ವಿಕ್ರಾಂತ್ ರೋಣ ಸಿನಿಮಾ ವಿಮರ್ಶೆ : ಕತ್ತಲಲ್ಲಿ ಕೊಲೆಗೈಯುವ ಬ್ರಹ್ಮರಾಕ್ಷಸನಿಗೆ ಗುಡ್ಡದ ಭೂತದ ಕರಿ‌ನೆರಳು

ಚಿತ್ರಪ್ರಿಯ ಸಂಭ್ರಮ್.

 

ರೇಟಿಂಗ್: 3/5

ಚಿತ್ರ: ವಿಕ್ರಾಂತ್ ರೋಣ

ತಾರಾಗಣ: ಸುದೀಪ್, ಬೇಬಿ ಸಂಹಿತಾ, ನಿರೂಪ್ ಭಂಡಾರಿ, ಮಿಲನಾ ನಾಗರಾಜ್, ಜಾಕ್ವೇಲಿನ್, ರವಿಶಂಕರ್, ನೀತಾ ಅಶೋಕ್, ಕಾರ್ತಿಕ್ ರಾವ್, ಮತ್ತಿತರರು

ನಿರ್ದೇಶನ: ಅನೂಪ್ ಭಂಡಾರಿ

ಸಂಗೀತ: ಅಜನೀಶ್

ಛಾಯಾಗ್ರಹಣ: ವಿಲಿಯಂ ಡೇವಿಡ್

ನಿರ್ಮಾಣ: ಜಾಕ್ ಮಂಜು ಮತ್ತು ಶಾಲಿನಿ‌ ಮಂಜು

 

ಬಾಲ್ಯದಲ್ಲಿ ನಡೆದ ಕಾಲ್ಪನಿಕ ಘಟನೆಯೊಂದನ್ನು ಮರ್ಡರ್‌ ಮಿಸ್ಟ್ರಿ, ಹಾರರ್ ಟಚ್ ಕೊಟ್ಟು ಗುಡ್ಡದ ಭೂತ, ರಂಗೀತರಂಗದ‌ ನೆರಳಿನಲ್ಲಿ ಅದ್ದಿ, ತಿದ್ದಿ ತೀಡಿದ‌ ಚಿತ್ರವೇ ವಿಕ್ರಾಂತ್ ರೋಣ.

ವಿಕ್ರಾಂತ್ ರೋಣ ಇದು ನಾಯಕನ‌ ಹೆಸರಷ್ಟೇ. ಗದಗ ಜಿಲ್ಲೆಯ ರೋಣ ನಾಯಕನ ಊರು ಎನ್ನುವ ಒಂದೇ ಡೈಲಾಗ್‌ ಚಿತ್ರದ ಹೆಸರಿಗೆ ಕಾರಣ ನೀಡಿ ಬಿಡುತ್ತದೆ. ಬಿಟ್ಟರೆ ಚಿತ್ರದ ಟೈಟಲ್‌ಗೆ ವಿಶೇಷ ಕಾರಣಗಳು ಸಿಗುವುದಿಲ್ಲ. ಚಿತ್ರದಲ್ಲಿ ಸಿಗುವುದೆಲ್ಲ ಕತ್ತಲೆಯ ದೃಶ್ಯಗಳು, ಕೊಲೆಗಳು, ಕೊಲೆಗಾರ ಇವರೇ ಇರಬಹುದು ಎನ್ನುವ ಅನುಮಾನಗಳು.

ಚಿತ್ರದ ಬಹುತೇಕ ಚಿತ್ರೀಕರಣ ಕತ್ತಲಲ್ಲೇ, ಕಾನನದ ಸೆಟ್‌ನಲ್ಲೇ ನಡೆದಿದೆ. ಚಿತ್ರಕ್ಕಾಗಿ ಕಾಡಿನ ಸೆಟ್ ಹಾಕಿದ ಕಲಾ‌ ನಿರ್ದೇಶಕ ಶಿವಕುಮಾರ್ ಶ್ರಮ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಕಥೆಯಲ್ಲಿ ಅಂಥ ವಿಶೇಷತೆ ಏನಿಲ್ಲ. ಒನ್ಸ್ ಅಗೇನ್ ವಿಕ್ರಾಂತ್ ರೋಣ ಕೂಡ ಸೇಡಿನ ಕಿಚ್ಚು ಹೊಂದಿರುವ ಕಥೆ. ಆದರೆ ಖಂಡಿತವಾಗಿ ಕೊನೆಯತನಕ ಕುತೂಹಲ, ರೋಚಕತೆ ಉಳಿಸಿಕೊಳ್ಳುವ ಗುಣ ಇರುವ ಸಿನಿಮಾ.

ಚಿತ್ರದಲ್ಲಿ ಕಿಚ್ಚ ಪೊಲೀಸ್ ಇನ್ಸಪೆಕ್ಟರ್ ಪಾತ್ರದಲ್ಲಿದ್ದರೂ ಕೆಂಪೇಗೌಡ, ವರದನಾಯಕನ ಥರಾ ಪೊಲೀಸ್ ಛಾಪು ಇಲ್ಲಿ ಸಿಗಲ್ಲ. ಈ ಬಗ್ಗೆ‌ ಪ್ರೇಕ್ಷಕರಿಗೆ ಉಂಟಾಗುವ ಸಂದೇಹವನ್ನೇ ನಿರ್ದೇಶಕರು ದೃಶ್ಯವೊಂದರಲ್ಲಿ “ಪೊಲೀಸರೆಂದರೆ ಯುನಿಫಾರ್ಮ್ ಇರುತ್ತೆ, ಗಡ್ಡ ಬಿಟ್ಟಿರಲ‌್ಲ. ಆದ್ರೆ ಈತ ಪೊಲೀಸ್ ಡ್ರೆಸ್ ಹಾಕಿದ್ದನ್ನ ನೋಡಿಲ್ಲ. ಸದಾ ಗಡ್ಡ ಬಿಟ್ಟಿರ್ತಾನೆ. ಈ ವ್ಯಕ್ತಿ ‌ನಿಜವಾಗಲೂ ಪೊಲೀಸಾ? ಕೊಲೆ ಮಾಡುವ ಪೋಲಿ‌ ಕೊಲೆಗಾರ ಇವ್ನೇನಾ?” ಎಂಬ ಡೈಲಾಗನ್ನ ಹೇಳಿಸಿಬಿಟ್ಟಿದ್ದಾರೆ. ಹಾಗಾಗಿ ಈ ಬಗ್ಗೆ ಆಕ್ಷೇಪ ಸಲ್ಲಿಸುವಂತಿಲ್ಲ. ಪೊಲೀಸ್ ಅಧಿಕಾರಿಯನ್ನ ಫ್ಯಾಂಟಮ್ ಮಾಡುವ ಯತ್ನ‌ ಎಂಬ ಉತ್ತರ ಚಿತ್ರದುದ್ದಕ್ಕೂ ಕಾಣ ಸಿಗುತ್ತದೆ.

ಕಮರೊಟ್ಟು ಗ್ರಾಮದಲ್ಲಿ ವಿಶೇಷವಾಗಿ ರಾತ್ರಿ ವೇಳೆ ಆಗಾಗ ಕೊಲೆಗಳು ನಡೆಯುತ್ತಲೇ ಇರುತ್ತವೆ. ಪೊಲೀಸ್ ಅಧಿಕಾರಿಯನ್ನೇ ಕೊಂದ ಕಾರಣಕ್ಕೆ ಮತ್ತು ಆ ಜಾಗಕ್ಕೆ ಪೊಲೀಸ್ ಅಧಿಕಾರಿಯಾಗಿ ಬರುವ ವಿಕ್ರಾಂತ್ ರೋಣ, ಕೊಲೆಯ‌ ಜಾಡು ಬಿಡಿಸಿ, ಕೊಲೆಗಾರರನ್ನು ಪತ್ತೆ ಹಚ್ಚುವುದೇ ಸಿನಿಮಾ ಕಥೆ. ಹಾಗಾದರೆ ಕೊಲೆಗಾರ ಯಾರು? ಕೊಲೆ ಮಾಡಲು ಕಾರಣಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲ ಇದ್ದರೆ ವಿಕ್ರಾಂತ್ ರೋಣನ ದರ್ಶನ ಪಡೆಯಬಹುದು.

ಸುದೀಪ್ ಹೀರೋಯಿಸಂ, ಅಬ್ಬರದ ಡೈಲಾಗ್ ಇಲ್ಲದೇ, ನಾಯಕಿಯ ಜೊತೆ ಮರ ಸುತ್ತುವ ಜಂಜಾಟವಿಲ್ಲದೇ ವಿಭಿನ್ನ ಪೊಲೀಸ್ ಅಧಿಕಾರಿಯಾಗಿ ನಗಿಸುತ್ತಾ, ಅಳಿಸುತ್ತಾ ಇಷ್ಟವಾಗ್ತಾರೆ. ನಾಯಕನ ಮಗಳ ಪಾತ್ರದಲ್ಲಿ ನಟಿಸಿರುವ ಬೇಬಿ ಸಂಹಿತಾ ಸೂಪರ್. ಆದರೆ ಈ ಪಾತ್ರದ ಎಂಡಿಂಗ್‌ನಲ್ಲಿ ಕ್ಲ್ಯಾರಿಫೇಕಷನ್ ಬೇಕಿತ್ತು. ಇದರ ಹೊರತಾಗಿಯೂ ಕೆಲ ದೃಶ್ಯಗಳು ಸಿಕ್ವೆನ್ಸ್ ತಪ್ಪಿದಂತಿವೆ. ಇದು ಎಡಿಟಿಂಗ್ ಫಾಲ್ಟಾ? ಅಥವಾ ಅನೂಪ್‌ ಉದ್ದೇಶಪೂರ್ವಕವಾಗಿ ಹಾಗೆಯೇ ಮಾಡಿದ್ದಾರಾ? ಎಂಬುದನ್ನು ಹೇಳುವುದು ಕಷ್ಟ.

ಚಿತ್ರದ ನಿಜವಾದ ನಾಯಕನೆಂದರೆ ರಾ ರಾ ರಕ್ಕಮ್ಮ ಹಾಡು, ಸಂಗೀತ ನೀಡಿದ ಅಜನೀಶ್ ಮತ್ತು ನಾಯಕಿ ಎಂದರೆ ಈ ಹಾಡಿಗೆ ಹೆಜ್ಜೆ ಹಾಕಿದ ಜಾಕ್ವೇಲಿನ್ ಫರ್ನಾಂಡೀಸ್. ನಾಯಕಿ‌ ಮಿಲನಾ ನಾಗರಾಜ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ನೆನಪಲ್ಲುಳಿಯುತ್ತಾರೆ. ಫಕ್ರು ಪಾತ್ರದ ಕಾರ್ತಿಕ ರಾವ್‌ ಕಚಗುಳಿಯ ಮಾತುಗಳಿಂದ ಪ್ರೇಕ್ಷಕರಲ್ಲಿ‌ ನಗು ಮೂಡಿಸುತ್ತಾರೆ. ವಾಸುಕಿ ವೈಭವ ಅವರದ್ದು ಚಿಕ್ಕಪಾತ್ರವಾದರೂ ನೆನಪಿನಲ್ಲಿ ಉಳಿಯುತ್ತದೆ. ನೀತಾ ಅಶೋಕ ಮೊದಲ ಚಿತ್ರವಾದರೂ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡು ಭರವಸೆ ಮೂಡಿಸುತ್ತಾರೆ. ನಿರೂಪ್ ಭಂಡಾರಿ ಪಾತ್ರ ಚಿತ್ರದ ಹೈಲೈಟ್‌ಗಳಲ್ಲಿ‌ ಒಂದು. ಒಂದೇ ಶಾಟ್‌ನಲ್ಲಿ ಇಡೀ ಕ್ಲೈಮ್ಯಾಕ್ಸ್ ಚಿತ್ರೀಕರಿಸಿದ ಛಾಯಾಗ್ರಾಹಕ ಡೇವಿಡ್ ಮೆಚ್ಚುಗೆ ಗಳಿಸುತ್ತಾರೆ.

ಗುಡ್ಡದ ಭೂತ, ರಂಗೀ ತರಂಗ ನೆರಳಿನಂತಿರುವ ವಿಕ್ರಾಂತ್ ರೋಣ, ಹಾರರ್ ಸ್ಪರ್ಶದ ಫ್ಯಾಂಟಮ್ ಧಾಟಿಯ ಅದ್ಧೂರಿ ವೆಚ್ಚದ, ಪ್ಯಾನ್ ಕಲ್ಚರ್ ಸೇರಿದ ಸಿನಿಮಾ. ಇಡೀ ಸಿನಿಮಾ 3D ಎಫೆಕ್ಟ್‌ನಲ್ಲಿದ್ದು ಫ್ಯಾಮಿಲಿ ಜೊತೆ ಕುಳಿತು ನೋಡುತ್ತಾ “ಟೈಮ್ ಪಾಸ್” ಮಾಡಬಹುದು.

Donate Janashakthi Media

Leave a Reply

Your email address will not be published. Required fields are marked *