ವಿ ದ ಪೀಪಲ್ ಆಫ್ ಇಂಡಿಯಾ: ದುರಿತ ಕಾಲದ ಭರವಸೆ

ಚಾರ್ವಾಕ ರಾಘು, ಸಾಗರ

ತೆಲುಗು ಕವಿ ಚರಬಂಡ ರಾಜು ಅವರ (ಕನ್ನಡಕ್ಕೆ–ಕೆ. ರಾಮಯ್ಯ) ಕವನದ ಸಾಲೊಂದು ಹೀಗಿದೆ – “ಕಪ್ಪು ಕಪ್ಪು ಮೋಡದಲ್ಲಿ ಕಗ್ಗತ್ತಲ ಬಾನಿನಲ್ಲಿ ಮೂಡಿತೊಂದು ಕೆಂಪು ಚುಕ್ಕಿಯು, ಓ ರಾಮಣ್ಣ ಬಡವರೆದೆಯ ಆಶಾ ಕಿರಣವು” ಎಂದು. ನಂಜು ಕಾರುವ ದೇಶದ ಹೀನ ಮನಸ್ಸುಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ, ಜನರ ನಡುವೆ ಜಾತಿ-ಧರ್ಮದ ಗೋಡೆಗಳನ್ನು ನಿರ್ಮಿಸುತ್ತಾ, ಸಮಾಜವನ್ನು ಅಡ್ಡಡ್ಡ ಸೀಳುತ್ತಾ ಇರುವ ಹೊತ್ತಿನಲ್ಲಿ ಶಿವಮೊಗ್ಗ ರಂಗಾಯಣವು ಭಾರತದ ಸಂವಿಧಾನದ ಮೂಲ ಆಶಯವನ್ನು ಮುನ್ನೆಲೆಗೆ ತಂದು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿ ದ ಪೀಪಲ್ ಆಫ್ ಇಂಡಿಯಾ ಎಂಬ ನಾಟಕವನ್ನು ಸಿದ್ಧಪಡಿಸಿ ಜನರ ಬಳಿಗೆ ತೆರಳಿ ಪ್ರದರ್ಶನ ನೀಡುತ್ತಿದೆ.

ಭಾರತದ ಸಂವಿಧಾನವು ಇಡೀ ಭಾರತವನ್ನು ಧರ್ಮನಿರಪೇಕ್ಷವಾಗಿ ಸಮತೆ ಸ್ವಾತಂತ್ರ್ಯ ಭ್ರಾತೃತ್ವ ಸಹೋದರತ್ವ ಮತ್ತು ಲಿಂಗ ಸಮಾನತೆಗಾಗಿ ಎಂತೆಂತಹ ಅಂಶಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ತಾಯ್ತನವನ್ನು ತೋರಿದೆ ಎನ್ನುವುದನ್ನು ನಾಟಕವು  ಪ್ರಸ್ತುತಪಡಿಸುತ್ತದೆ. ಜತೆಗೆ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಜಾರಿಯಾಗದ ಹಾಗೆ ಈ ಸಮಾಜದ ಭೂತಮುಖಿ ಶಕ್ತಿಗಳು ಎಂತೆಂತಹ ಕುತಂತ್ರಗಳನ್ನು ಸಂವಿಧಾನವು ಜಾರಿಯಾದ ದಿನದಿಂದಲೂ ನಡೆಸಿಕೊಂಡು ಬಂದಿದೆ ಎನ್ನುವುದನ್ನು ನಾಟಕವು ಪ್ರೇಕ್ಷಕರ ಎದುರು ವಿವರವಾಗಿ ಬಯಲು ಮಾಡುತ್ತದೆ. ಈ ನಾಟಕವನ್ನು’ ಶಿವಮೊಗ್ಗ, ರಂಗಾಯಣ’ ತಂಡದವರು ಮಾರ್ಚ್ ಇಪ್ಪತ್ತರಂದು ಹೆಗ್ಗೋಡಿನ ನೀನಾಸಂ ಶಿವರಾಮ ಕಾರಂತ ರಂಗಮಂದಿರದಲ್ಲಿ ಪ್ರಸ್ತುತಪಡಿಸಿದರು.

ನಾಟಕ ಆರಂಭವಾಗುವುದು ಅಲೆಮಾರಿ ಹಾಡುಗಾರರು ಹಾಡುತ್ತಾ ಬೇಡುತ್ತಾ ಊರಿಂದ ಊರಿಗೆ ತಿರುಗಾಟ ಮಾಡುತ್ತಾ ಇರುತ್ತಾರೆ. ಹೀಗೆ ತಿರುಗಾಟ ನಡೆಸುವ ಗುಂಪು ಅಂಬೇಡ್ಕರ್ ಮನೆಯತ್ತ ಬರುತ್ತದೆ. ಅಲ್ಲಿ ಅವರು ಅಂಬೇಡ್ಕರ್ ಸಹಾಯಕನನ್ನು ಭೇಟಿ ಮಾಡುತ್ತದೆ. ಅಲ್ಲಿ ಸಂವಿಧಾನದ ವಿಚಾರಗಳು ಪ್ರಸ್ತಾಪವಾಗಿ, ನಿಧಾನವಾಗಿ ಸಂವಿಧಾನ ಎಂದರೇನು ಎನ್ನುವ ಪಾಠವನ್ನು ಅಲೆಮಾರಿ ಹಾಡುಗಾರರು ಅಂಬೇಡ್ಕರ್ ಸಹಾಯಕನ ಮೂಲಕ ತಿಳಿಯಲು ಆರಂಭಿಸುತ್ತಾರೆ. ನಂತರ ಒಳಕೋಣೆಯಲ್ಲಿ ಓದುತ್ತಾ ಕೂತಿರುವ ಅಂಬೇಡ್ಕರ್ ಅವರನ್ನು ಈ ಹಾಡುಗಾರರ ತಂಡವು ಭೇಟಿಯಾಗುತ್ತದೆ. ಅಂಬೇಡ್ಕರ್ ಅಲೆಮಾರಿ ತಂಡದಲ್ಲಿರುವ ನೀಲವ್ವ, ಮಾದೇಶ ಮುಂತಾದವರನ್ನು ಗುರುತಿಸಿ ಅವರೊಂದಿಗೆ ಆಪ್ತವಾಗಿ ಮಾತನಾಡುತ್ತಾ ಅವರ ಕಷ್ಟ ಸುಖಗಳನ್ನು ಆಲಿಸಿ  ಶಿಕ್ಷಣ ಎಷ್ಟು ಮುಖ್ಯ, ಸಮಾಜದಲ್ಲಿರುವ ಅನಿಷ್ಟಗಳನ್ನು ಎದರಿಸುವುದು ಹೇಗೆ ಎನ್ನುವುದನ್ನು ಮನದಟ್ಟು ಮಾಡಿ ಕೊಡುತ್ತಾರೆ.

ಇದಾದ ನಂತರ ನಾಟಕ ಇನ್ನೊಂದು ಮಗ್ಗುಲಿಗೆ ಹೊರಳಿ, ಭಾರತದ ಸಂವಿಧಾನವು ರಚನೆಯಾದ ಬಗೆ, ಅದರಲ್ಲಿರುವ ಪ್ರಮುಖ ಅಂಶಗಳು ಯಾವುವು  ಎನ್ನುವುದನ್ನು ಎಳೆಎಳೆಯಾಗಿ ವಿವಿಧ ಪಾತ್ರಗಳ ಮೂಲಕ ಬಿಚ್ಚುತ್ತಾ ಹೋಗುತ್ತದೆ. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಆಯ್ಕೆಯಾಗುವುದು; ಇರುವ ಏಳು ಸದಸ್ಯರಲ್ಲಿ ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಉಳಿದ ಆರು ಜನರು ಸಂವಿಧಾನ ರಚನೆಯಲ್ಲಿ ಯಾವ ಯಾವ ಕಾರಣಕ್ಕೆ ನಿಷ್ಕ್ರಿಯರಾಗುತ್ತಾರೆ ಎನ್ನುವುದನ್ನು ಪಾತ್ರಗಳು ವಿವರಿಸುತ್ತಾ ಹೋಗುತ್ತವೆ. ನಂತರ ಅಂಬೇಡ್ಕರ್ ಒಬ್ಬರೇ  ಸಂವಿಧಾನ ರಚನೆಯಲ್ಲಿ ತೊಡಗುವುದು; ನಂತರ ಸಂವಿಧಾನದಲ್ಲಿ ಏನು ಏನು ಇರಬೇಕು ಎನ್ನುವ ಚರ್ಚೆಯ ಹಲವು ಸಭೆಗಳು ರಂಗದ ಮೇಲೆ ಘಟಿಸುತ್ತವೆ.

ಹೀಗೆ ನಡೆದ ಒಂದು ಸಭೆಯಲ್ಲಿ ‘ಭಾರತವು ಹಿಂದೂ ರಾಷ್ಟ್ರವಾಗಬೇಕು’ ಎನ್ನುವ ಪ್ರಸ್ತಾಪವಾಗುತ್ತದೆ. ಆದರೆ ಭಾರತವು ಸ್ವಾತಂತ್ರ ಪಡೆಯಲು ಈ ಸಮಾಜದ ಎಲ್ಲ ವರ್ಗದವರು ಎಲ್ಲ ಧರ್ಮದವರು ತ್ಯಾಗ, ಬಲಿದಾನ ಮಾಡಿದ್ದಾರೆ. ನಮ್ಮ ಭಾರತ ಒಂದು ಸಮಾಜವಾದೀ ಪ್ರಜಾಪ್ರಭುತ್ವ ರಾಷ್ಟ್ರವಾಗಬೇಕು ಎನ್ನುವ ತೀರ್ಮಾನಕ್ಕೆ ಸಭೆಯು ಬರುತ್ತದೆ. ನಂತರ, ದೇಶಕ್ಕೆ ಕೇಂದ್ರದಲ್ಲಿ ಕೇಂದ್ರೀಕೃತ ಮತ್ತು ಏಕ ಭಾಷೆಯ ಬಲಾಢ್ಯ ಸರ್ಕಾರ ಬರಬೇಕು ಎನ್ನುವ ಚರ್ಚೆ ನಡೆದು, ಹಾಗೆ ಆದರೆ, ಭಾರತದ ವೈವಿಧ್ಯಕ್ಕೆ ಯಾವ ರೀತಿ ಧಕ್ಕೆ ಬರುತ್ತದೆ. ಹಲವು ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ಭಾರತದಲ್ಲಿ ಇಂತಹ ಸರ್ಕಾರ ಇದ್ದರೆ ಯಾವ ರೀತಿಯ ತೊಡಕು ಉಂಟಾಗುತ್ತದೆ ಎನ್ನುವುದನ್ನು ಬಹಳ ಮನಮುಟ್ಟುವ ಹಾಗೆ ವಿವರಿಸಲಾಗಿದೆ. ನಂತರ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಬೇಕೆ, ಬೇಡವೆ ಎನ್ನುವ ಚರ್ಚೆಯೂ ಆಗುತ್ತದೆ.

ಹೀಗೆ ಮುಂದುವರೆದ ನಾಟಕ ಧಿಡೀರ್ ಎಂದು ವರ್ತಮಾನದ ಘಟನೆಗಳಿಗೆ ಸಂವಿಧಾನದ ಆಶಯಗಳ ಮೂಲಕ ಮುಖಾಮುಖಿಯಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ವರದಕ್ಷಿಣೆ, ಶಿಶುಭ್ರೂಣ ಹತ್ಯೆ, ಜಾತಿ ಕಾರಣಕ್ಕೆ ಆಗುವ ಕೊಲೆಗಳು, ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಹೀಗೆ ಹತ್ತು ಹಲವು ವಿಚಾರಗಳನ್ನು ಪಟಪಟನೆ ಪ್ರೇಕ್ಷಕರ ಮುಂದಿಡುತ್ತಾ ಕೊನೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಸಂವಿಧಾನದಲ್ಲಿ ಅವಕಾಶವಿದ್ದರೂ ಯಾವ ರೀತಿ ಅವರಿಗೆ ಅನ್ಯಾಯ ಮಾಡಲಾಗಿದೆ ಎನ್ನುವುದನ್ನು ಸುಪ್ರಿಂ ಕೋರ್ಟ್ 2018ರಲ್ಲಿ ಐತಿಹಾಸಿಕ ತಿರ್ಪು ನೀಡಿ ಅವರಲ್ಲಿ ಕ್ಷಮೆಯಾಚಿಸುವ ಘಟನೆಯ ಮೂಲಕ ಎದುರಾಗುತ್ತದೆ.

ನಾಟಕದಲ್ಲಿ ಬಹಳ ಪ್ರಮುಖವಾಗಿ ಚರ್ಚೆ ಆಗುವುದು ಸ್ವಾತ್ರಂತ್ರ ಬಂದ ಮೇಲೆ, ನಮ್ಮದೇ ಆದ ಸಂವಿಧಾನ ರಚಿಸಿಕೊಂಡ ಮೇಲೆ, ಭಾರತದ ದುಡಿಯುವ ವರ್ಗಕ್ಕೆ ದಕ್ಕಿದ್ದು ರಾಜಕೀಯ ಸ್ವಾತ್ರಂತ್ರ ಮಾತ್ರ. ಇದು ಒಂದು ಮತ, ಒಂದು ಮೌಲ್ಯ ಎನ್ನುವುದನ್ನು ಸಾರಿ ಹೇಳಿತು. ಸಾಮಾಜಿಕ ಮತ್ತು ಆರ್ಥಿಕ ಸ್ವಾತ್ರಂತ್ರ ಇನ್ನೂ ಕೂಡ ಗಗನ ಕುಸುಮವಾಗಿದೆ. ಇದು ಹೀಗೇ ಮುಂದುವರೆದರೆ ಈ ನೆಲದ ದುಡಿಯುವ ಜನಗಳು ತಾವೇ ಕಟ್ಟಿದ ಸಂವಿಧಾನವನ್ನು ತಾವೇ ಸ್ಫೋಟಿಸುತ್ತಾರೆ. ಅಂತಹ ಸಂದರ್ಭ ಬರದ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಂಬೇಡ್ಕರ್ ಹೇಳುವ ಮಾತು, ಭೂಮಿ, ಬಂಡವಾಳ, ಮತ್ತು ಅಧಿಕಾರ ಹೊಂದಿರುವ ವರ್ಗಗಳಿಗೆ ಛಡಿಯೇಟು ಕೊಟ್ಟ ಹಾಗೆ ಇದೆ. ಇದಕ್ಕಾಗಿ ನಾಟಕಕಾರರು ಅಂಬೇಡ್ಕರ್ ಮೂಲಕ ಹೇಳಿಸುವ ‘ಬಾಯಾರಿದ ಪ್ರತಿಯೊಂದು ಬೇರಿಗೆ ನೀರು ತಲುಪಿಸಲೇ ಬೇಕು’ ಎಂಬ ಮಾತು ಬಹಳ ಮಾರ್ಮಿಕ  ಮತ್ತು ಬಹಳ ರೂಪಾತ್ಮಕವಾಗಿದೆ.

ಹಾಗೆಯೇ, ಹೂ ಬನದ ಕನಸಿಗೆ ದಾರಿ ದೂರ ಬಲು ದೂರ ಎನ್ನುವ ಮಾತು, ಸಂವಿಧಾನದ ಆಶಯಗಳು ಸಂಪೂರ್ಣ ಜಾರಿಗೆ ಬರಬೇಕು ಎನ್ನುವ ಕಾರಣಕ್ಕೆ ಬರುವ ಹಾಡಿನ ಸಾಲು, ಕತ್ತಲ ಕತ್ತಿಗಳು ದಂಡೆತ್ತಿ ಬರಲಿ ಎನ್ನುವ ಬಂಡಾಯದ ಮಾತು, ಸಮ ಸಮಾಜವನ್ನು ಬಯಸುವ ಪ್ರತಿಯೊಬ್ಬರಲ್ಲೂ ಒಂದು ರೀತಿಯಲ್ಲಿ ಪ್ರತಿಭಟಿಸುವ ಮನಸ್ಥಿತಿಯನ್ನು ಹುಟ್ಟು ಹಾಕುತ್ತವೆ. ಎಷ್ಟೇ ತೊಂದರೆಯಾದರೂ ಸಂವಿಧಾನ ಕೊಟ್ಟ ಹಕ್ಕುಗಳನ್ನು ಬಳಿಸಿಕೊಂಡು ಅಹಿಂಸಾತ್ಮಕ ಹೋರಾಟದ ಮೂಲಕ ಸಮ ಸಮಾಜವನ್ನು ಪಡೆಯಬೇಕು ಎನ್ನುವುದನ್ನು ಸಾರುತ್ತಾ ನಾಟಕಕಾರರು ನೀ ಹಿಡಿದ ಮಾತ್ರಕ್ಕೆ ನಿಲ್ಲುವುದೆ ನೀರು? ಎನ್ನುವ ಶಕ್ತಿಶಾಲಿ ಸಂಭಾಷಣೆಯ ಮೂಲಕ ಆತ್ಮವಿಶ್ವಾಸ ಮೂಡಿಸುತ್ತಾರೆ. ಕನ್ನಡದ ಬಹುಮುಖ ಪ್ರತಿಭೆಯಾದ ಇದು, ನಾಟಕಕಾರ ಡಾ. ರಾಜಪ್ಪ ದಳವಾಯಿಯವರು, ಈ ನೆಲದ ರೋಗಗಳಿಗೆ ಭಾರತದ ಸಂವಿಧಾನವು ಹೇಗೆ ಮದ್ದಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ತಮ್ಮಅಪಾರ ಓದು, ಓಡಾಟ, ಹೋರಾಟಗಳ ಮೂಲಕ ಪಡೆದವರು. ಹೀಗಾಗಿ ಅವರು ಸಂವಿಧಾನವನ್ನು ಒಂದು ಯಶಸ್ವೀ ನಾಟಕವನ್ನಾಗಿಸಿದ್ದಾರೆ. ಇದನ್ನು ನಿರ್ದೇಶಕ ಲಕ್ಷ್ಮಣ್ ಕೆ.ಪಿ ಅಚ್ಚುಕಟ್ಟಾಗಿ ರಂಗಕ್ಕೆ ಅಳವಡಿಸಿದ್ದಾರೆ.

ಈ ನಾಟಕದ ಯಶಸ್ಸಿಗೆ ಮುಖ್ಯವಾಗಿ ಎರಡು ಅಂಶಗಳು ಕಾರಣ ಇವೆ. ಒಂದು: ಪಾಂಡಿತ್ಯವನ್ನು ಹೇರದೆ ಭಾಷೆಯನ್ನು ಸರಳಗೊಳಿಸಿರುವುದು. ಕೆಲವೊಮ್ಮೆ ವಾಚ್ಯವಾಯಿತು ಅನ್ನಿಸಿದರೂ ಸಾಮಾನ್ಯ ಜನರಿಗೂ ಸಂವಿಧಾನದ ನೈಜ ಆಶಯವು ಅರಿವಾಗಲು ಈ ತಂತ್ರವು ಬಹಳ ಉಪಯುಕ್ತವಾಗಿದೆ. ಇನ್ನೊಂದು: ಜನರಿಗೆ ಸಂಭಾಷಣೆಗಿಂತ ಸಂಗೀತ – ಹಾಡು ಬೇಗ ತಲುಪುತ್ತದೆ. ನಿರ್ದೇಶಕರು, ಅಲೆಮಾರಿ ಹಾಡುಗಾರರ ಮೇಳವನ್ನು ಕಾಲ ಕಾಲಕ್ಕೆ ಮಧ್ಯ ಪ್ರವೇಶಿಸುವಂತೆ ಮಾಡಿ, ನಾಟಕವು ಜನರನ್ನು ತಲುಪುವಂತೆಯೂ ಮತ್ತು ನಾಟಕ ಎಲ್ಲೂ ಡ್ರ್ಯಾಗ್ ಆಗದೆ ಲವಲವಿಕೆಯಿಂದ ಸಾಗುವಂತೆ ಮಾಡುತ್ತದೆ. ನಾಟಕಕ್ಕೆ ಬಳಸಲಾದ ಸೆಟ್ ಬಹಳ ಸರಳ ಮತ್ತು ಅರ್ಥಪೂಣವಾಗಿದೆ. ಬ್ಯಾಕ್ ಡ್ರಾಪಿನಲ್ಲಿ ಬಳಸಲಾದ ರಾಶಿ ರಾಶಿ ಪುಸ್ತಕವಿರುವ ಕಪಾಟುಗಳು, ಅಂಬೇಡ್ಕರ್ ಅವರು ಓದಿಗೆ ಎಷ್ಟು ಮಹತ್ವ ಕೊಡುತ್ತಿದ್ದರು ಎನ್ನುವುದನ್ನು ಧ್ವನಿಸುತ್ತದೆ. ಹಾಗೆಯೇ ಇತರೆ ಸೆಟ್ಟುಗಳು ಕೂಡ ದೃಶ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ವಸ್ತ್ರ ವಿನ್ಯಾಸ ಕೂಡ ಬಹಳ ಸರಳವಾಗಿ ಮತ್ತು ದೃಶ್ಯಕ್ಕೆ ತಕ್ಕಂತೆ ಇದೆ. ಇಲ್ಲೊಂದು ಮಾತು ಹೇಳಬೇಕು. ಟಿವಿ ನಿರೂಪಕಿ ಮತ್ತು ಕ್ಯಾಮರಾ ಮನ್ ಸಂವಿಧಾನದ ಓದಿನ ಬಗ್ಗೆ ಸಂದರ್ಶನ ಮಾಡಲು ಬಂದಾಗ ಅಲೆಮಾರೀ ಹಾಡುಗಾರರು ಕ್ಯಾಮಾರಾದಲ್ಲಿ ಇಣುಕಿ ಇಣುಕಿ ನೋಡುವುದು, ಆಧುನಿಕತೆ ಎನ್ನುವುದು ಎಲ್ಲರ ಹಂಬಲ ಎನ್ನುವುದನ್ನು ಸೂಚಿಸುತ್ತದೆ. ಜತೆಯಲ್ಲೇ ಕ್ಯಾಮರಾ ಮನ್ ಧರಿಸಿದ ಚಡ್ಡಿ ಮೇಲಿನ ಬಟ್ಟೆಯನ್ನು ಉದುರಿಸಲು ಪ್ರಯತ್ನಿಸುವುದು ನಿಜಕ್ಕೂ ಈ ಹೊತ್ತಿನ ಮಾಧ್ಯಮ ತಲುಪಿರುವ ಸ್ಥಿತಿಯನ್ನು ಅರ್ಥಪೂಣವಾಗಿ ರುಜುವಾತು ಮಾಡುತ್ತದೆ. ಬೆಳಕಿನ ವಿನ್ಯಾಸವನ್ನು ಸಂದರ್ಭಕ್ಕೆ ತಕ್ಕಂತೆ ರೂಪಿಸಲಾಗಿದೆ. ಸಂಗೀತ ಇನ್ನಷ್ಟು ಪಕ್ವವಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ಇನ್ನು, ಎಲ್ಲಾ ಪಾತ್ರಧಾರಿಗಳೂ ಚೆನ್ನಾಗಿ ನಟಿಸಿದ್ದಾರೆ. ನೀಲವ್ವನ ಪಾತ್ರಧಾರಿಯಾದ ರೇವತಿ ಎಂ ಕುಂದನಾಡು ಅವರ ಪಾತ್ರಧಾರಣೆಯಂತೂ ‘ದ ಬೆಸ್ಟ್’.

ಕೋಮು ಹಿಂಸೆ, ಜಾತಿಯತೆ, ಮರ್ಯಾದೆ ಹತ್ಯೆಗಳು ಮುಂತಾದ ಅಮಾನವೀಯ ಘಟನೆಗಳು ದಿನನಿತ್ಯ ನಡೆಯತ್ತಿರುವ ಈ ದುರಿತ ಕಾಲದಲ್ಲಿ “ ವಿ ದ ಪೀಪಲ್ ಆಫ್ ಇಂಡಿಯಾ” ನಿಜಕ್ಕೂ ಭರವಸೆಯ ಬೆಳ್ಳಿ ಕಿರಣ. ಕೊನೆಯಲ್ಲಿ ಒಂದು ಮಾತು. ಅಲೆಮಾರೀ ಹಾಡುಗಾರರೊಂದಿಗೆ ಇರುವ ನಾಯಿ ಪಾತ್ರ ಬಹಳ ಸೂಕ್ಷ್ಮಗಳನ್ನು ಬಿಂಬಿಸುತ್ತದೆ. ಒಂದು ನಾಯಿ ತನ್ನ ಮಾಲೀಕನಿಗೆ ಎಷ್ಟು ನಿಷ್ಠೆಯಿಂದ ಇದ್ದು ಆಪತ್ಕಾಲದಲ್ಲಿ ಕಾಪಾಡುತ್ತದೋ ಹಾಗೆ ನಾವೂ ಕೂಡ ಅಂಬೇಡ್ಕರ್ ರಚಿತ ಸಂವಿಧಾನವನ್ನು ನಾಯಿ ನಿಷ್ಠೆಯಿಂದ ಕಾಪಿಟ್ಟುಕೊಳ್ಳಬೇಕಿದೆ. ಆಗ ಅಂಬೇಡ್ಕರ್ ರಚಿತ ಸಂವಿಧಾನವು  ದೇಶವನ್ನು ನಮ್ಮನ್ನು ಆಪತ್ಕಾಲದಲ್ಲಿ ಕಾಪಾಡುತ್ತದೆ ಎನ್ನುವುದು ಅಷ್ಟೇ ಸತ್ಯ. ಇಂತಹ ಒಂದು ಪಾತ್ರವನ್ನು ಸೃಷ್ಟಿ ಮಾಡಿದ ನಿರ್ದೇಶಕರ ಕ್ರೀಯಾಶೀಲತೆಗೆ ‘ಹ್ಯಾಟ್ಸ್ ಆಫ್’. ಇನ್ನು, ಅಂಬೇಡ್ಕರ್ ಅವರಿಗೆ ನಾಯಿ ಎಂದರೆ ಬಹಳ ಇಷ್ಟವಾದ ಪ್ರಾಣಿ ಕೂಡ. ಇಂತಹದೊಂದು ಅರಿವು ಮೂಡಿಸುವ ನಾಟಕ ನೀಡಿದಕ್ಕೆ ಶಿವಮೊಗ್ಗ ರಂಗಾಯಣಕ್ಕೆ ಸಮತೆಯನ್ನು ಬಯಸುವ ದೇಶದ ಜನರ ಪರವಾಗಿ ಧನ್ಯವಾದಗಳು.

Donate Janashakthi Media

Leave a Reply

Your email address will not be published. Required fields are marked *