-ಪ್ರೊ. ಟಿ. ಆರ್. ಚಂದ್ರಶೇಖರ
ಭಾರತದ ಮತದಾರರು 18ನೆಯ ಲೋಕಸಭೆಯ ಚುನಾವಣೆಯಲ್ಲಿ ಸ್ಪಷ್ಟವಾಗಿ ಸರ್ಕಾರದ ಆರ್ಥಿಕ ನೀತಿ ಏನಾಗಿರಬೇಕು ಎಂಬುದನ್ನು ತೋರಿಸಿದ್ದಾರೆ. ಈ ಜನಾದೇಶವು 2024-25ರ ಪೂರ್ಣ ಬಜೆಟ್ಟಿನಲ್ಲಿ ಅಭಿವ್ಯಕ್ತವಾಗಬೇಕು. ಉದ್ಯೋಗ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ದೊರೆಯಬೇಕು. ಬೆಲೆ ಏರಿಕೆಯನ್ನು, ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಇದನ್ನು ನಿಯಂತ್ರಿಸಲು ಬಜೆಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಘೋಷಿಸಬೇಕು.‘ಪೂರೈಕೆ-ಪಣೀತ ಆರ್ಥಿಕ ನೀತಿ’ ಯನ್ನು ಅನುಸರಿಸುತ್ತಾ ಬಂದಿದೆ. ಇದಕ್ಕೆ 2024-25ರ ಪೂರ್ಣ ಬಜೆಟ್ ಕೊನೆ ಹಾಡಬೇಕು.
ಸಮಗ್ರ ಬೇಡಿಕೆಯನ್ನು ಬಲಪಡಿಸುವುದು ಪ್ರಸ್ತುತ ಬಜೆಟ್ಟಿನ ಮೂಲ ನೆಲೆಯಾಗಬೇಕು. ಮೋದಿ ಸರ್ಕಾರದ ಆರ್ಥಿಕ-ಸಾಮಾಜಿಕ ನೀತಿ ಬದಲಾಗುತ್ತದೆ ಎಂದು ನಂಬುವುದು ಕಷ್ಟ. ಜನಾದೇಶವನ್ನು, ಸಂಸತ್ತಿನಲ್ಲಿ ಹೆಚ್ಚಿರುವ ವಿರೋಧಪಕ್ಷಗಳ ಬಲವನ್ನು, ಸಾಮಾಜಿಕ ಮಾಧ್ಯಮವನ್ನು, ಸ್ವಂತ ಸರ್ಕಾರ ರಚನೆಗೆ ಅವಶ್ಯಕವಾದ ಸಂಸತ್ ಸ್ಥಾನಗಳನ್ನು ಪಡೆಯದಿರುವ ಸ್ಥಿತಿಯನ್ನು, ಬೆಂಬಲ ನೀಡುತ್ತಿರುವ ಪಕ್ಷಗಳ ಮೇಲಿನ ಅವಲಂಬನೆ ಮುಂತಾದ ಸೂಕ್ಷ್ಮ ಸಂಗತಿಗಳನ್ನು, ಸಮ್ಮಿಶ್ರ ಸರ್ಕಾರದ ವಾಸ್ತವವನ್ನು ಮೋದಿ ನಿರ್ಲಕ್ಷಿಸುವುದು ಅಷ್ಟೊಂದು ಸುಲಭವಲ್ಲ.
ಇದನ್ನೂ ಓದಿ: ಆಪರೇಷನ್ ಕಮಲ | ಎಎಪಿ ಶಾಸಕ ಕರ್ತಾರ್ ಸಿಂಗ್, ಮಾಜಿ ಸಚಿವ ರಾಜ್‌ಕುಮಾರ್ ಬಿಜೆಪಿ ಸೇರ್ಪಡೆ
ಪ್ರಸಿದ್ಧ ಪತ್ರಕರ್ತ–ಅಂಕಣಗಾರ ಸಿ. ರಾಮಮನೋಹರ ರೆಡ್ಡಿ ಅವರು 18ನೆಯ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಬರೆಯುತ್ತಾ (‘ಆನ್ ಅರ್ಥಕ್ವೇಕ್ ಇನ್ 2024, ಆಸ್ ಇಟ್ ವಾಸ್ ಇನ್ 1977’, ದಿ ಹಿಂದು, ಜೂನ್ 13,2024) ನಗರವಾಸಿ ಮತದಾರರು, ಸುಶಿಕ್ಷಿತ ಅಥವಾ ಮಧ್ಯಮ ವರ್ಗಕ್ಕೆ ಸೇರಿದವರಿಗೆ ಬದಲಾಗಿ ಗ್ರಾಮೀಣವಾಸಿ, ಸಮಾಜದ ಅಂಚಿನಲ್ಲಿರುವ, ನಿರುದ್ಯೋಗಿ ಮತದಾರರು ಕಳೆದ 10 ವರ್ಷಗಳಿಂದ ಒಂದು ರೀತಿಯ ಭ್ರಮಾತ್ಮಕ ಸುಳ್ಳುಗಳನ್ನೇ ಮುಗ್ದ ಜನರ ತಲೆಯಲ್ಲಿ ತುಂಬಿದ್ದ ಮೋದಿ ಪ್ರಭುತ್ವವನ್ನು ‘ಇನ್ನು ಸಾಕು’ ಎಂದು ಹೇಳಿ ಸರ್ವಾಧಿಕಾರಿ ಆಳ್ವಿಕೆಯನ್ನು ಕೆಳಗುರುಳಿಸಿದ್ದಾರೆ ಎಂಬ ಅರ್ಥದ ಮಾತುಗಳನ್ನಾಡಿದ್ದಾರೆ.
ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗದಿದ್ದರೂ ಭಾರತದ ಪೌಢ ಮತದಾರರು ಪ್ರಜಾಪ್ರಭುತ್ವವನ್ನು-ಸಂವಿಧಾನವನ್ನು ಚುನಾವಣೆಯ ಮುನ್ನೆಲೆಗೆ ತಂದು ಬಿಜೆಪಿಯನ್ನು ಮಣಿಸಿದ್ದಾರೆ. ಇದರ ಬಗ್ಗೆ ನಿಜಕ್ಕೂ ಮೋದಿ ಮತ್ತು ಬಿಜೆಪಿಗೆ ತಮ್ಮನ್ನು ಮಕಾಡೆ ಮಲಗಿಸಿದವರು ಯಾರು ಎಂಬುದರ ಬಗ್ಗೆ ಜ್ಞಾನೋದಯವಾಗಿದ್ದರೆ2024-25ರ ಪೂರ್ಣ ಬಜೆಟ್ಟಿನಲ್ಲಿ ಆರ್ಥಿಕ ಆದ್ಯತೆಗಳು ಯಾರನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂಬುದು ಸ್ಪಷ್ಟವಾಗಿ ಗೋಚರಿಸಬೇಕು.
ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ‘ಜಿಡಿಪಿ-ವರಮಾನ–ವ್ಯಸನ’ ದಿಂದ ರೋಗಿಷ್ಟವಾಗಿದ್ದ ಮೋದಿ ಸರ್ಕಾರ ಹೊರಬಂದು ಜನರ, ಅಂದರೆ ದಿನಗೂಲಿಗಳ, ಕಾರ್ಮಿಕರ, ರೈತರ, ಮಹಿಳೆಯರ, ಯುವಜನತೆಯ ಬದುಕನ್ನು ಸಮೃದ್ಧಗೊಳಿಸುವ ಕಾರ್ಯ ಯೋಜನೆಗಳು ಜುಲೈ 23 ರಂದು ಮಂಡನೆಯಾಗಲಿರುವ 2024-25ರ ಪೂರ್ಣ ಬಜೆಟ್ಟಿನಲ್ಲಿ ಮೂಲದ್ರವ್ಯವಾಗಬೇಕು. ಅಮರ್ತ್ಯಸೆನ್ ಬಹಳ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ‘ಅಭಿವೃದ್ದಿ ಎಂಬುದು ಜನರ ಬದುಕಿನ ಸಮೃದ್ಧತೆ ಪ್ರಣಾಳಿಕೆಯೇ ವಿನಾ ಅದು ಆರ್ಥಿಕ ಸಮೃದ್ಧತೆಯ ಸಂಗತಿಯಲ್ಲ’ ಎಂಬುದನ್ನು ಮೋದಿ ಅವರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು ಆರ್ಥಿಕ ಅಭಿವೃದ್ಧಿಯನ್ನು ‘ಜಿಡಿಪಿ’ ಅಥವಾ ‘ವರಮಾನ’ ಬೆಳವಣಿಗೆಗೆ ಸೀಮಿತಗೊಳಿಸಿ ಬಿಟ್ಟಿರುವುದನ್ನು ಗಮನಿಸಬೇಕು.
ಕಳೆದ 10 ವರ್ಷಗಳಲ್ಲಿನ ಮೋದಿ ಆರ್ಥಿಕ ನೀತಿಗಳಲ್ಲಿ ಜನರು, ಜನರ ಜೀವನೋಪಾಯ, ಯುವಜನತೆಯ ಉದ್ಯೋಗ, ಆಹಾರ ಭದ್ರತೆ, ಹಸಿವು-ಅಪೌಷ್ಟಿಕತೆ ನಿವಾರಣೆ ಮುಂತಾದವು ಸ್ಥಾನವನ್ನೇ ಪಡೆದಿರಲಿಲ್ಲ. “ಐದು ಟ್ರಿಲಿಯನ್ ಡಾಲರ್ ಜಿಡಿಪಿ” ಎಂಬುದು ಅವರ ಮಂತ್ರವಾಗಿಬಿಟ್ಟಿತ್ತು. ಕಳೆದ 50 ವರ್ಷಗಳಲ್ಲಿಯೇ ನಿರುದ್ಯೋಗ ಅತ್ಯಧಿಕಮಟ್ಟವನ್ನು ಮೋದಿ ಆಳ್ವಿಕೆಯಲ್ಲಿ ಮುಟ್ಟಿದೆ ಎಂಬ ಅಧ್ಯಯನ ವರದಿಗಳ, ಸಾಂಖ್ಯಿಕ ಸಂಸ್ಥೆಗಳ ಅಂಕಿ ಸಂಖ್ಯೆಗಳನ್ನು ಮೋದಿ ಮತ್ತು ಅವರ ಸರ್ಕಾರ ಮನದಟ್ಟು ಮಾಡಿಕೊಳ್ಳಲಿಲ್ಲ. ಯುವಜನತೆಗೆ ಮೋದಿ ಅವರು ‘ಉದ್ಯೋಗಿಗಳಾಗಬೇಡಿ, ಉದ್ಯೋಗಧಾತರಾಗಿ’ ಎಂಬ ಹುಸಿ ಸಂದೇಶವನ್ನು-ಜುಟ್ಟಿಗೆ ಮಲ್ಲಿಗೆ ಹೂವು ಮುಡಿಸುವ ಕೆಲಸ ಮಾಡುತ್ತಾ ಬಂದರು.
ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಮ್ಮಿಕೊಂಡ ಹತ್ತಾರು ಕಾರ್ಯಕ್ರಮಗಳಲ್ಲಿ ಯುವಜನತೆಗೆ ನೇರವಾಗಿ ಉದ್ಯೋಗ ನೀಡುವ ಒಂದೂ ಕೂಡ ಇರಲಿಲ್ಲ ಎಂಬುದು ಅವರ ಆರ್ಥಿಕ ನೀತಿಯ ಬಗೆಗಿನ ಅತ್ಯಂತ ಸೌಮ್ಯ ಟೀಕೆಯಾದೀತು. ಪಿಎಂ ಸ್ವನಿಧಿ, ಪಿಎಂ. ಮುದ್ರಾ ಯೋಜನೆ, ದನಜನ ಯೋಜನೆ, ಸ್ಟ್ರಾಟ್ ಆಪ್ ಇಂಡಿಯ, ಸ್ಟಾಡ್ ಅಪ್ ಇಂಡಿಯಾ, ಪಿಎಂ ವಿಶ್ವಕರ್ಮ, ಮೇಕ್-ಇನ್ ಇಂಡಿಯಾ, ಸ್ಟ್ರೀಟ್ ವೆಂಡರ್ ಆತ್ಮನಿರ್ಭರ ನಿಧಿ, ಮಿಷನ್ ಕರ್ಮಯೋಗಿ, ಸಹಕಾರ ಮಿತ್ರೋ ಯೋಜನೆ ಇತ್ಯಾದಿ ಯಾವುವೂ ನೇರವಾಗಿ ಯುವಜನತೆಗೆ ಉದ್ಯೋಗ ನೋಡುವ ಕಾರ್ಯಕ್ರಮಗಳಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರವು ಕೈಗಾರಿಕೋದ್ಯಮಿಗಳನ್ನು, ಬಂಡವಳಿಗರನ್ನು, ಹೂಡಿಕೆದಾರರನ್ನು ಓಲೈಸುತ್ತಾ ಬಂದಿದೆ. ಉದಾ: ಮೋದಿ ಮತ್ತು ವಿತ್ತ ಮಂತ್ರಿ ಅವರು ಉದ್ಯಮಿಗಳನ್ನು ‘ವೆಲ್ಥ್‌ಕ್ರಿಯೇಟರ್ಸ್ʼ ಎಂದು ವೈಭವೀಕರಿಸುತ್ತಾ ಅವರನ್ನು ಅನುಮಾನದಿಂದ ನೋಡಬಾರದು ಎಂಬ ಬೋಧನೆಯನ್ನು ಮಾಡುತ್ತಾ ಬಂದಿದ್ದರು. ಗೌತಮ್ ಆದಾನಿ ಎಂಬ ಉದ್ಯಮಿಯನ್ನುಆರಾಧಿಸುತ್ತಾ ಬಂದಿದ್ದರಿಂದಅ ನೇಕರು ಮೋದಿ ಅವರಿಗೆ ‘ಮೋದಾನಿ’ (ಮೋದಿ + ಆದಾನಿ) ಎಂದು ನಾಮಕರಣ ಮಾಡಿದ್ದರು. ಕಾರ್ಮಿಕ ವರ್ಗವನ್ನು ಉದ್ಯಮಿಗಳಿಗೆ ವಿರೋಧಿಗಳು ಎಂಬಂತೆ, ‘ಅಭಿವೃದ್ಧಿಗೆ ಅಡ್ಡಿʼ ಎಂದು ಭಾವಿಸಿ ಕಾರ್ಮಿಕ ಸಂಘಟನೆಗಳನ್ನು, ಕಾರ್ಮಿಕ ವರ್ಗವನ್ನು ಹೈರಾಣಗೊಳಿಸುವ ನಾಲ್ಕು ಲೇಬರ್ ಕೋಡುಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದು ನಮ್ಮ ಮುಂದಿದೆ.
