ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?

-ಸಿ.ಸಿದ್ದಯ್ಯ

ಬಿಜೆಪಿ ಹೊಸ ಹೊಸ ಕುತಂತ್ರದ ಬಲೆ ಬೀಸುವ ಮೂಲಕ ಜನರನ್ನು ಮರುಳು ಮಾಡುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಇಂದು ವಕ್ಪ್ ಆಸ್ತಿ ವಿಷಯದಲ್ಲಿ ಮುಸ್ಲೀಮರು ಹಿಂದೂಗಳ ಆಸ್ತಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಮತ್ತೊಂದು ಕುತಂತ್ರದ ಬಲೆ ಬೀಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮುಂದಾಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಪೂರಕವಾಗಿ ಬಹುಸಂಖ್ಯಾತ ಸಮುದಾಯದ ಜನರ ಬೆಂಬಲ ಪಡೆಯಲು, ಕರ್ನಾಟಕದ ವಕ್ಪ್ ಮಂಡಳಿಯು ಹಿಂದೂ ರೈತರ ಮತ್ತು ಮಂದಿರಗಳ ಭೂಮಿ ಕಸಿದುಕೊಳ್ಳುತ್ತಿದೆ ಎಂದು ಹೇಳುತ್ತ `ಹೋರಾಟಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಉಪಚುನಾವಣೆಯಲ್ಲಿ ಲಾಭ ಪಡೆಯಲೂ ಬಿಜೆಪಿ ಈ ಗೊಂದಲವನ್ನು ಬಳಸಿಕೊಳ್ಳುತ್ತಿದೆ. ಈ ವಿವಾದದ ಸತ್ಯ ಸಂಗತಿ ಏನು?

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು ಅನುಭವಿಸುತ್ತಿರುವ ಕೆಲವು ಜಮೀನಿನ ಭೂ ದಾಖಲೆಯಾದ ಆರ್‌ಟಿಸಿಯಲ್ಲಿನ `ಹಕ್ಕುಗಳು’ ಕಾಲಂ ನಲ್ಲಿ `ವಕ್ಫ್ ಬೋರ್ಡ್’ ಎಂದು ಬರೆಯಲಾಗಿದೆ. ಅಂತಹ ಕೆಲವು ರೈತರಿಗೆ ಭೂ ಹಕ್ಕು ಕುರಿತಂತೆ ವಿವರಣೆ ಕೇಳಿ ವಕ್ಫ್ ಮಂಡಳಿ ನೋಟಿಸ್ ನೀಡಿದೆ. ಇದನ್ನೇ ಸಮಾಜದಲ್ಲಿ ಮುಸ್ಲಿಂ ವಿರೋಧಿ ಭಾವನೆಗಳನ್ನು ಕೆರಳಿಸಲು ಒಂದು ಅಸ್ತ್ರವನ್ನಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ವಕ್ಫ್ ಮಂಡಳಿ ಹಿಂದೂ ರೈತರ ಆಸ್ತಿಗಳನ್ನು ಮತ್ತು ಹಿಂದೂ ದೇವಾಯಲಗಳ ಆಸ್ತಿಯನ್ನು ತನ್ನದೆಂದು ಹೇಳಿಕೊಂಡು ಆ ಆಸ್ತಿಗಳನ್ನು ಕಬಳಿಸಲು ಹೊರಟಿದೆ ಎಂದು ಬಿಜೆಪಿ ನಾಯಕರು ಹೇಳತೊಡಗಿತ್ತಿದ್ದಾರೆ. ಇದನ್ನವರು `ಭೂಮಿ ಜಿಹಾದ್’ ಎನ್ನುತ್ತಿದ್ದಾರೆ.

ಇಂತಹ ಕೆಲವು ಆರ್‌ಟಿಸಿಗಳನ್ನು ಕೃತಕವಾಗಿ ತಯಾರು ಮಾಡಿ ಹರಿಯ ಬಿಟ್ಟಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರ ಜೊತೆಗೆ ಹಲವು ಬಗೆಯ ಸುಳ್ಳುಗಳ ಮೂಲಕ, ಮುಸ್ಲಿಂ ವಿರೋಧಿ ಮಾತುಗಳನ್ನಾಡುವ ಮತ್ತು ಅಸಂಸ್ಕೃತ, ಅಸಹ್ಯಕರ ಪದಗಳ ಬಳಕೆಯ ಮೂಲಕ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಕೇಂದ್ರ ಸಚಿವರೂ ಸೇರಿದಂತೆ ಸಂಘಪರಿವಾರದ ಹಲವು ನಾಯಕರು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಮಾತುಗಳನ್ನು ಎಗಿಲ್ಲದೆ ಆಡತೊಡಗಿದ್ದಾರೆ.

ಇದನ್ನೂ ಓದಿ: ಮಂಡ್ಯ| ದೇಗುಲದೊಳಗೆ ದಲಿತರು ಪ್ರವೇಶಿಸಿದರೆಂದು ಉತ್ಸವ ಮೂರ್ತಿಯನ್ನೇ ಹೊರತಂದ್ರು

“ವಕ್ಫ್ ಬೋರ್ಡ್ ಯಾವ ಜಾಗ ಬೇಕಾದ್ರೂ, ಯಾವುದನ್ನು ಬೇಕಾದ್ರೂ ತಮ್ಮದು ಎಂದು ಕ್ಲೈಮ್ ಮಾಡಿಕೊಳ್ಳಬಹುದು. ಇವರನ್ನು ಹೀಗೇ ಬಿಡ್ತಾ ಹೋದ್ರೆ ನಾಳೆ ಇಡೀ ದೇಶಾನೇ ನಮ್ದು ಅಂದ್ಬಿಟ್ತಾರೆ. … ಮುಂದೆ ನಿಮ್ಮ ಎರಡು ಎಕರೆ ಜಮೀನೂ ಉಳಿಯೋದಿಲ್ಲ, ನೀವು ಹೋಗುತ್ತಿರುವ ಧರ್ಮಸ್ಥಳ, ಶೃಂಗೇರಿಯಂತಹ ದೇವಸ್ಥಾನಗಳೂ ಉಳಿಯುವುದಿಲ್ಲ.” ಎನ್ನುತ್ತಾ ಹಿಂದೂಗಳಲ್ಲಿ ಭಯ ಹುಟ್ಟಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ. ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿಯೊಂದನ್ನು ಈ ಸಂಸದ ಹಂಚಿಕೊಂಡಿದ್ದಾರೆ.  ಇದರ ಕುರಿತು ತನಿಖೆ ಮಾಡಿರುವ ಪೊಲೀಸರು, ಇದು ಸುಳ್ಳು ಎನ್ನುತ್ತ ತೇಜಸ್ವಿ ಸೂರ್ಯ ವಿರುದ್ದ ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಎಫ್‌ ಐ ಆರ್ ದಾಖಲಿಸಿಕೊಂಡಿದ್ದಾರೆ. ಸಾಲದ ಬಾಧೆಯಿಂದ ಕಳೆದ ಎರಡು ವರ್ಷಗಳ ಹಿಂದೆಯೇ ಈ ರೈತ ಆತ್ಮಹತ್ಯೆಗೆ ಶರಣಾದ ಸಂಗತಿ ತಿಳಿದು ಬಂದಿದೆ.

ಹಲವು ವರ್ಷಗಳಿಂದಲೂ…

2010ರಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆಗ ರಾಜ್ಯದಲ್ಲಿನ ವಕ್ಫ್ ಆಸ್ತಿಗಳನ್ನು ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ ಮತ್ತು ಸ್ಥಳೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಪಾರ ನಷ್ಟ ಉಂಟಾಗಿರುವುದು ಕಂಡುಬಂದಿದ್ದು, ಅಂಥ ಅತಿಕ್ರಮಣಗಳನ್ನು ನೋಟೀಸ್ ನೀಡಿ ತೆರವುಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು. 2011ರಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ದಾಖಲೆಗಳನ್ನು ಕ್ರಮಬದ್ದಗೊಳಿಸುವ ಕುರಿತು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸಹ ಸುತ್ತೋಲೆ ಹೊರಡಿಸಿದ್ದರು.

ಬಿಜೆಪಿ 2009 ಹಾಗೂ 2014ರ ತನ್ನ  ಚುನಾವಣಾ ಪ್ರಣಾಳಿಕೆಗಳಲ್ಲಿ “ವಕ್ಫ್ ಆಸ್ತಿಗಳ ಅತಿಕ್ರಮಣ ಮತ್ತು ಅನಧಿಕೃತ ಒತ್ತುವರಿಯನ್ನು ತೆರೆವುಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಘೋಷಿಸಿದೆ.

2020ರಲ್ಲಿ ವಕ್ಫ್ ಆಸ್ತಿಗಳ ಭೂಮಿ ತಂತ್ರಾಂಶದಲ್ಲಿ ಫ್ಲಾಗ್ ಮಾಡುವ ಕುರಿತು ಸರಕಾರದ ಉಪಕಾರ್ಯದರ್ಶಿಯವರು (ಭೂ ಮಂಜೂರಾತಿ, ಭೂ ಸುಧಾರಣೆ ಮತ್ತು ಕಂದಾಯ ಇಲಾಖೆ) ಸುತ್ತೋಲೆ ಹೊರಡಿಸಿದ್ದರು.

ವಕ್ಫ್ ಆಸ್ತಿಗಳ ಕಾರ್ಯಪಡೆ ರಚನೆ

2021ರಲ್ಲಿ  ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆ ರಚಿಸಿ ರಾಜ್ಯದ ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವ ಕುರಿತು ಪೌರಾಡಳಿತ ನಿರ್ದೇಶನಾಯದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.

ಇದನ್ನೂ ಓದಿ: ನೀಟ್ ಆಕಾಂಕ್ಷಿಯ ಮೇಲೆ ಅತ್ಯಾಚಾರ ಎಸಗಿ ಬ್ಯಾಕ್ ಮೇಲ್ ಮಾಡುತಿದ್ದ ಇಬ್ಬರು ಶಿಕ್ಷಕರ ಬಂಧನ

ಕರ್ನಾಟಕ ಸರ್ಕಾರ 2016ರ ಅಕ್ಟೋಬರ್ 28ರಂದು ಸುತ್ತೋಲೆ ಹೊರಡಿಸಿ, ವಕ್ಫ್ ಆಸ್ತಿಗಳಿಗೆ ಖಾತಾ `ಇಂಡೀಕರಣ’ ಮಾಡಲು ಸೂಚಿಸಿರುವ ಅಂಶ ಬೆಳಕಿಗೆ ಬಂದಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಮಂಡಳಿ ಎಂದು ನಮೂದಿಸಿದ ಪ್ರಕರಣಗಳಿರುವುದಿಲ್ಲ, ವಕ್ಫ್ ಆಸ್ತಿಗಳಿಗೆ ಮಾತ್ರ ಖಾತಾ ಇಂಡೀಕರಣ ಮಾಡಲಾಗುತ್ತದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು 15, ಜುಲೈ 2024 ರಂದು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?

ಕಂದಾಯ ಇಲಾಖೆಗೆ ಪತ್ರ

15 ಏಪ್ರಿಲ್ 2024ರಂದು ನಡೆದ ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಕಾರಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕ್ರಮ ಕೈಗೊಳ್ಳುವಂತೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಕಂದಾಯ ಇಲಾಖೆಗೆ  ಪತ್ರ ಬರೆದಿದ್ದಾರೆ. ಕಂದಾಯ ಇಲಾಖೆಯಲ್ಲಿ ಒಟ್ಟು 21,767 ವಕ್ಫ್ ಆಸ್ತಿಗಳ ಖಾತೆ ಬದಲಾವಣೆಯಾಗಬೇಕಿದ್ದು, ಈ ವಕ್ಫ್ ಆಸ್ತಿಗಳ ಮಾಹಿತಿಯನ್ನು ಭೂಮಿ ತಂತ್ರಾಂಶದಡಿಯಲ್ಲಿ ನೊಂದಾಯಿಸಬೇಕು. ನೊಂದಾಯಿಸಲ್ಪಡದ ಆಸ್ತಿಗಳ ವಿವರಗಳನ್ನು ಆಡಳಿತಾತ್ಮಕವಾಗಿ ಅಧಿನಿಯಮದಡಿ ತರುವುದು ಎಂದು ಈ ಪತ್ರದಲ್ಲಿ ಹೇಳಲಾಗಿದೆ.

ಅಂದರೆ, ರಾಜ್ಯದಲ್ಲಿ ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಆಡಳಿತ ಇದ್ದಾಗಲೂ ಭೂ ದಾಖಲೆಯಾದ ಆರ್‌ಟಿಸಿಯಲ್ಲಿ `ಹಕ್ಕುಗಳು’ ಕಾಲಂ ನಲ್ಲಿ ವಕ್ಫ್ ಭೋರ್ಡ್ ಎಂದು ಬರೆಯಲಾಗಿದೆ. ಈಗ ಎಲ್ಲೆಡೆ ಭೂಮಿ ತಂತ್ರಾಂಶದಡಿಯಲ್ಲಿ ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ ಹಾಗೂ ಅದರ ನೇತೃತ್ವದ ಸರ್ಕಾರಗಳು ಕಳೆದ ಒಂದು ದಶಕದಿಂದ ರೈತರ ಜಮೀನುಗಳ ಭೂದಾಖಲೆಗಳಲ್ಲಿ ವಕ್ಫ್ ಹೆಸರು ಸೇರಿಸಿರುವುದು ಬಯಲಾಗಿವೆ. ಅಂದೂ ಕೂಡಾ ಭೂಮಿ ಅನುಭವಿಸುತ್ತಿರುವ ಕೆಲವು ರೈತರಿಗೆ ನೋಟೀಸ್ ನೀಡಲಾಗಿದೆ. ಕೆಲವರು ವಕ್ಫ್ ಆಸ್ತಿ ವಿವಾದವನ್ನು ನ್ಯಾಯಾಲಯಗಳಿಗೂ ತೆಗೆದುಕೊಂಡು ಹೋಗಿರುವ ಪ್ರಕರಣಗಳೂ ಇವೆ. ಈ ರೀತಿ ನ್ಯಾಯಾಲಗಳಿಗೆ ಹೋದವರಲ್ಲಿ ಮುಸ್ಲೀಮರೇ ಹೆಚ್ಚು. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲಿಯೂ ಇಂತಹ ಭೂ ವಿವಾದಗಳಿವೆ.

ಇದನ್ನು ನೋಡಿದಾಗ, ಇಂತಹ ಭೂ ವಿವಾದ ಕರ್ನಾಟಕ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ಈ ಹಿಂದೆಯೂ ಇತ್ತು, ಇಂದಿಗೂ ಇದೆ ಎಂದಾಗುತ್ತದೆ. ಮಾತ್ರವಲ್ಲ, ಹಿಂದೆ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಕ್ಫ್ ಆಸ್ತಿ ಉಳಿಸಿಕೊಳ್ಳುವ ಮತ್ತು ಆಕ್ರಮಸಿಕೊಂಡಿರುವ ವಕ್ಫ್ ಆಸ್ತಿಯನ್ನು ಮರುಪಡೆಯುವುದರ ಪರವಾಗಿ ಮಾತನಾಡಿರುವ ವಿಡಿಯೋ ಹರಿದಾಡುತ್ತಿದೆ.  ಹಿಂದೆಂದೂ ಏಳದ ಈ ವಿವಾದ ಈಗ ದಡೀರನೆ ಹುಟ್ಟಿಕೊಂಡಿದ್ದೇಕೆ? ಈ ಪ್ರಶ್ನೆಗೆ ಉತ್ತರ: ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ಬಹುಸಂಖ್ಯಾತ ಸಮುದಾಯದ ಜನರ ಬೆಂಬಲ ಪಡೆಯಲು, ಕರ್ನಾಟಕದ ವಕ್ಪ್ ಮಂಡಳಿಯು ಹಿಂದೂ ರೈತರ ಮತ್ತು ಮಂದಿರಗಳ ಭೂಮಿ ಕಸಿದುಕೊಳ್ಳುತ್ತಿದೆ ಎಂಬ ಕಟ್ಟು ಕತೆ ಹೆಣೆದು ಪ್ರಚಾರ ಮಾಡುತ್ತಾ, ಹೋರಾಟದ ನಾಟಕಕ್ಕೆ ಇಳಿಯಲಾಗಿದೆ.

ಬಾಧಿತರಾದವರಲ್ಲಿ ಮುಸ್ಲಿಮರೂ ಇದ್ದಾರೆ

ವಕ್ಫ್ ಆಸ್ತಿ ವಿವಾದಕ್ಕೆ ಬಾಧಿತರಾದವರಲ್ಲಿ ಮುಸ್ಲಿಮರೂ ಇದ್ದಾರೆ. ಈಗ ಕೇಂದ್ರ ಸರ್ಕಾರ ತರಲು ಹೊರಟಿರುವ `ವಕ್ಫ್ ತಿದ್ದುಪಡಿ ಮಸೂದೆ 2024′ ಕುರಿತ ವಿವರಣೆಯ ಪ್ರಶ್ನೆ-13ರಲ್ಲಿ `ವಕ್ಫ್ ಆಡಳಿತದಲ್ಲಿ ಎಷ್ಟು ಪ್ರಕರಣಗಳು ಬಾಕಿ ಇವೆ?’ ಎಂಬ ಪ್ರಶ್ನೆಗೆ ಈ ರೀತಿ ಉತ್ತರ ಕೊಟ್ಟಿದೆ; ಸಚಿವಾಲಯವು ನ್ಯಾಯಮಂಡಳಿಗಳ ಕಾರ್ಯಚಟುವಟಿಕೆಯನ್ನು ವಿಶ್ಲೇಷಿಸಿದೆ ಮತ್ತು ಟ್ರಿಬ್ಯೂನಲ್ ಗಳಲ್ಲಿ 40,951 ಪ್ರಕರಣಗಳು ಬಾಕಿ ಉಳಿದಿವೆ ಎಂದು ಕಂಡು ಹಿಡಿದಿದೆ, ಅವುಗಳಲ್ಲಿ 9,942 ಪ್ರಕರಣಗಳು ವಕ್ಫ್ ನಿರ್ವಹಿಸುವ ಸಂಸ್ಥೆಗಳ ವಿರುದ್ಧ ಮುಸ್ಲಿಂ ಸಮುದಾಯದವರು ದಾಖಲಿಸಿದ್ದಾರೆ.

ಓಡೋಡಿ ಬಂದ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್

ರಾಜ್ಯದ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಸಂಸದರು, ಶಾಸಕರು ದೊಡ್ಡ ಮಟ್ಟದ ಹೋರಾಟಕ್ಕೆ ಇಳಿದಿದ್ದಾರೆ, ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆ ಕುರಿತಂತೆ ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಅಧ್ಯಕ್ಷರೂ `ಸಂತ್ರಸ್ತ’ ರೈತರ ಸಮಸ್ಯೆ ಆಲಿಸಲು ದೆಹಲಿಯಿಂದ ರಾಜ್ಯಕ್ಕೆ ಓಡೋಡಿ ಬಂದಿದ್ದಾರೆ. ಈ ಸಮಯದಲ್ಲಿಯೇ, `ವಕ್ಫ್ ಮಂಡಳಿಯ ಆಟಾಟೋಪ ತಡೆಗಟ್ಟುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಇವೆಲ್ಲವೂ ವ್ಯಾಪಕ ಪ್ರಚಾರ ಆಗುವಂತೆ ನೋಡಿ ಕೊಂಡಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಾ “ವಕ್ಫ್ ಕಾಯ್ದೆಯನ್ನು ಅಮೂಲಾಗ್ರವಾಗಿ ತಿದ್ದುಪಡಿ ಮಾಡಲಾಗುವುದು” ಎಂಬ ಹೇಳಿಕೆ ನೀಡುತ್ತಿದ್ದಾರೆ, ಇವೆಲ್ಲವನ್ನೂ ನೋಡಿದರೆ, ಈ ಲೇಖನದ ಆರಂಭದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಜಂಟಿ ಸಂಸದೀಯ  ಸಮಿತಿಯಲ್ಲಿ ವಿರೋಧ ಪಕ್ಷಗಳ ಸಂಸದರೂ ಸದಸ್ಯರಾಗಿದ್ದಾರಾದರೂ, ಕರ್ನಾಟಕಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯ ಒಬ್ಬ ಸಂಸದ (ತೇಜಸ್ವಿ ಸೂರ್ಯ) ಮಾತ್ರ ಅಧ್ಯಕ್ಷರ ಜೊತೆಗಿರುತ್ತಾರೆ!!

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಕೇಂದ್ರ ಕಾಯಿದೆಯಾದ ವಕ್ಫ್ ಕಾಯಿದೆ 1995ರ ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಯಾಗಿದೆ. ಸುಮಾರು 47,313 ವಕ್ಫ್ ಗಳು ಮಂಡಳಿಯಲ್ಲಿ ನೊಂದಾಯಿಸಲ್ಪಟ್ಟಿವೆ. ಇವುಗಳಲ್ಲಿ ಮಸೀದಿ, ದರ್ಗಾಗಳು, ಈದ್ಗಾಗಳು, ಖಬ್ರಸ್ತಾನ್ ಗಳು (ಸಮಾಧಿ ಸ್ಥಳಗಳು), ಅಶೂರ್ಖಾನಾಗಳು, ಅನಾಥಾಶ್ರಮಗಳು, ಮಕಾನ್‌ಗಳು, ಇತ್ಯಾದಿ.

ಮಂಡಳಿಯು ವಿವಿಧ ವರ್ಗಗಳಿಂದ ನಾಮನಿರ್ದೇಶಿತ ಮತ್ತು ಚುನಾಯಿತ ಸದಸ್ಯರನ್ನು ಹೊಂದಿದೆ ಮತ್ತು ಅಧ್ಯಕ್ಷರನ್ನು ಸದಸ್ಯರು ಆಯ್ಕೆ ಮಾಡುತ್ತಾರೆ. ಮಂಡಳಿಯ ಸಿಬ್ಬಂದಿಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನೇತೃತ್ವದಲ್ಲಿ ಹಿರಿಯ ಶ್ರೇಣಿಯಲ್ಲಿ ಕೆಎಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಚೇರಿಗಳಿವೆ.

ವಕ್ಫ್ ಆಸ್ತಿ ಎಂದರೇನು? ಅದು ಯಾವುದು?

ಮುಸ್ಲೀಮರು ತಮ್ಮ ದೇವರ ಹೆಸರಿನಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಸಮರ್ಪಿಸುವ ಸ್ಥಿರ ಮತ್ತು ಚರ ಆಸ್ತಿಗಳನ್ನು ‘ವಕ್ಫ್ ಆಸ್ತಿ’ ಎನ್ನುತ್ತಾರೆ. ವಕ್ಫ್ ಆಸ್ತಿಗಳು ನಮ್ಮ ರಾಜ್ಯದಲ್ಲಿ ವಿಜಯನಗರ, ಆದಿಲ್ ಶಾಹಿ, ಟಿಪ್ಪು ಸುಲ್ತಾನ್, ಒಡೆಯರ್ ಅವರ ಕಾಲದಲ್ಲೂ ಕೂಡಾ ಮುಸ್ಲಿಮರಿಗೆ ಧಾನವಾಗಿ ಬಂದಿದೆ.  ಈ ಆಸ್ತಿಗಳನ್ನು ಧಾರ್ಮಿಕ ಮತ್ತು ಸಾಮಾಜಿಕ ಉದ್ದೇಶಗಳಿಗೆ ದೇವರಿಗೆ ಸಮರ್ಪಿಸಿ ಮುಡಿಪಾಗಿಟ್ಟಿರುವುದೂ ಇದೆ. ವಕ್ಫ್ ಆಸ್ತಿಯನ್ನು ಯಾರಿಗೂ ಮಾರುವಂತಿಲ್ಲ ಅಥವಾ ವರ್ಗಾಯಿಸುವಂತಿಲ್ಲ. ವಕ್ಫ್ ನಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳು, ಸ್ಮಶಾನಗಳು, ಮಸೀದಿಗಳು, ಆಶ್ರಯ ಮನೆಗಳು ಇತ್ಯಾದಿಗಳ ನಿರ್ವಹಣೆಗೆ ಬಳಸಲಾಗುತ್ತದೆ.

ವಕ್ಫ್  ಆಸ್ತಿಗಳನ್ನು ನಿರ್ವಹಿಸಲು ಸರ್ಕಾರಗಳು ನಾಮನಿರ್ದೇಶನ ಮಾಡಿದ ಸದಸ್ಯರನ್ನು ಹೊಂದಿರುವ ಶಾಸನಬದ್ಧವಾದ ಸಂಸ್ಥೆಯೇ ವಕ್ಫ್ ಬೋರ್ಡ್. ಈ ವಕ್ಫ್ ಮಂಡಳಿಯು  ಪ್ರತಿ ಆಸ್ತಿಗೆ ಒಬ್ಬ ಕಸ್ಟೋಡಿಯನ್ ಅನ್ನು ನೇಮಿಸುತ್ತದೆ. ಅದರಿಂದ ಬರುವ ಆದಾಯವನ್ನು ಉದ್ದೇಶಿತ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂದು ಇದು ಖಚಿತಪಡಿಸುತ್ತದೆ. 1964ರಲ್ಲಿ ಸ್ಥಾಪಿತವಾದ ಕೇಂದ್ರೀಯ ವಕ್ಫ್ ಕೌನ್ಸಿಲ್ ದೇಶದೆಲ್ಲೆಡೆ ಇರುವ ರಾಜ್ಯ ಮಟ್ಟದ ವಕ್ಫ್ ಮಂಡಳಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಸಲಹೆ ಮತ್ತು ಸೂಚನೆಗಳನ್ನು ನೀಡುತ್ತದೆ.

 ವಕ್ಫ್ ಆಸ್ತಿ ವಿವಾದ ಯಾಕಾಗಿ?

ಸರ್ಕಾರ ಮತ್ತು ಸಂಬಂಧಿಸಿದ ಕಂದಾಯ ಇಲಾಖೆ ದಾಖಲೆಗಳನ್ನು ನವೀಕರಿಸದ ಕಾರಣಕ್ಕೆ, ಅಥವಾ ಜಮೀನು ಪಡೆದ ರೈತರು ತಮ್ಮ ಆಸ್ತಿಯನ್ನು ಇಂಡೀಕರಣ ಮಾಡಿಸಿ ದಾಖಲೆಯನ್ನು ನವೀಕರಣ ಮಾಡಿಕೊಳ್ಳದೇ ಇರುವುದರಿಂದ ಇಂತಹ ವಿವಾದಿತ ಆಸ್ತಿಗಳು ವಕ್ಫ್ ನ ಆಸ್ತಿಯಾಗಿ ಉಳಿದುಕೊಂಡಿರುವುದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯಿಂದಾಗಿ, 79,000 ಎಕರೆಯಷ್ಟು ವಕ್ಫ್ ಭೂಮಿ ಉಳುಮೆ ಮಾಡುತ್ತಿದ್ದ ರೈತರಿಗೆ ಹಂಚಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

ಆದರೆ, ಸಯ್ಯದ್ ಅಲಿ ಮತ್ತು ಇತರರು ಹಾಗೂ ಆಂಧ್ರಪ್ರದೇಶ ವಕ್ಫ್ ಮಂಡಳಿ ನಡುವಣ ಪ್ರಕರಣದಲ್ಲಿ 1998ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು, ಆಸ್ತಿಗಳ ಮೇಲೆ ವಕ್ಫ್ ಮಂಡಳಿಯ ಹಕ್ಕು ಪ್ರತಿಪಾದನೆಗೆ ಬಲನೀಡಿತು. ‘ಒಮ್ಮೆ ವಕ್ಫ್ ಆಸ್ತಿ ಎಂದು ಜಮೀನಿನ ದಾಖಲೆಯಲ್ಲಿ ನಮೂದಾದರೆ ಅದು ಖಾಯಂ ಆಗಿ ವಕ್ಫ್ ಆಸ್ತಿ ಆಗುತ್ತದೆ. ಇನಾಮದಾರಿ ಮತ್ತು ಗೇಣಿದಾರಿ ಪದ್ದತಿ, ಭೂಸುಧಾರಣಾ ಕಾಯ್ದೆಗಳ ಅನ್ವಯ ವಕ್ಫ್ ಆಸ್ತಿ ಜಮೀನು ವರ್ಗಾವಣೆ ಆಗಿದ್ದಲ್ಲಿ, ಅದನ್ನು ಮರುವಶಕ್ಕೆ ಪಡೆಯಬೇಕು’ ಎಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಆ ನಂತರ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸರ್ಕಾರಗಳು ಸುಪ್ರೀಂ ಕೋರ್ಟ್ ನ ಈ ತೀರ್ಪನ್ನು ಅನುಷ್ಠಾನಗೊಳಿಸಲು ಮುಂದಾದವೇ ವಿನಹ, ರೈತರ ಹಿತ ಕಾಯುವ ಮತ್ತು ಇದರ ಸಾಧಕ-ಭಾದಕ ಯೋಚಿಸುವ ಪ್ರಯತ್ನ ಮಾಡಲಿಲ್ಲ.

ವಕ್ಫ್ ಆಸ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ

ಇಂತಹ ಆಸ್ತಿ ವಿವಾದ ಮುಸ್ಲಿಮರ ವಕ್ಫ್ ಆಸ್ತಿಗೆ ಮಾತ್ರ ಸಂಬಂಧಿಸಿದ್ದು ಎಂದು ತಿಳಿದಿದ್ದರೆ ಅದು ತಪ್ಪಾಗುತ್ತದೆ. ಇಂತಹ ವಿವಾದ ಹಿಂದೂಗಳ ಮುಜರಾಯಿ ಆಸ್ತಿಗಳಲ್ಲಿಯೂ ಇದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ವಿವಾದಗಳೂ ಇವೆ. ನೂರು ವರ್ಷಗಳ ಹಿಂದಿನ `ಅರಣ್ಯ’ ಎಂಬ ದಾಖಲೆ ತೋರಿಸುವ ಮೂಲಕ, 50-60 ವರ್ಷಗಳಿಂದ ಉಳುಮೆ ಮಾಡುತ್ತಿರುವ ಕಂದಾಯ ಭೂಮಿಯನ್ನು, ಅರಣ್ಯ ಇಲಾಖೆಯು ತನ್ನದೆಂದು ಹೇಳಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಘಟನೆಗಳೂ ನಡೆದಿವೆ, ನಡೆಯುತ್ತಿವೆ.

ಇಂತಹ ಬಹಳಷ್ಟು ಆಸ್ತಿಗಳು ಇಂಡೀಕರಣ ಆಗಿರುವುದಿಲ್ಲ, ರೈತರ ಹೆಸರಿಗೆ ಪೋಡಿ (ಕಬ್ಜೆ ಅಥವಾ ಸ್ವಾಧೀನತೆ) ಆಗಿರುವುದಿಲ್ಲ. ಈ ರೀತಿ ಆದಾಗ ಭೂದಾಖಲೆಯ ಪೋಡಿ ಕಾಲಂ ನಲ್ಲಿ ಭೂಮಿಯ ಮೂಲ ಮಾಲೀಕನ ಹೆಸರೇ ಇರುತ್ತದೆ. ಆಸ್ತಿಗಳ ಮಾಹಿತಿಯನ್ನು ಭೂಮಿ ತಂತ್ರಾಂಶದಡಿಯಲ್ಲಿ ನೊಂದಾಯಿಸಲು ಆರಂಭಿಸಿದ ನಂತರ ಇಂತಹ ಬಹಳಷ್ಟು ಸಮಸ್ಯೆಗಳು ಬೆಳಕಿಗೆ ಬರತೊಡಗಿವೆ. ಭೂ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ನಿರ್ಲ್ಯಕ್ಷ ತೋರಿದೆ. ಭೂಸುಧಾರಣೆ ಕಾಯ್ದೆ ಜಾರಿಯ ಭಾಗವಾಗಿ ಉಳುವವನೇ ಭೂ ಒಡೆಯ ಎಂಬ ಕಾನೂನಿನ ಮೂಲಕ ಹಲವು ರೈತರಿಗೆ ಜಮೀನು ದೊರಕಿದೆ. ಈ ರೀತಿ ಭೂಮಿ ಪಡೆದ ರೈತರ ಹೆಸರಿಗೆ ಪೋಡಿ ಮಾಡಿಲ್ಲ. ಭೂಮಿ ಮಂಜೂರಾದ ಸಮಯದಲ್ಲಿಯೇ ಸಂಬಂಧಿಸಿದ ರೈತರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರೆ, ಅಂದೇ ಪೋಡು ಮಾಡಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ.

ವಕ್ಫ್ ಮಂಡಳಿ ರೈತರಿಗೆ ನೀಡಿರುವ ನೋಟೀಸ್ ಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಜಮೀನಿನ ಪಹಣಿಯಲ್ಲಿ ಸೇರಿರುವ ವಕ್ಫ್ ಬೋರ್ಡ್ ಹೆಸರನ್ನು ತೆಗೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದೇ ನೀತಿಯನ್ನು ದೇವಸ್ಥಾನಗಳ ಮತ್ತು ಮುಜರಾಯಿ ಆಸ್ತಿ ವಿಷಯದಲ್ಲೂ ಅನುಸರಿಸಬೇಕಿದೆ. ಅರಣ್ಯ ಇಲಾಖೆಯೂ ಸಹಾ ರೈತರ ವಶದಲ್ಲಿರುವ ಸರ್ಕಾರಿ ಕಂದಾಯ ಭೂಮಿಯ ಪಹಣಿಯಲ್ಲಿ ಅರಣ್ಯ ಎಂದು ಪೋಡು ಮಾಡಿಕೊಂಡಿದೆ. ಇಂತಹ ಜಮೀನನ್ನು ಇಂಡೀಕರಣ ಮಾಡಿ, ಭೂದಾಖಲೆಗಳಲ್ಲಿ ಉಳುಮೆ ಮಾಡುವ ರೈತರ ಹೆಸರನ್ನು ಪೋಡು ಕಾಲಂ ನಲ್ಲಿ ನಮೂದಿಸಲು ಸರ್ಕಾರ ಮುಂದಾಗಬೇಕಿದೆ. ಇಂತಹ ವಿವಾದಗಳಿಂದಾಗಿ ಭೂಮಿ ಅನುಭವಿಸುತ್ತಿರುವ ರೈತರಿಂದ ಭೂಮಿಯನ್ನು ಕಸಿದುಕೊಳ್ಳುವಂತಾಗಬಾರದು. ದಶಕಗಳಿಂದ ಕಗ್ಗಂಟಾಗಿ ಉಳಿದಿರುವ ಆಸ್ತಿ ವಿವಾದದ ಪ್ರಕರಣವನ್ನು ಪರಿಹರಿಸಿ ರೈತರ ಹಿತ ಕಾಯಬೇಕಿದೆ. ಇದಕ್ಕಾಗಿ ಕಾನೂನಾತ್ಮಕ ಪರಿಹಾರಗಳ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ವಕ್ಫ್ ಬೋರ್ಡ್, ಮುಸ್ಲೀಂ ಸಮುದಾಯದ ಮುಖಂಡರು, ರೈತರು ಈ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಸ್ತಿ ವಿವಾದ ಬಗೆಹರಿಸುವ ಪ್ರಯತ್ನವಾಗಬೇಕಿದೆ. ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಇದನ್ನು ಬಳಸಿಕೊಳ್ಳುವ ಕೋಮುವಾದಿಗಳಿಗೆ ಅವಕಾಶ ವಾಗದಂತೆ ಜನರು ಎಚ್ಚರ ವಹಿಸಬೇಕಿದೆ.

ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆ

ಕೇಂದ್ರ ಸರಕಾರ ಲೋಕಸಭೆಯಲ್ಲಿ ಆಗಸ್ಟ್ 8, 2024 ರಂದು, ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆ ಹಾಗೂ ಮುಸ್ಲಿಂ ವಕ್ಫ್ (ರದ್ದತಿ) ವಿಧೇಯಕಗಳನ್ನು ತರಲು ಮುಂದಾಯಿತು. ಇದು ಮುಸ್ಲಿಮರ ವಿರುದ್ಧ ವಿಷ ಉಗುಳುವ ಹಾಗೂ ಜನರ ನಡುವೆ ದ್ವೇಷ ಹುಟ್ಟಿಸುವ ಉದ್ದೇಶದಿಂದ ಕೂಡಿದೆ ಎಂದು ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ವಿರೋಧ ತೀವ್ರಗೊಂಡಿದ್ದರಿಂದ ಸರ್ಕಾರ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿದೆ. ಅದು ತಾತ್ಕಾಲಿಕ ಸಮಾಧಾನವಷ್ಟೇ. ಈ ಮಸೂದೆಯು ವಿವಿಧತೆಯಲ್ಲಿ ಏಕತೆಯ ವಿರುದ್ಧ ಮಾತ್ರವಲ್ಲದೆ ಸಂವಿಧಾನದ ಭರವಸೆಯಂತೆ ಮತ ಧರ್ಮದ ಹಕ್ಕಿನ ವಿರುದ್ಧವೂ ಆಗಿದೆ.

ಇದು ಸಂವಿಧಾನದ 25, 26, 27, 28, 29, 30ನೇ ವಿಧಿಗಳಿಗೆ ವಿರುದ್ಧವಾಗಿದೆ. ಭೂಮಿ ರಾಜ್ಯ ಪಟ್ಟಿಗೆ ಸೇರಿದೆ. ಆದರೆ, ಕೇಂದ್ರವು ಈ ಮಸೂದೆಯನ್ನು ಮಂಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ. ಈ ಮಸೂದೆಯ ಮೂಲಕ ಮುಸ್ಲಿಮೇತರರನ್ನೂ ವಕ್ಫ್ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಡಲಾಗುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿ. ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಹೊರಗೆ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ವಿಶಾಲ ಏಕತೆ ಮತ್ತು ಚಳುವಳಿಯೊಂದಿಗೆ ಸಾರ್ವಜನಿಕ ವಲಯದಲ್ಲಿ ದ್ವೇಷಪೂರಿತ ಮತ್ತು ಸಂವಿಧಾನ ವಿರೋಧಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರವು ಹಿಂಪಡೆಯುವಂತೆ ಮಾಡುವುದು ಇಂದಿನ ಅವಶ್ಯಕವಾಗಿದೆ.

ಇದನ್ನೂ ನೋಡಿ: ಪ್ರೋಮೊ| ನಿರಂಜನ 100 – ಚಿರಸ್ಮರಣೆ ಮತ್ತು ಸಮಕಾಲೀನತೆ ಉಪನ್ಯಾಸ ಸರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *