ಯಾವುದೇ ಉದ್ಯಮ ನಡೆಸುವುದು ಸರಕಾರದ ಉಸಾಬರಿಯಲ್ಲವಾದರೆ ವೊಡಾಫೋನ್-ಐಡಿಯಾದಲ್ಲಿ ಸರಕಾರ ಶೇರುದಾರನಾಗುವುದು ಯಾಕೆ?

ಉತ್ಕೃಷ್ಟ ಸಂಪರ್ಕ ಜಾಲ ದೇಶದ ಭದ್ರತೆ, ಡಿಜಿಟಲ್ ಆರ್ಥಿಕತೆಯ ಆಧಾರವಾಗಿರುವ ದೃಷ್ಟಿಯಿಂದ ಟೆಲಿಕಾಂ ಆಯಕಟ್ಟಿನ ಕ್ಷೇತ್ರ. ಕ್ಷೇತ್ರದಲ್ಲಿ ಎರಡು ಕಂಪನಿಗಳ ಏಕಸ್ವಾಮ್ಯ ಸೇವೆಯ ಗುಣಮಟ್ಟ, ಬೆಲೆಗಳ ದೃಷ್ಟಿಯಿಂದ ಒಳ್ಳೆಯದಲ್ಲ. ಮೂರನೆಯ ಕಂಪನಿಯ ಅಗತ್ಯವಿದೆ. ಸರಿ….. ಇದಕ್ಕೆ ಸರಕಾರದ ಬಳಿ ಮೂರು ದಾರಿಗಳಿವೆ. ಒಂದು : ವೊಡಾಫೋನ್ಐಡಿಯಾ (ವಿ.)ವನ್ನು ಸರಕಾರವೇ ಯಾಕೆ ನಡೆಸಬಾರದು ? ಅಥವಾ ಎರಡು: ವಿ. ದಿವಾಳಿಯಾಗಲು ಬಿಟ್ಟು ಅದರ ಜಾಲವನ್ನು ಬಿ.ಎಸ್.ಎನ್.ಎಲ್ ಗೆ ಕೊಟ್ಟು ಅಗತ್ಯ ಬಂಡವಾಳ ಹೂಡಿ ಯಾಕೆ ಬೆಳೆಸಬಾರದು ಅಥವಾ ಮೂರು : ಸರಕಾರ ನಿಯಂತ್ರಣ ಹೊಂದಿರುವ ವಿ. ಮತ್ತು ಬಿ.ಎಸ್.ಎನ್.ಎಲ್ ಎರಡೂ ಕಂಪನಿಗಳನ್ನು ವಿಲೀನಗೊಳಿಸಿ ಇನ್ನಷ್ಟು ಬಂಡವಾಳ ಹೂಡಿ ಯಾಕೆ ನಡೆಸಬಾರದು? ಇಲ್ಲಿಯೇ ಸರಕಾರದ, ಪ್ರಧಾನಿ ಮೋದಿ ಅವರ The Government has no business to be in business” (ಯಾವುದೇ ಉದ್ಯಮ ನಡೆಸುವುದು ಸರಕಾರದ ಉಸಾಬರಿಯಲ್ಲ)” ವೆಂಬಪವಿತ್ರತತ್ವ ಮತ್ತು ಚಮಚಾ ಬಂಡವಾಳಶಾಹಿಯ ಮೇಲೆ ಮಮತೆ ಅಡ್ಡ ಬರುತ್ತಿರುವುದು.

ನನ್ನನ್ನು ಮಾರಿದ್ದು,ನಿನ್ನನ್ನು ಖರೀದಿಸಿದ್ದುಯಾಕೆ?- ನೋ ಐಡಿಯ! — ವ್ಯಂಗ್ಯಚಿತ್ರ: ಅಲೋಕ್‍ ನಿರಂತರ್

ವೊಡಾಫೋನ್-ಐಡಿಯಾ (ವಿಐ) ದೇಶದ ಮೂರನೆಯ ಅತಿದೊಡ್ಡ ಟೆಲಿಕಾಂ ಸೇವಾ ಕಂಪನಿ. ಅದು ಕೆಲವು ವರ್ಷಗಳಿಂದ ಆರ್ಥಿಕ ಸಂಕಷ್ಟದಲ್ಲಿದೆ. ಅದು ಕೇಂದ್ರ ಸರಕಾರಕ್ಕೆ ಕೊಡಬೇಕಿದ್ದ 2 ಲಕ್ಷ ಕೋಟಿ ರೂ. ನ ಸಾಲವನ್ನು ಬಾಕಿಯಿರಿಸಿಕೊಂಡಿದೆ. ಸರಕಾರ ಇತ್ತೀಚೆಗೆ ಅದರ ಸಂಕಷ್ಟ ಪರಿಹಾರಕ್ಕೆ ಒಂದು ಘೋಷಣೆ ಮಾಡಿದೆ. ಅದರ ಬಾಕಿಯ ಒಂದು ಭಾಗವನ್ನು ಶೇರು ಗಳಾಗಿ ಬದಲಾಯಿಸಲು ಮತ್ತು ಉಳಿದ ಬಾಕಿ ತೀರಿಸಲು ಅವಧಿಯನ್ನು ಇನ್ನೂ ನಾಲ್ಕು ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಸರಕಾರ ಒಪ್ಪಿದೆ. ಈ ನಿರ್ಣಯದಿಂದಾಗಿ ವಿ.ಐ ನ ಶೇ.35.8 ಶೇರು ಹೊಂದಿರುವ ಕೇಂದ್ರ ಸರಕಾರ ಅದರ ಅತಿ ದೊಡ್ಡ ಹೂಡಿಕೆದಾರ ಆಗಿದೆ. ಅತಿ ದೊಡ್ಡ ಹೂಡಿಕೆದಾರರಿಗೆ ಒಂದು ಕಂಪನಿಯನ್ನು ನಡೆಸುವ ಅಧಿಕಾರ ಮತ್ತು ಜವಾಬ್ದಾರಿ ಎರಡೂ ಇರುತ್ತದೆ. ಆದರೆ ಸರಕಾರ ವಿ.ಐ ಕಂಪನಿಯನ್ನು ನಡೆಸಲು ತನಗೆ ಆಸಕ್ತಿ ಇಲ್ಲವೆಂದಿದೆ. ಅನುಕ್ರಮವಾಗಿ ಎರಡನೆಯ ಮತ್ತು ಮೂರನೆಯ ಅತಿ ದೊಡ್ಡ ಖಾಸಗಿ ಹೂಡಿಕೆದಾರರಾದ ವೊಡಾಫೋನ್ (ಶೇ.28.5) ಮತ್ತು ಆದಿತ್ಯ ಬಿರ್ಲಾ (ಶೇ.17.8) ಕಂಪನಿಯ ನಿರ್ವಹಣೆಯನ್ನು ಮುಂದುವರೆಸಲಿದ್ದಾರೆ. ‘ಪ್ರವರ್ತಕರ ಹಕ್ಕು’ಗಳ ಆಧಾರದ ಮೇಲೆ ಕಂಪನಿಯ ನಿರ್ವಹಣೆಯನ್ನು ಮಾಡಲು ತಮಗೆ ತಾವೇ ಅಧಿಕಾರ ಕೊಡುವ ತಿದ್ದುಪಡಿಯನ್ನು ‘ಶೇರುದಾರರ ಒಪ್ಪಂದ’ಕ್ಕೆ ಅವರು ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಇನ್ನೂ ವಿ.ಐ ಕಂಪನಿಯ ಸಾಲಗಾರರಾಗಿರುತ್ತಾರೆ.

36% ಹೊರೆ-ವ್ಯಂಗ್ಯಚಿತ್ರ: ಸಾತ್ವಿಕ್‍ ಗಡೆ, ದಿ ಹಿಂದು

ಒಂದು ಕಂಪನಿಯ ಅತಿ ದೊಡ್ಡ ಶೇರುದಾರ ಅತಿ ದೊಡ್ಡ ಸಾಲಗಾರನಾಗಿರುವ ವಿಲಕ್ಷಣ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಹೇಗೆ ಸಾಧ್ಯವಾಯಿತು?

ಇದು ಕಳೆದ ಮೂರು ದಶಕಗಳಿಂದ ದೇಶದಲ್ಲಿ ಪಾಲಿಸಲಾಗುತ್ತಿರುವ ನವ-ಉದಾರವಾದಿ ನೀತಿಗಳ ದುಷ್ಫಲ. ಅದರ ಭಾಗವಾಗಿ ಟೆಲಿಕಾಂ ಕ್ಷೇತ್ರದ ಸುಧಾರಣೆಗಳ ಹೆಸರಲ್ಲಿ ಏನಕೇನ ಪ್ರಕಾರೇಣ ಖಾಸಗೀಕರಣ ನೀತಿಯ ದುಷ್ಫಲ.

ವಿದ್ಯುತ್, ಕಲ್ಲಿದ್ದಲು ಮುಂತಾದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಖಾಸಗೀಕರಣ ವಿಫಲಗೊಂಡಿದ್ದು, ಇದರಿಂದಾಗಿ ಬ್ಯಾಂಕುಗಳ ಎನ್.ಪಿ.ಎ (ಬರಡು ಆಸ್ತಿಗಳು) ಭಾರಿ ಏರಿಕೆ ಕಂಡಿದ್ದವು. ಇವು ನವ-ಉದಾರವಾದಿ ನೀತಿಗಳ ವೈಫಲ್ಯ ಎಂದು ವಾದಿಸಿದವರಿಗೆ, ಆ ನೀತಿಗಳ ಬೆಂಬಲಿಗರು ಟೆಲಿಕಾಂ ಕ್ಷೇತ್ರವನ್ನು ತೋರಿಸಿ “ನೋಡಿ! ಈ ಕ್ಷೇತ್ರದಲ್ಲಿ ಅದು ಸಫಲವಾಗಿದೆ” ಎನ್ನುತ್ತಿದ್ದರು. ಈಗ ಟೆಲಿಕಾಂ ಕ್ಷೇತ್ರ ಅದೇ ಹಾದಿ ಹಿಡಿದಿದೆ ಎಂಬುದು ಸ್ಪಷ್ಟ. ಈ ಕ್ಷೇತ್ರದಲ್ಲಿ ಕೇವಲ ಎರಡು ಕಂಪನಿಗಳು (ಜಿಯೊ ಮತ್ತು ಏರ್‌ಟೆಲ್) ಮಾತ್ರ ಉಳಿದಿವೆ. ಟೆಲಿಕಾಂ ಲೈಸೆನ್ಸ್ ಪಡೆದ ಹಲವಾರು ಕಂಪನಿಗಳು ಮಾಯವಾಗಿ, ಈ ಎರಡು ಕಂಪನಿಗಳ ಏಕಸ್ವಾಮ್ಯ ಈ ಕ್ಷೇತ್ರವನ್ನು ಆಳುತ್ತಿದೆ. ಇದೇ ಸಮಯದಲ್ಲಿ ಟೆಲಿಕಾಂ ಕ್ಷೇತ್ರದ ಸಾರ್ವಜನಿಕ ಉದ್ಯಮ ಬಿ.ಎಸ್.ಎನ್.ಎಲ್.ನ್ನು ಹಾಳುಗೆಡವಲಾಗುತ್ತಿದೆ. ಅದರ ಸಾಲಗಳನ್ನು ಹೀಗೆ (ವಿ.ಐ ಕಂಪನಿಗೆ ಮಾಡಿದಂತೆ) ಪುರ‍್ರಚಿಸಬೇಕು, ಅದರ ಮೂಲಸೌಕರ್ಯ ವಿಸ್ತರಿಸಲು ಬಂಡವಾಳ ಒದಗಿಸಬೇಕು ಎಂಬ ಕೋರಿಕೆಯ ಕುರಿತು ಇದೇ ಸರಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಅದಕ್ಕೆ ಅಗತ್ಯ ಮೊಬೈಲ್ 3 ಜಿ, 4ಜಿ ಲೈಸೆನ್ಸನ್ನೂ ಸೂಕ್ತ ಸಮಯದಲ್ಲಿ ಕೊಟ್ಟಿಲ್ಲ. ಇವನ್ನು ಜಾರಿ ಮಾಡಲು ಬೇಕಾದ ಉಪಕರಣಗಳ ಖರೀದಿಯನ್ನು ಮಾಡಲು ಅಡೆತಡೆಗಳನ್ನು ಹಾಕುತ್ತಿದೆ.

ಟೆಲಿಕಾಂ ಕ್ಷೇತ್ರದ ಸುಧಾರಣೆಗಳ ಹೆಸರಲ್ಲಿ ಖಾಸಗಿ ಕಂಪನಿಗಳಿಗೆ ಲೈಸೆನ್ಸ್ ನೀಡುವಲ್ಲಿ ಹಗರಣಗಳ ಸರಮಾಲೆಯಿಂದ ಈ ಕ್ಷೇತ್ರ ಬಾಧಿತವಾಗುತ್ತಾ ಬಂದಿದೆ. ಬೆಡ್ ರೂಂ ನಲ್ಲಿ ನೋಟುಗಳ ಸೂಟ್ ಕೇಸುಗಳು ತುಂಬಿದ್ದ ಕುಖ್ಯಾತ 1994ರ ‘ಸುಖರಾಂ ಹಗರಣ’ದಿಂದ ಈ ಸರಮಾಲೆ ಆರಂಭವಾಗುತ್ತದೆ. ಇದು ಆಗ ನಡೆದ ಹರಾಜಿನಲ್ಲಿ ‘ಪ್ರಕರಣವಾರು’ ಲೈಸೆನ್ಸ್ ನೀಡುವ ಹಗರಣದ ಫಲವಾಗಿತ್ತು.

ಇದರ ನಂತರ ವಾಜಪೇಯಿ ಸರಕಾರದ ಅವಧಿಯಲ್ಲಿ 1998ರಲ್ಲಿ ಪ್ರಮೋದ ಮಹಾಜನ್ ಅವರ ಹಗರಣದ ಸರದಿಯಾಗಿತ್ತು. ಅವರ ಹಗರಣವೇ ಇಂದಿನ ದುಸ್ಥಿತಿಯ ಮೂಲ. ಖಾಸಗಿ ಕಂಪನಿಗಳಿಗೆ ಲೈಸೆನ್ಸ್ ಕೊಡುವಾಗ ಮಾಡಿಕೊಂಡ ಒಪ್ಪಂದದಲ್ಲಿ ಇದ್ದ ಲೈಸೆನ್ಸ್ ಫೀ ಪಾವತಿ ಮಾಡದಿದ್ದ ಕಂಪನಿಗಳ ಮೇಲೆ ಕಾರ್ಯಾಚರಣೆಯ ಬದಲು, ಒಪ್ಪಂದವನ್ನೇ ಬದಲಾಯಿಸಲಾಯಿತು. ಲೈಸೆನ್ಸ್ ಶುಲ್ಕದ ಬದಲು ಸೇವೆಯಿಂದ ಬರುವ ಆದಾಯ (ರೆವಿನ್ಯೂ)ದ ಭಾಗವನ್ನು ಹಂಚಿಕೊಳ್ಳಲು ಒಪ್ಪಂದವಾಯಿತು. ಅವು ಟೆಲಿಕಾಂ ಸೇವೆಯಿಂದ ಬರುವ ಆದಾಯ ಎಷ್ಟ್ಟು ಯಾವುದು ಎಂಬುದರ ಕುರಿತು ವಿವಾದ ಎಬ್ಬಿಸುತ್ತಾ ಕಾಲಹರಣ ಮಾಡಿದವು. ಅದೇ ಸಮಯದಲ್ಲಿ ಬ್ಯಾಂಕುಗಳಿಂದ ಭಾರಿ ಮೊತ್ತದಲ್ಲಿ ಸಾಲ ಮಾಡಿ ಟೆಲಿಕಾಂ ಜಾಲವನ್ನು ವಿಸ್ತರಿಸಿದವು. ಸರಕಾರಕ್ಕೆ ಆದಾಯದ ಭಾಗವನ್ನು ಮುಂದೆ ಮನ್ನಾ ಮಾಡಿಸಿಕೊಳ್ಳಬಹುದು ಎಂದು ಕಂಪನಿಗಳು ಬಹುಶಃ ಆಗ ಲೆಕ್ಕ ಹಾಕಿದ್ದವು ಅಂತ ಕಾಣುತ್ತದೆ. ಬಹುಶಃ ಸರಕಾರದ ಒಂದು ಭಾಗದೊಂದಿಗೆ ಇಂತಹ ಒಳ-ಒಪ್ಪಂದವೂ ಆಗಿರಬಹುದು.

ಕಳೆದ 15 ªರ್ಷಗಳಲ್ಲಿ ವಿ.ಐ ನಲ್ಲಿ ವಿಲೀನವಾದ ಹಿಂದಿನ ಕಂಪನಿಗಳು 10-15 ವರ್ಷಗಳ ಕಾಲ ಸರಕಾರಕ್ಕೆ ಪಾವತಿ ಮಾಡಬೇಕಾಗಿದ್ದ ಆದಾಯದ ಭಾಗ ಮತ್ತು ಬಾಕಿಯ ಮೇಲಿನ ಬಡ್ಡಿ ಈಗ ದೊಡ್ಡ ಮೊತ್ತವಾಗಿ ಕೂತಿದೆ. ಇದರಲ್ಲಿ ಮುಕ್ಕಾಲು ಭಾಗ ಬಡ್ಡಿಯೇ. ಈ ಅವಧಿಯಲ್ಲಿ ಕಂಪನಿಗಳು ಆದಾಯದ ಲೆಕ್ಕಾಚಾರದ ವಿಧಾನದ, ಬಾಕಿಯ ಮೊತ್ತದ ಪ್ರಮಾಣದ, ಕಂಪನಿ ಇದನ್ನು ಪಾವತಿ ಮಾಡದ ಸ್ಥಿತಿಯ ಕುರಿತು ಸರಕಾರದೊಡನೆ ವಿವಾದ ಎಬ್ಬಿಸುತ್ತಾ, ಅದನ್ನು ಕೋರ್ಟುಗಳಲ್ಲಿ ಚರ್ಚಿಸುತ್ತಾ ಕಾಲಹರಣ ಮಾಡುತ್ತಿದ್ದವು. ಈ ಖಾಸಗಿ ಕಂಪನಿಗಳ ವಾದಗಳನ್ನು ಸುಪ್ರೀಂ ಕೋರ್ಟು ತಳ್ಳಿ ಹಾಕಿ ಈ ಮೊತ್ತವನ್ನು ಒಪ್ಪಂದದ ಪ್ರಕಾರ ಪಾವತಿ ಮಾಡಬೇಕು ಎಂದು 2019ರಲ್ಲಿ ಅಂತಿಮ ತೀರ್ಪು ಕೊಟ್ಟಿತು. ಇದು ಖಾಸಗಿ ಟೆಲಿಕಾಂ ಕಂಪನಿಗಳನ್ನು, ವಿಶೇಷವಾಗಿ ವಿ.ಐ ಕಂಪನಿಯನ್ನು ಬಿಕ್ಕಟ್ಟಿಗೆ ತಳ್ಳಿದೆ.

ಈ ಪರಿಸ್ಥಿತಿ ಈಗ ಸರಕಾರಕ್ಕೆ ಇಕ್ಕಟ್ಟನ್ನು ತಂದಿದೆ. ಖಾಸಗೀಕರಣದ ಮಂತ್ರ ಹಾಡುತ್ತಾ ಬಂದಿರುವ ಎಲ್ಲರೂ (ಮೋದಿ, ಬಿಜೆಪಿ ಮತ್ತು ಇತರ ಎಲ್ಲ ನವ-ಉದಾರವಾದಿ ನೀತಿಗಳ ಬೆಂಬಲಿಗರು) ಹೇಳುತ್ತಿದ್ದದ್ದು “ಸರಕಾರಿ ಕಂಪನಿಗಳು ಅದಕ್ಷತೆ, ಭ್ರಷ್ಟಾಚಾರದ ಕೂಪಗಳಾಗಿ ಬಿಡುತ್ತವೆ, ಸಂಪನ್ಮೂಲಗಳನ್ನು ಪೋಲು ಮಾಡುತ್ತವೆ; ಖಾಸಗಿ ಹೂಡಿಕೆದಾರರು ಕಂಪನಿಗಳನ್ನು ದಕ್ಷತೆಯಿಂದ ಭ್ರಷ್ಟ-ಮುಕ್ತವಾಗಿ ನಡೆಸುತ್ತಾರೆ, ಸಂಪತ್ತು ಸೃಷ್ಟಿಸುತ್ತಾರೆ” ಹಾಗಾದರೆ ವಿ.ಐ ಮತ್ತು ಈ ಹಿಂದೆ ಹಲವು ಖಾಸಗಿ ಟೆಲಿಕಾಂ ಕಂಪನಿಗಳು (ಇಂತಹ ಹಲವು ಕಂಪನಿಗಳು ವಿಲೀನವಾಗಿಯೇ ವಿ.ಐ ಆಗಿದ್ದು) ದಿವಾಳಿಯಾಗುವ ಸ್ಥಿತಿಗೆ ಬಂದಿದ್ದು ಯಾಕೆ?

