ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್) ಜಿಡಿಪಿಯ ಅಂದಾಜು ಅಂಕಿ-ಅಂಶಗಳ ಬಗ್ಗೆ ಸರ್ಕಾರದ ವಕ್ತಾರರು, ನಿರೀಕ್ಷೆಗಿಂತ “ಬಲವಾದ ಚೇತರಿಕೆ” ಆಗುತ್ತಿದೆ ಎಂದು ಹಿರಿಹಿರಿ ಹಿಗ್ಗುತ್ತಾ ಹೇಳಿರುವುದು ಒಂದು ವಿಡಂಬನೆಯಾಗಿ ಕಾಣುತ್ತದೆ. ಹಿಂದಿನ ಸಾಲಿನ (2019-20) ಇದೇ ಎರಡನೇ ತ್ರೈಮಾಸಿಕದೊಂದಿಗೆ ಹೋಲಿಕೆ ಮಾಡಿದಾಗ, ‘ಕೇವಲ’7.5ಶೇ. ಕುಸಿತವನ್ನು ಇವು ತೋರಿಸುತ್ತವೆ; 8 ರಿಂದ 9ಶೇಕಡಾದಷ್ಟು ಕುಸಿತವಾಗಬಹುದೆಂದು ಭಾವಿಸಲಾಗಿತ್ತು. ಆದರೆ ಈ ‘ಚೇತರಿಕೆಯು’ ಸಂಶಯಾಸ್ಪದವಾಗಿಯೂ ಮತ್ತು ಸಂಕಟಗಳನ್ನು ಹೆಚ್ಚಿಸುವಂತದ್ದೂ, ಅದರಿಂದಾಗಿ ಅಸ್ಥಿರವಾಗಿಯೂ ಕಾಣುತ್ತದೆ.
ಸಂಶಯಾಸ್ಪದ ಏಕೆಂದರೆ, ಜಿಡಿಪಿ ಅಂದಾಜಿನಲ್ಲಿನ ಲೋಪ-ದೋಷಗಳನ್ನು ಹೇಳುವ “ಅಸಾಂಗತ್ಯಗಳು” ಶೀರ್ಷಿಕೆಯ ಅಡಿಯಲ್ಲಿ ಗಣನೀಯ ಹೆಚ್ಚಳ ಆಗಿದೆ. ಹಿಂದಿನ ವರ್ಷದ ಎರಡನೇ ತ್ರೈಮಾಸಿಕದ “ಅಸಾಂಗತ್ಯಗಳು” ಶೀರ್ಷಿಕೆಯ ಅಡಿಯಲ್ಲಿ ತೋರಿಸಿದ್ದ ಶೇಕಡಾ ಅಂಶದ ಪ್ರಕಾರ ಲೆಕ್ಕಹಾಕಿದರೆ, ಈ ತ್ರೈಮಾಸಿಕದ ಜಿಡಿಪಿಯ ಅಂದಾಜು -7.5% ಬದಲಾಗಿ -8.7% ಆಗುತ್ತದೆ. ಹಾಗಾಗಿ, “ಬಲವಾದ ಚೇತರಿಕೆ” ಎಂಬ ದಾವೆಯು ಸಂಖ್ಯಾಶಾಸ್ತ್ರೀಯವಾಗಿ ಹೇಳುವುದಾದರೆ, ನಿಜಕ್ಕೂ ಸಂಶಯಾಸ್ಪದವೇ.
ಜಿಡಿಪಿ ಅಂಕಿ-ಅಂಶಗಳು ಸರಿ ಇವೆ ಎಂದೇ ಸದ್ಯಕ್ಕೆ ಭಾವಿಸಿ, ವಿಷಯವನ್ನು ಪರಿಶೀಲಿಸೋಣ. ಲಾಕ್‌ಡೌನ್ ಕಾರಣದಿಂದಾಗಿ ಉತ್ಪಾದನೆಯು ಗಣನೀಯವಾಗಿ ಇಳಿದದ್ದರಿಂದ, ಲಾಕ್‌ಡೌನ್ ತೆರವಿನ ನಂತರ ಉತ್ಪಾದನೆಯಲ್ಲಿ ಚೇತರಿಕೆಯಾಗುವುದು ಅನಿವಾರ್ಯ ಮತ್ತು ಸ್ವಾಭಾವಿಕ. ಆದರೆ, ಈ ಚೇತರಿಕೆಯನ್ನು ಯಾವ ಅಂಶಗಳು ಪ್ರಭಾವಿಸಿವೆ ಎಂಬುದು ಒಂದು ಮುಖ್ಯವಾದ ಪ್ರಶ್ನೆ.
ಉದ್ಯೋಗಗಳು ಜಿಡಿಪಿಯೊಂದಿಗೆ ಸಂಬಂಧ ಹೊಂದಿರುವ ಕಾರಣದಿಂದ, ಜಿಡಿಪಿಯ ಅಂಕಿ ಅಂಶಗಳನ್ನು ಕಾಲ ಕಾಲಕ್ಕೆ ಗಮನಿಸುವುದು ಒಂದು ಮುಖ್ಯವೂ ಮತ್ತು ಪ್ರಸ್ತುತವೂ ಆದ ಕೆಲಸ. ಭಾರತದಂತಹ ಅರ್ಥವ್ಯವಸ್ಥೆಯಲ್ಲಿ ನಿರುದ್ಯೋಗವು ಸ್ಪಷ್ಟವಾಗಿ ಗುರುತಿಸುವ ರೀತಿಯದ್ದಲ್ಲ (open kind). ಬದಲಿಗೆ, ಸಾಂದರ್ಭಿಕ ಉದ್ಯೋಗ, ಬಿಟ್ಟು ಬಿಟ್ಟು ದೊರೆಯುವ ಉದ್ಯೋಗ ಮತ್ತು ಅರೆಕಾಲಿಕ ಉದ್ಯೋಗ ಮುಂತಾದ ರೀತಿಯಲ್ಲಿ ಅದು ವ್ಯಕ್ತವಾಗುತ್ತದೆ. ಆದ್ದರಿಂದ, ಜಿಡಿಪಿಯು ಏರುತ್ತಿದೆಯೋ ಅಥವಾ ಇಳಿಯುತ್ತಿದೆಯೋ ಎಂಬುದನ್ನು ಕಾರ್ಮಿಕರ ಆದಾಯದ ಏರಿಕೆ-ಇಳಿಕೆಯ ಮಟ್ಟವನ್ನು ನೋಡುವ ಮೂಲಕವೂ ತಿಳಿಯಬಹುದು. ಕಾರ್ಮಿಕರ ಆದಾಯವನ್ನು ತಿಳಿಯುವ ಒಂದು ಬದಲಿ (proxy) ವಿಧಾನವೆಂದರೆ, ದುಡಿಯುವ ಜನರ ಬಳಕೆಯ (consumption) ಖರ್ಚುಗಳು. ಅವರ ಬಳಕೆಯ ಖರ್ಚುಗಳು ಏರಿಕೆಯಾಗದ ಜಿಡಿಪಿಯ ಬೆಳವಣಿಗೆಯನ್ನು ಅಥವಾ ಅಲ್ಪ ಪ್ರಮಾಣದ ಹೆಚ್ಚಳದೊಂದಿಗೆ ಏರಿಕೆಯಾದ ಜಿಡಿಪಿಯ ಬೆಳವಣಿಗೆಯನ್ನು ಒಂದು ಅಸಲಿ ಚೇತರಿಕೆ ಎನ್ನುವಂತಿಲ್ಲ.
ಲಾಕ್‌ಡೌನಿನಿಂದ ಉಂಟಾದ ಕಂದಕದಿಂದ ಚೇತರಿಕೆಯ ವಿಧಾನವು ಹಲವು ಕಾರಣಗಳಿಂದ ನೆಮ್ಮದಿಗೆಡಿಸುತ್ತದೆ. ಬಳಕೆ/ಅನುಭೋಗ ಕಡಿತವಾಗಿರುವುದಂತೂ ಸ್ವಯಂವೇದ್ಯ. ಆದ್ದರಿಂದ ಈ ‘ಚೇತರಿಕೆಯು’ ಸಂಶಯಾಸ್ಪದವಾಗಿಯೂ ಮತ್ತು ಅಸ್ಥಿರವಾಗಿಯೂ ಕಾಣುತ್ತದೆ. ಅರ್ಥ ವ್ಯವಸ್ಥೆಯು ಉಸುಬಿನಲ್ಲಿ ಸಿಕ್ಕಿಕೊಂಡಿದೆ ಎಂಬುದನ್ನು ತೋರಿಸುವ ಎರಡನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್) ಜಿಡಿಪಿಯ ಅಂದಾಜುಗಳ ಬಗ್ಗೆ ಸಂಭ್ರಮಿಸುವಂಥದ್ದು ಏನೂ ಇಲ್ಲ. ಇದರಿಂದ ಹೊರಬರಲು ಇರುವ ಒಂದೇ ದಾರಿ ಎಂದರೆ, ಜಾಗತಿಕ ಹಣಕಾಸು ಬಂಡವಾಳದ ಹುಕುಂಗಳನ್ನು ಧಿಕ್ಕರಿಸಿ, ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವುದು. ಆದರೆ, ಮೋದಿ ಸರ್ಕಾರಕ್ಕೆ ಈ ಮಾರ್ಗವನ್ನು ಅನುಸರಿಸುವ ದಮ್ ಇಲ್ಲ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಜಿಡಿಪಿ ಬೆಳವಣಿಗೆ ಹೇಗಿದೆ ಎಂಬುದನ್ನು ನೋಡೋಣ. ದುಡಿಯುವ ಜನರ ಬಳಕೆಯ ಖರ್ಚುಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಉಪಭೋಗದ (consumption) ಬಗ್ಗೆ ಸಿಗುವ ಸಮಗ್ರ ಮಾಹಿತಿಯ ವಿಷ್ಲೇಷಣೆಯ ಮೂಲಕ ನಾವು ದುಡಿಯುವ ಜನರ ಉಪಭೋಗದ ಪ್ರಮಾಣದ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಊಹಿಸಬಹುದು. ಎರಡನೇ ತ್ರೈಮಾಸಿಕದ ಜಿಡಿಪಿಯು 7.5% ಕಡಿಮೆಯಾಗಿದ್ದರೆ, ಖಾಸಗಿ ಬಳಕೆಯ ವೆಚ್ಚಗಳು 11.32% ಕಡಿಮೆಯಾಗಿವೆ. ಅಂದರೆ, 2019-2020 ಮತ್ತು 2020-2021ರ ಎರಡನೇ ತ್ರೈಮಾಸಿಕಗಳ ನಡುವಿನ ಅವಧಿಯಲ್ಲಿ, ಜಿಡಿಪಿಯಲ್ಲಿ ಖಾಸಗಿ ಬಳಕೆ ವೆಚ್ಚಗಳ (private consumption expenditure) ಪಾಲು ಕಡಿಮೆಯಾಗಿದೆ. ವಾಸ್ತವವಾಗಿ, 2019-2020ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ 56.5% ಇದ್ದ ಬಳಕೆಯ ಪಾಲು 2020-2021ರ ಎರಡನೇ ತ್ರೈಮಾಸಿಕದಲ್ಲಿ 54.2%ಗೆ ಇಳಿಯಿತು ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ.
ಲಾಕ್‌ಡೌನ್ ತೆರವಿನ ನಂತರ, ಅನುಕೂಲಸ್ತ ಜನರ ಬಳಕೆಯು ಲಾಕ್‌ಡೌನ್-ಪೂರ್ವ ಮಟ್ಟಕ್ಕೆ ಮರಳಿರುವ ಸಾಧ್ಯತೆಯಿದೆ. ಏಕೆಂದರೆ, ಅವರ ಕೊಳ್ಳುವ ಶಕ್ತಿಯು ಯಾವತ್ತೂ ಕುಂದುವುದಿಲ್ಲ. ಅವರ ಆದಾಯ ಇಳಿದಾಗಲೂ ಸಹ ಅವರ ಬಳಿ ಸಾಕಷ್ಟು ಹಣ ಇದ್ದೇ ಇರುತ್ತದೆ. ಹಾಗಾಗಿ ಅವರ ಬೇಡಿಕೆಯು, ತುಲನಾತ್ಮಕವಾಗಿ, ಸ್ಥಿರವಾಗಿಯೇ ಇರುವಂಥದ್ದು. ಲಾಕ್‌ಡೌನ್ ನಿರ್ಬಂಧಗಳು ಸಡಿಲವಾದಂತೆಯೇ, ತಕ್ಷಣವೇ, ಅವರ ಬೇಡಿಕೆಯು ಪೂರೈಸಲ್ಪಡುತ್ತದೆ. ಹಾಗಾಗಿ, ಜಿಡಿಪಿಯಲ್ಲಿ ಅವರ ಖರ್ಚಿನ ಪಾಲು ಹೆಚ್ಚಲೇಬೇಕು, ಹೆಚ್ಚುವರಿ ಉತ್ಪಾದನೆಯ ಮೂಲಕ ಅಲ್ಲದಿದ್ದರೂ, ಇದ್ದ ದಾಸ್ತಾನಿನ ಬಳಕೆಯ ಮೂಲಕವಾಗಿಯಾದರೂ. ಈ ಪ್ರಕಾರವಾಗಿ, ಜಿಡಿಪಿಯಲ್ಲಿ ಸ್ವಂತ/ಖಾಸಗಿ ಬಳಕೆ (private consumption) ವೆಚ್ಚಗಳ ಪಾಲು 11.32% ಕುಸಿತವಾಗಿದ್ದರೆ, ದುಡಿಯುವ ಜನರ ಬಳಕೆಯ ಕುಸಿತವು ಎರಡು ತ್ರೈಮಾಸಿಕಗಳ ನಡುವೆ 11.32%ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರಲೇಬೇಕಾಗುತ್ತದೆ. ಈ ಕುಸಿತಕ್ಕೆ ಅವರ ಕೊಳ್ಳುವ ಸಾಮರ್ಥ್ಯವು ಕಡಿಮೆಯಾಗಿರುವುದೇ ಕಾರಣವಾಗುತ್ತದೆ.
ಚೇತರಿಕೆಯು ಸ್ವಂತ/ಖಾಸಗಿ ಬಳಕೆಯ ವೆಚ್ಚಗಳ ಇಳಿಕೆಯ ಮೂಲಕ ಆಗಿದೆ ಎಂಬ ಸಂಗತಿಯನ್ನು ಗಣನೆಗೆ ತಗೊಂಡರೆ, ಅಂತಹ ಚೇತರಿಕೆಯು ದುಡಿಯುವ ಜನರ ಬಳಕೆಯ ಖರ್ಚುಗಳ ಇಳಿಕೆಯ ಮೂಲಕವೊ ಅಥವಾ ಜಿಡಿಪಿಯಲ್ಲಿ ಮಿಗುತಾಯದ ಪಾಲು ಹೆಚ್ಚಿದ ಕಾರಣದಿಂದಲೊ ಉಂಟಾಗಿದೆ ಎಂದು ಸಲೀಸಾಗಿ ಹೇಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಸಂಕಟಗಳನ್ನು ಉಂಟು ಮಾಡುವ ಎರಡು ವಿಭಿನ್ನ ಪ್ರಕ್ರಿಯೆಗಳು ಜರುಗುತ್ತಿವೆ. ಮೊದಲನೆಯದು, ಕೊರೊನಾ ಸಾಂಕ್ರಾಮಿಕ ಉಂಟು ಮಾಡಿದ ಪರಿಣಾಮ. ಕೊರೊನಾ ಕಾರಣದಿಂದ ಹೇರಿದ ಲಾಕ್‌ಡೌನ್‌ನಿಂದಾಗಿ, ಜನರ ತಲಾ ಆದಾಯ ಮತ್ತು ತಲಾ ಬಳಕೆ ಇಳಿಕೆಯಾಗಿವೆ ಮತ್ತು ಜನರ ಜೀವನ ಮಟ್ಟವೇ ಇಳಿದಿದೆ. ಎರಡನೆಯದು, ತಲಾ ಆದಾಯ ಮತ್ತು ತಲಾ ಬಳಕೆಗಳ ಇಳಿಕೆಯಾಗುವಾಗ ಅದರ ಹೆಚ್ಚಿನ ಹೊಡೆತವು ದುಡಿಯುವ ಜನರ ಮೇಲೆ ಬಿದ್ದಿರುತ್ತದೆ. ಲಾಕ್‌ಡೌನ್ ತೆರವುಗೊಂಡ ನಂತರವೂ ಅವರ ದುಸ್ಥಿತಿ ಮುಂದುವರೆಯುತ್ತಿದೆ. ವರಮಾನಗಳು ಕಡಿಮೆಯಾಗುತ್ತಿರುವಾಗಲೂ ಹೆಚ್ಚುತ್ತಿರುವ ಮಿಗುತಾಯದ ಪರಿಣಾಮವಾಗಿ ಅವರ ದುಸ್ಥಿತಿ ಮುಂದುವರೆಯುತ್ತಿದೆ.
