ನಮಗೆ ಸೀರೆ ಬೇಡ, ಮೂಲಭೂತ ಸೌಕರ್ಯ ಬೇಕು : ಶಾಸಕ ಶಾಮನೂರು ಕೊಟ್ಟ ಗಿಫ್ಟನ್ನು ಎಸೆದು ಮಹಿಳೆಯರ ಆಕ್ರೋಶ

ದಾವಣಗೆರೆ: ನಮಗೆ ಸೀರೆ ಬೇಡ, ಮೂಲಭೂತ ಸೌಕರ್ಯ ಬೇಕು ಎಂದು ದಾವಣಗೆರೆಯ  ದಕ್ಷಿಣ ಕ್ಷೇತ್ರದ ಶಾಸಕ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನೀಡಿದ ಉಡುಗೊರೆಗಳನ್ನು ರಸ್ತೆಗೆ ಎಸೆದು ಮಹಿಳೆಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಕಳೆದ 1 ತಿಂಗಳಿನಿಂದ ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ಭಾವಚಿತ್ರವಿರುವ ಬ್ಯಾಗ್‌ಗಳಲ್ಲಿ ಸೀರೆ, ಕುಕ್ಕರ್, ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಮತದಾರರಿಗೆ ನೀಡುತ್ತಿದ್ದಾರೆ. ಅದರಲ್ಲಿ ಯುಗಾದಿ ಹಬ್ಬದ ಶುಭಾಶಯಗಳು ಎಂದು ಶುಭಾಶಯ ತಿಳಿಸುತ್ತಾ ಉಡುಗೊರೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾಷಾ ನಗರದಲ್ಲಿ ಗಿಫ್ಟ್ ಹಂಚಿಕೆ ಮಾಡಿದ್ದು ಅಲ್ಲಿನ ಸ್ಥಳೀಯ ಮಹಿಳೆಯರು ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸರಿಯಾದ ಚರಂಡಿ ಇಲ್ಲ, ರಸ್ತೆ ಇಲ್ಲ. ಪ್ರಾಣಿಗಳು ವಾಸ ಮಾಡುವ ರೀತಿ ನಾವು ವಾಸ ಮಾಡುತ್ತಾ ಇದ್ದೇವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದರೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಆದರೆ ಈಗ ಸೀರೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಈ ಸೀರೆಗಳು ಬೇಡ ಎಂದು ಸ್ಥಳೀಯ ಮಹಿಳೆಯರು ಕೊಟ್ಟ ಸೀರೆಗಳನ್ನು ರಸ್ತೆಯಲ್ಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಗಿಫ್ಟ್ ಬೇಡ. ಮೂಲಭೂತ ಸೌಕರ್ಯ ಬೇಕು :
ಸ್ಥಳೀಯರು ಹಲವು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದರು. ನಮಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಶಾಸಕರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಭಾಷಾ ನಗರ 17ನೇ ಕ್ರಾಸ್ ಎಲ್ಲಿದೆ ಎಂದು ಶಾಸಕರು ಕೇಳುತ್ತಾರೆ. ಅಷ್ಟರ ಮಟ್ಟಿಗೆ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲಿನ ಸ್ಥಳೀಯ ಪ್ರತಿನಿಧಿಗಳು ಕೂಡಾ ಅವರ ಗಮನಕ್ಕೆ ತರುತ್ತಿಲ್ಲ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಮಕ್ಕಳಿಗೆ ಕಾಯಿಲೆಗಳು ಬರುತ್ತಿವೆ. ಈಗ ಬಂದ ಹಬ್ಬದ ಶುಭಾಶಯ ತಿಳಿಸಿ ಗಿಫ್ಟ್ ಕೊಡ್ತಾರೆ. ನಮಗೆ ಗಿಫ್ಟ್ ಬೇಡ. ಮೂಲಭೂತ ಸೌಕರ್ಯ ಬೇಕು. ಇಲ್ಲವಾದರೆ ಚುನಾವಣೆಯಲ್ಲಿ ನಾವು ನಿರ್ಧಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜನರು ಸರಿಯಾದ ಮೂಲಭೂತ ಸೌಕರ್ಯ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದು, ಚುನಾವಣೆ ಬಂದಿದೆ ಎಂದು ಗಿಫ್ಟ್‌ಗಳನ್ನು ನೀಡಿ ಮನವೊಲಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿರುವ ಹಿನ್ನಲೆ ಅಲ್ಲಿಯ ಸ್ಥಳೀಯ ನಿವಾಸಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *