– ನಾ ದಿವಾಕರ
ಹತ್ಯೆ-ಅತ್ಯಾಚಾರಕ್ಕೀಡಾದ ಮಹಿಳೆ ರಾಜಕೀಯ ಅಸ್ತ್ರವಾಗುವುದೇ ವ್ಯಾಧಿಗ್ರಸ್ಥ ಸಮಾಜದ ಸೂಚಕ
ಭಾರತದ ಸಾಂಪ್ರದಾಯಿಕ ಸಮಾಜಗಳಲ್ಲಿ, ಎಲ್ಲ ಮತಗಳಲ್ಲೂ ಸಹ, ಮಹಿಳೆಗೆ ಗೌರವಯುತ ಸ್ಥಾನ ನೀಡಲಾಗಿದೆ ಎಂದು ನಂಬಲಾಗುತ್ತದೆ. ವಾಸ್ತವಿಕ ನೆಲೆಯಲ್ಲಿ ನೋಡಿದಾಗ ಇದು ಪೂರ್ಣ ಸತ್ಯ ಎನಿಸುವುದಿಲ್ಲ. ಏಕೆಂದರೆ ಯಾವುದೇ ಮತೀಯ ಗಲಭೆಗಳಾದರೂ ಅಲ್ಲಿ ಮೊದಲು ಹಲ್ಲೆಗೊಳಗಾಗಿ, ಬಲಿಯಾಗುವುದು ಮಹಿಳೆಯೇ ಆಗಿರುತ್ತಾಳೆ. ಮತಾಂಧರ ದಾಳಿಗಳನ್ನು ನಿರ್ದೇಶಿಸುವ ಸಂಘಟನೆಗಳು, ಗುಂಪುಗಳು ಸಂಪೂರ್ಣವಾಗಿ ಪುರುಷಾಧಿಪತ್ಯಕ್ಕೆ ಒಳಪಟ್ಟಿರುವುದರೊಂದಿಗೇ ಅನ್ಯ ಮತದ ಸಾಮಾನ್ಯ ಜನರ ಮೇಲೆ ದಾಳಿ ನಡೆಸುವಾಗ, ನಾಲ್ಕು ಗೋಡೆಗಳ ನಡುವೆ ಇರುವ ಮಹಿಳೆಯರೇ ಮೊದಲ ಗುರಿಯಾಗುತ್ತಾರೆ. ಇದೇ ಮಾದರಿಯನ್ನು ವಿವಿಧ ದೇಶಗಳ ನಡುವೆ ನಡೆಯುವ ಯುದ್ಧಗಳಲ್ಲೂ, ಆಂತರಿಕ ನಾಗರಿಕ ಕಲಹಗಳಲ್ಲೂ ಗುರುತಿಸಬಹುದು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂತಹ ಘಟನೆಗಳು ದಾಖಲಾಗಿದ್ದು, ಗೋಧ್ರಾ ನಂತರದ ಗಲಭೆಯ ಸಂತ್ರಸ್ತೆಯಾಗಿ ಬಿಲ್ಕಿಸ್ ಬಾನೋ ನಮ್ಮ ನಡುವಿನ ಸಾಕ್ಷಿಯಾಗಿದ್ದಾರೆ. ದೌರ್ಜನ್ಯ
ಹೀಗೆ ಮಹಿಳೆಯೇ ಏಕೆ ಗುರಿಯಾಗುತ್ತಾಳೆ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ. ಸಮಾಜದ ಮೇಲೆ ತಮ್ಮ ಪಾರಮ್ಯ-ಆಧಿಪತ್ಯ ಸಾಧಿಸುವ ಬಲಾಢ್ಯ ವರ್ಗಗಳ ಹಿಂದೆ ಪಿತೃಪ್ರಧಾನ ವ್ಯವಸ್ಥೆಯ ಆಲೋಚನಾ ಕ್ರಮಗಳು ಸಕ್ರಿಯವಾಗಿರುತ್ತವೆ. ʼಮಹಿಳಾ ಸಬಲೀಕರಣ ʼ ಎಂಬ ಆಡಳಿತಾತ್ಮಕ ಔದಾತ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಹಿಳಾ ಸಂಕುಲದ ಸಾಮಾಜಿಕ ಸ್ಥಾನಮಾನ, ಆರ್ಥಿಕ ಅಂತಸ್ತು ಹಾಗೂ ಸಾಂಸ್ಕೃತಿಕ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ಉಪಕ್ರಮಗಳು ಕಂಡುಬರುತ್ತವೆ. ಕೇಂದ್ರ ಸರ್ಕಾರದ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮವು ಈ ಉದ್ದೇಶದಿಂದಲೇ ಚಾಲ್ತಿಯಲ್ಲಿದ್ದು, ಮಹಿಳೆಗೆ ಶಿಕ್ಷಣ ನೀಡಿದರೆ ಆಕೆ ತನ್ನ ಬದುಕಿನ ಸುಸ್ಥಿರತೆಯನ್ನು ಗಳಿಸಲು ಸಾಧ್ಯ ಎಂಬ ನಂಬಿಕೆ ಕಂಡುಬರುತ್ತದೆ. ಆದರೆ ತಳಮಟ್ಟದ ಗ್ರಾಮೀಣ ಪರಿಸರದಿಂದ ಅತ್ಯುನ್ನತ ಮೆಟ್ರೋಪಾಲಿಟನ್ ನಗರದವರೆಗೂ ಸಾಮಾಜಿಕ ಸ್ಥಿತ್ಯಂತರಗಳನ್ನು ಗಮನಿಸಿದರೆ, ಮಹಿಳೆ ಎಲ್ಲ ಸ್ತರಗಳಲ್ಲೂ ಅತ್ಯಾಚಾರ, ಕೊಲೆ, ದೌರ್ಜನ್ಯ, ತಾರತಮ್ಯಗಳಿಗೆ ಒಳಗಾಗಿರುವುದು ಕಂಡುಬರುತ್ತದೆ. ದೌರ್ಜನ್ಯ
ಸಾಂಸ್ಕೃತಿಕ ವಿಕೃತಿಗಳ ನಡುವೆ
ಇದು ನಮ್ಮ ಸಮಾಜದ Cultural Hypocracy ಯನ್ನು ಸೂಚಿಸುತ್ತದೆ. ಇಂದಿಗೂ ಭಾರತದ ರಾಜಕಾರಣ, ಮಾರುಕಟ್ಟೆ ಹಾಗೂ ಎಲ್ಲ ಸ್ತರಗಳ ಸಾಂಸ್ಕೃತಿಕ ಬದುಕನ್ನು ನಿರ್ದೇಶಿಸುತ್ತಿರುವುದು, ನಿಯಂತ್ರಿಸುತ್ತಿರುವುದು ಪ್ರಾಚೀನ ಮನಸ್ಥಿತಿಯ ಪಿತೃಪ್ರಧಾನತೆಯೇ ಎನ್ನುವುದು ಹಾಥ್ರಸ್, ಖೈರ್ಲಾಂಜಿ, ಸಾಕ್ಷಿ ಮಲ್ಲಿಕ್, ಬಿಲ್ಕಿಸ್ ಬಾನೋ ಪ್ರಕರಣಗಳಲ್ಲಿ, ಮಣಿಪುರದ ಘಟನೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇದೇ ಮನಸ್ಥಿತಿಯನ್ನೇ ಹೊದ್ದುಕೊಂಡು ಮಹಿಳಾ ಸಬಲೀಕರಣದ ಬಗ್ಗೆ ಸಹಾನುಭೂತಿ ತೋರುವ ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಹಲ್ಲೆ- ಹತ್ಯೆ- ಅತ್ಯಾಚಾರಕ್ಕೀಡಾದ ಮಹಿಳೆಯೂ ಸಹ ತನ್ನ ಲಿಂಗತ್ವದ ಅಸ್ಮಿತೆಯನ್ನು ಕಳೆದುಕೊಂಡ ವ್ಯಕ್ತಿಯಾಗಿ ಕಾಣುತ್ತಾಳೆ. ಈ ದಾಳಿಗಳಿಗೆ ಕಾರಣವಾದ ಪುರುಷಾಧಿಪತ್ಯದ ನೆಲೆಗಳಿಗೆ ಯಾವುದೇ ಭಂಗ ತರಲಿಚ್ಚಿಸದ ಪಿತೃಪ್ರಧಾನ ಕೇಂದ್ರಿತ ಅಧಿಕಾರ ರಾಜಕಾರಣವು, ಸಂತ್ರಸ್ತ ಮಹಿಳೆಗೆ ಅನುಕಂಪ ಮತ್ತು ಆರ್ಥಿಕ ಪರಿಹಾರಗಳ ಹೊರತು ಮತ್ತೇನನ್ನೂ ನೀಡಲು ಮುಂದಾಗುವುದಿಲ್ಲ. ನ್ಯಾಯವ್ಯವಸ್ಥೆಯೂ ಇದೇ ಪಿತೃಪ್ರಧಾನತೆಯ ಆಲೋಚನೆಗೊಳಗಾದಾಗ ಸಂತ್ರಸ್ತ ಮಹಿಳೆ ಜೀವನವಿಡೀ ನ್ಯಾಯಕ್ಕಾಗಿ ಹಾತೊರೆಯುವಂತಾಗುತ್ತದೆ ಅಥವಾ ನ್ಯಾಯ ವಂಚಿತಳಾಗುತ್ತಾಳೆ. ರಾಜಸ್ಥಾನದ ಭಾವರಿ ದೇವಿ, ಖೈರ್ಲಾಂಜಿಯ ಭೂತ್‌ಮಾಂಗೆ ಕುಟುಂಬ ಕೆಲವು ನಿದರ್ಶನಗಳು.
ಈ ಹೀನ ಅಥವಾ ಪ್ರಾಚೀನ ಮನಸ್ಥಿತಿಯಿಂದ ಭಾರತೀಯ ಸಮಾಜ ಇಂದಿಗೂ ಹೊರಬಂದಿಲ್ಲ ಎನ್ನುವುದು ಪ್ರತಿಯೊಂದು ಘಟನೆಯಲ್ಲೂ ಗೋಚರಿಸುತ್ತದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಎಂಬ ಯುವತಿ ಫಯಾಜ್ ಎಂಬ ಪರಿಚಿತ ವ್ಯಕ್ತಿಯಿಂದಲೇ ಹತ್ಯೆಗೀಡಾಗಿರುವುದನ್ನು ತೆರೆದ ಮನಸ್ಸಿನಿಂದ ನೋಡಿದಾಗ ಅಲ್ಲಿ ನಮಗೆ ಹಿಂದೂ ಮಹಿಳೆ, ಮುಸ್ಲಿಂ ಹಂತಕ ಕಾಣುವುದಿಲ್ಲ. ಬದಲಾಗಿ ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಕೊಲೆ ಮಾಡಲೂ ಹೇಸದ ಪುರುಷಾಹಮಿಕೆ ಮತ್ತು ಪಾಳೆಗಾರಿಕೆಯ ಮನಸ್ಥಿತಿ ಗೋಚರಿಸುತ್ತದೆ. ಮನುಷ್ಯ ಸಂಬಂಧಗಳಲ್ಲಿ ಪ್ರೀತಿಯನ್ನು ನಿರಾಕರಿಸುವ ಹಕ್ಕು ಸಹಜವಾಗಿ ಇರಬೇಕಾದರೂ, ಭಾರತೀಯ ಸಮಾಜದಲ್ಲಿ ಮಹಿಳೆ ಸದಾ ಕಾಲವೂ ಈ ಹಕ್ಕಿನಿಂದ ವಂಚಿತಳಾಗಿಯೇ ಇದ್ದಾಳೆ. ಮಹಿಳೆಯ ಆಯ್ಕೆ ಸ್ವಾತಂತ್ರ್ಯವನ್ನೇ ಪ್ರಶ್ನಿಸುವ ಪುರುಷ ಸಮಾಜವು ಇರುವವರೆಗೂ ಇಂತಹ ಹತ್ಯೆಗಳು ನಡೆಯುತ್ತಲೇ ಇರುತ್ತವೆ. ಇದರ ಮತ್ತೊಂದು ಆಯಾಮವನ್ನು ಅತ್ಯಾಚಾರಕ್ಕೀಡಾಗಿ ಕೊಲೆಯಾಗುವ ಅಮಾಯಕ ಮಹಿಳೆಯರಲ್ಲಿ ಕಾಣಬಹುದು.
ಹುಬ್ಬಳ್ಳಿಯಂತಹ ಆಧುನಿಕ ನಗರದಲ್ಲಿ, ಒಂದು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇಡೀ ಸಮಾಜದ ಸುಪ್ತ ಪ್ರಜ್ಞೆಯನ್ನು ಎಚ್ಚರಿಸಬೇಕಾದ ವಿಚಾರ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಲಯಸ್ಮಿತಾ ಎಂಬ ವಿದ್ಯಾರ್ಥಿನಿ ಇದೇ ರೀತಿ ಹತ್ಯೆಗೀಡಾಗಿದ್ದಳು. ಪವನ್ ಕಲ್ಯಾಣ್ ಎಂಬ ಯುವಕ ಆಕೆಯನ್ನು ಕಾಲೇಜಿನ ಆವರಣದಲ್ಲೇ ಇರಿದು ಹತ್ಯೆ ಮಾಡಿದ್ದ. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ತುಮಕೂರಿನಲ್ಲಿ ಸುಟ್ಟು ಕರಕಲಾದ ಯುವತಿಯ ದೇಹ ಸಿಕ್ಕಿತ್ತು. ರುಕ್ಸಾನಾ ಹೆಸರಿನ ಆ ಯುವತಿಯನ್ನು ಪ್ರೀತಿಸಿ, ಮದುವೆಯೂ ಆಗದೆ ಆಕೆ ಮಗುವಿನ ತಾಯಿಯಾದ ನಂತರದಲ್ಲಿ ಆಕೆಯನ್ನು ಕೊಂದು ಸುಟ್ಟು ಹಾಕಿದ ಘಟನೆಯ ಆರೋಪಿಯ ಹೆಸರು ಪ್ರದೀಪ್. ಒಂದು ದಶಕದ ಹಿಂದೆ ಸೌಜನ್ಯ ಎಂಬ ಯುವತಿ ಧರ್ಮಸ್ಥಳದ ಬಳಿ ಇದೇ ರೀತಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದಳು. ಇಂದಿಗೂ ಸೌಜನ್ಯಳಿಗೆ ನ್ಯಾಯ ದೊರೆತಿಲ್ಲ. ಆಕೆಯ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ.
ಇದನ್ನು ಓದಿ : ಮೃತ ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮಹಿಳಾ ದೌರ್ಜನ್ಯ-ಸಾಮಾಜಿಕ ವ್ಯಾಧಿ
ಇದೇಕೆ ಹೀಗೆ ಆಗುತ್ತಿದೆ ಎಂಬ ಪ್ರಶ್ನೆಗೆ ಅಧಿಕೃತ ದತ್ತಾಂಶಗಳೇ ಉತ್ತರ ನೀಡುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿಯ ಅನುಸಾರ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2011ರಲ್ಲಿ 2,28,650 ರಷ್ಟು ದಾಖಲಾಗಿದ್ದು, 2021ರಲ್ಲಿ ಈ ಸಂಖ್ಯೆ 4,28,278 ಯಷ್ಟಾಗಿದೆ. 2022ರಲ್ಲಿ ಒಂದೇ ವರ್ಷದಲ್ಲಿ 4.45 ಲಕ್ಷ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ 51 ನಿಮಿಷಕ್ಕೊಬ್ಬ ಮಹಿಳೆ ಅತ್ಯಾಚಾರ, ಹತ್ಯೆ, ದೌರ್ಜನ್ಯಕ್ಕೀಡಾಗುತ್ತಿದ್ದಾಳೆ. 2018 ರಿಂದ 2022ರ ನಡುವೆ ಕರ್ನಾಟಕದಲ್ಲೇ 6,160 ಪೋಕ್ಸೋ ಮೊಕದ್ದಮೆಗಳು ದಾಖಲಾಗಿವೆ. ಅಂದರೆ ಅಷ್ಟು ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ನಿರ್ಭಯ ಪ್ರಕರಣದ ಅನಂತರ ಕಾನೂನಾತ್ಮಕವಾಗಿ ಕಠಿಣ ಕಾಯ್ದೆಗಳು ಜಾರಿಯಾಗಿದ್ದರೂ ಸಹ, ಇಂದಿಗೂ ಸಂತ್ರಸ್ತ ಮಹಿಳೆಯರು ನ್ಯಾಯವಂಚಿತರಾಗಿಯೇ ಇರುವುದನ್ನು ಗಮನಿಸಬೇಕಿದೆ. ಆದರೂ ಈ ಅಪರಾಧಗಳು ನಮ್ಮ ಸಾರ್ವಜನಿಕ ಪ್ರಜ್ಞೆಗೆ ಭಂಗ ತಂದಿಲ್ಲ. ಅತ್ಯಾಚಾರ-ಕೊಲೆ ಅಪರಾಧಿಗಳನ್ನು ಸನ್ಮಾನಿಸುವ ಸಮಾಜದಲ್ಲಿ ಈ ಅನ್ಯಾಯಗಳು ಹೇಗೆ ತಾನೇ ಸಂಚಲನ ಮೂಡಿಸುತ್ತವೆ ? ದೌರ್ಜನ್ಯ
ಇದೇ ಪ್ರಶ್ನೆಯನ್ನೇ ಹುಬ್ಬಳ್ಳಿಯ ಘಟನೆಯ ಹಿನ್ನೆಲೆಯಲ್ಲೂ ಎತ್ತಬಹುದು. ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಅಪರಾಧಗಳನ್ನು ಸಾರ್ವತ್ರೀಕರಿಸಿ, ಸಾರ್ವಜನಿಕ ಸ್ವರೂಪ ನೀಡುವುದು ತದನಂತರ ಅದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಒಂದು ಅನಿಷ್ಠ ಮನಸ್ಥಿತಿಯನ್ನು ನೇಹಾ ಕೊಲೆ ಪ್ರಕರಣದಲ್ಲೂ ಕಾಣುತ್ತಿದ್ದೇವೆ. ನಡೆದ ಘಟನೆಯ ಬಗ್ಗೆ ಸಂತಾಪ , ನೊಂದ ಕುಟುಂಬದವರಿಗೆ ಸಾಂತ್ವನ, ಅನುಕಂಪ ವ್ಯಕ್ತಪಡಿಸುವುದಕ್ಕಿಂತಲೂ ಹೆಚ್ಚಾಗಿ ಈ ಘಟನೆಯಲ್ಲಿ ಆರೋಪಿಯ-ಸಂತ್ರಸ್ತೆಯ ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ಗುರುತಿಸುವ ಮೂಲಕ, ಇಂತಹ ಹೃದಯವಿದ್ರಾವಕ ಘಟನೆಯನ್ನೂ ರಾಜಕೀಕರಣಗೊಳಿಸುವ ಒಂದು ಪ್ರಸಂಗವನ್ನು ಹುಬ್ಬಳ್ಳಿಯಲ್ಲಿ ಕಾಣುತ್ತಿದ್ದೇವೆ. ಸೌಜನ್ಯ ಪ್ರಕರಣದಲ್ಲಿ ಈವರೆಗೂ ಸೊಲ್ಲೆತ್ತದ ಧ್ವನಿಗಳೆಲ್ಲವೂ ಈಗ ʼ ಮಹಿಳಾಪರ ʼ ಧ್ವನಿಗಳಾಗಿ ಮೊಳಗುತ್ತಿರುವುದನ್ನು ಗಮನಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಪುರುಷ ಸಮಾಜ ಅತ್ಯಾಚಾರ-ಹತ್ಯೆ-ಕ್ರೌರ್ಯವನ್ನು ಮಹಿಳೆಯ ವಿರುದ್ಧ ಬಳಸಬಹುದಾದ ಅಸ್ತ್ರದಂತೆ ಬಳಸಿದರೆ, ರಾಜಕೀಯ ಪಕ್ಷಗಳು ಇಂತಹ ಕ್ರೂರ ಘಟನೆಗಳನ್ನೇ ತಮ್ಮ ಚುನಾವಣಾ ಅಸ್ತ್ರದಂತೆ ಬಳಸಲು ಸಜ್ಜಾಗುತ್ತದೆ.
ವಿಶಾಲ ಸಮಾಜದಲ್ಲಿ ಯುವ ಸಮೂಹವು Weaponise ಆಗುತ್ತಿರುವ ವಿದ್ಯಮಾನವನ್ನು ನಾಗರಿಕ ಜಗತ್ತು ಗಂಭೀರವಾಗಿ ಪರಿಗಣಿಸಬೇಕಿದೆ. Weaponisationಗೆ ಒಳಗಾಗುವ ಯುವ ಸಮೂಹ ಕ್ರೌರ್ಯವನ್ನು ಮೈಗೂಡಿಸಿಕೊಳ್ಳುತ್ತದೆ. ಹಿಂಸೆಯನ್ನು ಸ್ವೀಕಾರಾರ್ಹ ಎಂದು ಭಾವಿಸುತ್ತದೆ. ಇಂತಹ ಮನಸ್ಥಿತಿಯೇ ಮತೀಯ ರಾಜಕಾರಣಕ್ಕೆ, ಮತಾಂಧರಿಗೆ ಕಾಲಾಳುಪಡೆಗಳನ್ನು ಒದಗಿಸುತ್ತದೆ. ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾತ್ಮಕ ಕಾರಣಗಳಿಗಾಗಿ ಯುವ ಸಂಕುಲದ ನಡುವೆ ಕ್ರೌರ್ಯ ಮತ್ತು ಹಿಂಸಾತ್ಮಕ ಮನೋಭಾವವನ್ನು ಬಿತ್ತುತ್ತಾ ಬಂದಿರುವ ರಾಜಕೀಯ ಪಕ್ಷಗಳು, ಮತೀಯ ಸಂಘಟನೆಗಳು, ಮೂಲಭೂತವಾದಿಗಳು ಫಯಾಜ್‌ನಂತಹ, ಪ್ರದೀಪನಂತಹ, ಪವನ್ ಕಲ್ಯಾಣ್‌ನಂತಹ ಯುವಕರನ್ನು ಸೃಷ್ಟಿಸುತ್ತಲೇ ಇರುವುದನ್ನು ಸಮಾಜ ಮೌನವಾಗಿ ಗಮನಿಸುತ್ತಿರುವುದು ವಿಷಾದಕರ. ಪಿತೃಪ್ರಧಾನ ಮನಸ್ಥಿತಿಯನ್ನು ಗಟ್ಟಿಗೊಳಿಸಲು ನೆರವಾಗುವ ಈ Weaponisation ಪ್ರಕ್ರಿಯೆಯ ಪರಿಣಾಮವಾಗಿ, ಪುರುಷ ಸಮಾಜದ ದೃಷ್ಟಿಯಲ್ಲಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಮುಂತಾದ ಕ್ರೂರ ನಡವಳಿಕೆಗಳು ಮಹಿಳೆಯನ್ನು ಅಧೀನದಲ್ಲಿರಿಸಿಕೊಳ್ಳುವ ಅಸ್ತ್ರಗಳಾಗಿ ಕಾಣುತ್ತವೆ. ದೌರ್ಜನ್ಯ
ವ್ಯಕ್ತಿ-ಅಸ್ಮಿತೆ-ಮಾನವ ಘನತೆ
ಇಡೀ ಸಮಾಜವನ್ನು ಜಾತಿ, ಮತ, ಧರ್ಮದ ಅಸ್ಮಿತೆಗಳು ಅಡ್ಡಡ್ಡಲಾಗಿ ಸೀಳಿರುವ ಸಂದರ್ಭದಲ್ಲಿ, ಇಂತಹ ಯಾವುದೇ ಘಟನೆಗಳಾದರೂ ಸಂತ್ರಸ್ತರನ್ನು-ಆರೋಪಿಯನ್ನು ಅಸ್ಮಿತೆಯ ನೆಲೆಯಲ್ಲೇ ಗುರುತಿಸುವ ಒಂದು ಮನಸ್ಥಿತಿಯೂ ನಾಗರಿಕ ವಲಯವನ್ನು ಆವರಿಸಿರುವುದು ವರ್ತಮಾನ ಭಾರತದ ಅತಿ ದೊಡ್ಡ ದುರಂತ. ನೇಹಾ ಎಂಬ ಯುವತಿಯ ಸಾವು ನಾಗರಿಕರ ನಡುವೆ ಆಂತರಿಕ ವೇದನೆಯನ್ನು ಹೆಚ್ಚಿಸಬೇಕು. ಆದರೆ ರಾಜಕೀಯ ಪಕ್ಷಗಳಿಗೆ ಆಕೆಯ ಅಸ್ಮಿತೆಯೇ ಮುಖ್ಯವಾಗಿ, ಚುನಾವಣೆಯಲ್ಲಿ ಬಳಕೆಯಾಗಬಹುದಾದ ವಸ್ತು ಆಗಿಬಿಡುತ್ತದೆ. ಮೃತ ನತದೃಷ್ಟೆ ನೇಹಾ ನಿಮಿತ್ತವಾಗಿಬಿಡುತ್ತಾಳೆ. ಬಿಜೆಪಿ ಈ ಕ್ಷುದ್ರ ರಾಜಕಾರಣದಲ್ಲಿ ತೊಡಗಿದೆ. ಹತ್ಯೆಗೀಡಾದ ಮಹಿಳೆಗೆ ನ್ಯಾಯ ಒದಗಿಸಲು ಹೋರಾಡಬೇಕಾದ ಸಮಾಜ, ಆ ಮಹಿಳೆಯ ಅಸ್ಮಿತೆಯನ್ನೇ ಪ್ರಧಾನವಾಗಿಟ್ಟುಕೊಂಡು ಪ್ರತಿಭಟನೆ ನಡೆಸುವುದು, ವ್ಯಕ್ತಿ ಗೌರವ ಮತ್ತು ಘನತೆಗೆ ಅಪಚಾರ ಮಾಡಿದಂತಲ್ಲವೇ ? ಇದು ನಾಗರಿಕ ಎಂದು ಕರೆದುಕೊಳ್ಳುವ ಒಂದು ಸುಶಿಕ್ಷಿತ ಸಮಾಜವನ್ನು ಕಾಡಬೇಕಾದ ಪ್ರಶ್ನೆ. ದೌರ್ಜನ್ಯ
ಇಂತಹ ಒಂದು ಸಮಾಜದಲ್ಲಿ ಮರೆಯಾಗಿರುವ ಲಿಂಗ ಸೂಕ್ಷ್ಮತೆ-ಸಂವೇದನೆಯನ್ನು ಮರಳಿ ಸ್ಥಾಪಿಸುವ ಬಗ್ಗೆ ಪ್ರಜ್ಞಾವಂತ ಸಮಾಜ ಗಂಭೀರ ಆಲೋಚನೆ ಮಾಡಬೇಕಿದೆ. ಮಹಿಳಾ ಸಬಲೀಕರಣ ಎಂಬ ಆಡಳಿತಾತ್ಮಕ ಘೋಷಣೆಯಲ್ಲಿ ವ್ಯಕ್ತವಾಗುವ ಲಿಂಗ ಸೂಕ್ಷ್ಮತೆ, ಪುರುಷಾಧಿಪತ್ಯದ ನೆಲೆಯಲ್ಲಿ ಕಳೆದುಹೋಗುತ್ತದೆ ಎನ್ನುವುದನ್ನು ಇತಿಹಾಸವೇ ನಿರೂಪಿಸಿದೆ. ಆದರೆ ಡಿಜಿಟಲ್ ಯುಗದಲ್ಲಿರುವ ಆಧುನಿಕ ಭಾರತವು ಚುನಾವಣೆಗಳ ಲಾಭನಷ್ಟ ಲೆಕ್ಕಾಚಾರದಲ್ಲಿ ವಸ್ತುವಾಗಿಬಿಡುವ ನೇಹಾ ಅಥವಾ ಯಾವುದೇ ಸಂತ್ರಸ್ತ ಮಹಿಳೆಯ ಅಸ್ತಿತ್ವವನ್ನು ಗುರುತಿಸಬೇಕಲ್ಲವೇ ? ತನ್ಮೂಲಕ ಮಹಿಳಾ ಘನತೆಯನ್ನು ಗುರುತಿಸಬೇಕಲ್ಲವೇ ? ಈ ಗುರುತಿಸುವಿಕೆಗೆ ಪಿತೃಪ್ರಧಾನ ಮನಸ್ಥಿತಿಯೇ ಅಡ್ಡಿಯಾಗಿದೆ. ಹುಬ್ಬಳ್ಳಿ, ತುಮಕೂರು, ಬೆಂಗಳೂರು ಈ ಘಟನೆಗಳಲ್ಲಿ ಅಡಗಿರುವ ಕ್ರೌರ್ಯ, ಯುವ ಸಂಕುಲದ Weaponisation, ಸಮಾಜವನ್ನು ಆವರಿಸಿರುವ ಪಿತೃಪ್ರಧಾನತೆ, ಸುಶಿಕ್ಷಿತ ಸಮಾಜದಲ್ಲಿರುವ ಪುರುಷಾಹಮಿಕೆ ಮತ್ತು ರಾಜಕೀಯ ಪಕ್ಷಗಳ ಅಸೂಕ್ಷ್ಮತೆ ಇವೆಲ್ಲವೂ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಿದೆ.
ಫಯಾಜ್‌ಗೆ ಉಗ್ರ ಶಿಕ್ಷೆಯಾಗಬೇಕು, ಸೌಜನ್ಯಳನ್ನು ಕೊಂದವರಿಗೂ ಶಿಕ್ಷೆಯಾಗಬೇಕು. ಕೆಲವು ರಾಜಕೀಯ ನಾಯಕರಿಗೆ ಆರೋಪಿಗಳನ್ನು/ಅಪರಾಧಿಗಳನ್ನು ಎನ್‌ಕೌಂಟರ್ ಮಾಡುವುದೇ ಅಂತಿಮ ನ್ಯಾಯವಾಗಿ ಕಾಣುತ್ತದೆ. ಆದರೆ ನಾವು ಎನ್ಕೌಂಟರ್ ಮಾಡಬೇಕಿರುವುದು ಪಿತೃಪ್ರಧಾನ ಧೋರಣೆಯನ್ನು. ಕೇವಲ ಕಾನೂನಾತ್ಮಕ ಶಿಕ್ಷೆ ಮಹಿಳೆಯನ್ನು ಸುರಕ್ಷಿತವಾಗಿಸುವುದಿಲ್ಲ ಎಂಬ ವಾಸ್ತವವನ್ನೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಸಮಾಜದಲ್ಲಿ ಅಂತರ್ಗತವಾಗಿರುವ ಕ್ರೌರ್ಯ, ಪಿತೃಪ್ರಧಾನ ಪಾಳೆಗಾರಿಕೆ ಮತ್ತು ಅಸೂಕ್ಷ್ಮತೆಗಳನ್ನು ಹೋಗಲಾಡಿಸುವುದು ಪ್ರಥಮ ಆದ್ಯತೆಯಾಗಬೇಕಿದೆ. ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಈ ಪ್ರಾಚೀನ ಮನಸ್ಥಿತಿಯನ್ನು ಹೋಗಲಾಡಿಸಲು ಸಾಧ್ಯ. ರಾಜಕೀಯ ಪಕ್ಷಗಳಿಗೆ ಇದು ಆದ್ಯತೆಯಾಗುವುದಿಲ್ಲ. ಆದರೆ ನಾಗರಿಕ ಸಮಾಜಕ್ಕೆ ಇದು ಮುಖ್ಯವಾಗಬೇಕು. ಅಸ್ಮಿತೆಗಳ ಸುತ್ತಲಿನ ಕ್ಷುದ್ರ ರಾಜಕೀಯ ಪ್ರಜ್ಞೆಯಿಂದ ಹೊರಬಂದು, ಯುವ ಸಮಾಜ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕಿದೆ. ಇದು ವರ್ತಮಾನದ ತುರ್ತು. ದೌರ್ಜನ್ಯ
ಇದನ್ನು ನೋಡಿ : ಸುಳ್ಳಿನಾ ಸರದಾರಾ ಮೋದಿಯ ಸರಕಾರ Janashakthi Media