ಡಾ. ರಹಮತ್ ತರೀಕೆರೆ
(ಹಿರಿಯ ಲೇಖಕರು, ವಿಮರ್ಶಕರು)
ಸಣ್ಣ ಊರು ನಗರವಾಗಿ ರೂಪಾಂತರವಾಗುವುದು ಅದರ ಅದೃಷ್ಟ; ಮತ್ತೆಮತ್ತೆ ಮುತ್ತಿಗೆಗೆ ಒಳಗಾಗುತ್ತ ದೊರೆಯಿಂದ ದೊರೆಗೆ ಕೈಯಾಂತರವಾಗುವುದು ದುರ್ವಿಧಿ. ಕದನದಲ್ಲಿ ಗೆದ್ದವರು ನಗರಗಳನ್ನು ಕೆಡವಬಹುದು, ಕಟ್ಟಲೂಬಹುದು. ರೋಮನ್ನರು, ಅರಬ್ಬರು, ಧರ್ಮಯುದ್ಧಕ್ಕಾಗಿ ಬಂದ ಕ್ರೈಸ್ತರು, ಪರ್ಶಿಯನರು, ಟರ್ಕಿಗಳು, ಬ್ರಿಟಿಶರು ಇದನ್ನು ಗೆದ್ದು ಕೆಡಹಿ-ಕಟ್ಟಿದರು. ಸಹಸ್ರಾರು ವರ್ಷ ಹಲವಾರು ನಾಗರಿಕ ಜನಾಂಗಗಳ ಆಳಿಕೆಯಲ್ಲಿ ರೂಪುಗೊಂಡ ಜೆರುಸಲೆಂ, ನೂರಾರು ಸಲ ಧ್ವಂಸಗೊಳ್ಳುತ್ತ ತನ್ನ ಭಗ್ನಾವಶೇಷಗಳಿಂದಲೇ ಮರುಜನ್ಮ ಪಡೆಯುತ್ತ ಬಂದಿರುವ ಫೀನಿಕ್ಸ್ ಹಕ್ಕಿಯಂತಿದೆ. ಜೆರುಸಲೆಂ
ಪ್ಯಾಲಸ್ತೈನ್ – ಇಸ್ರೇಲ್ ಕದನ ಶುರುವಾಗಿದೆ. ಅಮೂಲ್ಯವಾದ ಜೀವಗಳು ಹೋಗುತ್ತಿವೆ.ಇದೊಂದು ಜಟಿಲವಾದ ರಾಜಕೀಯ ಮತ್ತು ಮಾನವೀಯ ಸಮಸ್ಯೆ. ಈ ದೇಶಗಳಿಗೆ ಭೇಟಿ ಕೊಟ್ಟಾಗ ಬರೆದ ಲೇಖನವನ್ನು ನೋವಿನಿಂದ ಹಂಚಿಕೊಂಡಿರುವೆ.
ಇಸ್ರೇಲ್-ಪ್ಯಾಲಸ್ತೈನ್ ದೇಶಗಳಿಗೆ ಸೇರಿದ ಜೆರುಸಲೆಂ ನಗರವನ್ನು ಪ್ರವೇಶಿಸುವಾಗ ಮುಸ್ಸಂಜೆ ಮುಗಿದು ಕತ್ತಲಾಗುತ್ತಿತ್ತು. ಪುಟ್ಟಪುಟ್ಟ ಬೆಟ್ಟಗಳ ಹೆಗಲ ಮೇಲೆ ನೆಲೆಸಿರುವ ಅದು, ದೀಪದ ಗೊಂಚಲನ್ನು ಹೊತ್ತುಕೊಂಡಂತೆ, ಒಮ್ಮೆ ಕಣಿವೆಯ ಮತ್ತೊಮ್ಮೆ ಕೋಡಿನ ಮಗ್ಗುಲುಗಳನ್ನು ತೋರುತ್ತ ಝಗಝಗಿಸುತ್ತಿತ್ತು. ಜಗತ್ತಿನ ಅತಿ ಪ್ರಾಚೀನವೂ ಚಾರಿತ್ರಿಕ ಮಹತ್ವವೂ ಇರುವ ನಗರವೊಂದನ್ನು ಹಾಯುತ್ತಿರುವ ಅರಿವಿನಿಂದ ಮೈಯೆಲ್ಲ ಕಣ್ಣಾಗಿ ಕುಳಿತಿದ್ದ ನಾನು ತುಸು ಭಾವುಕನಾಗಿದ್ದೆ. ಜೇರುಸಲೆಮ್ ಒಳಗೊಂಡಂತೆ, ಈ ಭೂಭಾಗದ ಜೆರಿಕೊ, ಡಮಾಸ್ಕಸ್, ನಜೆರತ್, ಅಲೆಕ್ಸಾಂಡ್ರಿಯಾ, ಮಕ್ಕಾ, ಕೈರೊ, ರೋಂ, ಇಸ್ತಾನ್‍ಬುಲ್, ಹೆಬ್ರೊನ್, ಬಾಗ್ದಾದ್-ಎಲ್ಲವೂ ಕ್ರಿಸ್ತಪೂರ್ವ ಶತಮಾನಗಳಲ್ಲೇ ನಗರಗಳಾಗಿ ರೂಪಿಗೊಂಡಂಥವು; ಅಧಿಕಾರ ಕೇಂದ್ರ, ವ್ಯಾಪಾರಿ ತಾಣ, ಧರ್ಮಕ್ಷೇತ್ರ ಮತ್ತು ಕಲೆಗಳ ಆಗರವಾಗಿ ಮೆರೆದಂತಹವು. ಜೆರುಸಲೆಮಿನ ಚರಿತ್ರೆ ಕ್ರಿಸ್ತಪೂರ್ವ 8-9 ಶತಮಾನಗಳಷ್ಟು ಹಿಂದಿನಿಂದ ಶುರುವಾಗುತ್ತದೆ. ಕೆಲವು ವಿದ್ವಾಂಸರಂತೂ ಇದರ ಪ್ರಾಚೀನತೆಯ ಹುಡುಕಾಟದಲ್ಲೇ ಜೀವಮಾನ ಕಳೆದಿರುವರು. ಜೆರುಸಲೆಂ ಪ್ರಾಚೀನತೆಯನ್ನು ಒಡವೆಯನ್ನಾಗಿ ಧರಿಸಿದ ಆದಿಮ ನಾಗರಿಕತೆಯ ತಾಯಿಯಂತೆ, ಮನುಕುಲದ ಆದಿಮ ಚರಿತ್ರೆಯ ಪುಸ್ತಕವೊಂದರ ಕಳಚಿಬಿದ್ದ ಪುಟದಂತೆ ಭಾಸವಾಗುತ್ತದೆ.
`ಸೆಮೆಟಿಕ್’ ಧರ್ಮಗಳಾದ ಯಹೂದಿ-ಕ್ರೈಸ್ತ-ಇಸ್ಲಾಂಗಳು ಒಂದೇ ಪೌರಾಣಿಕ ಮೂಲದಿಂದ ಹುಟ್ಟಿದವು. ಏಕ ದೇವತಾರಾಧಕವಾದ ಈ ಮೂರೂ ಲೋಕಸೃಷ್ಟಿಯ ಕಥನವಾಗಿರುವ ಆಡಂ-ಈವರ ಮಿತ್ತನ್ನು ನಂಬುತ್ತವೆ. ಮೂರರ ಚರಿತ್ರೆಗಳೊಳಗೂ ಜೆರುಸಲೆಮಿನ ಉಲ್ಲೇಖಗಳಿವೆ. ಬೈಬಲ್ಲಿನ ಹಳೆ ಒಡಂಬಡಿಕೆಯಂತೂ ಜೆರುಸಲೇಮಿನ ಆತ್ಮಕಥೆ. ಯಹೂದಿಗಳು ತಮ್ಮ ಧರ್ಮದ ಮೊದಲ ದೊರೆಗಳಾದ ಡೇವಿಡ್ ಮತ್ತು ಸಾಲೊಮನ್ನರು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ನಗರವೆಂದೂ ದೇವರಾದ ಯೆಹೋವಾ ತಮಗೆ ಹರಸಿಕೊಟ್ಟ ಊರೆಂದೂ ನಂಬುವರು. ಈಗಲೂ ಅವರಿಗೆ ಪವಿತ್ರವಾಗಿರುವ `ಗೋಳಿನಗೋಡೆ’ ಹಾಗೂ ಪೂರ್ವಜರ ಸಮಾಧಿಗಳು ಇಲ್ಲಿವೆ; ಕ್ರೈಸ್ತರಿಗೆ ಏಸು ವಿಚಾರಣೆಗೊಳಗಾದ, ಸೆರೆವಾಸ ಮಾಡಿದ, `ಲಾಸ್ಟ್‍ಸಪ್ಪರ್’ ಪೂರೈಸಿದ, ಶಿಲುಬೆಗೇರಿದ ಮತ್ತು ಸಮಾಧಿಯಾದ ಊರು.
ತಾಯಿಮೇರಿಯ ಸಮಾಧಿಯೂ ಇಲ್ಲಿದೆ. ಮುಸ್ಲಿಮರ ಪಾಲಿಗೆ ಪೈಗಂಬರ್ ಮಹಮದ್, ಹಿಂದಿನ ಪ್ರವಾದಿಗಳನ್ನು ಭೇಟಿ ಮಾಡಲು ಸ್ವರ್ಗಕ್ಕೆ ಹೋಗಿಬಂದ ಜಾಗ. ಕುರಾನ್ ಕೂಡ ಪೈಗಂಬರ್ ಪೂರ್ವದ ಯಹೂದಿ-ಕ್ರೈಸ್ತರ ಪ್ರವಾದಿಗಳಾದ ಅಬ್ರಾಹಂ, ಇಸ್ಮಾಯಿಲ್, ಡೇವಿಡ್, ಮೋಸೆಸ್ ಜೋಸೆಫ್, ಏಸು ಮೊದಲಾದ ಪ್ರವಾದಿಗಳನ್ನು ಆದರದಿಂದ ಸ್ಮರಿಸುತ್ತದೆ. ಹೀಗಾಗಿಯೇ ಯಹೂದಿ-ಕ್ರೈಸ್ತರ ಪೌರಾಣಿಕ ವ್ಯಕ್ತಿಗಳ ಹೆಸರುಗಳನ್ನು ತುಸು ರೂಪಾಂತರಗಳಲ್ಲಿ ಮುಸ್ಲಿಮರಲ್ಲಿವೆ- ಮೋಸೆಸ್-ಮೂಸಾ, ಡೇವಿಡ್-ದಾವೂದ್, ಡೇನಿಯಲ್-ದಾನೇಯಲ್, ಸಾಲೊಮನ್-ಸುಲೇಮಾನ್, ಐಸಾಕ್-ಇಸಾಕ್, ಜೇಕಬ್-ಯಾಕೂಬ್, ಜೋಸೆಫ್-ಯೂಸುಫ್, ಅಬ್ರಾಹಂ-ಇಬ್ರಾಹಿಂ, ಇಶ್ಮೇಲ್-ಇಸ್ಮಾಯಿಲ್, ಮೇರಿ-ಮರಿಯಂ, ಸಾರಾ- ಸಾರಾ ಹೀಗೆ.
ನಜರತ್‍ನಲ್ಲಿ ಒಂದು ಬ್ಯಾನರನ್ನು ಕಟ್ಟಲಾಗಿತ್ತು. ಅದರಲ್ಲಿ ಹೀಗಿತ್ತು: “ನಾವು ಮುಸ್ಲಿಮರಾದವರು ಅಲ್ಲಾಹನಲ್ಲಿ ವಿಶ್ವಾಸವಿಟ್ಟೆವು. ನಮಗೆ ದೇವರು ಕಳಿಸಿದ ಸಂದೇಶಗಳನ್ನು ಮಾತ್ರವಲ್ಲ, ಅಬ್ರಾಹಂ, ಇಸ್ಮಾಯಿಲ್, ಇಸಾಕ್, ಜೇಕಬ್, ಮೋಸೆಸ್ ಮತ್ತು ಈಸಾ ಮುಂತಾದ ಪ್ರವಾದಿಗಳಿಗೆ ದೇವರು ಕಳಿಸಿದ ಸಂದೇಶಗಳಲ್ಲಿಯೂ ವಿಶ್ವಾಸವಿಟ್ಟೆವು. ಇವರಲ್ಲಿ ತಾರತಮ್ಯ ಮಾಡೆವು”(ಕುರಾನ್ 3-84).
ಜೆರುಸಲೇಂ ಸೆಮೆಟಿಕ್ ಧರ್ಮಗಳ ಕೂಡಲಸಂಗಮ. ಇಲ್ಲಿ ಮೂರೂ ಧರ್ಮದವರ ವಸತಿಗಳಿವೆ. ಇಲ್ಲಿ ಫೋಟೊ ತೆಗೆದರೆ, ಸಿನಗಾಗ್-ಚರ್ಚು-ಮಸೀದಿಗಳ ಶಿಖರಗಳು ಒಂದೇ ಫ್ರೇಮಿನೊಳಗೆ ಬರುತ್ತವೆ. ಜೆರುಸಲೇಮಿನ ಹೃದಯ ಭಾಗದಲ್ಲಿ, ನಗರದ ಯಾವ ಕಡೆ ನಿಂತರೂ ಕಣ್ಕೋರೈಸುತ್ತ ಅಸ್ತಿತ್ವ ಸಾರುವ, ಚಿನ್ನದ ಹೊದಿಕೆಯ ಗುಮ್ಮಟವುಳ್ಳ ಕಟ್ಟಡ (ಡೂಂ ಆಫ್ ರಾಕ್) ಇದೆ. ಇದನ್ನು ಮೂರೂ ಧರ್ಮಗಳು ನಮ್ಮದೆಂದು ಭಾವಿಸುತ್ತವೆ. ಹೆಬ್ರೋನ್ ಪಟ್ಟಣದಲ್ಲಿರುವ ಅಬ್ರಾಹಿಂ ಮತ್ತು ಸಾರಾರ ಸಮಾಧಿಗಳ ವಿಷಯದಲ್ಲೂ ಹೀಗೇ ಹಕ್ಕುಸಾಧನೆ. ಮೂರು ಧರ್ಮಗಳ ಪ್ರಮಥರ ಬದುಕಿಗೆ ಹೀಗೆ ಸಂಬಂಧಗೊಂಡು ಪವಿತ್ರವೆನಿಸಿದ ನಗರ ಭೂಮಂಡಲದಲ್ಲಿ ಇನ್ನೊಂದಿಲ್ಲ. ಹೀಗಾಗಿ ವರ್ಷವಿಡೀ ಈ ಧರ್ಮಗಳ ಯಾತ್ರಾರ್ಥಿಗಳಿಂದ ಇದು ತುಳುಕಾಡುತ್ತಿರುತ್ತದೆ.
ಜೆರುಸಲೆಮನ್ನು ಹಳತು- ಹೊಸತು ಎಂದು ವಿಭಜಿಸಿ ಪ್ಯಾಲೆಸ್ತೈನಿಗೂ ಇಸ್ರೇಲಿಗೂ ಪಾಲು ಮಾಡಿಕೊಡಲಾಗಿದೆ. ಮೂಡಣ ದಿಕ್ಕಿನಲ್ಲಿರುವ ಭದ್ರಕೋಟೆಯೊಳಗೆ ನೆಲೆಸಿರುವ ಹಳೆನಗರದ ತುಂಬ ಮೋಹಕ ಕಟ್ಟಡಗಳಿವೆ. ಪಡುವಣ ಬೆಟ್ಟಗಳ ಹೆಗಲ ಮೇಲೆ ಬೆಳೆದಿರುವ ಹೊಸನಗರಲ್ಲಿ ಮೋಡಗಳನ್ನು ತೀಡುವ ಬಹು ಅಂತಸ್ತಿನ ಉಪ್ಪರಿಗೆ ಕಟ್ಟಡಗಳು ಏಳುತ್ತಿವೆ. ಅಲ್ಲಿ ಇಸ್ರೇಲಿನ ಪಾರ್ಲಿಮೆಂಟು-ಮಂತ್ರಾಲಯಗಳಿವೆ. ಹಳೆಯ ಹೊಸ ನಗರಭಾಗಗಳು ಒಂದರೊಳಗೊಂದು ಸೇರಿಕೊಂಡಿವೆ- ಶತಮಾನಗಳಷ್ಟು ಹಳೆಯದಾದ ಬೊಡ್ಡೆಗಳ ಮೇಲೆ ಹೊಸರೆಂಬೆಗಳನ್ನು ಹೊಮ್ಮಿಸುವ ಆಲಿವ್ ಗಿಡದಂತೆ. (ಇಂತಹ ಆಲಿವ್ ಗಿಡಗಳನ್ನು ಇಲ್ಲಿ ಕಾಪಿಡಲಾಗಿದೆ.) ಪ್ರಾಚೀನತೆ ಆಧುನಿಕತೆ ಬೆರೆತಿರುವ ಜೆರುಸಲೇಮ್ ಮೊಮ್ಮಕ್ಕಳ ಯೌವನವನ್ನು ಕಡವಾಗಿ ಪಡೆದು ಬದುಕುತ್ತಿರುವ ವೃದ್ಧನಂತೆ ತೋರುತ್ತದೆ.
ಇದನ್ನೂ ಓದಿ: ಹಮಾಸ್-ಇಸ್ರೇಲ್ ಯುದ್ಧದ ಹಿನ್ನೆಲೆ ಏನು?
ವಿಶೇಷವೆಂದರೆ ಇಲ್ಲಿನ ಕೈದೋಟಗಳು. ನಾವು ಹೋಗಿದ್ದು ವಸಂತ ಋತುವಾದ ಕಾರಣ, ಹತ್ತಾರು ಬಣ್ಣದ ಹೂತೊಟ್ಟಿಗಳಿಂದ ಮನೆ, ಸರ್ಕಲ್ಲು, ಹೋಟೆಲುಗಳು ನಳನಳಿಸುತ್ತಿದ್ದವು. ಕೈದೋಟದಲ್ಲಿ ದ್ರಾಕ್ಷಿಬಳ್ಳಿ, ಆಲಿವ್ ಬಾದಾಮಿ ಹಾಗೂ ಅಂಜೂರದಂತಹ ಹಣ್ಣಿನ ಗಿಡಗಳಿದ್ದವು. ಮದರಂಗಿ ಗಿಡವನ್ನು ಹೋಲುವ ಆಲಿವ್, ಅಡುವೆಣ್ಣೆ, ತಿನುಹಣ್ಣು, ಸೇವಿಸುವ ಮದ್ದು, ಪೂಸುವ ಸುಗಂಧ- ಹೀಗೆ ಹಲವು ಜರೂರತ್ತಿಗೆ ಬೇಕಾದ ಪುಟ್ಟಗಿಡ. ಆಲಿವ್, ದ್ರಾಕ್ಷಿ, ಖರ್ಜೂರಗಳು ಈ ಸೀಮೆಯ ಕಲ್ಪವೃಕ್ಷ-ಕಲ್ಪಲತೆಗಳು. ಇವು ಪ್ಯಾಲೆಸ್ತೈನಿ-ಇಸ್ರೇಲಿ ವಾಸ್ತುಶಿಲ್ಪ ಮೂರ್ತಿಶಿಲ್ಪ ಕವಿತೆ ಚಿತ್ರಕಲೆಗಳಲ್ಲಿ ಸರ್ವವ್ಯಾಪಿಯಾಗಿವೆ. ಬೆತ್ಲೆಹೆಮ್ಮಿನಲ್ಲಿ ನಾವು ವಸತಿ ಮಾಡಿದ ಹೋಟೆಲು ಸಹ ಒಂದು ಆಲಿವ್‍ತೋಟದಲ್ಲಿತ್ತು. ಕೆಲವು ಮನೆಗಳಲ್ಲಿ ರಟ್ಟೆಗಾತ್ರದ ಕಾಂಡವುಳ್ಳ ದ್ರಾಕ್ಷಿಬಳ್ಳಿಗಳಿದ್ದು, ಅವು ಅಂಗಳದ ಚಪ್ಪರಕ್ಕೆ ಹಬ್ಬಿ, ಹಿಂದಕ್ಕೂ ಮೇಲಕ್ಕೂ ಹರಡಿ, ಇಡೀ ಮನೆಗೆ ಹಸಿರು ಪರದೆಯನ್ನು ಹೊಚ್ಚಿದ್ದವು.
ಜೆರುಸಲೆಂ-ಬೆತ್ಲೆಹೆಂ, ನಜ್ರತ್-ಹೆಬ್ರೊನ್ ನಗರಗಳ ಕಣಿವೆ ತುಂಬ ಆಲಿವ್ ಮತ್ತು ದ್ರಾಕ್ಷಿತೋಟಗಳು. ದ್ರಾಕ್ಷಾರಸವು ಇಲ್ಲಿನ ಆಹಾರದ ಭಾಗ ಮಾತ್ರವಲ್ಲ, ಕ್ರೈಸ್ತ ಮತ್ತು ಯಹೂದಿಗಳ ಧಾರ್ಮಿಕ ಆಚರಣೆಯಲ್ಲಿ ಪೇಯ ಕೂಡ.ಜೆರುಸಲೆಮಿನಲ್ಲಿ ತಂಪುಹವೆ ಸದಾ ತೀಡುತ್ತಿರುತ್ತದೆ. ಚಳಿಗಾಲದಲ್ಲಿ ಮೊಳಕಾಲುದ್ದ ಹಿಮಸುರಿಯುತ್ತದೆ. ಇಲ್ಲಿಂದ ಕೇವಲ ಮೂವತ್ತು ಕಿಮೀ-ಮೃತಸಮುದ್ರದ ದಿಕ್ಕಿನಲ್ಲಿ- ಹೋದರೆ ಚಿಗುರುಹುಲ್ಲೂ ಬೆಳೆಯದ ಬೋಳುಬೆಟ್ಟಗಳ ಮರುಭೂಮಿ; ಒಂದು ತಾಸು ಪಯಣಿಸಿದರೆ, ಯಾವ ಜೀವಿಯೂ ಬದುಕಲಾರದ ಮೃತ ಸಮುದ್ರವಿದೆ. ಇವುಗಳ ಹಿನ್ನೆಲೆಯಲ್ಲಿ ಜೆರುಸಲೆಮಿನ ತಂಪುಹವೆ, ಪೈನ್‍ಕಾಡು, ಫಲವತ್ತಾದ ನೆಲೆ, ನೀರುಕ್ಕುವ ಚಿಲುಮೆ, ಪುಟ್ಟಹೊಳೆ, ವಿಶಾಲ ಕಣಿವೆ, ಹಸಿರುಹೊದ್ದ ಬೆಟ್ಟ, ದ್ರಾಕ್ಷಿ ಉತ್ತುತ್ತೆ ಬಾದಾಮಿ ತೋಟಗಳು, ಅದನ್ನು ಭೂಸ್ವರ್ಗವಾಗಿಸಿವೆ. ಆದಿಮ ಸಮುದಾಯಗಳು ಇದನ್ನು ತಮ್ಮ ವಾಸಕ್ಕೂ ದೈವ ಮಂದಿರಗಳಿಗೂ ತಕ್ಕ ಜಾಗವೆಂದು ಭಾವಿಸಿರುವುದಕ್ಕೆ ಎಲ್ಲ ಸಮರ್ಥನೆಗಳಿವೆ.
ಜೆರುಸಲೆಮಿನ ಸೌಂದರ್ಯವನ್ನು ಕಲಾವಿದರು ಶಿಲ್ಪಿಗಳು ಕವಿಗಳು ತಮ್ಮ ಕೃತಿಗಳಲ್ಲಿ ಸೆರೆಹಿಡಿದಿದ್ದಾರೆ. ಜೆರುಸಲೆಂ ಈಗಲೂ ಎತ್ತಲಿಂದ ನೋಡಿದರೂ ಚಂದವಾಗಿ ಕಾಣುವ ಸುಂದರ ನಗರಿ. ದವಸ ಹಣ್ಣುಹಂಪಲು ಪಶು ಸಂಪತ್ತು ಸಮೃದ್ಧ ಸಿಗುವ ಊರುಗಳು ಸಹಜವಾಗಿಯೇ ವ್ಯಾಪಾರಿ ಕೇಂದ್ರಗಳಾಗಿ ಬೆಳೆಯುತ್ತವೆ. ಈಜಿಪ್ತ್ ಲೆಬನಾನ್ ಸಿರಿಯಾ ಇರಾಕ್ ಜೋರ್ಡಾನ್‍ಗಳ ನಡುವಿರುವ, ಭೂಮಂಡಲದ ಕೇಂದ್ರವೆಂದು ಕರೆಯಲ್ಪಡುವ ಜೆರುಸಲೆಂ, ಪ್ರಾಚೀನ ವಣಿಕ ಪಥಗಳು ಹಾದುಹೋಗುವ ನಗರ. ಸಂಪತ್ತು ಸಂಚಯವಾಗುವ ನಗರಗಳು ರಾಜಕೀಯ ದಾಳಿಕೋರರನ್ನು ಸೆಳೆಯುತ್ತವೆ. ನಗರವನ್ನು ಕಾಯಲು ಬಲಾಢ್ಯ ಕೋಟೆ ರೂಪುಗೊಳ್ಳುತ್ತವೆ. ಜೆರುಸಲೇಮಿನ ವಿಶಾಲ ಕೋಟೆಗೆ ಜಾಫಾ ಡಮಾಸ್ಕಸ್ ಮುಂತಾದ ನಗರಗಳ ಹೆಸರುಳ್ಳ ಪ್ರಸಿದ್ಧ ದ್ವಾರಗಳಿವೆ- ದೆಹಲಿಯ ಕೆಂಪುಕೋಟೆಗೆ ಲಾಹೋರ್ ಗೇಟ್ ಇರುವಂತೆ. ಒಳಗೆ ಕಲ್ಲುಹಾಸಿನ ಕಿರಿದಾದ ಓಣಿಯ ನಿಡಿದಾದ ಬೀದಿಗಳು. ಜೆರುಸಲೆಂ ವ್ಯವಸ್ಥಿತವಾಗಿ ಕಟ್ಟಲ್ಪಟ್ಟ ರೋಮನ್ ನಗರ.
ಸಣ್ಣ ಊರು ನಗರವಾಗಿ ರೂಪಾಂತರವಾಗುವುದು ಅದರ ಅದೃಷ್ಟ; ಮತ್ತೆಮತ್ತೆ ಮುತ್ತಿಗೆಗೆ ಒಳಗಾಗುತ್ತ ದೊರೆಯಿಂದ ದೊರೆಗೆ ಕೈಯಾಂತರವಾಗುವುದು ದುರ್ವಿಧಿ. ಕದನದಲ್ಲಿ ಗೆದ್ದವರು ನಗರಗಳನ್ನು ಕೆಡವಬಹುದು, ಕಟ್ಟಲೂಬಹುದು. ರೋಮನ್ನರು, ಅರಬ್ಬರು, ಧರ್ಮಯುದ್ಧಕ್ಕಾಗಿ ಬಂದ ಕ್ರೈಸ್ತರು, ಪರ್ಶಿಯನರು, ಟರ್ಕಿಗಳು, ಬ್ರಿಟಿಶರು ಇದನ್ನು ಗೆದ್ದು ಕೆಡಹಿ-ಕಟ್ಟಿದರು. ಸಹಸ್ರಾರು ವರ್ಷ ಹಲವಾರು ನಾಗರಿಕ ಜನಾಂಗಗಳ ಆಳಿಕೆಯಲ್ಲಿ ರೂಪುಗೊಂಡ ಜೆರುಸಲೆಂ, ನೂರಾರು ಸಲ ಧ್ವಂಸಗೊಳ್ಳುತ್ತ ತನ್ನ ಭಗ್ನಾವಶೇಷಗಳಿಂದಲೇ ಮರುಜನ್ಮ ಪಡೆಯುತ್ತ ಬಂದಿರುವ ಫೀನಿಕ್ಸ್ ಹಕ್ಕಿಯಂತಿದೆ.
ಜೆರುಸಲೆಂ ಹೊಟ್ಟೆಯಲ್ಲಿ ಪದರ ಪದರವಾಗಿ ಹುದುಗಿರುವ ಯುದ್ಧ-ಆಕ್ರಮಣಗಳ ಈ ಗತಚರಿತ್ರೆ ಸಂಘರ್ಷಗಳಿಂದಲೂ ರಕ್ತಪಾತಗಳಿಂದಲೂ ಕೂಡಿದೆ. ತಮ್ಮತಮ್ಮ ಧಾರ್ಮಿಕ ಪವಿತ್ರ ಜಾಗಗಳ ಕಬಜಾ ಪಡೆಯಲು ಮೂರೂ ಧರ್ಮಗಳು ದಾಯಾದಿಗಳಂತೆ ಕಲಹ ಮಾಡಿವೆ. ಇಲ್ಲಿನ ಚರ್ಚುಗಳನ್ನು ವಿಮೋಚಿಸಲು ಯೂರೋಪಿನ ಕ್ರೈಸ್ತರು ಕ್ರುಸೇಡಿನ ಪಡೆಗಳನ್ನು ಕಳಿಸಿಕೊಟ್ಟವು. ಜ್ಯೂಗಳು ತಮಗೆ ಪವಿತ್ರವಾಗಿರುವ `ಗೋಳುಗೋಡೆ’ ವಶಪಡಿಸಿಕೊಳ್ಳಲು `ಆರುದಿನದ ಯುದ್ಧ’ವೆಂದು ಖ್ಯಾತವಾಗಿರುವ ಕದನ ಮಾಡಿದರು. ಪ್ರವಾದಿಗಳಿಗೆ ಸಂಬಂಧವಿರುವ ಸಮಾಧಿ ಸ್ಮಾರಕಗಳನ್ನು ಉಳಿಸಿಕೊಳ್ಳಲು ಅರಬ್ಬರು ಹೋರಾಡಿದರು. ದೇವರು ಒಬ್ಬನೇ ಎಂದು ಸಾರುವ ವಿಗ್ರಹರಾಧನೆ ವಿರೋಧಿಸುವ ಈ ಏಕ ದೇವತಾ ಧರ್ಮಗಳು, ಕಟ್ಟಡಗಳನ್ನು ವಶಪಡಿಸಿಕೊಳ್ಳಲು ಪರಸ್ಪರ ಕಾದಾಡಿರುವುದು ಒಂದು ವ್ಯಂಗ್ಯ.
ಆದಿಮ ಬುಡಕಟ್ಟಿನ ಜನ ಜೆರುಸಲೆಮಿನ ದ್ರಾಕ್ಷಿತೋಟ ಕಣಿವೆ ಹೊಳೆಗಳ ಮೇಲೆ ಹಿಡಿತ ಸಾಧಿಸಲು ಸಂಘರ್ಷ ಮಾಡಿದ್ದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ನಾಗರಿಕ ಸಮುದಾಯಗಳು ಧರ್ಮದ ಹೆಸರಲ್ಲಿ ಸಂಘರ್ಷ ಮಾಡಿದ್ದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ದೋಷ ಧರ್ಮಗಳದ್ದೋ ಜೆರುಸಲೆಮಿನ ಆಕರ್ಷಣೆಯದೊ ಧರ್ಮದ ಹೆಸರಲ್ಲಿ ಸಮುದಾಯಗಳ ಹಿತಾಸಕ್ತಿಗಳದ್ದೊ? ಗತಕಾಲದ ಈ ಧಾರ್ಮಿಕ ಸಂಘರ್ಷಗಳು ಹೊಸತಿರುವನ್ನು ಪಡೆದು ವರ್ತಮಾನಕ್ಕೂ ಚಾಚಿಕೊಂಡಿವೆ. ಬ್ರಿಟಿಶರು -ಭಾರತ ಬಿಟ್ಟುಹೋಗುವಾಗ ಮಾಡಿದಂತೆ- ಈ ಸೀಮೆಯನ್ನು ಅರಬ್ಬರಿಗೂ ಯಹೂದಿಗಳಿಗೂ ಹಂಚಿ, ಇಸ್ರೇಲ್
ಎಂಬ ಹೊಸ ದೇಶವನ್ನು ಸ್ಥಾಪಿಸಿ (1948) ಹೋದರು. ಮೂರನೇ ದೇಶವೊಂದು ತನ್ನ ಹಿತಾಸಕ್ತಿಗಾಗಿ ಒಂದೇ ಸಂಸ್ಕೃತಿ- ಪರಂಪರೆಗೆ ಸೇರಿದ, ಸಂಕೀರ್ಣವಾದ ಚರಿತ್ರೆಯುಳ್ಳ ದೇಶವನ್ನು ಕಾಗದದ ಮೇಲೆ ಗೆರೆಯೆಳೆದಂತೆ ವಿಭಜಿಸಿದರೆ, ಉಂಟಾಗುವ ಗಾಯ ಬೇಗ ಮಾಯುವುದಿಲ್ಲ. ಅದನ್ನು ಭಾರತ-ಕೊರಿಯಾ ಅನುಭವಿಸುತ್ತಿವೆ. ಜರ್ಮನಿ ಅನುಭವಿಸಿ ಹೊರಬಂದಿದೆ.
ಜೆರುಸಲೆಮನ್ನು ಅಮೆರಿಕ ತೋಳ್ಬಲದ ವಿಶ್ವಸಂಸ್ಥೆಯು ವಿಭಜಿಸಿ ಇಸ್ರೇಲಿಗಳಿಗೂ ಪ್ಯಾಲೆಸ್ತೈನಿಯರಿಗೂ ಮಾಡಿದ ಈ ಹಂಚಿಕೆ ಎರಡೂ ಬಣಗಳಿಗೆ ತೃಪ್ತಿತಂದಿಲ್ಲ. ಉಳಿದರ್ಧ ಭಾಗವನ್ನೂ ತಮ್ಮದಾಗಿಸಿಕೊಳ್ಳಲು ನಿರಂತರ ಕದನ ನಡೆದಿದೆ. ಅದರಲ್ಲೂ ಯಹೂದಿ ಮತ್ತು ಅರಬ್ಬರ ಉಗ್ರ ಗುಂಪುಗಳು ಮುಗ್ಧರ ಸಂಹಾರ ಮಾಡಿವೆ. ನಮಗೆ ಯೆಹೋವಾ ದಯಪಾಲಿಸಿದ ಭೂಮಿಯೆಂದು ಯಹೂದಿಗಳು; ಇದು ಮೂಲತಃ ಅರಬರ (ಅರಬ್ಬಿ ಮಾತಾಡುವ ಕ್ರೈಸ್ತರ ಮತ್ತು
ಮುಸ್ಲಿಮರ) ಭೂಮಿ. ನೀವು ವಲಸಿಗರಾಗಿ ಬಂದು ನಮ್ಮನ್ನು ಒಕ್ಕಲೆಬ್ಬಿಸಿದಿರಿ ಎಂದು ಪ್ಯಾಲೆಸ್ಟೈನರು ಎದುರುಬದುರು ನಿಂತಿದ್ದಾರೆ. ಈ ಪ್ರದೇಶವನ್ನು ಅರಬರು `ಪ್ಯಾಲೆಸ್ಟೈನ್’ ಎಂದೂ ಯಹೂದಿಗಳು `ಇಸ್ರೇಲೆಂದೂ ಕರೆದುಕೊಳ್ಳುತ್ತ, ಎದುರು ಪಕ್ಷದವರ ಅಸ್ತಿತ್ವವನ್ನೇ ನಿರಾಕರಿಸುತ್ತ್ತಿದ್ದಾರೆ. ಇಸ್ರೇಲಿನ ಪ್ರವಾಸೋದ್ಯಮ ಇಲಾಖೆ ನಮಗೆ ಒದಗಿಸಿದ ನಕ್ಷೆಯಲ್ಲಿ ಪ್ಯಾಲೆಸ್ತೇನಿನ ಗಾಜಾ-ಪಶ್ಚಿಮದಂಡೆಗಳ ಸುಳಿವೇ ಇರಲಿಲ್ಲ. ಪ್ಯಾಲೆಸ್ತೇನಿ ಊರುಗಳಲ್ಲಿ ಪ್ಯಾಲೆಸ್ತೈನ್
ವಿಮೋಚನ ಹೋರಾಟದ ನಾಯಕ ಯಾಸಿರ್ ಅರಾಫತ್ ಚಿತ್ರವಿರುವ ನಕ್ಷೆಯ ಕಟ್ಟೆಗಳಿದ್ದು ಅಲ್ಲಿ ಇಸ್ರೇಲಿನ ಹೆಸರೇ ಕಾಣೆಯಾಗಿತ್ತು.
ಎರಡೂ ದೇಶಗಳು ಜೆರುಸಲೆಂ ತಮ್ಮ ರಾಜಧಾನಿ ಎಂದು ಘೋಷಿಸಿಕೊಂಡಿವೆ. ಈ ಸಂಘರ್ಷಕ್ಕೆ ಏಳು ದಶಕಗಳು ಸಂದವು. ನೂರಾರು ವಿಶ್ವಸಂಸ್ಥೆಯ ನಿರ್ಣಯಗಳು, ಶಾಂತಿಸಭೆಗಳು ನಡೆದವು. ಪ್ಯಾಲೆಸ್ತೈನ್ ಹಿಂದೆ ಜೋರ್ಡಾನ್ ಸಿರಿಯಾ ಈಜಿಪ್ತ್ ಲೆಬನಾನ್ ಇರಾಕ್ ಇರಾನ್‍ಗಳು; ಹಿಂದೆ ಭಾರತ ಕೂಡ; ಇಸ್ರೇಲಿನ ಬೆನ್ನಿಗೆ ಪಾಶ್ಚಿಮಾತ್ಯ ದೇಶಗಳು ಮತ್ತು ಅಮೆರಿಕಾ. ಪ್ಯಾಲೆಸ್ತೈನ್-ಇಸ್ರೇಲ್ ಸಂಘರ್ಷವು ನೂರಾರು ಯುದ್ಧಗಳನ್ನು ಹಡೆದು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ. ಇದು ಎಂದೂ ಮುಗಿಯದ ಯುದ್ಧದಂತಿದೆ. ಇಲ್ಲಿನ ದಾಕ್ಷಿತೋಟಗಳು ಉತ್ಪಾದಿಸಿರುವ ದ್ರಾಕ್ಷಾ ರಸಕ್ಕಿಂತ ಹೆಚ್ಚಿನ ಪ್ರಮಾಣದ ನೆತ್ತರನ್ನು ಇಲ್ಲಿನ ನೆಲ ಕುಡಿದಿರುವಂತಿದೆ. ಜೆರುಸಲೆಂ ಬ್ರೆಕ್ಟನ `ಕಕೇಸಿಯನ್ ಚಾಕ್‍ಸರ್ಕಲ’ ನಾಟಕದೊಳಗೆ ಇಬ್ಬರು ತಾಯಂದಿರ ಕೈಗೆ ಸಿಕ್ಕು ಎಳೆದಾಡಿಸಿಕೊಳ್ಳುವ ನತದೃಷ್ಟ ಮಗುವಿನಂತೆ ಭಾಸವಾಗುತ್ತದೆ.
ಎರಡು ಹೋಳಾಗಿರುವ ಜೆರುಸಲೆಮಿನ ನಡುವೆ ಗಡಿಗೋಡೆ-ಬೇಲಿ-ಕಂದಕಗಳು ಹಾದುಹೋಗಿವೆ. ಇಸ್ರೇಲ್ ತನ್ನ ಗಡಿಯಲ್ಲಿ ದಾಟಲಾಗದ ಗೋಡೆಗಳನ್ನು ಕಟ್ಟತೊಡಗಿದೆ. ಅವು ನೆಲದೊಳಗಿಂದ ಎದ್ದ ಕತ್ತಿಯಲುಗಿನಂತೆ, ಡೈನೊಸೊರಸಿನ ಬೆನ್ನಿನಂತೆ, ಜೋಡಿಸಿಟ್ಟ ಹಾವಿನ ಹೆಡೆಗಳಂತೆ ಕಾಣುತ್ತವೆ. ಕ್ರಾಂಕ್ರೀಟಿನ ಬೂದುಬಣ್ಣದ ಗೋಡೆ, ಸಿಂಬೆಸುತ್ತಿದ ಮುಳ್ಳುತಂತಿಯ ಬೇಲಿ, ದಪ್ಪಕಲ್ಲಿನ ಗೋಡೆ; ಅವಕ್ಕೆ ಕಣ್ಗಾವಲಿನ ಕ್ಯಾಮೆರಾಗಳು. ಸದ್ಯಕ್ಕೆ ವಿಶ್ವಸಂಸ್ಥೆಯ ಆಕ್ಷೇಪದಂತೆ ಗೋಡೆ ಕಟ್ಟೋಣ ನಿಂತಿದೆ. ಆದರೆ ಜನರ ಮನಸ್ಸಿನೊಳಗಿನ ಗೋಡೆಗಳು ನಿಂತಿಲ್ಲ. ಜಗತ್ತಿನಲ್ಲಿ ಅತ್ಯಂತ ಸೂಕ್ಷ್ಮವೂ ಅಪಾಯಕರವೂ ಆದ ಗಡಿವಿವಾದವುಳ್ಳ ನಗರವಿದು. ಧಾರ್ಮಿಕ ಸಮುದಾಯಗಳು ಇರುವ ನೀರು ನೆಲಗಳನ್ನು ಹಂಚಿಕೊಂಡು ಬದುಕಲಾಗದೆ ಗೋಡೆ ಬೇಲಿ ಕಟ್ಟಿಕೊಂಡು ಗುಮಾನಿ ರೊಚ್ಚು ಸೇಡುಗಳಲ್ಲಿ ಬದುಕುವುದು ಒಂದು ದುರವಸ್ಥೆ. ಬೆತ್ಲೆಹೆಂ, ಹೆಬ್ರೋನ್, ಜೆರುಸಲೆಂ ಯುದ್ಧ ಕೈದಿಗಳಂತೆ ಕಾಣುತ್ತವೆ.
ಇದನ್ನೂ ಓದಿ: ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ವಸಾಹತುಶಾಹಿ ನೆಲೆಯಲ್ಲಿಯೇ ನೋಡಬೇಕು
ನಮ್ಮ ಬಸ್ಸು ಜೆರುಸಲೆಮನ್ನು ವಿಭಜಿಸಿರುವ ಗಡಿಗಳಲ್ಲಿ ಹಾಯುವಾಗ ಮತ್ತೆ ಮತ್ತೆ ಎರಡೂ ದೇಶಗಳ ಗಡಿಸೈನಿಕರ ತಪಾಸಣೆಗೆ ಒಳಪಡಬೇಕಾಗಿತ್ತು. ನಗರದ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ಹೋಗುವುದಕ್ಕೂ ಚೆಕ್‍ಪೋಸ್ಟ್ ದಾಟಬೇಕು. ಎಲ್ಲಿಂದ ಇಸ್ರೇಲ್ ಶುರುವಾಗಿ ಎಲ್ಲಿ ಪ್ಯಾಲೆಸ್ತೇನ್ ಮುಗಿಯುತ್ತದೆ ಎಂಬುದೇ ತಿಳಿಯುತ್ತಿರಲಿಲ್ಲ. ಕಟ್ಟಿದ ಗೋಡೆ-ಹಾಕಿದಬೇಲಿ ಕಾಯಲು ಹಗಲೂರಾತ್ರಿ ಕಾಡತೂಸು ತುಂಬಿದ ತುಪಾಕಿ ಹಿಡಿದು ಬಿಗಿಮೊಗದ ಶಂಕೆಗಣ್ಣುಗಳಿಂದ ಜನರನ್ನು ನೋಡುವ ಸೈನಿಕರು. ಪ್ಯಾಲೆಸ್ತೈನ್ -ಇಸ್ರೇಲ್‍ಗಳ ತರುಣ ತರುಣಿಯರು ಮಿಲಿಟರಿ ತರಬೇತಿ ಪಡೆಯುವುದು ಕಡ್ಡಾಯ. ಮಫ್ತಿಯಲ್ಲಿ ರಸ್ತೆಹೋಕರನ್ನು ಚೂರಿನೋಟದಿಂದ ನೋಡುತ್ತ ಗೂಢಚಾರರನ್ನೂ ಕಾಣಬಹುದು.
ಒಂದು ದಿನ ಡಮಾಸ್ಕಸ್ ಗೇಟಿನಿಂದ ಹೊರಬರುತ್ತಿದ್ದ ಅರಬ್ ತರುಣನನ್ನು ಗೋಡೆಗೆ ನೂಕಿಹಿಡಿದು, ಇಸ್ರೇಲಿ ಪೋಲಿಸರು ತಪಾಸಣೆ ಮಾಡುವುದನ್ನು ನೋಡಿದೆವು. ಬಹುಶಃ ಇದೆಲ್ಲ ಇಲ್ಲಿನ ಜನರಿಗೆ ಅಭ್ಯಾಸವಾಗಿರಬೇಕು.ʼಈ ರಸ್ತೆ ಪ್ಯಾಲೆಸ್ತೇನಿ ಹಳ್ಳಿಗೆ ಹೋಗುತ್ತದೆ. ಇಸ್ರೇಲಿ ನಾಗರಿಕರಿಗೆ ಸುರಕ್ಷಿತವಲ್ಲʼ ʼಇದು ಪ್ಯಾಲೆಸ್ತೈನ್ ಪ್ರದೇಶ; ಇಸ್ರೇಲಿಗಳಿಗೆ ಪ್ರವೇಶವಿಲ್ಲʼ ʼಇಸ್ರೇಲಿನ ಉತ್ಪನ್ನಗಳನ್ನು ಬಹಿಷ್ಕರಿಸಿರಿʼ ಮುಂತಾದ ಬೋಡುಗಳನ್ನು ಹಾದಿಯುದ್ದಕ್ಕೂ ಇದ್ದವು. ಆತ್ಮರಕ್ಷಣೆ ಮತ್ತು ವಿಮೋಚನೆಯ ಹೆಸರಲ್ಲಿ ಆಕ್ರಮಣಕ್ಕೆ ಸಿದ್ಧವಾದ ದೇಶಗಳು ನಾಗರಿಕರನ್ನೇ ಸೈನಿಕೀಕರಣಗೊಳಿಸುತ್ತವೆ. ಆಧುನಿಕ ರಾಷ್ಟ್ರನಿರ್ಮಾಣದ ಪರಿಕಲ್ಪನೆಯಲ್ಲಿಯೇ ನಾಗರಿಕರ ಮಿಲಿಟರೀಕರಣ, ಆಕ್ರಮಣಶೀಲತೆ ಹಿಂಸೆಯ ಎಳೆಗಳು ಸುತ್ತಿಕೊಂಡಿವೆ. ಇಷ್ಟೊಂದು ಗೋಡೆ ಮತ್ತು ಎಚ್ಚರಿಕೆ ಫಲಕ, ತುಪಾಕಿಧಾರಿ ಪೋಲಿಸರನ್ನು ಇಟ್ಟುಕೊಂಡು ಎಷ್ಟು ದಿನ ಬದುಕು ತೆಗೆಯಬಹುದು? ಒಬ್ಬರಿಗೊಬ್ಬರು ಸಂಶಯ ಅಂಜಿಕೆ ಆತಂಕಗಳಿಂದ ಗಮನಿಸುವ ಜನರನ್ನು ಇಟ್ಟುಕೊಂಡು ಜೆರುಸಲೆಂ ವಿಚಿತ್ರ ತಳಮಳದಲ್ಲಿರುವಂತೆ ಭಾಸವಾಯಿತು. ಇರುವ ನೆಲ ನೀರು ಬೆಟ್ಟ ಕಡಲುಗಳನ್ನು ಹಂಚಿಕೊಂಡು ಬಾಳಲಾಗದ
ಜನರ ದುರಂತಗಳಿಗೆ ಸಾಕ್ಷಿಪ್ರಜ್ಞೆಯಂತಿತ್ತು.
ಜೆರುಸಲೆಂ ಪಕ್ಕದದಲ್ಲಿರುವ ಕರ್ಮೆಲ್ ಪಟ್ಟಣಕ್ಕೆ ಹಳೆಯ ರಶ್ಯನ್ ಚರ್ಚ್ ನೋಡಲು ಹೋಗಿದ್ದೆವು. ಅಲ್ಲೊಂದು ಪಾಳುಬಿದ್ದ ಮಸೀದಿಯ ಮೀನಾರು ಏಕಾಂಗಿ ನಿಂತಿತ್ತು. ತುದಿಯಲ್ಲಿದ್ದ ಚಂದ್ರ ಅರ್ಧ ಮುರಿದಿತ್ತು. ನಮ್ಮ ಗೈಡ್ ಮರೀನಾಗೆ ಏನಿದು ಎಂದೆ. `ಒಂದು ಕಾಲಕ್ಕೆ ಅರಬರೇ ಇದ್ದ ಊರಿದು. ಬ್ರಿಟಿಶರು ಇಸ್ರೇಲನ್ನು ಸ್ಥಾಪಿಸುವಾಗ ಯಹೂದಿಗಳು ಬಂದು ನಿಮ್ಮನ್ನು ಓಡಿಸುತ್ತಾರೆ ಎಂದು ಹೆದರಿಸಿದರು. ಆಗವರು ತೋಟ ಮನೆಯನ್ನೆಲ್ಲ ಸೋವಿಗೆ ಮಾರಿ ಪ್ಯಾಲೆಸ್ತೇನ್ ಭಾಗಕ್ಕೆ ವಲಸೆ ಹೋದರು.
ಈಗ ಮರಳಿ ಬರಲು ಬಯಸುತ್ತಿದ್ದಾರೆ. ಹೇಗೆ ಸಾಧ್ಯ?’ ಎಂದು ಮರುಪ್ರಶ್ನೆ ಮಾಡಿದಳು. ಪ್ಯಾಲೆಸ್ತೈನಿನಲ್ಲಿ ಯಹೂದಿಗಳು ಇದ್ದಂತಿಲ್ಲ. ಆದರೆ ಇಸ್ರೇಲ್ ಭಾಗದಲ್ಲಿ ಅರಬ್ಬರೇ ಇರುವ ಹಳ್ಳಿಗಳಿದ್ದವು. ಅದನ್ನು ಅಲ್ಲಿರುವ ಮೀನಾರುಗಳಿಂದ ಗುರುತಿಸಬಹುದಿತ್ತು. ಆ ಹಳ್ಳಿಗಳಲ್ಲಿ ಯಹೂದಿಗಳು ತಮ್ಮ ಮನೆ
ಹೊಲ ಮಾರಿ ಬೇರೆಡೆಗೆ ಹೋಗಿದ್ದಾರೆ ಎಂದು ಮರೀನಾ ಹೇಳಿದಳು. ಧರ್ಮದ ಹೆಸರಲ್ಲಿ ಸಮುದಾಯಗಳು ಸಂಪೂರ್ಣವಾಗಿ ಧ್ರುವೀಕರಣಗೊಂಡಿವೆ. ಇದರ ತಾಪ ಮೂರೂ ಧರ್ಮಗಳ ಜನರ ಮನೆಗಳೂ ಅವರ ಧಾರ್ಮಿಕ ತಾಣಗಳೂ ಇರುವ ಜೆರುಸಲೆಂ ಕೂಡ ಅನುಭವಿಸುತ್ತಿದೆ. ತಮ್ಮನ್ನು ಸ್ಫೋಟಗೊಳಿಸಿಕೊಳ್ಳುವ ಪ್ಯಾಲೆಸ್ತೈನಿ ತರುಣರ ಮತ್ತು ಅವರನ್ನು ಮಿಲಿಟರಿ ಬಲದಿಂದ ಕ್ರೂರವಾಗಿ ಹತ್ತಿಕ್ಕುವ ಬಲಿಷ್ಠ ಇಸ್ರೇಲಿ ಸೈನ್ಯದ ನಡುವೆ ಸಿಕ್ಕು ಜರ್ಜರಿತವಾಗಿದೆ. ನಾವು ಜೆರುಸಲೆಂ ಬಿಟ್ಟು ಕೈರೊಗೆ ಹೊಡುವ ದಿನವೇ ಬೆತ್ಲೆಹೆಂನಲ್ಲಿ ಒಂದು ಆಸ್ಫೋಟ ಸಂಭವಿಸಿತು. ಜೆರುಸಲೆಂ ಒಳಗೆ ಲಾವಾರಸ ಹರಿದಾಡುವ ಭೂಪದರದ ಮೇಲೆ ಕಟ್ಟಿದ ಮನೆಯಂತಿದೆ.
ತಮ್ಮ ನಡುವಣ ನಂಟನ್ನು ಮುರಿದು ಜಗಳ ಹಚ್ಚಿದ್ದು ಬ್ರಿಟನ್-ಅಮೆರಿಕಾ ಎಂದು ಹೆಚ್ಚಿನವರಿಗೆ ಗೊತ್ತಿದೆ. ಕಾದಾಡುವವರು ತಮ್ಮನ್ನು ಕಾದಾಟಕ್ಕೆ ಹಚ್ಚಿದವರು ಯಾರು ಮತ್ತು ಯಾಕೆಂದು ಮರೆತರೆ ಆಗುವ ಅನಾಹುತ ಇಲ್ಲೂ ಆಗಿದೆ. ಬೆತ್ಲೆಹೆಮ್ಮಿನ `ಅಲ್ ಕರಮೆಹ್’ ಹೋಟೆಲಿನ ಊಟದ ಹಾಲಿನಲ್ಲಿ ಪ್ಯಾಲೆಸ್ತೈನ್ ಇತಿಹಾಸ ಜೀವನವಿಧಾನ ಪರಂಪರೆ ಸೂಚಿಸುವ ವಸ್ತುಗಳ ಪ್ರದರ್ಶನ ಮಾಡಲಾಗಿತ್ತು. ಅಲ್ಲಿ ಜೆರುಸಲೆಂ ಬೆತ್ಲೆಹೆಂಗಳಲ್ಲಿ ಹುಟ್ಟಿದ ಪ್ರಸಿದ್ಧ ಕವಿ ಚಿಂತಕ ಕಲಾವಿದರ ಫೋಟೊಗಳೂ ಇದ್ದವು. ಅವುಗಳಲ್ಲಿ `ಓರಿಯೆಂಟಲಿಸಂ’ ಕೃತಿಯಿಂದ ಖ್ಯಾತನಾದ ಎಡ್ವರ್ಡ್ ಸಯೀದ್, ಪ್ಯಾಲೆಸ್ತೈನಿ ಚಳುವಳಿಯ ನಾಯಕ ಯಾಸೀನ್ ಅರಾಫತ್, ಕವಿ ಮಹಮೂದ್ ದರ್ವಿಶ್, ಮುಂತಾದವರ ಚಿತ್ರಗಳಿದ್ದವು.
ಹೋಟೆಲಿನ ಮುಂದೆ ʼಪ್ಯಾಲೆಸ್ಟೇನಿಯನ್ ಕಾನ್‍ಫ್ಲಿಕ್ಟ್ ರೆಸೊಲೂಶನ್ ಸೆಂಟರ್’ ಎಂಬ ಸಂಸ್ಥೆಯಿತ್ತು. ಕಟ್ಟಡದ ಗೇಟಿನ ಮೇಲಿದ್ದ ಬೋರ್ಡಿನಲ್ಲಿ “ಬನ್ನಿ. ಕಾಫಿ ಟೀ ಕುಡಿಯುತ್ತ, ಬಾದಾಮಿ ತಿನ್ನುತ್ತ, ಸಾಮಾಜಿಕ ರಾಜಕೀಯ ಆರ್ಥಿಕ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚೆ ಮಾಡಬಹುದು’’ ಎಂದು ಬರೆಯಲಾಗಿತ್ತು. ಅದರೊಳಗೆ ಹೋಗಿ ಚರ್ಚೆ ಮಾಡಲು ನಮಗೆ ಸಮಯ ಇರಲಿಲ್ಲ. ಜನರನ್ನು ಮಾತಾಡಿಸಿ ಅವರ ಅಭಿಪ್ರಾಯಲೂ ತಿಳಿಯಲು ಸಹ ಆಗಲಿಲ್ಲ. ಆದರೆ ಮಾತಾಡಿದ್ದಷ್ಟು ಜನ ಪ್ರಖರ ರಾಜಕೀಯ ಪ್ರಜ್ಞೆಯವರಾಗಿದ್ದರು.
ಈಜಿಪ್ತಿನಲ್ಲೂ ಹಾಗೆಯೇ. ಪಿರಮಿಡ್ಡು ನೋಡಿದ ಬಳಿಕ ಪೈಪರಸ್ ಕಾಗದದ ಮೇಲೆ ಚಿತ್ರಕಲೆ ಮಾಡುವ ಕಲಾಶಾಲೆಯೊಂದಕ್ಕೆ ಹೋಗಿದ್ದೆವು. ಅಂಗಡಿಯ ಮಾಲಿಕನ ಮಗಳು ಪದವೀಧರೆ. ಇಂಗ್ಲಿಷ್ ಬಲ್ಲವಳು. ಆಕೆಯ ಜತೆ ಮಾತಾಡುತ್ತ “ನಾವು ಇಸ್ರೇಲಿನಿಂದ ಇಲ್ಲಿಗೆ ಬಂದಿದ್ದೇವೆ. ದೊಡ್ಡ ವ್ಯತ್ಯಾಸ ಕಾಣುತ್ತಿದೆ. ಅವರು ನಗರಗಳನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾರೆ. ಕೈರೊ ಯಾಕಿಷ್ಟು ಕೊಳಕಾಗಿದೆ’’ ಎಂದು ನಾನು ಪ್ರಶ್ನಿಸಿದೆ. ಆಕೆ ತಟ್ಟನೆ “ಹೌದು, ನಾವು ಬಡತನದ ಜತೆ ಹೋರಾಡ್ತಾ ಇದ್ದೇವೆ. ಗಲೀಜಿದೆ. ಆದರೆ ನಮ್ಮ ರಸ್ತೆಗಳ ಮೇಲೆ ರಕ್ತ ಚೆಲ್ಲುವುದಿಲ್ಲ’’ ಎಂದಳು. ʼರಸ್ತೆಯ ಮೇಲೆ ರಕ್ತವಿದೆ ರಕ್ತವಿದೆ ರಸ್ತೆಯ ಮೇಲೆ’ ಎಂಬ ಸಾಲು ಬರೆದ ಕ್ರಾಂತಿಕಾರಿ ಕವಿಯನ್ನು ಓದಿದ್ದಳೊ ಇಲ್ಲವೊ, ಸರಳವಾಗಿ ದಿಟವನ್ನು ಹೇಳಿದಳು.
ಈಜಿಪ್ತಿನಲ್ಲಿ ಹೊಸ ತಲೆಮಾರಿನ ತರುಣ ತರುಣಿಯರು ತೆಹರೀರ್ ಸರ್ಕಲ್ಲಿನಲ್ಲಿ ಒಂದು ವಾರಕಾಲ ಕೂತು, ಭ್ರಷ್ಟ ಸರ್ಕಾರವನ್ನು ಇಳಿಸಿದರು ಎಂಬುದು ನೆನಪಾಯಿತು. ದೇಶವೆಂದರೆ ಕಸವಿಲ್ಲದೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮುಖ್ಯ. ಆದರೆ ರಕ್ತಹರಿಸುವ ಕ್ರೌರ್ಯವನ್ನು ಬೆಳೆಸುತ್ತ ಕಸ ತೆಗೆಯುವ ಅಭಿಯಾನವಿದ್ದರೆ ಹೇಗೆ ಅರ್ಥಮಾಡಿಕೊಳ್ಳುವುದು? ರಾಜಕೀಯ ಸಂಘರ್ಷವುಳ್ಳ ಪ್ರದೇಶಗಳಲ್ಲಿ ಜನ ತಮ್ಮ ದೇಶದ ಆರ್ಥಿಕ ರಾಜಕೀಯ ಸಮಸ್ಯೆಗಳ
ಬಗ್ಗೆ ಚರ್ಚಿಸುವ ಸೂಕ್ಷ್ಮಪ್ರಜ್ಞೆ ಬೆಳೆಸಿಕೊಂಡಿರುತ್ತಾರೆ. ಇದನ್ನು ಜೋರ್ಡಾನಿನಲ್ಲಿ ಮಾರ್ಗದರ್ಶಕನಾಗಿದ್ದ ಈಸಾ, ಇಸ್ರೇಲಿನಲ್ಲಿ ಮರೀನಾ, ಈಜಿಪ್ತಿನಲ್ಲಿ ಮೆಹಮೂದ್ ಅವರಲ್ಲಿ ಕಾಣಬಹುದಿತ್ತು. ನೂರಾರು ಪ್ರವಾದಿ ವಿಜ್ಞಾನಿ ಕವಿ ದಾರ್ಶನಿಕ ಚಳುವಳಿಗಾರರನ್ನು ರೂಪಿಸಿರುವ ಜೆರುಸಲೆಂ-ಬೆತ್ಲೆಹೆಂ ಜ್ಞಾನಕೇಂದ್ರಗಳು. ಈ ಜ್ಞಾನ ಧಾರ್ಮಿಕ ದ್ವೇಷದಿಂದ ಮಾತ್ರವಲ್ಲ, ರಾಜಕೀಯ ಸಂಘರ್ಷವನ್ನು ಹೇಗೆ ಶಾಂತಿಯುತವಾಗಿ ಎರಡೂ ಕಡೆ ಘನತೆಯಿಂದ ಬದುಕುವ ದಿನಗಳನ್ನು ರೂಪಿಸಲು ಯತ್ನಿಸಬೇಕು ಎಂಬ ಮಾನವೀಯ ವಿವೇಕದಿಂದಲೂ ಹುಟ್ಟಿದ್ದು.
ಜೆರುಸಲೇಮಿನಲ್ಲಿ ನಮ್ಮ ವಾಹನ ಚಾಲಕ ನಜೀರ್ ಮುಸ್ಲಿಂ. ರಷ್ಯಾದಿಂದ ವಲಸೆ ಬಂದಿರುವ ಗೈಡ್ ಮರೀನಾ ಯಹೂದಿ. ಇಬ್ಬರೂ ಇಸ್ರೇಲಿ ನಾಗರಿಕರು. ನಜೀರ್ ತನ್ನೆರಡೂ ಗಂಡು ಮಕ್ಕಳನ್ನು ಜರ್ಮನಿಗೆ ಓದಲು ದುಡಿಯಲು ಕಳಿಸಿದ್ದಾನೆ. ಅವನಿಗೆ ಇಸ್ರೇಲಿನಲ್ಲಿ ಮಗಳನ್ನು ಬೆಳೆಸುವ ಚಿಂತೆ. ವಿಮೋಚಿತ ಪ್ಯಾಲೆಸ್ತೈನಿನ ಕನಸು ಅವನಲ್ಲಿತ್ತೊ ಇಲ್ಲವೊ ತಿಳಿಯಲಿಲ್ಲ. ಈಗಿರುವ ಪ್ಯಾಲೆಸ್ತೇನಿಗೆ ಹೋದರೆ ಬಡತನ ಮತ್ತು ಹೋರಾಟ ಹಂಚಿಕೊಳ್ಳಬೇಕು. ಇಲ್ಲಾದರೆ ದುಡಿಮೆ, ಆದಾಯವಿದೆ. ಆದರೆ ಅಭದ್ರತೆ ಕೂಡ. ಯಹೂದಿ ಮೂಲಭೂತವಾದವು (ಜಿಯೋನಿಸಂ) ಇಸ್ರೇಲಿನಲ್ಲಿ ತೀವ್ರವಾಗಿ ಬೆಳೆಯುತ್ತಿದೆ. ನಮಗೆ ಗೋಳಿನಗೋಡೆಯ ಬಳಿ ಯಹೂದಿಯೊಬ್ಬ ಕೊಟ್ಟ ಕರಪತ್ರವು ಇದಕ್ಕೆ ಸಾಕ್ಷಿಯಾಗಿತ್ತು. ಆದರೂ ಹಿಬ್ರೂ-ಅರಬ್ಬಿ ಭಾಷೆಗಳಲ್ಲಿ ಪರಸ್ಪರ ಮಾತಾಡುತ್ತಿದ್ದ ಮರೀನಾ-ನಜೀರ್ ಅನೋನ್ಯವಾಗಿದ್ದಾರೆ.
ಇಬ್ಬರೂ ಪ್ಯಾಲೆಸ್ತೈನ್ ಪ್ರದೇಶದಲ್ಲಿ ಓಡಾಡಲು ಪರವಾನಿಗೆ ಪಡೆದಿದ್ದಾರೆ. ಬೇಲಿ ಗೋಡೆಗಳಿದ್ದರೂ ಅವುಗಳ ದಾಟುವಿಕೆಯ ನೂರಾರು ಕಿಂಡಿಗಳಿವೆ ಅನಿಸುತ್ತಿತ್ತು. ಏನಿಲ್ಲವೆಂದರೂ ಧರ್ಮಾತೀತ ಪ್ರೇಮಿಗಳು ಈ ಕಿಂಡಿಗಳನ್ನು ಕೊರೆದಿರಬಹುದು ಎಂದು ಊಹಿಸಿದೆ. ಹಳೆ ಒಡಂಬಡಿಕೆಯ `ಸಾಂಗ್ ಆಫ್ ಸಾಂಗ್ಸ್’ ಭಾಗದ ಹಾಡುಗಳು ನೆನಪಾದವು. ಅಲ್ಲಿ ಜೆರುಸಲೆಮಿನ ವಿರಹತಪ್ತರಾದ ಪ್ರೇಮಿಗಳ ಉತ್ಕಟವಾದ ಭಾವನೆಗಳು ವ್ಯಕ್ತವಾಗಿದ್ದು, ಇದೇನಿದು ಬೈಬಲ್ ಪ್ರೇಮಕಾವ್ಯವಾಗಿದೆ ಎಂದು ಬೆರಗು ಹುಟ್ಟಿಸುವಂತಿವೆ.
ಜೆರುಸಲೆಂ ಪ್ರೇಮಿಗಳ ನಗರವೂ ಆಗಿದೆ. ಇಲ್ಲಿನ ಮಸೀದಿಗಳ ಮುಂದೆ `ಆಯುಧ ಒಯ್ಯುವುದು ಮತ್ತು ಪ್ರೇಮಿಗಳು ಅಪ್ಪಿಕೊಳ್ಳುವುದು ಮುದ್ದಿಡುವುದು ನಿಷೇಧಿಸಲಾಗಿದೆ’ ಎಂಬ ಎಚ್ಚರಿಕೆ ಫಲಕ ಕಂಡೆ. ಪ್ರೇಮಕ್ಕಿಂತ ಬಲವಾದ ಆಯುಧ ಯಾವುದಿದೆ? ನಾನು ಮರೀನಾಗೆ ʼಅರಬ್ ಕ್ರೈಸ್ತ ಯಹೂದಿ ತರುಣ ತರುಣಿಯರ ನಡುವೆ ಪ್ರೇಮ-ಮದುವೆ ಆಗಿವೆಯೇ?’ ಎಂದು ಕೇಳಿದೆ. ಅವಳು ಮೊಬೈಲ್ ತೆರೆದು ಮಗಳು ಅಳಿಯ ಮೊಮ್ಮಕ್ಕಳ ಚಿತ್ರಗಳನ್ನು ತೋರಿಸಿದಳು. ಅದೊಂದು ಪುಟ್ಟ ಸುಂದರ ಸಂಸಾರ. ಹೆಮ್ಮೆಯಿಂದ ಹೇಳಿದಳು: ʼನನ್ನ ಅಳಿಯ ಕ್ರೈಸ್ತ. ಚಿನ್ನದಂತಹ ಹುಡುಗ’. ಕಟ್ಟಿದ ಗೋಡೆಗಳನ್ನು ದಾಟಿ ಮಾನವ ಸಂಬಂಧಗಳು ಸಾಕಷ್ಟು ಬೆಳೆದಿವೆ. ಜೆರುಸಲೆಂ ಸಮುದಾಯಗಳನ್ನು ಬೆಸೆಯುವ ಕೊಂಡಿಯಂತೆಯೂ ಕೆಲಸ ಮಾಡುತ್ತಿದೆ.
ಜೆರುಸಲೆಮಿನ ಗೋಡೆಗಳ ಬಗ್ಗೆ ಪ್ಯಾಲೆಸ್ತೇನಿಯರಿಗೆ ಆಕ್ರೋಶವಿದೆ. ಇಸ್ರೇಲ್ ಭಾಗದಲ್ಲೂ ಗೋಡೆದ್ವೇಷಿಗಳಿದ್ದಾರೆ. ಎಂತಲೇ ಗೋಡೆ ಕುರಿತು ನೂರಾರು ಜೋಕು ಹುಟ್ಟಿವೆ. ಒಂದು ಹೀಗಿದೆ: ಒಬ್ಬ ಮುದುಕಿ ಉಪ್ಪರಿಗೆಯಲ್ಲಿ ನಿಂತು ಬಗ್ಗಿ ನೋಡುತ್ತಿರುವಾಗ ಹಲ್ಲುಸೆಟ್ಟು ಕೆಳಗೆ ಬಿದ್ದುಬಿಟ್ಟಿತು. ಅದು ಗೋಡೆಯಾಚೆ ಬಿದ್ದದ್ದರಿಂದ ಎತ್ತಿಕೊಳ್ಳುವಂತಿಲ್ಲ. ಆಕೆ ಪ್ಯಾಲೆಸ್ತೈನಿನ ಆಡಳಿತಕ್ಕೆ ದೂರು ಸಲ್ಲಿಸಿದಳು. ಪ್ಯಾಲೆಸ್ತೈನ್ ಅಧಿಕಾರಿಗಳು ಇಸ್ರೇಲಿನ ಅಧಿಕಾರಿಗಳಿಗೆ ದೂರನ್ನು
ಮುಟ್ಟಿಸಿದರು. ಇಸ್ರೇಲಿನ ಮಿಲಿಟರಿ ದಂಡನಾಯಕ ಬಂದು ಆಸ್ಫೋಟಕ ತಜ್ಞರಿಂದ ತಪಾಸಣೆ ಮಾಡಿ, ಅಪಾಯಕರವಲ್ಲದ ವಸ್ತುವೆಂದು ಖಚಿತ ಪಡಿಸಿಕೊಂಡು, ಅದನ್ನು ಪ್ಯಾಲೆಸ್ತೇನಿ ಅಧಿಕಾರಿಗಳಿಗೆ ಅಧಿಕೃತ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಿದ. ಅಲ್ಲಿಂದ ಆ ಮುದುಕಿಗೆ ಅದು ತಲುಪುವಾಗ ಎಷ್ಟೊ ದಿನಗಳು ಕಳೆದವು.
ಇಂತಹ ಜೋಕುಗಳಲ್ಲಿರುವ ವ್ಯಂಗ್ಯವು ಮಾನವರಲ್ಲಿರುವ ಕೂಡಿಬದುಕಿನ ಕನಸುಗಳ ಭ್ರೂಣರೂಪ. ಬರ್ಲಿನ್ ಗೋಡೆಯನ್ನು ಒಡೆದಂತೆ ಇದನ್ನೂ ಒಡೆಯುವ
ಸುತ್ತಿಗೆಗಳಾಗಿ ಈ ವ್ಯಂಗ್ಯವು ರೂಪಾಂತರವಾಗುವ ಕಾಲ ಬಂದೀತು. ಆದರೆ ಅದು ಹತ್ತಿರವಂತೂ ಇದ್ದಂತಿಲ್ಲ. ಚರಿತ್ರೆಯಲ್ಲಿ ಅಗಲಿದ ಊರು ದೇಶ ಮನೆಗಳು ಕೂಡಿಬಾಳುವ ತಾಣಗಳಾಗುವುದು ಕಷ್ಟ ನಿಜ. ಆದರೆ ಹಂಚಿಕೊಂಡು ಬಾಳುವ ತಾಣಗಳೂ ಆಗಬಾರದೇ? ಇದೇನು ಅಸಾಧ್ಯ ಆದರ್ಶವಲ್ಲ. ಜಗತ್ತಿನ ರಾಜಕಾರಣದಲ್ಲಿ ಸಂಭವಿಸಿರುವ ವಾಸ್ತವಗಳು.
ಜೆರುಸಲೆಮಿನ ಆಗಸದಲ್ಲಿ ಹಾರುವ ಹಕ್ಕಿದಂಡನ್ನು ತೋರಿಸುತ್ತ ಮರೀನಾ ʼನೋಡಿ, ಇವಕ್ಕೆ ಪಾಸುಪೋರ್ಟು ವೀಸಾಗಳ ಹಂಗೇ ಇಲ್ಲ’ ಎಂದು ಹೇಳಿದಳು. ಗೋಡೆಗಳು ಹುಟ್ಟುವುದು ಮೊದಲು ಮನಸ್ಸುಗಳಲ್ಲಿ. ಬಳಿಕ ಅವು ಭೌತಿಕ ರೂಪದಲ್ಲಿ ಮೇಲೇಳುತ್ತವೆ. ಅವನ್ನು ಮತೀಯ ಸಿದ್ಧಾಂತ ಮತ್ತು ಮೂಲಭೂತವಾದಿ ಧರ್ಮಗಳು ಅನುಲ್ಲಂಘನೀಯ ಮಾಡುತ್ತವೆ. ಇಸ್ರೇಲ್-ಪ್ಯಾಲಸ್ತೇನ್ ಗೋಡೆಗಳ ಹಿಂದೆ ರಾಷ್ಟ್ರಗಳ ಫಿತೂರಿ ರಾಜಕಾರಣವಿದೆ. ಈ ಗೋಡೆಗಳನ್ನು ಒಡೆಯುವ ಮೊದಲು ಅವನ್ನೂ ಅರ್ಥಮಾಡಿಕೊಳ್ಳಬೇಕಿದೆ. ಇಸ್ರೇಲ್ ಭಾಗದ ಗೋಡೆಗಳು ಸ್ವಚ್ಛವಾಗಿವೆ. ಆದರೆ ಗೂನುಬೆನ್ನಂತೆ ಬಾಗಿದ ಪ್ಯಾಲೆಸ್ತೈನಿ ಗೋಡೆಗಳೆಲ್ಲ ಕ್ಯಾನ್‍ವಾಸುಗಳಾಗಿವೆ. ಅವುಗಳ ತುಂಬ ಘೋಷಣೆ ಚಿತ್ರ ಕವಿತೆಗಳು. ಒಂದು ಕವಿತೆಯನ್ನು ಮಿತ್ರರಾದ ವಿ.ಎಸ್.ಶ್ರೀಧರ್ ಹಾಗೂ ಚಂದ್ರಕಾಂತ್ ಪತ್ತೆ ಮಾಡಿ ತಂದರು. ಅದು ಹೀಗಿತ್ತು:
ದಿ ವಾಲ್ ಕ್ಯನಾಟ್ ಫೀಲ್ ಬಟ್ ಕ್ಯನ್ ಕ್ರೈ ಔಟ್ ಆಫ್ ಫಿಯರ್
ದ ವಾಲ್ ಹ್ಯಾಸ್ ನೋ ವಾಯ್ಸ್ ಬಟ್ ಇಟ್ ಸ್ಪೀಕ್ಸ್ ಲೌಡ್ ಅಂಡ್ ಕ್ಲಿಯರ್
ದಿ ವಾಲ್ ಹ್ಯಾಸ್ ನೊ ಐಯ್ಸ್ ಬಟ್ ಲುಕ್ಸ್‍ಡೌನ್ ಆನ್ ಅಸ್ ಆಲ್
ದಿ ವಾಲ್ ಕ್ಯನಾಟ್ ಮೋವ್ ಬಟ್ ವನ್ ಡೇ ಇಟ್ ವಿಲ್ ಫಾಲ್
ನನಗೆ ಕೂಡಲೇ ಸ್ಥಾವರಕ್ಕಳಿವುಂಟು ವಚನ ನೆನಪಾಯಿತು. ಒಂದು ಕವಿತೆಯ ಸಂಕಲನದಂತೆ ಇಡೀ ಗೋಡೆಯ ಬರೆಹಗಳನ್ನೆಲ್ಲ ಓದಿಕೊಂಡು ಓಡಾಡಬೇಕು ಅನಿಸಿತು.
ಜೆರುಸಲೆಮಿನ ಗಡಿಗೋಡೆಗಳ ಹಿಂದೆ ಸಾವಿರಾರು ವರ್ಷಗಳ ಜನಾಂಗಗಳ ಧರ್ಮಗಳ ಸಂಸ್ಕøತಿಗಳ ಸಂಘರ್ಷದ ಚರಿತ್ರೆಯಿದೆ. ಆದರ್ಶದ ಹುಮ್ಮಸ್ಸಿನಿಂದ ಇದು ಬೀಳುತ್ತದೆ ಎಂದು ನಂಬಲು ಕಷ್ಟವಾಗುವಂತೆ ಸನ್ನಿವೇಶ ಜಟಿಲವಾಗಿದೆ. ಆದರೆ ಗೋಡೆಯ ಮೇಲೆ ಹುಟ್ಟಿರುವ ಜೋಕು- ಕವಿತೆ-ಘೋಷಣೆಗಳು ಗೋಡೆಗಳಿಲ್ಲದ ದೇಶವನ್ನು ಹಾರೈಸುತ್ತಿವೆ. ಆ ದಿನ ಖಂಡಿತ ಬರುತ್ತದೆ ಎಂಬ ಸದಾಶಯ ಮೂಡಿತು- ಗಡಿಗೋಡೆಯ ಎರಡೂ ಭಾಗದ ಸೈನಿಕರು ಪಾಳಿ ಬದಲಿಸುವಾಗ ಅಪ್ಪಿಕೊಳ್ಳುವಾಗ; ತಮ್ಮಲ್ಲೇ ಸಿಗರೇಟು ವಿನಿಮಯ ಮಾಡಿಕೊಳ್ಳುವುದನ್ನು ಕಾಣುವಾಗ. ನಾವು ಜೆರುಸಲೆಮಿನಿಂದ ಬಂದ ಬಳಿಕ ಎರಡು ಘಟನೆಗಳು ವರದಿಯಾದವು. ಮೊದಲನೆಯದು- ಜೆರುಸಲೆಮಿನ ಹಿಬ್ರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಭಾರತದ ಸಂಸ್ಕøತ ವಿದ್ವಾಂಸ ಡೇವಿಡ್ ಶುಲ್ಮನ್, ತನಗೆ ಇಸ್ರೇಲ್ ಸರ್ಕಾರ ಕೊಟ್ಟಿರುವ ಅತ್ಯುನ್ನತ ಪ್ರಶಸ್ತಿಯ ಮೊತ್ತವನ್ನೆಲ್ಲ ಹೆಬ್ರೋನ್ ಬೆಟ್ಟಗಳ ಟೆಂಟುಗಳಲ್ಲಿ ಜೀವಿಸುತ್ತಿರುವ ಪ್ಯಾಲೆಸ್ತೈನಿಗಳ ಒಳಿತಿಗಾಗಿ ಕೊಟ್ಟಿದ್ದು.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು!
ಎರಡನೆಯದು- ಅಮೆರಿಕದಲ್ಲಿ ನಿಧನನಾದ ಬಾಕ್ಸಿಂಗ್ ಪಟು ಮಹಮದಾಲಿಯ ಆತ್ಮೀಯ ಗೆಳೆಯ, ಬರ್ಕಲಿ ನಗರದ ಸಿನಗಾಗಿನ ಯಹೂದಿ ನಾಯಕ ಮತ್ತು ಧರ್ಮಗುರು, ಶವಸಂಸ್ಕಾರದ ಸಭೆಯಲ್ಲಿ ಮಾತಾಡುತ್ತ, “ನಿಜವಾದ ಆತ್ಮರಕ್ಷಣೆ ಎಂದರೆ ಎದುರಿಗಿರುವ ದಮನಿತರ ಮೇಲೆ ಆಕ್ರಮಣ ಮಾಡುವುದಲ್ಲ. ಅವರಿಗೆ ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸುವುದು. ಇಸ್ರೇಲ್ ದೇಶದ ಜನರ ಭವಿಷ್ಯವು ಪ್ಯಾಲೆಸ್ತೇನಿಯರ ನೋವನ್ನು ಅರ್ಥಮಾಡಿಕೊಂಡು ಅವರ ಸರ್ಕಾರವನ್ನು ಮಾನ್ಯ ಮಾಡುವುದರಲ್ಲಿದೆ ಎಂದು ಇಸ್ರೇಲ್ ಪ್ರಧಾನಿಗೆ ಈ ಮೂಲಕ ತಿಳಿಸುತ್ತಿದ್ದೇನೆ’’ ಎಂದು ಕರೆಗೊಟ್ಟಿದ್ದು.
ಜೆರುಸಲೆಂ ಗೋಡೆಗಳ ನಗರ ಮಾತ್ರವಲ್ಲ, ಗೋಡೆಗಳನ್ನು ಕೆಡವಿಕೊಂಡು ಬಿಡುಗಡೆಯ ಕನಸನ್ನೂ ಕಾಣುತ್ತಿರುವ ನಗರವೆಂದು ಭಾಸವಾಗುತ್ತದೆ. ಮತ್ತೊಮ್ಮೆ ಜೆರುಸಲೆಮಿಗೆ ಹೋದರೆ, ಈ ಕನಸನ್ನು ಕಾಣುವ ಜನರನ್ನೆಲ್ಲ ಭೇಟಿಯಾಗಬೇಕು ಅನಿಸುತ್ತಿದೆ.
ವಿಡಿಯೋ ನೋಡಿ: ನಮಗೆ ಸೆಂಗೋಲ್ ಬೇಡ ನೇಗಿಲು ಬೇಕು – ಮಾವಳ್ಳಿ ಶಂಕರ್ Janashakthi Media