ಜಿಡಿಪಿ ಇಬ್ಬಗೆಯ ಸಮಾಜವನ್ನು ಮರೆಮಾಚುವ ಸಾಧನ

ಪ್ರೊ. ಪ್ರಭಾತ್ ಪಟ್ನಾಯಕ್ , ಅನು: ಕೆ. ಎಂ. ನಾಗರಾಜ್
ಅರ್ಥವ್ಯವಸ್ಥೆಯು ಹೆಚ್ಚೆಚ್ಚು ಇಬ್ಭಾಗಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಯೋಗಕ್ಷೇಮವನ್ನು ಅಳೆಯಲು ಜಿಡಿಪಿಯಂತಹ ಎಲ್ಲವನ್ನೂ ಆವರಿಸುವ ಮಾಪಕವು ವಾಸ್ತವವನ್ನು ಮರೆಮಾಚುವ ಒಂದು ಸಾಧನವಾಗುತ್ತದೆ. ವರಮಾನದ ಹೆಚ್ಚುತ್ತಿರುವ ಅಸಮಾನತೆಯಿಂದಾಗಿ ಜಿಡಿಪಿ ಅಸಂಗತ ಅಳತೆಯಾಗುತ್ತದೆ ಎಂಬುದನ್ನಂತೂ ಒಪ್ಪಿಕೊಳ್ಳಲಾಗುತ್ತಿದೆ. ಆದರೆ ವಿಷಯ ಅಷ್ಟೇ ಅಲ್ಲ, ಹೆಚ್ಚುತ್ತಿರುವ ಈ ಅಸಮಾನತೆಯು ನವ ಉದಾರವಾದದ ಪ್ರಾಬಲ್ಯದ ಅಡಿಯಲ್ಲಿ ಆರ್ಥಿಕವಾಗಿ ದೇಶವನ್ನು ಮತ್ತೊಮ್ಮೆ ಇಬ್ಭಾಗಿಸುತ್ತದೆ. ನವ-ಉದಾರವಾದದ ಈ ಪ್ರಾಬಲ್ಯ ಸಾಮ್ರಾಜ್ಯಶಾಹಿಯ ಮರು-ಪ್ರತಿಪಾದನೆಯೇ ಆಗಿರುವುದರಿಂದ, ಜಿಡಿಪಿಯ ಬಳಕೆಯು ಸಮಾಜದ ಸಂರಚನೆಯಲ್ಲಿ ಸಾಮ್ರಾಜ್ಯಶಾಹಿಯು ಉಂಟುಮಾಡಿರುವ ಮತ್ತು ಬೆಳೆಯುತ್ತಿರುವ ಇಬ್ಬಾಗವನ್ನು ಮುಚ್ಚಿಡುವ ಕೆಲಸವನ್ನು, ಆಮೂಲಕ  ಸಾಮ್ರಾಜ್ಯಶಾಹಿಯ ಕಾರ್ಯಾಚರಣೆಯನ್ನು ಮರೆಮಾಚುವ ಕಾರ್ಯವನ್ನು ನಿರ್ವಹಿಸುತ್ತದೆ. ಜಿಡಿಪಿ

ಜಿ.ಡಿ.ಪಿ.ಯ ಪರಿಕಲ್ಪನೆಯ ಬಗ್ಗೆ ಮತ್ತು ಅದನ್ನು ಅಳತೆ ಮಾಡುವ ಬಗ್ಗೆ ಇರುವ ಸಮಸ್ಯೆಗಳು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಜಿಡಿಪಿಯಲ್ಲಿ ಸೇವಾ ವಲಯವನ್ನು ಸೇರಿಸುವ ಕ್ರಮವನ್ನು, ಆಡಮ್ ಸ್ಮಿತ್, ಈ ವಲಯದಲ್ಲಿ ಕೆಲಸ ಮಾಡುವವರು “ಅನುತ್ಪಾದಕ ಕೆಲಸಗಾರರು” ಎಂಬ ಪರಿಕಲ್ಪನೆಯ ಆಧಾರದ ಮೇಲೆ ಆಕ್ಷೇಪಿಸುತ್ತಿದ್ದರು. ನಿಸ್ಸಂಶಯವಾಗಿ ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳಲ್ಲಿ, ಸೇವಾ ವಲಯವನ್ನು ಹೊರತುಪಡಿಸಿದ, ಒಟ್ಟು ವಸ್ತು-ಸಾಮಗ್ರಿಗಳ ಉತ್ಪನ್ನವನ್ನು ಒಂದು ಸುಸಂಗತ ಅಳತೆ ಎಂದು ಪರಿಗಣಿಸಲಾಗಿತ್ತು.

ಸೇವಾ ವಲಯವನ್ನು ಜಿಡಿಪಿಯಲ್ಲಿ ಸೇರಿಸಿದರೂ ಸಹ, ಅಲ್ಲಿ ಮಾಡಲಾಗುವ ಕೆಲಸವನ್ನು ಅಳೆಯುವುದು ಒಂದು ಸಮಸ್ಯೆಯೇ. ಏಕೆಂದರೆ, ಸಲ್ಲಿಸಿದ ಸೇವೆ ಎಂಬುದನ್ನು ಬರಿಯ ವರ್ಗಾವಣೆ ಪಾವತಿ ಎಂಬುದರಿಂದ ಪ್ರತ್ಯೇಕಿಸುವುದು ಕಷ್ಟ. ವರ್ಗಾವಣೆಯ ಪಾವತಿಯ ತೃಪ್ತಿಯನ್ನು, ಒಬ್ಬ ಸಂಗೀತಗಾರನ ಸಂಗೀತದಿಂದ ತೃಪ್ತಿ ಪಡೆಯುವ ರೀತಿಯಲ್ಲಿ ಪಡೆಯಬಹುದು. ಹಾಗಿರುವಾಗ ಇವುಗಳಲ್ಲಿ ಒಂದನ್ನು ಜಿಡಿಪಿಯ ವ್ಯಾಪ್ತಿಗೆ ತಂದು ಇನ್ನೊಂದನ್ನು ತಾರದೆ ಇರುವುದಾದರೂ ಹೇಗೆ? ಇಂತಹ ಪರಿಕಲ್ಪನೆಗಳ ಸಮಸ್ಯೆಗಳ ಜೊತೆಗೆ, ಜಿಡಿಪಿಯ ಅಳತೆಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ನಮ್ಮ ಬಲು ದೊಡ್ಡ ಕಿರು ಉತ್ಪಾದನಾ ವಲಯದ ಉತ್ಪಾದನೆಯ ಬಗ್ಗೆ ವಿಶ್ವಾಸಾರ್ಹ, ನಿಗದಿತ ಸಮಯದ ಮತ್ತು ಸಕಾಲಿಕ ದತ್ತಾಂಶಗಳು ಲಭ್ಯವಿಲ್ಲದ ಕಾರಣದಿಂದ ಉದ್ಭವಿಸುವ ಸಮಸ್ಯೆಗಳಿವೆ. ಭಾರತದಲ್ಲಿ ಅನೇಕ ಮಂದಿ ಅರ್ಥಶಾಸ್ತ್ರಜ್ಞರು, ವಿವಿಧ ಕಾರಣಗಳಿಗಾಗಿ, ಜಿಡಿಪಿಯ ಬೆಳವಣಿಗೆಯ ದರದ ಅಳತೆಯು ಒಂದು ಅತ್ಯಂದಾಜು (ಓವರ್-ಎಸ್ಟಿಮೇಟ್) ಎಂದೇ ಹೇಳುತ್ತಾರೆ. ಜಿಡಿಪಿ

ಜಿ.ಡಿ.ಪಿ.ಯು ದೇಶದ ಯೋಗಕ್ಷೇಮದ ಸೂಚ್ಯಂಕವಲ್ಲ ಎಂಬುದು ಸ್ವಯಂವೇದ್ಯ; ಇದಕ್ಕೆ ಪ್ರಮುಖವಾದ ಒಂದು ಕಾರಣವೆಂದರೆ, ಜಿಡಿಪಿಯ ಹಂಚಿಕೆ ಅತ್ಯಂತ ಅಸಮಾನವಾಗಿರಲೂ  ಸಾಧ್ಯ ಎಂಬುದು. ಸಾಮ್ರಾಜ್ಯಶಾಹಿಯ ಕಾರ್ಯಾಚರಣೆಯು ಮೂರನೇ ಜಗತ್ತಿನ ದೇಶಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಇಭ್ಭಾಗ ಮಾಡುತ್ತದೆ. ಹಾಗಾಗಿ, ಜಿಡಿಪಿಯು ಆರ್ಥಿಕ ಪ್ರಗತಿಯನ್ನು ಅಳೆಯುವ ಒಂದು ಅಸಂಗತ ಮಾನದಂಡವಾಗುತ್ತದೆ. ಹಾಗೆ ನೋಡಿದರೆ, ಜಿಡಿಪಿಯು ಕಾಲಕ್ರಮದಲ್ಲಿ ವೃದ್ಧಿಸುತ್ತಿರುವ ಆರ್ಥಿಕ ಇಬ್ಭಾಗವನ್ನು ಮರೆಮಾಚುವ ಕೆಲಸವನ್ನು ಮಾಡುತ್ತದೆ.

ಸಾಮ್ರಾಜ್ಯಶಾಹಿಯ ಪರಿಣಾಮ

ಸಾಮ್ರಾಜ್ಯಶಾಹಿಯು ಸಮಕಾಲೀನ ಮೂರನೇ ಜಗತ್ತಿನ ಅರ್ಥವ್ಯವಸ್ಥೆಯ ಮೇಲೆ ಎರಡು ವಿಭಿನ್ನ ಪರಿಣಾಮಗಳನ್ನು ಉಂಟುಮಾಡುತ್ತದೆ. ಈ ಅರ್ಥವ್ಯವಸ್ಥೆಗಳು ಸಾಮಾನ್ಯವಾಗಿ ಉಷ್ಣವಲಯದಲ್ಲಿ ನೆಲೆಗೊಂಡಿರುವುದರಿಂದ, ಬಂಡವಾಳಶಾಹಿಯ ನೆಲೆಯಾಗಿರುವ ಸಮಶೀತೋಷ್ಣ ವಲಯದ ಕೈಗಾರಿಕಾ-ಪ್ರಧಾನ ದೇಶಗಳಿಗೆ, ಉಷ್ಣವಲಯದಲ್ಲಿ ಮಾತ್ರವೇ ಬೆಳೆಯುವ ಅಥವಾ ಸಮಶೀತೋಷ್ಣ ವಲಯದ ದೇಶಗಳು ಹೆಪ್ಪುಗಟ್ಟುವ ಚಳಿಗಾಲದಲ್ಲಿ ಬೆಳೆಯಲಾಗದ ಅನೇಕ ಕೃಷಿ ಉತ್ಪನ್ನಗಳ (ಖನಿಜಗಳ ಹೊರತಾಗಿ) ಅಗತ್ಯವಿದೆ. ಗೋಧಿ ಮತ್ತು ಮೆಕ್ಕೆಜೋಳದ ಹೊರತಾಗಿ, ಸಾಮ್ರಾಜ್ಯಶಾಹಿ ದೇಶಗಳು ಸ್ವತಃ ಯಾವುದೇ ಋತುವಿನಲ್ಲೂ ಬೆಳೆಯಲು ಸಾಧ್ಯವಿಲ್ಲದ, ಅಥವಾ ಬೇಸಿಗೆ ಕಾಲದಲ್ಲಿ ಮಾತ್ರವೇ (ಚಳಿಗಾಲದಲ್ಲಿ ಏನನ್ನೂ ಬೆಳೆಯಲಾಗದು) ಬೆಳೆಯಬಹುದಾದ, ದವಸ ಧಾನ್ಯಗಳ ಅಗತ್ಯವಿದೆ. ಹೀಗಾಗಿ, ಈ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಉಷ್ಣವಲಯದ ಭೂ-ಪ್ರದೇಶದ ವಿಸ್ತಾರವು ಸೀಮಿತವಾಗಿದೆ. ನೀರಾವರಿಯಂತಹ “ಭೂ-ವರ್ಧನೆ”ಯ ಕ್ರಮಗಳನ್ನು ಮತ್ತು ಭೂ ಉತ್ಪಾದಕತೆಯನ್ನು ಹೆಚ್ಚಿಸುವ ಇತರ ತಾಂತ್ರಿಕ ಬದಲಾವಣೆಗಳನ್ನು ಪರಿಚಯಿಸಲು ಪ್ರಭುತ್ವವು ಕ್ರಿಯಾಶೀಲವಾಗಿ ಮಧ್ಯಪ್ರವೇಶ ಮಾಡುವ ಅಗತ್ಯವಿರುತ್ತದೆ. ಆದರೆ, ಪ್ರಭುತ್ವದ ಉತ್ತೇಜನೆ ತನಗೆ ಮಾತ್ರ ಎನ್ನುವ ಬಕಾಸುರ ಬಂಡವಾಳಶಾಹಿಯು ರೈತ ಕೃಷಿಯನ್ನು ಬೆಂಬಲಿಸುವ ಪ್ರಭುತ್ವದ ಎಲ್ಲ ರೀತಿಯ ಬೆಂಬಲದ ಕ್ರಮಗಳನ್ನು ವಿರೋಧಿಸುವುದರಿಂದಾಗಿ ಸಾಕಷ್ಟು ಮಟ್ಟದಲ್ಲಿ “ಭೂ-ವರ್ಧನೆ” ಆಗಿಲ್ಲ. ಹಾಗಾಗಿ, ಈ ಮೆಟ್ರೋಪಾಲಿಟನ್ ದೇಶಗಳಿಗೆ ಅಗತ್ಯವಿರುವ ಉಷ್ಣವಲಯದ ಉತ್ಪನ್ನಗಳ ಸರಬರಾಜುಗಳನ್ನು, ಮೂರನೇ ಜಗತ್ತಿನ ದೇಶಗಳು ತಮ್ಮ ಆಂತರಿಕ ಬೇಡಿಕೆಯನ್ನು ಕುಗ್ಗಿಸುವ ಕ್ರಮಗಳ ಮೂಲಕ, ರಫ್ತು ಮಾಡುವಂತೆ ಪರೋಕ್ಷವಾಗಿ ಒತ್ತಾಯಿಸಲಾಗುತ್ತದೆ. ಆದ್ದರಿಂದ, ತನ್ನ ಒಂದು ಅಗತ್ಯವಾಗಿ ಸಾಮ್ರಾಜ್ಯಶಾಹಿಯು ಮೂರನೆಯ ಜಗತ್ತಿನ ದೇಶಗಳ ಮೇಲೆ ಒಂದು ರೀತಿಯ ಬೇಡಿಕೆಯ ಸಂಕೋಚನವನ್ನು ಮತ್ತು ಆ ಮೂಲಕ ವರಮಾನಗಳ ಸಂಕೋಚನವನ್ನು ಹೇರುತ್ತದೆ.

ನವ ಉದಾರವಾದಿ ಆಳ್ವಿಕೆಯ ಮುಖ್ಯವಾದ ಒಂದು ಕಾರ್ಯವೆಂದರೆ, ಸರಕುಗಳ ಅನಿಯಂತ್ರಿತ ರಫ್ತಿಗೆ ಮೂರನೇ ಜಗತ್ತನ್ನು ತೆರೆದಿಡುವುದು ಮತ್ತು ಅದನ್ನು ಸಾಧಿಸಲು ವಾಡಿಕೆಯಂತೆ ಬೇಡಿಕೆಯ ಸಂಕೋಚನವನ್ನು ಹೇರುವುದೇ ಆಗಿದೆ. ಮೂರನೇ ಜಗತ್ತಿನ ದೇಶಗಳ ಅರ್ಥವ್ಯವಸ್ಥೆಗಳನ್ನು ಈ ರೀತಿಯಲ್ಲಿ ತೆರೆದಿಟ್ಟಾಗ, ರೈತರು ಯಾವ ಬೆಳೆಗಳನ್ನು ಬೆಳೆಯಬೇಕು ಎಂಬ ಆಯ್ಕೆಯು ದೇಶದ ಆಹಾರ ಸ್ವಾವಲಂಬನೆ ಅಥವಾ ಸ್ಥಳೀಯ ಅಗತ್ಯಗಳ ಪರಿಗಣನೆಯಿಂದ ಪ್ರಭಾವಿತವಾಗದೆ, “ಮಾರುಕಟ್ಟೆ”ಯಿಂದ ಮಾತ್ರವೇ ಪ್ರಭಾವಿತವಾಗಿರಬೇಕಾಗುತ್ತದೆ. ಅಂದರೆ, ಅದು ಮೆಟ್ರೊಪಾಲಿಟನ್ ದೇಶಗಳ ಕೊಳ್ಳುವ ಶಕ್ತಿಯ ಸೆಳೆತ ಎಂದಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು, ಜಾಗತಿಕ ದಕ್ಷಿಣದ ದೇಶಗಳಲ್ಲಿ ಆಹಾರ ಧಾನ್ಯಗಳಿಗೆ ಕೊಡುವ ಸರ್ಕಾರದ ಬೆಂಬಲ ಬೆಲೆಯನ್ನು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೈಗೊಳ್ಳುವ ಆಹಾರ ಧಾನ್ಯಗಳ ಸಂಗ್ರಹಣೆಯನ್ನು ನಿಲ್ಲಿಸಬೇಕಾಗುತ್ತದೆ. ಎಲ್ಲ ಪರಿಮಾಣಾತ್ಮಕ ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವ ಕಾರಣದಿಂದಾಗಿ ದೇಶೀಯ ಬೆಲೆಗಳನ್ನು ಅಂತಾರಾಷ್ಟ್ರೀಯ ಬೆಲೆಗಳೊಂದಿಗೆ ಹೊಂದಿಸಿಕೊಳ್ಳಬೇಕಾಗುತ್ತದೆ ಮತ್ತು ಆಮದುಗಳ ಮೇಲೆ ಹೇರುವ ಸುಂಕಗಳನ್ನು ಶೂನ್ಯ ಅಥವಾ ಕನಿಷ್ಠ ಮಟ್ಟದಲ್ಲಿ ಇಡಬೇಕಾಗುತ್ತದೆ. ಇದನ್ನೇ ವಿಶ್ವ ವ್ಯಾಪಾರ ಸಂಸ್ಥೆಯು ಖಚಿತಪಡಿಸಿಕೊಳ್ಳಲು ಬಯಸುವುದು. ಅದೇ ಸಮಯದಲ್ಲಿ, ತಮ್ಮ ಕೃಷಿಕರು ಬೆಳೆಯುವ ಹತ್ತಿ ಮತ್ತು ಆಹಾರ ಧಾನ್ಯಗಳಿಗೆ ಅತಿ ಹೆಚ್ಚು ನೇರ ನಗದು ಸಬ್ಸಿಡಿಗಳನ್ನು ನೀಡುವುದನ್ನು ಈ ಕೈಗಾರಿಕಾ-ಪ್ರಧಾನ ದೇಶಗಳು ಮುಂದುವರೆಸುತ್ತವೆ ಮತ್ತು ಈ ಸಬ್ಸಿಡಿಗಳಿಗೆ ‘ವ್ಯಾಪಾರೇತರದವು ಮತ್ತು ವಿರೂಪಗೊಳಿಸದವು’ ಎಂಬ ಹಣೆಪಟ್ಟಿ ಹಚ್ಚುತ್ತವೆ. ಜಿಡಿಪಿ

ಇದನ್ನೂ ಓದಿತೆರಿಗೆ-ಜಿಡಿಪಿ ಅನುಪಾತ ಹೆಚ್ಚದೆ ಕಲ್ಯಾಣ ಪ್ರಭುತ್ವ ಅಸಾಧ್ಯ

ವಿಶ್ವ ಮಾರುಕಟ್ಟೆಯ ಅಗತ್ಯಗಳಿಗಾಗಿಯಷ್ಟೇ..

ಮೆಟ್ರೋಪಾಲಿಟನ್ ದೇಶಗಳು ಆಮದು ಮಾಡಿಕೊಳ್ಳುವ ಬೆಳೆಗಳ ಪೂರೈಕೆಯು ಸಾಕಾಗುವಷ್ಟು ಇಲ್ಲದಿದ್ದರೆ, ಹಣದುಬ್ಬರ ಉಂಟಾಗುತ್ತದೆ. ಅದನ್ನು ಹತೋಟಿಯಲ್ಲಿಡಲು, ವಾಡಿಕೆಯಾಗಿ ಬೇಡಿಕೆಯನ್ನು ಸಂಕೋಚನಗೊಳಿಸುವ ಕ್ರಮಗಳನ್ನು ಅನುಸರಿಸಲಾಗುತ್ತದೆ. ಬೇಡಿಕೆಯ ಈ ಸಂಕೋಚನವು ದೇಶದ ಆಂತರಿಕ ಬೇಡಿಕೆಯನ್ನು ಹದುಬಸ್ತಿನಲ್ಲಿಡುತ್ತದೆ ಮತ್ತು ಮೆಟ್ರೋಪಾಲಿಟನ್ ದೇಶಗಳಿಗೆ ಪೂರೈಕೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಗಳ ಮೂಲಕ ನವ ಉದಾರವಾದಿ ಆಳ್ವಿಕೆಯು ಉಂಟುಮಾಡುವ ಒಟ್ಟಾರೆ ಪರಿಣಾಮವೆಂದರೆ, ಮೂರನೆಯ ಜಗತ್ತಿನ ದೇಶಗಳಲ್ಲಿ ನಿವ್ವಳ ತಲಾ ಆಹಾರಧಾನ್ಯ ಲಭ್ಯತೆಯನ್ನು ಕಡಿಮೆ ಮಾಡುವುದು ಮತ್ತು ಮೆಟ್ರೋಪಾಲಿಟನ್ ದೇಶಗಳಿಂದ ಬೇಡಿಕೆ ಇರುವ ಬೆಳೆಗಳನ್ನು ಬೆಳೆಯುವಂತೆ ಮಾಡುವುದು. ಕರಾರುವಾಕ್ಕಾಗಿ ಇದನ್ನೇ ನಾವು ಕಾಣುತ್ತಿದ್ದೇವೆ.

ಮೂರನೆಯ ಜಗತ್ತಿನ ದೇಶಗಳಿಗೆ ಸಾಮ್ರಾಜ್ಯಶಾಹಿಯು ಉಂಟು ಮಾಡಿದ ಇನ್ನೊಂದು ಪರಿಣಾಮವೆಂದರೆ, ವೇತನಗಳ ವ್ಯತ್ಯಾಸದ ಸಮಸ್ಯೆಯೇ. ವಸಾಹತುಶಾಹಿಯ ಅಪ-ಕೈಗಾರಿಕೀಕರಣವು ಸೃಷ್ಟಿಸಿದ ಬೃಹತ್ ಶ್ರಮ ಮೀಸಲು ಪಡೆಯು ಈ ದೇಶಗಳಲ್ಲಿ ನಿಜ ವೇತನವನ್ನು ಬರಿಯ ಒಂದು ಜೀವನಾಧಾರದ ಮಟ್ಟಕ್ಕೆ ಕಟ್ಟಿಹಾಕಿತು. ಅದೇ ಸಮಯದಲ್ಲಿ, ಮೆಟ್ರೋಪಾಲಿಟನ್ ದೇಶಗಳಲ್ಲಿ, ಶ್ರಮಿಕ ಉತ್ಪಾದಕತೆ ಹೆಚ್ಚಿದಂತೆಲ್ಲಾ ಶ್ರಮಿಕರ ನಿಜ ವೇತನವೂ ಹೆಚ್ಚುತ್ತಿತ್ತು. ಈ ಎರಡು ಪ್ರದೇಶಗಳ ವೇತನಗಳ ನಡುವಿನ ಅಂತರದ ಲಾಭ ಪಡೆಯಲು ಮೆಟ್ರೋಪಾಲಿಟನ್ ದೇಶಗಳ ಬಹುರಾಷ್ಟ್ರೀಯ ಸಂಸ್ಥೆಗಳು ಈಗ ತಮ್ಮ ಕಾರ್ಖಾನೆಗಳನ್ನು ಮೂರನೇ ಜಗತ್ತಿನ ದೇಶಗಳಲ್ಲಿ ನೆಲೆಗೊಳಿಸಲು ಸಿದ್ಧವಾಗಿವೆ, ಸ್ಥಳೀಯ ಮಾರುಕಟ್ಟೆಯ ಅಗತ್ಯಗಳಿಗಾಗಿ ಅಲ್ಲ, ಬದಲಿಗೆ, ವಿಶ್ವ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ಸಲುವಾಗಿ. ಮೆಟ್ರೋಪಾಲಿಟನ್ ದೇಶಗಳಿಂದ ಜರುಗುತ್ತಿರುವ “ಕೆಳ-ದರ್ಜೆಯ” ಅಥವಾ ಹೆಚ್ಚೇನೂ ಕೌಶಲ ಬೇಕಿರದ ಚಟುವಟಿಕೆಗಳ ಈ ಸ್ಥಳಾಂತರವು ಆ ಮೂರನೇ ಜಗತ್ತಿನ ದೇಶಗಳಲ್ಲಿರುವ ಶ್ರಮ ಮೀಸಲುಗಳನ್ನು ಹೀರಿಕೊಳ್ಳುವಷ್ಟು ಪ್ರಮಾಣದಲ್ಲಿಲ್ಲ. ಹಾಗಾಗಿ, ಈ ದೇಶಗಳಲ್ಲಿ ಬರಿಯ ಜೀವನಾಧಾರದ ಮಟ್ಟದಲ್ಲೇ ಉಳಿದಿರುವ ನಿಜ ವೇತನ ಮುಂದುವರೆಯುತ್ತದೆ ಮತ್ತು ವರಮಾನದ ಸಂಕೋಚನವು (ಬೇಡಿಕೆಯ ಸಂಕೋಚನದ ಮೂಲಕ ಉಂಟಾಗುವ ವರಮಾನಗಳ ಸಂಕೋಚನದ ಬಗ್ಗೆ ಈ ಹಿಂದೆ ಉಲ್ಲೇಖಿಸಲಾಗಿದೆ) ಉಲ್ಬಣಗೊಳ್ಳುತ್ತದೆ. ಮೂರನೇ ಜಗತ್ತಿನ ಮಧ್ಯಮ-ವರಮಾನದ ಉದ್ಯೋಗ ಸನ್ನಿವೇಶವೂ ಸೇರಿದಂತೆ ಈ ವಿದ್ಯಮಾನವು ನಗರಗಳ ಬೆಳವಣಿಗೆಯ ಮೂಲ ಕಾರಣವೂ ಆಗಿದೆ.

ಇಬ್ಬಗೆಯ ಸಮಾಜದ ಸೃಷ್ಟಿ

ಸಾಮ್ರಾಜ್ಯಶಾಹಿಯ ಈ ಎರಡು ಪರಿಣಾಮಗಳು ಮೂರನೆಯ ಜಗತ್ತಿನಲ್ಲಿ ಒಂದು ಇಬ್ಬಗೆಯ ಸಮಾಜವನ್ನು ಸೃಷ್ಟಿಸುತ್ತವೆ. ವಿದೇಶಿ ಬಂಡವಾಳವು ಸಕ್ರಿಯವಾಗಿದ್ದ ಮೂರನೇ ಜಗತ್ತಿನ ದೇಶಗಳಲ್ಲಿ “ಆವೃತ್ತಪ್ರದೇಶ”(enclaves)ಗಳನ್ನು ಸೃಷ್ಟಿಸಿದ್ದ ವಸಾಹತುಶಾಹಿಯು ಅಂತಹ ಇಬ್ಬಗೆಯ ಸಮಾಜವನ್ನು ಹೇಗೂ ಹುಟ್ಟುಹಾಕಿತ್ತು. ವಸಾಹತುಶಾಹಿಯ ನಿರ್ಗಮನದ ನಂತರದ ಮೂರನೇ ಜಗತ್ತಿನ ದೇಶಗಳಲ್ಲಿ ವಸಾಹತುಶಾಹಿ-ವಿರೋಧಿ ಹೋರಾಟದ ಆಧಾರದ ಮೇಲೆ ಹೊರಹೊಮ್ಮಿದ ಪ್ರಭುತ್ವವು ಈ ಇಬ್ಬಗೆಯ ಸಮಾಜವನ್ನು ಕೊನೆಗೊಳಿಸಲು ಬದ್ಧವಾಗಿತ್ತು. ಆದರೆ, ನಿಯಂತ್ರಣ ನೀತಿಯ (dirigiste) ಆಳ್ವಿಕೆಯನ್ನು ಬದಲಿಸಿದ ನವ ಉದಾರವಾದವು ಈ ಎರಡರ ನಡುವಿನ ಅಂತರವು ಕಾಲಕ್ರಮದಲ್ಲಿ ಹೆಚ್ಚುತ್ತಿದ್ದಂತೆಯೇ ಮೂರನೇ ಜಗತ್ತಿನಲ್ಲಿ ಈ ಇಬ್ಬಗೆಯ ಸಮಾಜದ ಪ್ರವೃತ್ತಿಯನ್ನು ಮರು-ಹುಟ್ಟಿಸಿದೆ.

ಖಚಿತವಾಗಿ ಹೇಳುವುದಾದರೆ, ಮೂರನೇ ಜಗತ್ತಿನ ವರ್ಧಿಸುತ್ತಿರುವ “ಆಧುನಿಕ” ವಿಭಾಗದ ಕಾರ್ಮಿಕರು ಮತ್ತು ಬೆಳವಣಿಗೆ ನಿಂತು ಹೋದ ಅಥವಾ ಅವನತಿ ಹೊಂದುತ್ತಿರುವ ರೈತ ಕೃಷಿ ಹಾಗೂ ಕಿರು ಉತ್ಪಾದನೆಯಂತಹ ವಿಭಾಗದಲ್ಲಿ ದುಡಿಯುತ್ತಿರುವವರ ನಡುವಿನ ಅಂತರವು ಹೆಚ್ಚಾಗುವುದಿಲ್ಲ. ಏಕೆಂದರೆ, ವೃದ್ಧಿಸುತ್ತಿರುವ ಮತ್ತು ಬೃಹತ್ ಗಾತ್ರದ ಶ್ರಮ ಮೀಸಲುಗಳು “ಆಧುನಿಕ” ಕೆಲಸಗಾರರ ನಿಜ ವೇತನ ದರವನ್ನು ಕೆಳ ಮಟ್ಟದಲ್ಲಿ ಇಡುತ್ತವೆ. ಅದೇ ರೀತಿಯ ಪರಿಣಾಮವನ್ನು, ಗಮನಾರ್ಹ ಮಟ್ಟದ ಹಣದುಬ್ಬರವನ್ನು ಉಂಟುಮಾಡದೆ ಮೆಟ್ರೊಪಾಲಿಟನ್ ದೇಶಗಳ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಉಷ್ಣವಲಯದ ಭೂ-ಪ್ರದೇಶಗಳಿಗೆ ವಿಧಿಸಲಾದ ಬೇಡಿಕೆಯ ಸಂಕೋಚನವು ಇನ್ನೊಂದು ವಿಭಾಗದ ಮೇಲೆ ಉಂಟುಮಾಡುತ್ತದೆ. ಹಾಗಾಗಿ, ಎರಡೂ ವಿಭಾಗದ ಕಾರ್ಮಿಕರೂ ಬಲಿಪಶುಗಳೇ. ಆದರೆ, ಒಂದು ಕಡೆಯಲ್ಲಿ “ಆಧುನಿಕ” ವಿಭಾಗದಲ್ಲಿ ತೊಡಗಿರುವ ಮೇಲ್ಮಧ್ಯಮ ಆದಾಯದ ವೃತ್ತಿಪರರ ಮತ್ತು ಸ್ಥಳೀಯ ದೊಡ್ಡ ಬೂರ್ಜ್ವಾಗಳು ಮತ್ತು ಇನ್ನೊಂದೆಡೆಯಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಈ ಎರಡೂ ವಿಭಾಗಗಳಲ್ಲಿ ತೊಡಗಿರುವ ದುಡಿಯುವ ಜನರು ಇವರ ನಡುವಿನ ಅಂತರವು ಸ್ಪಷ್ಟವಾಗಿ ಹೆಚ್ಚಾಗುತ್ತಿದೆ. ಈ ಅಂಶವು ಕೂಡ ಒಂದು ಪ್ರಾದೇಶಿಕ ಆಯಾಮವನ್ನು ಸಹ ಹೊಂದಿದೆ, ಇದು ಸ್ಪಷ್ಟವಾಗಿ ಗ್ರಾಮೀಣ-ನಗರ ಇಬ್ಭಾಗದಲ್ಲಿ ಪ್ರಕಟಗೊಳ್ಳುತ್ತದೆ.

ಗ್ರಾಮೀಣ-ನಗರ ಇಬ್ಭಾಗ

ಈ ಬೆಳೆಯುತ್ತಿರುವ ಗ್ರಾಮೀಣ-ನಗರ ಇಬ್ಭಾಗವು ಭಾರತದ ಅಧಿಕೃತ ದತ್ತಾಂಶಗಳಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತದೆ. ನಗರ ಭಾರತದಲ್ಲಿ ಪ್ರತಿ ವ್ಯಕ್ತಿಯು ದಿನಕ್ಕೆ 2100 ಕ್ಯಾಲೊರಿಗಳಿಗಿಂತ ಕಡಿಮೆ ಆಹಾರ ಸೇವಿಸುವವರು ಮತ್ತು ಗ್ರಾಮೀಣ ಭಾರತದಲ್ಲಿ 2200 ಕ್ಯಾಲೊರಿಗಳಿಗಿಂತ ಕಡಿಮೆ ಆಹಾರ ಸೇವಿಸುವವರು ಬಡವರು ಎಂಬ ವ್ಯಾಖ್ಯಾನದ ಪ್ರಕಾರ ಪೌಷ್ಟಿಕಾಂಶ-ಬಡತನದ ಅಗಾಧತೆಯನ್ನು ನೋಡುವುದಾದರೆ, ಈ ಪ್ರಮಾಣಕ್ಕಿಂತ ಕೆಳಗಿನ ಆಹಾರಸೇವನೆಯ ನಗರ ಜನಸಂಖ್ಯೆಯ ಪ್ರಮಾಣವು 1993-94ರಲ್ಲಿದ್ದ ಶೇ. 57ರಿಂದ 2017-18ರ ವೇಳೆಗೆ ಸುಮಾರು ಶೇ. 60ಕ್ಕೆ ಏರಿಕೆಯಾಗಿತ್ತು. ಗ್ರಾಮೀಣ ಭಾರತದಲ್ಲಿ ಈ ಪ್ರಮಾಣವು ಇದೇ ಅವಧಿಯಲ್ಲಿ ಶೇ. 58ರಿಂದ ಶೇ. 80ಕ್ಕಿಂತಲೂ ಹೆಚ್ಚಿಗೆ ಇತ್ತು. (ಈ ಲೆಕ್ಕಾಚಾರಗಳನ್ನು ಉತ್ಸಾ ಪಟ್ನಾಯಕ್ ಅವರು ತಮ್ಮ ಮುಂಬರಲಿರುವ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ; ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶಗಳು ತೋರಿಸಿದ ಚಿತ್ರಣವು ಕಳಪೆಯಾಗಿತ್ತು ಎಂಬ ಕಾರಣದಿಂದ ಭಾರತ ಸರ್ಕಾರವು ಈ ದತ್ತಾಂಶಗಳನ್ನು ಹಿಂತೆಗೆದುಕೊಂಡಿದೆ). ವಾಸ್ತವಾಂಶವೆಂದರೆ, ನವ-ಉದಾರವಾದಿ ನೀತಿಯನ್ನು ಆಕ್ರಮಣಕಾರಿಯಾಗಿ, ಯಾವ ನಾಚಿಕೆಯೂ ಇಲ್ಲದೆ ಅನುಸರಿಸಿದ ಎನ್‌ಡಿಎ ಸರ್ಕಾರದ ಅಡಿಯಲ್ಲಿ ಈ ಇಬ್ಭಾಗ ಇನ್ನೂ ಅಗಾಧವಾಗಿ ಬೆಳೆದಿದೆ.

ಅರ್ಥವ್ಯವಸ್ಥೆಯ ಎರಡು ವಿಭಾಗಗಳ ನಡುವೆ ಇಂತಹ ಎದ್ದುಕಾಣುವ ಮತ್ತು ಹೆಚ್ಚುತ್ತಿರುವ ಇಬ್ಭಾಗದ ಹಿನ್ನೆಲೆಯಲ್ಲಿ, ಆರ್ಥಿಕ ಯೋಗಕ್ಷೇಮದ ಅಳತೆಗೆ ಜಿಡಿಪಿಯಂತಹ ಎಲ್ಲವನ್ನೂ ಆವರಿಸುವ ಮಾಪಕವು ವಾಸ್ತವವನ್ನು ಮರೆಮಾಚುವ ಒಂದು ಸಾಧನವಾಗುತ್ತದೆ. ವರಮಾನದ ಹೆಚ್ಚುತ್ತಿರುವ ಅಸಮಾನತೆಯಿಂದಾಗಿ ಜಿಡಿಪಿ ಆರ್ಥಿಕ ಯೋಗಕ್ಷೇಮದ ಅಳತೆಗೆ ಅಸಂಗತವಾಗುತ್ತದೆ ಎಂಬುದನ್ನಂತೂ ಒಪ್ಪಿಕೊಳ್ಳಲಾಗುತ್ತದೆ. ಆದರೆ ವಿಷಯ ಅಷ್ಟೇ ಅಲ್ಲ, ಹೆಚ್ಚುತ್ತಿರುವ ಈ ಅಸಮಾನತೆಯು ಒಂದು ಪ್ರಾದೇಶಿಕ ಆಯಾಮವನ್ನು ಹೊಂದಿದ್ದು, ಅದು ನವ ಉದಾರವಾದದ ಪ್ರಾಬಲ್ಯದ ಅಡಿಯಲ್ಲಿ ಈ ಆಯಾಮವು ಆರ್ಥಿಕವಾಗಿ ದೇಶವನ್ನು ಮತ್ತೊಮ್ಮೆ ಇಬ್ಭಾಗಿಸುತ್ತದೆ. ನವ-ಉದಾರವಾದದ ಈ ಪ್ರಾಬಲ್ಯ ಸಾಮ್ರಾಜ್ಯಶಾಹಿಯ ಮರು-ಪ್ರತಿಪಾದನೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ, ಜಿಡಿಪಿಯ ಬಳಕೆಯು ಸಮಾಜದ ಸಂರಚನೆಯಲ್ಲಿ ಸಾಮ್ರಾಜ್ಯಶಾಹಿಯು ಉಂಟುಮಾಡಿರುವ ಮತ್ತು ಬೆಳೆಯುತ್ತಿರುವ ಇಬ್ಬಾಗವನ್ನು ಮುಚ್ಚಿಡುವ ಕೆಲಸವನ್ನು ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಸಾಮ್ರಾಜ್ಯಶಾಹಿಯ ಕಾರ್ಯಾಚರಣೆಯನ್ನು ಮರೆಮಾಚುವ ಕಾರ್ಯವನ್ನು ನಿರ್ವಹಿಸುತ್ತದೆ.

ಅಷ್ಟೇ ಅಲ್ಲ. ಭಾರತದಲ್ಲಿ ಜಿಡಿಪಿಯ ಎಲ್ಲ ಪ್ರಾಥಮಿಕ ಅಂದಾಜುಗಳೂ ಬೃಹತ್-ಉತ್ಪಾದನಾ ವಲಯದ ದತ್ತಾಂಶವನ್ನೇ ಆಧರಿಸಿವೆ. ಈ ಬೃಹತ್-ಉತ್ಪಾದನಾ ವಲಯದ ಬೆಳವಣಿಗೆಯ ದರವನ್ನೇ, ಅನೇಕ ಪ್ರಕರಣಗಳಲ್ಲಿ, ಸಣ್ಣ-ಪ್ರಮಾಣದ ಉತ್ಪಾದನಾ ವಲಯಕ್ಕೂ ಒಂದು “ತಾತ್ಕಾಲಿಕ” ಕ್ರಮವಾಗಿ ಅನ್ವಯಿಸಲಾಗುತ್ತದೆ. ಆದರೆ, ಈ ಕ್ರಮವು, ಸೊರಗುತ್ತಿರುವ ಸಣ್ಣ-ಪ್ರಮಾಣದ ಉತ್ಪಾದನಾ ವಲಯವೂ ಬೃಹತ್-ಉತ್ಪಾದನಾ ವಲಯದಂತೆಯೇ ವೇಗವಾಗಿ ಬೆಳೆಯುತ್ತಿದೆ ಎಂಬುದಾಗಿ ಸೂಚಿಸುತ್ತದೆ. ಇದು ಸತ್ಯದ ಒಂದು ಅಣಕವಾಗಿದೆ. ಜಿಡಿಪಿ

ವಿಡಿಯೋ ನೋಡಿಜಿಡಿಪಿ ಕುಸಿತಕ್ಕೆ ಕಾರಣ ಯಾರು? ಮೋದಿ ಸರಕಾರದ ನೀತಿಗಳಾ! ಅಥವಾ ದೇವರಾ!!

 

 

 

Donate Janashakthi Media

Leave a Reply

Your email address will not be published. Required fields are marked *