ಹಾಸನ: ಮುನಿಸಿಪಲ್ ಕಾರ್ಮಿಕರ ಸೇವೆ ಕಾಯಂ ಮಾಡುವಂತೆ ಒತ್ತಾಯಿಸಿ ಸಫಾಯಿ ಕರ್ಮಚಾರಿ/ ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಆಶ್ರಯದಲ್ಲಿ ರಾಜ್ಯಾದ್ಯಂತ ಪೌರಕಾರ್ಮಿಕರು ಆರಂಭಿಸಿರುವ ಅನಿರ್ದಿಷ್ಟ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದು, ಇಂದು(ಜುಲೈ 2) ಕಾರ್ಮಿಕರು ವಿಷ ಸೇವನೆ ಮಾಡಲು ಮುಂದಾದವರನ್ನು ಸಂಘಟನೆ ಮುಖಂಡರು ಮತ್ತು ಪೊಲೀಸರು ತಡೆದರು.
ರಾಜ್ಯದ ಎಲ್ಲಾ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಲೋಡರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ, ಉದ್ಯಾನವನ, ಸ್ಮಶಾನ, ಘನ ತ್ಯಾಜ್ಯ ಘಟಕ, ಯು.ಜಿ.ಡಿ. ನೀರು ಸಂಸ್ಕರಣಾ ಘಟಕದ ಕಾರ್ಮಿಕರು, ನೀರು ಸರಬರಾಜು ನೌಕರರನ್ನು ಒಂದೇ ಬಾರಿಗೆ ಕಾಯಂಗೊಳಿಸಲು ಒತ್ತಾಯಿಸಿ ಜುಲೈ 1 ರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ವಚ್ಛತಾ ಕಾರ್ಯ ಸ್ಥಗಿತಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದೆ.
ಸೋಮವಾರದವರೆಗೂ ಪ್ರತಿಭಟನೆ ಮುಂದುವರಿಕೆ
ಪೌರಕಾರ್ಮಿಕರ ಬೇಡಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಘಟನೆ ಮುಖಂಡರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದರೂ ಪರಿಹಾರ ಸಿಕ್ಕಿಲ್ಲ. ಶುಕ್ರವಾರದ ಮಾತುಕತೆಯಲ್ಲಿ ಪೌರಕಾರ್ಮಿಕರ ಬೇಡಿಕೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ, ಬೇಡಿಕೆಗಳ ಈಡೇರಿಕೆ ಸಂಬಂಧ ಕರಡು ತಯಾರಿಸಿ ಶನಿವಾರ ಸಭೆಯಲ್ಲಿ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸಂಘಟನೆ ಮುಖಂಡರಿಗೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಗೆ ವ್ಯತಿರಿಕ್ತವಾಗಿ ಅಧಿಕಾರಿಗಳು ಕರಡು ತಯಾರಿಸಿದ್ದ ಹಿನ್ನೆಲೆಯಲ್ಲಿ ಸಂಘಟನೆ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಈ ಮಧ್ಯೆ ಮುಖ್ಯಮಂತ್ರಿ ಹೈದರಾಬಾದ್ ಪ್ರವಾಸದಲ್ಲಿದ್ದು, ಸೋಮವಾರ ಹಿಂತಿರುಗುವವರಿದ್ದಾರೆ. ಹಾಗಾಗಿ ಅವರು ರಾಜ್ಯಕ್ಕೆ ಆಗಮಿಸಿ ಪೌರ ಕಾರ್ಮಿಕರ ಬಗ್ಗೆ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸಲು ಪೌರ ಕಾರ್ಮಿಕರ ಸಂಘಟನೆಗಳು ತೀರ್ಮಾನಿಸಿವೆ ಎಂದು ಸಿಐಟಿಯು ನೇತೃತ್ವದ ಪೌರ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.
ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ: ವಿಷ ಸೇವಿಸಲು ಯತ್ನಿಸಿದ ಪೌರಕಾರ್ಮಿಕರು pic.twitter.com/M13SMpcCNZ
— Janashakthi Media (@janashakthikw) July 2, 2022
ಅಧ್ಯಕ್ಷರ ಭೇಟಿ
ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್.ಮೋಹನ್ ಭೇಟಿ ನೀಡಿ ಕಾರ್ಮಿಕರ ಅಹವಾಲು ಆಲಿಸಿದರು. ಗುತ್ತಿಗೆ ಕಾರ್ಮಿಕರ ಬಗ್ಗೆ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿದ್ದು, ಗುತ್ತಿಗೆ ನೌಕರರಿಗೆ ಸಂಬಳ ನೀಡುವ ಹೊಣೆಗಾರಿಕೆ ಗುತ್ತಿಗೆ ಪಡೆದ ಏಜೆನ್ಸಿಯದು. ಅವರಿಗೆ ನಿನ್ನೆಯೇ ಸಂಬಳ ನೀಡುವಂತೆ ಸೂಚನೆ ನೀಡಲಾಗಿದೆ. ನಗರಸಭೆ ಕಡೆಯಿಂದ ಏಜೆನ್ಸಿಯವರಿಗೆ ನೀಡಬೇಕಾದ ಮೊತ್ತವನ್ನು ನೀಡಲಾಗಿದೆ. ಇಂದು ಅಥವಾ ಸೋಮವಾರ ಏಜೆನ್ಸಿಯವರು ಸಂಬಳ ನೀಡುತ್ತಾರೆ. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದರು. ಆದರೆ ಅಧ್ಯಕ್ಷರ ಮನವಿಗೆ ಸ್ಪಂದಿಸದ ಪೌರಕಾರ್ಮಿಕರು ಪ್ರತಿಭಟನೆ ಮುಂದುವರಿಸಿದರು.