ಈ ಚೇತರಿಕೆಯ ಬಗ್ಗೆ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಜಿಡಿಪಿಯಲ್ಲಿ ಸರ್ಕಾರದ ಖರ್ಚು-ವೆಚ್ಚಗಳ ಪಾಲು ಗಮನಾರ್ಹವಾಗಿ ಇಳಿಕೆಯಾಗಿದೆ. 2019-2020ರ ಎರಡನೇ ತ್ರೈಮಾಸಿಕದಲ್ಲಿ 13% ಮಟ್ಟದಲ್ಲಿದ್ದ ಸರ್ಕಾರದ ಖರ್ಚು-ವೆಚ್ಚಗಳ ಪಾಲು, 2020-2021ರ ಎರಡನೇ ತ್ರೈಮಾಸಿಕದಲ್ಲಿ 10.9%ಗೆ ಇಳಿದಿದೆ. ಅಂದರೆ, 2019-2020 ಮತ್ತು 2020-2021ರ ಎರಡನೇ ತ್ರೈಮಾಸಿಕಗಳ ನಡುವಿನ ಅವಧಿಯಲ್ಲಿ ಸರ್ಕಾರದ ಖರ್ಚು-ವೆಚ್ಚಗಳಲ್ಲಿ 22.2% ಕುಸಿತವಾಗಿದೆ. ಜಿಡಿಪಿಯ -7.5% ಕುಸಿತಕ್ಕೆ ಹೋಲಿಸಿದರೆ, ಇದು(-22.2%) ನಿಜಕ್ಕೂ ಒಂದು ಬೃಹತ್ ಕುಸಿತವೇ.
ಸಾಮಾನ್ಯವಾಗಿ, ಜಿಡಿಪಿ ಕುಸಿದರೆ ಸರ್ಕಾರದ ಆದಾಯವೂ ಕುಸಿಯುತ್ತದೆ. ಆದರೆ, ನೌಕರರ ವೇತನಗಳನ್ನು ಒಳಗೊಂಡ ಸರ್ಕಾರದ ದಿನನಿತ್ಯದ ಖರ್ಚು-ವೆಚ್ಚಗಳು (ಚಾಲ್ತಿ ವೆಚ್ಚಗಳು) ಇಳಿಯುವುದಿಲ್ಲ. ಹಾಗಾಗಿ, ಜಿಡಿಪಿಯಲ್ಲಿ ಸರ್ಕಾರದ ಖರ್ಚು-ವೆಚ್ಚಗಳ ಅನುಪಾತವು ಏರಬೇಕಾಗುತ್ತದೆ. ವಾಸ್ತವವಾಗಿ, ಖರ್ಚುಗಳನ್ನು ಪ್ರಜ್ಞಾಪೂರ್ವಕವಾಗಿ ಇಳಿಸುವ ಪ್ರಯತ್ನಗಳು ಇಲ್ಲದಿದ್ದರೆ, ಸರ್ಕಾರದ ಖರ್ಚುಗಳು “ಆವರ್ತಕ-ಪರ”ಕ್ಕಿಂತ “ಆವರ್ತಕ-ವಿರೋಧ”ವಾಗಿಯೇ ಇರುತ್ತವೆ. ಆದರೆ, ಮೋದಿ ಸರಕಾರವು ತನ್ನ ಚಾಲ್ತಿ ವೆಚ್ಚಗಳ ಗಾತ್ರವನ್ನು ಕಡಿತಗೊಳಿಸಿದೆ. ಆದಾಯ ಎಷ್ಟು ಕಡಿಮೆಯಾಗಿದೆಯೊ ಅದಕ್ಕಿಂತಲೂ ಹೆಚ್ಚಿನ ಅನುಪಾತದಲ್ಲಿ ತನ್ನ ವೆಚ್ಚಗಳನ್ನು ಕಡಿತಗೊಳಿಸಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ, ರೋಗ ಪರೀಕ್ಷೆ, ಚಿಕಿತ್ಸೆ, ಔಷದೋಪಚಾರ ಮುಂತಾದ ಕಾರ್ಯಗಳಿಗೆ ಖರ್ಚುಗಳನ್ನು ಗಣನೀಯವಾಗಿ ಹೆಚ್ಚಿಸಬೇಕಾದ ಸಮಯದಲ್ಲಿ ಮೋದಿ ಸರ್ಕಾರದ ಈ ಕ್ರಮವು, ಜಾಗತೀಕರಣಗೊಂಡ ಹಣಕಾಸು ಬಂಡವಾಳಕ್ಕೆ ಅದು ಎಷ್ಟರ ಮಟ್ಟಿಗೆ ಶರಣಾಗಲು ಬಯಸುತ್ತದೆ ಎಂಬುದನ್ನು ತೋರಿಸುತ್ತದೆ.
ಜಿಡಿಪಿಯಲ್ಲಿ ಖಾಸಗಿ/ಸ್ವಂತ ಬಳಕೆಯ ಖರ್ಚುಗಳು ಮತ್ತು ಸರ್ಕಾರದ ಖರ್ಚು-ವೆಚ್ಚಗಳು ಇಳಿಕೆಯಾದಾಗಲೂ ಕಾಣಿಸಿಕೊಳ್ಳುತ್ತಿರುವ ಈ ಚೇತರಿಕೆಯು, ಬಂಡವಾಳ ಹೂಡಿಕೆಯ (ಅದರಲ್ಲೂ ನಿರ್ದಿಷ್ಟವಾಗಿ ಸ್ಥಿರ ಬಂಡವಾಳದ) ಹೆಚ್ಚಳಕ್ಕೆ ಸಂಬಂಧಿಸುತ್ತದೆ. 2019-2020ರ ಎರಡನೇ ತ್ರೈಮಾಸಿಕದೊಂದಿಗೆ ಹೋಲಿಸಿದರೆ ಬಂಡವಾಳ ಹೂಡಿಕೆಯೂ ಸಹ ಕಡಿಮೆಯೇ. ಆದರೆ, ಅರ್ಥವ್ಯವಸ್ಥೆಯು ಕುಸಿದು ಬಿದ್ದಿರುವ ಕಂದಕದ ಆಳಕ್ಕೆ ಹೋಲಿಸಿದರೆ, ಚೇತರಿಕೆಯು ಗಮನಾರ್ಹವಾಗಿದೆ ಎನ್ನಬಹುದು. ಈ ವರ್ಷದ ಮೊದಲನೆಯ ಮತ್ತು ಎರಡನೆಯ ತ್ರೈಮಾಸಿಕದ ಅಂಕಿಗಳನ್ನು ಹೋಲಿಸಿ ನೋಡಿದಾಗ, ಈ ಎರಡು ತ್ರೈಮಾಸಿಕಗಳ ನಡುವೆ ಜಿಡಿಪಿಯು 58% ಏರಿಕೆಯಾಗಿದೆ ಮತ್ತು ಈ ಏರಿಕೆಯು, ಸರ್ಕಾರಿ ಮತ್ತು ಖಾಸಗಿ ವಲಯದ ಸ್ಥಿರ ಬಂಡವಾಳ ಹೂಡಿಕೆಯ ಕಾರಣದಿಂದ ಸಾಧ್ಯವಾಗಿದೆ.
ಈ ಸ್ಥಿರ ಬಂಡವಾಳ ಹೂಡಿಕೆಯ ಹೆಚ್ಚಳವು ತಾಳಿಕೆ ಇಲ್ಲ. (unsustainable). ಒಂದು ವೇಳೆ ಹೂಡಿಕೆಯನ್ನು ಒತ್ತಾಯದ ಮೂಲಕ ಮಾಡಿಸಿದರೂ ಅದು ಹೆಚ್ಚು ಕಾಲ ಮುಂದುವರೆಯಲಾರದು. ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಮುನಿಸನ್ನು ಇಷ್ಟಪಡದ ಭಾಜಪ ಸರ್ಕಾರವು, ತನ್ನ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿದರೂ ಸಹ, ಇಡೀ ವರ್ಷದ ವಿತ್ತೀಯ ಕೊರತೆಗೆ ಹಾಕಿಕೊಂಡಿದ್ದ ಮಿತಿಯನ್ನು ಅಕ್ಟೋಬರ್ ಅಂತ್ಯದೊಳಗೇ ಮೀರಿರುವ ವಾಸ್ತವವನ್ನು ಗಮನಿಸಿದರೆ, ಅದು ತನ್ನ ಹೂಡಿಕೆಯನ್ನು ನಿರ್ಬಂಧಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಇನ್ನೊಂದು ಕಡೆಯಲ್ಲಿ, ತಡೆಹಿಡಿದ ಈ ಹೂಡಿಕೆಯನ್ನು ಖಾಸಗಿ ವಲಯವು ಕೈಗೆತ್ತಿಕೊಳ್ಳುತ್ತದೆ ಎನ್ನುವಂತಿಲ್ಲ, ಏಕೆಂದರೆ, ಖಾಸಗಿ ಹೂಡಿಕೆಯು ಅನುಭೋಗದ ಹೆಚ್ಚಳವನ್ನು ಅವಲಂಬಿಸಿರುತ್ತದೆ.
ರಫ್ತುಗಳ ಬೆಳವಣಿಗೆಯು ಒಂದು ಹಂತದವರೆಗೆ ಖಾಸಗಿ ಬಂಡವಾಳ ಹೂಡಿಕೆಗೆ ಸ್ವಲ್ಪ ಮಟ್ಟಿನ ಉತ್ತೇಜನವನ್ನು ಒದಗಿಸುತ್ತದೆ, ನಿಜ. ಆದರೆ, ನಮ್ಮ ಒಟ್ಟು ಜಿಡಿಪಿಯಲ್ಲಿ ರಫ್ತಿನ ಪಾಲು ಬಹಳ ಸಣ್ಣದು. ಅಲ್ಲದೆ, ಕೊರೊನಾ ಸಾಂಕ್ರಾಮಿಕವು ಇಡೀ ವಿಶ್ವವನ್ನೇ ಆವರಿಸಿರುವ ಸನ್ನಿವೇಶದಲ್ಲಿ, ರಫ್ತುಗಳು ಹೆಚ್ಚುವ ಭರವಸೆ ಇಲ್ಲದ ಕಾರಣದಿಂದ ರಫ್ತು ವಲಯದಲ್ಲಿ ಖಾಸಗಿ ಬಂಡವಾಳ ಹೂಡಿಕೆಯಾಗುವುದಿಲ್ಲ. ಹಾಗಾಗಿ, ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನವು ಆಂತರಿಕ ಬಳಕೆಯ ಹೆಚ್ಚಳದಿಂದಲೇ ಬರಬೇಕಾಗುತ್ತದೆ.
ಬಳಕೆಯು/ಅನುಭೋಗವು (consumption) ಸಾಂಕ್ರಾಮಿಕ-ಪೂರ್ವದ ಮಟ್ಟವನ್ನು ತಲುಪುವ ವರೆಗೂ, ಅರ್ಥವ್ಯವಸ್ಥೆಯಲ್ಲಿ ಈಗಾಗಲೇ ಸ್ಥಾಪಿತವಾದ ಸಾಮರ್ಥ್ಯದ ಬಳಕೆಯು ಅಪೂರ್ಣವಾಗಿಯೇ ಉಳಿಯುತ್ತದೆ. ಆದ್ದರಿಂದ, ಈ ಸ್ಥಾಪಿತ ಸಾಮರ್ಥ್ಯಕ್ಕೆ ಸೇರ್ಪಡೆಯಾಗುವ ಭಾಗವು ನಗಣ್ಯವೇ. ಹಾಗಾಗಿ, ಬಳಕೆಯು/ಅನುಭೋಗವು ಸಾಂಕ್ರಾಮಿಕ-ಪೂರ್ವದ ಮಟ್ಟವನ್ನು ತಲುಪಿದ ನಂತರವೇ ಖಾಸಗಿ ಬಂಡವಾಳ ಹೂಡಿಕೆಯು ಒಂದು ಗಮನಾರ್ಹ ಮಟ್ಟಕ್ಕೆ ಏರಬಲ್ಲದು. ಆದರೆ, ಬಳಕೆಯು/ಅನುಭೋಗವು ಈಗಿರುವಂತೆ ನೀರಸವಾಗಿಯೇ ಮುಂದುವರಿದರೆ, ಅರ್ಥವ್ಯವಸ್ಥೆಯ ಚೇತರಿಕೆಯು ಮೃತಸ್ಥಿತಿಯಲ್ಲಿ ಹುಟ್ಟಿದ ಮಗುವಾಗುತ್ತದೆ.
ಲಾಕ್‌ಡೌನಿನಿಂದ ಉಂಟಾದ ಕಂದಕದಿಂದ ಚೇತರಿಕೆಯ ವಿಧಾನವು ಹಲವು ಕಾರಣಗಳಿಂದ ನೆಮ್ಮದಿಗೆಡಿಸುತ್ತದೆ. ಬಳಕೆ/ಅನುಭೋಗ ಕಡಿತವಾಗಿರುವುದಂತೂ ಸ್ವಯಂವೇದ್ಯ. 2020-2021ರ ಸಾಲಿನ ಮೊದಲ ಅರ್ಧ ಭಾಗದ ಅವಧಿಯ ಖಾಸಗಿ/ಸ್ವಂತ ಬಳಕೆಯ ಖರ್ಚುಗಳನ್ನು ಕಳೆದ ವರ್ಷದ ಅದೇ ಅವಧಿಗೆ ಹೋಲಿಸಿದರೆ, ಸುಮಾರು 20% ಇಳಿಕೆ ಕಂಡುಬರುತ್ತದೆ. ಇದು, ಲಕ್ಷಾಂತರ ಮಂದಿಯು ಕೇವಲ ಹೊಟ್ಟೆ-ಬಟ್ಟೆ (subsistence) ಮಟ್ಟದಲ್ಲೇ ಬದುಕುತ್ತಿರುವ ಅರ್ಥವ್ಯವಸ್ಥೆಯಲ್ಲಿ ಒಂದು ಗಂಭೀರ ವಿಷಯವೇ. ಕಂದಕದಿಂದ ಚೇತರಿಕೆಯು ಅಷ್ಟರಮಟ್ಟಿಗೆ ಕಷ್ಟಕರವೇ.
ಅರ್ಥ ವ್ಯವಸ್ಥೆಯು ಉಸುಬಿನಲ್ಲಿ ಸಿಕ್ಕಿಕೊಂಡಿದೆ ಎಂಬುದನ್ನು ತೋರಿಸುವ ಎರಡನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್) ಜಿಡಿಪಿಯ ಅಂದಾಜುಗಳ ಬಗ್ಗೆ ಸಂಭ್ರಮಿಸುವಂಥದ್ದು ಏನೂ ಇಲ್ಲ. ಇದರಿಂದ ಹೊರಬರಲು ಇರುವ ಒಂದೇ ದಾರಿ ಎಂದರೆ, ಜಾಗತಿಕ ಹಣಕಾಸು ಬಂಡವಾಳದ ಹುಕುಂಗಳನ್ನು ಧಿಕ್ಕರಿಸಿ, ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವುದು. ಆದರೆ, ಮೋದಿ ಸರ್ಕಾರಕ್ಕೆ ಈ ಮಾರ್ಗವನ್ನು ಅನುಸರಿಸುವ ದಮ್ ಇಲ್ಲ.
ಅನು: ಕೆ.ಎಂ.ನಾಗರಾಜ್