ಮೂಲ : ಸೋಹಮ್ ಭಟ್ಟಾಚಾರ್ಯ, ಮಣಿಕಾಂತ ನಟರಾಜ್
ಪ. ಬಂಗಾಳ ರಾಜ್ಯದಲ್ಲಿಉದ್ಯೋಗವು ಸದ್ಯ ಮೂರು ಹಂತದ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿಎಲ್ಲಾ ವಲಯಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿದೆ. ಆದರೆ ಶಿಕ್ಷಿತ ಜನ ವಿಭಾಗದ ಮಧ್ಯೆ ನಿರುದ್ಯೋಗದ ಪ್ರಮಾಣ ಬಹಳ ಹೆಚ್ಚಿದೆ. ಎರಡನೆಯದಾಗಿ ಸಾರ್ವಜನಿಕ ವಲಯದಲ್ಲಿಉದ್ಯೋಗ, ಅದರಲ್ಲೂ ಸಂಬಳ ಪಡೆಯುವ ನೌಕರರ ಪ್ರಮಾಣ, ಗಣನೀಯವಾಗಿಕಡಿಮೆಯಾಗಿದೆ. ಮೂರನೆಯದಾಗಿ, ಪ್ರಭುತ್ವವು ಹರಿಬಿಟ್ಟ ಹಿಂಸೆಯೂ ಒಳಗೊಂಡಂತೆ ಎಲ್ಲ ವಿಧದ ದಾಳಿಗಳನ್ನು ಯಾವುದೇ ವಿಧದ ಸಂಘಟಿತ ಹೋರಾಟದ ಮೇಲೆ ನಡೆಸುತ್ತಿರುವುದು, ದುಡಿಯುವ ವರ್ಗದಎಲ್ಲಾ ವಿಧದ ಉದ್ಯೋಗ ಭದ್ರತೆಯನ್ನು ಕೊನೆಗೊಳಿಸಲು ಮುಂದಾಗಿದೆ.
ಅನು: ಶೃಂ.ಶಾ.ನಾ
ಕೋವಿಡ್-19 ಮಹಾಸೋಂಕು ಮತ್ತು ನಂತರ ಸರಣಿಯಲ್ಲಿ ಬಂದ ಆಗಾಗಿನ ಲಾಕ್‌ಡೌನ್‌ಗಳಲ್ಲಿ ಆದ ಜೀವ ಮತ್ತು ಜೀವನೋಪಾಯಗಳ ನಾಶ, ಪ. ಬಂಗಾಲ ರಾಜ್ಯದ ಆರ್ಥಿಕತೆಯಲ್ಲಿಅಡಕವಾಗಿದ್ದ ಬಿಕ್ಕಟ್ಟನ್ನು ಬಯಲಿಗೆಳೆದಿವೆ. ರಾಜ್ಯಕ್ಕೆ ಬೃಹತ್ ಸಂಖ್ಯೆಯಲ್ಲಿ ಮರಳಿ ಬಂದ ಬಡ ವಲಸೆ ಕಾರ್ಮಿಕರು ಅಧಿಕಾರಿಗಳಿಂದ ನೆರವು ಮತ್ತು ಸಹಾಯ ಕೇಳುತ್ತಿರುವುದು ದುರದೃಷ್ಟವಶಾತ್ ಇಂದಿನ ವಾಸ್ತವತೆಯಾಗಿದೆ. ಒಂದು ದಶಕದ ತೃಣಮೂಲ ಕಾಂಗ್ರೆಸ್ ನ ಆಡಳಿತವು ಪ. ಬಂಗಾಳದಲ್ಲಿ ದುಡಿಯುವ ಪರಿಸ್ಥಿತಿ ಮತ್ತುದುಡಿಯುವ ಅವಕಾಶಗಳನ್ನು ಇನ್ನಷ್ಟು ಹದಗೆಡಿಸಿದೆ.
ಈ ಬಿಕ್ಕಟ್ಟಿನ ಪ್ರಮಾಣವನ್ನುಅರ್ಥ ಮಾಡಿಕೊಳ್ಳಲು ನಾವು ಎನ್.ಎಸ್.ಎಸ್.ಓ ನ ಉದ್ಯೋಗ ಮತ್ತು ನಿರುದ್ಯೋಗ ಸರ್ವೆ 2011-12 ಮತ್ತು ಸಾಮೂಹಿಕ ಉದ್ಯೋಗಿಗಳ ಸರ್ವೆ 2018-19 ನಡುವಿನ ಉದ್ಯೋಗ ಮತ್ತು ನಿರುದ್ಯೋಗಗಳ ದತ್ತಾಂಶಗಳನ್ನು ಹೋಲಿಕೆ ಮಾಡಿದೆವು. ಈ ದತ್ತಾಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಮುಖ್ಯವಾಗಿ ರಾಜ್ಯ ಸರ್ಕಾರದ ಹಠಮಾರಿಯಾದ ನಿಷ್ಟ್ರಿಯತೆಯ ನಿಲುವು ಮತ್ತು ದುಡಿಯುವ ವರ್ಗವನ್ನು ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ಅನೌಪಚಾರಿಕ ಕೆಲಸಗಳಿಗೆ ತಳ್ಳಿರುವುದು, ಈ ಉದ್ಯೋಗ ಬಿಕ್ಕಟ್ಟನ್ನುಇನ್ನಷ್ಟು ಹದಗೆಡಿಸಿವೆ ಎಂಬುದು ಕಂಡುಬಂದಿದೆ.
ಪ. ಬಂಗಾಳ ರಾಜ್ಯದ ಉದ್ಯೋಗವು ಸದ್ಯ ಮೂರು ಹಂತದ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ ಎಲ್ಲಾ ವಲಯಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿದೆ. ಆದರೆ ಶಿಕ್ಷಿತ ಜನ ವಿಭಾಗದ ಮಧ್ಯೆ ನಿರುದ್ಯೋಗದ ಪ್ರಮಾಣ ಬಹಳ ಹೆಚ್ಚಿದೆ. ಎರಡನೆಯದಾಗಿ ಸಾರ್ವಜನಿಕ ವಲಯದಲ್ಲಿಉದ್ಯೋಗ, ಅದರಲ್ಲೂ ಸಂಬಳ ಪಡೆಯುವ ನೌಕರರ ಪ್ರಮಾಣ, ಗಣನೀಯವಾಗಿ ಕಡಿಮೆಯಾಗಿದೆ. ಮೂರನೆಯದಾಗಿ, ಪ್ರಭುತ್ವವು ಹರಿಬಿಟ್ಟ ಹಿಂಸೆಯೂ ಒಳಗೊಂಡಂತೆ ಎಲ್ಲ ವಿಧದ ದಾಳಿಗಳನ್ನು ಯಾವುದೇ ವಿಧದ ಸಂಘಟಿತ ಹೋರಾಟದ ಮೇಲೆ ನಡೆಸುತ್ತಿರುವುದು, ದುಡಿಯುವ ವರ್ಗದ ಎಲ್ಲಾ ವಿಧದ ಉದ್ಯೋಗ ಭದ್ರತೆಯನ್ನು ಕೊನೆಗೊಳಿಸಲು ಮುಂದಾಗಿದೆ. ಈ ಟಿಪ್ಪಣಿಯಲ್ಲಿ ಗಮನಿಸಿರುವ ಪ್ರಮುಖ ಆತಂಕವೆಂದರೆ, ಕಳೆದ ಒಂದುದಶಕದಲ್ಲಿರಾಜ್ಯದ ದುಡಿಯಬಲ್ಲ ವಯಸ್ಸಿನ ಜನಸಂಖ್ಯೆ ಸುಮಾರು ಶೇ. 5 ರಷ್ಟು ಹೆಚ್ಚಳವಾಗಿದ್ದರೂ, ಇದಕ್ಕೆ ತಕ್ಕಂತೆ ಹೊಸ ಕೆಲಸಗಳು ಮಾತ್ರ ಸೃಷ್ಟಿಯಾಗಿಲ್ಲ ಎನ್ನುವುದು.
ನಿರುದ್ಯೋಗದ ಹೆಚ್ಚಳ: ಉದ್ಯೋಗಿಗಳಿಗೆ ಆಘಾತ
15 ರಿಂದ 59 ವಯಸ್ಸಿನ ಉದ್ಯೋಗಿಗಳ ನಡುವೆ ನಿರುದ್ಯೋಗದ ಪ್ರಮಾಣ ಶೇ.3 ರಷ್ಟು ಹೆಚ್ಚಿದೆ. ಅಂದರೆ, ಗ್ರಾಮೀಣ ಪ್ರದೇಶಗಳಲ್ಲಿ 8.3 ಲಕ್ಷ ಜನ ಮತ್ತು ನಗರ ಪ್ರದೇಶಗಳಲ್ಲಿ 6.5 ಲಕ್ಷ ಜನ ಉದ್ಯೋಗ ಹುಡುಕುತ್ತಿದ್ದಾರೆ. ಈ ವಿಭಾಗವು 2018-19 ರಲ್ಲಿ ಕನಿಷ್ಠ ಒಂದು ತಿಂಗಳ ಕೆಲಸವನ್ನು ಪಡೆದಿಲ್ಲ ಎನ್ನುವು ದುಗಮನಾರ್ಹ. ರಾಜ್ಯದಲ್ಲಿರುವ ಶಿಕ್ಷಿತ ಉದ್ಯೋಗಿಗಳನ್ನು ಗಣನೆಗೆ ತೆಗೆದುಕೊಂಡರೆ ನಿರುದ್ಯೋಗ ಪ್ರಮಾಣ ಹೆಚ್ಚೂ ಆಘಾತಕಾರಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಉನ್ನತ ಪ್ರೌಢ ಶಿಕ್ಷಣ ಮುಗಿಸಿರುವ ದುಡಿಯಬಲ್ಲ ವಯಸ್ಸಿನವರು ನೂರಕ್ಕೆ 12 ರಂತೆ ನಿರುದ್ಯೋಗಿಗಳಾಗಿದ್ದಾರೆ. ನಗರ ಪ್ರದೇಶದಲ್ಲಿ ಈ ಪ್ರಮಾಣ 100 ಕ್ಕೆ 10 ರಷ್ಟಿದೆ. 2011-12 ಮತ್ತು 2018-19 ರ ಅವಧಿಯಲ್ಲಿ 18 ರಿಂದ 30 ವಯಸ್ಸಿನ ಜನ ವಿಭಾಗಗಳ ನಡುವೆ ನಿರುದ್ಯೋಗ ಪ್ರಮಾಣವು ಶೇ. 10 ರಿಂದ ಶೇ. 13 ಕ್ಕೆ ಏರಿದೆ. ಮಹಿಳೆಯರ ಸ್ಥಿತಿಯಂತೂ ಬಹಳ ದುಸ್ತರವಾಗಿದೆ. ಕಳದೊಂದು ದಶಕದಲ್ಲಿ ಪ. ಬಂಗಾಳದ ಗ್ರಾಮೀಣ ಭಾಗದಲ್ಲಿ ಸುಮಾರು 6.3 ಲಕ್ಷ ಮಹಿಳೆಯರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. 2011 ರಿಂದಲೂ ಶಿಕ್ಷಣದಲ್ಲಿ ನಿರತರಾಗಿರುವ ದುಡಿಯಬಲ್ಲ ವಯಸ್ಸಿನ ಜನರ ಪ್ರಮಾಣ ಶೇ. 22 ಕ್ಕೆ ಸ್ಥಗಿತವಾಗಿರುವುದನ್ನು ಗಣನೆಗೆ ತೆಗೆದುಕೊಂಡಾಗ, ಈ ಉದ್ಯೋಗ ಕಡಿತವು ರಾಜ್ಯದಲ್ಲಿ ಉದ್ಯೋಗಾವಕಾಶಗಳ ತೀವ್ರಕೊರತೆ ಇದೆ ಎನ್ನುವುದನ್ನು ಪ್ರತಿಫಲಿಸುತ್ತಿದೆ.
ಸಾರ್ವಜನಿಕ ವಲಯ ಉದ್ಯೋಗದಲ್ಲಿ ವ್ಯವಸ್ಥಿತ ಇಳಿತ
ಪ. ಬಂಗಾಳ ರಾಜ್ಯದ ಕಳೆದೊಂದು ದಶಕದ ಉದ್ಯೋಗ ಪರಿಸ್ಥಿತಿಯಲ್ಲಿನ ಇನ್ನೊಂದು ಗುಣ ಲಕ್ಷಣವೆಂದರೆ ಸಂಬಳ ಪಡೆಯುತ್ತಿದ್ದ ಮತ್ತು ನಿಗದಿತ ಕೆಲಸ ಮಾಡುತ್ತಿದ್ದ ದುಡಿಯಬಲ್ಲ ವಯಸ್ಸಿನ ಜನಸಂಖ್ಯೆಯ ನಡುವೆ ಇದ್ದ ಸಾರ್ವಜನಿಕ ವಲಯ ಕೆಲಸಗಳಲ್ಲಿನ ಗಣನೀಯ ಇಳಿತ. 2011-12 ರಲ್ಲಿ ಸಾರ್ವಜನಿಕ ವಲಯ ಕೆಲಸಗಳಲ್ಲಿನ ಗಣನೀಯ ಇಳಿತ. 2011-12 ರಲ್ಲಿರಾಜ್ಯ ಉದ್ದಿಮೆಗಳಲ್ಲಿ ಸಂಬಳ ಹೊಂದಿದ್ದ ಉದ್ಯೋಗಗಳ ಪ್ರಮಾಣಗ್ರಾಮೀಣ ಪ್ರದೇಶದಲ್ಲಿ ಶೇ. 37 ಮತ್ತು ನಗರ ಪ್ರದೇಶದಲ್ಲಿ ಶೇ. 31 ಇತ್ತು. ಆದರೆ 2018-19 ರ ಹೊತ್ತಿಗೆ ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಶೇ.30 ಕ್ಕೆ ಇಳಿದಿದ್ದರೆ ನಗರ ಪ್ರದೇಶದಲ್ಲಿ ಶೇ.23 ಕ್ಕೆ ಇಳಿದಿದೆ. ಈ ಇಳಿತಕ್ಕೊಂದು ನಿದರ್ಶನವೆಂದರೆ, ರಾಜ್ಯ ಸರ್ಕಾರವು“ಸ್ಕೂಲ್ ಸರ್ವಿಸ್‌ಕಮಿಶನ್ ಪರೀಕ್ಷೆ” ಗಳ ಮೂಲಕ ನಿಯಮಿತವಾಗಿ ಆಗುತ್ತಿದ್ದಉದ್ಯೋಗ ನೇಮಕಾತಿಗಳನ್ನು ನಿಲ್ಲಿಸಿರುವುದು. ಜೊತೆಗೆ ನೇಮಕಾತಿಯಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿ ಹೆಚ್ಚಾಯಿತು. ರಾಜ್ಯದ ಕೋಲ್ಕತ್ತ ಮತ್ತಿತರ ಪ್ರದೇಶದಲ್ಲಿ ಎದ್ದಿರುವ ಹೋರಾಟದ ಅಲೆಗಳು ಒಂದು ಸಮನಾದ, ನ್ಯಾಯಯುತವಾದ ಉದ್ಯೋಗ ಬೇಕೆನ್ನುವ ಬೇಡಿಕೆಯನ್ನು ಪ್ರತಿಫಲಿಸುತ್ತಿವೆ. ಉದ್ಯೋಗಾವಕಾಶಗಳು ಒಂದೆಡೆ ಕಡಿಮೆಯಾಗುತ್ತಿರುವುದು ಮತ್ತು ಇನ್ನೊಂದೆಡೆ ಉತ್ತಮ ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳ ಪ್ರಮಾಣ ಕಡಿಮೆಯಾಗುತ್ತಿರುವುದು, ಕಳೆದ ಒಂದು ದಶಕದಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಖರಿಯ ಗುಣಲಕ್ಷಣಗಳನ್ನು ಎತ್ತಿತೋರಿಸುತ್ತಿದೆ.
ನಿಯಮಿತ ಉದ್ಯೋಗದಲ್ಲಿ ಉದ್ಯೋಗ ಭದ್ರತೆಯ ತೀವ್ರ ಬಿಕ್ಕಟ್ಟು
ಭಾರತದಲ್ಲಿಉದ್ಯೋಗದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟುಒಂದಕ್ಕೊಂದು ಪೂರಕವಾಗಿರುವ ಎರಡು ಗುಣಲಕ್ಷಣಗಳನ್ನು ಹೊಂದಿದೆ. ಒಂದೆಡೆ ಉದ್ಯೋಗಾವಕಾಶಗಳಲ್ಲಿ ಸ್ಪಷ್ಟ ಇಳಿತವಾಗುತ್ತಿದ್ದರೆ, ಇದಕ್ಕೆ ಜೊತೆಯಾಗಿ ಉದ್ಯೋಗದ ಪರಿಸ್ಥಿತಿಗಳು ಹೆಚ್ಚೆಚ್ಚುಅನೌಪಚಾರಿಕ (ಅಂದರೆ ಯಾವುದೇ ಹಕ್ಕು/ಸವಲತ್ತು/ಭದ್ರತೆಗಳಿಲ್ಲದವು) ಆಗುತ್ತಿವೆ. ಲಾಕ್‌ಡೌನ್ ಅವಧಿಯಲ್ಲಿ ಹಲವು ಬಿಜೆಪಿ ಆಡಳಿತಾರೂಢ ರಾಜ್ಯಗಳು,ಕಾರ್ಮಿಕರು ಹಲವು ಸಮರಧೀರ ಹೋರಾಟಗಳ ಮೂಲಕ ಗಳಿಸಿಕೊಂಡಿದ್ದ ಮತ್ತು ಕಿಂಚಿತ್ತಾದ್ದರೂ ಕಾರ್ಮಿಕರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ನೆರವಾಗುತ್ತಿದ್ದ ಹಕ್ಕುಗಳಿಂದ ವಂಚಿತರನ್ನಾಗಿಸಲು, ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿವೆ. ಪ.ಬಂಗಾಳದಲ್ಲಿ ಹಿಂಸೆಯ ಮೂಲಕ ಮತ್ತು ಪ್ರಭುತ್ವದ ನಿರಂತರ ಬೆದರಿಕೆಯ ಮೂಲಕ ಒಂದು ಬಲವಾದ ಕಾರ್ಮಿಕ ಸಂಘಟನಾ ಚಳುವಳಿಯನ್ನು ನಾಶಗೊಳಿಸಿರುವುದರಿಂದಾಗಿ, ಅಂತಿಮವಾಗಿ ಸಂಬಳ ಪಡೆಯುವ ಉದ್ಯೋಗಗಳೂ ಒಳಗೊಂಡಂತೆ ಎಲ್ಲೆಡೆ ಉದ್ಯೋಗ ಭದ್ರತೆಯ ಅಭಾವದ ಬಿಕ್ಕಟ್ಟಿನೆಡೆ ಸಾಗಿದೆ. ಅಸಂಘಟಿತ ಕ್ಷೇತ್ರದ ಉದ್ದಿಮೆಗಳ ರಾಷ್ಟ್ರೀಯ ಆಯೋಗ (ಎನ್.ಸಿ.ಇ.ಯು.ಎಸ್) ವು ಒಂದು ಸಂಘಟಿತ/ಔಪಚಾರಿಕ ಉದ್ಯೋಗವನ್ನು ಗುರುತಿಸಲು ಮೂರು ಮಾನದಂಡಗಳನ್ನು ನಿಗದಿಪಡಿಸಿದೆ; ಲಿಖಿತ ಕೆಲಸದ ಒಪ್ಪಂದ, ವೇತನ ಸಹಿತ ರಜೆಯ ಸೌಲಭ್ಯ ಹಾಗೂ ನಿಯಮಿತ ಪಾವತಿಯ ವಿಧಾನ, ಮತ್ತು ಕನಿಷ್ಟ ಒಂದು ಸಾಮಾಜಿಕ ಸುರಕ್ಷಾಯೋಜನೆಯ (ಪಿಎಫ್, ಗ್ರಾಚ್ಯುಯಿಟಿ, ಇತ್ಯಾದಿ) ಲಭ್ಯತೆ. ಪ. ಬಂಗಾಳದಲ್ಲಿ ಈ ಮಾನದಂಡಗಳನ್ನು ಇಟ್ಟುಕೊಂಡು ನೋಡಿದಾಗ ನಿಯಮಿತ ಸಂಬಳದ ಉದ್ಯೋಗಗಳಲ್ಲಿ ನಗರ ಪ್ರದೇಶದಲ್ಲಿ 2/3ಪ್ರಮಾಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸರಿಸುಮಾರು 3/4 ಪ್ರಮಾಣದ ಉದ್ಯೋಗಗಳು ಅನೌಪಚಾರಿಕ ಸ್ವರೂಪ ಹೊಂದಿವೆ.
ಆರ್ಥಿಕ ಚಟುವಟಿಕೆಗಳಲ್ಲಿಏರುಪೇರು ತಂದಿರುವ ಕೋವಿಡ್ ಮಹಾಸೋಂಕಿನ ಸಂದರ್ಭದಲ್ಲಿಅತ್ಯಂತ ಸುರಕ್ಷಿತವಾಗಿರುವ ಉದ್ಯೋಗವೂ ಸಹ ಗಂಡಾಂತರ ಎದುರಿಸುತ್ತಿದೆ. ಅನೌಪಚಾರಿಕವಾಗಿ ಉದ್ಯೋಗಗಳಲ್ಲಿರುವವರ ಪರಿಸ್ಥಿತಿಯಂತೂ ಇನ್ನಷ್ಟು ಹದಗೆಟ್ಟಿದೆ. ರಾಜ್ಯ ಸರ್ಕಾರವು ಮೂಕ ಪ್ರೇಕ್ಷಕನಾಗಿ ನಡೆದುಕೊಳ್ಳುವ ಮೂಲಕ ಉದ್ಯೋಗಗಳು ಅನೌಪಚಾರಿಕವಾಗುತ್ತಿರುವ ಪ್ರಕ್ರಿಯೆಯನ್ನು ಪೋಷಿಸುತ್ತಿರುವುದು ಮತ್ತು ಬೆಂಬಲಿಸುತ್ತಿರುವುದು ಸ್ವಷ್ಟವಾಗಿದೆ.
ತೃಣಮೂಲದ ‘ಕಲ್ಯಾಣರಾಜ್ಯ’ದ ಮುಸುಕು ಹರಿದಿದೆ
ಬಹುತೇಕ ಧನದಾಹಿ ಮಾಧ್ಯಮಗಳು ಪ. ಬಂಗಾಳ ರಾಜ್ಯದ ಜನತೆಗೆ ಸಂಬಂಧಪಡದ ಕ್ಷುಲ್ಲಕ ವಿಚಾರಗಳಿಗೆ, ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡೆಸುತ್ತಿರುವ ಜಗಳಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿವೆ. ನಿರುದ್ಯೋಗದ ಸಮಸ್ಯೆ ಕುರಿತಂತೆ ಈ ಎರಡೂ ಪಕ್ಷಗಳು ತಳೆದಿರುವ ಮೌನವು ಇವುಗಳ ಜನ ವಿರೋಧಿ ನೀತಿಗಳನ್ನೂ ಪ್ರತಿಫಲಿಸುತ್ತಿದೆ. ತೃಣಮೂಲ ಕಾಂಗ್ರೆಸ್ ನ ನಡುವಳಿಕೆಯು ಆರ್ಥಿಕ ನೀತಿಗಳ ವಿಷಯದಲ್ಲಿ ಈ ಪಕ್ಷವು ಕೇಂದ್ರದ ನರೇಂದ್ರ ಮೋದಿ ಆಡಳಿತಕ್ಕಿಂತ ಭಿನ್ನವಲ್ಲ ಎಂಬುದನ್ನು ಪ್ರತಿಫಲಿಸುತ್ತಿದೆ. ಜೀವನೋಪಾಯ ಒದಗಿಸಲು ಮತ್ತು ಉತ್ತಮ ಹಾಗೂ ಭದ್ರತೆಯಿರುವ ಉದ್ಯೋಗದ ಹಕ್ಕುಗಳನ್ನು, ಅದರಲ್ಲೂ ಈ ಮಹಾಸೋಂಕಿನ ಸಂದರ್ಭದಲ್ಲೂ ನಿರಾಕರಿಸುತ್ತಿರುವುದು ಮಮತಾ ಬ್ಯಾನರ್ಜಿಯ ಸ್ವಘೋಷಿತ ಕಲ್ಯಾಣ ರಾಜ್ಯದ ಮುಸುಕನ್ನು ಹರಿದುಹಾಕಿದೆ.