ನಾವೂ ಪ್ರಾಣಿಗಳಂತೆ ಬದುಕಿದರೆ ಹೇಗೆ?

ಇತ್ತೀಚೆಗೆ ಹೊಸ ಹುಡುಗ ಹುಡುಗಿಯರಲ್ಲಿ ಜಾಸ್ತಿಯಾದ “ಜೊತೆಯಾಗಿ ಬದುಕುವುದು (ಲಿವಿಂಗ್ ಟುಗೆದರ್)”, ಅವಶ್ಯವಿದ್ದರೆ ಮದುವೆಯಾಗುವುದು, ಇಲ್ಲದಿದ್ದರೆ ಹಾಗೆಯೇ ಮಕ್ಕಳನ್ನು ಪಡೆದು ಸಿಂಗಲ್ ಪೇರೆಂಟ್ ಆಗಿ ಬದುಕುವುದು, ಡೇಟಿಂಗ್ ಇತ್ಯಾದಿಗಳನ್ನು ನೋಡುವ ಹಳಬರು “ಅದೆಂತಹಾ ಜೀವನ, ಇದೊಂದು ಮನುಷ್ಯನ ಬದುಕೇ? ಪ್ರಾಣಿಗಳಿಗಿಂತ ಕಡೆ !, ಮೌಲ್ಯಗಳೇ ಇಲ್ಲದ ಜೀವನ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇಲ್ಲವಾಗಿತ್ತು, ಕಾಲ ಕೆಟ್ಟುಹೋಯಿತು ” ಎಂದು ಅಲವತ್ತುಕೊಳ್ಳುವುದಿದೆ.. ಇದರರ್ಥ ನಾವಿನ್ನೂ ಈ ಹೊಸಕಾಲಕ್ಕೆ ಹೊಂದಿಕೊಂಡಿಲ್ಲ ಎಂದು ಅರ್ಥ. ಆದರೆ ಪ್ರಾಣಿಗಳ ಜೀವನ ದೂರದಿಂದ ನೋಡಲು ಅತ್ಯಂತ ಸುಂದರ, ರಸಮಯ . ಹತ್ತಿರದಿಂದ ನೋಡಿದರೆ ಕರುಣೆ ಇಲ್ಲದ, ಯಾತನಾಮಯ ಹಾಗೂ ದುರಂತ.

-ಡಾ ಎನ್. ಬಿ. ಶ್ರೀಧರ

ಸಾಮಾಜಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಾಣಿಗಳಂತೆ ಬದುಕಿದರೆ ಜೀವನ ಅತ್ಯಂತ ಸರಳ. ಯಾವುದೇ ಪ್ರಾಣಿ ಬದುಕಲು ತಿನ್ನುತ್ತದೆ, ಸಂತಾನೋತ್ಪತ್ತಿ ಮುಂದುವರೆಸಲು ಇತರ ಗಂಡುಗಳ ಜೊತೆ ಹೋರಾಡುತ್ತದೆ ಮತ್ತು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಬಯಸುತ್ತದೆ. ನಾಳೆಗೆಂದು ಕೆಲವೇ ಕೆಲವು ಪ್ರಾಣಿಗಳಾದ ಅಥವಾ ಕೀಟಗಳನ್ನು ಹೊರತು ಪಡಿಸಿದರೆ ಯಾವುದೇ ಪ್ರಾಣಿಯೂ ಕೂಡಿಡುವುದಿಲ್ಲ. ಹುಲಿಗೆ ವಯಸ್ಸಾಯಿತೆಂದು, ಗಾಯವಾಯಿತೆಂದು, ಕಾಲು ಮುರಿಯಿತೆಂದು ಇತರ ಯಾವುದೇ ಹುಲಿ ಅದಕ್ಕೆ ಮಾಂಸ ತಂದುಕೊಡುವುದಿಲ್ಲ. ಅಲ್ಲಿ ಕರುಣೆ ಎಂಬ ಶಬ್ಧಕ್ಕೆ ಅರ್ಥವೇ ಇಲ್ಲ.

ಒಂದು ಕಾಡುಕೋಣ ಹುಲಿಯ ಬಾಯಿಗೆ ಸಿಕ್ಕು ನರಳುತ್ತಿರುವಾಗ ಉಳಿದ ಕಾಡುಕೋಣಗಳು ಅದೆಷ್ಟೆ ಬಲಶಾಲಿಗಳಾದರೂ ಸಹ ಬಂದು ಹುಲಿ/ಸಿಂಹಕ್ಕೆ ಗುದ್ದಿ ಬಿಡಿಸಿಕೊಳ್ಳುವುದಿಲ್ಲ. ಬದಲಾಗಿ ಈ ದಿನ ನನ್ನ ಪಾಳಿಯಲ್ಲವಲ್ಲ ಎಂದು ಸುಮ್ಮನಿದ್ದು ತಮ್ಮ ಪಾಡಿಗೆ ತಾವು ಮೇಯಲು ತೆರಳುತ್ತವೆ. ಸರ್ವೈವಲ್ ಆಫ್ ಫಿಟೆಸ್ಟ್ ಅಂದರೆ ಬಲಶಾಲಿಗೆ ಮಾತ್ರ ಅಲ್ಲಿ ಬದುಕಲು ಅವಕಾಶ. ಬಲಶಾಲಿಗೆ ಮಾತ್ರ ಸಂತಾನೋತ್ಪತ್ತಿ ಭಾಗ್ಯ. ಬಲಶಾಲಿಗೆ ಮಾತ್ರ ರಕ್ಷಣೆ. ಯಾರಿಗೆ ಯಾರೂ ಸಹಾಯ ಮಾಡುವುದಿಲ್ಲ. ಮನುಷ್ಯರಾದ ನಾವೂ ಸಹ ಪ್ರಾಣಿಗಳಾಗಿರುವುದರಿಂದ ಇದೇ ನಿಯಮ ಅನ್ವಯಿಸಿಕೊಂಡಾಗ ಮಾತ್ರ ಬದುಕಲು ಸಾಧ್ಯ. ಯಾರಿಂದಲೂ ಕರುಣೆ, ಸಹಾಯ, ಅನುಕಂಪ, ಸ್ನೇಹ, ಕೃತಜ್ಞತೆ ಇತ್ಯಾದಿಗಳ ನಿರೀಕ್ಷೆ ಇರಲೇಬಾರದು. ಬಂದರೆ ಬೋನಸ್ ಇಲ್ಲದಿದ್ದರೆ ಇಲ್ಲ. ಎಷ್ಟೋ ಜನ “ನಾನು ಎಷ್ಟೆಲ್ಲಾ ಸಹಾಯ ಮಾಡಿದೆ, ಒಂದು ಥ್ಯಾಂಕ್ಸ್ ಸಹ ಹೇಳಲಿಲ್ಲ” ಎಂದು ಹೇಳುವವರು ಇದನ್ನು ನೆನಪಿಟ್ಟರೆ ಸಾಕು.

ಇದನ್ನೂ ಓದಿ: ಒಕ್ಕೂಟ ವ್ಯವಸ್ಥೆಯ ರಾಜಕೀಯ ಮತ್ತು ಹಣಕಾಸು ಆಯಾಮಗಳ ಚರ್ಚೆಗೆ ಅಗತ್ಯ ಪುಸ್ತಕ

ಪ್ರಾಣಿಗಳಿಗೆ ಸಂತಾನೋತ್ಪತ್ತಿ ಒಂದು ಸಹಜ ಪ್ರಕ್ರಿಯೆ. ಬಲಶಾಲಿ ಗಂಡು ಹೆಣ್ಣನ್ನು ಕೂಡುತ್ತದೆ. ಅದರ ಮರಿಗಳು ಹುಟ್ಟಿ ಕಾಡಿನಲ್ಲಿ ಸಶಕ್ತವಾಗಿ ಬದುಕಲಿ ಎನ್ನುವುದು ಪ್ರಕೃತಿ ನಿಯಮ. ಬೆಕ್ಕು ಅಥವಾ ನಾಯಿ ಜಾತಿಗೆ ಸೇರಿದ ಮಾಂಸಾಹಾರಿ ಪ್ರಾಣಿಗಳು ಹುಟ್ಟುವ ಮರಿ ನಿಶ್ಯಕ್ತವಾಗಿದ್ದರೆ ಅದು ಮುಂದೆ ಕಾಡಿನಲ್ಲಿ ಬದುಕಲು ಯೋಗ್ಯವಲ್ಲ ಎಂದು ಗೊತ್ತಾದರೆ ತಾಯಿಯೇ ಅವುಗಳನ್ನು ತಿಂದು ಮುಗಿಸುತ್ತದೆ. ಇದಕ್ಕೆ ಕೆನಿಬಾಲಿಸಮ್ ಎನ್ನುತ್ತಾರೆ. ಇದೊಂದು ಅತ್ಯಂತ ಸಹಜ ಪ್ರಕ್ರಿಯೆ. ಮನುಷ್ಯನಲ್ಲಿ ಇದು ಸಾಧ್ಯವಿಲ್ಲ. ಬುದ್ಧಿ ಮಾಂಧ್ಯ, ದುರ್ಬಲ ಮಗು ಜನಿಸಿದರೂ ಸಹ ನೈಸರ್ಗಿಕ ಮರಣದವರೆಗೆ ಸಾಕುವುದು ಈ ಸಮಾಜದ ಧರ್ಮ.

ಆದರೆ ಈಗ ಆಧುನಿಕ ವೈಜ್ಞಾನಿಕ ಪತ್ತೆ ವಿಧಾನದಿಂದ ಭ್ರೂಣ ಹಂತದಲ್ಲಿಯೇ ಇದನ್ನು ಪತ್ತೆ ಮಾಡಿ ಗರ್ಭಪಾತ ಮಾಡುವುದರಿಂದ ಇಂತಹ ಹುಟ್ಟುವಿಕೆಗಳ ಸಂಖ್ಯೆ ಒಂದಿಷ್ಟು ಕಡಿಮೆಯಾಗಿರಬಹುದು. ಮನುಷ್ಯ ಮತ್ತು ಚಿಂಪಂಜಿಯಂತಹ ಪ್ರಬೇಧಗಳನ್ನು ಹೊರತು ಪಡಿಸಿದರೆ ಲೈಂಗಿಕ ಕ್ರಿಯೆ ಯಾವುದೇ ಪ್ರಾಣಿಗೆ ಸಂತಾನೋತ್ಪತ್ತಿಗಾಗಿ ಇರುವ ಸಹಜ ಪ್ರಕ್ರಿಯೆ. ಅವೆಂದು ಸುಖಕ್ಕಾಗಿ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಬೆದೆಯ ಅವಧಿ ಮುಗಿದ ಮೇಲೆ ಹೆಣ್ಣು ಪ್ರಾಣಿ ಗಂಡನ್ನು ಹತ್ತಿರ ಸುಳಿಯಲೂ ಸಹ ಬಿಡುವುದಿಲ್ಲ. ಲೈಂಗಿಕವಾಗಿ ಪ್ರಬುದ್ಧವೆನಿಸದ ಹೊರತು ಯಾವುದೆ ಪ್ರಾಣಿಗಳು ಅಪ್ರಾಪ್ತ ಹೆಣ್ಣುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ದಾಖಲೆಗಳೇ ಇಲ್ಲ. ಚಿಕ್ಕ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡುವ ದುಷ್ಟ ಮನುಷ್ಯನಿಗೆ ಇದನ್ನು ಹೋಲಿಸುವುದೇ ಬೇಡ. ಮನುಷ್ಯನೂ ಸಹ ಪ್ರಾಣಿಗಳ ಹಾಗಿದ್ದರೆ ದಿನ ಬೆಳಗಾದರೆ ಕೇಳುವ ಅತ್ಯಾಚಾರದಂತ ಪ್ರಕರಣಗಳೇ ಶೂನ್ಯವಾಗುತ್ತಿದ್ದವು.

ಮಕ್ಕಳನ್ನು ಸಾಕುವಲ್ಲಿ ನಾವು ಪ್ರಾಣಿಗಳನ್ನು ನೋಡಿ ಕಲಿಯುವುದು ಬಹಳ ಇದೆ. ಹಕ್ಕಿಗಳು ಮೊಟ್ಟೆಯಿಡುತ್ತವೆ ಮತ್ತು ಪ್ರಾಣಿಗಳು ಮರಿ ಹಾಕಿದ ನಂತರ ಚಿಕ್ಕ ಮರಿಗಳ ರಕ್ಷಣೆ, ಅವುಗಳ ಮತ್ತು ಸ್ವಂತ ಆಹಾರದ ಜವಾಬ್ದಾರಿ ಬಹುತೇಕ ತಾಯಿಯದೇ. ಪ್ರಾಣಿ ಪ್ರಪಂಚದಲ್ಲಿ ಮಕ್ಕಳನ್ನು ಪಾಲಿಸುವ ಒಳ್ಳೆಯ ತಂದೆಯಂದಿರು ಅಪರೂಪ. ಬಹುತೇಕ ಗಂಡುಗಳು ಮರಿ ದೊಡ್ಡದಾಗಿ ಅವು ಪುನ: ಬೆದೆಗೆ ಬಂದು ಕೂಡಲು ಸಿದ್ಧವಾಗಲಿ ಎಂದು ಕಾಯುತ್ತಿರುತ್ತವೆ. ಅದು ಹಾಲು ಕೊಡುವವರೆಗೆ ಮತ್ತು ಕಾವು ಕೊಡುವಾಗ ಪ್ರಸರಣವಾಗುವ “ಪ್ರೊಲಾಕ್ಟಿನ್” ಹಾರ್ಮೋನ್ ಇರುವವರೆಗೆ ಅವುಗಳಿಗೆ ಲೈಂಗಿಕೆ ಚಕ್ರ ಪ್ರಾರಂಭವಾಗುವುದೇ ಇಲ್ಲ. ಕಾರಣ ಹುಲಿ, ಸಿಂಹ ಮತ್ತು ಬೆಕ್ಕುಗಳು ಮರಿಗಳನ್ನು ಸಾಯಿಸಿ ಭಕ್ಷಿಸಲು ಹೊಂಚು ಹಾಕುತ್ತಾ ಇರುತ್ತವೆ. ತೋಳ ಮಾತ್ರ ಒಳ್ಲೆಯ ತಂದೆಯ ಪಾತ್ರ ನಿರ್ವಹಿಸುತ್ತದೆ. ಮರಿ ಹಾಕಿದ ಹೆಣ್ಣು ತೋಲಕ್ಕೆ ಗುಹೆಯ ಒಳಗೇ ಬಗೆ ಬಗೆಯ ಆಹಾರ ತಂದು “ರೂಮ್ ಸರ್ವೀಸ್” ನೀಡುತ್ತದೆ. ಇದೆಂತಾ ಉತ್ತಮ ತಂದೆ ಅಂದರೆ ಅದು ಶುದ್ಧ ತಪ್ಪು.

ಬೇಟೆಯಾಡಿದ ಅಥವಾ ಕದ್ದ ಪ್ರಾಣಿಗಳನ್ನು ಗುಹೆಯ ಒಳಗೆ ಒಯ್ದು ಹುಣ್ಣು ತೋಳಕ್ಕೆ ನೀಡುವ ಮುನ್ನ ಗುಹೆಯ ಹೊರಗಿನ ದಿಬ್ಬದ ಮೇಲೆ ಬೇಟೆಯಾಡಿದ ಪ್ರಾಣಿಯನ್ನು ತೋರಿಸಿ ಊಳಿಡುತ್ತಾ ಬಿಲ್ಡಪ್ ಕೊಡುತ್ತದೆ. ಇದರ ತಂದೆತನ ನೋಡಿ ಉಳಿದ ಯುವತಿ ತೋಳಗಳು ತನ್ನಿಂದ ಮರಿ ಪಡೆಯಲು ಆಯ್ಕೆ ಮಾಡಲಿ ಎನ್ನುವುದೇ ಅದರ ಉದ್ದೇಶವೇ ಹೊರತು ಮರಿಗಳ ಮೇಲೆ ಅದಕ್ಕೆ ಏನೂ ಪ್ರೀತಿ ಇರುವುದಿಲ್ಲ. ಮರಿಗಳು ಒಂದೆರಡು ಹೆಜ್ಜೆ ಹಾಕಿ, ಬೇಟೆಯಾಡುವುದನ್ನು ಕಲಿತು ಸ್ವಲ್ಪದೊಡ್ಡವಾದವೆಂದರೆ ಹೆಣ್ಣು ಅವುಗಳನ್ನು ಒದ್ದೋಡಿಸಿ ಪುನ: ಬೆದೆಗೆ ಬಂದು ಇನ್ನೊಂದು ಹಂತದ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತದೆ. ಹೊಸ ಗಂಡು, ಹೊಸ ಹೆಣ್ಣು, ಹೊಸ ಮರಿಗಳು, ಹೊಸ ಜೀವನ.

ಏನು ಥ್ರಿಲ್ಲಿಂಗ್ ಅಲ್ಲವೇ? ಮಕ್ಕಳನ್ನು ಹೆಜ್ಜೆ ಹೆಜ್ಜೆಗೂ ಗಮನಿಸುತ್ತಾ ಅವರನ್ನು ಓದಿಸಲು, ದುಡಿಯುವ ಕೆಲಸ ಹುಡುಕಲು ಸದಾ ಮೈಯೆಲ್ಲಾ ಕಣ್ಣಾಗಿರುವ ಮತ್ತು ನಂತರ ಅವರು ವಯಸ್ಕರಾಗಿ ಅವರಿಷ್ಟದ ಸಂಗಾತಿಗಳನ್ನು ಹುಡುಕಿಕೊಂಡಾಗ ಗೋಳಿಡುವ ಪಾಲಕರು ಇದನ್ನು ಗಮನಿಸಿಕೊಳ್ಳುವುದು ಒಳ್ಳೆಯದು. ಅಲ್ಲದೇ ಯಾವುದೇ ಪ್ರಾಣಿ ತನ್ನ ಮರಿಗಳು ತನ್ನನ್ನು ಮುದಿತನದಲ್ಲಿ ಕಾಪಾಡಲಿ ಎಂದು ನಿರೀಕ್ಷೆ ಪಡುವುದೇ ಇಲ್ಲ. ಅಸಲಿಗೆ ಅನೇಕ ತಾಯಿಯಂದಿರು ಅವುಗಳು ಮರಿಗಳು ದೊಡ್ದದಾದಾಗ ಪರಸ್ಪರ ಗುರುತಿಸುವುದೂ ಇಲ್ಲ. ಗಂಡು ವಯಸ್ಕ ಮರಿಗಳು ತಾಯಿ ಅಥವಾ ಸಹೋದರಿಯೊಂದಿಗೆ, ತಂದೆ ಪ್ರಾಣಿಗಳು ಮಗಳು ಅಥವಾ ಅಕ್ಕ ತಂಗಿಯರೊಡನೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಂತ ಸಹಜ ಮತ್ತು ಮನುಷ್ಯರಿಗೆ ಊಹಿಸಲೂ ಆಗದ ವಿಷಯ. ಆದರೆ ಲೈಂಗಿಕ ಕ್ರಿಯೆ ನಡೆಸುವಾಗ ಎಂದಿನಂತೆ “ಬಲಶಾಲಿಯದೇ ಬದುಕು”. ಇತರ ಪ್ರಾಣಿಗಳ ಸೆಣಸಾಡಿ ಗೆದ್ದ ಗಂಡು ಮಾತ್ರ ಸಂತಾನೋತ್ಪತ್ತಿ ಮುಂದುವರೆಸಲು ಸಾಧ್ಯ. ಇಲ್ಲಿ ತಂದೆ, ತಾಯಿ, ಅಣ್ಣ, ತಮ್ಮ, ಗೆಳೆಯ, ಗೆಳತಿ ಎಂಬ ಯಾವುದೇ ಮುಲಾಜು ರಿಯಾಯಿತಿ ಇಲ್ಲ.

ಜೀವನದಲ್ಲಿ ವೈಜ್ಞಾನಿಕ ಮನೋಭಾವದಿಂದ ನಡೆಯುವುದು ಮತ್ತು ಸತ್ಯದಲ್ಲಿ ಬದುಕುವುದು ಅತ್ಯಂತ ಕಷ್ಟದ ದಾರಿ. ಈ ವರ್ಗದವರ ಸಂಖ್ಯೆ ಶೇ ೧ ಕ್ಕಿಂತ ಕಡಿಮೆ ಇರಬಹುದೇನೋ? ಬೇರೆಯವರಿಂದ ನಮ್ಮ ವಿಚಾರಕ್ಕೆ ಬೆಂಬಲ ನಿರೀಕ್ಷಿಸುವುದು ಅತ್ಯಂತ ಮೂರ್ಖತನದ ಹತಾಶ ಕೆಲಸ. ನಾವು ನಂಬಿದ ತತ್ವವನ್ನು ಪಾಲಿಸಿದಲ್ಲಿ ನನಗೆ ಖುಷಿ ಸಿಗುತ್ತದೆ ಅಷ್ಟೆ. ನಾವು ಯಾವಾಗಲೂ ಬೇರೆಯವರದು ತಪ್ಪು ನನ್ನದು ಸರಿ ಎಂದು ವಾದಕ್ಕೆ ಬಿದ್ದು ಎಲ್ಲರ ಜೊತೆಗಿನ ಗೆಳೆತನ ಕಳೆದುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ಅವರ ಅಭಿಪ್ರಾಯಕ್ಕೆ ತಲೆಬಾಗುತ್ತಾ ಹೋದರೆ ನಮ್ಮ ಅಸ್ತಿತ್ವವೇ ಉಳಿಯುವುದಿಲ್ಲ. ಸಮಾಜದಲ್ಲಿ ಸಿದ್ಧಗೊಂಡ ಕೆಲವು ನಂಬಿಕೆಗಳಿವೆ. ಅವುಗಳ ವಿರುದ್ಧ ಹೋಗುವಾಗ ಯಾರ ಬೆಂಬಲವನ್ನೂ ನಿರೀಕ್ಷಿಸಬಾರದು. ಈ ನಾಡಿನ ಕಾನೂನಿನಲ್ಲಿ ನಂಬಿಕೆ ಇಡಬೇಕು ಮತ್ತು ಅತ್ಯಂತ ತಾಳ್ಮೆಯಿಂದ ಪರಿಹಾರಕ್ಕಾಗಿ ಕಠಿಣ ಹೆಜ್ಜೆ ಇಡಬೇಕು. ಅಚಲವಾದ ಸತ್ಯತೆ, ನಿರಂತರ ಅಧ್ಯಯನ, ತಜ್ಞರಿಂದ ಕಲಿಯುವುದು, ತಾಳ್ಮೆಯಿಂದ ಆಲಿಸುವುದು ಮತ್ತು ನಮ್ಮದೇ ಆದ ಮಾರ್ಗವನ್ನು ಸದಾ ಸ್ಥಿರಚಿತ್ತದಿಂದ ನಮ್ಮ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ಯಾರು ನಮ್ಮನ್ನು ದೂರಿದರೂ ನಾವು ಯಾರನ್ನೂ ದೂರಬಾರದು. ದೂರು ಇದ್ದರೆ ಈ ಸಮಾಜದಲ್ಲಿ ಒಪ್ಪಿತವಾದ ಸಂವಿಧಾನಾತ್ಮಕವಾದ ವಿಧಾನವನ್ನೇ ಅಳವಡಿಸಿಕೊಳ್ಳಬೇಕು.

ಸತ್ಯದ ನಿಷ್ಟುರತೆಯ ಪ್ರಯಾಣದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅನೇಕರು ಕಾರಣವಿಲ್ಲದೆ ವಿರೋಧಿಗಳಾಗಬಹುದು ಎಂದು ಸಂಪೂರ್ಣವಾಗಿ ಅರಿವಿರಬೇಕು ಮತ್ತು ಇದು ವಾಸ್ತವ ಮತ್ತು ಇದನ್ನು ಅಸಮಾಧಾನವಿಲ್ಲದೆ ಒಪ್ಪಿಕೊಳ್ಳಬೇಕು. ವೃತ್ತಿಪರ ಅಸೂಯೆ, ಅಹಂಕಾರ, ಮನ್ನಣೆಯ ದಾಹ, ಸ್ತ್ರೀಮೋಹ, ಪುರುಷ ಮೋಹ, ಈರ್ಷ್ಯೆ, ದುರಾಸೆ, ದುಶ್ಚಟಗಳು ಮತ್ತು ಸ್ವಾರ್ಥದಂತಹ ಗುಣಲಕ್ಷಣಗಳು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ನೈಸರ್ಗಿಕ ಪ್ರವೃತ್ತಿಗಳಾಗಿವೆ. ಪ್ರಾಣಿ ಪ್ರಪಂಚದಲ್ಲಿ ಇರುವ ಅಲಿಖಿತ ನಿಯಮದಂತೆ ಇಲ್ಲಿ ಬಲಶಾಲಿ ಮಾತ್ರ ಬದುಕುತ್ತಾನೆ. ಮನುಷ್ಯನಲ್ಲಿ ಬಲಶಾಲಿ ಎಂದರೆ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ, ಆರ್ಥಿಕವಾಗಿ, ಜಾತಿಯಲ್ಲಿ, ಸಂಖ್ಯೆಯಲ್ಲಿ ಮತ್ತೂ ಇನ್ನೂ ಅನೇಕ. ಇದು ಪ್ರಕೃತಿಯ ನಿಯಮ.

ಆಯಾ ಕಾಲದಲ್ಲಿ ಆಗುವ ಬದಲಾವಣೆಗೆ ಅತ್ಯಂತ ವೇಗವಾಗಿ ಹೊಂದಿಕೊಳ್ಳುವುದು ಮತ್ತು ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಜಾಣರ ಲಕ್ಷಣ. ಯಾವುದೋ ಕಾಲದಲ್ಲಿ ಮಾಡಿದ ಸಾಧನೆಯನ್ನು ನಿರಂತರವಾಗಿ ಹೇಳಿಕೊಳ್ಳುವುದು ಆತ್ಮರತಿಯಾಗಿರುತ್ತದೆ. ಪ್ರಸ್ತುತವಾಗಿ ಯಾವ ಸಾಧನೆಯ ಹಾದಿಯಲ್ಲಿದ್ದೇವೆ ಮತ್ತು ಎಷ್ಟನ್ನು ಸತ್ಯವಾಗಿ ಸಾಧಿಸಿದ್ದೇವೆ ಎನ್ನುವುದು ಬಹಳ ಮುಖ್ಯ. ಯಾವುದೋ ಒಂದನ್ನು ಉತ್ಕಟವಾಗಿ ಪ್ರೀತಿಸುವುದು, ಆರಾಧಿಸುವುದು ಭ್ರಮೆಯ ಬಾವನಾತ್ಮಕ ಜೀವನ ಮತ್ತು ತಾತ್ಕಾಲಿಕ. ಇದರ ಬುನಾದಿ ಎಂದೂ ಭದ್ರವಾಗಿರುವುದಿಲ್ಲ. ಕುಸಿದಾಗ ಅತ್ಯಂತ ದು:ಖವಾಗುತ್ತದೆ. ಬದಲಾಗಿ ವಾಸ್ತವತೆಯ ನಿರ್ವಿಕಾರ ಮನೋಭಾವ, ಸ್ಥಿತಪ್ರಜ್ಞತೆಯ ಜೀವನ ಸದಾ ಖುಷಿ ನೀಡುತ್ತದೆ. ಪ್ರಪಂಚದಲ್ಲಿ ಎಲ್ಲಾ ಜೀವವಿರುವ ಜಂತುಗಳು ವಿಚಾರ ಮಾಡುವುದು ಒಂದನ್ನೇ. ಈವತ್ತು ಖುಷಿಯಾಗಿರುವುದು ಹೇಗೆ? ಖುಷಿ ಮುಂದಿದೆ ಎಂದು ಈ ಕ್ಷಣದ ಖುಷಿಯನ್ನು ಮುಂದಕ್ಕೆ ಹಾಕುತ್ತಾ ಹೋಗುವುದು ಸಿನಿಕರ ಲಕ್ಷಣ.

ನಾವೇ ಸ್ವತ: ಎಕ್ಸ್ ಅಥವಾ ವೈ ವರ್ಣತಂತುಗಳನ್ನು ನೀಡಿ ಹುಟ್ಟಿದ ಮಕ್ಕಳು ನಮ್ಮ ಮಾತನ್ನು ಕೇಳುವುದಿಲ್ಲ. ಹಾಗಿದ್ದಾಗ ೬ ಮಿಲಿಯನ್ ವರ್ಷಗಳ ಇತಿಹಾಸದ ವರ್ಣತಂತುಗಳನ್ನು ಧಾರೆ ಪಡೆದ ನಮ್ಮ ಹೆಂಡತಿ/ಗಂಡ/ಯಜಮಾನರು/ ಮೇಲಾಧಿಕಾರಿ/ಗಂಡ/ಹೆಂಡತಿ/ಸರ್ಕಾರದ ಜನ ನನ್ನ ಮೂಗಿನ ನೇರಕ್ಕೆ ನಡೆಯಬೇಕೆನ್ನುವುದು ನಿರೀಕ್ಷೆಯ ಪರಮಾವಧಿ.

ಮಾನವ ಸ್ವಭಾವವನ್ನು ಒಪ್ಪಿಕೊಳ್ಳುವುದು ಅತ್ಯಂತ ತರ್ಕಬದ್ಧ ವಿಧಾನವಾಗಿದೆ. ನನಗೆ “ಒಳ್ಳೆಯದು” ಎಂದು ಅನಿಸಿದ್ದು ಮತ್ತೊಬ್ಬರಿಗೆ ಅನಿಸಬೇಕು ಎಂಬ ದುರಾಸೆ ಇರಲೇಕೂಡದು. ಆಗ ಖುಷಿಯಾಗಿರಲು ಸಾಧ್ಯವಿಲ್ಲ. ನಾನು ‘ಒಳ್ಳೆಯದು’ ಎಂದು ಗ್ರಹಿಸುವುದು ಮತ್ತೊಬ್ಬರಿಗೆ ‘ಕೆಟ್ಟ’ವಾಗಿ ಕಾಣಿಸಬಹುದು. ಕಾಲೆಳೆಯುವವರು ಎಲ್ಲೆಲ್ಲೂ ಸಹ ಇದ್ದೇ ಇರುತ್ತಾರೆ. ಕಾಲು ಸಿಕ್ಕಿ ಕೆಳಗೆ ಬಿದ್ದಾಗ ಗಹಗಹಿಸಿ ನಗುತ್ತಾರೆ. ಕೊಡವಿಕೊಂಡು ಆದರೆ ಕಾಲು ಸಿಗದಷ್ಟು ಮೇಲೆ ಹೋದಾಗ ಬೇರೆಯವರ ಕಾಲೆಳೆಯಲು ಹೋಗುತ್ತಾರೆ. ಇದೂ ಸಹ ಮನುಷ್ಯನ ಅತ್ಯಂತ ಸಹಜ ಗುಣ. ಎಲ್ಲರೂ ನನ್ನ ಕಾಳೆಯುತ್ತಾರೆ ಎನ್ನುವವರು ಗಮನಿಸಿಕೊಳ್ಳಿ.

ಪ್ರಪಂಚದ ಅಧ್ಯಕ್ಷ ಟ್ರಂಪು, ಇಲಾನ್ ಮಸ್ಕು, ಅಮೀರ್ ಖಾನ್, ಮತ್ತಿತರ ಸೆಲೆಬ್ರಿಟಿಗಳೂ ಸೇರಿ ಈ ಪ್ರಪಂಚದಲ್ಲಿ ಹೊಗಳಿದಾಗ ಖುಷಿಯಾಗದ ಮನುಷ್ಯನೇ ಇಲ್ಲ. ನಿರಂತರ ಹೊಗಳುತ್ತಾ ಹೋದರೆ ಹೊಗಳಿಸಿಕೊಳ್ಳುವವ ರೇಜಿಗೆ ಪಡುತ್ತಾನೆ. ಕಾರಣ ಹೊಗಳಿಕೆ ಹಿತಮಿತ ಮತ್ತು ನವಿರಾಗಿ ಇದ್ದರೆ ಅದಕ್ಕೆ ಹೊಗಳಿಸಿಕೊಳ್ಳುವವ ಉಬ್ಬಿ ಹಿಗ್ಗಿ ಹೀರೆ ಕಾಯಿಯಾಗುತ್ತಾನೆ. ಜಾಸ್ತಿ ಹೊಗಳಿಬಿಟ್ಟರೆ ಅದು “ಬಕೆಟಿಂಗ್” ಅನಿಸಿಕೊಳ್ಳುತ್ತದೆ. ಇನ್ನೂ ಜಾಸ್ತಿಯಾದರೆ “ಸಿಂಟೆಕ್ಸಿಂಗ್” ಇನ್ನೂ ಜಾಸ್ತಿಯಾದರೆ “ಕಬಿನಿ” ಡ್ಯಾಮಿಂಗ್ ಆಗಿ ಹೆಸರಿನ ಹಿಂದೆ “ಬಕೆಟ್……..” ಎಂಬ ಉಪಮೆ ಸೇರಿಕೊಳ್ಳುತ್ತದೆ. ಹಾಗೆಂದು ಸಂದರ್ಭ ಸಿಕ್ಕಾಗ ಉತ್ತಮ ಗುಣಗಳ ಬಗ್ಗೆ ಹೇಳಿದರೆ ಒಳ್ಳೆಯದು. ಮೂಗಿನ ನೇರಕ್ಕೆ ನಿಷ್ಟುರವಾಗಿ ಹೇಳುವುದರಿಂದ ಎಲ್ಲರಿಗೂ ಕೆಟ್ಟವರಾಗುವುದು ಸಹಜ. ಯಾರಿಗೂ ಸಹ ನಿಜವಾದ ಲೋಪವನ್ನು ಹೇಳಿದರೆ ಖಂಡಿತಾ ಹಿತವೆನಿಸುವುದಿಲ್ಲ. ಮನಸ್ಸಿನಲ್ಲಿ ಅಸಮದಾನದ ಹೊಗೆ ಆಡುತ್ತಲೇ ಇರುತ್ತದೆ.

