ಮುಸ್ಲೀಮರಿಲ್ಲದ `ಮೊಹರಂ’ ಏನಿದರ ಕುರುಹು?

-ಅರುಣ್ ಜೋಳದಕೂಡ್ಲಿಗಿ

ಕರ್ನಾಟಕದ ಸಾವಿರಾರು ಊರುಗಳಲ್ಲಿ ಮುಸ್ಲೀಮರು ಇಲ್ಲದೆಯೂ ಮೊಹರಂ ಅದ್ದೂರಿಯಾಗಿ ನಡೆಯುತ್ತದೆ. ಇದನ್ನು ವಿಶಿಷ್ಟವೆಂತಲೂ, ಹಿಂದೂ ಮುಸ್ಲಿಂ ಸಾಮರಸ್ಯವೆಂತಲೂ, ಭಾವೈಕ್ಯದ ಕುರುಹು ಎಂತಲೂ ಮಾಧ್ಯಮಗಳು ಅಚ್ಚರಿಯೊಂದಿಗೆ ವರದಿ ಮಾಡುತ್ತವೆ. ಹಿಂದುಗಳೆ ಮುಸ್ಲೀಮರ ಮೊಹರಂ ಹಬ್ಬವನ್ನು ಆಚರಿಸುವ ಬಗ್ಗೆ ಕೌತುಕ ವ್ಯಕ್ತಪಡಿಸುತ್ತವೆ. ಮುಸ್ಲೀಮರಿಲ್ಲ

ಅಂತೆಯೇ ಕರ್ನಾಟಕದಲ್ಲಿ ಮೊಹರಂ ಆಚರಣೆ ನಡೆಯದ ನೂರಾರು ಹಳ್ಳಿಗಳೂ ಇವೆ. ಇಂತಹ ಕಡೆಗಳಲ್ಲಿ ಮೊಹರಂ ಏಕೆ ಇಲ್ಲ ಎಂದು ಕೇಳಿದರೆ, ನಮ್ಮೂರಲ್ಲಿ ಮೊದಲಿನಿಂದಲೂ ಮುಸ್ಲೀಮರಿಲ್ಲ ಎನ್ನುತ್ತಾರೆ. ಹಾಗೆ ನೋಡಿದರೆ ಈ ಕೆಲವು ಹಳ್ಳಿಗಳಲ್ಲಿ ಮುಸ್ಲೀಮರು ಬೇರೆಡೆ ವಲಸೆ ಹೋದ ಕಾರಣ ಹಿಂದೂಗಳು ಮೊಹರಂ ಹಬ್ಬವನ್ನು ನಿಲ್ಲಿಸಿರಬಹುದು. ಅಥವಾ ಎರಡೂ ಧರ್ಮಗಳ ಮೂಲಭೂತವಾದಿ ಸಂಘಟನೆಗಳು ಇಂತಹ ಸಾಮರಸ್ಯದ ಆಚರಣೆ ನಡೆಯದಂತೆ ತಡೆದಿರಬಹುದು.

ಮೊಹರಂ ಚರಿತ್ರೆ ಏಳನೆ ಶತಮಾನಕ್ಕೆ ಕೊಂಡೊಯ್ಯುತ್ತದೆ. ಮಹಮದ್ ಪೈಗಂಬರನ ಮೊಮ್ಮಕ್ಕಳಾದ ಹಸನ್-ಹುಸೇನ್ ವಂಶಸ್ಥರು ಮತ್ತು ದಾಯಾದಿ ಯಾಜೀದನ ವಂಶಸ್ಥರ ನಡುವೆ ಕರ್ಬಲಾ ಮೈದಾನದಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪುವ ಧಾರುಣ ಘಟನೆಯನ್ನು ನೆನಪಿಸಿಕೊಳ್ಳುವ ಆಚರಣೆ. ಮುಸ್ಲಿಂ ಧರ್ಮದ ಎರಡು ಪ್ರಧಾನ ಪಂಗಡಗಳಾದ ಶಿಯಾ-ಸುನ್ನಿಗಳು ಈ ಆಚರಣೆಯನ್ನು ಭಿನ್ನವಾಗಿ ಆಚರಿಸುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿ ಬಹಮನಿ-ಆದಿಲ್‌ಶಾಹಿಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೈದರಾಬಾದ ನಿಜಾಮನ ಕಾಲದಲ್ಲಿಯೂ ಮೊಹರಂ ಆಚರಣೆ ಈ ಭಾಗದಲ್ಲಿ ವ್ಯಾಪಕವಾಗಿದೆ. ಹೀಗೆ ಮುಸ್ಲೀಂ ಆಡಳಿತದ ಪರಿಣಾಮ ಉತ್ತರ ಕರ್ನಾಟಕದಲ್ಲಿ ಮೊಹರಂ ಹಲವು ಹೆಸರುಗಳಲ್ಲಿ ಊರಬ್ಬವಾಗಿ ರಂಗುರಂಗಾಗಿ ಆಚರಣೆಗೊಳ್ಳುತ್ತದೆ.

ಇದನ್ನೂ ಓದಿ: ಮೊಹರಂ: ಜನತೆಯ ಧರ್ಮ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲೀಂ ಕುಟುಂಬವಿಲ್ಲ ಆದರೂ ಮೊಹರಂ ಅದ್ದೂರಿಯಾಗಿ ಜರುಗುತ್ತದೆ. ಮುರಸಿದ್ದೇಶ್ವರ ಮತ್ತು ಮಹಾದೇವ ದೇವಸ್ಥಾನಗಳಲ್ಲಿ ಮೊಹರಂ ದೇವರ ಪಂಜಾಗಳನ್ನು ಕೂರಿಸುತ್ತಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಬಳ್ಳಾಪುರ, ಜೀರಿಗನೂರು, ಕಣ್ವಿ ತಿಮ್ಮಲಾಪುರ, ಕಲಘಟಗಿ ತಾಲೂಕಿನ ಕೆ.ಹುಣಶಿಕಟ್ಟಿ, ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ, ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಮುಷ್ಟಗಟ್ಟೆ, ಸವದತ್ತಿ ತಾಲೂಕಿನ ಹರ್ಲಾಪುರ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವಗಡಂಬಳಿ, ಹೂವಿನಹಡಗಲಿ ಸಮೀಪದ ಶಿವಪುರ, ಹಾಳ ತಿಮ್ಮಾಪುರ, ಬ್ಯಾಲಹುಣಸಿ, ಹೀಗೆ ಸುದ್ದಿಯಾದ ಮತ್ತು ನಾನು ಕ್ಷೇತ್ರಕಾರ್ಯದಲ್ಲಿ ಗುರುತಿಸಿದ ಹಳ್ಳಿಗಳ ಹೊರತಾಗಿಯೂ ಸಾವಿರಾರು ಹಳ್ಳಿಗಳಲ್ಲಿ ಮುಸ್ಲೀಮರಿಲ್ಲದ ಮೊಹರಂ ನಡೆಯುತ್ತದೆ. ಕೆಲವು ಹಳ್ಳಿಗಳಲ್ಲಿ ಮೊಹರಂ ದೇವರು ಕೂರಿಸುವ ಮಸೀದಿಗಳೂ ಇಲ್ಲ. ದೇವಸ್ಥಾನಗಳಲ್ಲೆ ದೇವರನ್ನು ಕೂರಿಸಲಾಗುತ್ತದೆ. ಬ್ಯಾಲಹುಣಸಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮೊಹರಂ ದೇವರನ್ನು ಕೂರಿಸುತ್ತಾರೆ.

ಇಂತಹ ಕಡೆಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೆಲವು ಹಳ್ಳಿಗಳಲ್ಲಿ ಬಹಳ ಕಾಲದ ಹಿಂದೆ ಮುಸ್ಲೀಮರು ನೆಲೆಸಿದ್ದ ಕುರುಹು ಸಿಗುತ್ತದೆ. ಶಿಗ್ಗಾವಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಪ್ಲೇಗ್ ಬಂದಾಗ ಮುಸ್ಲೀಮರು ಗ್ರಾಮ ತೊರೆದಿದ್ದಾರೆ, ಅವರು ಬಿಟ್ಟು ಹೋದ ಮಸೀದಿಯಲ್ಲಿ ಈಗಲೂ ಹಿಂದೂಗಳು ಮೊಹರಂ ಆಚರಿಸುತ್ತಾರೆ. ಸವದತ್ತಿ ತಾಲೂಕಿನ ಹರ್ಲಾಪುರದಲ್ಲಿ ಬಹಳ ಹಿಂದೆ ಮುಸ್ಲೀಂ ಸಮುದಾಯದ ಸೂಫಿ ಫಕೀರನೊಬ್ಬ ವಾಸವಿದ್ದನಂತೆ, ಹಾಗಾಗಿ ಆತ ತೀರಿದ ಬಳಿಕವೂ ಈ ಊರಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗೆ ಮುಸ್ಲೀಮರಿಲ್ಲದ ಊರುಗಳ ಮೊಹರಂ ಆಚರಣೆಗೆ ಆಯಾ ಭಾಗದ ಸೂಫಿ ಸಂತರ ಪ್ರಭಾವವೂ ಇದೆ.

ಕೆಲವು ಕಡೆಗಳಲ್ಲಿ ಮೊಹರಂ ದೇವರುಗಳೆ ಮತ್ತೊಂದು ಊರುಗಳಿಗೆ ವಲಸೆ ಬಂದಿರುವುದಾಗಿಯೂ, ಬಹಳ ಊರುಗಳಲ್ಲಿ ಹಳ್ಳಗಳಲ್ಲಿ ಮೊಹರಂ ದೇವರು ಹರಿದುಬಂದು ಈ ಊರಿನಲ್ಲಿ ನೆಲೆಸಿರುವುದಾಗಿಯೂ ರಿವಾಯ್ತ್ ಪದಗಳಲ್ಲಿ ಹೇಳುತ್ತಾರೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಬಹುಪಾಲು ಮುಸ್ಲೀಮರಿಲ್ಲದ ಊರುಗಳಲ್ಲಿ ಮೊಹರಂ ನಡೆಯುತ್ತದೆ ಎಂದರೆ ಹಿಂದೆ ಈ ಊರುಗಳಲ್ಲಿ ಮುಸ್ಲೀಮರು ನೆಲೆಸಿದ್ದರು ಎನ್ನುವುದರ ಸಂಕೇತವಾಗಿದೆ. ಅಂತೆಯೆ ಮುಸ್ಲೀಮರಿಲ್ಲದ ಮೊಹರಂ ನಡೆವ ಹಳ್ಳಿಗಳ ಸುತ್ತಮುತ್ತಣ ಮುಸ್ಲೀಮರನ್ನು ಕರೆತಂದು ಹಬ್ಬ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಪೂರ್ವಜರ ನೆನಪಿಗೆ ಬಿಟ್ಟುಹೋದ ಮನೆತನದ ಮುಸ್ಲಿಂ ಕುಟುಂಬಗಳೆ ಮೊಹರಂ ಹಬ್ಬಕ್ಕೆ ಎರಡು ಮೂರು ದಿನದ ಮಟ್ಟಿಗೆ ಬಂದು ಆಚರಣೆ ಮುಗಿಸಿಕೊಂಡು ಹೋಗುತ್ತಾರೆ.

ಇಂತಹ ಮುಸ್ಲೀಮರ ವಲಸೆಯ ಪ್ರಮಾಣ 1992 ರ ಬಾಬರಿ ಮಸೀದಿ ಧ್ವಂಸದ ನಂತರ ಹೆಚ್ಚಾಗಿರುವುದನ್ನು ಗಮನಿಸಬಹುದು. ಮುಸ್ಲೀಮರ ದುರುಳೀಕರಣ, ಮುಸ್ಲೀಮರ ಬಗೆಗೆ ಹುಟ್ಟಿಸಿದ ಭಯದಿಂದ ಭಾರತೀಯ ಮುಸ್ಲೀಮರಲ್ಲಿ ಭಯ ಆತಂಕ ಅಭದ್ರತೆ ನೆಲೆಸಿದೆ. ಹೀಗಾಗಿ ಮುಸ್ಲೀಮರು ಒಗ್ಗಟ್ಟಾಗುವುದು, ಒಂದೆಡೆ ಬದುಕುವುದು ಅನಿವಾರ್ಯವಾಗಿದೆ. ಹಿಂದೆ ಚಿಕ್ಕಪುಟ್ಟ ವ್ಯಾಪಾರಿಗಳಾಗಿ ಊರುಗಳಿಗೆ ಪ್ರವೇಶಿಸಿ ಆಯಗಾರರಾಗಿ ಒಂದೋ ಎರಡೋ ಮುಸ್ಲಿಂ ಮನೆಗಳು ನೆಲೆಸಿದ್ದರು. ಬದಲಾದ ಕೋಮುಭಾವನೆಯ ಪರಿಣಾಮವಾಗಿ ತಮ್ಮ ವಾಸದ ಹಳ್ಳಿಗಳನ್ನು ತೊರೆದು ಎಲ್ಲಿ ಮುಸ್ಲೀಂ ಸಮುದಾಯ ಹೆಚ್ಚಾಗಿ ನೆಲೆಸಿದ್ದಾರೋ ಅಂತಹ ಕಡೆಗಳಿಗೆ ಹೆಚ್ಚಾಗಿ ನಗರಗಳಿಗೆ ವಲಸೆ ಹೋಗಿದ್ದಾರೆ. ಹಾಗಾಗಿ ಮುಸ್ಲಿಮರಿಲ್ಲದ ಮೊಹರಂ ಆಚರಣೆ, ಹಿಂದೆ ಈ ಊರುಗಳಲ್ಲಿ ಮುಸ್ಲೀಮರು ಇದ್ದರು ಎಂದು ಹೇಳುವ ಮೌಖಿಕ ಚರಿತ್ರೆಯ ಪಠ್ಯಗಳಾಗಿವೆ.

ಇದನ್ನೂ ನೋಡಿ: ಮೊಹರಂ ವಿಶೇಷತೆ ಮತ್ತು ಸಾಮರಸ್ಯದ ಬಣ್ಣಗಳು Janashakthi Media

Donate Janashakthi Media

Leave a Reply

Your email address will not be published. Required fields are marked *