ಏನಿದು ರೆಮ್ಡೆಸಿವಿರ್ ಔಷಧ? ಇದರ ಪ್ರಯೋಜನವೇನು ಮತ್ತು ಏಕೆ ಇದರ ಕೊರತೆಯಿದೆ?

ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ತೀವೃ ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಸೋಂಕು ದೇಶದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಸೋಂಕಿನ ಪ್ರಮಾಣದಂತೆ ಸಾವಿನ ಪ್ರಮಾಣವೂ ಹೆಚ್ಚಳವಾಗ್ತಿದೆ.  ಇದರ ಬೆನ್ನಲ್ಲೆ ದೇಶದಲ್ಲಿ ಇದ್ದಕ್ಕಿದ್ದಂತೆ ರೆಮ್ಡೆಸಿವಿರ್ ಎಂಬ ಔಷಧದ ಬಗ್ಗೆ ಚರ್ಚೆಯೂ ತೀವ್ರಗೊಂಡಿದೆ. ಕೊರೋನಾ ರೋಗಿಗಳ ಚಿಕಿತ್ಸೆಗೆ ಬೇಕಾಗಿರುವ ಈ ಔಷಧದ ಕೊರತೆ ಅನೇಕ ರಾಜ್ಯಗಳಲ್ಲಿ ಕಂಡುಬಂದಿದೆ.

ಕೊರೋನಾ ಸೋಂಕು ತೀವ್ರಗೊಳ್ಳುತ್ತಿರುವ ಈ ಸಮಯದಲ್ಲಿ,  ರೆಮ್ಡೆಸಿವಿರ್‌ ಔಷಧ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಕೊರತೆ ಇಲ್ಲ, ಕಡಿಮೆ ಬೆಲೆಗೆ ಇದನ್ನೂ ನೀಡುವಂತೆ ನಾವು ಶೂಚಿಸಿದ್ದೇವೆ, ಹೆಚ್ಚಿನ ಧರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳುವುದಾಗಿ ಸರಕಾರ ಹೇಳುತ್ತಿರುವುದು ಕಾಗದ ರೂಪದಲ್ಲಿ ಮಾತ್ರ ಇದೆ. ಈ ಔಷಧ ಕೊರತೆಯಿಂದಾಗಿ ಕೋವಿಡ್‌ ಪೀಡಿತರು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಾಗಾದರೆ ಈ  ರೆಮ್ಡೆಸಿವಿರ್ ಔಷಧ ಅಂದರೇನು? ಅದರ ಪ್ರಯೋಜನ ಏನು ಎಂಬುದನ್ನು ತಿಳಿಯೋಣ ಬನ್ನಿ.

ಇದು ಆಂಟಿವೈರಲ್ ಔಷಧವಾಗಿದ್ದು, ಇದನ್ನು ಯುಎಸ್ ಔಷಧೀಯ ಕಂಪನಿ ಗಿಲ್ಯಾಡ್ ಸೈನ್ಸಸ್ ತಯಾರಿಸಿದೆ. ಹೆಪಟೈಟಿಸ್ ಸಿ ಮತ್ತು ಉಸಿರಾಟದ ವೈರಸ್‌ಗಳಿಗೆ (ಆರ್‌ಎಸ್‌ವಿ) ಚಿಕಿತ್ಸೆ ನೀಡಲು ಸುಮಾರು ಒಂದು ದಶಕದ ಹಿಂದೆ ಇದನ್ನು ರಚಿಸಲಾಗಿದೆ.‌ ಆದರೆ ಮಾರುಕಟ್ಟೆಗೆ ಇದಕ್ಕೆ ಅನುಮೋದನೆ ನೀಡಿರಲಿಲ್ಲ. ಕೊರೋನದ ಈ ಸಮಯದಲ್ಲಿ, ರೆಮ್ಡೆಸಿವಿರ್ ಚುಚ್ಚುಮದ್ದನ್ನು ಜೀವ ಉಳಿಸುವ ಔಷಧವಾಗಿ ನೋಡಲಾಗುತ್ತಿದೆ. ಜನರು ದುಬಾರಿ ಬೆಲೆಗೆ ರೆಮ್‌ಡೆಸಿವಿರ್ ಇಂಜೆಕ್ಷನ್ ಖರೀದಿಸಲು ಸಿದ್ಧರಾಗಿರುವುದು ಇದೇ ಕಾರಣ. ತೀವ್ರವಾಗಿ ಕೊರೋನಾ ಸೋಂಕಿಗೆ ‌ತುತ್ತಾಗಿರುವ ರೋಗಿಗಳ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಬಳಸಲಾಗುತ್ತದೆ. ಆದಾಗ್ಯೂ, ಕೊರೋನಾ ಚಿಕಿತ್ಸೆಯಲ್ಲಿ ಇದರ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಯಾರೂ ಗುರುತಿಸಿಲ್ಲ. ನವೆಂಬರ್ನಲ್ಲಿ, WHO ಸಹ ರೆಮ್ಡೆಸಿವಿರ್ ಕೊರೋನಾಗೆ ನಿಖರವಾದ ಚಿಕಿತ್ಸೆಯಲ್ಲ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬೇಕಿದೆ.

ಕೊರೋನಾ ಬಿಕ್ಕಟ್ಟಿನ ನಂತರ,  ರೆಮ್ಡೆಸಿವಿರ್ ಮಾರಾಟದಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಭಾರತದಲ್ಲಿ, ಈ ಔಷಧಿಯನ್ನು ಸಿಪ್ಲಾ, ಝೈಡಸ್ ಕ್ಯಾಡಿಲಾ, ಹೆಟೆರೊ, ಮೈಲಾನ್, ಜುಬಿಲೆಂಟ್ ಲೈಫ್ ಸೈನ್ಸಸ್, ಡಾ. ರೆಡ್ಡಿಸ್, ಸನ್ ಫಾರ್ಮಾ ಮುಂತಾದ ಅನೇಕ ಕಂಪನಿಗಳು ಉತ್ಪಾದಿಸಿವೆ. ಗಿಲ್ಯಾಡ್ ಸೈನ್ಸಸ್ ಎಂಬ ಕಂಪನಿಯು ರೆಮ್ಡೆಸಿವಿರ್ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಿತು.

ದೇಶದಲ್ಲಿ ಕೊರೋನದ ಎರಡನೇ ತರಂಗದಿಂದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಈ ಸಮಯದಲ್ಲಿ ರೆಮ್‌ಡೆಸಿವಿರ್‌ನ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷದ ಕೊನೆಯಲ್ಲಿ, ಕೊರೋನದ ಹೊಸ ಪ್ರಕರಣಗಳು ಕಡಿಮೆಯಾದ ನಂತರ ರೆಮ್‌ಡೆಸಿವಿರ್ ಔಷಧದ ಉತ್ಪಾದನೆಯನ್ನು ಕಡಿಮೆಗೊಳಿಸಲಾಯಿತು. ಕಳೆದ 6 ತಿಂಗಳಲ್ಲಿ ಭಾರತವು ಒಂದು ದಶಲಕ್ಷಕ್ಕೂ ಹೆಚ್ಚು ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಇತರ ದೇಶಗಳಿಗೆ ರಫ್ತು ಮಾಡಿತ್ತು. ದೇಶದಲ್ಲಿ ಕೊರೋನ ನಿಯಂತ್ರಣದ  ಕೊರತೆಗೆ ಒಂದು ಕಾರಣವೆಂದರೆ ರೆಮ್ಡೆಸಿವಿರ್ ಚುಚ್ಚುಮದ್ದಿನ ಸಂಗ್ರಹಣೆ ಮತ್ತು ಕಪ್ಪು ಮಾರಾಟದ ಸಮಸ್ಯೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ್‌, ಗುಜರಾತ್‌ ಕರ್ನಾಟಕದಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿವೆ.

ಪ್ರಸ್ತುತ, ರೆಮ್ಡೆಸಿವಿರ್ ಇಂಜೆಕ್ಷನ್ ಪೂರೈಕೆಗಾಗಿ ಕೇಂದ್ರದಿಂದ ದೇಶದ ವಿವಿಧ ರಾಜ್ಯ ಸರ್ಕಾರಗಳು ಬೇಡಿಕೆ ಸಲ್ಲಿಸುತ್ತಿವೆ. ಇದರೊಂದಿಗೆ ದೇಶದ ವಿವಿಧ ರಾಜ್ಯಗಳಿಂದ ಕಪ್ಪು ಮಾರುಕಟ್ಟೆ ಮತ್ತು ರೆಮ್‌ಡೆಸಿವಿರ್ ಚುಚ್ಚುಮದ್ದಿನ ಕಳ್ಳತನ ಘಟನೆಗಳು ಹೊರಬರುತ್ತಿವೆ. ಇದು ಈ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಆಸ್ಪತ್ರೆಗಳಲ್ಲಿ ಆಕ್ಸಿಜನ್​ಗೆ ತತ್ವಾರ ಶುರುವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು  ಸಾವು ಬದುಕಿನ ಮಧ್ಯೆ ಹೊರಾಡ್ತಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ದಿನೆ ದಿನೆ ಹೆಚ್ಚಾಗುತ್ತದೆ. ಸರಕಾರ ಸರಿಯಾದ ಯೋಜನೆಗಳನ್ನು, ತಯಾರಿಗಳನ್ನು ರೂಪಿಸದ ಕಾರಣ ಇಂತಹ ಅನಾಹುತ ಸೃಷ್ಟಿಯಾಗಿದೆ.‌ ಆಸ್ಪತ್ರೆ ಹಾಗೂ ಹಾಸಿಗೆ ಕುರಿತು ಸರಕಾರದ ನಿರ್ಲಕ್ಷ್ಯವನ್ನು ಇದು ಎತ್ತಿ ತೋರಿಸುತ್ತದೆ.  ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಗೆ ಡಿಮಾಂಡ್‌ ಹೆಚ್ಚಾಗಿದೆ. ಅದರಲ್ಲೂ ಕೆಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ಪರದಾಟ ಶುರುವಾಗಿದೆ. ಇದ್ರಿಂದಾಗಿ ತಮ್ಮ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮತ್ತೊಂದೆಡೆ ಆಕ್ಸಿಜನ್‌ ಸಪ್ಲೈ ಮಾಡುವವರ ಬಳಿಗೆ ಹೋಗಿ ಕೇಳಿದ್ರೆ, ಅಲ್ಲಿ ಆಕ್ಸಿಜನ್‌ ಸಿಲಿಂಡರ್‌ಗಳು ಸಾಲುಗಟ್ಟಿ ನಿಂತಿವೆ. ಆದ್ರೆ ಬೇಡಿಕೆ ಬರುತ್ತಿರುವಷ್ಟು ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗದೆ ಅಸಹಾಯಕತೆ  ತೋಡಿಕೊಳ್ಳುತ್ತಿದ್ದಾರೆ.

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡಿಯುವುದಕ್ಕೆ ಸರಕಾರ ಇನ್ನೂ ಸರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಸರಕಾರ ಇನ್ನಾದರೂ ಎಚ್ಚುತ್ತು ಸಾರ್ವಜನಿಕರ ಜೀವವನ್ನು ಉಳಿಸಲು ಮುಂದಾಗಬೇಕಿದೆ. ಅಗತ್ಯ ಹಾಸಿಕೆ, ಚಿಕಿತ್ಸಾ ಸೌಲಭ್ಯವನ್ನು ಹೆಚ್ಚಿಸಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *