ಮತ-ಮತದಾರ-ಮತದಾನ ಮತ್ತು ಮತದ ಮೌಲ್ಯ

ನಾ ದಿವಾಕರ

ಜನಮತದ ಅಪಮೌಲ್ಯೀಕರಣದಿಂದ ಪ್ರಜಾಪ್ರಭುತ್ವದ ತಳಪಾಯವೇ ಶಿಥಿಲವಾಗುತ್ತದೆ

ಸಂವಿಧಾನ ರಚನ ಮಂಡಳಿಯ ಸಭೆಯಲ್ಲಿ ತಮ್ಮ ಅಂತಿಮ ಭಾಷಣ ಮಾಡುವ ಸಂದರ್ಭದಲ್ಲಿ ಡಾ. ಬಿ. ಆರ್.‌ ಅಂಬೇಡ್ಕರ್‌ “ರಾಜಕಾರಣದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕು ಹೊಂದಿರುತ್ತಾನೆ, ರಾಜಕೀಯ ಪಕ್ಷವನ್ನು ಕಟ್ಟುವ, ಪಕ್ಷಕ್ಕೆ ಸೇರುವ ಸ್ವಾತಂತ್ರ್ಯ ಹೊಂದಿರುತ್ತಾನೆ. ರಾಜಕಾರಣದಲ್ಲಿ ನಾವು ಒಬ್ಬ ವ್ಯಕ್ತಿಗೆ ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ಅನುಸರಿಸುತ್ತೇವೆ. ಆದರೆ ನಮ್ಮ ಸಾಮಾಜಿಕ- ಆರ್ಥಿಕ ಸಂರಚನೆಯ ಕಾರಣ ಒಬ್ಬ ವ್ಯಕ್ತಿಗೆ ಒಂದು ಮೌಲ್ಯವನ್ನು ಕಲ್ಪಿಸಲು ನಿರಾಕರಿಸುತ್ತೇವೆ ,,,,, ” ಎಂದು ಹೇಳಿರುವುದನ್ನು ಭಾರತದ ರಾಜಕೀಯ ಪಕ್ಷಗಳು, ನಾಯಕರು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು ಮತ್ತು ವಿವಿಧ ಸಿದ್ಧಾಂತಗಳ ಅನುಯಾಯಿಗಳು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ನೆನಪಿಸಿಕೊಳ್ಳುವುದು ವಾಡಿಕೆಯಾಗಿದೆ. ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಸಾರ್ವಭೌಮ ಪ್ರಜೆಗಳು ಆಳುವ ಸರ್ಕಾರಗಳನ್ನು ಆಯ್ಕೆ ಮಾಡಲು ಚಲಾಯಿಸುವ ಅಮೂಲ್ಯ ಮತದ ಮೌಲ್ಯ, ಪ್ರಾಮುಖ್ಯತೆ ಮತ್ತು ʼ ಪಾವಿತ್ರ್ಯತೆ ʼಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ.

ಮತದಾರ ಜಾಗೃತಿ ಅಭಿಯಾನಗಳು ವಿಭಿನ್ನ ಸ್ತರಗಳಲ್ಲಿ ನಡೆಯುತ್ತವೆ. ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ವಿಶಿಷ್ಟ-ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಸಾಮಾನ್ಯವಾಗಿ ಗಮನಿಸಬಹುದು. ಪ್ರಜಾಪ್ರಭುತ್ವದ ಅಳಿವು-ಉಳಿವು ಮತದಾರರ ಜಾಗೃತ ಪ್ರಜ್ಞೆಯನ್ನೇ ಅವಲಂಬಿಸಿರುತ್ತದೆ ಎನ್ನುವುದನ್ನು ಇತಿಹಾಸ ಹಲವು ಸಂದರ್ಭಗಳಲ್ಲಿ ನಿರೂಪಿಸಿದೆ.
ಆಡಳಿತ ವ್ಯವಸ್ಥೆಯಲ್ಲಿ ಸದ್ದಿಲ್ಲದೆ ನುಸುಳುವ ಸರ್ವಾಧಿಕಾರಿ ಧೋರಣೆ ಮತ್ತು ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ವ್ಯಾಪಿಸುವ ನಿರಂಕುಶಾಧಿಕಾರದ  ಕುಡಿಗಳು ಇಡೀ ವ್ಯವಸ್ಥೆಯನ್ನೇ ಕ್ಯಾನ್ಸರ್‌ ಪೀಡಿತ ಜೀವಕೋಶದಂತೆ ಶಿಥಿಲವಾಗಿಸುತ್ತಲೇ ಇರುತ್ತವೆ. ಮೂಲತಃ ಸಾಮಾನ್ಯ ಜನತೆಯಲ್ಲಿ ಪ್ರಜಾಪ್ರಭುತ್ವ ಮತ್ತು ಮತದಾನದ ನಡುವೆ ಇರುವ ಸೂಕ್ಷ್ಮ ಸಂಬಂಧದ ಬಗ್ಗೆ ಅರಿವು ಮೂಡಿಸುವುದು ನಮ್ಮ ಇಂದಿನ ಆದ್ಯತೆಯಾಗಬೇಕಿದೆ.

ಮತದಾನ ಮತ್ತು ರಾಜಕಾರಣ :  ಸಮಕಾಲೀನ ರಾಜಕಾರಣದಲ್ಲಿ ಸಾರ್ವಭೌಮ ಜನತೆಯ ಪಾಲಿಗೆ ಶ್ರೇಷ್ಠ ಅಥವಾ ಪವಿತ್ರ ಎನಿಸುವ ಮತ ಅಥವಾ ಜನಮತ, ಆಳುವ ವರ್ಗಗಳ ದೃಷ್ಟಿಯಲ್ಲಿ ಖರೀದಿಸಬಹುದಾದ ಮಾರುಕಟ್ಟೆಯ ಸರಕಿನಂತೆ ಕಾಣುತ್ತಿರುವುದನ್ನು ಗಮನಿಸಬೇಕಿದೆ. ಮತದಾರರನ್ನು ಪ್ರಭುಗಳು ಎಂದೇ ಸಂಬೋಧಿಸುವ  ರಾಜಕೀಯ ಪಕ್ಷಗಳೂ ಸಹ ತಾವು ಎಸೆಯುವ ತುಣುಕುಗಳನ್ನು ಆಯ್ದುಕೊಳ್ಳಲು ಇದೇ ಮತದಾರ ಪ್ರಭುಗಳನ್ನು ವಿಭಿನ್ನ ರೀತಿಗಳಲ್ಲಿ ಪ್ರಚೋದಿಸುತ್ತಿರುತ್ತವೆ. ಹಣ, ಹೆಂಡ, ಸೀರೆ, ಪಂಚೆ, ಗೃಹೋಪಯೋಗಿ ವಸ್ತುಗಳ ಹಂತವನ್ನು ದಾಟಿ ಈಗ ಈ ತುಣುಕುಗಳು ಬಾಡೂಟ, ಔತಣಗಳ ಸ್ವರೂಪ ಪಡೆದುಕೊಂಡಿವೆ. ಸಸ್ಯಾಹಾರಿಗಳಿಗಾಗಿ ಸಮಾರಾಧನೆಗಳನ್ನು ಏರ್ಪಡಿಸಿದರೂ ಅಚ್ಚರಿಯೇನಿಲ್ಲ. ಏಕೆಂದರೆ ತಾವು ಎಸೆಯುವುದನ್ನು ಆಯ್ದುಕೊಳ್ಳುವ ಜನರು ನಮ್ಮ ನಡುವೆ ಇದ್ದಾರೆ ಎಂಬ ವಾಸ್ತವದ ಅರಿವು ರಾಜಕೀಯ ಪಕ್ಷಗಳಿಗಿದೆ. ಹಾಗೆಯೇ ಚುನಾವಣೆಗಳು ಬಂತೆಂದರೆ ನಮ್ಮ ಮನೆ ಬಾಗಿಲಿಗೆ ಯಾವುದಾದರೂ ವಸ್ತುಗಳು ಬಂದು ಬೀಳುತ್ತವೆ ಎಂಬ ಖಾತರಿ ಜನಸಾಮಾನ್ಯರಲ್ಲೂ ಇದೆ. ಈ ವಿಕೃತ ಸನ್ನಿವೇಶಕ್ಕೆ ಕಾರಣ ಯಾರು ?

75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿರುವ ಭಾರತದ ಸಾಮಾನ್ಯ ಜನರು ಸಂವಿಧಾನ ನೀಡಿರುವ ಮತದ ಹಕ್ಕು , ಪ್ರತಿಯೊಂದು ಮತದ ಮೌಲ್ಯ ಮತ್ತು ಮತದಾನ ಎಂಬ ಕಾಲಿಕ ಪ್ರಕ್ರಿಯೆಯ ಹಿಂದಿನ ಸದುದ್ದೇಶಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆಯೇ ಎಂಬ ಪ್ರಶ್ನೆಯೇ ನಮ್ಮನ್ನು ವಿಚಲಿತಗೊಳಿಸುತ್ತದೆ. ಆರಂಭದಲ್ಲಿ ಉಲ್ಲೇಖಿಸಿದ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ನುಡಿಗಳ ಹಿಂದಿರುವ ಕಾಳಜಿ, ಕಳಕಳಿ ಮತ್ತು ಆತಂಕಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಾಗ ಮಾತ್ರ ನಮಗೆ ಮತ ಮತ್ತು ಮತದಾನದ ಮೌಲ್ಯವೂ ಅರ್ಥವಾಗಲು ಸಾಧ್ಯವಾದೀತು. ಸಂವಿಧಾನವೇ ನಮ್ಮ ಉಸಿರು, ಪ್ರಜಾಪ್ರಭುತ್ವವೇ ನಮ್ಮ ಜೀವಾಳ ಎಂಬ ಪ್ರತಿಯೊಂದು ಘೋಷಣೆಯ ಹಿಂದೆಯೂ ಮತ್ತೊಂದು ಅರ್ಥಸೂಸುವ ʼ ಮತ ʼ ಅಥವಾ ಧರ್ಮ ಪ್ರೇರಿತ ರಾಜಕಾರಣವನ್ನು ತಿರಸ್ಕರಿಸುವ ಇಚ್ಛಾಶಕ್ತಿಯೂ ಇದ್ದಾಗ ಮಾತ್ರವೇ ಅಂಬೇಡ್ಕರ್‌ ಅವರ ಆಶಯಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ ನ್ಯಾಯಪೀಠವೂ ಇದೇ ಮಾತನ್ನು ಹೇಳಿರುವುದನ್ನು ಗಮನಿಸಬೇಕಿದೆ.

ಸಂವಿಧಾನ ಸಾರ್ವಭೌಮ ಪ್ರಜೆಗಳಿಗೆ ನೀಡಿರುವ ಮತದ ಮೌಲ್ಯ ಅರಿವಾಗುವುದು ಮತದಾನದ ಸಂದರ್ಭದಲ್ಲಿ ಮತ್ತು ಮತದಾರನ ವ್ಯಕ್ತಿಗತ ನೆಲೆಯಲ್ಲಿ ಮಾತ್ರ. ಒಂದು ಮತಕ್ಕೆ ಒಂದು ಮೌಲ್ಯ ಇದೆ ಎಂದಾದರೆ ಆ ಮೌಲ್ಯ ಯಾವುದು ? ಬಿಕರಿಯಾಗಬಹುದಾದ ಮಾರುಕಟ್ಟೆ ಮೌಲ್ಯವೋ ಅಥವಾ  ಸಂವಿಧಾನ-ಪ್ರಜಾತಂತ್ರವನ್ನು ರಕ್ಷಿಸಲು ಅಗತ್ಯವಾದ ವಾಸ್ತವಿಕ ಮೌಲ್ಯವೋ ? 18 ವರ್ಷಗಳನ್ನು ಪೂರೈಸುತ್ತಲೇ ಮತದಾರ ಎನಿಸಿಕೊಳ್ಳುವ ಪ್ರತಿಯೊಬ್ಬ ಪ್ರಜೆಗೂ ಪ್ರಥಮ ಮತದಾನ ಮಾಡುವ ಕ್ಷಣದಲ್ಲಿ ತನ್ನ ಸುತ್ತಲಿನ ಸಮಾಜವನ್ನು ಕಣ್ಣೆತ್ತಿ ನೋಡುವ ವ್ಯವಧಾನ ಇರಬೇಕಾಗುತ್ತದೆ. “ ಮೊದಲ ಸಲ ಮತ ಚಲಾಯಿಸುವ ಮತದಾರ ” ತಾನು ನಿಂತ ನೆಲ, ತಾನು ರೂಪಿಸಿಕೊಂಡ ಬದುಕು ಮತ್ತು ತನ್ನ ಸುತ್ತ ಢಾಳಾಗಿ ಕಾಣುವ ಸಾಮಾನ್ಯ ಜನತೆಯ ವಾಸ್ತವ ಬದುಕು ಇವುಗಳನ್ನು ಗಮನಿಸದೆ ಹೋದರೆ, ಆ ವ್ಯಕ್ತಿಗೆ ಮತ ಮತ್ತು ಮತದಾನದ ಮೌಲ್ಯ ಅರ್ಥವಾಗಿಲ್ಲ ಎಂದೇ ಅರ್ಥ. ಸಂವಿಧಾನ ನೀಡಿರುವ ಎಲ್ಲ ಪ್ರಜಾಸತ್ತಾತ್ಮಕ ಹಕ್ಕುಗಳನ್ನೂ, ಸೌಲಭ್ಯಗಳನ್ನೂ ಬಳಸಿಕೊಂಡೇ ತಮ್ಮದೇ ಆದ ಹಿತಕರ ಗೂಡು ಕಟ್ಟಿಕೊಂಡಿರುವ ಸುಶಿಕ್ಷಿತರೂ ಸಹ ತಮ್ಮ ಪೂರ್ವಸೂರಿಗಳ ಸಾಮಾಜಿಕ ಕಾಳಜಿ-ಕಳಕಳಿ ಮತ್ತು ಆಶಯಗಳನ್ನು ಮರೆತು, ಸರ್ವಾಧಿಕಾರ ಮತ್ತು ನಿರಂಕುಶಾಧಿಕಾರದ ಆಲೋಚನಾ ವಿಧಾನಗಳಿಗೆ ಬಲಿಯಾಗುತ್ತಿರುವುದನ್ನು ವರ್ತಮಾನದ ಸಂದರ್ಭದಲ್ಲಿ ವಿಷಾದದಿಂದಲೇ ಗಮನಿಸಬೇಕಿದೆ. ಈ ಬೃಹತ್‌ ಸಂಖ್ಯೆಯ ಯುವ ಸಮೂಹವನ್ನೇ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ಆಮಿಷಗಳ ಮೂಲಕ ಆಕರ್ಷಿಸುತ್ತವೆ. ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಮುಂದಿಡುವ ಕ್ಷಿಪ್ರ ಪ್ರಗತಿಯ ಹಾದಿಗಳು ಮತ್ತು ಈ ಹಾದಿಯಲ್ಲಿ ಕಾಣಬಹುದಾದಂತಹ ಭ್ರಮಾಲೋಕದ ಸರಕುಗಳು ಭವಿಷ್ಯ ಭಾರತದ ಸಂಕೇತಗಳಾಗಿ ಕಾಣುವುದು ಸಹಜ. ಈ ದೇಶದ ಬಹುತೇಕ ಮಾಧ್ಯಮಗಳೂ ಸಹ ತಮ್ಮ ವೃತ್ತಿಪರತೆಯನ್ನೇ ಕಳೆದುಕೊಂಡು, ವಂದಿಮಾಗಧ ಸಂಸ್ಕೃತಿಯನ್ನು ರೂಢಿಸಿಕೊಂಡಿರುವುದರಿಂದ, ಇದೇ ಭ್ರಮಾಲೋಕವನ್ನೇ ಮತ್ತಷ್ಟು ರಂಜನೀಯವಾಗಿ ಬಿತ್ತರಿಸುತ್ತಿರುತ್ತವೆ. ಒಂದೆಡೆ ಹಿರಿಯ ಪೀಳಿಗೆಯು ಜಾತಿ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳಿಗೆ ಬಲಿಯಾಗಿ ತಮ್ಮ ಮತದ ಮೌಲ್ಯವನ್ನು ಮರೆಯುತ್ತಿದ್ದರೆ ಮತ್ತೊಂದೆಡೆ ಯುವ ಸಮೂಹ ಭ್ರಮಾಧೀನತೆಗೆ ಬಲಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಮತದ ಮೌಲ್ಯ ಮತ್ತು ಅಪಮೌಲ್ಯ : ಮತದ ಮೌಲ್ಯ ಎಂದರೇನು ? ಈ ಪ್ರಶ್ನೆ ಇಂದು ಪ್ರತಿಯೊಬ್ಬ ಶ್ರೀಸಾಮಾನ್ಯನನ್ನೂ ಕಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಅಂತಿಮ ಎಂದಾದಲ್ಲಿ, ಈ ಜನಾಭಿಪ್ರಾಯಕ್ಕೆ ತನ್ನದೇ ಆದ ಸ್ವಾಯತ್ತತೆಯೂ ಇರಬೇಕಲ್ಲವೇ ? ಈ ಸ್ವಾಯತ್ತತೆ ಮೂಡುವುದಾದರೂ ಹೇಗೆ ? ಜನತೆಯಲ್ಲಿ ಸ್ವಂತ ಆಲೋಚನೆ, ಚಿಂತನೆ ಮತ್ತು ಅಭಿವ್ಯಕ್ತಿಯ ನೆಲೆಗಳು ಸ್ಪಷ್ಟವಾದಾಗ ಮಾತ್ರ ಇದು ಸಾಧ್ಯ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜಾತಿ, ಧರ್ಮ ಮತ್ತು ಪ್ರಾದೇಶಿಕ ಅಸ್ಮಿತೆಗಳನ್ನೇ ಮಾರುಕಟ್ಟೆಯ ತಂತ್ರಗಳಂತೆ ಬಳಸಿಕೊಂಡು ಈ ಸ್ವಾಯತ್ತತೆಯ ನೆಲೆಗಳನ್ನು ಭ್ರಷ್ಟಗೊಳಿಸುತ್ತಿರುತ್ತವೆ. ಈ ತಂತ್ರಗಾರಿಕೆಯನ್ನೇ ಪ್ರಜೆಗಳು ಪ್ರತಿ ಚುನಾವಣೆಯ ಸಂದರ್ಭದಲ್ಲಿ ಎಸೆಯಲಾಗುವ ತುಣುಕುಗಳ, ಪೊಳ್ಳು ಆಶ್ವಾಸನೆಗಳ, ಮಾಯಾ ನಗರಿಗಳ ಮತ್ತು ಭವಿಷ್ಯದ ಭ್ರಮೆಗಳ ನಡುವೆ ಕಾಣುತ್ತಿರುತ್ತಾರೆ. 75 ವರ್ಷಗಳಿಂದಲೂ ಇದೇ ಪರಂಪರೆಯನ್ನು ಮತದಾರರಾದ ನಾವು ಪೋಷಿಸುತ್ತಲೂ ಬಂದಿದ್ದೇವೆ ಅಲ್ಲವೇ ?

ಇದನ್ನೂ ಓದಿ :  ಚುನಾವಣಾ ಪ್ರಣಾಳಿಕೆಗಳಂತಾಗುತ್ತಿರುವ ಮುಂಗಡ ಪತ್ರಗಳು

ಪ್ರತಿಯೊಬ್ಬರಿಗೂ ಸೂರು, ಮನೆಮನೆಗೂ ವಿದ್ಯುತ್‌, ಹಳ್ಳಿಹಳ್ಳಿಗೂ ರಸ್ತೆ, ಎಲ್ಲ ಮಕ್ಕಳಿಗೂ ಶಿಕ್ಷಣ, ಎಲ್ಲ ಮನೆಗಳಿಗೂ ಶೌಚಾಲಯ ಇವೇ ಮುಂತಾದ ಆಶ್ವಾಸನೆಗಳು ಪ್ರತಿಯೊಂದು ಚುನಾವಣೆಯಲ್ಲೂ ಕೇಳಿಬರುವುದೇ ಆಳುವ ವರ್ಗಗಳ ವೈಫಲ್ಯದ ಸೂಚಕ ಅಲ್ಲವೇ ? ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆಯನ್ನೇ 2002ರ ವಾಜಪೇಯಿ ಸರ್ಕಾರದ ಅವಧಿಯಿಂದಲೂ ಕೇಳುತ್ತಲೇ ಬಂದಿದ್ದೇವೆ. ಇಂದಿಗೂ ರೈತನ ಬದುಕು ಅನಿಶ್ಚಿತತೆಯ ನೆರಳಲ್ಲೇ ಸಾಗುತ್ತಿದೆ. ಮಾರುಕಟ್ಟೆ ಆರ್ಥಿಕ ನೀತಿಗಳನ್ನು ಅನುಸರಿಸುವುದರಿಂದ ಭಾರತ ಸ್ವರ್ಗವಾಗುತ್ತದೆ ಎಂಬ ಭರವಸೆಯ ನಡುವೆಯೇ ಭಾರತ ಮೂರು ದಶಕಗಳ ಮಾರುಕಟ್ಟೆ ಆರ್ಥಿಕತೆಯನ್ನು ಕಂಡಿದೆ. ಆದರೆ ಸ್ವರ್ಗ ಎನ್ನುವ ಕಲ್ಪನೆಯೇ ಸಾಪೇಕ್ಷವಾದುದರಿಂದ, ಬಡತನ ಹಸಿವೆ ನಿರ್ಗತಿಕತೆ ಅಭದ್ರತೆ ಮತ್ತು ಸಾಮಾಜಿಕ ಕ್ರೌರ್ಯಗಳು ನಮ್ಮ ಕಣ್ಣಿಗೆ  ಕಾಣದಂತಾಗುತ್ತವೆ.

ಈ ಸನ್ನಿವೇಶದಲ್ಲಿ ನಮಗೆ ಮತದ ಮೌಲ್ಯ ಮುಖ್ಯವಾಗುತ್ತದೆ. ನಾವು ಚಲಾಯಿಸುವ ಮತ ಯಾರನ್ನು ಆಯ್ಕೆ ಮಾಡಲು ನೆರವಾಗುತ್ತದೆ ಎನ್ನುವುದಕ್ಕಿಂತಲೂ, ಆಯ್ಕೆಯಾಗುವ ವ್ಯಕ್ತಿ ಅಥವಾ ಪಕ್ಷ ನಮ್ಮ ಹಾಗೂ ಸುತ್ತಲಿನ ಸಮಾಜದ ದೈನಂದಿನ ಬದುಕಿಗೆ ಯಾವ ರೀತಿಯಲ್ಲಿ ಸ್ಪಂದಿಸಬಹುದು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಸರ್ವರಿಗೂ ಶಿಕ್ಷಣ ಎಂಬ ಉದಾತ್ತ ಘೋಷಣೆಯೊಂದಿಗೆ ವಾಜಪೇಯಿ ಸರ್ಕಾರ ಜಾರಿಗೊಳಿಸಿದ ಸರ್ವಶಿಕ್ಷಣ ಅಭಿಯಾನ ಎಷ್ಟರ ಮಟ್ಟಿಗೆ ಸಮಸ್ತ ಪ್ರಜೆಗಳಿಗೂ ಪ್ರಾಥಮಿಕ ಶಿಕ್ಷಣವನ್ನು ಒದಗಿಸಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ, ನಮಗೆ ಮತದ ಮೌಲ್ಯ ಅರಿವಾಗಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ. ಹಸಿವು, ಬಡತನ , ಅನಕ್ಷರತೆ , ಅನೈರ್ಮಲ್ಯ, ಅನಾರೋಗ್ಯ ಮತ್ತು ನಿರುದ್ಯೋಗ ಈ ಸಮಸ್ಯೆಗಳು ನಮ್ಮ ಸುತ್ತಲಿನ ಬೀದಿಗಳಲ್ಲೇ ತಾಂಡವಾಡುತ್ತಿರುವುದಕ್ಕೆ ಕಾರಣಗಳಾದರೂ ಏನು ಎಂಬ ಯೋಚಿಸುವ ವ್ಯವಧಾನವನ್ನು ಬೆಳೆಸಿಕೊಂಡರೆ ಮಾತ್ರವೇ ತಾನು ಚಲಾಯಿಸುವ ಪ್ರತಿಯೊಂದು ಮತದ ಮೌಲ್ಯವೂ ಮತದಾರನಿಗೆ ಅರ್ಥವಾಗುತ್ತದೆ.

ಇದನ್ನು ಅರ್ಥಮಾಡಿಸುವ ಜವಾಬ್ದಾರಿ ಯಾರದು ? ಮತದಾರ ಜಾಗೃತಿ ಎನ್ನುವ ಪರಿಕಲ್ಪನೆಯಲ್ಲಿ ಮೊಳೆಯುವ ಚಿಂತನೆಗಳಿಗೆ ಈ ಪ್ರಶ್ನೆಯೇ ಬುನಾದಿಯಾಗಬೇಕು. ಮತ-ಮತದಾರ ಮತ್ತು ಮತದಾನ ಈ ಮೂರೂ ವಿದ್ಯಮಾನಗಳ ಮೌಲ್ಯ ಅರ್ಥವಾಗಬೇಕಾದರೆ ಮೊದಲು ನಮಗೆ ಸಂವಿಧಾನದ ಆಶಯಗಳ ಅರಿವು ಅಗತ್ಯವಾಗಿ ಇರಬೇಕು. ಸಂವಿಧಾನವನ್ನು ಅರಿಯುವುದಕ್ಕೂ, ಸಾಂವಿಧಾನಿಕ ಆಶಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನೂ ನಾವು ಅರಿತಿರಬೇಕು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ನಾವೇ ನೋಡುತ್ತಿರುವಂತೆ, ಸಂವಿಧಾನದ ಚೌಕಟ್ಟಿನ ಒಳಗೇ ಈ ಆಶಯಗಳನ್ನು ಉಲ್ಲಂಘಿಸುವ ಕಾಯ್ದೆ ಕಾನೂನುಗಳು ಜಾರಿಯಾಗುತ್ತಿವೆ. ಹಾಗಾಗಿ ಮತದ ಮೌಲ್ಯವನ್ನು ಅಳೆಯಲು ಮಾಪನವಾಗಿ ಬಳಕೆಯಾಗಬೇಕಿರುವುದು ಸಂವಿಧಾನದ ಆಶಯಗಳು. ಇದನ್ನು ಉಲ್ಲಂಘಿಸಲು ನೆರವಾಗುವ ಪ್ರತಿಯೊಂದು ಮತವೂ ತನ್ನ ವಾಸ್ತವಿಕ ಮೌಲ್ಯವನ್ನು ಕಳೆದುಕೊಳ್ಳುತ್ತದೆ.

ಹಾಗಾಗಿ ಮತದ ಮೌಲ್ಯ ಎಂದಾಗ ನಮಗೆ ಅಪಮೌಲ್ಯೀಕರಣಕ್ಕೊಳಗಾಗುತ್ತಿರುವ ಶ್ರೀಸಾಮಾನ್ಯರ, ಸುಶಿಕ್ಷಿತರ ಮತಗಳು ಕಂಡುಬರುತ್ತವೆ. ತಮ್ಮ ಬದುಕು ರೂಪಿಸಿಕೊಳ್ಳಲು ಹಕ್ಕೊತ್ತಾಯಗಳಿಗಾಗಿ ಆಶ್ರಯಿಸುವ ಸೈದ್ಧಾಂತಿಕ ನೆಲೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಧಿಕ್ಕರಿಸಿ, ಅದೇ ಹಕ್ಕುಗಳನ್ನು ಕಸಿದುಕೊಳ್ಳುವ ಪಕ್ಷಗಳಿಗೆ ಮತ ನೀಡುವ ಈ ʼ ಪ್ರಜ್ಞಾವಂತ ʼ ಮತದಾರರಲ್ಲಿ ಜಾಗೃತಿ ಮೂಡಿಸುವುದು ಆದ್ಯತೆಯೂ ಆಗಬೇಕಿದೆ. ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ 75 ವರ್ಷಗಳ ಕಾಲ ಕೋಟ್ಯಂತರ ಜನರ ಪರಿಶ್ರಮದೊಂದಿಗೆ ನಿರ್ಮಿತವಾಗಿರುವ ಪ್ರಜಾಸತ್ತಾತ್ಮಕ ಭಾರತವನ್ನು ರಕ್ಷಿಸುವುದೆಂದರೆ ಸಾಂವಿಧಾನಿಕ ಆಶಯಗಳಾದ ಭ್ರಾತೃತ್ವ, ಸೌಹಾರ್ದತೆ ಮತ್ತು ಬಹುತ್ವವನ್ನು ಕಾಪಾಡುವುದೇ ಆಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸುವುದೆಂದರೆ ಈ ಆಶಯಗಳನ್ನು ಸಾಕಾರಗೊಳಿಸುವ ವೇದಿಕೆ ನಿರ್ಮಿಸುವುದೇ ಆಗಿರುತ್ತದೆ. ಜನರು ಚಲಾಯಿಸುವ ʼ ಮತ ʼದ ಸ್ವಾಯತ್ತತೆ, ಮತದಾರನ ಸ್ವಂತಿಕೆ ಮತ್ತು ಮತದಾನದ ಪಾವಿತ್ರ್ಯತೆ ಈ ಮೂರೂ ವಿದ್ಯಮಾನಗಳನ್ನುಆರಂಭದಲ್ಲಿ ಉಲ್ಲೇಖಿಸಿರುವ ಅಂಬೇಡ್ಕರ್‌ ಅವರ ಮಾತುಗಳ ಚೌಕಟ್ಟಿನೊಳಗಿಟ್ಟು ನೋಡಿದಾಗ ನಮಗೆ ಪ್ರತಿಯೊಂದು ಮತದ ಮೌಲ್ಯವನ್ಜು ಅಳೆಯುವ ಮಾನದಂಡಗಳೂ ಸ್ಪಷ್ಟವಾಗುತ್ತವೆ. ಮತದಾರ ಜಾಗೃತಿಯ ಕಾರ್ಯಸೂಚಿಯಾಗಿ ನಾವು ಈ ಮಾನದಂಡಗಳನ್ನೇ ಅನುಸರಿಸಬೇಕಿದೆ. ಆಗಲೇ ಪ್ರಜಾಪ್ರಭುತ್ವದ ನೆಲೆಗಳನ್ನು ಸಂರಕ್ಷಿಸಲು ಸಾಧ್ಯ.

Donate Janashakthi Media

Leave a Reply

Your email address will not be published. Required fields are marked *