ಕಳೆದ ಹತ್ತು ವರ್ಷಗಳ ಮೋದಿ ಆಳ್ವಿಕೆಯಲ್ಲಿ ಹೆಚ್ಚು ತಿರಸ್ಕಾರಕ್ಕೆ ಒಳಗಾದ ಸಾಂವಿಧಾನಿಕ ಸಂಗತಿಯೆಂದರೆ ‘ಒಕ್ಕೂಟ ತತ್ವ’ ಮತ್ತು‘ಒಕ್ಕೂಟ ತೆರಿಗೆ ಹಣ ವರ್ಗಾವಣೆ’ ನಿಯಮ. ಈ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೋದಿಯ ಭಾರತ ಒಕ್ಕೂಟ ಸರ್ಕಾರದ ವಿರುದ್ಧತಿರುಗಿ ಬಿದ್ದಿದ್ದು, ಈ ವಿಷಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಿದ್ದು ಇಂದು ಮೋದಿ (ಕು) ಚರಿತ್ರೆಯಲ್ಲಿ ಒಂದು ಪ್ರಮುಖ ವಿದ್ಯಮಾನವಾಗಿ ಉಳಿಯುತ್ತದೆ. ನೆಹರೂ ಯುಗದಲ್ಲಿ ಉದ್ದಿಮೆಗಳು, ನೀರಾವರಿ ಯೋಜನೆಗಳು ‘ಆಧುನಿಕ ದೇವಾಲಯಗಳು’ ಎಂಬ ಅಭಿದಾನಕ್ಕೆ ಒಳಗಾಗಿದ್ದರೆ ಮೋದಿ ಆಳ್ವಿಕೆಯಲ್ಲಿ ದೇವಾಲಯ ನಿರ್ಮಾಣವೇ ಒಂದು ಆದ್ಯತೆಯ ಕಾರ್ಯಕ್ರವಾಗಿ ಬಿಟ್ಟಿದ್ದು ಒಂದು ರಾಜಕೀಯ ದುರಂತ. ಮತಾಂದತೆ, ಕೋಮುವಾದ, ಮುಸ್ಲಿಮ್ ತೆಗಳಿಕೆ-ಹೀಯಾಳಿಕೆ-ಲಿಂಚಿಂಗ್(ಹೇಟ್). ಸಿಎಎ ಮುಂತಾದ ಕ್ಷುದ್ರ ಸಂಗತಿಗಳನ್ನು ಭಾರತದ ಮತದಾರರು ತಿರಸ್ಕರಿಸಿದ್ದಾರೆ. ಇದು 18ನೆಯ ಲೋಕಸಭೆಯ ಚುನಾವಣೆಯ ದೊಡ್ಡ ಪಾಠವಾಗಿದೆ.
ಸಂಪತ್ತಿನತೆರಿಗೆ ಮತ್ತೆ ವಿಧಿಸಬೇಕು
ಇಂದು ನಮ್ಮ ಆರ್ಥಿಕತೆಯು ಎದುರಿಸುತ್ತಿರುವ ಯಮ ಸದೃಶ ಸಮಸ್ಯೆಯೆಂದರೆ ಹಿಮಾಲಯದೆತ್ತರಕ್ಕೆ ಏರಿಕೆಯಾಗಿರುವ ‘ವರಮಾನ ಮತ್ತು ಸಂಪತ್ತಿನ ಅಸಮಾನತೆ’. ವರ್ಲ್ಡ್ ಇನೀಕ್ವಾಲಿಟಿ ಲ್ಯಾಬ್ 2024ರಲ್ಲಿ ಪ್ರಕಟಿಸಿರುವ ಥಾಮಸ್ ಪಿಕೆಟ್ಟಿ ಹಾಗೂ ಇತರರ ಪ್ರಬಂಧದಲ್ಲಿ ಭಾರತದ ಮೇಲ್ವರ್ಗದ ಶೇ. 10 ರಷ್ಟು ಜನರು ಒಟ್ಟು ವರಮಾನದಲ್ಲಿ ಶೇ. 57.7 ರಷ್ಟನ್ನುನುಂಗಿ ನೊಣೆಯುತ್ತಿದ್ದರೆ ಉಳಿದ ಶೇ. 90 ರಷ್ಟುಜನರು ಪಡೆದಿರುವ ಪಾಲು ಶೇ. 42.3. ಇದೇರೀತಿಯಲ್ಲಿ ಮೇಲ್ವರ್ಗದ ಶೇ. 10 ರಷ್ಟು ಶ್ರೀಮಂತರು ಒಟ್ಟು ಸಂಪತ್ತಿನಲ್ಲಿ ಪಡೆದಿರುವ ಪಾಲು ಶೇ. 65 ರಷ್ಟಾಗಿದ್ದರೆ ಉಳಿದ ಶೇ. 90ರ ರಷ್ಟುಕಡುಬಡವರ ಪಾಲು ಕೇವಲ ಶೇ. 35.
ಈ ಅಸಮಾನತೆಯ ಪ್ರಮಾಣವು 1991ರಿಂದ ವೇಗವಾಗಿ ಏರಿಕೆಯಾಗುತ್ತ್ತಿದ್ದರೆ ಮೋದಿ ಅವಧಿಯಲ್ಲಿ ಇದು ಅತ್ಯಂತ ತೀವ್ರಮಟ್ಟದಲ್ಲಿ ಏರಿಕೆಯಾಗಿರುವ ಸಾಧ್ಯತೆಯನ್ನು ಪಿಕೆಟ್ಟಿ ತಮ್ಮ ಅಧ್ಯಯನದಲ್ಲಿ ತೋರಿಸಿದ್ದಾರೆ. ಲೋಕಸಬೆಯ ಚುನಾವಣೆಯ ಸಂದರ್ಭದಲ್ಲಿ ವರಮಾನದ ವಿತರರಣೆಯ ಬಗ್ಗೆ ಇಲ್ಲಸಲ್ಲದ ವಿಕೃತಿಯ ದೂಳನ್ನು ಮೋದಿ ಎಬ್ಬಿಸಿದ್ದರು. ಏಕೆಂದರೆ ಬಿಜೆಪಿಗೆ ಮತ್ತು ಅದರ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ಗೆ ‘ಮರುವಿತರಣಾ ನ್ಯಾಯ’ದ ಬಗ್ಗೆ ನಂಬಿಕೆಯಿಲ್ಲ.
ಥಾಮಸ್ ಪಿಕೆಟ್ಟಿ ಅವರು ಜಾಗತಿಕವಾ ಗಿಅಸಮಾನತೆಯ ನಿವಾರಣೆಗೆ ಸಂಪತ್ತಿನ ತೆರಿಗೆಯನ್ನು ಶಿಫಾರಸ್ಸು ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಅತಿ ಶ್ರೀಮಂತರು ತೆರುತ್ತಿರುವ ತೆರಿಗೆ ಪ್ರಮಾಣವು ಕಡುಬಡವರು ತೆರುತ್ತಿರುವ ತೆರಿಗೆ ಪ್ರಮಾಣಕ್ಕಿಂತ ಕಡಿಮೆ. ಏಕೆಂದರೆ ಅತಿ ಶ್ರೀಮಂತರಲ್ಲಿ ಸಂಪತ್ತು ಮತ್ತು ವರಮಾನಗಳ ನಡುವಿನ ಅನುಪಾತ 90:10 ರಷ್ಟಿದ್ದರೆ ಕಡು ಬಡವರಲ್ಲಿ, ಕೂಲಿಕಾರ ರಲ್ಲಿ, ರೈತರಲ್ಲಿ ಇದು10:90 ರಷ್ಟಿದೆ.
ನಮ್ಮಲ್ಲಿ ವರಮಾನದ ಮೇಲೆ ಮಾತ್ರ ತೆರಿಗೆಯಿದೆ. ಸಂಪತ್ತಿನ ತೆರಿಗೆಯಿಲ್ಲ. ಇದನ್ನು 2016ರಲ್ಲಿ ಮೋದಿ ಸರ್ಕಾರ ರದ್ದು ಮಾಡಿತ್ತು. ಈ ಕಾರಣದಿಂದ ವರಮಾನಕ್ಕೆ ಸಂಬಂಧಿಸಿದಂತೆ ಬಡವರು ತೆರುವ ತೆರಿಗೆ ಅಧಿಕ; ಅತಿ ಶ್ರೀಮಂತರು ತೆರುವ ತೆರಿಗೆ ಕಡಿಮೆ. ಮೋದಿ ಸರ್ಕಾರವು ಬಂಡವಳಿಗರಿಗೆ ನೆರವು ನೀಡುವುದಕ್ಕಾಗಿ ಪ್ರತ್ಯಕ್ಷ ತೆರಿಗೆಯನ್ನು ಕಡಿಮೆ ಮಾಡುತ್ತಾ ಬಂದಿದೆ. ಉದಾ, 2019ರಲ್ಲಿ ಕಾಪೋರೇಟ್ ಇನ್ ಕಮ್ ಟ್ಯಾಕ್ಸನ್ನು ಶೇ. 30 ರಿಂದ ಶೇ. 22 ಕ್ಕೆ ಇಳಿಸಿದೆ ಮತ್ತು 2019ರ ನಂತರ ನೋಂದಣಿ ಯಾಗುವ ಉದ್ದಿಮೆಗಳಿಗೆ ಇದನ್ನು ಶೇ. 15 ರಷ್ಟು ಮಾಡಿತ್ತು. ಬಡವರು, ಕೂಲಿಕಾರರು, ಕಾರ್ಮಿಕರು, ರೈತರು ಮುಂತಾದ ದುಡಿಯುವ ವರ್ಗದ ಮೇಲೆ ಅಪ್ರತ್ಯಕ್ಷ ತೆರಿಗೆಗಳನ್ನು ದೊಡ್ಡಮಟ್ಟದಲ್ಲಿ ವಿಧಿಸಲಾಗುತ್ತಿದೆ. ಜಿಎಸ್‌ಟಿ ಸಂಗ್ರಹವು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿರುವುದನ್ನು ವಿತ್ತ ಮಂತ್ರಿ ಅವರು ದೊಡ್ಡ ಸಾಧನೆಎನ್ನುವಂತೆ ಬಣ್ಣಿಸುತ್ತಾರೆ. ಸರಕು-ಸೇವಾ ತೆರಿಗೆಯು ಬಡವರ ರಕ್ತ ಹೀರುವ ಅಪ್ರತ್ಯಕ-ಪ್ರತಿಗಾಮಿ ತೆರಿಗೆಯಾಗಿದೆ.
ಈ ಬಗೆಯ ಸಮಸ್ಯೆಗಳಿಗೆ 2024-25ರ ಪೂರ್ಣ ಬಜೆಟ್ಟಿನಲ್ಲಿ ಕ್ರಮಗಳನ್ನು ಮೋದಿ ಸರ್ಕಾರ ಪ್ರಕಟಿಸಬೇಕು. ಈ ಬಜೆಟ್ಟಿನ ಮೂಲದಲ್ಲಿ ಬಡವರ-ಹಸಿದವರ ಹಿತಾಸಕ್ತಿಗಳು ಮುಖ್ಯವಾಗಬೇಕೇ ವಿನಾ ಇದು ‘ಬಿಲಿಯನೇರ್ಸ್ ರಾಜ್’ ಅಥವಾ “ಆದಾನಿ-ಅಂಬಾನಿ” ಸಮೂಹದ ಬಜೆಟ್ ಆಗಬಾರದು.
ಎಂ.ಎಸ್.ಪಿಗೆ ಕಾನೂನು ಘೋಷಿಸಬೇಕು
ಭಾರತದ ಕೃಷಿ ಆರ್ಥಿಕತೆಯ ದುರಂತವೆಂದರೆ ಅಲ್ಲಿ ಸಮೃದ್ಧತೆಯಾದರೂ ರೈತರು ಲಾಭಾರ್ಥಿಗಳಾಗುವುದಿಲ್ಲ ಮತ್ತು ಕೃಷಿ ಕುಸಿತದಲ್ಲಿ ಅವರು ಸಹಜವಾಗಿ ಸಂತ್ರಸ್ಥರಾಗುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ಭಾರತೀಯ ರೈತರು ತಾವು ಬೆಳೆದ ಬೆಳೆಗಳಿಗೆ ‘ಕನಿಷ್ಟ ಬೆಂಬಲ ಬೆಲೆ’ ನೀಡಬೇಕು ಎಂದು ಹೋರಾಡುತ್ತಿದ್ದಾರೆ, ಈ ಕನಿಷ್ಡ ಬೆಂಬಲ ಬೆಲೆ ಎನ್ನುವುದು ಕಾನೂನಾಗಬೇಕು ಹಾಗೂ ಇದನ್ನು ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ‘ಸಮಗ್ರ ಬೆಳೆ ವೆಚ್ಚ ಸಿ 2+ಶೇ 50 ಲಾಭ’ದ ಆಧಾರದಲ್ಲಿ ನಿಗದಿಪಡಿಸಬೇಕು. ಇವೆರಡೂ ಆಗುತ್ತಿಲ್ಲ. ರೈತರ ಬಗ್ಗೆ ಮೋದಿ ಸರ್ಕಾರಕ್ಕೆ ಅಭಿಮಾನವಿಲ್ಲ. ರೈತ ಹೋರಟಗಾರರನ್ನು ‘ಆಂದೋಲನ ಜೀವಿಗಳು’, ‘ಖಲಿಸ್ಥಾನೀಯರು’, ‘ಕಮ್ಯುನಿಷ್ಟರು’ ಎಂದೆಲ್ಲ ಹೀಯಾಳಿಸಲಾಗುತ್ತಿದೆ. ಚುನಾವಣೆಯಲ್ಲಿನ ನೈತಿಕ ಸೋಲಿನ ಪಾಠದಿಂದಾಗಿಯಾದರೂ ಮೋದಿ ಸರ್ಕಾರವು ‘ಎಂಎಸ್‌ಪಿ’ಗೆ ಕಾನೂನಾತ್ಮಕ ರೂಪ ನೀಡುವುದರ ಬಗ್ಗೆ 2024-25ರ ಪೂರ್ಣ ಬಜೆಟ್ಟಿನಲ್ಲಿ ಘೋಷಿಸಬೇಕು.
ಉದ್ದಿಮೆಗಾರರನ್ನು ಬೆಂಬಲಿಸಲಿಕ್ಕಾಗಿ ಮೋದಿ ಸರ್ಕಾರವು ಪ್ರೊಡಕ್ಷನ್ ಲಿಂಕ್ಡ್ ಇನ್ ಸೆಂಟಿವ್(ಪಿಎಲ್‌ಐ)ಯೋಜನೆಯನ್ನು 2020ರಲ್ಲಿ ಆರಂಭಿಸಿದೆ. ಆಂತರಿಕ ಉದ್ದಿಮೆಗಳಿಗೆ ಅವುಗಳ ಉತ್ಪಾದನಾ ಸಾಧನೆಯ ಮೇಲೆ ಆಯ್ದ ಉದ್ದಿಮೆಗಳಿಗೆ ಉತ್ತೇಜನಾತ್ಮಕ ಸಬ್ಸಿಡಿ ನೀಡುವ ಯೋಜನೆ ಇದಾಗಿದೆ. ಆಂತರಿಕವಾಗಿ ಉತ್ಪಾದನೆಯನ್ನು ಪ್ರೋತ್ಸಾಹಿಸುವುದರ ಮೂಲಕ ಆಮದು ಹೊರೆಯನ್ನು ಕಡಿಮೆ ಮಾಡುವುದು ಇದರ ಒಂದು ಉದ್ದೇಶ. ಆದರೆ ಇದು ಮತ್ತೆ ಉಳ್ಳವರಿಗೆ ಅನುಕೂಲ ಮಾಡಿಕೊಡುವ ಯೋಜನೆಯೇ ವಿನಾ ಕೈಗಾರಿಕೆಗಳನ್ನು ದೃಢವಾಗಿ ಬೆಳೆಸುವ ಯೋಜನೆಯಲ್ಲ. ಈ ಯೋಜನೆಯು ಆಮೆಗತಿಯಲ್ಲಿ ನಡೆದಿದೆ.
ಬಜೆಟ್ ಎಂದರೆ ತೆರಿಗೆ ಕಡಿತ, ತೆರಿಗೆ ವಿನಾಯಿತಿ, ತೆರಿಗೆರಜ ಮುಂತಾದವುಗಳು ಮಾತ್ರವಲ್ಲ. ಇದಕ್ಕಿಂತ ಮುಖ್ಯವಾಗಿ ಅದರ ಸಾರ್ವಜನಿಕ ವೆಚ್ಚದ ಭಾಗ ಮುಖ್ಯವಾದುದು. ಭಾರತ ಸರ್ಕಾರದ ಬಜೆಟ್ಟಿನಲ್ಲಿನ ಸಾರ್ವ ಜನಿಕ ವೆಚ್ಚ 2014-15ರಲ್ಲಿ ರೂ.17.19 ಲಕ್ಷ ಕೋಟಿಯಿದ್ದುದು 2023-24ರಲ್ಲಿ ಇದುರೂ. 44.90 ಲಕ್ಷ ಕೋಟಯಾಗಿದೆ (ಶೇ.161.19 ಏರಿಕೆ). ಇದೇ ಅವಧಿಯಲ್ಲಿ ದೇಶದ ಜಿಡಿಪಿಯು ರೂ. 128.76 ಲಕ್ಷ ಕೋಟಿಯಿಂದರೂ. 296.57 ಲಕ್ಷ ಕೋಟಿಯಾಗಿದೆ (ಶೇ.130.32 ಏರಿಕೆ).
ಆದರೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿನ ಸಾಧನೆ ಋಣಾತ್ಮಕವಾದುದಾಗಿದೆ. ಉದ್ಯೋಗ ಕಾರ್ಯಕ್ರಮವಾದ ಮನ್ ರೇಗಾ ಕಾರ್ಯಕ್ರಮಕ್ಕೆ ಮೋದಿ ಸರ್ಕಾರವು ಆರಂಬದಿಂದಲೂ ಅನುದಾನವನ್ನು ಕಡಿತ ಮಾಡುತ್ತಾ ಬಂದಿದೆ. ಹೀಗೆ ಅನೇಕ ಜನಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನವನ್ನು ಒಂದೋ ಕಡಿಮೆ ಮಾಡುತ್ತಿದೆ ಇಲ್ಲವೇ ಏರಿಕೆ ಮಾಡುತ್ತಿಲ್ಲ. ಈ ಕಾರ್ಯಕ್ರಮಗಳಿಗೆ ಪ್ರಸಕ್ತ ಬಜೆಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಮತ್ತುಇದೇ ರೀತಿಯ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂಆರಂಭಿಸಬೇಕು. ಮೋದಿ ಅವಧಿಯಲ್ಲಿ ದೇಶದಲ್ಲಿ ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆ (ಅನಿಮಿಯ) ಏರಿಕೆಯಾಗುತ್ತಾ ನಡೆದಿದೆ. ಇದಕ್ಕೆಒಂದು ಬೃಹತ್ ಕಾರ್ಯ ಯೋಜನೆಯನ್ನು ಬಜೆಟ್ಟಿನಲ್ಲಿ ಸೇರಿಸಬೇಕು.
‘ಸಮಗ್ರ ಬೇಡಿಕೆ’ ಪ್ರಣೀತ ಆರ್ಥಿಕತೆ
ಭಾರತದ ಮತದಾರರು 18ನೆಯ ಲೋಕಸಭೆಯಚುನಾವಣೆಯಲ್ಲಿ ಸ್ಪಷ್ಟವಾಗಿ ಸರ್ಕಾರದ ಆರ್ಥಿಕ ನೀ ತಿಏನಾಗಿರ ಬೇಕು ಎಂಬುದನ್ನು ತೋರಿಸಿದ್ದಾರೆ. ಈ ಜನಾದೇಶವು 2024-25ರ ಪೂರ್ಣ ಬಜೆಟ್ಟಿನಲ್ಲಿಅಭಿವ್ಯಕ್ತವಾಗಬೇಕು. ಉದ್ಯೋಗ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ದೊರೆಯ ಬೇಕು. ಬೆಲೆ ಏರಿಕೆಯನ್ನು, ಮುಖ್ಯವಾ ಗಿಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಅನುಭೋಗಿ ಬೆಲೆ ಸೂಚ್ಯಂಕವು ಕೆಳಮಟ್ಟದಲ್ಲಿದೆ. ಆದರೆಆಹಾರ ಬೆಲೆಗಳ ಏರಿಕೆಯು ಶೇ. 8 ಕ್ಕಿಂತಅಧಿಕವಾಗಿದೆ. ಇದು ಬಡವರ, ಕೂಲಿಕಾರರ, ರೈತರ ಮೇಲೆ ಆಘಾತಕಾರಿ ಪರಿಣಾಮ ಬೀರುತ್ತದೆ. ಇದನ್ನು ನಿಯಂತ್ರಿಸಲು ಬಜೆಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಘೋಷಿಸಬೇಕು.
ನಮ್ಮ ಆರ್ಥಿಕತೆಯನ್ನು ಕಾಡುತ್ತಿರುವ ಭಯಾನಕವಾದ ಅಸಮಾನತೆಯು ಆರ್ಥಿಕ ಬೆಳವಣಿಗೆಯವನ್ನು ಕುಂಠಿತಗೊಳಿಸುತ್ತದೆ. ಏಕೆಂದರೆ ಬೃಹತ್ ಸಮೂಹವಾದ ಕೂಲಿಕಾರರು, ಅಸಂಘಟಿತ ವಲಯದ ಕೆಲಸಗಾರರು, ರೈತರು ಮುಂತಾದ ಕೆಳವರಮಾನ ವರ್ಗದ ಸಮಗ್ರ ಬೇಡಿಕೆಯು ಕೆಳಮಟ್ಟದಲ್ಲಿರುತ್ತದೆ. ಇದು ಬಂಡವಾಳ ಹೂಡಿಕೆಗೆ ಉತ್ಸಾಹಕರ-ಪ್ರೋತ್ಸಾಹಕರ ವಾತಾವರಣವಲ್ಲ. ಇಂದು ಭಾರತದಲ್ಲಿ ಉಳಿತಾಯ, ಬಂಡವಾಳ ಹೂಡಿಕೆಮಟ್ಟ ಅತಿ ಕೆಳಮಟ್ಟದಲ್ಲಿದ್ದರೆ ಇದಕ್ಕೆ ಮುಖ್ಯ ಕಾರಣ ‘ಸಮಗ್ರ ಬೇಡಿಕೆ’ಯಲ್ಲಿನ ತೀವ್ರ ಕೊರತೆ. ಇದನ್ನು ಅರ್ಥ ಮಾಡಿಕೊಳ್ಳದ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ‘ಪೂರೈಕೆ-ಪಣೀತ ಆರ್ಥಿಕ ನೀತಿ’ಯನ್ನು ಅನುಸರಿಸುತ್ತಾ ಬಂದಿದೆ. ಇದಕ್ಕೆ 2024-25ರ ಪೂರ್ಣ ಬಜೆಟ್ ಕೊನೆ ಹಾಡಬೇಕು. ಸಮಗ್ರ ಬೇಡಿಕೆಯನ್ನು ಬಲಪಡಿಸುವುದು ಪ್ರಸ್ತುತ ಬಜೆಟ್ಟಿನ ಮೂಲ ನೆಲೆಯಾಗಬೇಕು.
ಕೋಮುವಾದ-ಧಾರ್ಮಿಕತೆಯ ವೈಭವೀಕರಣ-ಮುಸ್ಲಿಮ್ ದ್ವೇಷ, ಆಹಾರ ಸಂಸ್ಕೃತಿಯ ಮೇಲಿನ ಹಲ್ಲೆ, ದುಡಿಮೆ-ದುಡಿಮೆಗಾರರ ಬಗ್ಗೆ ಗೌರವವಿಲ್ಲದಿರುವುದು ಮುಂತಾದ ಕ್ರಮಗಳು ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಈ ಎಲ್ಲ ಕ್ಷುದ್ರ ಸಾಮಾಜಿಕ ಕಾರ್ಯ ಯೋಜನೆಯನ್ನು ಪ್ರಜ್ಞಾ ಪೂರ್ವಕವಾಗಿ ಸರ್ಕಾರವು ನಿಲ್ಲಿಸಬೇಕು. ಇದು 18ನೆಯ ಲೋಕಸಭೆ ಚುನಾವಣೆಯ ಸಂದೇಶವಾಗಿದೆ.
ಈ ಚುನಾವಣಾ ಜನಾ ದೇಶವು 2024-25ರ ಪೂರ್ಣ ಬಜೆಟ್ಟಿಗೆ ಮಾರ್ಗ ಸೂಚಿಯಾಗಲಿ. ನಿಜಕ್ಕೂ ಜುಲೈ 23 ರಂದು ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ಸಿ. ರಾಮಮನೋಹರ್ ರೆಡ್ಡಿ ಅವರು ತಮ್ಮ ಲೇಖನದಲ್ಲಿ ವ್ಯಕ್ತಿಪಡಿಸಿರುವಂತೆ ಮೋದಿ ಸರ್ಕಾರ, ಅದರ ಆರ್ಥಿಕ-ಸಾಮಾಜಿಕ ನೀತಿ ಬದಲಾಗುತ್ತದೆ ಎಂದು ನಂಬುವುದು ಕಷ್ಟ. ಏಕೆಂದರೆ ಅವರು ಅಧಿಕಾರದಲ್ಲಿದ್ದಾರೆ, ಅವರ ಪಕ್ಷದಲ್ಲಿಅಪಾರ ಹಣವಿದೆ, ಅವರ ಪಕ್ಷವು ತನ್ನ ಕಾರ್ಯಕರ್ತರ ‘ತೋಳ್ಬ¯’ದಲ್ಲಿ ಹೆಚ್ಚಿನ ನಂಬಿಕೆಯಿಟ್ಟಿದೆ. ಆದರೂ ಲೋಕಸಭೆ ಚುನಾವಣೆಯಲ್ಲಿ ಜನರು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ತೋರಿರುವ ವಿಶ್ವಾಸದಿಂದ ಅವರು ಪಾಠಕಲಿಯುತ್ತಾರೆ ಎಂದು ನಿರೀಕ್ಷಿಸಬಹುದು.
ಜನಾದೇಶವನ್ನು, ಸಂಸತ್ತಿನಲ್ಲಿ ಹೆಚ್ಚಿರುವ ವಿರೋಧ ಪಕ್ಷಗಳ ಬಲವನ್ನು, ಸಾಮಾಜಿಕ ಮಾಧ್ಯಮವನ್ನು, ಸ್ವಂತ ಸರ್ಕಾರ ರಚನೆಗೆ ಅವಶ್ಯಕವಾದ ಸಂಸತ್ ಸ್ಥಾನಗಳನ್ನು ಪಡೆಯದಿರುವಸ್ಥಿತಿಯನ್ನು, ಬೆಂಬಲ ನೀಡುತ್ತಿರುವ ಪಕ್ಷಗಳ ಮೇಲಿನ ಅವಲಂಬನೆ ಮುಂತಾದ ಸೂಕ್ಷ್ಮ ಸಂಗತಿಗಳನ್ನು, ಸಮ್ಮಿಶ್ರ ಸರ್ಕಾರದ ವಾಸ್ತವವನ್ನು ಮೋದಿ ನಿರ್ಲಕ್ಷಿಸುವುದು ಅಷ್ಟೊಂದು ಸುಲಭವಲ್ಲ.
ಇದನ್ನೂ ನೋಡಿ: 7ನೇ ವೇತನ ಆಯೋಗ ಜಾರಿಗೆ ವಿಳಂಬ ಬೇಡ – ನೌಕರರ ಒಕ್ಕೂಟದ ಎಚ್ಚರಿಕೆ Janashakthi Media