ಪ್ರಜಾಪ್ರಭುತ್ವದ ಬಗ್ಗೆ ಮತದಾರರು ಎಚ್ಚೆತ್ತುಕೊಳ್ಳಬೇಕು: ಒಡೆದು ಆಳುವ ಒಂದೇ ಪಕ್ಷ ಬರಬೇಕೆನ್ನುವ ನೀತಿಯನ್ನು ಒಕ್ಕೂಟ ವ್ಯವಸ್ಥೆಯಿಂದ ಕಿತ್ತುಹಾಕಬೇಕು: ಸುಧೀಂದ್ರ ಕುಲಕರ್ಣಿ

ಬೆಂಗಳೂರು: ಕೇವಲ ಕಾಂಗ್ರೆಸ್‌ ಮುಕ್ತ ಭಾರತವಷ್ಟೇ ಅಲ್ಲ, ವಿರೋಧಪಕ್ಷ ಮುಕ್ತ ಭಾರತ, ಒಂದೇ ರಾಷ್ಟ್ರಕ್ಕೆ ಒಂದೇ ಪಕ್ಷ , ಒಬ್ಬ ನಾಯಕ ಇವರಿಗೆ ಬೇಕಾಗಿದೆ. ಪ್ರಜಾಪ್ರಭುತ್ವದ ಬಗ್ಗೆ ಮತದಾರರು ಎಚ್ಚೆತ್ತುಕೊಳ್ಳಬೇಕು. ಕೇಂದ್ರದಲ್ಲಿ ಆಳುವ ಪಕ್ಷದ ಹೊರತಾಗಿ ಇತರ ಪಕ್ಷಗಳನ್ನು ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಜೊತೆ ಕೆಲಸ ಮಾಡಿದ ಹಿರಿಯ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಪರೋಕ್ಷವಾಗಿ ಮೋದಿ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿಶ್ವವಿದ್ಯಾಲಯದ ಸಮೂಹ ಮತ್ತು ಸಂವಹನ ವಿಭಾಗದ ವತಿಯಿಂದ ನಡೆದ “ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರು ಎಂಬ ವಿಷಯದ ಮೇಲೆ ನಡೆದ ವಿಚಾರ ಸಂಕಿರಣ ಸಂವಹನ” ಕಾರ್ಯಕ್ರಮವನ್ನುದ್ದೇಶಿಸಿ ಸುಧೀಂದ್ರ ಕುಲಕರ್ಣಿ ಮಾತನಾಡಿದರು.

ನಮ್ಮದು ರಾಜ್ಯಗಳ ಒಕ್ಕೂಟ. ಇಲ್ಲಿ ಸೆಂಟರ್‌ ಎನ್ನುವ ಶಬ್ದ ಸಹ ಸಂವಿಧಾನದಲ್ಲಿ ಇಲ್ಲ. ಸಂವಿಧಾನ ನೀಡಿರುವ ಅಧಿಕಾರಗಳನ್ನು ಕೇಂದ್ರ ಅವುಗಳ ಮೇಲೆ ಆಕ್ರಮಣ ಮಾಡುತ್ತಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿನಬಿಜೆಪಿ ಬೇರೆಯಾಗಿತ್ತು. ಈಗಿನ ಬಿಜೆಪಿ ಬೇರೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ನಿರಂತರ ಸಂವಾದಕ್ಕೆ ವೇದಿಕೆಗಳಿವೆ. ಆದರೆ, ಈ ಹತ್ತು ವರ್ಷಗಳಲ್ಲಿ ಈ ಯಾವುದೇ ವೇದಿಕೆಗಳು ಇರುವುದು ಕಂಡುಬಂದಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ಅವರು ವಿಪಕ್ಷಗಳನ್ನ ಗೌರವಿಸುತ್ತಿದ್ದರು. ವಿರೋಧ ಪಕ್ಷದ ಸಿಎಂಗಳು ಸಹ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಗೌರವಿಸುತ್ತಿದ್ದರು. ಸಂಸತ್ತಿನಲ್ಲಿ ಯಾವುದೇ ಮಹತ್ವದ ವಿಷಯದ ಬಗ್ಗೆ ಚರ್ಚೆಯಾಗದೇಯೇ ಬಿಲ್‌ ಬಜೆಟ್‌ ಪಾಸ್‌ ಆಗುತ್ತದೆ. ಆದರೆ, ಟೀಕೆ, ಟಿಪ್ಪಣಿಗಳಿಗೆ ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ. ಆಳುವ ಪಕ್ಷದ ಸದಸ್ಯರೇ, ಮೋದಿ, ಮೋದಿ ಎಂದು ಕೂಗಾಡಿ ಪ್ರತಿಭಟಿಸಿ ಚರ್ಚೆಯನ್ನು ನಿಲ್ಲಿಸಿಬಿಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

150 ಪಕ್ಷದ ಸಂಸದರನ್ನು ಒಂದೇ ಬಾರಿಗೆ ಸಂಸತ್ತಿನಿಂದ ಬ್ಯಾನ್‌ ಮಾಡಿರುವುದು ಸಂಸತ್ತಿನ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲ ಬಾರಿಗೆ. ಉದಾಹರಣೆಗೆ ಕರ್ನಾಟಕದ ಕೋಲಾರದಲ್ಲಿ ರಾಹುಲ್‌ ಗಾಂಧಿ ಮಾತನಾಡಿದ್ದಕ್ಕೆ ಪಾರ್ಲಿಮೆಂಟ್‌ನಿಂದ ಸದಸ್ಯತ್ವವನ್ನೇ ತೆಗೆದುಹಾಕಿದ್ದಾರೆ. ಆದರೆ ಇದೇ ಸಂಸತ್ತಿನಲ್ಲಿ ಇನ್ನೊಬ್ಬ ಸಂಸದ ಮುಸ್ಲಿಂ ಸಂಸದರನ್ನೊಬ್ಬರನ್ನು ಉಗ್ರಗಾಮಿ ಎಂದು ಕರೆದಿದ್ದರೂ ಯಾವುದೇ ಶಿಕ್ಷೆ ಕ್ರಮಕೈಗೊಳ್ಳಲಿಲ್ಲ. ಹೊಸ ಲೋಕಸಭೆ ಬರಲಿದೆ. 400 ಅನ್ನು ದಾಟುವ ಪರಿಸ್ಥಿತಿ ಬಂದರೆ, ಸಂಸತ್ತು ಉಳಿಯದು. ವಿರೋಧಿ ಪಕ್ಷಗಳನ್ನುಹತ್ತಿಕ್ಕುವ ಪ್ರವೃತ್ತಿ ಈ ಹತ್ತುವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಗಾಣಿಗ ಸಮುದಾಯ ಬೆಂಬಲ

ಅವರಿಗೆ ಸಿಬಿಐ, ಈಡಿ, ಸೇರಿದಂತೆ ಸ್ವಾಯತ್ತತೆ ಸಂಸ್ಥೆಗಳನ್ನು ದಿನನಿತ್ಯ ಇಷ್ಟೊಂದುಮಟ್ಟದಲ್ಲಿರಲಿಲ್ಲ. ಇತ್ತೀಚಿಗೆ ಮೋದಿ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಂದರ್ಶಕಾರರು ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಚುನಾವಣೆ ಬರುವುದು ಸಹಜ ಪ್ರಕ್ರಿಯೆ. ನಮ್ಮ ಗೆಲುವು ನಿಶ್ಚಯ ಎಂದಿರುವುದು ನೋಡಿದರೆ ಹಾಗೂ ಯಾರಿಗೆ ಮತ ಹಾಕಿದ್ದರೂ, ಒಬ್ಬರಿಗೆ ಮತ ಹೋಗುತ್ತದೆ ಎಂಬ ಇವಿಎಂ ಕುರಿತ ಜನರ ಅಭಿಪ್ರಾಯವನ್ನು ಗಮನಿಸಿದರೆ, ಚುನಾವಣೆಯ ಫಲಿತಾಂಶವನ್ನು ಈಗಾಗಲೇ ಬಿಜೆಪಿ ನಿರ್ಧರಿಸಿದಂತೆ ಮಾತನಾಡಿದ್ದಾರೆ. ಗಮನಾರ್ಹ ವಿಷಯವೇನೆಂದರೆ, ಚುನಾವಣಾ ಆಯೋಗದ ಮೂರು ಜನರನ್ನು ಕೇಂದ್ರವೇ ಆರಿಸುತ್ತಿದೆ. ಈಗ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ಹೊರಗಿಟ್ಟು ಕೇಂದ್ರ ಸರ್ಕಾರ ಇವರನ್ನು ನೇಮಿಸಿರುವುದು ಇಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.

ಇತ್ತೀಚೆಗೆ ಜಾರ್ಖಂಡ್‌ ಮತ್ತು ದೆಹಲಿಯ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಲಾಗಿದೆ. ಯಾವುದೋ ಕೋರ್ಟ್‌ನಲ್ಲಿ ನಿರ್ಧರಿಸಿ ಅವರನ್ನು ಜೈಲಿಗೆ ಹಾಕಲಿಲ್ಲ. ಜನರೇ ಆರಿಸಿಕಳಿಸಿದ ಈ ಮುಖ್ಯಮಂತ್ರಿಗಳನ್ನು ಒಬ್ಬ ವ್ಯಕ್ತಿ ಜೈಲಿಗೆ ಹಾಕಿರುವುದು ಈ ದೇಶದ ಸಂವಿಧಾನ ಪ್ರಜಾಪ್ರಭುತ್ವದ ವಿಪರ್ಯಾಸ. ಪ್ರಜಾಪ್ರಭುತ್ವದ ಬಗ್ಗೆ ಜನರು ಎಚ್ಚೆತ್ತುಕೊಂಡು ಮತಹಾಕಬೇಕಾಗಿರುವ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.ವಿರೋಧಿ ಪಕ್ಷಗಳನ್ನು ಹತ್ತಿಕ್ಕಲು ಅವರನ್ನುಒಡೆದು ತಮ್ಮ ಪಕ್ಷವನ್ನು ತರುವ ಒಡೆದು ಆಳುವ ಇಂತಹ ನೀತಿ ಹಿಂದೆಂದೂಇರಲಿಲ್ಲ. ಹಣ ಮತ್ತು ಹೆದರಿಕೆಯಿಂದ ಅಸ್ಸಾಂ ಸರ್ಕಾರವನ್ನು ಉರುಳಿಸಿ ಪ್ರಮುಖ ಪಕ್ಷ, ಇನ್ನೊಂದುಪಕ್ಷವನ್ನು ಒಡೆದರು ಎಂದು ಸುಧೀಂದ್ರ ಕುಲಕರ್ಣಿ ಕರೆ ನೀಡಿದರು.

ಹಿರಿಯ ಪತ್ರಕರ್ತ ಅನಂತ್‌ ಚಿನಿವಾರ್‌ ಆಶಯ ನುಡಿಗಳನ್ನಾಡಿ, ಮಾಧ್ಯಮದ ಪರಿಸ್ಥಿತಿ ನಮ್ಮ ಮೇಲೆ ನಾವೇ ಪಾಶುಪತಾಸ್ತ್ರ ಬಿಟ್ಟುಕೊಳ್ಳುವ ಸನ್ನಿವೇಶ ಇದಾಗಿದೆ. ಇಬ್ಬಂದಿತನವನ್ನು ಹೊಸ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಮಾಡಬೇಕಾದ ಮತ್ತು ಮಾಡಬೇಕಾಗುವ ಸುದ್ದಿಯ ನಡುವೆ ಪತ್ರಕರ್ತರು ಇಂತಹ ಇಬ್ಬಂದಿತನವನ್ನು ಅನುಭವಿಸುತ್ತಿದ್ದಾರೆ. ಪತ್ರಿಕೋದ್ಯಮದ ನಡುವೆ ಬದಕು ಅನಿವಾರ್ಯವಾದಾಗ ಸಿಕ್ಕ ಅವಕಾಶದಲ್ಲಿಯೇ ಏನಾರ ಮಾಡಬೇಕೆಂಬ ಪರಿಸ್ಥಿತಿ ಧೃವೀಕೃತ ಸಮಾದಲ್ಲಿ ದುಡಿಯುವಂತಾಗಿದೆ. ಒತ್ತಡಗಳ ನಡುವೆ ಸಿಕ್ಕು ಯಾವುದೋ ಧೃವದತ್ತ ಸಾಗಬೇಕಾದ ಸಂಧಿಗ್ಧತೆ ಈಗಿನ ಹೊಸ ಪತ್ರಕರ್ತರಿಗೆ ಎದುರಾಗಿರುವುದು ವಿಪರ್ಯಾಸ.ಜಾತಿ ಲೆಕ್ಕಾಚಾರ, ಬಂಡಾಯ, ಹಣ ಸಭ್ಯತೆ, ಸೌಜನ್ಯಗಳನ್ನು ಮೀರಿದ ಹೇಳಿಕೆಗಳನ್ನು ವರದಿ ಮಾಡುವ ಸಂದರ್ಭ ಬಂದರೂ, ಅದು ಇಂತಹ ಹೇಳಿಕೆ ನೀಡುವವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದರು.

ಜಾತಿ ಮತ್ತು ಧರ್ಮ ಚುನಾವಣೆಯ ಎರಡು ಅಸ್ತ್ರಗಳಾಗುತ್ತಿದೆಯಾ ಎನ್ನುವಂತೆ ಪತ್ರಕರ್ತರು ಬರೆಯುವ ಸ್ಥಿತಿ ಬಂದಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಜಾತಿಯ ಲೆಕ್ಕಾಚಾರ ಸಮಸಮಾಜದ ವ್ಯವಸ್ಥೆಯ ರೂಪಕ್ಕೆ ಬೇಕಾಗಬಹುದು. ಜಾತಿಗಣತಿ ಆಗಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ನಿಜವಾಗಿಯೂ ಅವಕಾಶ ವಂಚಿತ ಸಮಾಜ ಯಾವುದೆನ್ನುವುದು ತಿಳಿಯುತ್ತದೆ. ರಾಜಕಾರಣಿಗಳಿಂದ ಮಾಧ್ಯಮಗಳು ಮಾಡುತ್ತಿವೆಯೋ, ಅಥವಾ ಮಾಧ್ಯಮಗಳಿಂದ ರಾಜಕಾರಣಿಗಳು ಮಾಡುತ್ತಿದ್ದಾರೆಯೋ ಎನ್ನುವಂತಹ ಸ್ಥಿತಿ ಇದಾಗಿದೆ. ಯಾವುದೋ ಸಮುದಾಯದ ಪಾತ್ರಗಳು ನಿರ್ಣಾಯಕ ಎನ್ನುವಂತೆ ಸಂದರ್ಭವನ್ನು ಈ ಎರಡೂ ಮಾಡುತ್ತವೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದವನು ಯಾವುದೋ ಒಂದು ಸಮಾಜಕ್ಕಷ್ಟೇ ನಾಯಕನಾಗುವುದಿಲ್ಲ. ಜಾತಿ ಕಾರಣಕ್ಕಾಗಿ ಜಾತಿಯ ಓಲೈಕೆ ಮಾಡುವುದು, ಬಹಿರಂಗ ಸಂಘರ್ಷ ಎದುರಾಗಿರುವುದನ್ನುಈಗಿನ ರಾಜಕಾರಣ ನೋಡುತ್ತಿದೆ. ನಾಯಕತ್ವ ರೂಪುಗಳು ಅವರವರ ನಿಲುವು ಮತ್ತು ಹೋರಾಟಗಳಿಂದಾಗಿರುತ್ತದೆ. ಆದರೆ ಅವರು ಆ ಸಮುದಾಯದ ನಾಯಕನಷ್ಟೇ ಆಗಲು ಸಾಧ್ಯವಿಲ್ಲ. ಹಣಬಲ, ತೋಳ್ಬಲ ಅನ್ನು ಟಾಕಲ್‌ ಮಾಡಬಹುದು. ಇದನ್ನು ಹೇಗೆ ಟ್ರೀಟ್‌ ಮಾಡಬೇಕು ಎನ್ನುವುದಿಲ್ಲಿ ಗಮನಾರ್ಹ. ಚುನಾವಣೆ ವ್ಯಕ್ತಿಕೇಂದ್ರವಾಗುತ್ತಿದೆ. ಪಕ್ಷದ ಪ್ರಣಾಳಿಕೆಯಲ್ಲಿ ವ್ಯಕ್ತಿಯ ಹೆಸರು ಹೋಗಿರುವುದು ಉದಾಹರಣೆ ಮೋದಿ ಪ್ರಣಾಳಿಕೆ ಎಂಬುದನ್ನು ಅವರು ಉಲ್ಲೇಖಿಸಿ ಹೇಳಿದರು.

ಗೋದಿ ಮೀಡಿಯಾ, ಗುಲಾಮಿ ಮೀಡಿಯಾ ಎನ್ನುವುದು ಸರಿಯಲ್ಲ. ಪತ್ರಕರ್ತರ ಅನಿವಾರ್ಯತೆ ಅರ್ಥವಾಗುತ್ತಿದ್ದರೂ, ಅಂತಹ ಅನಿವಾರ್ಯತೆಯಿಂದ ಹೇಗೆ ಹೊರಬರಬೇಕು ಎಂಬುದನ್ನು ತಿಳಿಯಬೇಕು. ಪತ್ರಕರ್ತ ಪಕ್ಷಪಾತಿ ಆಗಬಾರದು. ಪಕ್ಷಪಾತಿಗಳು ಮಾಧ್ಯಮಗಳನ್ನು ಆಳುತ್ತಿವೆಯಾ? ಎಂಬ ಪ್ರ‍ಶ್ನೆ ಎದುರಾಗಿದೆ. ಜನಪರವಾದ ಚುನಾವಣೆ ಆಗಬೇಕು ಚಿಂತನೆ ಚರ್ಚೆ ಹುಟ್ಟುಹಾಕಬೇಕಾದ ಪ್ರಶ್ನೆಗಳು ಎದುರಾಗಿವೆ ಎಂದರು. ಮಾಧ್ಯಮ ಸಂಕ್ರಮಣದ ಕಾಲದಲ್ಲಿದೆ. ಇಂತಹ ಸ್ಥಿತಿಯಲ್ಲಿ ಮಾಧ್ಯಮಗಳ ಪಾತ್ರ ಏನಾಗಬೇಕು? ಎಂಬ ಸೂಕ್ಷ್ಮತೆ ಇರುತ್ತದೆ. ಈ ಸೂಕ್ಷ್ಮತೆಗಳು ಕಂದಕಗಳನ್ನು ಹೆಚ್ಚು ಮಾಡುತ್ತದೆ. ಅಸಹ್ಯ ಎನಿಸುವಷ್ಟು ಆಸ್ತಿ, ದುಡ್ಡು ರೇಜಿಗೆ ಬರಬೇಕು. ಆದರೆ, ರಾಜಕಾರಣಿಯ ಆಸ್ತಿ ಐದು ವರ್ಷಗಳಲ್ಲಿ ಐವತ್ತು ಪಟ್ಟು ಹೆಚ್ಚಾಗುವುದು ಹೇಗೆ? ಹೇಗೆ ಸಾಧ್ಯವಿದೆ? ಎಂಬುದನ್ನು ಮಾಧ್ಯಮ ಅವಲೋಕಿಸಬೇಕು ಎಂದು ಅನಂತ್‌ ಚಿನಿವಾರ್‌ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ್‌ ಮಾತನಾಡಿ, , ಪತ್ರಕರ್ತರುಈ ಲೋಕಸಭಾ ಚುನಾವಣೆಯಲ್ಲಿ ಏನನ್ನು ಎಚ್ಚರಿಕೆ ವಹಿಸಬೇಕು, ಮುಂದೆ ಪತ್ರಕರ್ತರ ಸ್ಥಿತಿ ಏನಾಗಲಿದೆ ಎಂಬುದರ ಕುರಿತ ವಿಶೇಷವಾದ ಪತ್ರಕರ್ತರ ಹಿದ ಕುರಿತ ಸಂವಾದ ಇದಾಗಿದೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತುಪತ್ರಿಕೋದ್ಯಮದ ವಿಭಾಗದ ಪ್ರೊ. ಎ. ನರಸಿಂಹಮೂರ್ತಿ, ಹಿರಿಯ ಪತ್ರಕರ್ತ ಡಿ. ಉಮಾಪತಿ, ಸಂಘದ ‍ಕಾರ್ಯದರ್ಶಿ ಲೋಕೇಶ್‌ , ಶಂಭುಲಿಂಗ, ಲಿಂಗರಾಜ ಗಾಂಧಿ ಸೇರಿದಂತೆ ಮತ್ತಿತ್ತರರು ಇದ್ದರು.

ಇದನ್ನೂ ನೋಡಿ:ಕೋಮುವಾದಿಗಳನ್ನು ಸೋಲಿಸುವುದು ಜಾಗೃತ ನಾಗರಿಕರ ಜವಾಬ್ದಾರಿ – ಬಂಜಗೆರೆ ಜಯಪ್ರಕಾಶ್ Janashakthi Media

Donate Janashakthi Media

Leave a Reply

Your email address will not be published. Required fields are marked *