ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿ ಆಗಲೇಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ, ಮುಷ್ಕರವನ್ನು ತಡೆಯಲು ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ಮುಂದಾಗಿದೆ. ಹಾಗಾದರೆ ಎಸ್ಮಾ ಎಂದರೇನು? ಇದರ ಹೇರಿಕೆಗೆ ಸರ್ಕಾರ ಮುಂದಾದರೆ ಉದ್ಯೋಗಿಗಳು ಯಾವ ಪರಿಣಾಮ ಎದುರಿಸಬೇಕಾಗುತ್ತದೆ? ಇಲ್ಲಿದೆ ನೋಡಿ ಮಾಹಿತಿ.
ಎಸ್ಮಾ ಎಂದರೇನು?
* ಎಸ್ಮಾ ಎಂದರೆ ಅಗತ್ಯ ಸೇವೆ ನಿರ್ವಹಣೆ ಕಾಯಿದೆ (Essential Services Maintenance Act).
* ಸರ್ಕಾರಿ ನೌಕರರ ಮೇಲೆ ಅಂಕುಶಹಾಕುವ ಕಾಯಿದೆ 1968 ರಿಂದ ಜಾರಿಯಲ್ಲಿದೆ.
* ಕರ್ನಾಟಕದಲ್ಲಿ 1994ರಲ್ಲಿ ಈ ಕಾನೂನಿನ ಮೊದಲ ಉಲ್ಲೇಖ ಆಯಿತು.
* ಜೂನ್ 2013 ರಿಂದ ರಾಜ್ಯದಲ್ಲಿ ಕಾನೂನು ಬಳಕೆಗೆ ಅವಕಾಶ ಸಿಕ್ಕಿತು.
* 2015ರಲ್ಲಿ ಕೆಲ ತಿದ್ದುಪಡಿ ಮಾಡಲಾಯಿತು
ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಎಂದಾಗ ಸರ್ಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ. ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ.
ಎಸ್ಮಾ ಎಂದರೆ ಕಡ್ಡಾಯ ಕೆಲಸ ಎಂಬ ಅರ್ಥ ಬರುತ್ತದೆ. ಸಂವಿಧಾನ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಸಾಧ್ಯತೆಯೂ ಇರುತ್ತದೆ. ಎಸ್ಮಾ ಜಾರಿಯಾದ ಮೇಲೂ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ರಾಜ್ಯದಲ್ಲಿ ಈ ಹಿಂದೆ ಹಲವು ಬಾರಿ ಎಸ್ಮಾ ಕಾಯೆ ಜಾರಿ ಮಾಡಲು ಸರಕಾರ ಮುಂದಾಗಿತ್ತು, ಕಾರ್ಮಿಕರು, ಶಿಕ್ಷಕರು, ಉಪನ್ಯಾಸಕರು, ಸಚಿವಾಲಯದ ನೌಕರರು, ಪೊಲೀಸರು ನಡೆಸಿದ ಪ್ರತಿಭಟನೆ ಹತ್ತಿಕ್ಕಲು ಸರಕಾರ ಎಸ್ಮಾ ಕಾಯಿದೆಯನ್ನು ಪ್ರಯೋಗಿಸುವ ಎಚ್ಚರಿಕೆ ನೀಡಿತ್ತು. ಎಸ್ಮಾ ಕಾಯ್ದೆಯನ್ನು ರದ್ದು ಪಡಿಸುವಂತೆ ಹಲವುಬಾರಿ ಸರಕಾರಿ ನೌಕರರ ಸಂಘಟನೆಗಳು ಆಗ್ರಹಿಸಿದ್ದವು.