರಿಗೆ-ಕಡಿತಗಳಿಗೆ ಸಮನಾದ ಮೊತ್ತವನ್ನು ಸಾರ್ವಜನಿಕ ವೆಚ್ಚಗಳ ಕಡಿತದ ಮೂಲಕ ಅಥವಾ ದುಡಿಯುವ ಜನರ ಮೇಲೆ ತೆರಿಗೆ-ಹೆಚ್ಚಿಸುವ ಮೂಲಕ ಸರಿದೂಗಿಸಿಕೊಳ್ಳಲಿಲ್ಲ ಎಂಬುದು. ಈಗಾಗಲೇ ಧೀರೋಧಾತ್ತ ಮುಷ್ಕರ-ಹೋರಾಟಗಳನ್ನು ನಡೆಸಿರುವ ಬ್ರಿಟನ್‌ನ ಕಾರ್ಮಿಕ ವರ್ಗವು ತೆರಿಗೆ ಹೆಚ್ಚಳವನ್ನು ತೀವ್ರವಾಗಿ ಪ್ರತಿರೋಧಿಸುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಸಾರ್ವಜನಿಕ ವೆಚ್ಚಗಳ ಕಡಿತವು, ಕಾರ್ಮಿಕ ವರ್ಗದ ಮೇಲೆ ನಿಜಕ್ಕೂ ಒಂದು ಪರೋಕ್ಷ ದಾಳಿಯೇ ಆಗುವುದರಿಂದ, ಲಿಜ್ ಟ್ರಸ್ ಬೆಂಬಲಿಗರು ನಿರೀಕ್ಷಿಸಿದ್ದುದು ಈ ಕ್ರಮವನ್ನೇ. ಟ್ರಸ್ ಅದನ್ನು ಮಾಡದಿದ್ದುದೇ ಅವರ ವಿರೋಧಿಗಳ ದೃಷ್ಟಿಯಲ್ಲಿ ಅಪರಾಧವಾಗಿತ್ತು.

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹಣಕಾಸು ಬಂಡವಾಳದ ಮತ್ತು ಇಡೀ ಬಂಡವಾಳಶಾಹಿ ವರ್ಗದ ನಿರೀಕ್ಷೆ ಏನೆಂದರೆ, ಅದು ತೆರಿಗೆ ಕಡಿತದ (ವರ್ಗಾವಣೆ) ಮೂಲಕ ಶ್ರೀಮಂತರಿಗೆ ಲಾಭ ಮಾಡಿಕೊಡುವ ಕ್ರಮವನ್ನು ಮಾತ್ರವಲ್ಲ, ಅದೇ ಸಮಯದಲ್ಲಿ, ವಿತ್ತೀಯ ಕ್ರಮಗಳ ಮೂಲಕ ನಿರುದ್ಯೋಗವನ್ನು ಉತ್ತೇಜಿಸುವ ಕ್ರಮವನ್ನೂ ಸಹ ನಿರೀಕ್ಷಿಸುತ್ತದೆ. ಬಂಡವಾಳಶಾಹಿ ಗ್ರಹಿಕೆಯ ಪ್ರಕಾರ, ಹಣದುಬ್ಬರದ ವಿರುದ್ಧ ಹೋರಾಡುವ ಏಕೈಕ ಸಾಧನವೆಂದರೆ, ನಿರುದ್ಯೋಗ ಸೃಷ್ಟಿಯೇ. ತೆರಿಗೆ-ಕಡಿತದಿಂದಾಗಿ ಕೊರತೆ ಬೀಳುವ ಹಣವನ್ನು ಹೊಂದಿಸಿಕೊಳ್ಳುವ ಏರ್ಪಾಟು ಮಾಡಿಲ್ಲ (“unfunded”) ಎಂಬ ಆಪಾದನೆಯ ನಿಜವಾದ ಅರ್ಥವೆಂದರೆ, ಸರ್ಕಾರದ ವೆಚ್ಚಗಳ ಕಡಿತದ ಮೂಲಕ ಒಟ್ಟಾರೆ ಬೇಡಿಕೆಯನ್ನು ಮೊಟಕುಗೊಳಿಸುವಂತಹ ಕ್ರಮಗಳ ಮೂಲಕ ಸಮತೋಲಿಸಿಕೊಳ್ಳುವುದರ ಬದಲಾಗಿ, ಒಟ್ಟಾರೆ ಬೇಡಿಕೆಯನ್ನು ಮೊಟಕುಗೊಳಿಸಲು ಏನನ್ನೂ ಮಾಡದ ವಿತ್ತೀಯ ಕೊರತೆಯ ಮೂಲಕ ಹಣಕಾಸು ಒದಗಿಸಿಕೊಳ್ಳಲಾಗುತ್ತದೆ ಎಂಬುದು. ಹಣಕಾಸು ಬಂಡವಾಳದ ದೃಷ್ಟಿಯಲ್ಲಿ ಲಿಜ್ ಟ್ರಸ್ ಅವರ ವೈಫಲ್ಯವೆಂದರೆ, ತೆರಿಗೆ-ಕಡಿತದಿಂದಾಗಿ ಕೊರತೆ ಬೀಳುವ ಹಣವನ್ನು ವಿತ್ತೀಯ ಕೊರತೆಯ ಮೂಲಕ ಹೊಂದಿಸಿಕೊಳ್ಳಬೇಕಾಗುತ್ತದೆ ಎಂಬುದಷ್ಟೇ ಅಲ್ಲ, ಅವರ ಪ್ರಸ್ತಾಪಗಳಲ್ಲಿ ಹಣದುಬ್ಬರದ ವಿರುದ್ಧ ಹೋರಾಡಲು ಬಂಡವಾಳಶಾಹಿಗೆ ತಿಳಿದಿರುವ ನಿರುದ್ಯೋಗವನ್ನು ಸೃಷ್ಟಿಸುವ ಏಕೈಕ ವಿಧಾನದ ಬಗ್ಗೆ ಏನೂ ಇರಲಿಲ್ಲ ಎಂಬುದು. ಬಡ್ಡಿ ದರದ ಏರಿಕೆಯು ಇದನ್ನು “ಸಾಧಿಸುತ್ತದೆ” ಎಂದು ಭಾವಿಸಲಾಗಿದೆ, ನಿಜ. ಆದರೆ, ಈ ತಿಳುವಳಿಕೆಗೆ ವಿರುದ್ಧವಾದ ವಿತ್ತೀಯ ನೀತಿಯನ್ನು ಹೊಂದುವುದು “ಅಕ್ಷಮ್ಯವೇ”.

ಇದು, ಇಡೀ ಘಟನಾವಳಿಯ ಕ್ರಮವನ್ನೂ ವಿವರಿಸುತ್ತದೆ. ಬ್ರಿಟನ್‌ನಲ್ಲಿ ಪ್ರಸ್ತುತ ಹಣದುಬ್ಬರವು ಶೇ. 10ಕ್ಕಿಂತ ಮೇಲಿದೆ. ವಿತ್ತೀಯ ಕೊರತೆಯ ಹೆಚ್ಚಳವು ಹಣದುಬ್ಬರದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಪರಿಣಾಮವಾಗಿ, ಡಾಲರ್ ಕರೆನ್ಸಿಗೆ ಹೋಲಿಸಿದರೆ ಪೌಂಡ್ ಸ್ಟರ್ಲಿಂಗ್ ಹೆಚ್ಚು ಅಪಮೌಲ್ಯಕ್ಕೆ ಒಳಗಾಗುತ್ತದೆ (ಏಕೆಂದರೆ, ಯುಎಸ್‌ನಲ್ಲಿ ಹಣದುಬ್ಬರವು ಕೆಳಮಟ್ಟದಲ್ಲಿದೆ). ಪೌಂಡ್ ಸ್ಟರ್ಲಿಂಗ್ ಅಪಮೌಲ್ಯಗೊಳ್ಳುತ್ತದೆ ಎಂಬ ನಿರೀಕ್ಷೆಯೇ ಅದರ ಮತ್ತಷ್ಟು ಕುಸಿತಕ್ಕೆ ಕಾರಣವಾಗುತ್ತದೆ (ಈಗಾಗಲೇ ಸಂಭವಿಸಿದೆ). ಪೌಂಡ್ ಸ್ಟರ್ಲಿಂಗ್‌ನ ಕುಸಿತವು ಬ್ರಿಟನ್‌ಗೆ ಬಂಡವಾಳದ ಹರಿವನ್ನು ಆಕರ್ಷಿಸುವ ಬದಲು, ಬ್ರಿಟನ್‌ನಿಂದ ಬಂಡವಾಳದ ಹೊರಹರಿವನ್ನು ಉತ್ತೇಜಿಸುತ್ತದೆ. ಪೌಂಡ್ ಸ್ಟರ್ಲಿಂಗ್‌ನ ಅಪಮೌಲ್ಯ ಮತ್ತು ಬೃಹತ್ ಗಾತ್ರದ ವಿತ್ತೀಯ ಕೊರತೆಯ ಕಾರಣದಿಂದಾಗಿ ಮತ್ತು ಈ ಬಗ್ಗೆ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಕಡೆಯಿಂದ ಯಾವುದೇ ಪ್ರತಿವರ್ತನಾ ಕ್ರಮ ಇಲ್ಲದಿರುವುದರಿಂದಾಗಿ, ಬ್ರಿಟಿಷ್ ಸರ್ಕಾರದ ಬಾಂಡ್‌ಗಳ ಮೌಲ್ಯ ಕುಸಿಯುತ್ತದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಲಿಜ್ ಟ್ರಸ್ ಅವರ ಪ್ರಸ್ತಾಪಗಳ ಘೋಷಣೆಯ ಮುಂದುವರಿದ ಭಾಗವಾಗಿ ಬಾಂಡ್‌ಗಳ ಮೌಲ್ಯವು ತೀಕ್ಷ್ಣ ಕುಸಿತವನ್ನು ಕಂಡಿತು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಲಿಜ್ ಟ್ರಸ್ ಅವರ ಪ್ರಸ್ತಾಪಗಳು ಶ್ರೀಮಂತರಿಗೆ ವರ್ಗಾವಣೆಗಳನ್ನು ಒಳಗೊಂಡಿದ್ದರೂ ಸಹ, “ಮಾರುಕಟ್ಟೆ”ಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಬೃಹತ್ ವಿತ್ತೀಯ ಕೊರತೆಯ ಪರಿಸ್ಥಿತಿಯಲ್ಲೂ ಸಮರ್ಥಿಸಲ್ಪಡುವ ಈ ವರ್ಗಾವಣೆಗಳನ್ನು ಅಗತ್ಯವೆಂದು ಭಾವಿಸುವ “ಮಾರುಕಟ್ಟೆಯ” ದೃಷ್ಟಿಯಲ್ಲಿ, ಹಣದುಬ್ಬರವನ್ನು ಎದುರಿಸಲು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬೃಹತ್ ನಿರುದ್ಯೋಗವನ್ನು ಸೃಷ್ಟಿಸುವುದನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲದುದರಿಂದ, ಈ ಪ್ರಸ್ತಾಪಗಳಲ್ಲಿ ನಿರುದ್ಯೋಗವನ್ನು ಸೃಷ್ಟಿಸುವ ಯಾವ ಅಂಶವೂ ಇರಲಿಲ್ಲ. ಮೇಲಾಗಿ, ಹಣದುಬ್ಬರದ ಪರಿಸ್ಥಿತಿ ಮುಂದುವರಿಯುವುದನ್ನು ಅಥವಾ ಉಲ್ಬಣಗೊಳ್ಳುವುದನ್ನು ಹಣಕಾಸು ಬಂಡವಾಳವು ಬಯಸುವುದಿಲ್ಲ. ಏಕೆಂದರೆ, ಅದು ಎಲ್ಲ ಹಣಕಾಸು ಸ್ವತ್ತುಗಳ ನಿಜ ಮೌಲ್ಯವನ್ನು ಇಳಿಕೆ ಮಾಡುತ್ತದೆ ಮತ್ತು ಬ್ಯಾಂಕುಗಳು, ಪಿಂಚಣಿ ನಿಧಿಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಬ್ಯಾಲೆನ್ಸ್ ಶೀಟ್‌ಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಹಣದುಬ್ಬರವನ್ನು ಎದುರಿಸುವ ವಿಷಯದಲ್ಲಿ ಲಿಜ್ ಟ್ರಸ್ ಮಾರ್ಗರೆಟ್ ಥ್ಯಾಚರ್‌ಗಿಂತ ಭಿನ್ನವಾಗಿ ಕಾಣುತ್ತಾರೆ. ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸಿ, ಉದ್ದೇಶಪೂರ್ವಕವಾಗಿ ಲಕ್ಷಾಂತರ ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕಿ ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿಸುವ ಮೂಲಕ ಹಣದುಬ್ಬರವನ್ನು ಸೋಲಿಸುವ ಯೋಜನೆಯನ್ನು ಮಾರ್ಗರೆಟ್ ಥ್ಯಾಚರ್ ರೂಪಿಸಿದ್ದರು. ಅದನ್ನು ಮಾಡಿದ್ದಕ್ಕಾಗಿ ಲಂಡನ್ ನಗರವು ಅವರನ್ನು ಪ್ರೀತಿಸಿತು (ನಂತರ, ಅವರ ಪ್ರತ್ಯೇಕತಾ ನಿಲುವಿನಿಂದಾಗಿ ಲಂಡನ್ ಬದಲಿಗೆ ಫ್ರಾಂಕ್ ಫರ್ಟ್(ಜರ್ಮನಿ) ಯುರೋಪಿನ ಪ್ರಮುಖ ಹಣಕಾಸು ಕೇಂದ್ರವಾಗಿ ಉದಯವಾಗುವ ಅಪಾಯ ಎದುರಾದಾಗ, ಲಂಡನ್ ಅವರ ವಿರುದ್ಧ ತಿರುಗಿಬಿದ್ದಿತು ಮತ್ತು ಅವರನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ಹೊರಹಾಕಿತು). ಶ್ರೀಮಂತರಿಗೆ ದೊಡ್ಡ ಪ್ರಮಾಣದ ತೆರಿಗೆ-ಕಡಿತಗಳ ಪ್ರಸ್ತಾಪ ಮಾಡಿದರೂ ಸಹ ಅತಿ ಹೆಚ್ಚಿನ ಸಂಖ್ಯೆಯ ಶ್ರೀಮಂತರು ವಾಸಿಸುವ ಲಂಡನ್ ನಗರದ ಪ್ರೀತಿಪಾತ್ರರಾಗುವಲ್ಲಿ ಟ್ರಸ್ ವಿಫಲರಾದದ್ದು ಆಶ್ಚರ್ಯವಲ್ಲ.

ಕಾರ್ಮಿಕರ ಮೇಲೆ ಹೆಚ್ಚಿನ ತೆರಿಗೆಗಳನ್ನು ಹೇರುವ ಮೂಲಕ ಹೊಂದಿಸಿಕೊಂಡ ಮಾರ್ಗವಾಗಿ ಪಡೆದ ತೆರಿಗೆ-ಕಡಿತಗಳಿಗಿಂತ ಅಥವಾ ಸರ್ಕಾರದ ಬೇರೆ ಬೇರೆ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಹೊಂದಿಸಿಕೊಂಡ ಮಾರ್ಗವಾಗಿ ಪಡೆದ ತೆರಿಗೆ-ಕಡಿತಗಳಿಗಿಂತ ವಿತ್ತೀಯ ಕೊರತೆಯ ಮೂಲಕ ಹೊಂದಿಸಿಕೊಂಡ ಮಾರ್ಗದಲ್ಲಿ ಶ್ರೀಮಂತರು ಪಡೆಯುವ ತೆರಿಗೆ-ಕಡಿತಗಳು ಬಂಡವಾಳಗಾರರಿಗೆ ಹೆಚ್ಚಿನ ಲಾಭವನ್ನು ತರುವ ಪರಿಸ್ಥಿತಿಯು ಒಂದು ವಿಪರ್ಯಾಸವೇ ಸರಿ. ಹೀಗಾಗುತ್ತದೆ ಏಕೆ ಎಂಬುದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ಮಿಶ್ರವಲ್ಲದ ಒಂದು ಉತ್ಪಾದನಾ ವಿಧಾನದ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾರ್ಮಿಕರು ತಮ್ಮ ವೇತನ ಆದಾಯವನ್ನು ಪೂರ್ಣವಾಗಿ ಬಳಕೆ ಮಾಡುತ್ತಾರೆ ಎಂದು (ಸರಳತೆಗಾಗಿ) ಊಹಿಸಿಕೊಂಡರೆ, ಆಗ, ಈ ಅರ್ಥವ್ಯವಸ್ಥೆಯಲ್ಲಿ ತೆರಿಗೆ-ನಂತರದ ಒಟ್ಟು ಲಾಭಗಳು, ಹೂಡಿಕೆಯ ಮೊತ್ತ+ಬಂಡವಾಳಗಾರರ ಬಳಕೆ+ಪಾವತಿ ಶೇಷದ ಚಾಲ್ತಿ ಖಾತೆಯ ಹೆಚ್ಚುವರಿ+ವಿತ್ತೀಯ ಕೊರತೆ ಇವುಗಳ ಮೊತ್ತಕ್ಕೆ ಸಮನಾಗಿರುತ್ತದೆ. ಬಂಡವಾಳಗಾರರಿಗೆ $100 ವರ್ಗಾವಣೆ ಮಾಡಲಾಗಿದೆ ಮತ್ತು ಈ ಹಣವನ್ನು ಸರ್ಕಾರಿ ವೆಚ್ಚಗಳ ಕಡಿತದ ಮೂಲಕ ಒದಗಿಸಿಕೊಳ್ಳಲಾಗಿದೆ ಎಂದು ಭಾವಿಸೋಣ. ಅಂದರೆ, ವಿತ್ತೀಯ ಕೊರತೆಗೆ ಕಾರಣವಾಗದ ಮತ್ತು ಹೂಡಿಕೆಯು ತಕ್ಷಣವೇ ಬದಲಾಗಲು ಕಾರಣವಿಲ್ಲದಿರುವುದರಿಂದ ಮತ್ತು ಪ್ರಸ್ತುತ ವಿದೇಶ ವ್ಯಾಪಾರವೂ ಸಮತೋಲದಲ್ಲಿದೆ ಎಂದು ಭಾವಿಸಿಕೊಂಡರೆ, $100 ವರ್ಗಾವಣೆಯು ಬಂಡವಾಳಶಾಹಿಗಳ ಬಳಕೆಯನ್ನು $50ರಷ್ಟನ್ನು ಹೆಚ್ಚಿಸಿದರೆ, ತೆರಿಗೆಯ ನಂತರದ ಅವರ ಲಾಭಗಳು $50 ಹೆಚ್ಚುತ್ತವೆ. ಆದರೆ, ವರ್ಗಾವಣೆಗಾಗಿ ಇಷ್ಟೇ ಹಣವನ್ನು ವಿತ್ತೀಯ ಕೊರತೆಯ ಮೂಲಕ ಹೊಂದಿಸಿಕೊಂಡರೆ, ತೆರಿಗೆ ನಂತರದ ಲಾಭವು $150 ಆಗಿರುತ್ತದೆ. ಆದಾಗ್ಯೂ, ಶ್ರೀಮಂತರಿಗಾಗಿ ಲಿಜ್ ಟ್ರಸ್ ಮಾಡಿದ ತೆರಿಗೆ-ಕಡಿತದ ಪ್ರಸ್ತಾಪಗಳಿಗೆ ಹಣಕಾಸು ಬಂಡವಾಳವು ವ್ಯಕ್ತಪಡಿಸಿರುವ ಆಕ್ಷೇಪವು, ಪ್ರಸ್ತುತ ಹಣದುಬ್ಬರದ ಬಗ್ಗೆ ಅವರಿಗೆ ಹೇವರಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಇಲ್ಲಿಯವರೆಗೆ ನಾವು ಚರ್ಚಿಸಿದ ವಿಷಯವು ವಿತ್ತೀಯ ಕೊರತೆಯನ್ನು ಹೆಚ್ಚಿಸುವ ಮೂಲಕ ಬಂಡವಾಳಗಾರರಿಗೆ ವರ್ಗಾವಣೆಗಳನ್ನು ಒದಗಿಸುವ ಎರಡು ಪರ್ಯಾಯ ಬಂಡವಾಳಶಾಹಿ ಕಾರ್ಯತಂತ್ರಗಳಿಗೆ ಸಂಬಂಧಿಸಿದೆ. ವಿತ್ತೀಯ ಕೊರತೆಯನ್ನು ಹೆಚ್ಚಿಸುವ ಮೂಲಕ ಬಂಡವಾಳಗಾರರಿಗೆ ವರ್ಗಾವಣೆಗಳನ್ನು ಒದಗಿಸುವ ಒಂದು ಕಾರ್ಯತಂತ್ರವನ್ನು ಲಿಜ್ ಟ್ರಸ್ ಅನುಸರಿಸಿದರೆ, ವಿತ್ತೀಯ ಕೊರತೆಯನ್ನು ಹೆಚ್ಚಿಸದೆ ಬಂಡವಾಳಗಾರರಿಗೆ ವರ್ಗಾವಣೆಗಳನ್ನು ಒದಗಿಸುವ ಮತ್ತೊಂದು ಕಾರ್ಯತಂತ್ರವನ್ನು (ಅಂದರೆ, ತೆರಿಗೆ-ಕಡಿತದಿಂದಾಗಿ ಕೊರತೆ ಬೀಳುವ ಹಣವನ್ನು “ಹೊಂದಿಸಿಕೊಳ್ಳುವ ಏರ್ಪಾಟಿಲ್ಲದ” -unfunded- ಎಂದು ಹೇಳಲಾಗುವ) ಅನುಸರಣೆಯನ್ನು ಅವರ ಟೀಕಾಕಾರರು ಬಯಸಿದ್ದರು. ಇವೆರಡೂ ಬಲಪಂಥೀಯ ಕಾರ್ಯತಂತ್ರಗಳೂ ದೊಡ್ಡ ದೊಡ್ಡ ವ್ಯಾಪಾರೋದ್ದಿಮೆ-ಪರವೇ. ಅವು ಬೇರೆ ಬೇರೆ ರೀತಿಯಲ್ಲಿ ದುಡಿಯುವ ವರ್ಗವನ್ನು ಹಾನಿಗೊಳಪಡಿಸುತ್ತವೆ ಮತ್ತು ಅದರಿಂದಾಗಿ ಪ್ರಜಾಪ್ರಭುತ್ವ ವಿರೋಧಿಯೂ ಹೌದು. ಸಿರಿವಂತರ ಸಂಪತ್ತಿನ ಮೇಲೆ ಅಥವಾ ಬಂಡವಾಳಗಾರರ ಲಾಭದ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಒದಗಿಸಿಕೊಳ್ಳುವ ಹಣವನ್ನು ಹೆಚ್ಚು ಹೆಚ್ಚು ಸಾರ್ವಜನಿಕ ವೆಚ್ಚಗಳಿಗೆ ಬಳಸಿಕೊಳ್ಳುವ ಮೂಲಕ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಮತ್ತು ನಿರುದ್ಯೋಗ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಮತ್ತು ನೇರ ಬೆಲೆ ನಿಯಂತ್ರಣ (ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಒತ್ತಾಯಿಸುತ್ತಲೇ) ಕ್ರಮಗಳ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ, ಒಂದು ಪ್ರಾಮಾಣಿಕ ಪ್ರಜಾಸತ್ತಾತ್ಮಕ ಕಾರ್ಯತಂತ್ರವು ಈ ಹೊತ್ತಿನ ನಿಜವಾದ ಅಗತ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *