ಬೆಂಗಳೂರು: ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ತೀರಾ ಅವಶ್ಯಕತೆಗೆ ಅನುಗುಣವಾಗಿ, ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಾರ್ಯಾಚರಣೆ ಮಾಡುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದ್ದು, ಸದ್ಯಕ್ಕೆ ರಾತ್ರಿ ಬಸ್ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.
ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ನೋಡಿ ಅಗತ್ಯವಿದ್ದರೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸಂಸ್ಥೆ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ ತನಕ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಾರಿಗೆ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಇಂದು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿರುವ ಆರೋಗ್ಯ ಇಲಾಖೆ ವಾರಾಂತ್ಯ ಕರ್ಪ್ಯೂ ಇರುವುದರಿಂದ ಜನದಟ್ಟಣೆ ಕಡಿಮೆ ಇರುತ್ತದೆ. ಹೀಗಾಗಿ ಎಲ್ಲ ಸಂಚಾರ ಅನುಸೂಚಿಗಳು ಕಾರ್ಯನಿರ್ವಹಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ರಾತ್ರಿ ಸೇವೆಗಳನ್ನು ಆನ್‌ಲೈನ್ ಬುಕ್ಕಿಂಗ್ ಮೂಲಕ ಟಿಕೆಟ್ ದೃಢಪಡಿಸಬೇಕು. ಮುಂಗಡ ಟಿಕೆಟ್ ಪರಿಶೀಲಿಸಿ ಅಗತ್ಯವಿದ್ದಲ್ಲಿ ಮಾತ್ರ ರಾತ್ರಿ ಸಂಚಾರ ಮಾಡಬೇಕು. ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಬರುವ ಪ್ರಯಾಣಿಕರಿಗೆ 72 ಗಂಟೆಗಳ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಿದೆ. ಆದರೆ ರಾತ್ರಿ ಪ್ರಯಾಣದ ಬಸ್‌ಗಳಿಗೆ ಸದ್ಯಕ್ಕೆ ಯಾವುದೇ ನಿರ್ಬಂಧ ವಿಧಿಸದೇ ಇರುವುದರಿಂದ ಸದ್ಯಕ್ಕೆ ದೂರದ ಊರಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಇಲ್ಲ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಾರಾಂತ್ಯ ಕರ್ಫ್ಯೂ ಹಿನ್ನಲೆಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸೌಲಭ್ಯವು ಸಾಮಾನ್ಯ ಜನರಿಗೆ ಇರುವುದಿಲ್ಲ.ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಬಸ್‌ಗಳು ಸಂಚಾರ ನಡೆಸಲಿವೆ. ಅಗತ್ಯ ಸೇವೆಗಳನ್ನು ನೀಡುವ ಸಿಬ್ಭಂದಿ ಕಚೇರಿಗೆ ತೆರಳಲು ಮಾತ್ರ ಬಸ್ ಓಡಿಸಲಾಗುತ್ತದೆ.
ಅಗತ್ಯ ಸೇವೆಗಳನ್ನು ಒದಗಿಸುವ ಸಿಬ್ಬಂದಿ ಕಚೇರಿಗೆ ಹೋಗಲು ಶೇ 10ರಷ್ಟು ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತದೆ. ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಬಸ್ ಸಂಚಾರ ಇರುವುದಿಲ್ಲ. ಅಗತ್ಯ ಸೇವೆಗಳಿಗಾಗಿ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ತನಕ ಮಾತ್ರ ಬಸ್ ಸಂಚಾರ ಇರುತ್ತದೆ.
ಮೆಟ್ರೋ ಸಂಚಾರ 30 ನಿಮಿಷಕ್ಕೊಮ್ಮೆ
ವೀಕೆಂಡ್ ಕರ್ಫ್ಯೂ ವೇಳೆಯೂ ಮೆಟ್ರೋ ಸಂಚಾರ ಇರಲಿದೆ. ಹಸಿರು, ನೇರಳೆ ಮಾರ್ಗದಲ್ಲಿ ಯಥಾಪ್ರಕಾರ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಆದರೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಇರಲಿದೆ. ಸದ್ಯ ಮೆಟ್ರೋ ರೈಲಿನಲ್ಲಿ 1800-1900 ಜನ ಪ್ರಯಾಣಿಸುತ್ತಿದ್ದಾರೆ. ಈಗ ಇದರ ಮಿತಿಯನ್ನು 800-900ಕ್ಕೆ ಇಳಿಸಲಾಗಿದೆ. ಸದ್ಯ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸುತ್ತಿದೆ ಆದರೆ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ 30 ನಿಮಿಷಕ್ಕೊಂದು ಮೆಟ್ರೋ ಸಂಚಾರ ಮಾಡಲಿದೆ.
ಯಾರು ಸಂಚಾರ ನಡೆಸಬಹುದು?
- ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು. ಬೋರ್ಡ್/ ಕಾರ್ಪೊರೇಷನ್‌ನ ಸಿಬ್ಬಂದಿಗಳು. ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ & ತುರ್ತು ಸೇವೆಗಳ ಸಿಬ್ಬಂದಿ ಬಸ್‌ನಲ್ಲಿ ಸಂಚಾರ ನಡೆಸಬಹುದಾಗಿದೆ.
- ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇತರ ಸಿಬ್ಬಂದಿಗಳು.
- ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಅವರನ್ನು ಚಿಕಿತ್ಸೆ, ಪರೀಕ್ಷೆಗೆ ಕರೆದುಕೊಂಡು ಹೋಗವವರು ಸಂಚಾರ ನಡೆಸಬಹುದು.
- ಸರ್ಕಾರಿ/ ಖಾಸಗಿ ಬ್ಯಾಂಕ್, ವಿಮೆ ಕಂಪನಿಗಳ ಸಿಬ್ಭಂದಿಗಳು, ಅಧಿಕಾರಿಗಳು. ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವವರು ಸಂಚರಿಸಬಹುದು.
- ದೂರದ ಊರುಗಳಿಗೆ ಪ್ರಯಾಣ ಮಾಡುವ ಬಸ್, ವಿಮಾನ, ರೈಲು ಪ್ರಯಾಣಿಕರು. (ಟಿಕೆಟ್ ತೋರಿಸಿ ಪ್ರಯಾಣ ಮಾಡಬೇಕು).
- ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
- ಬಸ್‌ನಲ್ಲಿ ಪ್ರಯಾಣಿಸುವ ಎಲ್ಲರೂ ಕಡ್ಡಾಯವಾಗಿ ಐಡಿ ಕಾರ್ಡ್ ತೋರಿಸಬೇಕು. ಸಾಮಾನ್ಯ ಜನರಿಗೆ ಬಸ್‌ನಲ್ಲಿ ಸಂಚಾರ ನಡೆಸಲು ಅವಕಾಶವಿಲ್ಲ.
ಬಸ್ ಸಿಬ್ಬಂದಿಗಳಿಗೆ ಸೂಚನೆ
- ಬಸ್ಸಿನ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ಸಿಬ್ಬಂದಿಗಳು ಸ್ಯಾನಿಟೈಸರ್ ಬಳಕೆ ಮಾಡಬೇಕು
- ಬಸ್ಸಿನಲ್ಲಿ ಸೀಟು ಇದ್ದರೆ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು
- ನಿಗದಿಪಡಿಸಿದ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‌ಗಳನ್ನು ನಿಲ್ಲಿಸಬೇಕು
- ಎಲ್ಲಾ ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲನೆ ನಡೆಸಿಯೇ ಬಸ್‌ಗೆ ಹತ್ತಿಸಿಕೊಳ್ಳಬೇಕು.
ಪ್ರಯಾಣಿಕರಿಗೆ ಸೂಚನೆ
- ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮಾಸ್ಕ್ ಇಲ್ಲದ ಪ್ರಯಾಣಿಕರು ಬಸ್ ಹತ್ತುವಂತಿಲ್ಲ.
- ಬಸ್ ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
- ಸೀಟು ಭರ್ತಿಯಾದ ಮೇಲೆ ಪ್ರಯಾಣಿಕರು ಹತ್ತುವಂತಿಲ್ಲ. ನಿಂತು ಸಂಚಾರ ನಡೆಸಲು ಅವಕಾಶವಿಲ್ಲ.
- ಜ್ವರ ಸೇರಿದಂತೆ ಇತರ ಯಾವುದೇ ರೋಗ ಲಕ್ಷಣಗಳಿದ್ದರೆ ಬಸ್‌ನಲ್ಲಿ ಪ್ರಯಾಣ ಮಾಡುವಂತಿಲ್ಲ.