ಖಾಸಗಿ ಅದಕ್ಷತೆ, ಭ್ರಷ್ಟ್ಟಾಚಾರಗಳಿಂದಾಗಿ ದಿವಾಳಿಯಾಗುವ ಸ್ಥಿತಿ ಬಂದರೆ ಅವನ್ನು ದಿವಾಳಿಯಾಗಲು ಯಾಕೆ ಬಿಡಬಾರದು? ಅವುಗಳ ಸಂರಕ್ಷಣೆಗೆ ಧಾವಿಸುವುದು ಯಾಕೆ?

ಈಗಿನ ಸರಕಾರ ಮತ್ತು ಹಿಂದಿನ ಸರಕಾರಗಳಿಗೂ ಉದ್ಯಮ, ಅದರ ಗ್ರಾಹಕರ ಸೇವೆಗಳ ದೇಶದ ಹಿತಕ್ಕಿಂತ ದೈತ್ಯ ಉದ್ಯಮಿಗಳ ಹಿತರಕ್ಷಣೆ ಆದ್ಯತೆಯದ್ದು ಎಂಬುದು ಸ್ಪಷ್ಟ. ಆದರೆ ಟೆಲಿಕಾಂ ಕ್ಷೇತ್ರದಲ್ಲಿ ಇನ್ನೂ ಕೆಲವು ಸಮಸ್ಯೆಗಳು ಇವೆ. ವಿ.ಐ ದಿವಾಳಿ ಆದರೆ 27 ಕೋಟಿ ಗ್ರಾಹಕರು ಅತಂತ್ರವಾಗುತ್ತಾರೆ. ಅವರನ್ನು ಒತ್ತೆಯಿಟ್ಟುಕೊಂಡೇ ವಿ.ಐ ಸರಕಾರದೊಂದಿಗೆ ಜೋರಾಗಿ ಚೌಕಾಸಿ ಮಾಡಿದೆ. ‘ಸಾಲ ಮನ್ನಾ ಮಾಡಿ, ಇನ್ನಷ್ಟ್ಟು ಸಾಲ ಕೊಡಿ; ಇಲ್ಲವೆ ಸಾಲವನ್ನು ಶೇರು ಆಗಿ ಬದಲಾಯಿಸಿ, ಇನ್ನಷ್ಟು ಸಾಲ ಕೊಡಿ, ಕಂಪನಿಯನ್ನು ನಮ್ಮ ನಿಯಂತ್ರಣದಲ್ಲಿಡಲು ಬಿಡಿ’ ಎಂಬುದು ಚೌಕಾಸಿಯಾಗಿತ್ತು. ಈ ಒತ್ತಡ, ಚೌಕಾಸಿಗಳಿಗೆ ಮಣಿದು ಸರಕಾರ ಎರಡನೆಯ ಒತ್ತಾಯವನ್ನು ಆಯ್ಕೆ ಮಾಡಿದೆ ಎಂಬುದು ಸ್ಪಷ್ಟ..

ಸರಕಾರಕ್ಕೆ ಇನ್ನೊಂದು ಪೇಚಿನ ಪ್ರಶ್ನೆಯಿದೆ. ಉತ್ಕೃಷ್ಟ ಸಂಪರ್ಕ ಜಾಲ ದೇಶದ ಭದ್ರತೆ, ಡಿಜಿಟಲ್ ಆರ್ಥಿಕತೆಯ ಆಧಾರವಾಗಿರುವ ದೃಷ್ಟಿಯಿಂದ ಟೆಲಿಕಾಂ ಆಯಕಟ್ಟಿನ ಕ್ಷೇತ್ರ. ಈ ಕ್ಷೇತ್ರದಲ್ಲಿ ಎರಡು ಕಂಪನಿಗಳ ಏಕಸ್ವಾಮ್ಯ ಸೇವೆಯ ಗುಣಮಟ್ಟ, ಬೆಲೆಗಳ ದೃಷ್ಟಿಯಿಂದ ಒಳ್ಳೆಯದಲ್ಲ. ಮೂರನೆಯ ಕಂಪನಿಯ ಅಗತ್ಯವಿದೆ. ಸರಿ.ಇದಕ್ಕೆ ಸರಕಾರದ ಬಳಿ ಮೂರು ದಾರಿಗಳಿವೆ.

ಒಂದು : ಆ ಮೂರನೆಯ ಕಂಪನಿಯನ್ನು ಸರಕಾರವೇ ಯಾಕೆ ನಡೆಸಬಾರದು ? ಅಥವಾ
ಎರಡು
: ವಿ.ಐ ದಿವಾಳಿಯಾಗಲು ಬಿಟ್ಟು ಅದರ ಜಾಲವನ್ನು ಬಿ.ಎಸ್.ಎನ್.ಎಲ್ ಗೆ ಕೊಟ್ಟು ಅಗತ್ಯ ಬಂಡವಾಳ ಹೂಡಿ ಯಾಕೆ ಬೆಳೆಸಬಾರದು ಅಥವಾ
ಮೂರು : ಸರಕಾರ ನಿಯಂತ್ರಣ ಹೊಂದಿರುವ ವಿ.ಐ ಮತ್ತು ಬಿ.ಎಸ್.ಎನ್.ಎಲ್ ಎರಡೂ ಕಂಪನಿಗಳನ್ನು ವಿಲೀನಗೊಳಿಸಿ ಇನ್ನಷ್ಟು ಬಂಡವಾಳ ಹೂಡಿ ಯಾಕೆ ನಡೆಸಬಾರದು?

ಇಲ್ಲಿಯೇ ಈ ಸರಕಾರದ, ಪ್ರಧಾನಿ ಮೋದಿ ಅವರ “The Government has no business to be in business”(ಯಾವುದೇ ಉದ್ಯಮ ನಡೆಸುವುದು ಸರಕಾರದ ಉಸಾಬರಿಯಲ್ಲ)” ವೆಂಬ ‘ಪವಿತ್ರ’  ತತ್ವ ಅಡ್ಡ ಬರುತ್ತಿರುವುದು. ಮೇಲೆ ಹೇಳಿದ ಹಾದಿಯನ್ನು ಹಿಡಿದರೆ ಖಾಸಗೀಕರಣದ ಮಂತ್ರ, ನವ-ಉದಾರವಾದಿ ತತ್ವಗಳೆಲ್ಲ (ಈಗಾಗಲೇ ಹಲವಾರು ಬಾರಿ ಖಾಸಗಿ ಕ್ಷೇತ್ರವೇ ಅದಕ್ಷತೆ, ಭ್ರಷ್ಟಾಚಾರದ, ಸಂಪನ್ಮೂಲ ಪೋಲು ಜಗಜ್ಜಾಹೀರಾಗಿದ್ದರೂ) ಬೊಗಳೆಯೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸರಕಾರದ ‘ಚಮಚಾ ಬಂಡವಾಳಶಾಹಿ’ಯ  ಜತೆ ಶಾಮೀಲಾಗುವ ಗುಣ ಸಹ ಅಡ್ಡಿಯಾಗಿದೆ. ಈಗಿನ ಟೆಲಿಕಾಂ ಕ್ಷೇತ್ರದ ಬಿಕ್ಕಟ್ಟು ಸೃಷ್ಟಿಯಾಗಲು ಇನ್ನೊಂದು ಕಾರಣ ಅಂಬಾನಿ ಅವರ ಜಿಯೊ ಮಾರುಕಟ್ಟೆಯನ್ನು ಪ್ರವೇಶಿಸಿ ಬೆಲೆಗಳ ಯುದ್ಧ ಆರಂಭಿಸಿದ್ದು ಎಂಬುದನ್ನೂ ಮರೆಯುವಂತಿಲ್ಲ. ಏರ್ ಟೆಲ್ ಮತ್ತು ಜಿಯೊ ಆರ್ಥಿಕ ಸ್ಥಿತಿ ಸಹ ಅಷ್ಟೇನೂ ಚೆನ್ನಾಗಿಲ್ಲ. ಈ ಸನ್ನಿವೇಶದಲ್ಲಿ ಮೇಲಿನ ಮೂರರಲ್ಲಿ ಒಂದು ಹಾದಿ ಹಿಡಿಯಬೇಕು ಎಂದು ಬಿ.ಎಸ್.ಎನ್.ಎಲ್ ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ. ಇಡೀ ದೇಶ ಅವರ ಜತೆ ದನಿಗೂಡಿಸಬೇಕಾಗಿದೆ. ಪ್ರಧಾನಿ ಮೋದಿ ಅವರು, ಬೊಗಳೆ ಎಂದು ಸಿದ್ಧವಾಗಿರುವ ತಮ್ಮ ಪವಿತ್ರ ತತ್ವ ಮತ್ತು ಮೂಲಭೂತವಾದಿ ನವ-ಉದಾರವಾದಕ್ಕೆ ತಿಲಾಂಜಲಿ ಕೊಡಬೇಕೆಂದು ಒತ್ತಾಯಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *