ಕಾಮರೂಪಿ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ, ಲೇಖಕ ‘ಕಾಮರೂಪಿ’ ಎಂ.ಎಸ್.ಪ್ರಭಾಕರ್ ಇಂದು ನಮ್ಮನ್ನು ಅಗಲಿದ್ದಾರೆ. ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಎಂಬ ನವ್ಯ ಕಥಾಸಂಕಲನ, ‘ಕುದುರೆ ಮೊಟ್ಟೆ’ ಮತ್ತು ‘ಅಂಜಿಕಿನ್ನ್ಯಾತಕಯ್ಯ’ ಎಂಬ ಅಸ್ತಿತ್ವವಾದಿ ನವ್ಯ ಕಾದಂಬರಿಗಳನ್ನು ನೀಡುವ ಮೂಲಕ ಕನ್ನಡದಲ್ಲಿ ತಮ್ಮದೇ ವ್ಯಕ್ತಿವಿಶಿಷ್ಟ ಛಾಪು ಮೂಡಿಸಿದವರು.
ತುಮಕೂರಿನಲ್ಲಿ 1990ರಲ್ಲಿ ಎಚ್ಎಂಟಿ ಗಡಿಯಾರ ಕಾರ್ಖಾನೆಯ ನೌಕರರು ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ಕಾಮರೂಪಿಯವರ ‘ಕುದುರೆ ಮೊಟ್ಟೆ’ ಕಾದಂಬರಿಯ ರಂಗರೂಪ ಪ್ರದರ್ಶನಕ್ಕೆ ಬಹುಮಾನ ಬಂದಿತ್ತು. ಆ ನಾಟಕ ಪ್ರದರ್ಶನವನ್ನು ನಾನು ನೋಡಿದಾಗ ಮೊದಲ ಸಲ ‘ಕಾಮರೂಪಿ’ ಎಂಬ ಹೆಸರು ನನ್ನ ಕರ್ಣಪಟಲದ ಮೇಲೆ ಬಿದ್ದು ಹೃದಯದಲ್ಲಿ ಅಚ್ಚಾಗಿತ್ತು.
ಇದನ್ನು ಓದಿ: ಹಿರಿಯ ಪತ್ರಕರ್ತ ಎಂ.ಎಸ್.ಪ್ರಭಾಕರ(ಕಾಮರೂಪಿ) ನಿಧನ
2017 ರಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರೊಂದಿಗೆ ನಾನು ಕೋಲಾರದಲ್ಲಿದ್ದ ಕಾಮರೂಪಿಯವರ ಪೂರ್ವಿಕರ ಪುರಾತನ ಮನೆಗೆ ಹೋಗಿ ಆಪ್ತವಾಗಿ ಭೇಟಿಯಾಗಿ ಸಾಹಿತ್ಯ, ರಾಜಕಾರಣ, ಪತ್ರಿಕೆ ಮುಂತಾದ ಅನೇಕ ಸಂಗತಿಗಳನ್ನು ಕುರಿತು ನಾವು ಸುದೀರ್ಘವಾಗಿ ಚರ್ಚಿಸಿದ ನೆನಪುಗಳು ಹಸಿರಾಗಿವೆ. ಮುಂದೊಮ್ಮೆ ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಲಾಗಿದ್ದ ವಿಚಾರ ಸಂಕಿರಣದಲ್ಲಿ ನಾನು, “ಸಮಾಜಮುಖಿ ಹೋರಾಟಗಳು ಮತ್ತು ಸವಾಲುಗಳು” ಎಂಬ ವಿಷಯವನ್ನು ಕುರಿತು ಮಾತಾಡಿದಾಗ ಕಾಮರೂಪಿಯವರು ನನ್ನ ಮಾತನ್ನು ಅತ್ಯಂತ ಶ್ರದ್ಧೆಯಿಂದ ಆಲಿಸಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದ ಅವರ ಸಂಬಂಧಿಕರ ಮನೆಯಲ್ಲಿ ಆಗಾಗ ಉಳಿದುಕೊಳ್ಳುತ್ತಿದ್ದ ಕಾಮರೂಪಿಯವರನ್ನು ನಾನು ಅಲ್ಲಿ ಭೇಟಿಯಾದದ್ದೇ ಹೆಚ್ಚು. ಕುವೆಂಪು ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಅವರ ಮಾರ್ಗದರ್ಶನದಲ್ಲಿ ಕಾಮರೂಪಿ ಅವರ ಸಾಹಿತ್ಯ ಕುರಿತು ಸಂಶೋಧನೆ ಕೈಗೊಳ್ಳಲು ಒಬ್ಬ ಸಂಶೋದನಾರ್ಥಿಯನ್ನು ಹುಡುಕಿ ಒಪ್ಪಿಸಿ ಕರೆತಂದು ಕಾಮರೂಪಿಯವರ ಎದುರಿಗೆ ನಿಲ್ಲಿಸಿದ್ದೆ. ಕಾಮರೂಪಿ ಕೂಡಾ ಸಮ್ಮತಿಸಿದ್ದರು. ಆ ಸಂಶೋಧನಾರ್ಥಿ ಕಾಮರೂಪಿಯವರ ಜೊತೆಯಲ್ಲಿ ಎರಡ್ಮೂರು ಭೇಟಿಗಳಲ್ಲಿ ಅವನ ಅಲ್ಪಮತಿಯನ್ನು ಪ್ರದರ್ಶಿಸಲು ಹೋಗಿ, ಅವನ ವಿರುದ್ಧ ಕಾಮರೂಪಿಯವರು ಜಮದಗ್ನಿಯಂತೆ ಸಿಡಿದು “ನಿನ್ನಂಥವನು ನನ್ನ ಸಾಹಿತ್ಯ ಕುರಿತು ಪಿಎಚ್.ಡಿ ಮಾಡಿ ಕನ್ನಡಕ್ಕೆ ಆಗಬೇಕಾದ ಯಾವುದೇ ಲಾಭವಿಲ್ಲ ತೊಲಗು” ಎಂದು ಓಡಿಸಿದ್ದರು. ಆ ಹುಡುಗ ಇದನ್ನೆಲ್ಲಾ ನನ್ನ ಬಳಿ ಹೇಳಿಕೊಂಡು ಕಣ್ಣೀರಾಕಿದ್ದ.
ಅದೊಂದು ದಿನ ಕಾಮರೂಪಿಯವರು ಗೌಹಾಟಿಗೆ ಹೊರಟಿದ್ದರು. ರೈಲು ಪ್ರಯಾಣ. ಯಶವಂತಪುರದ ಯಾವುದೋ ಬಹುಮಹಡಿ ಕಟ್ಟಡದ ಮನೆಯೊಂದಲ್ಲಿ ಕಾಮರೂಪಿಯವರು ಬಾಡಿಗೆಗೆ ನೆಲೆಸಿದ್ದರು. ಅವರೇ ಕೈಯಾರೆ ಕಾಫಿ ಕಾಯಿಸಿ ನನಗೆ ಕುಡಿಯಲು ಕೊಟ್ಟಿದ್ದರು. ತುಪ್ಪದಲ್ಲಿ ಹುರಿದ ಬಾದಾಮಿ ಮುಂತಾದ ಡ್ರೈಫ್ರೂಟ್ಸ್ ತಿನ್ನಲು ಕೊಟ್ಟು ರೈಲಿಗೆ ಹೊರಡುವ ಸಮಯ ಹತ್ತಿರಾಗುವವರೆಗೂ ನನ್ನೊಂದಿಗೆ ಮಾತಾಡುತ್ತಾ ಕೈಹಿಡಿದು ಕುಳ್ಳಿರಿಸಿಕೊಂಡರು. ಇದೆಲ್ಲವೂ ಈಗ ನೆನಪಾಗುತ್ತಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಹೇಳಬೇಕಾದ ಮಾತು: ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ, “ನೀವು ವಿಮರ್ಶಕರು ಇವತ್ತಿನ ಕವಿಗಳಿಗೆ ಹೈಪ್ ಕೊಟ್ಟು ಬರೆದು ಜನಪ್ರಿಯತೆ ತಂದುಕೊಡುತ್ತೀರಿ. ಜನಪ್ರಿಯತೆಯ ಅಮಲಿನಲ್ಲಿ ಕವಿ ಎನ್.ಕೆ.ಹನುಮಂತಯ್ಯ ತನ್ನ ಬದುಕಿನ ವಾಸ್ತವವನ್ನು ಅರಿಯದೆ ಆತ್ಮಹತ್ಯೆ ಮಾಡಿಕೊಂಡ” ಎಂದು ನನ್ನ ಮಾರ್ಗದರ್ಶಕರಾದ ಡಾ.ರಹಮತ್ ತರೀಕೆರೆಯವರಿಗೆ ಹೇಳುತ್ತಾ ನನ್ನೆದುರು ವಿಮರ್ಶಕರ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು ಕಾಮರೂಪಿ. ಇಂತಹ ನಿರ್ಭೀತ ವ್ಯಕ್ತಿತ್ವದ ಕಾಮರೂಪಿ ಎಂ.ಎಸ್.ಪ್ರಭಾಕರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು…..