ಮದುರೈ : ಸಂಸತ್ತು ಅಂಗೀಕರಿಸಿರುವ ‘ವಕ್ಫ್ ತಿದ್ದುಪಡಿ ಮಸೂದೆ’ ಸಂವಿಧಾನದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಒಂದು ಪ್ರಹಾರವಾಗಿದೆ ಎಂದು ಸಿಪಿಐ(ಎಂ)ನ 24ನೇ ಮಹಾಧಿವೇಶನ ಖಂಡಿಸಿದೆ. ಈ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ಅದು ದೇಶದ ಎಲ್ಲಾ ಜಾತ್ಯತೀತ ಜನರು ಮತ್ತು ಸಂಘಟನೆಗಳಿಗೆ ಕರೆ ನೀಡಿದೆ, ಇದು ಕೋಮು ಧ್ರುವೀಕರಣವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ರಾಷ್ಟ್ರದ ಜಾತ್ಯತೀತ ಹಂದರಕ್ಕೆ ಹಾನಿ ಮಾಡುತ್ತದೆ ಎಂದು ಅದು ಹೇಳಿದೆ.
ಹಿಂದಿನ ವಕ್ಫ್ ಕಾಯ್ದೆಯು ವಕ್ಫ್ ಆಸ್ತಿಗಳನ್ನು (ಇಸ್ಲಾಮಿಕ್ ದತ್ತಿಗಳನ್ನು) ನಿಯಂತ್ರಿಸುವ ಮತ್ತು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಅವುಗಳ ಸರಿಯಾದ ಆಡಳಿತ, ರಕ್ಷಣೆ ಮತ್ತು ಬಳಕೆಯನ್ನು ಖಚಿತಪಡಿಸುವ ಕಾನೂನು ಚೌಕಟ್ಟಾಗಿತ್ತು. ವಕ್ಫ್ ಆಸ್ತಿಗಳ ನಿಯಂತ್ರಣಕ್ಕೆ, ಅವುಗಳ ದುರುಪಯೋಗ ಮತ್ತು ಅನಧಿಕೃತ ಮಾರಾಟವನ್ನು ತಡೆಯಲು ಇದು ಮಾರ್ಗಸೂಚಿಗಳನ್ನು ಒದಗಿಸಿತ್ತು.
ತಿದ್ದುಪಡಿ ಮಾಡಿದ ಕಾಯ್ದೆಯು ಹಿಂದಿನ ಕಾಯ್ದೆಯಲ್ಲಿ ರೂಪಿಸಲಾದ ಮೂಲಭೂತ ತತ್ವಗಳನ್ನು ದುರ್ಬಲಗೊಳಿಸುವ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತದೆ. ಈ ತಿದ್ದುಪಡಿಯ ಮೂಲಕ ಬಿಜೆಪಿ ಸರ್ಕಾರವು ಜನರನ್ನು ವಿಭಜಿಸುವ ಗುರಿಯನ್ನು ಹೊಂದಿರುವ ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುಂದಿಡುತ್ತಿದೆ. ಹಿಂದಿನ ಕಾಯ್ದೆಯನ್ನು ಮುಸ್ಲಿಮರು ವ್ಯಾಪಕ ಭೂ ಕಬಳಿಕೆಗೆ ಬಳಸಿಕೊಂಡಿದ್ದಾರೆ ಎಂದು ಅದು ಪದೇ ಪದೇ ಹೇಳುತ್ತಿದೆ.
ಮುಸ್ಲಿಮೇತರರು ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದನ್ನು ನಿಷೇಧಿಸುವ ಇಸ್ಲಾಮಿಕ್ ತಡೆಗಳ ಹೊರತಾಗಿಯೂ, ತಿದ್ದುಪಡಿ ಮಾಡಿದ ಕಾಯ್ದೆಯು ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸುತ್ತದೆ. ಇದು ಮುಸ್ಲಿಮರು ತಮ್ಮ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕಿನ ಮೇಲಿನ ದಾಳಿಯಾಗಿದೆ.
ಇದನ್ನೂ ಓದಿ : ಕೇರಳದ ಪ್ರಜಾಸತ್ತಾತ್ಮಕ ಸಾಧನೆಗಳನ್ನು ಹರಡಲು ಮತ್ತು ಒಕ್ಕೂಟ ಸರಕಾರದ ಕುತಂತ್ರಗಳನ್ನು ಬಯಲಿಗೆಳೆಯಲು ಸಿಪಿಐ(ಎಂ) ಮಹಾಧಿವೇಶನದ ಕರೆ
ಕನಿಷ್ಠ ಐದು ವರ್ಷಗಳ ಕಾಲ ತಾನು ಧರ್ಮವನ್ನು ಅನುಸರಿಸುತ್ತಿದ್ದೇನೆ ಎಂದು ಸಾಬೀತುಪಡಿಸಬಹುದಾದ ಮುಸ್ಲಿಂ ಮಾತ್ರ ಎಂದು ಕಡ್ಡಾಯಗೊಳಿಸುವ ಮೂಲಕ, ತಿದ್ದುಪಡಿ ಮಾಡಿದ ಕಾಯ್ದೆಯು ಮುಸ್ಲಿಮರನ್ನು ಕಿರುಕುಳಕ್ಕೆ ಗುರಿಪಡಿಸಲು ದಾರಿ ಮಾಡಿಕೊಡುತ್ತಿದೆ. ಈ ಮೂಲಕ ಅವರು ವಕ್ಫ್ ಆಸ್ತಿಗಳನ್ನು ರಚಿಸುವುದನ್ನು ಅಥವಾ ಕೊಡುಗೆ ನೀಡುವುದನ್ನು ವಾಸ್ತವವಾಗಿ ತಡೆಯಬಹುದು. ಅನೇಕ ಮುಸ್ಲಿಮೇತರರು ಕೂಡ ಮಸೀದಿಗಳು ಇತ್ಯಾದಿಗಳ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ . ಸೋದರತ್ವ ಮತ್ತು ಭ್ರಾತೃತ್ವದ ಈ ಅಭಿವ್ಯಕ್ತಿಯು ತಿದ್ದುಪಡಿ ಮಾಡಿದ ಕಾಯ್ದೆಯಡಿಯಲ್ಲಿ ಇನ್ನು ಮುಂದೆ ಸಾಧ್ಯವಾಗುವುದಿಲ್ಲ.
ವಕ್ಫ್ ಕಾಯ್ದೆಯ ಸೆಕ್ಷನ್ 40 ಅನ್ನು ರದ್ದುಗೊಳಿಸುವ ಮೂಲಕ, ವಕ್ಫ್ ಮಂಡಳಿಯು ವಕ್ಫ್ ಆಸ್ತಿಗಳ ಸ್ವರೂಪವನ್ನು ನಿರ್ಧರಿಸುವ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ವಕ್ಫ್ ಆಸ್ತಿಗಳು ಪ್ರಾಥಮಿಕವಾಗಿ ನಾಲ್ಕು ವರ್ಗಗಳಾಗಿ ಬರುತ್ತವೆ: ದಸ್ತಾವೇಜಿನ ಮೂಲಕ ವಕ್ಫ್ ( ದಾಖಲೆಗಳು ಇರುವಂತದ್ದು), ಮೌಖಿಕ ಘೋಷಣೆಯ ಮೂಲಕ ವಕ್ಫ್ (ಮೌಖಿಕವಾಗಿ ಘೋಷಿಸಿರುವುದು), ಬಳಕೆಯಿಂದ ವಕ್ಫ್ (ದೀರ್ಘಕಾಲದ ಬಳಕೆಯ ಮೂಲಕ ಸ್ಥಾಪಿತವಾಗಿರುವುದು), ಮತ್ತು ಸರ್ಕಾರದಿಂದ ಅನುದಾನದ ಭೂಮಿಗಳು. ಹೊಸ ತಿದ್ದುಪಡಿಗಳ ಅಡಿಯಲ್ಲಿ, ದೇಶದ ಬಹುಪಾಲು ವಕ್ಫ್ ಆಸ್ತಿಗಳು – ಮೌಖಿಕವಾಗಿ ಅಥವಾ ಬಳಕೆಯ ಮೂಲಕ ಘೋಷಿಸಲ್ಪಟ್ಟವು – ಸರ್ಕಾರದ ಸ್ವಾಧೀನಕ್ಕೆ ಗುರಿಯಾಗುತ್ತವೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದಂತಹ ಅತಿದೊಡ್ಡ ವಕ್ಫ್ ಹಿಡುವಳಿಗಳನ್ನು ಹೊಂದಿರುವ ರಾಜ್ಯಗಳು ಪ್ರಸ್ತಾವಿತ ತಿದ್ದುಪಡಿಗಳ ಮೂಲಕ ಈ ಸ್ವತ್ತುಗಳನ್ನು ಗುರಿ ಮಾಡಿ ಸ್ವಾಧೀನಪಡಿಸಿಕೊಳ್ಳುವ ಕ್ರಮಗಳಿಗೆ ಪಕ್ಕಾಗುತ್ತವೆ.
ವಕ್ಫ್ ಆಸ್ತಿಗಳನ್ನು ನಿರ್ಧರಿಸುವ ಅಧಿಕಾರವನ್ನು ಸರ್ವೇ ಆಯುಕ್ತರಿಂದ ಸರ್ಕಾರ ನೇಮಿಸಿದ ಕಂದಾಯ ಅಧಿಕಾರಿಗಳಿಗೆ ವರ್ಗಾಯಿಸುವ ಮೂಲಕ, ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು ಮತ್ತು ವೃತ್ತಿಪರ ಕೇಂದ್ರಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ, ಈ ಮೂಲಕ ವಕ್ಫ್ ಆಸ್ತಿಗಳ ಮೇಲೆ ಅದರ ನಿಯಂತ್ರಣವನ್ನು ಕ್ರೋಢೀಕರಿಸಲಾಗುತ್ತದೆ.
ದೀರ್ಘಾವಧಿಯ ಬಳಕೆಯ ಮೂಲಕ ಐತಿಹಾಸಿಕವಾಗಿ ಸ್ಥಾಪಿತವಾದ ಸಾವಿರಾರು ವಕ್ಫ್ ಆಸ್ತಿಗಳ ನೋಂದಣಿ ಅಗತ್ಯ ಎನ್ನುವ ಹೊಸ ಆದೇಶವು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ರಹಸ್ಯ ಕಾರ್ಯಸೂಚಿಯನ್ನು ಬಯಲು ಮಾಡುತ್ತದೆ.
ವಕ್ಫ್ ನ್ಯಾಯಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ, ವಕ್ಫ್ ಮಂಡಳಿಯನ್ನೇ ಅದು ಸೇವೆ ಸಲ್ಲಿಸುವ ಸಮುದಾಯದಿಂದ ದೂರ ಮಾಡಲಾಗುತ್ತದೆ.
ಈ ತಿದ್ದುಪಡಿಗಳ ಮೂಲಕ, ಕೇಂದ್ರ ಸರ್ಕಾರವು ಮುಸ್ಲಿಮರ ಹಕ್ಕುಗಳನ್ನು ನಿರ್ಮೂಲನೆ ಮಾಡುವ ತನ್ನ ಕಾರ್ಯಸೂಚಿಯನ್ನು ಮುಂದಿಡುತ್ತಿದೆ, ಇದು ಪೌರತ್ವ ತಿದ್ದುಪಡಿ ಕಾಯ್ದೆ(CAA)ಯಲ್ಲಿನ ಕೆಲವು ವಿಭಾಗಗಳನ್ನು ಹೊರಗಿಡುವ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.
ದೇಶದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ಹಂದರವನ್ನು ಕಾಪಾಡಿಕೊಳ್ಳಲು, ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಮನಸ್ಸಿನ ನಾಗರಿಕರು ಈ ವಿಭಜನಕಾರಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ಒಗ್ಗೂಡಬೇಕು ಎಂದು ಸಿಪಿಐ(ಎಂ) ಮಹಾಧಿವೇಶನ ಹೇಳಿದೆ.
ಇದನ್ನೂ ನೋಡಿ : ಎಂಪುರನ್ ಸಿನಿಮಾದ 25 ಸೀನ್ ಗಳ ಕತ್ತರಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನಡೆ, ಹಿಂದುತ್ವದ ಮೇಲುಗೈ? Janashakthi