ಪ್ರಾಣಿಗಳೆಂದೂ ಸುಮ್ಮ ಸುಮ್ಮನೆ ಆಕ್ರಮಣ ಮಾಡುವುದಿಲ್ಲ. ಹಸಿವಾದರೆ ಬೇಟೆಯಾಡುತ್ತವೆ. ಒಂದು ಪ್ರಾಣಿ ಸಿಕ್ಕರೆ ಈವತ್ತೇ ಎಲ್ಲಾ ಬೇಟೆಯಾಡಿ ಬಿಡೋಣ, ನಾಳೆ ಸಿಗುತ್ತದೆಯೋ ಇಲ್ಲವೋ ಎಂದು ಹತ್ತಾರು ಪ್ರಾಣಿಗಳನ್ನು ಬೇಟೆಯಾಡಿ ಒಣಗಿಸಿ ಗುಡ್ಡೆ ಹಾಕಿಕೊಳ್ಳುವುದಿಲ್ಲ. ಇಂದು ಇಂದಿಗೆ, ನಿನ್ನೆ ನಿನ್ನೆಗೆ, ಇರಲಿ ನಾಳೆಯು ನಾಳೆಗೆ ಎನ್ನುವ ನಾಳೆಯ ಚಿಂತೆಯಿಲ್ಲದ ನಿರ್ಲಿಪ್ತ ಬದುಕು ಅವುಗಳದು.

ನಿನ್ನ ಹೆಣವನ್ನು ನೀನೆ ಹೊತ್ತು ಸಾಗಿಸಬೇಕೊ !
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ।।
ನಿನ್ನೋಡಲೇ ಚಿತೆ, ಜಗದ ತಂಟೆಗಳೆ ಸವುದೆಯುರಿ ।
ಮಣ್ಣೆ ತರ್ಪಣ ನಿನಗೆ – ಮಂಕುತಿಮ್ಮ ।।

ಎಂಬ ಸ್ವತಂತ್ರವಾಗಿ ಬದುಕುವ ಬಗ್ಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಹುಟ್ಟುವಾಗಲೇ ಅಳವಂಡಿಸಿಕೊಂಡಿವೆ ನಮ್ಮೆಲ್ಲಾ ಪ್ರಾಣಿಗಳು. ನಮಗೇನು ತೊಂದರೆ?

ಅದೇನೇ ಇದ್ದರೂ, ಎಲ್ಲಾ ವ್ಯಕ್ತಿಗಳು ಅಂತಿಮವಾಗಿ ಕಾನೂನು, ಸಾಮಾಜಿಕ ನಿಯಮಗಳು ಮತ್ತು ನಾಗರಿಕ ಸಮಾಜವನ್ನು ಬಂಧಿಸುವ ನೈತಿಕ ಕಟ್ಟುಪಾಡುಗಳಿಗೆ ಸಲ್ಲಿಸಬೇಕು. ಇದೇ ಜೀವ, ಇದೇ ಜೀವನ. ಆದರೂ ಸಹ ಮನುಷ್ಯ ಪ್ರಾಣಿಗಳಿಗಳಂತೆ, ಸ್ವತಂತ್ರವಾಗಿ ಬದುಕುವುದು, ತನ್ನ ಆಹಾರ ತಾನು ಗಳಿಸಿಕೊಳ್ಳುವುದು, ತನ್ನ ರಕ್ಷಣೆ ತಾನು ಮಾಡಿಕೊಳ್ಳುವುದು, ಯಾವುದಕ್ಕೂ ಯಾರನ್ನೂ ಸಹ ಅವಲಂಭಿಸದಿರುವುದು, ವಯಸ್ಸಾದಾಗ ಯಾರಿಗೂ ಪರಾವಲಂಭಿಯಾಗದೇ ಮತ್ತೊಂದು ಪ್ರಾಣಿಯ ಆಹಾರವಾಗಿ ಸಾರ್ಥಕತೆ ಮೆರೆಯುವಂತ ಜೀವನ ಕಲೆ ರೂಢಿಸಿಕೊಳ್ಳುವುದು, ಸಾಮಾಜಿಕ ಜೀವಿಗಳಾದ ಆನೆ, ಇರುವೆ, ಗೆದ್ದಲು, ಜೇನುಗಳಂತೆ ಒಬ್ಬರಿಗೊಬ್ಬರು ಆಸರೆಯಾಗುತ್ತಾ ಇರುವ ಉತ್ತಮಗುಣಗಳನ್ನು ರೂಢಿಸಿಕೊಂಡು ಬದುಕಿದರದೆ ಸಾರ್ಥಕ.

ಇದನ್ನೂ ನೋಡಿ: ವಚನಾನುಭವ – 27| ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ | ಅಕ್ಕ ಮಹಾದೇವಿ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *