“ಅಕ್ರಮ ಕೂಟ ಸೇರಿದ್ದರು” ಅಂದರೆ ಏನರ್ಥ ಪೊಲೀಸ್ ಕಮೀಷನರ್?: ದಿನೇಶ್ ಹೆಗ್ಡೆ ಪ್ರಶ್ನೆ

ಮಂಗಳೂರು: “ʼಅಕ್ರಮ ಕೂಟ ಸೇರಿದ್ದರುʼ ಅಂದರೆ ಏನರ್ಥ ಮಾನ್ಯ ಪೊಲೀಸ್ ಕಮೀಷನರ್ ? ಅವರು ಯಾವ ಅಪರಾಧ ಎಸಗಲು ಅಲ್ಲಿ ಸೇರಿದ್ದರು!, ಹೆದ್ದಾರಿ ಗುಂಡಿ ಮುಚ್ಚಿ ಎಂದು ಶಾಂತಿಯುತವಾಗಿ ಧರಣಿ ನಡೆಸುವುದು ಅಪರಾಧವೆ?” ಎಂದು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಪ್ರಶ್ನಿಸಿದ್ದಾರೆ.

ತಾರೀಕು 26/11/2023 ರಂದು ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಮಂಗಳೂರಿನ ಕೂಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯ ಹದಿನೈದು ದಿನ ಪೂರ್ವದಲ್ಲಿ ಧ್ವನಿ ವರ್ಧಕ ಬಳಸುವರೇ ಅನುಮತಿಗಾಗಿ ಲಿಖಿತ ಕೋರಿಕೆ ಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ್ದರು.

ಅರ್ಜಿಯಲ್ಲಿ ವಿನಂತಿಸಿದಂತೆ ಪ್ರತಿಭಟನೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಪ್ರತಿಭಟನೆಯ ದಿನದಂದೇ ಬಂದು ಹಿಂಬರಹ ನೀಡುತ್ತಾರೆ. ಮೂಲತಃ ಯಾವುದೇ ಪ್ರತಿಭಟನೆ ಮಾಡಬೇಕಾದರೆ ಯಾವ ಪೊಲೀಸರ ಅಥವಾ ಸರಕಾರದ ಅನುಮತಿಯ ಅಗತ್ಯ ವೂ ಇರುವುದಿಲ್ಲ ಎಂದರು.

ಇದನ್ನೂ ಓದಿ: ಹಾಸನ| ಐಪಿಎಸ್ ಅಧಿಕಾರಿ ರಸ್ತೆ ಅಪಘಾತದಲ್ಲಿ ಸಾವು

ಸರಕಾರದ ಇತರ ಯಾವುದೇ ಸವಲತ್ತುಗಳಿಗೆ ಅನುಮತಿ ಅಥವಾ ದೃಢೀಕರಣಕ್ಕಾಗಿ ನೀಡುವ ಅರ್ಜಿಗಳಂತೆ ಪ್ರತಿಭಟನೆಗಾಗಿ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆಯಬೇಕೆಂದು ಯಾವ ಕಾನೂನಿನ ನಿಯಮಾವಳಿಯಲ್ಲೂ ತಿಳಿಸಿರುವುದಿಲ್ಲ.

