ಚೆನ್ನೈ: ನೆಚ್ಚಿನ ಕ್ರಿಕೆಟಿಗನ ವಿರುದ್ಧ ಅಪಹಾಸ್ಯ ಮಾಡಿ ಕೆಟ್ಟದಾಗಿ ಮಾತನಾಡಿದ್ದ ಸ್ನೇಹಿತನನ್ನು ಹುಚ್ಚು ಅಭಿಮಾನಿಯೊಬ್ಬ ಬಾಟಲಿಯಿಂದ ಇರಿದುಕೊಂದ ಘಟನೆ ನಡೆದಿದ್ದು, ಕ್ರಿಕೆಟ್ ಲೋಕವನ್ನು ಬೆಚ್ಚಿಬೀಳಿಸಿದೆ. ಗುರುವಾರ ಈ ಕೊಲೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದರೂ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಕೊಲೆ ಮಾಡಿರುವ ಯುವಕ ವಿರಾಟ್ ಕೊಹ್ಲಿ ಅಭಿಮಾನಿಯಾದರೆ, ಸಾವಿಗೀಡಾದವ ರೋಹಿತ್ ಶರ್ಮಾ ಅಭಿಮಾನಿ.
ಕೊಲೆ ಆರೋಪದ ಮೇಲೆ 21 ವರ್ಷದ ಎಸ್.ಧರ್ಮರಾಜ್ ಎಂಬ ಯುವಕನನ್ನು ಬಂಧಿಸಲಾಗಿದೆ. ಮೃತ ಯುವಕನನ್ನು ಪಿ. ವಿಘ್ನೇಶ್ (24) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರಿಯಾಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರಾದ ಇಬ್ಬರೂ ಅಪ್ಪಟ ಕ್ರಿಕೆಟ್ ಅಭಿಮಾನಿಗಳಾಗಿದ್ದರು. ಐಟಿಐ ಮುಗಿಸಿದ್ದ ವಿಘ್ನೇಶ್ ಸಿಂಗಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ವಿಘ್ನೇಶ್ ಮತ್ತು ಧರ್ಮರಾಜ್ ಮಂಗಳವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ಮದ್ಯ ಸೇವಿಸಿ, ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಆಟಗಾರ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಗಲಾಟೆ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ವಿಘ್ನೇಶ್ ಅಪಹಾಸ್ಯ ಮಾಡಿದ್ದರು. ಇದರಿಂದ ಕೋಪಗೊಂಡ ಧರ್ಮರಾಜ್, ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಜತೆಗೆ ಬ್ಯಾಟ್‌ನಿಂದ ತಲೆಗೆ ಹೊಡೆದಿದ್ದಾನೆ. ಘಟನೆ ಬಳಿಕ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.