ಬೆಂಗಳೂರು: ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂಯೊಂದಿಗೆ ವಾರಾಂತ್ಯ ಕರ್ಫ್ಯೂ ಸೇರಿದಂತೆ ಮತ್ತಷ್ಟು ಕಠಿಣ ನಿರ್ಬಂಧಗಳು ಜಾರಿಗೆ ಬಂದಿವೆ. ಆದರೆ, ಸರ್ಕಾರದ ನಿರ್ಧಾರದ ಬಗ್ಗೆ ಹಲವು ಕಡೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಈಗಾಗಲೇ ಹೇರಲ್ಪಟ್ಟಿದ್ದ ಕೋವಿಡ್, ಲಾಕ್‌ಡೌನ್ ಮತ್ತಿತರ ಕಾರಣಗಳಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಉದ್ಯಮಿಗಳು, ವ್ಯಾಪಾರಸ್ಥರು, ಅಟೋ, ಕ್ಯಾಬ್ ಚಾಲಕರು ಕಂಗಾಲಾಗಿದ್ದಾರೆ. ಇದೀಗ ಮತ್ತೆ ವಾರಾಂತ್ಯ ಕರ್ಫ್ಯೂ ಸೇರಿದಂತೆ ಶೇಕಡಾ 50ರಷ್ಟು ಮಾತ್ರ ಜನರಿಗೆ ಅವಕಾಶ ಮಾಡಿಕೊಡುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ.
ವಾರಾಂತ್ಯ ಕರ್ಫ್ಯೂ ಹಾಗೂ ಕಠಿಣ ನಿರ್ಬಂಧಗಳು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ. ಜನರು ಆರ್ಥಿಕ ಹಾಗೂ ಶೈಕ್ಷಣಿಕ ಕಾರಣಗಳಿಂದ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಈ ನಿಟ್ಟಿನಲ್ಲಿ ನಿರ್ಬಂಧ ವಾಪಸ್ ಪಡೆಯಬೇಕು. ಎರಡು ಡೋಸ್ ಲಸಿಕೆ ಪಡೆದವರಿಗೆ ಕೋವಿಡ್ ನಿಂದ ಜೀವಹಾನಿ ಇಲ್ಲ ಎಂದು ಸರ್ಕಾರವೇ ಹೇಳಿದೆ. ಹೀಗಿರುವಾಗ ಮತ್ತಷ್ಟು ನಿರ್ಬಂಧಗಳು ಏಕೆ? ಕಠಿಣ ನಿರ್ಬಂಧಗಳ ಮೂಲಕ ತಮ್ಮ ವೈಫಲ್ಯಗಳನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವಾಗಿದೆ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ.
“ಲಾಕ್‌ಡೌನ್, ಕರ್ಫ್ಯೂ, ಕೋವಿಡ್ ನಮ್ಮ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಸದ್ಯ ತಕ್ಕ ಮಟ್ಟಿಗೆ ಚೇತರಿಗೆ ಕಂಡುಕೊಳ್ಳುತ್ತಿದ್ದೇವೆ. ಇದೀಗ ಮತ್ತೆ ನಿರ್ಬಂಧಗಳನ್ನು ಜಾರಿಗೊಳಿಸಿದರೆ ಬದುಕು ಸಾಗಿಸುವುದು ಹೇಗೆ” ಎಂದು ಆಟೋ ಚಾಲಕರು ಪ್ರಶ್ನಿಸಿದ್ದಾರೆ.
ಜನಸಾಮಾನ್ಯರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಸ್ಥರು, ಬಟ್ಟೆ ವ್ಯಾಪಾರಿಗಳು ವಾರಾಂತ್ಯ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ಫ್ಯೂ ಹಾಗೂ ಶೇಕಡಾ 50ರಷ್ಟು ಭಾಗವಹಿಸುವಿಕೆಯಿಂದ ಜನರ ಬದುಕು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಎಫ್‌ಕೆಸಿಸಿ ಅಧ್ಯಕ್ಷ ಐಎಸ್ ಪ್ರಸಾದ್ “ನಿರ್ಬಂಧದಿಂದ ಹೋಟೆಲ್, ಟೂರಿಸಂ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಸಿನಿಮಾ ಹಾಗೂ ಹೋಟೆಲುಗಳಲ್ಲಿ ಶೇ.50ರಷ್ಟು ಕಾರ್ಯಾಚರಣೆಗೆ ಅನುಮತಿ ನೀಡಿರುವುದರಿಂದಲೂ ಆರ್ಥಿಕ ನಷ್ಟ ಉಂಟಾಗಲಿದೆ. ಉದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಸ್ತಿ ತೆರಿಗೆ, ಪರವಾನಗಿ ಶುಲ್ಕದಲ್ಲೂ ಶೇ.50ರಷ್ಟು ರಿಯಾಯಿತಿ ನೀಡಲಿ” ಎಂದು ಮನವಿ ಮಾಡಿದರು.
ಸರ್ಕಾರದ ಆದೇಶದ ವಿರುದ್ಧ ಶಿವಮೊಗ್ಗದ ಉದ್ಯಮಿಗಳ ಆಕ್ರೋಶ ಹೊರಹಾಕಿದ್ದಾರೆ. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ಹಲವು ಉದ್ಯಮ ಸಂಕಷ್ಟ ಅನುಭವಿಸಿವೆ. ಸದ್ಯ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಅಂಗಡಿಗಳಿಗೆ ಜನರು ಬರುವುದೇ ವಾರದ ರಜಾ ದಿನಗಳಲ್ಲಿ, ಹೀಗಾಗಿ ಸರ್ಕಾರ ಕೈಗೊಂಡ ಕಠಿಣ ಕ್ರಮ ಜಾರಿಯಿಂದಾಗಿ ವ್ಯಾಪಾರಕ್ಕೆ ಹೊಡೆತ ಬೀಳಲಿದೆ ವಾರಾಂತ್ಯ ಕರ್ಫ್ಯೂ ಮಾತ್ರ ಬೇಡ ಎಂದು ಮನವಿ ಮಾಡಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಕೆಲವೊಂದು ನಿರ್ಬಂಧಗಳು ಅಗತ್ಯವಿದೆ. ಆದರೆ ಲಸಿಕೆ ಪಡೆದುಕೊಂಡ ಬಳಿಕವೂ ಕಠಿಣ ನಿರ್ಬಂಧ ಜಾರಿಗೊಳಿಸಿದರೆ ಹೇಗೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯಗಳಿಂದ ಕೇಳಿಬರುತ್ತಿದೆ.