ಪೊಲೀಸರಿಂದ ಅನುಮತಿ ಪಡೆಯುವ ಈ ಸಂಪ್ರದಾಯ ಇತ್ತೀಚೆಗೆ ನಡೆದು ಬಂದಿರುವುದು. ಹಿಂದೆ ಯಾವುದೇ ಪ್ರತಿಭಟನೆ ಮಾಡುವಾಗ ಅದರ ಪೂರ್ವದಲ್ಲಿ ಪ್ರತಿಭಟನೆಯನ್ನು ಯಾವ ಬೇಡಿಯನ್ನು ಸರಕಾರದಿಂದ ಒತ್ತಾಯಿಸಿ ಮಾಡಲಾಗುತ್ತದೆ ಎಂದು ಪೊಲೀಸರಿಗೆ ಕೇವಲ ಮಾಹಿತಿಗಾಗಿ ತಿಳಿಸುತ್ತಿದ್ದರು. ಪ್ರತಿಭಟನೆಯ ಮಾಹಿತಿಯನ್ನು ಪೊಲೀಸರು ಸರ್ಕಾರಕ್ಕೆ ತಿಳಿಸುತ್ತಿದ್ದರು. ಇದು ಪೊಲೀಸರ ಕರ್ತವ್ಯದ ಭಾಗ ಕೂಡಾ ಹೌದು ಎಂದು ಹೇಳಿದರು.

ಇದರ ಹೊರತಾಗಿ ಪೊಲೀಸರಿಗೆ ಜನರ ನ್ಯಾಯಯುತ ಬೇಡಿಕೆಗಳನ್ನು ಒತ್ತಾಯ ಮಾಡಿ ಪ್ರತಿಭಟನೆ ಮಾಡುವಾಗ ಪೊಲೀಸರ ಅನುಮತಿಯ ಅಗತ್ಯ ಇರುವುದಿಲ್ಲ. ಪ್ರತಿಭಟನೆಯನ್ನೇ ಮಾಡಬಾರದು ಎಂದು ಹೇಳುವ ಅಥವಾ ನಿಲ್ಲಿಸುವ ಹಕ್ಕು ಪೊಲೀಸರಿಗೆ ಇರುವುದಿಲ್ಲ.

ಸರಕಾರ ನಿಷ್ಕ್ರಿಯವಾದಾಗ ಅಥವಾ ಸರ್ಕಾರದಿಂದ ತೊಂದರೆ ಉಂಟಾದಾಗ ಸರಕಾರದ ಗಮನ ಸೆಳೆಯಲು ಅಥವಾ ತೊಂದರೆಗಳನ್ನು ಸರಿಪಡಿಸಲು ಪ್ರಜೆಗಳಿಗೆ ಇರುವ ಏಕೈಕ ದಾರಿ ಎಂದರೆ ಅದು ಪ್ರತಿಭಟನೆ ಎಂದರು.

ಇದನ್ನೇ ಸಂವಿಧಾನದಲ್ಲಿ ಆರ್ಟಿಕಲ್ 19 ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನಮೂದಿಸಿ ಪ್ರಜೆಗಳಿಗೆ ಹಕ್ಕು ಸ್ಥಾಪಿಸಲಾಗಿದೆ. ಈ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಪೊಲೀಸರಿಗಾಗಲಿ ಇತರ ಯಾವುದೇ ಅಧಿಕಾರಿಗಳಿದಾಗಲಿ ಇಲ್ಲ.

ಜನರು ನಿರಾಯುಧರಾಗಿ ಸೇರುವ ಸಭೆಗಳು , ವ್ಯಕ್ತ ಪಡಿಸುವ ಅಭಿಪ್ರಾಯಗಳು ಸರಕಾರವು ಪ್ರಜಾ ಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆಯದಂತೆ ನಿಯಂತ್ರಿಸುತ್ತವೆ.

ಪ್ರಜೆಗಳು ಸರಕಾರದಿಂದ ತಪ್ಪುಗಳು ನಡೆದಾಗಲೂ ಅದರ ವಿರುದ್ಧ ಮಾತನಾಡದಿದ್ದರೆ ಪ್ರಜಾಪ್ರಭುತ್ವ ನಾಶವಾಗಿ, ನಿರಂಕುಶವಾದಿಗಳು ತಾಂಡವವಾಡುತ್ತಾರೆ.

ಅಷ್ಟಕ್ಕೂ ಮುನೀರ್ ಕಾಟಿಪಳ್ಳ ಯಾವುದೇ ಕಾನೂನು ಬಾಹಿರ ಬೇಡಿಕೆ ಇಟ್ಟು ಪ್ರತಿಭಟನೆಗೆ ಇಳಿದಿಲ್ಲ. ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ನಿರ್ವಹಣೆಯ ಕೊರತೆಯಿಂದ ಉಂಟಾದ ರಸ್ತೆಯ ಮದ್ಯೆಯ ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೆ ಒಳಗಾಗುತ್ತವೆ. ಇದರಿಂದ ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನು, ಎಳೆಯ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರಜೆಗಳ ಜೀವ ರಕ್ಷಣೆ ಸರಕಾರದ ಕರ್ತವ್ಯ. ರಸ್ತೆಯನ್ನು ದುರಸ್ತಿಗೊಳಿಸಿ ಅವಘಡಗಳನ್ನು ತಪ್ಪಿಸುವಂತೆ ಹಲವು ಮನವಿಗಳನ್ನು ಸಲ್ಲಿಸಿದ್ದರೂ ಸರಕಾರ ಮನ್ನಣೆ ನೀಡಿಲ್ಲ. ಹೀಗಾಗಿ ಸರಕಾರದ ಕಣ್ಣು ತೆರೆಸಲು ಹೋರಾಟ ಅನಿವಾರ್ಯವಾಯಿತು ಎಂದರು.

ಪೊಲೀಸರ FIR ಪ್ರಕಾರ ದಿನಾಂಕ 26/11/2024 ರಂದು ನಡೆಸಿರುವ ಪ್ರತಿಭಟನೆ ಕಾನೂನು ಭಾಷೆಯಲ್ಲಿ “ಅಕ್ರಮ ಕೂಟ ಅಂತೆ “ ಮಂಗಳೂರಿನ ಪೊಲೀಸರು ನ್ಯಾಯದ ಬೇಡಿಕೆ ಇಟ್ಟು ಸೇರಿರುವ ಸಭೆಗೆ ಅಕ್ರಮ ಕೂಟ ಎಂಬ ಹೊಸ ವ್ಯಾಖ್ಯಾನವನ್ನು ನೀಡಿದ್ದಾರೆ.

ಯಾವ ಅಪರಾಧವನ್ನು ನಡೆಸಲು ಅಕ್ರಮ ಕೂಟ ಸೇರಿದ್ದಾರೆ? ಎಂದು ವಿವರಿಸಿಲ್ಲ. ಪೊಲೀಸರ ಈ FIR ಸರಕಾರಕ್ಕೆ ಸಲ್ಲಿಸಿರುವ ಸುಳ್ಳು ಮಾಹಿತಿಯಾಗಿದೆ ಅಲ್ಲದೆ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಸದ್ಯದಲ್ಲೇ ಪೊಲೀಸರು ತಮ್ಮ ಅಸಂವಿಧಾನಿಕ ಕೃತ್ಯಕ್ಕೆ ಬೆಲೆ ತರುವುದು ಖಂಡಿತ. ಪೊಲೀಸರ ಕೃತ್ಯವನ್ನು ಎಲ್ಲರೂ ಸoವಿಧಾನ ನೀಡಿರುವ ಅಧಿಕಾರದಿಂದಲೇ ತೀವ್ರವಾಗಿ ಖಂಡಿಸಬೇಕಾಗಿದೆ ಎಂದು ಹೇಳಿದರು.

ಇದನ್ನೂ ನೋಡಿ: ಸಂವಿಧಾನ ಬದಲಿಸಿ, ನಮಗೆ ಬೇಕಾದ ಸಂವಿಧಾನ ಕೊಡಿ ಎಂದ ಪೇಜಾವರ ಮಠದ ಸ್ವಾಮಿ ವಿರುದ್ದ ಪ್ರಕರಣ ದಾಖಲಿಸಬೇಕಲ್ಲವೇ?

Donate Janashakthi Media

Leave a Reply

Your email address will not be published. Required fields are marked *