ಹೊನ್ನಾವರ: ಭಾರತ ಇದು ಶರಣ ಪರಂಪರೆಯ ನೆಲ. ಅವರ ಸಮತೆ ಮತ್ತು ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತ. ಹಾಗಾಗಿ ಭಾರತದ ಬಹುತ್ವ ಮರೆತು ‘ಏಕ’ ಸಿದ್ದಾಂತದ ದೇಶ ಕಟ್ಟಲು ಸಾಧ್ಯವಿಲ್ಲ. ಇದನ್ನು ಈ ದೇಶದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ನುಡಿದರು.
ಅವರು ತಾಲೂಕಿನ ಕೆರೆಕೋಣದಲ್ಲಿ ನಡೆದ ಪ್ರೀತಿ ಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದನ್ನೂ ಓದಿ:ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ : ಮಾರ್ಕ್ಸ್ ಅವರ ಪ್ರಧಾನ ಕೊಡುಗೆಗಳು
ಬಸವಣ್ಣನವರಿಗೆ ಚಾತುರವರ್ಣ ಪಾಪದ ಮೂಲವೆನಿಸಿತು. ಅದಕ್ಕಾಗಿಯರೆ ಅವರು ತಮ್ಮ ಹುಟ್ಟನ್ನು ಅಸ್ಪ್ರಶ್ಯತೆಯ ಮೂಲದಲ್ಲಿ ಪವಿತ್ರೀಕರಿಸಿಕೊಂಡರು. ಇದೇ ನಿಜವಾದ ಭಂಡಾಯ. 12 ನೇ ಶತಮಾನದಲ್ಲಿಯೇ ಶರಣರಿಂದ ಸಾಮಾಜಿಕ ಕ್ರಾಂತಿಯಾಗಿತ್ತು. ಅಂಬೇಡ್ಕರ ಕೂಡಾ ಅದನ್ನೇ ಮಾಡಿದ್ದರು. ಆದರೆ ನಾವು ಈವತ್ತಗೂ ಸ್ವಾತಂತ್ರ್ಯ ಚಳುವಳಿಯನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಮಹಾತ್ಮಾ ಗಾಂಧಿ ಹತ್ಯೆಯನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಇವುಗಳನ್ನು ನಾವು ಅರ್ಥೈಸಿಕೊಳ್ಳದೇ ಇರುವುದರಿಂದಲೇ ನಾವು ನೈತಿಕ ಅಧಪತನದತ್ತ ಸಾಗುತ್ತಿದ್ದೇವೆ. ಈ ಎಲ್ಲ ಕಾರಣದಿಂದಾಗಿಯೇ ಭವಿಶ್ಯ ಮರೆತರೆ ವರ್ತಮಾನದ ಭಾರತ ಕಾಣಲು ಸಾಧ್ಯವಿಲ್ಲ. ಭವಿಷ್ಯ ಭಾರತ ನಮಗೆ ಮಾರ್ಗದರ್ಶಿಯಾಗಿರಬೇಕು. ಬುದ್ದ, ಬಸವ, ಅಂಬೇಡ್ಕರರ ಬದುಕು ಹಾಗೂ ಮೌಲ್ಯಗಳು ನಮಗೆ ದಾರಿ ತೋರುವ ಬೆಳಕಾಗಿವೆ. ಆ ಬೆಳಕಿನ ದಾರಿಯಲ್ಲಿ ನಾವು ನಡೆಯಬೇಕು ಎಂದರು.
ಆರ್.ವಿ. ಭಂಡಾರಿ ಹಾಗೂ ವಿಠ್ಠಲ ಭಂಡಾರಿ ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲ. ರಾಜ್ಯದ ಸಾಮಾಜಿಕ ಹೋರಾಟದ ಶಕ್ತಿಗಳಾಗಿದ್ದರು. ಬಂಡಾಯ ಸಾಹಿತ್ಯಕ್ಕೆ ಆರ್.ವಿ. ಭಂಡಾರಿಯವರ ಬದ್ದತೆಯಿತ್ತು. ಅವರ ಬರಹ ತೆವಲಾಗಿರಲಿಲ್ಲ ಅವರಿಗೆ ಬರಹ ಅನ್ನೋದು ಬದ್ದತೆಯಾಗಿತ್ತು. ಕಾಯಕವಾಗಿತ್ತು. ಇವರೀರ್ವರೂ ಶರಣರ ರೀತಿಯಲ್ಲಿ ಬದುಕು ನಡೆಸಿ ಬಂಡಾಯವನ್ನು ಹಣತೆಯನ್ನು ಬೆಳಗಿಸಿದವರು. ಬರೆದಂತೆ ಬದುಕಿದವರು. ವಿಠ್ಠಲ ಭಂಡಾರಿ. ಸಮ ಸಮಾಜ ನಿರ್ಮಾಣಕ್ಕಾಗಿ ತನ್ನ ಚಳುವಳಿಗಳ ಮೂಲಕ ಜಗತ್ತಿನ ಪ್ರೀತಿಯನ್ನೇ ತನ್ನೊಳಗೆ ತುಂಬಿಕೊಂಡಂತಹ ವ್ಯಕ್ತಿ ಯಾಗಿದ್ದ. ಚಳುವಳಿಗೊಂದು ಬದುಕು ಸಾಂಸ್ಕೃತಿಕ ರೂಪ ಕೊಟ್ಟಿದ್ದ. ಇವರ ಬದುಕು ಹಾಗೂ ವಿಚಾತಗಳು ಇಂದಿನ ಸಮಾಜಕ್ಕೆ ಅಗತ್ಯವಾಗಬೇಕಿದೆ ಎಂದರು.
ಇದನ್ನೂ ಓದಿ:ಹೆಡ್ ಕಾನ್ಸ್ ಟೇಬಲ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಅರಕ್ಷಕ ವರಿಷ್ಠಾಧಿಕಾರಿಗಳಾದ ಎಮ್. ನಾರಾಯಣ ಮಾತನಾಡಿ ಎಲ್ಲ ಆಲೋಚನೆಗಳಿಂದಲೇ ಇಂದು ಸಾಹಿತ್ಯ ಉಳಿದುಕೊಂಡಿದೆ. ಸಮಾಜವನ್ನು ಸಮತೆಯಿಂದ ಕಟ್ಟುವ ಭಾವಜೀವಿಗಳು ಇಂದಿನ ಅಗತ್ಯ ಎಂದರು.
ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ, ಲೇಖಕಿ ಡಾ. ಅನಸೂಯಾ ಕಾಂಬಳೆ ‘ಜನ ಜೀವನ : ಮತ ಧರ್ಮ ನಿರಪೇಕ್ಷತೆ’ ವಿಷಯವಾಗಿ ಉಪನ್ಯಾಸ ನೀಡಿದರು. ಸಮಾಜದೊಳಗೆ ಇಂದು ನಾವೇ ಕೆಲವು ಮನುಷ್ಯ ವಿರೋಧಿಯಾದ ಕಸ ಚೆಲ್ಲಿದ್ದೀವಿ. ಸ್ವಚ್ಚ ಸಮಾಜಕ್ಕಾಗಿ ನಾವೇ ಆ ಕಸಗಳನ್ನು ಎತ್ತಬೇಕಿದೆ. ಇಂದು ಮನುಷ್ಯನ ಹೆಸರು, ಆಹಾರ, ಅಂಗಡಿ ಹೀಗೆ ಪ್ರತಿಯೊಂದು ಸಂಗತಿಗಳಲ್ಲಿಯೀ ಕೂಡಾ ಜಾತಿ ಗುರುತಿಸುವ ಕೆಲಸವಾಗುತ್ತಿದೆ. ಇಂದು ಪುರೋಹಿತ ಶಾಹಿ ಹಾಗೂ ಬಂಡಾವಾಳ ಶಾಹಿಗಳು ಸೇರಿಕೊಂಡು ಆಧುನಿಕ ವಿಚಾರಗಳ ಅಜೆಂಡಾಗಳನ್ನು ಮುನ್ನೆಲೆಗೆ ತರುತ್ತಿವೆ. ಮೂಲಭುತ ಮತೀಯವಾದವು ಯಾವುದೇ ಧರ್ಮದ ಮೂಲಕ ಜಾರಿಗೊಂಡರೂ ಅದು ಅಪಾಯಕಾರಿ. ಅದು ಮನುಷ್ಯ ಧರ್ಮ ಆಗಲು ಸಾಧ್ಯವಿಲ್ಲ. ಸಮೂಹ ಮಾಧ್ಯಮಗಳು ರಾಜಕೀಯ ಶಕ್ತಿಯ ಮುಖವಾಣಿಯಾದಾಗ ಮೂಲಭೂತ ಮತೀಯವಾದವನ್ನು ಪ್ರೇರೇಪಿಸುತ್ತವೆ. ಅದನ್ನು ತಡೆೆಯಬೇಕು. ಧರ್ಮನಿರಪೇಕ್ಷತೆ ಎಂಬುದು ಮನುಷ್ಯ ಬದುಕಿನ ಬಹು ದೊಡ್ಡ ಮೌಲ್ಯವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೃಷ್ಣಾ ನಾಯಕ ಹಿಚ್ಕಡ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೆ ಯಾವುದೇ ಧರ್ಮ ಅನುಸರಿಸುವ ಅಥವಾ ಅನುಸರಿದೇ ಇರುವ ಹಕ್ಕು ನಮ್ಮ ಸಂವಿದಾನದಲ್ಲಿದೆ. ಸಾಮಾಜಿಕ ಸೌಹಾರ್ದತೆಗೆ ಧಾರ್ಮಿಕ ನಿರಪೇಕ್ಷತೆ ಸಹಕಾರಿಯಾಗಿದೆ. ಈ ವಿಚಾರದಲ್ಲಿ ಆರ್.ವಿ. ಭಂಡಾರಿ ಹಾಗೂ ವಿಠ್ಠಲ ಭಂಡಾರಿ ಈ ಸಮಾಜಕ್ಕೆ ತಮ್ಮ ಬರಹ ಹಾಗೂ ಬದುಕಿನ ಮೂಲಕವೇ ಆದರ್ಶವಾಗಿದ್ದರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ಸಂವಿದಾನದ ಪೀಠಿಕೆ ಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಧ್ಯಾ ನಾಯ್ಕ ಕವಿತೆ ವಾಚಿಸಿದರು. ಸ್ವಾಮಿ ಗಾಮನಳ್ಳಿ ಚಳುವಳಿಯ ಹಾಡು ಹಾಡಿದರು. ಸಹಯಾನದ ಡಾ. ಮಾಧವಿ ಭಂಡಾರಿ, ಇಂದಿರಾ ಭಂಡಾರಿ, ಯಮುನಾ ಗಾಂವಕರ ಉಪಸ್ಥಿತರಿದ್ದರು.
ಯಮುನಾ ಗಾಂವಕರ ಸ್ವಾಗತಿಸಿ ನಿರೂಪಿಸಿದರು. ಮಾಧವಿ ಭಂಡಾರಿ ವಂದಿಸಿದರು. ನಾಡಿನ ಹಲವು ಚಿಂತಕರು ಭಾಗವಹಿಸಿದ್ದರು.