ಪಿತ್ರೋಡಾ ಹೇಳಿದ್ದರಲ್ಲಿ ತಪ್ಪೇನಿದೆ?

– ನಾಗೇಶ್ ಹೆಗಡೆ

“ಜಗತ್ತಿನಲ್ಲೇ ನಮ್ಮಂಥ ಚಂದದ ಪ್ರಜಾತಂತ್ರ ಬೇರೊಂದಿಲ್ಲ. ನಮ್ಮ ದೇಶದಲ್ಲಿ ಇಷ್ಟೊಂದು ವೈವಿಧ್ಯಮಯ ಜನಾಂಗದವರಿದ್ದರೂ ಇಡೀ ದೇಶ ಒಗ್ಗಟ್ಟಾಗಿ ಕಳೆದ 70-75 ವರ್ಷಗಳಿಂದ ನಾವು ಸಂತೋಷದಿಂದ, ಸಾಮರಸ್ಯದಿಂದ ಬದುಕಿದ್ದೇವೆ. ಎಲ್ಲೋ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಘಟನೆಗಳಾಗಿದ್ದನ್ನು ಬಿಟ್ಟರೆ ನಾವೆಲ್ಲ ಒಂದಾಗಿ ಬದುಕುತ್ತಿದ್ದೇವೆ. ಪಿತ್ರೋಡಾ

“ಈ ದೇಶದ ಪೂರ್ವಭಾಗದ ಜನರು ಚೀನೀಯರಂತಿರಬಹುದು; ಪಶ್ಚಿಮದವರು ಅರಬ್‌ರಂತೆ ಕಾಣಬಹುದು; ಉತ್ತರದವರು ತುಸು ಹೆಚ್ಚುಕಮ್ಮಿ ಬಿಳಿಯರಂತಿರಬಹುದು; ದಕ್ಷಿಣದವರು ಆಫ್ರಿಕನ್ನರಂತೆ ಕಾಣಬಹುದು. ಅದು ಇಲ್ಲಿ ಮುಖ್ಯ ಅಲ್ಲವೇ ಅಲ್ಲ, ನಾವೆಲ್ಲ ಸೋದರ ಸೋದರಿಯರು. ನಾವೆಲ್ಲ ಬೇರೆ ಬೇರೆ ಭಾಷೆಗಳನ್ನು ಗೌರವಿಸುತ್ತೇವೆ. ಬೇರೆ ಬೇರೆ ಚೆಹರೆಗಳನ್ನು, ಸಂಸ್ಕೃತಿಯನ್ನು, ಆಹಾರ ಪದ್ಧತಿಯನ್ನು ಗೌರವಿಸುತ್ತೇವೆ. ನಾನು ಗುಜರಾತಿಯಾಗಿದ್ದರೂ ನನಗೆ ದೋಸೆ ಎಂದರೆ ಪ್ರೀತಿ. ಇಡ್ಲಿ ಎಂದರೆ ಇಷ್ಟ. ಅದು ನಮ್ಮ ಭಾರತ….”

ಇದರಲ್ಲಿ ತಪ್ಪು ಹುಡುಕುವಂಥದ್ದು ಏನಿದೆ? “ದಕ್ಷಿಣ(ಭಾರತ)ದವರು ಆಫ್ರಿಕನ್ನರಂತೆ ಕಾಣಬಹುದು” ಎಂಬ ಅವರ ಮಾತಿನಲ್ಲಿ ಜನಾಂಗೀಯ ನಿಂದನೆ ಏನಿದೆ? ಇಡೀ ಮಾನವ ಕುಲವೇ ಆಫ್ರಿಕಾದಿಂದ ಉಗಮವಾಗಿದೆ. ಅದು ನಮ್ಮೆಲ್ಲರ ಮೂಲ ಮಾತೃಭೂಮಿ.

ʻಆಫ್ರಿಕದ ಜನ ಕಪ್ಪು; ಅವರು ಕಳಪೆ ದರ್ಜೆಯ ನಾಗರಿಕರುʼ ಎಂಬ ಧೋರಣೆಯನ್ನು ಬದಲಿಸಬೇಕೆಂಬ ಹೋರಾಟಕ್ಕೆ 150 ವರ್ಷಗಳ ಇತಿಹಾಸವಿದೆ. ಬಿಳಿಯರು ಅವರನ್ನು ಪ್ರಾಣಿಗಳಂತೆ ಪರಿಗಣಿಸಿ ಗುಲಾಮರಂತೆ ಖರೀದಿಸಿ, ದುಡಿಸಿಕೊಳ್ಳುತ್ತಿದ್ದರು.

ಅಮೆರಿಕದ ಸಂವಿಧಾನದಲ್ಲಿ 1865ರಲ್ಲಿ ಬದಲಾವಣೆ ತಂದು ಗುಲಾಮಗಿರಿಯ ನಿವಾರಣೆ ಮಾಡಲಾಯಿತು. ವರ್ಣಭೇದ ನೀತಿ ಇಡೀ ಮಾನವ ಕುಲಕ್ಕೆ ಕಲಂಕ ಎಂದು ವಿಶ್ವಸಂಸ್ಥೆ ಘೋಷಿಸಿದರೂ ದಕ್ಷಿಣ ಆಫ್ರಿಕಾದಲ್ಲಿ ಅದು 1991ರವರೆಗೂ ಮುಂದುವರೆಯಿತು. ಅದರ ವಿರುದ್ಧ ಹೋರಾಡಿ 25 ವರ್ಷ ಜೈಲಲ್ಲಿದ್ದ ನೆಲ್ಸನ್‌ ಮಂಡೇಲಾ ಅಧ್ಯಕ್ಷರಾದರು. -ಇಡೀ ಜಗತ್ತೇ ಕೊಂಡಾಡಿತು.

ಇದನ್ನು ಓದಿ : ಮುಸ್ಲಿಮರ ಜನಸಂಖ್ಯೆ ಹಿಂದು ಜನಸಂಖ್ಯೆಗಿಂತ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆಯೇ?

ವಾಸ್ತವ ಹೀಗಿದೆ: ಆಫ್ರಿಕಾದ ಇಥಿಯೋಪಿಯಾದಲ್ಲಿ ಏಳೆಂಟು ಲಕ್ಷ ವರ್ಷಗಳ ಹಿಂದೆ ಸಣ್ಣ ಗುಂಪಿನಲ್ಲಿದ್ದ ಹೋಮೋ ಸೇಪಿಯನ್ಸ್‌ ಅಲ್ಲಿಂದ ಬೇರೆ ಬೇರೆ ದಿಕ್ಕಿಗೆ ವಲಸೆ ಹೊರಟರು. ಸುಮಾರು 65 ಸಾವಿರ ವರ್ಷಗಳ ಹಿಂದೆ ಹೊರಟ ಒಂದು ಕವಲು ನಮ್ಮ ಭೂಭಾಗದ ಕಡಲಂಚಿಗೆ ಸಾಗುತ್ತ ಶ್ರೀಲಂಕಾ, ತಮಿಳುನಾಡು, ಅಂಡಮಾನ್‌, ಬಾಂಗ್ಲಾ, ಬರ್ಮಾ , ಇಂಡೊನೇಶ್ಯ ಕಡಲ ತೀರದ ಗುಂಟ ಆಸ್ಟ್ರೇಲಿಯಾಕ್ಕೂ ಹೋಯಿತು.

[ʻದಿ ಸ್ಟೇಟ್ಸ್‌ಮನ್‌ʼ ಪತ್ರಿಕೆಗೆ ಪಿತ್ರೋಡಾ ನೀಡಿದ ಸಂದರ್ಶನ ಇಲ್ಲಿದೆ. ಮೊದಲ ಎರಡೂವರೆ ನಿಮಿಷಗಳಲ್ಲಿ ಬಂದ ಅವರ ಮಾತನ್ನೇ ರಾಜಕಾರಣಿಗಳು ಖಂಡಿಸಿದ್ದಾರೆ. ಹತ್ತು ನಿಮಿಷಗಳಷ್ಟು ಕೇಳಿಸಿಕೊಂಡರೆ ಪ್ರಧಾನಿಯವರ ಕೋಪಕ್ಕೆ ಕಾರಣ ಗೊತ್ತಾಗುತ್ತದೆ. ನಮ್ಮ ಮಾಧ್ಯಮಗಳ ಅವನತಿಯ ಬಗ್ಗೆ ಜುಗುಪ್ಸೆ ಹುಟ್ಟುತ್ತದೆ. ಪೂರ್ತಿ ಸಂದರ್ಶನವನ್ನು ಕೇಳಿದರೆ ಸ್ವತಂತ್ರ ಭಾರತದ ಚರಿತ್ರೆಯ ಬಗ್ಗೆ ನಮಗೆ ಹೆಮ್ಮೆ ಮೂಡುತ್ತದೆ. ]

ಆನಂತರ ಅದೆಷ್ಟೊ ಸಾವಿರ ವರ್ಷಗಳಲ್ಲಿ ಬೇರೆ ಬೇರೆ ಮಾರ್ಗಗಳಿಂದ ಇತರ ತಂಡಗಳೂ ಬಂದು, ಈಗಂತೂ ನಾವು ಸಾಕಷ್ಟು ವರ್ಣಗಳ ಮಿಶ್ರತಳಿಗಳಾಗಿದ್ದೇವೆ. ʻಫೇರ್‌ ಅಂಡ್‌ ಲವ್ಲಿʼ ಮುಲಾಮನ್ನು (ಈಗ ಅದರ ಹೆಸರು ಬದಲಾಗಿದೆ) ಅದೆಷ್ಟೇ ಬಳಿದುಕೊಂಡರೂ ಮೂಲನಿವಾಸಿಗಳ ಛಾಯೆ ಅಲ್ಲಲ್ಲಿ ಉಳಿದಿದೆ.

ಮೂಲಛಾಯೆಯನ್ನು ಈಗಲೂ ಉಳಿಸಿಕೊಂಡವರನ್ನೂ ನಾವು ಗೌರವಿಸುತ್ತೇವೆ. ರಾಷ್ಟ್ರಪತಿಯ ಹುದ್ದೆಗೂ ಏರಿಸುತ್ತೇವೆ. ಆದರೂ ಪ್ರಧಾನಿಯವರು ಇಷ್ಟೊಂದು ರೊಚ್ಚಿನ ಮಾತಾಡಿದ್ದು ಯಾಕೆ? ಪಿತ್ರೋಡಾ ಅವರ ಮಾತಿನಲ್ಲಿ ವರ್ಣಭೇದದ ಛಾಯೆ ಇವರಿಗೆ ಹೇಗೆ ಕಂಡಿತು?

ಅದಕ್ಕಿಂತ ಮುಖ್ಯ ಎಂದರೆ, ಕಾಂಗ್ರೆಸ್‌ ಪಕ್ಷ ಕೂಡ ಪಿತ್ರೋಡಾ ಹೇಳಿದ್ದನ್ನು ಗಟ್ಟಿ ಧ್ವನಿಯಲ್ಲಿ ಸಮರ್ಥಿಸಿಕೊಳ್ಳುವ ಬದಲು ದೂರ ಸರಿದಿದ್ದೇಕೆ? ತಲೆತಗ್ಗಿಸವಂಥದ್ದು ಏನಿದೆ ಇದರಲ್ಲಿ?

ʻನಾವು ಆಫ್ರಿಕದ ಆ ಪೂರ್ವಜರಿಂದ ಬಂದವರಲ್ಲ; ನಮ್ಮನ್ನು ಹಾಗೆಲ್ಲ ಹಂಗಿಸಬೇಡಿ, ನಮ್ಮದು ಆರ್ಯರ ರಕ್ತʼ ಎಂದು ನಂಬಿದವರು ಮಾತ್ರ ಪಿತ್ರೋಡಾ ಮಾತಿಗೆ ಆಕ್ಷೇಪ ಎತ್ತಬಹುದು.

ಎಂಥ ದುರಂತ ನೋಡಿ!

 

ಇದನ್ನು ನೋಡಿ : ಮೋದಿಯ ಹತ್ತು ವರ್ಷ ಆಡಳಿತದಲ್ಲಿ 40ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದರೆJanashakthi Media

Donate Janashakthi Media

Leave a Reply

Your email address will not be published. Required fields are marked *