ಬೆಳಗಾವಿ : ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ವಕ್ಪ್ ವಿವಾದ ಪ್ರಸ್ತಾಪಿಸಿದ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು.
ಸದನದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ನಾಲ್ಕು ದಿನದ ಬಳಿಕ ಪ್ರಜಾಪ್ರಭುತ್ವದಲ್ಲಿ ಅವಕಾಶ ಸಿಕ್ಕಿದೆ. ಈ ವೇದಿಕೆಯಿಂದ ರೈತರ ಕಣ್ಣೆರೆಸುವ ಪ್ರಯತ್ನ ಮಾಡಬೇಕು. ಕಳೆದೆರಡು ಮೂರು ತಿಂಗಳಿಂದ ವಕ್ಪ್ ಬೋರ್ಡ್ ಜನರಿಗೆ, ರೈತರಿಗೆ ಭಯ ಬೀಳಿಸಿದೆ. ಲವ್ ಜಿಹಾದ್ ಆಯ್ತು ಈಗ ಲ್ಯಾಂಡ್ ಜಿಹಾದ್ ನಡೀತಿದೆ. ನಮ್ಮಭೂಮಿ ಎಲ್ಲಿ ವಕ್ಸ್‌ಗೆ ಸೇರಿದೆ ಅಂತ ಭಯ ಶುರುವಾಗಿದೆ. ದಿನಬೆಳಗಾದರೆ ರೈತರು ತಹಶಿಲ್ದಾರ ಕಚೇರಿಗೆ ಹೋಗಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆಂದು ಹೇಳಿದರು.
ರೈತರ ಜಮೀನು, ಶಾಲೆ, ಕಾಲೇಜು, ದೇವಸ್ಥಾನ, ಮಠ ಎಲ್ಲವೂ ವಕ್ಪ್ ಆಸ್ತಿಯಾಗಿವೆ. ಎಲ್ಲರಿಗೂ ವಕ್ಸ್ ನೋಟೀಸ್ ಕೊಡುತ್ತಿದೆ. ರೈತರು ಭೂಮಿ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಮೈಸೂರಿನಲ್ಲಿ ಒಂದು ಕಡೆ ಎಲ್ಲ ಜನರಿಗೂ ವಕ್ಸ್ ನೋಟೀಸ್ ಕೊಟ್ಟಿದ್ದಾರೆ. ನಾವು ಇದ್ದಾಗ ನೋಟಿಸ್ ಕೊಟ್ಟಿಲ್ಲ ಕಾಂಗ್ರೆಸ್ ಬಂದೇಲೆ ನೋಟಿಸ್ ಕೊಟ್ಟಿದೆ.
ಯಾರಿಗೆಲ್ಲಾ ನೋಟಿಸ್ ಕೊಡಲಾಗಿದೆಯೋ ಅವರೆಲ್ಲ. ಪ್ರತಿದಿನ ವಕ್ಪ್ ಕಚೇರಿಗೆ ಬರುತ್ತಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರ ಹೇಳುತ್ತಿದೆ, ಆದರೆ ರೈತರೇಕೆ ಪ್ರತಿದಿನ ವಕ್ಸ್ ಕಚೇರಿಗೆ ಬರಬೇಕು. ಈ ಸರ್ಕಾರದಲ್ಲಿ ಏನೇನೋ ನಡೆಯುತ್ತಿದೆ. ಈ ಸರ್ಕಾರ ಯಾಕೆ ಬಂದಿದೆಯೋ ಎನ್ನುತ್ತಿದ್ದಾರೆ ರಾಜ್ಯದ ಜನರು.
ವಕ್ಪ್ ಮಂಡಳಿ ರಾಜ್ಯದಲ್ಲಿ 1,11,874 ಭೂಮಿ ಹೊಂದಿದೆ ಎಂದು ಘೋಷಿಸಲಾಗಿದೆ, ಈ ಪೈಕಿ 84,000 ಎಕರೆ ಭೂಮಿಯನ್ನು ವಿವಾದಿತ ಭೂಮಿ ಎಂದು ತಿಳಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿರುವ ಪುರಾತನ ಲಕ್ಷ್ಮಿ ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿದ್ದು, ದೇವಾಲಯದ ಭೂಮಿಯನ್ನು ವಕ್ಸ್ ಆಸ್ತಿ ಎಂದು ತಿಳಿಸಲಾಗಿದೆ. ಇದೇ ರೀತಿ ಬೆಂಗಳೂರಿನ ಅವೆನ್ಯೂ ರಸ್ತೆಯ ಸುತ್ತಮುತ್ತಲ ಭೂಮಿಯನ್ನು ವಕ್ಸ್ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಹಾಗೆಯೇ ಶಿರಸಿ ತಾಲೂಕಿನಲ್ಲಿರುವ ಅರಣ್ಯ ಭೂಮಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ಶಿಕ್ಷಣ ಪಡೆದ ಸರ್ಕಾರಿ ಶಾಲೆ ಈಗ ವಕ್ಸ್ ಆಸ್ತಿಯಾಗಿದೆ ಎಂದು
ಹೇಳಿದರು.
ಶಾಸಕ ಬಿ.ವಿಜಯೇಂದ್ರ ಮಾತನಾಡಿ, ಭೂ ದಾಖಲೆಯಲ್ಲಿ ಕಾಲಂ 11ರಲ್ಲಿ ವಕ್ಪ್ ಮಂಡಳಿ ನಮೂದಿಸಿರುವುದರಿಂದ ರೈತರು ಸಾಲ ಪಡೆಯಲು ಅಥವಾ ಆಸ್ತಿ ಮಾರಾಟ ಮಾಡಲು ಸಾಧ್ಯವಿಲ್ಲದಂತಾಗಿದೆ. ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಈ ಸರ್ಕಾರ ಈ ರೀತಿ ಮಾಡುತ್ತಿದೆ, ರೈತರ ಮೇಲಿನ ಈ ಅನ್ಯಾಯವನ್ನು ಸರ್ಕಾರ ನಿಲ್ಲಿಸಬೇಕು ಮತ್ತು 1972 ರಲ್ಲಿ ಜಾರಿಗೆ ತಂದ ವಕ್ಸ್ ಗೆಜೆಟ್ ಅನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಸೇನೆ ಮತ್ತು ಭಾರತೀಯ ರೈಲ್ವೇ ನಂತರ, ರಾಜ್ಯದಲ್ಲಿ ವಕ್ಪ್ ಮಂಡಳಿಯು ಅತಿ ಹೆಚ್ಚು ಆಸ್ತಿಗಳನ್ನು ಹೊಂದಿದಂತಾಗಿದೆ. ಡಿಸಿ ಬಂಗಲೆ, ಎಸ್ಪಿ ಕಚೇರಿ ಮತ್ತು ಇತರ ಹಲವು ಸರ್ಕಾರಿ ಆಸ್ತಿಗಳು ಈಗ ವಕ್ಪ್ ಆಸ್ತಿಯಾಗಿದೆ. ಆಳಂದದಲ್ಲಿರುವ ಪೊಲೀಸ್ ಠಾಣೆ ಮತ್ತು ಪೊಲೀಸ್ ಪ್ರಧಾನ ಕಚೇರಿಗಳು ವಕ್ಸ್ ಆಸ್ತಿಗಳಾಗಿವೆ. ಮೂಲ ಅನುಭವ ಮಂಟಪ ಪೀರಬಾಷಾ ದರ್ಗಾ ಆಯಿತು. ಸರಕಾರ ಕೂಡಲೇ ನೋಟೀಸ್ ಹಿಂಪಡೆದು ಭೂ ದಾಖಲೆಯಿಂದ ವಕ್ಸ್ ತೆಗೆದು ಕೇಂದ್ರ ತರುತ್ತಿರುವ ವಕ್ಸ್ ತಿದ್ದುಪಡಿ ಕಾನೂನನ್ನು ಬೆಂಬಲಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು
ಹೇಳಿದರು.
ಬಿಜೆಪಿ ನಾಯಕರ ಆಗ್ರಹಗಳಿಗೆ ಉತ್ತರಿಸಿದ ಶಾಸಕ ರಿಜ್ವಾನ್ ಮೊಹಮ್ಮದ್ ಅವರು, ಪ್ರತಿಪಕ್ಷಗಳು ಸುಳ್ಳು ಮಾಹಿತಿ ನೀಡಿ ಇಡೀ ರಾಜ್ಯವನ್ನು ದಾರಿ ತಪ್ಪಿಸುತ್ತಿವೆ. ಬಿಜೆಪಿ ಸರ್ಕಾರ ತನ್ನ ಹಿಂದಿನ ಅವಧಿಯಲ್ಲಿ ಅತಿ ಹೆಚ್ಚು ನೋಟಿಸ್‌ಗಳನ್ನು ಜಾರಿ ಮಾಡಿಜದೆ. ಮುಸ್ಲಿಮರ ಶೇ.90 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿತ್ತು.
ಅವರ ನಡೆಯನ್ನು ನಾವು ಸ್ವಾಗತಿಸಿದ್ದೆವು. ಆದರೆ ಕೇಂದ್ರ ಸರ್ಕಾರವು ವಕ್ಸ್ ತಿದ್ದುಪಡಿ ಮಸೂದೆಯನ್ನು ತಂದ ನಂತರ ಬಿಜೆಪಿಯು ಯು-ಟರ್ನ್ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ವಿವಾದದಲ್ಲಿರುವುದು 4,500 ಎಕರೆ ಭೂಮಿ ಮಾತ್ರ. ಬಿಜೆಪಿ ಸಮಸ್ಯೆಯನ್ನು ಬಗೆಹರಿಸುವ ಮತ್ತು ರೈತರಿಗೆ ಸಹಾಯ ಮಾಡುವ ಬದಲು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಬೆಳಗಾವಿ | ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಿ – ಕಬ್ಬು ಬೆಳೆಗಾರರ ಧರಣಿ Janashakthi Media