ಅ.25ರಂದು ಸೂರ್ಯ ಗ್ರಹಣ: ವೀಕ್ಷಿಸಲು ಮರೆಯದಿರಿ-ಮುಂಜಾಗ್ರತೆ ವಹಿಸಿ

ವರ್ಷದ ಕೊನೆಯ ಸೂರ್ಯ ಗ್ರಹಣ ಅಕ್ಟೋಬರ್‌ 25ರಂದು ಸಂಭವಿಸಲಿದ್ದು, ಆಸಕ್ತರು ಈ ಗ್ರಹಣವನ್ನು ಕಣ್ತುಂಬಿಕೊಂಡು ಆನಂದಿಸಬಹುದಾಗಿದೆ. ಬರೋಬ್ಬರಿ 27 ವರ್ಷದ ಬಳಿಕ ಅಂದರೆ, 1995ರ ಬಳಿಕ ಮತ್ತೆ ದೀಪಾವಳಿ ಹಬ್ಬದಂದು ಸೂರ್ಯ ಗ್ರಹಣ ಸಂಭವಿಸುತ್ತಿರುವುದು ವಿಶೇಷವಾಗಿದೆ.

ಮಂಗಳವಾರ(ಅಕ್ಟೋಬರ್‌ 25) ಸಂಜೆ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. 3 ವರ್ಷಗಳ ಬಳಿಕ ಗೋಚರವಾಗುವ ಈ ಪಾರ್ಶ್ವ ಸೂರ್ಯಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ.

ಸೂರ್ಯ ಗ್ರಹಣ ಸಂಭವಿಸಲಿರುವ ಕಾಲಮಾನ

  • ದೆಹಲಿಯಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:29 ಕ್ಕೆ ಪ್ರಾರಂಭವಾಗುತ್ತದೆ.
  • ಮುಂಬೈನಲ್ಲಿ ಸೂರ್ಯಗ್ರಹಣ ಸಂಜೆ 4:49 ಕ್ಕೆ ಪ್ರಾರಂಭವಾಗುತ್ತದೆ. (ಗ್ರಹಣದ ಅವಧಿಯು (ಬೆಳಗ್ಗೆಯಿಂದ ಸೂರ್ಯಾಸ್ತದವರೆಗೆ) ದೆಹಲಿ ಮತ್ತು ಮುಂಬೈ ಎರಡಕ್ಕೂ ಕ್ರಮವಾಗಿ 1 ಗಂಟೆ 13 ನಿಮಿಷಗಳು ಮತ್ತು 1 ಗಂಟೆ 19 ನಿಮಿಷಗಳು).
  • ಕೋಲ್ಕತ್ತಾದಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:52 ಕ್ಕೆ ಪ್ರಾರಂಭವಾಗುತ್ತದೆ.
  • ಚೆನ್ನೈನಲ್ಲಿ ಸೂರ್ಯಗ್ರಹಣವು ಸಂಜೆ 5:14 ಕ್ಕೆ ಪ್ರಾರಂಭವಾಗುತ್ತದೆ. (ಸೂರ್ಯಗ್ರಹಣದ ಆರಂಭದಿಂದ ಸೂರ್ಯಾಸ್ತದವರೆಗೆ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ 31 ನಿಮಿಷ 12 ನಿಮಿಷ ಇರುತ್ತದೆ).
  • ಉಡುಪಿಯಲ್ಲಿ ಗ್ರಹಣ ಸ್ಪರ್ಶ ಸಂಜೆ 5:08 ರಿಂದ ಗ್ರಹಣ ಮೋಕ್ಷ ಸಂಜೆ 6:29 ಕ್ಕೆ.

ಸೂರ್ಯ ಗ್ರಹಣವು ಭಾರತದ ಎಲ್ಲ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣವಾಗಿರುತ್ತದೆ.  ಸಾಮಾನ್ಯವಾಗಿ ಪ್ರತಿ ಸೂರ್ಯ ಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಬಾರಿ ಕೂಡ ನವೆಂಬರ್ 8ರಂದು ಚಂದ್ರ ಗ್ರಹಣ ನೋಡಬಹುದುದಾಗಿದೆ.

ಈ ಬಗ್ಗೆ ಉಡುಪಿಯ ಖ್ಯಾತ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ .ಭಟ್ ವಿವರಣೆ ನೀಡಿದ್ದು, ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ ಕಾಲವನ್ನು ಸೂರ್ಯ ಗ್ರಹಣ ಎಂದು ಕರೆಯುತ್ತೇವೆ. ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯ ಹಾದು ಹೋಗುವಾಗ, ಈ ಮೂರು ಆಕಾಶಕಾಯಗಳು ಒಂದು ಸರಳರೇಖೆಯಲ್ಲಿರುವುದಿಲ್ಲ. ಚಂದ್ರನ ಭೂಮಿಯ ಸುತ್ತ ಚಲನೆಯ ಸಮತಲ ಹಾಗೂ, ಸೂರ್ಯನ ಸಮತಲ (ಭೂಮಿಯ ದ್ರಿಷ್ಟಿಯಿಂದ) ಗಳ ನಡುವಿನಲ್ಲಿ 5 ಡಿಗ್ರಿ ಗಳ ಅಂತರವಿರುವುದರಿಂದ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭವಿಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ, ಸೂರ್ಯ ಗ್ರಹಣ ಸಂಭವಿಸುತ್ತದೆ ಎಂದಿದ್ದಾರೆ.

ಯಾವುದೇ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಕ್ಯಾಮೆರಾ ಗಳಿಂದ ಕೂಡ ಸೂರ್ಯ ಗ್ರಹಣ ವನ್ನು ನೋಡುವುದು ಹಾನಿಕಾರಕ. ಸೂರ್ಯ ಗ್ರಹಣವನ್ನು ಯಾವಾಗಲೂ ವಿಶೇಷವಾದ ಗ್ರಹಣ-ವೀಕ್ಷಣಾ ಕನ್ನಡಕದ ಮೂಲಕವೇ ವೀಕ್ಷಣೆ ಮಾಡಬೇಕು. ಪಿನ್-ಹೋಲ್ ಗಳ ಮೂಲಕ ಸೂರ್ಯನ ಪ್ರಕ್ಷೇಪಣವನ್ನು ಯಾವುದೇ ಹಾನಿಯಿಲ್ಲದೆ ನೋಡಬಹುದು. ಎಕ್ಸ್-ರೇ ಹಾಳೆ ಗಳಿಂದ ಕೂಡ ಗ್ರಹಣವನ್ನು ನೋಡಬಾರದು.

ಸೂರ್ಯ ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ಹಲವು ಸಂಘ ಸಂಸ್ಥೆಗಳು ವೀಕ್ಷಣೆಯ ವ್ಯವಸ್ಥೆಗಳನ್ನು ಮಾಡಿರುತ್ತದೆ. ಸಾರ್ವಜನಿಕರು ಸೂರ್ಯ ಗ್ರಹಣ ವೀಕ್ಷಣೆ ಮಾಡಬಹುದು. ಹಾಗೆಯೇ ಸೂರ್ಯ ಗ್ರಹಣ ವೀಕ್ಷಣೆಗೆ ಆಯೋಜಕರು ಸೂಚಿಸುವ ಮಾರ್ಗದರ್ಶನಗಳು ಹಾಗೂ ಮಾಹಿತಿಗಳನ್ನು ಪಡೆದುಕೊಂಡಲ್ಲಿ ಸೂರ್ಯ ಗ್ರಹಣದ ಬಗೆಗಿನ ಕುತೂಹಲವನ್ನು ಪರಿಹರಿಸಿಕೊಳ್ಳಬಹುದು.

ಸೂರ್ಯ ಗ್ರಹಣದ ಸಂದರ್ಭದಲ್ಲಿ ಯಾರಿಗೂ ಅಡ್ಡಪರಿಣಾಮ ಉಂಟಾಗುವುದಿಲ್ಲ. ಅದರಲ್ಲೂ, ಮೌಢ್ಯತೆಯನ್ನು ಹರಡುವವರ ಮಾತುಗಳನ್ನು ನಿರ್ಲಕ್ಷಿಸಿದ್ದಲ್ಲಿ ವೈಜ್ಞಾನಿಕವಾದ ಅದ್ಭುತಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಸೂರ್ಯ ಗ್ರಹಣವು ಜಮ್ಮು ಕಾಶ್ಮೀರದಲ್ಲಿ 55%, ಲೇಹ್ ಲಡಾಖ್‍ನಲ್ಲಿ 54%ರಷ್ಟು ಗೋಚರವಾಗಲಿದೆ. ಭಾರತ ಮಾತ್ರ ಅಲ್ಲದೆ, ಯುರೋಪ್, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಹ ಗ್ರಹಣ ಗೋಚರಿಸಲಿದೆ. ರಷ್ಯಾದ ಉಗಾರದಲ್ಲಿ ಶೇಕಡಾ 85% ರಷ್ಟು ಅಂದರೆ, ಅತಿ ಹೆಚ್ಚು ಪ್ರಮಾಣದಲ್ಲಿ ಸೂರ್ಯ ಗ್ರಹಣ ಗೋಚರವಾಗಲಿದೆ.

ಬೆಂಗಳೂರಿನಲ್ಲಿಯೂ ವೈಜ್ಞಾನಿಕವಾಗಿ ಗ್ರಹಣ ವೀಕ್ಷಣೆಗೆ ಜನರು ಕಾತುರರಾಗಿದ್ದಾರೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರವಾಗುವುದರಿಂದ ಸಂಪೂರ್ಣ ಸೂರ್ಯ ಗ್ರಹಣ ವೀಕ್ಷಣೆ ಸಾಧ್ಯವಾಗುವುದಿಲ್ಲ. ನೆಹರು ತಾರಾಲಯ ನಗರದ ಮಧ್ಯ ಭಾಗದಲ್ಲಿರುವುದರಿಂದ ಗ್ರಹಣ ವೀಕ್ಷಣೆ ಸ್ವಲ್ಪ ಕಷ್ಟಸಾಧ್ಯ. ಹೀಗಾಗಿ ಯೂಟ್ಯೂಬ್ ಮೂಲಕ ವೀಕ್ಷಣೆ ಮಾಡಬಹುದು.

ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸೂರ್ಯಗ್ರಹಣ ಉತ್ತಮ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಪೂರ್ವ ಭಾಗಗಳಲ್ಲಿ ಸೂರ್ಯಾಸ್ತದ ವೇಳೆ, ಈಶಾನ್ಯ ಭಾಗಗಳಲ್ಲಿ ಸೂರ್ಯಾಸ್ತದ ಬಳಿಕ ಸೂರ್ಯ ಗ್ರಹಣ ಸಂಭವಿಸುತ್ತದೆ.

ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳಶಾಸ್ತ್ರಜ್ಞರ ಕ್ಲಬ್ ವತಿಯಿಂದ ಸೂರ್ಯಗ್ರಹಣ ವೀಕ್ಷಿಸುವುದಕ್ಕಾಗಿ ಮಲ್ಪೆ ಬೀಚ್ ನಲ್ಲಿ ಅಕ್ಟೋಬರ್‌ 25 ರಂದು ಸಂಜೆ 5 ರಿಂದ ಸೂರ್ಯಾಸ್ತದವರೆಗೂ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅವಕಾಶವಿದೆ.

ಗ್ರಹಣ ವೀಕ್ಷಿಸುವುದಕ್ಕೆ ಉಡುಪಿ ಸೂಕ್ತ ಪ್ರದೇಶವಾಗಿದ್ದು, 5.08 ರಿಂದ 5.50 ನಿಮಿಷದವರೆಗೂ ಸೂರ್ಯ ಗ್ರಹಣ ವೀಕ್ಷಣೆಯ ಆನಂದವನ್ನು ಅನುಭವಿಸಬಹುದು. ಮಲ್ಪೆ ಬೀಚ್ ನಲ್ಲಿ ಬೀಚ್ ಅಭಿವೃದ್ಧಿ ಸಮಿತಿಯ ವತಿಯಿಂದ ವ್ಯವಸ್ಥೆಗಳನ್ನು ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *