ಮತದಾರರ ಋಣವೂ ಸರ್ಕಾರಗಳ ನೈತಿಕತೆಯೂ

-ನಾ ದಿವಾಕರ

ಕಲ್ಯಾಣ ಆರ್ಥಿಕತೆಯ ಫಲಾನುಭವಿಗಳು ಅಧಿಕಾರ ರಾಜಕಾರಣದ ವಾರಸುದಾರರು,ಅಧೀನರಲ್ಲ
2024ರ ಚುನಾವಣೆಗಳ ಉದ್ದಕ್ಕೂ ಗುರುತಿಸಬಹುದಾದ ಒಂದು ಕೊರತೆ ಎಂದರೆ ದೇಶದ ಬಹುಸಂಖ್ಯಾತರ ಜನತೆಯನ್ನು ನಿತ್ಯ ಕಾಡುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳ ದುಷ್ಪರಿಣಾಮಗಳ ಬಗ್ಗೆ ಮೇಲ್ನೋಟಕ್ಕೂ ಚರ್ಚೆಯಾಗದಿರುವುದು. ಹಸಿವು, ಬಡತನ, ನಿರುದ್ಯೋಗ ಮತ್ತು ನಿರ್ವಸತಿಕತೆಯು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿ ಸೃಷ್ಟಿಸುವ ಒಳಬಿರುಕುಗಳನ್ನು ಆಸಕ್ತಿಯಿಂದ ಗಮನಿಸಿ ಸ್ಪಂದಿಸುವ ವ್ಯವಧಾನವನ್ನು, ಮನುಜ ಸೂಕ್ಷ್ಮತೆಯನ್ನು ನಮ್ಮ ಚುನಾಯಿತ-ಪರಾಜಿತ ರಾಜಕಾರಣಿಗಳು ಕಳೆದುಕೊಂಡಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಫಲಿತಾಂಶಗಳು ದೇಶದ ಆಡಳಿತ ನಿರ್ವಹಣೆಯನ್ನು ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ ಒಪ್ಪಿಸುವ ವಿಧಾನ ಎಂಬ ಸರಳ ಸತ್ಯವನ್ನೂ ಮನಗಾಣದ ರಾಜಕೀಯ ಪಕ್ಷಗಳು ಅಧಿಕಾರ ಪೀಠಗಳ ಮೇಲೆ ತಮ್ಮ ವಾರಸುದಾರಿಕೆಯನ್ನು ಪ್ರತಿಪಾದಿಸುವುದು ವರ್ತಮಾನ ಭಾರತದ ದುರಂತ.

ಇದನ್ನೂ ಓದಿ: ಬ್ಯಾಂಕ್‌ ಸೇಫ್‌ ಡಿಪಾಸಿಟ್‌ ಲಾಕರ್‌ನಲ್ಲಿದ್ದ ಚಿನ್ನಾಭರಣ ನಾಪತ್ತೆ

ಆದರೆ ಈ ಅಧಿಕಾರ ಕೇಂದ್ರಗಳ ನೈಜ ವಾರಸುದಾರರು ನಾವೇ ಎನ್ನುವುದನ್ನು ಭಾರತದ ಸಾರ್ವಭೌಮ ಮತದಾರರು ಮತ್ತೊಮ್ಮೆ ಸಾಬೀತು ಪಡಿಸಿರುವುದು 2024ರ ಚುನಾವಣೆಗಳ ಬಹುಮುಖ್ಯವಾದ ಸಂದೇಶ. ದೇಶದ ಕಟ್ಟಕಡೆಯ ಶ್ರಮಿಕನಿಂದ, ನಿರ್ಗತಿಕರಿಂದಲೂ ಸಹ, ಸಂಗ್ರಹಿಸಲಾಗುವ ತೆರಿಗೆ ಹಾಗೂ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಉತ್ಪಾದಿಸಲಾಗುವ ಸರಕು-ವಸ್ತು-ಉತ್ಪನ್ನಗಳಿಗಾಗಿ ಜೀವನಪರ್ಯಂತ ಶ್ರಮಿಕ ವರ್ಗವು ನೀಡುವ ಶ್ರಮಶಕ್ತಿಯ ಫಲ, ಇವೆರಡೂ ಆಳುವ ಸರ್ಕಾರಗಳು ನಿರ್ವಹಿಸುವ ಹಣಕಾಸು ಬೊಕ್ಕಸದ ಮೂಲ ಧಾತುಗಳು. ಈ ಬೆವರಿನ ಫಸಲಿನಿಂದಲೇ ಸರ್ಕಾರಗಳು ಸಮಾಜವನ್ನು ನಿರ್ವಹಿಸುತ್ತವೆ, ಜನತೆಗೆ ಸೌಲಭ್ಯ, ಸವಲತ್ತು, ಸೌಕರ್ಯಗಳನ್ನು ಒದಗಿಸುತ್ತವೆ, ಶ್ರೀಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುತ್ತವೆ. ಈ ಶ್ರಮಶಕ್ತಿಯ ಫಸಲು ಮತ್ತು ತೆರಿಗೆಯ ಹಣ ಒಂದೆಡೆ ಕೆಲವೇ ಬಂಡವಾಳಿಗರ ಸಾಮ್ರಾಜ್ಯ ವಿಸ್ತರಣೆಗಾಗಿ ಬಳಕೆಯಾಗುತ್ತಿದ್ದರೆ , ಇದರ ಒಂದು ಸಣ್ಣ ಭಾಗವನ್ನು ಜನತೆಯ ಏಳಿಗೆಗಾಗಿ ಬಳಸಲಾಗುತ್ತದೆ.

ಬಂಡವಾಳದ ಯಜಮಾನಿಕೆ

ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಢಾಳಾಗಿ ಕಾಣಬಹುದಾದ ಈ “ ಜನಕಲ್ಯಾಣ ಆರ್ಥಿಕತೆ ” ಸ್ವತಂತ್ರ ಭಾರತದ 77 ವರ್ಷಗಳನ್ನೂ ಆವರಿಸಿರುವುದು ಕಣ್ಣೆದುರಿನ ಸತ್ಯ. ಸಮಾಜವಾದದ ಉನ್ನತ ಆದರ್ಶಗಳನ್ನು ಪಾಲಿಸದೆ ಹೋದರೂ, ಭಾರತದ ಆಳುವ ವರ್ಗಗಳು ಈ ಅವಧಿಯಲ್ಲಿ ʼ ಸಮ ಸಮಾಜ ʼ ಎಂಬ ಕಾಲ್ಪನಿಕ ದೇಶವನ್ನು ಕಟ್ಟಲು ಪ್ರಯತ್ನಿಸುತ್ತಲೇ ಬಂದಿವೆ. ಸಮಾನತೆ ಎಂಬ ಸಾಪೇಕ್ಷ ಪದವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸಿ-ಕುಗ್ಗಿಸಿ-ಸಂಕುಚಿತಗೊಳಿಸಿ ಬಳಸುತ್ತಿರುವ ಭಾರತದ ಅಧಿಕಾರ ರಾಜಕಾರಣವು, ವಿವಿಧ ಸ್ತರಗಳಲ್ಲಿರುವ ವರ್ಗಗಳ ನಡುವೆ ಇರುವ ಸಮಾನತೆಗೂ, ವರ್ಗಗಳ ಒಳಗೆ ಇರಬಹುದಾದ ಸಮಾನತೆಗೂ ಇರುವ ಅಂತರವನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚುತ್ತಾ ಬಂದಿದೆ. ಭಾರತದ ಜಾತಿ ವ್ಯವಸ್ಥೆಯಲ್ಲಿ ಇದು ಸುಲಭಸಾಧ್ಯವೂ ಅಗುತ್ತದೆ. ಹಾಗಾಗಿಯೇ ವರ್ಗಗಳೊಳಗಿನ ಅಸಮಾನತೆಯನ್ನೇ ಪ್ರಧಾನವಾಗಿ ಬಿಂಬಿಸುವ ಮೂಲಕ ದೇಶದ ರಾಜಕೀಯ ವ್ಯವಸ್ಥೆಯು ವರ್ಗಗಳ ನಡುವೆ, ಅಂದರೆ ಬಡವ-ಶ್ರೀಮಂತರ ನಡುವೆ ಇರುವ ಅಸಾಮಾನ್ಯ ಅಂತರವನ್ನು ಮರೆಮಾಚುತ್ತಾ ಬಂದಿದೆ.

ಈ ಕಂದರದಲ್ಲಿ ಸೃಷ್ಟಿಯಾಗುತ್ತಲೇ ಇರುವ ಅಸಮಾನತೆಗಳನ್ನು ಹೋಗಲಾಡಿಸುವ ಸಲುವಾಗಿ ಆಯಾ ಕಾಲದ ಸರ್ಕಾರಗಳು ಜನಕಲ್ಯಾಣ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿರುತ್ತವೆ. 1970ರ ದಶಕದ ಗರೀಬಿ ಹಠಾವೋ ಯೋಜನೆಯಿಂದ 2020ರ ದಶಕದ ಗ್ಯಾರಂಟಿ ಯೋಜನೆಗಳವರೆಗೆ ಈ ಆರ್ಥಿಕತೆಯೇ ಚುನಾಯಿತ ಸರ್ಕಾರಗಳ ಜನಪ್ರಿಯತೆ ಮತ್ತು ಜನಬದ್ಧತೆಯನ್ನು ನಿರ್ಧರಿಸುವ ಮಾನದಂಡಗಳಾಗಿ ಪರಿಣಮಿಸಿರುವುದನ್ನೂ ಗಮನಿಸಬಹುದು. ಈ ಆರ್ಥಿಕ ನೀತಿಗಳ ಮೂಲಕ ತಮ್ಮ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸಿಕೊಂಡು ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗುವ ಶ್ರಮಿಕ ವರ್ಗಗಳನ್ನು “ಫಲಾನುಭವಿ-ಲಾಭಾರ್ಥಿ ” ಎಂಬ ಪದಗಳಿಂದ ನಿರ್ವಚಿಸಿದರೆ, ಸರ್ಕಾರಗಳು ಒದಗಿಸುವ ಸವಲತ್ತುಗಳನ್ನು ರೇವ್ಡಿ-ಉಚಿತ-ಗ್ಯಾರಂಟಿ ಮುಂತಾದ ಪದಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ.
ಈ ಎರಡೂ ಪದಗಳನ್ನು ಒಳಹೊಕ್ಕು ನೋಡಿದಾಗ ಮತ್ತೊಬ್ಬರು ನೀಡುವ ಸವಲತ್ತಿನ ಫಲ-ಅನುಭವಿಸುವವರು ಅಥವಾ ಲಾಭವನ್ನು ಬೇಡುವವರು ಎಂದಾಗುತ್ತದೆ. ಅರ್ಥಾತ್ ಈ ಅನುಕೂಲತೆಗಳನ್ನು ಪಡೆಯುವ ಸಾರ್ವಭೌಮ ಜನತೆಯನ್ನು “ನೆರವಿಗಾಗಿ ಕೈಚಾಚಿ ನಿಂತಿರುವ ಅಸಹಾಯಕರು ” ಎಂದು ವ್ಯಾಖ್ಯಾನಿಸಲಾಗುವುದೇ ಹೊರತು, ದೇಶದ ಸಂಪತ್ತಿನ ಮೂಲ ವಾರಸುದಾರರು ಎಂದು ಪರಿಗಣಿಸಲಾಗುವುದಿಲ್ಲ.

ಭಾರತದ ಸಾಮಾಜಿಕ ಪರಿಸರ ಹಾಗೂ ಆರ್ಥಿಕ ನೆಲೆಗಳ ನಡುವೆ ನಿಂತು ನೊಡಿದಾಗ , ಚುನಾಯಿತ ಸರ್ಕಾರಗಳಿಂದ ಹಲವು ಪ್ರಯೋಜನಗಳನ್ನು ಪಡೆಯುವ ತಳಸಮಾಜದ ಅವಕಾಶವಂಚಿತರು ಪಡೆಯುವುದು ತಮ್ಮ ದುಡಿಮೆಯಿಂದ ಸೃಷ್ಟಿಯಾದ ಸಂಪತ್ತಿನ ಒಂದು ಭಾಗವಷ್ಟೇ. ಈ ಸಂಪತ್ತಿನ ಸಮಾನ ಹಂಚಿಕೆ ಅಥವಾ ವಿತರಣೆಯ ಬಗ್ಗೆ ಒಂದು ರಾಜಕೀಯ ದನಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎತ್ತಿದ್ದಾರೆ. ಈ ಒಂದು ಆಗ್ರಹವೇ ದೇಶದ ಅಧಿಕಾರ ಕೇಂದ್ರಗಳನ್ನು ಹೇಗೆ ಅಲುಗಾಡಿಸಿತು ಎನ್ನುವುದನ್ನು ನೋಡಿದ್ದೇವೆ.

ಚುನಾವಣೆಯ ಫಲಾನುಭವಿಗಳು

2024ರ ಲೋಕಸಭಾ ಚುನಾವಣೆಗಳಲ್ಲಿ ಈ ಫಲಾನುಭವಿ ಜನತೆಯ ತೀರ್ಪನ್ನು “ ಋಣ-ಋಣಿ-ಋಣ ಸಂದಾಯ” ಮುಂತಾದ ತತ್ವೃರಹಿತ-ಸತ್ವಹೀನ ಪದಗಳ ಮೂಲಕ ವ್ಯಾಖ್ಯಾನಿಸಲಾಗುತ್ತಿರುವುದನ್ನು ಈ ದೃಷ್ಟಿಯಿಂದ ವ್ಯಾಖ್ಯಾನಿಸಬೇಕಿದೆ. ಸಮಾನತೆ ಮತ್ತು ಸಮಾಜದ ಕನಸು ಹೊತ್ತ ಸಂವಿಧಾನದ ಅಡಿಯಲ್ಲೇ ಆಳ್ವಿಕೆ ನಡೆಸಿರುರುವ ಭಾರತದ ರಾಜಕೀಯ ವ್ಯವಸ್ಥೆಯ ವಾರಸುದಾರರು 77 ವರ್ಷಗಳ ಸ್ವತಂತ್ರ-ಸ್ವಾವಲಂಬಿ ಆಳ್ವಿಕೆಯ ನಂತರವೂ ತಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಗೆ ಪ್ರತಿಯಾಗಿ ಸಾರ್ವಭೌಮ ಪ್ರಜೆಗಳು ಋಣಸಂದಾಯ ಮಾಡಬೇಕು ಎಂದು ಬಯಸುತ್ತಿರುವುದು ಪ್ರಜಸತ್ತೆಯ ಚೋದ್ಯವೂ ಹೌದು, ಇತಿಹಾಸದ ದುರಂತವೂ ಹೌದು. ಪ್ರಾಚೀನ ಊಳಿಗಮಾನ್ಯ ಸಮಾಜದ ಯಜಮಾನಿಕೆ ಸಂಸ್ಕೃತಿಯಲ್ಲಿ ಹುಟ್ಟಿಕೊಂಡ ಈ ಪದಗಳು ಪ್ರಜಾಪ್ರಭುತ್ವದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಲ್ಲವೇ ? ಆದರೆ ಸಂವಿಧಾನದ ಅಡಿಯಲ್ಲೇ ಪ್ರಜಾಪ್ರಭುತ್ವದ ನೆಲೆಗಳನ್ನು ಬಳಸಿಕೊಂಡು ತಮ್ಮದೇ ಆದ ಜಾತಿ ಕೇಂದ್ರಿತ-ಮಾರುಕಟ್ಟೆ ಕೇಂದ್ರಿತ ಗಣರಾಜ್ಯಗಳನ್ನು ಸ್ಥಾಪಿಸಿಕೊಂಡಿರುವ ಬಂಡವಾಳಿಗ ರಾಜಕಾರಣಿಗಳಿಗೆ ಇಂದಿಗೂ ಶ್ರೀಸಾಮಾನ್ಯರು ʼಋಣಿ ʼ ಗಳಾಗಿಯೇ ಕಾಣುತ್ತಾರೆ.

ತನ್ನ ಹಿಂದುತ್ವ-ಸಾಂಸ್ಕೃತಿಕ ರಾಜಕಾರಣವನ್ನು ಯಶಸ್ವಿಯಾಗಿ ಬಳಸಿಕೊಂಡು ಮೂರನೆ ಅವಧಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ಈಗ ಅಯೋಧ್ಯೆಯ ರಾಮನನ್ನೂ ಋಣಿ ಎಂದೇ ಪರಿಗಣಿಸುತ್ತಿದೆ. “ಬಾಲ ರಾಮನನ್ನು ಕರೆತಂದವರನ್ನು ಅಧಿಕಾರಕ್ಕೆ ಮರಳಿ ತರುತ್ತೇವೆ ” ಎಂಬ ಘೋಷಣೆಯಡಿ ಚುನಾವಣೆಗಳನ್ನು ಎದುರಿಸಿದ ಬಿಜೆಪಿ ಅಯೋಧ್ಯೆಯಲ್ಲೇ ಸೋತಿರುವುದು, ಉತ್ತರಪ್ರದೇಶದಲ್ಲಿ ಹೀನಾಯ ಹಿನ್ನಡೆ ಅನುಭವಿಸಿರುವುದು ಪಕ್ಷದ ನಾಯಕರಲ್ಲಿ, ಕಾರ್ಯಕರ್ತರಲ್ಲಿ ಸಹಜವಾಗಿಯೇ ಹತಾಶೆ ಆಕ್ರೋಶ ಮೂಡಿಸಿದೆ. ಈ ಆಕ್ರೋಶಕ್ಕೆ ಸ್ವತಃ ರಾಮನೇ ತುತ್ತಾಗುತ್ತಿರುವುದು ಸಾಮಾಜಿಕ ತಾಣಗಳಲ್ಲಿ ಕಂಡುಬರುತ್ತಿದೆ. ಗ್ಯಾರಂಟಿ ಫಲಾನುಭವಿಗಳು ನಮ್ಮ ಕೈಹಿಡಿಯಲಿಲ್ಲ ಎಂಬ ರೋದನೆಗೂ, ರಾಮ ನಮ್ಮ ನೆರವಿಗೆ ಬರಲಿಲ್ಲ ಎಂಬ ಅಳಲಿಗೂ ವ್ಯತ್ಯಾಸವೇನೂ ಇಲ್ಲ. ಎರಡೂ ಸಂದರ್ಭಗಳಲ್ಲಿ ಅಧಿಕಾರ ರಾಜಕಾರಣದ ಆಕಾಂಕ್ಷಿಗಳಿಗೆ ಮತದಾರರು/ದೇವರು ಸದಾ ಋಣಿಗಳಾಗಿಯೇ ಕಾಣುತ್ತಾರೆ.

ಗ್ಯಾರಂಟಿ ಯೋಜನೆಗಳೇ ನಮಗೆ 20ಕ್ಕೂ ಹೆಚ್ಚು ಸ್ಥಾನಗಳನ್ನು ನೀಡುತ್ತವೆ ಎಂಬ ಅತಿಯಾದ ವಿಶ್ವಾಸ ಹೊಂದಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕರು ಈಗ ʼ ಋಣಸಂದಾಯʼ ಮಾಡದ ಮತದಾರರಿಗೆ ಪಾಠ ಕಲಿಸುವ ಮಾತುಗಳನ್ನಾಡುತ್ತಿರುವುದು ಅಧಿಕಾರ ರಾಜಕಾರಣದ ಧೂರ್ತ ಚಹರೆಯನ್ನು ಪರಿಚಯಿಸುವಂತಿದೆ. ಮೈಸೂರು-ಕೊಡಗು ಕ್ಷೇತ್ರದ ಪರಾಜಿತ ಅಭ್ಯರ್ಥಿಯನ್ನೂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಯನ್ನೇ ರದ್ದುಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಮತದಾರರನ್ನು ಪ್ರಭಾವಿಸಿದ್ದು ಹೌದು. ಆದರೆ ಈ ಔದಾರ್ಯ ಅಥವಾ ಸಹಾನುಭೂತಿ ರಾಜಕೀಯ ಅನಿವಾರ್ಯತೆಯಾಗಿತ್ತೇ ಹೊರತು, ಜನಸಾಮಾನ್ಯರ ಆಗ್ರಹವೇನೂ ಆಗಿರಲಿಲ್ಲ. ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯು ಪೂರೈಸಲಾಗದ ಜನತೆಯ ಅಗತ್ಯತೆಗಳಿಗೆ ಪರ್ಯಾಯವಾಗಿ ಒದಗಿಸಲಾಗುವ ಈ ಸವಲತ್ತುಗಳ ಹಿಂದೆ ರಾಜಕೀಯ ಲಾಭದ ದುರಾಸೆ ಇರುವುದು ಅಧಿಕಾರ ರಾಜಕಾರಣದ ಪೀಠವ್ಯಸನದ ಸಂಕೇತವಾಗಿ ಕಾಣುತ್ತದೆ.

ನವ ಉದಾರವಾದದ ಆಳ್ವಿಕೆಯಲ್ಲಿ

ನವ ಭಾರತ ಅನುಸರಿಸುತ್ತಿರುವ, ಮುಂದಿನ ದಿನಗಳಲ್ಲಿ ಇನ್ನೂ ತೀವ್ರತೆ ಪಡೆದುಕೊಳ್ಳಲಿರುವ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯಲ್ಲಿ ಅನುಸರಿಸಲಾಗುವ ಜನಕಲ್ಯಾಣ ಯೋಜನೆಗಳೆಲ್ಲವೂ ದೇಶದ ಶೋಷಿತ ಜನತೆಯ ಋಣ ತೀರಿಸುವ ಒಂದು ವಿಧಾನವಷ್ಟೇ. ಈ ಯೋಜನೆಗಳು ಇಲ್ಲದಿದ್ದರೂ ದುಡಿಯುವ ವರ್ಗಗಳು ತಮ್ಮ ಶ್ರಮಶಕ್ತಿಯನ್ನು ವ್ಯರ್ಥಮಾಡುವುದಿಲ್ಲ. ಶ್ರಮ-ಶ್ರಮಿಕ-ಶ್ರಮಶಕ್ತಿಯನ್ನೂ ಮಾರುಕಟ್ಟೆಯ ಸರಕು ಎಂದೇ ಪರಿಗಣಿಸಲಾಗುತ್ತಿರುವ ನವ ಉದಾರವಾದದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಅಧಿಕಾರ ರಾಜಕಾರಣದ ರಕ್ಷಾ ಕವಚಗಳಾಗುವುದೇ ಹೊರತು, ಜನತೆಯ ಬದುಕಿಗೆ ಬುನಾದಿಯಾಗುವುದಿಲ್ಲ. ಈ ಯೋಜನೆಯ ಬಳಕೆದಾರರು ಸರ್ಕಾರಗಳಿಗೆ ಋಣಿಯಾಗಿರಬೇಕೆಂದು ಅಪೇಕ್ಷಿಸುವುದು ಪ್ರಾಚೀನ ಊಳಿಗಮಾನ್ಯ ಪಾಳೆಗಾರಿಕೆಯ ಲಕ್ಷಣವಾಗಿ ಕಾಣುತ್ತದೆ. ರೇವ್ಡಿ ( ಅಂದರೆ ಕುರುಕಲು ಸಿಹಿತಿಂಡಿ), ಉಚಿತ ಎಂಬ ಪದಗಳ ಮೂಲಕ ಹಂಗಿಸಲಾಗುತ್ತಿದ್ದ ಈ ಪ್ರಯೋಜನಗಳಿಗೆ ಗ್ಯಾರಂಟಿ ಎಂಬ ಆಂಗ್ಲ ಪದ ಕೊಂಚ ಗೌರವಯುತ ಎನಿಸುತ್ತದೆ. ಆದರೆ ಈ ಸಂವಾದಿ ಪದಬಳಕೆಯಿಂದ ಭಾರತದ ಆಳುವ ವರ್ಗಗಳ, ರಾಜಕೀಯ ನಾಯಕರ ಯಜಮಾನಿಕೆಯ ಮನಸ್ಥಿತಿಯೇನೂ ಬದಲಾಗಿಲ್ಲ. ಇದು ವರ್ತಮಾನದ ಅತಿ ದೊಡ್ಡ ದುರಂತ.

ಶೋಷಣೆಯ ಮೂಲ ನೆಲೆಗಳನ್ನು ಕಿಂಚಿತ್ತೂ ಭಂಗಗೊಳಿಸದೆ, ಸಂಪನ್ಮೂಲಗಳ ಮೇಲಿನ ಒಡೆತನವನ್ನು ಅಲುಗಾಡಿಸದೆ, ದೇಶದ ಸಂಪತ್ತಿನ ಮೇಲೆ ಕೆಲವೇ ಜನರ ಯಜಮಾನಿಕೆಯನ್ನು ಯಥಾಸ್ಥಿತಿಯಲ್ಲಿರಿಸುತ್ತಲೇ ಪ್ರಜಾಪ್ರಭುತ್ವವನ್ನು ಕಾಪಾಡಲು ಮತದಾರರ ಬಳಿ ಹೋಗುವ ಬಂಡವಾಳಿಗ ರಾಜಕೀಯ ಪಕ್ಷಗಳಿಗೆ, ತಾವು ಅಧಿಕಾರದಲ್ಲಿದ್ದಾಗ ಸಮಾಜದ ತಳಮಟ್ಟದ ಶ್ರೀಸಾಮಾನ್ಯರಿಗೆ ನೀಡುವ ಯಾವುದೇ ಸೌಕರ್ಯ, ಸವಲತ್ತುಗಳು ಅದೇ ದುಡಿಯುವ ಜನತೆಯ ಶ್ರಮದ ಫಲ ಎನ್ನುವ ಪರಿಜ್ಞಾನ ಇರಬೇಕಲ್ಲವೇ ? ಸರ್ಕಾರಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅವಕಾಶವಂಚಿತ-ಸೌಲಭ್ಯವಂಚಿತ ಜನತೆಗೆ ನೀಡುವ ಆರ್ಥಿಕ-ಸಾಮಾಜಿಕ-ಸಾಂವಿಧಾನಿಕ ಸವಲತ್ತುಗಳನ್ನು ʼಋಣಸಂದಾಯʼದ ಚೌಕಟ್ಟಿನಲ್ಲಿ ನೋಡುವುದೇ ಆದರೆ, ಭಾರತ ಇನ್ನೂ ಸಹ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರೂಢಿಸಿಕೊಂಡಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.

ತಮ್ಮ ಜೀವನ-ಜೀವನೋಪಾಯದ ಮಾರ್ಗಗಳಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳನ್ನೂ ಪೂರ್ವಜನ್ಮದ ಕರ್ಮ-ಹಣೆಬರಹ ಎಂದು ಭಾವಿಸಿ ಮೌನವಾಗಿ ಅನುಭವಿಸುವ ಬೃಹತ್ ಜನಸಂಖ್ಯೆಯನ್ನು ಹೊಂದಿರುವ ಸಾಂಪ್ರದಾಯಿಕ ದೇಶದಲ್ಲಿ ʼಋಣಿʼ ಅಥವಾ ʼಋಣಸಂದಾಯʼ ಎಂಬ ಪದಗಳು ವಿಶಾಲ ಸಮಾಜವನ್ನು ನಿರ್ದೇಶಿಸುವ ಪಿತೃಪ್ರಧಾನ-ಊಳಿಗಮಾನ್ಯ-ಶೋಷಣೆಯ ನೆಲೆಗಳನ್ನು , ಜಾತಿ ಶ್ರೇಷ್ಠತೆಯ ಅಹಮಿಕೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ. ತಮ್ಮ ಅಧಿಕಾರ ಲಾಭದ ದೃಷ್ಟಿಯಿಂದಲೇ ಈ ಸಮಾಜದ ನಿಕೃಷ್ಟ ಜನತೆಗೆ ಅನುಕೂಲತೆಗಳನ್ನು ಕಲ್ಪಿಸುವ ರಾಜಕೀಯ ಪಕ್ಷಗಳ ಮನಸ್ಥಿತಿ ಈ ಪ್ರಾಚೀನತೆಯ ನೆಲೆಗಳನ್ನು ಪ್ರತಿನಿಧಿಸುತ್ತವೆಯೇ ಹೊರತು ಆಧುನಿಕ ಪ್ರಜಾಪ್ರಭುತ್ವವನ್ನಲ್ಲ. ವಾಸ್ತವವಾಗಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆದು 75 ವರ್ಷಗಳಾದರೂ ದೇಶದ ಬಹುಸಂಖ್ಯಾತ ಜನರು ಸರ್ಕಾರಗಳ ಹಂಗಿನಲ್ಲಿ ಬದುಕುವಂತಾಗಿರುವುದು ಈ ದೇಶದ ಆಡಳಿತ ವ್ಯವಸ್ಥೆ ನಾಚಿ ತಲೆತಗ್ಗಿಸಬೇಕಾದ ವಿಚಾರ.

75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭ್ರಷ್ಟಾಚಾರ, ಹಸಿವು, ಬಡತನ, ಶೋಷಣೆ, ಅತ್ಯಾಚಾರ, ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ, ಹಿಂಸೆ, ಕೋಮುವಾದ, ಮತೀಯವಾದ, ಮತಾಂಧತೆ, ಪಿತೃಪ್ರಧಾನತೆ, ಸಾಮಾಜಿಕ ಅನಿಷ್ಠಗಳು ಇವೆಲ್ಲವೂ ಭಾರತೀಯ ಸಮಾಜವನ್ನು ಕಾಡುತ್ತಲೇ ಇದೆ. ಬ್ಯಾನರ್, ಲಾಂಛನ ಅಥವಾ ಮಾತಿನ ವೈಖರಿಯನ್ನು ಹೊರತುಪಡಿಸಿದರೆ ಮತ್ತಾವುದೇ ವ್ಯತ್ಯಾಸ ಇಲ್ಲದ ವಿವಿಧ ರಾಜಕೀಯ ಪಕ್ಷಗಳೇ ಈ ಶೋಷಕ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿವೆ. ಹಾಗೆಯೇ ಶೋಷಣೆಯ ನೆಲೆಗಳ ಬಲವರ್ಧನೆಗೆ ಪೂರಕವಾದ ನವ ಉದಾರವಾದಿ ಆರ್ಥಿಕತೆಯನ್ನೂ ಪ್ರೋತ್ಸಾಹಿಸುತ್ತಿವೆ. ಹೀಗಿದ್ದರೂ ಭಾರತದ ಜನಸಾಮಾನ್ಯರು ಇದೇ ರಾಜಕೀಯ ಶಕ್ತಿಗಳನ್ನೇ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ ವಾಸ್ತವವಾಗಿ ಈ ದೇಶವನ್ನು ಆಳುತ್ತಿರುವ ಬಂಡವಾಳಿಗರು, ಬೂರ್ಷ್ವಾ ರಾಜಕೀಯ ಪಕ್ಷಗಳು, ಸ್ವಾತಂತ್ರ್ಯದ ಪೂರ್ವಸೂರಿಗಳು ಕನಸು ಕಂಡ ಸ್ವಾವಲಂಬಿ ಭಾರತದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನೂ ಸ್ವಾವಲಂಬಿಯಾಗಿ ಮಾಡುವ ನೈತಿಕ ಕರ್ತವ್ಯವನ್ನೇ ಮರೆತಿರುವ ಆಳುವ ವರ್ಗಗಳು ಹಾಗೂ ಸಿರಿವಂತ ಹಿತವಲಯದ ಸಮಾಜವು ಭಾರತದ ಶ್ರೀಸಾಮಾನ್ಯರಿಗೆ ಶಾಶ್ವತ ಋಣಿಗಳಾಗಿರಬೇಕಲ್ಲವೇ ?

ಋಣ ಸಂದಾಯ ಮಾಡಬೇಕಿರುವುದು ಯಾರು?

ಇದನ್ನೂ ನೋಡಿ: ಚುನಾವಣಾ ಫಲಿತಾಂಶದ ನಂತರವೂ ಮುಸ್ಲಿಂರೇ ಟಾರ್ಗೆಟ್‌!? – ಮುನೀರ್ ಕಾಟಿಪಳ್ಳ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *