ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ ನೀತಿ (STIP 2020) ಕೈಗಾರಿಕಾ ಕ್ರಾಂತಿಯ ನಾಲ್ಕನೇ ಅಲೆಯಲ್ಲಿ ಸಹ ಭಾರತ ಹಿಂದೆ ಬೀಳುತ್ತಾ?

 ಮೂರನೇ ಅಲೆಯ ಸೃಷ್ಟಿಯಲ್ಲಿ ಕೆಲವು ಅಪವಾದಗಳನ್ನು ಬಿಟ್ಟರೆ, ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲಿಲ್ಲ. ದೊಡ್ಡ ರೀತಿಯಲ್ಲಿ ಅದರ ಭಾಗವಾಗಲಿಲ್ಲ. ಮೂರನೇ ಅಲೆಯ ಭಾಗವಾಗಲು, ಭಾಗವಹಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿದರೂ ಯಾಕೆ ವಿಫಲವಾಯ್ತು ಎಂಬುದರ ಕುರಿತು ವಿಶ್ಲೇಷಣೆ ಮಾಡುವುದು ಈ ನೀತಿಯ ಪ್ರಮುಖ ಭಾಗವಾಗಬೇಕಿತ್ತು. ಇದರ ಆಧಾರದ ಮೇಲೆ ಈಗ ಆರಂಭವಾಗಿರುವ ಕೈಗಾರಿಕಾ ಕ್ರಾಂತಿಯ (5G ಮೊಬೈಲ್ ಜಾಲ- AI ಕೃತಕ ಬುದ್ಧಿಮತ್ತೆ- AI ಉಪಕರಣಗಳ ಅಂತರ್ಜಾಲ, ಸ್ವಯಂ-ಚಾಲಿತ ವಿದ್ಯುತ್ ವಾಹನಗಳು ಇತ್ಯಾದಿಗಳ) ನಾಲ್ಕನೇ ಅಲೆಯ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಅದರ ಭಾಗವಾಗುವುದು ಹೇಗೆ? ನಾಲ್ಕನೆಯ ಅಲೆಯಲ್ಲಿ ಸಹ ಭಾರತವು ಬೈ ಪಾಸ್ ಆಗದಂತೆ ಮಾಡುವುದು ಹೇಗೆ? ಎಂಬುದರ ಬಗ್ಗೆ ದಸ್ತಾವೇಜು ಹಾದಿ ತೋರಿಸಬೇಕಿತ್ತು. ಆದರೆ ಇಂತಹ ಯಾವ ಪ್ರಯತ್ನವೂ ಈ ದಸ್ತಾವೇಜಿನಲ್ಲಿ ಕಾಣುವುದಿಲ್ಲ.

– ವಸಂತರಾಜ ಎನ್.ಕೆ

ಭಾರತ ಸರಕಾರ“ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ ನೀತಿ 2020”( Science, Technology and Innovation Policy 2020 – STIP 2020)ನ್ನು ಡಿಸೆಂಬರ್ 2020 ರಲ್ಲಿ ಸಾರ್ವಜನಿಕ ಸಮಾಲೋಚನೆ ಬಿಡುಗಡೆ ಮಾಡಿ ಜನವರಿ 31, 2021ರೊಳಗೆ ಸಲಹೆ-ಸೂಚನೆಗಳನ್ನು ನೀಡುವಂತೆ ತಿಳಿಸಿದೆ. ಕೆಲವು ವಿಜ್ಞಾನಿಗಳು ಮತ್ತು ಪರಿಣತರ ಜೊತೆಗೆ ಮಾತ್ರ ಈ ನೀತಿಯನ್ನು ರೂಪಿಸುವ ಮೊದಲು ಸಮಾಲೋಚನೆ ಮಾಡಲಾಯಿತು ಮತ್ತು ನೀತಿ ಬಿಡುಗಡೆ ಮಾಡಿದ ನಂತರ ಸಾಕಷ್ಟು ಸಮಯ ಕೊಡಲಾಗಿಲ್ಲ. ನೀತಿ ರೂಪಿಸುವ ಮೊದಲು ಮತ್ತು ನಂತರ ಅಗತ್ಯವಾದಷ್ಟು ವ್ಯಾಪಕ ಸಮಾಲೋಚನೆ ಪರಾಮರ್ಶೆ ಮಾಡದಿರುವುದು ವಿಜ್ಞಾನಿ ಸಮುದಾಯದಲ್ಲಿ ಅತೃಪ್ತಿಗೆ ಕಾರಣವಾಗಿದೆ. ಯಾವುದೇ ನೀತಿಯ ಕುರಿತು ಅದನ್ನು ರೂಪಿಸುವ ಮೊದಲಾಗಲಿ ನಂತರವಾಗಲಿ ಬರುವ ಸಲಹೆ ಸೂಚನೆಯ ಅಂಶಗಳನ್ನು ಸ್ವೀಕರಿಸುವಲ್ಲಿ ಈಗಿನ ಸರಕಾರ ಎಷ್ಟು ತೆರೆದ ಮನಸ್ಸು ಹೊಂದಿದೆ ಎಂಬುದು ಕೃಷಿ ಕಾನೂನುಗಳು, ಕಾರ್ಮಿಕ ಕಾನೂನುಗಳು ಮತ್ತು ನೂತನ ಶಿಕ್ಷಣ ನೀತಿಯ ಸಂದರ್ಭದಲ್ಲಿ ಸ್ಪಷ್ಟವಾಗಿದೆ. ಜಾಗತಿಕ ಬಂಡವಾಳದ ಪ್ರತಿನಿಧಿಗಳು ಮತ್ತು ಆಳುವ ಪಕ್ಷದ “ಚಿಂತನ ಅಗ್ರಹಾರ”ಗಳು ರೂಪಿಸಿದ ನೀತಿಗಳನ್ನು ದೇಶದ ಜನತೆಯ ಗಂಟಲಲ್ಲಿ ತುರುಕುವುದು ಮತ್ತು ಅದರ ವಿರುದ್ಧ ಬರುವ ಯಾವುದೇ ಸಲಹೆ-ಸೂಚನೆಗಳನ್ನು ನಿರ್ಲಕ್ಷಿಸುವುದು ಈ ಸರಕಾರದ ಆಡಳಿತ ಶೈಲಿಯಾಗಿದೆ. ಆದರೂ ಸೀಮಿತ ಸಮಯದಲ್ಲೂ ದೇಶದಾದ್ಯಂತ ಈ ನೀತಿಯ ಕುರಿತು ಜನ ವಿಜ್ಞಾನ ಚಳುವಳಿಗಳು ಸಂಘಟನೆಗಳು ಚಿಂತನ ಸಭೆ, ಗೋಷ್ಠಿಗಳನ್ನು ನಡೆಸಿ ವಿವಿಧ ವಿಭಾಗಗಳ ಪರಿಣತರು ಮತ್ತು ಆಸಕ್ತರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಸರಕಾರಕ್ಕೆ ಸಲಹೆ-ಸೂಚನೆಗಳನ್ನು ಸಲ್ಲಿಸಿವೆ. ಅದರ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಮೊದಲನೆಯದಾಗಿ, ಹಿಂದಿನ ವಿಜ್ಞಾನ-ತಂತ್ರಜ್ಞಾನ ನೀತಿಗಳಿಗೆ ಹೋಲಿಸಿದರೆ ಈ ನೀತಿ ಹೊಸದು ಎಂಬ ಸರಕಾರದ ಹೇಳಿಕೆ ಬಗ್ಗೆ ನೋಡೋಣ. ಹಿಂದಿನ ಕೈಗಾರಿಕಾ ನೀತಿ ನಿರ್ಣಯ (1956), ವಿಜ್ಞಾನ ನೀತಿ ನಿರ್ಣಯ (1958), ತಂತ್ರಜ್ಞಾನ ನೀತಿ ಹೇಳಿಕೆ (1983) ಗಳ ರೂಪಿಸುವಿಕೆಯ ಪ್ರಕ್ರಿಯೆ ಮತ್ತು ಆ ನೀತಿ ಹೇಳಿಕೆಗಳು ಸಹ ದೇಶದ ಒಟ್ಟಾರೆ ಬೆಳವಣಿಗೆಯ ರಣನೀತಿಯೊಂದಿಗೆ ಆಳವಾಗಿ ತಳುಕು ಹಾಕಿಕೊಂಡಿದ್ದವು. ಕೈಗಾರಿಕೀಕೃತ, ಸ್ವಾವಲಂಬಿ, ಆಧುನಿಕ ಕಲ್ಯಾಣ ಪ್ರಭುತ್ವ ಆಧಾರಿತ ಯೋಜಿತ ಬೆಳವಣಿಗೆ ದೇಶದ ಒಟ್ಟಾರೆ ಬೆಳವಣಿಗೆಯ ರಣನೀತಿಯಾಗಿತ್ತು. ಇವುಗಳಿಂದ 2020ರ ನೀತಿ ಪೂರ್ಣವಾಗಿ ಭಿನ್ನವಾಗಿದೆ. ಆದರೆ 1980ರ ದಶಕದಲ್ಲಿ ‘ಉದಾರೀಕರಣ’ ನೀತಿಗಳು ಆರಂಭವಾಗಿ ಕೇಂದ್ರೀಕೃತ ಯೋಜನೆ ಮತ್ತು ಪ್ರಭುತ್ವ ಎರಡೂ ಬೆಳವಣಿಗೆಯ ನೀತಿಗಳ ನಿರ್ಣಯದಿಂದ ಹಿಂದೆ ಸರಿಯಲು ಆರಂಭಿಸಿದ ನಂತರ ಬಂದ 2003 ಮತ್ತು 2013 ರ ವಿಜ್ಞಾನ-ತಂತ್ರಜ್ಞಾನ ನೀತಿಗಳಿಂದ ಬಹಳ ಭಿನ್ನವಾಗಿಲ್ಲ. ಈ ನೀತಿಗಳಲ್ಲಿ ಇದ್ದಂತೆ ವಿಜ್ಞಾನ-ತಂತ್ರಜ್ಞಾನ ಬೆಳವಣಿಗೆಯಲ್ಲಿ ಪ್ರಭುತ್ವದ ನಿರ್ಣಾಯಕ ಮತ್ತು ಪ್ರಮುಖ ಪಾತ್ರದ ಬದಲಾಗಿ, ಬರಿಯ ಪೋಷಕ ಪಾತ್ರಕ್ಕೆ ಸೀಮಿತವಾಗಿದೆ. STIP 2020 ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧಗಳನ್ನು ಬಿಡಿಬಿಡಿಯಾಗಿ ನೋಡದೆ ಒಟ್ಟಾಗಿ ನೋಡಿ ಅವುಗಳ ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತದೆ’ ಎಂದು ಹೇಳಿಕೊಳ್ಳುತ್ತದೆ. ಆದರೆ ಸಮಕಾಲೀನ ವಾಸ್ತವ ಗಟ್ಟಿ ನೆಲದಲ್ಲಿ ನಿಲ್ಲದಿರುವುದರಲ್ಲಿ ಮತ್ತು ಭವಿಷ್ಯದ ಕುರಿತು ಯಾವುದೇ ಸ್ಪಷ್ಟ ಹಾದಿ ತೋರುವುದರಲ್ಲಿ ವಿಫಲವಾಗುವುದರಲ್ಲಿ ಮಾತ್ರ ಇದು ಹಿಂದಿನ ನೀತಿಗಳಿಗಿಂತ ಪೂರ್ಣವಾಗಿ ಭಿನ್ನವಾಗಿದೆ ಎಂದು ಹೆಚ್ಚಿನ ಜನ ವಿಜ್ಞಾನ ಚಳುವಳಿಗಳು ಸಂಘಟನೆಗಳು, ಪರಿಣತ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

 

ಬೇರುಗಳೇ ಇಲ್ಲದ ಮರ

ಈಗಿನ ಭಾರತದ ವಿಜ್ಞಾನ-ತಂತ್ರಜ್ಞಾನ ಶಕ್ತಿ-ಸಾಮರ್ಥ್ಯ (ಮಾನವ ಸಂಪನ್ಮೂಲ, ಸಂಶೋಧನಾ ಸಂಸ್ಥೆಗಳು, ಮೂಲಸೌಕರ್ಯ, ಕಾರ್ಯಕ್ರಮಗಳು, ಅದರಲ್ಲಿ ಹೂಡಿಕೆ ಇತ್ಯಾದಿಗಳ ಮೇಲೆ ಆಧರಿಸಿ) ವಾಸ್ತವ, ಅದರ ಸಫಲತೆ-ವೈಫಲ್ಯಗಳ ಪರಾಮರ್ಶೆ ಮತ್ತು ಇಂದಿನ ಜಾಗತಿಕ ವಿಜ್ಞಾನ-ತಂತ್ರಜ್ಞಾನ ಬೆಳವಣಿಗೆಯ ಹಾದಿಯನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ರೂಪಿಸಲಾಗಿಲ್ಲ. ಸರಕಾರದ ಒಳಗೆ ಸಹ ವಿಜ್ಞಾನ-ತಂತ್ರಜ್ಞಾನಗಳಿಂದ ನಿರ್ಣಾಯಕವಾಗಿ ಪ್ರಭಾವಿತವಾಗುವ ಇತರ ಸಚಿವಾಲಯಗಳ ಬೇಕು-ಬೇಡಗಳು, ಸಲಹೆ ಸೂಚನೆಗಳು ಅಥವಾ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಉದಾಹರಣೆಗೆ, ಭಾರತ ಕೈಗಾರಿಕಾ ಕ್ರಾಂತಿಯ (ಮೈಕ್ರೋ-ಇಲೆಕ್ಟಾçನಿಕ್ಸ್, ಸಾಫ್ಟ್ ವೇರ್, ರೊಬೊಟ್ ಸ್ವಯಂ-ಚಾಲಿತ ತಯಾರಿಕೆ, ಟೆಲಿಕಾಂ-ನೆಟ್, ಜೈವಿಕ ತಂತ್ರಜ್ಞಾನ, ಹೊಸ ಕೃತಕ ಭೌತವಸ್ತುಗಳು ಇತ್ಯಾದಿ ಇರುವ)ಮೂರನೇ ಅಲೆಯ ಸೃಷ್ಟಿಯಲ್ಲಿ (ಸಾಫ್ಟ್ ವೇರ್ ಸೇವೆ ಮತ್ತು ಔಷಧಿ ಸಾಮೂಹಿಕ ತಯಾರಿಕೆಗಳಲ್ಲಿ ಗಮನಾರ್ಹ ಪಾತ್ರದ  ಅಪವಾದಗಳನ್ನು ಬಿಟ್ಟರೆ) ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲಿಲ್ಲ. ದೊಡ್ಡ ರೀತಿಯಲ್ಲಿ ಅದರ ಭಾಗವಾಗಲಿಲ್ಲ. ಕೈಗಾರಿಕಾ ಕ್ರಾಂತಿಯ ಮೂರನೆಯ ಅಲೆಯು ಭಾರತವನ್ನು ಬೈ ಪಾಸ್ ಮಾಡಿತು ಎಂದು ಹೇಳಲಾಗುತ್ತದೆ. ಮೂರನೇ ಅಲೆಯ ಭಾಗವಾಗಲು, ಭಾಗವಹಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿದರೂ ಯಾಕೆ ವಿಫಲವಾಯ್ತು ಎಂಬುದರ ಕುರಿತು ವಿಶ್ಲೇಷಣೆ ಮಾಡುವುದು ಈ ನೀತಿಯ ಪ್ರಮುಖ ಭಾಗವಾಗಬೇಕಿತ್ತು. ಇದರ ಆಧಾರದ ಮೇಲೆ ಈಗ ಆರಂಭವಾಗಿರುವ ಕೈಗಾರಿಕಾ ಕ್ರಾಂತಿಯ (5G ಮೊಬೈಲ್ ಜಾಲ- AI ಕೃತಕ ಬುದ್ಧಿಮತ್ತೆ- IoT ಉಪಕರಣಗಳ ಅಂತರ್ಜಾಲ, ಸ್ವಯಂ-ಚಾಲಿತ ವಿದ್ಯುತ್ ವಾಹನಗಳು ಇತ್ಯಾದಿಗಳ) ನಾಲ್ಕನೇ ಅಲೆಯ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಅದರ ಭಾಗವಾಗುವುದು ಹೇಗೆ? ನಾಲ್ಕನೆಯ ಅಲೆಯಲ್ಲಿ ಸಹ ಭಾರತವು ಬೈ ಪಾಸ್ ಆಗದಂತೆ ಮಾಡುವುದು ಹೇಗೆ? ಎಂಬುದರಬಗ್ಗೆ ದಸ್ತಾವೇಜು ಹಾದಿ ತೋರಿಸಬೇಕಿತ್ತು. ಆದರೆ ಇಂತಹ ಯಾವ ಪ್ರಯತ್ನವೂ ಈ ದಸ್ತಾವೇಜಿನಲ್ಲಿ ಕಾಣುವುದಿಲ್ಲ.

ಈ ನೀತಿ ಭಾರತದ ವಿಜ್ಞಾನ-ತಂತ್ರಜ್ಞಾನವನ್ನು ಗೊತ್ತು ಗುರಿಯಿಲ್ಲದೆ ಹಾರಲು ಬಿಟ್ಟ ಆಕಾಶಬುಟ್ಟಿಯಂತೆ ಭಾವಿಸುತ್ತದೆ ಮತ್ತು ಆ ರೀತಿ ಅದನ್ನು ಮಾಡಲು ಹೊರಟಿದೆ ಕೂಡಾ. ಯೋಜನಾಬದ್ಧ ಬೆಳವಣಿಗೆಗೆ ತಿಲಾಂಜಲಿ ಇತ್ತ ಇಂದಿನ ಸಂದರ್ಭದಲ್ಲಿ,ಈ ನೀತಿ ಅದರ ಗುರಿ ಮತ್ತು ಉದ್ದೇಶ, ಕಾಣ್ಕೆಗಳು ಹಾಗೂ ಅವನ್ನು ಹೇಗೆ ಯಾರು ಸಾಧಿಸುತ್ತಾರೆ ಎಂಬುದು ಗೊಂದಲಕಾರಿಯಾಗಿದೆ. ಇದರ ಕೆಲವು ಉದಾಹರಣೆಗಳು:

* “ಭಾರತ ಜಗತ್ತಿನ ಮೂರು ಮೊದಲ ವೈಜ್ಞಾನಿಕ ಸೂಪರ್ ಪವರ್ ಗಳಲ್ಲಿ ಮುಂದಿನ ದಶಕಗಳಲ್ಲಿ ಮೇಲಿನ ಸ್ಥಾನ ಪಡೆಯುವುದು” ಒಂದು ಗುರಿ ಎಂದು ಹೇಳಲಾಗಿದೆ. 2013ರ ನೀತಿ “ಜಗತ್ತಿನ ಮೂರು ಮೊದಲ ವೈಜ್ಞಾನಿಕ ಸೂಪರ್ ಪವರ್ ಗಳ ಸ್ಥಾನಕ್ಕೆ ಏರುವುದು” ಎಂದು ಹೇಳಿತ್ತು. ಇದರರ್ಥ ಇದನ್ನು ಸಾಧಿಸಲಾಗಿದೆ. ಈಗ ಆ ಮೂರರಲ್ಲಿ ಇನ್ನಷ್ಟು ಮೇಲಕ್ಕೆ ಹೋಗುವುದಷ್ಟೇ ಬಾಕಿ ಉಳಿದಿರುವುದು ಎಂದರ್ಥವಾ? ಆದರೆ ಇದು ನಿಜವಲ್ಲ ಅಥವಾ ಯಾವ ಆಧಾರದ ಮೇಲೆ ಇದನ್ನು ಹೇಳಲಾಗುತ್ತಿದೆ ಎಂಬುದು ಸ್ಪಷ್ಟವಿಲ್ಲ.

* “ಪೂರ್ಣ ಕಾಲದ ಸಂಶೋಧಕರು, ಜಿಡಿಪಿಯ ಭಾಗವಾಗಿ ಸಂಶೋಧನೆಗೆ ಹೂಡಿಕೆ, ಮತ್ತು ಸಂಶೋಧನೆಗೆ ಹೂಡಿಕೆಯಲ್ಲಿ ಖಾಸಗಿ ಕ್ಷೇತ್ರದ ಪಾಲು ಪ್ರತಿ ಐದು ವರ್ಷದಲ್ಲಿ ಇಮ್ಮಡಿಗೊಳಿಸುವುದು” ಇನ್ನೊಂದು ಗುರಿ. ಆದರೆ ವಾಸ್ತವವೆಂದರೆ ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಸಂಶೋಧನೆಯಲ್ಲಿ ಭಾರತದ ಹೂಡಿಕೆ ಜಿಡಿಪಿಯ ಶೇ. 0.7 ರ ಸುತ್ತವಷ್ಟೇ ಗಿರಕಿ ಹೊಡೆಯುತ್ತಿದೆ. 1996ರಲ್ಲಿ ಸುಮಾರು ಅಷ್ಟೇ ಇದ್ದ (ಶೇ0.7) ಚೀನಾದ ಈ ಹೂಡಿಕೆ, ಈಗ ಶೇ. 2.4 (ಅದರ ಜಿಡಿಪಿ ಸಹ ಭಾರೀ ಪ್ರಮಾಣದಲ್ಲಿ ಬೆಳೆದಿದ್ದರೂ) ಆಗಿದ್ದರೆ, ಕೊರಿಯಾ ಮುಂತಾದ ದ. ಏಶ್ಯಾದ ಹಲವು ದೇಶಗಳು ಶೇ. 2 ರ ಸುತ್ತ ಇವೆ. ಈ ದೇಶಗಳು ಶಿಕ್ಷಣ ಮತ್ತು ಆರೋಗ್ಯದ ಮೇಲೂ ಜಿಡಿಪಿಯ ಶೇ.2-3 ಖರ್ಚು ಮಾಡಿವೆ. ಅಲ್ಲೂ ಭಾರತ ಬಹಳ ಹಿಂದೆ ಇದೆ. ಈ ಹಿನ್ನೆಲೆಯಲ್ಲಿ ಈ ಗುರಿಯನ್ನು ನಿಜವಾಗಿ ಗಂಭೀರವಾಗಿ ತೆಗೆದುಕೊಂಡಿದೆಯೇ?

* “ಜಾಗತಿಕ ಮನ್ನಣೆ ಮತ್ತು ಪಾರಿತೋಷಕಗಳಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆಯುವುದು” ಇನ್ನೊಂದು ಈ ನೀತಿಯ ಗುರಿ. ಇದರರ್ಥ ಪೇಟೆಂಟುಗಳು ಮತ್ತು ಸಂಶೋಧನಾ ಪ್ರಬಂಧಗಳ ಪ್ರಕಟಣೆಗಳ ಸಂಖ್ಯೆ ಹೆಚ್ಚಿಸುವುದು. ಇದು ಅದರಷ್ಟಕ್ಕೆ ಅಷ್ಟೇನೂ ಅರ್ಥಪೂರ್ಣ ಗುರಿ ಸಹ ಅಲ್ಲ. ಜಾಗತಿಕ ಮನ್ನಣೆ ಮತ್ತು ಪಾರಿತೋಷಕಗಳು ವಿಜ್ಞಾನ-ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುವುದಿಲ್ಲ. ಭಾರತ ಪೇಟೆಂಟುಗಳು ಮತ್ತು ಸಂಶೋಧನಾ ಪ್ರಬಂಧಗಳ ಸಂಖ್ಯೆಯಲ್ಲೂ ಈಗ ಜಾಗತಿಕವಾಗಿ 9ನೇ ಸ್ಥಾನದಲ್ಲಿದೆ. ಆದರೆ ಅದರ ಶೇ. 2.5 ಮಾತ್ರ ಗುಣಾತ್ಮಕವಾಗಿ ಗಮನಾರ್ಹವಾಗಿದೆ ಎಂಬುದು ವಾಸ್ತವ.

ವಿಜ್ಞಾನ-ತಂತ್ರಜ್ಞಾನ ಸ್ವಾವಲಂಬನೆ ಯಾಕೆ ಮತ್ತು ಹೇಗೆ?

ವಿಜ್ಞಾನ-ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ (ಅಥವಾ ‘ನೆಹರೂ ವಾಸನ’ಹೋಗಲಾಡಿಸಲು ಟಂಕಿಸಿದ“ಆತ್ಮನಿರ್ಭರತೆ) ಯಾಕೆ ಮತ್ತು ಹೇಗೆ ಸಾಧಿಸುವುದು ಎಂಬುದರ ಕುರಿತು ಸಹ ಅಷ್ಟೇ ಗೊಂದಲವನ್ನು ಈ ನೀತಿ ತೋರ್ಪಡಿಸುತ್ತದೆ. ಕೊವಿದ್ ಬಿಕ್ಕಟ್ಟಿನಲ್ಲಿ ಆವಶ್ಯಕ ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ ಗಳು, ಆರೋಗ್ಯ ಕಾರ್ಯಕರ್ತರ ರಕ್ಷಣಾ ಗವುಸುಗಳನ್ನು ಆಮದು ಮಾಡಬೇಕಾದ ಪರಿಸ್ಥಿತಿ ಬಂದ ಮೇಲೂ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರಕಾರ ಸೋತಿದೆ ಎಂಬುದು ಸ್ಪಷ್ಟ.

ಕೈಗಾರಿಕಾ ಕ್ರಾಂತಿಯ ಮೂರನೇ ಅಲೆಯಲ್ಲೇ ವಿಜ್ಞಾನ-ತಂತ್ರಜ್ಞಾನ ಸ್ವಾವಲಂಬನೆಗೆ ಒತ್ತು ಕೊಟ್ಟು ಚೀನಾ ಮಾತ್ರವಲ್ಲ, ದ.ಕೊರಿಯಾ, ತೈವಾನ್, ಸಿಂಗಾಪುರ, ಹಾಂಗ್ ಕಾಂಗ್ ನಂತಹ ಬಂಡವಾಳಶಾಹಿ ದೇಶಗಳು ಸಹ ಮಾರುಕಟ್ಟೆ ದೇವರ ಮೇಲೆ ಭಾರ ಹಾಕಿ ಕೈ ಕಟ್ಟಿ ಕೂರಲಿಲ್ಲ. ಬದಲಾಗಿ ಜಪಾನಿನ ಮಾದರಿ ಅನುಸರಿಸಿ ವಿಜ್ಞಾನ-ತಂತ್ರಜ್ಞಾನಕ್ಕೆ ಆದ್ಯತೆ ಕೊಟ್ಟವು, ಅದರ ಬೆಳವಣಿಗೆಯಲ್ಲಿ ಪ್ರಭುತ್ವಗಳು ಭಾರೀ ಹೂಡಿಕೆ ಮಾಡಿದವು, ಅದರ ದಿಕ್ಕು-ದೆಸೆ ನಿರ್ಧರಿಸುವಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸಿದವು. ಈ ದೇಶಗಳು ಮೂರನೇ ಅಲೆಯಲ್ಲೇ ಪ್ರಮುಖ ಪಾತ್ರ ವಹಿಸಿದವು. ಚೀನಾ ವಂತೂ ಈ ನಿಟ್ಟಿನಲ್ಲಿ ಅನುಕರಣೀಯ ಸಾಧನೆ ಮಾಡಿ ಎರಡನೇ ಅತಿ ದೊಡ್ಡ ಮತ್ತು ಪ್ರಬಲವಾದ ಆರ್ಥಿಕವಾಗಿದೆ. ಕೈಗಾರಿಕಾ ಕ್ರಾಂತಿಯ ನಾಲ್ಕನೇ ಅಲೆಯಲ್ಲಿ ಅಗ್ರಸ್ಥಾನ ಪಡೆಯುವತ್ತ ದೃಢ ಹೆಜ್ಜೆ ಇಡುತ್ತಿದೆ. ಸಂಶೋಧನೆಯ ಹಲವು ಸೂಚಕಗಳಲ್ಲಿ ಮೊದಲ ಅಥವಾ ಎರಡನೆಯ ಸ್ಥಾನ ಪಡೆದಿದೆ. 5ಜಿ ಮೊಬೈಲ್ ತಂತ್ರಜ್ಞಾನದ ಪೈಪೋಟಿಯಲ್ಲಿ ಮುಂದಿದೆ. ಇತರ ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿ ಒಡ್ಡಿದೆ. ಜಾಗತಿಕ ಹೊಸಶೋಧ ಸೂಚಕದಲ್ಲಿ ಚೀನಾ 14ನೇ ಸ್ಥಾನದಲ್ಲಿದ್ದರೆ, ಭಾರತ 48ನೇ ಸ್ಥಾನದಲ್ಲಿದೆ.

1980ರ ದಶಕದ ವರೆಗೆ ಇಂತಹ ನೀತಿ (ಅದರಲ್ಲೂ ಹಲವು ನ್ಯೂನತೆಗಳಿದ್ದರೂ) ಅನುಸರಿಸಿದ್ದು, 1990ರ ದಶಕದಿಂದೀಚೆಗೆ ಅದಕ್ಕೆ ತಿಲಾಂಜಲಿ ಇತ್ತಿದ್ದೇ ಸಮಸ್ಯೆ ಎಂದು ಗುರುತಿಸದೇ ಇರುವುದು ಈ ನೀತಿಯ ದೊಡ್ಡ ವೈಫಲ್ಯ.

ಇಂತಹ ಜಾಗತಿಕ ಅನುಭವ ಸೇರಿದಂತೆ ಇವ್ಯಾವುದನ್ನೂ ಈ ನೀತಿ ಗಣನೆಗೆ ತೆಗೆದುಕೊಂಡಿಲ್ಲ. ಪ್ರಭುತ್ವ ಎಲ್ಲದರಿಂದ ಹಿಂದೆ ಸರಿಯುವ, ಎಲ್ಲವನ್ನೂ ಜಾಗತಿಕ ಬಂಡವಾಳಕ್ಕೆ ಬಿಡುವ ನವ-ಉದಾರವಾದಿ ಚೌಕಟ್ಟು ಒಳಗೆ ಗಿರಕಿ ಹೊಡೆಯುತ್ತಿದೆ.

ವಿದೇಶೀ ಹೂಡಿಕೆ ಮತ್ತು ಸಾಂಪ್ರದಾಯಿಕ ಜ್ಞಾನದ ಮೂಲಕ ‘ಆತ್ಮನಿರ್ಭರತೆ’?!

ಇದಕ್ಕೆ ಬದಲಾಗಿ ಈ ಸರಕಾರಕ್ಕೆ ಎಲ್ಲ ಸಮಸ್ಯೆಗೂ ಪರಿಹಾರ ಕೊಡಬಲ್ಲ ರಾಮಬಾಣವಾದ ವಿದೇಶೀ ಹೂಡಿಕೆಯ ಮಂತ್ರವನ್ನು “ಆತ್ಮನಿರ್ಭರತೆ”ಯ ಸಾಧನೆಗೂ ಜಪಿಸುತ್ತಿದೆ!! ಯುಪಿಎ ಸರಕಾರ ಸ್ವಾವಲಂಬನೆ ಹಳಸಲು ಪರಿಕಲ್ಪನೆ, ಬೇಕಾದ ತಂತ್ರಜ್ಞಾನವನ್ನು ಯಾವಾಗಲೂ ಆಮದು ಮಾಡಬಹುದು ಎಂಬ ನೀತಿ ಅನುಸರಿಸಿತ್ತು. ಈಗಿನ ಸರಕಾರ ವಿದೇಶೀ ಕಂಪನಿಗಳು ತಯಾರಿಕೆಯನ್ನು ಭಾರತದಲ್ಲಿ ಮಾಡುವ ಮೂಲಕ ಮತ್ತು ಅವು ಭಾರತದಲ್ಲಿ ಸಂಶೋಧಣೆ ಕೈಗೊಳ್ಳುವ ಮೂಲಕ “ಆತ್ಮನಿರ್ಭರತೆ” ಸಾಧಿಸಬಹುದು ಎಂದು ನಂಬಿದೆ. ಇದು ಜಪಾನ್ ಅಥವಾ ಯಾವುದೇ ದೇಶದಲ್ಲೂ ಯಾವತ್ತೂ ಆಗಿಲ್ಲ. ಯಾವುದೇ ತಂತ್ರಜ್ಞಾನ ಮತ್ತು ವಸ್ತು ದೇಶದಲ್ಲಿ ತಯಾರಾದ ಕೂಡಲೇ, ಆ ಉತ್ಪಾದನಾ ಮತ್ತು ಉತ್ಪನ್ನದ ತಂತ್ರಜ್ಞಾನ ನಮ್ಮದಾಗಿ ಬಿಡುತ್ತದೆ ಎಂದೂ ಅದು ನಂಬಿದೆ. ಹೀಗೆ ಆಸ್ಟ್ರಾಜೆನಿಕಾ ಮತ್ತು ಭಾರತ್ ಬಯೋಟೆಕ್ ಎರಡರ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವುದರಿಂದಲೇ, ಎರಡನ್ನೂ ಅದು “ಮೇಡ್ ಇನ್ ಇಂಡಿಯಾ” ವ್ಯಾಕ್ಸೀನ್ ಎಂದು ಕರೆಯುತ್ತದೆ!

ಹೀಗಂತ ಅದು ನಂಬಿದೆ ಮಾತ್ರವಲ್ಲ, ನೀತಿ ಶಿಫಾರಸು ಮಾಡುವ ಕ್ರಮಗಳು ಅದರ ಮೇಲೆ ಆಧರಿಸಿವೆ. “ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ”ಗಳಲ್ಲಿ ಹೂಡಿಕೆ ಮಾಡಲು ವಿದೇಶೀ ಕಂಪನಿಗಳಿಗೆ ಉತ್ತೇಜನ ಕೊಡಲು ಕಾರ್ಪೊರೆಟ್ ತೆರಿಗೆ ಕಡಿತ, ವೇಗದ ಮಂಜೂರಿ, ಭೂಮಿ ಇತ್ಯಾದಿ ಕೊಡಬೇಕು ಎಂದು ವಿಧಿಸುತ್ತದೆ. ಅದೇ ರೀತಿಯಲ್ಲಿ ಹಿಂದೆ ಹೇಳಿದ ಹಾಗೆ ಭಾರತದ ಖಾಸಗಿ ಕ್ಷೇತ್ರ ಸಹ ಇವುಗಳಲ್ಲಿ ಹೂಡಿಕೆ ಮಾಡುತ್ತವೆ ಎಂದೂ ಸರಕಾರ ನಂಬಿದೆ. ಜಗತ್ತಿನ ಬೇರೆ ದೇಶಗಳಲ್ಲಿ ಇದು ಆಗಿದೆ. ಭಾರತದ ಖಾಸಗಿ ಕ್ಷೇತ್ರದ ಉದ್ಯಮಿಗಳು ಮತ್ತು ಕಂಪನಿಗಳು ಯಾವತ್ತೂ ಇದನ್ನು ಮಾಡಿಲ್ಲ ಎಂಬುದು ವಾಸ್ತವ. ಅದರಲ್ಲೂ ವಿದೇಶೀ ತಂತ್ರಜ್ಞಾನ ಸುಲಭವಾಗಿ ಲಭ್ಯವಿರುವಾಗ, ಈಗ ಅಂತಹ ಲಕ್ಷಣಗಳು ಯಾವುವು ಗೋಚರಿಸಿಲ್ಲ. ಆದರೂ ಈ ಆಧಾರರಹಿತ ನಂಬಿಕೆ ಈ ನೀತಿಯ ತಳಹದಿಯಾಗಿದೆ.

“ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳಿಗೆ ಉತ್ತೇಜನ, ತಳಮೂಲದ ಸಂಘಟನೆಗಳು ಮತ್ತು ನವೋದ್ಯಮಗಳ ಮೂಲಕ ಹೊಸಶೋಧಕ್ಕೆ ಮತ್ತು ಸ್ವದೇಶೀ ತಂತ್ರಜ್ಞಾನದ ಬೆಳವಣಿಗೆ”ಯಿಂದಲೂ ಈ ನೀತಿ “ಆತ್ಮನಿರ್ಭರತೆ” ಸಾಧಿಸಬಹುದು ಎನ್ನುತ್ತದೆ. ತಳಮೂಲದ ಸಂಘಟನೆಗಳು ಮತ್ತು ನವೋದ್ಯಮಗಳು ಕೆಲವು ಸ್ಥಳೀಯ ಪರಿಣಾಮ ಬೀರುವ ಸಣ್ಣ ಹೊಸಶೋಧಗಳನ್ನು ಮಾಡಬಹುದು. ಆದರೆ ಅವು ಭಾರತವನ್ನು ಮೊದಲ ಮೂರು ವೈಜ್ಞಾನಿಕ ಸೂಪರ್ ಪವರ್ ಆಗಲು ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ತಯಾರು ಮಾಡಬಲ್ಲವು ಎಂಬುದು ತೀವ್ರ ಅನುಮಾನಾಸ್ಪದ. ಸಂಘಪರಿವಾರದ ಸಂಘಟನೆಗಳು ಮತ್ತು ‘ದೇವಮಾನವರು’ ‘ಹಸು ವಿಜ್ಞಾನ’, ‘ಹಸು ತಂತ್ರಜ್ಞಾನ’ಕ್ಕೆ ಅನುದಾನಗಳನ್ನು ಲೂಟಿ ಮಾಡಲು ಅನುವು ಮಾಡಿಕೊಡುವುದು ಮಾತ್ರ ಈ ಅಂಶದ ಪ್ರಮುಖ ಉದ್ದೇಶ ಇದ್ದಂತಿದೆ.

ವಿದೇಶೀ ಕಂಪನಿಗಳು,ತಳಮೂಲದ ಸಂಘಟನೆಗಳು ಮತ್ತು ನವಸಾಹಸೋದ್ಯಮಗಳು ದೇಶದ “ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ”ಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಬಲ್ಲವು ಎಂದು ನಿರೀಕ್ಷಿಸುವುದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ.

ಅರ್ಥಹೀನ ಕ್ರಮಗಳ ಹುನ್ನಾರಗಳ ಸರಣಿ

ಈ ನೀತಿ ಗುರಿ, ಉದ್ದೇಶ ಮತ್ತು ಅದನ್ನು ಸಾಧಿಸಲು ರಣನೀತಿಯ ಕುರಿತು ಮಾತ್ರ ಗೊಂದಲವನ್ನು ಹೊಂದಿಲ್ಲ. ಅದು ಹಲವು ಅರ್ಥಹೀನ ಕ್ರಮಗಳ ಸರಣಿಯನ್ನು ಹೊಂದಿದೆ. ಕೆಲವು ಸ್ವಾಗತಾರ್ಹ ಕ್ರಮ ಎಂದು ಮೇಲೆ ಕಾಣುವ ಕ್ರಮಗಳ ಹಿಂದೆ ಹುನ್ನಾರಗಳೂ ಕಾಣುತ್ತವೆ. ಕೆಲವು ಉದಾಹರಣೆಗಳು:

* ಸಂಶೋಧನೆಗೆ ಹಣ ಹೂಡಿಕೆಯನ್ನು ಗಮನಾರ್ಹವಾಗಿ ಏರಿಸುವ ಭಾರವನ್ನು ನೀತಿಸಾರ್ವಜನಿಕ ಮತ್ತು ಖಾಸಗಿ ಉದ್ಯಮಗಳು, ವಿ.ವಿ ಗಳು, ಸಂಶೋಧನಾ ಸಂಸ್ಥೆಗಳು, ರಾಜ್ಯ ಸರಕಾರಗಳು, ಮಧ್ಯಮ-ಸಣ್ಣ ಉದ್ಯಮಗಳ ತಲೆ ಮೇಲೆ ಹಾಕುತ್ತದೆ. ನಿರ್ದಿಷ್ಟ ಶೇಕಡಾ ವನ್ನು ಸಂಶೋಧನೆಗೆ ಖರ್ಚು ಮಾಡಬೇಕು ಎಂದು ನೀತಿ ವಿಧಿಸುತ್ತದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಏನನ್ನೂ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳುತ್ತದೆ. ದೊಡ್ಡ ಖಾಸಗಿ ಉದ್ಯಮಗಳನ್ನು ಬಿಟ್ಟು ಇತರ ಎಲ್ಲ ಸಂಸ್ಥೆಗಳು ಆಗಲೇ ಅವುಗಳ ಪ್ರಮುಖ ಉದ್ದೇಶಗಳಿಗೆ ಸಂಪನ್ಮೂಲ ಹೊಂಚಲು ಹರ ಸಾಹಸ ಪಡುತ್ತಿವೆ. ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ತಮ್ಮ ಅರ್ಧದಷ್ಟು ಖರ್ಚುಗಳಿಗೆ ಸಂಪನ್ಮೂಲವನ್ನು ತಾವೇ ಹೊಂಚಬೇಕು ಎಂಬ ನಿಯಮ (ದೆಹರಾಡೂನ್ ಯೋಜನೆ) ದಿಂದಾಗಿ ಆಗಲೇ ಹಲವು ಸಂಶೋಧನಾ ಕಾರ್ಯಕ್ರಮವನ್ನು ಕಡಿತಗೊಳಿಸಿವೆ. ಈ ಸಂಘಟನೆಗಳೆಲ್ಲ ಸಂಶೋಧನೆಗೆ ನಿರ್ದಿಷ್ಟ ಶೇಕಡಾವಾರು ಹೂಡಿಕೆ ಮಾಡಿದರೂ, ‘ರಾಷ್ಟ್ರೀಯ ಮಿಶನ್’ ವಿಧಾನದಲ್ಲಿ ಸ್ಪಷ್ಟ ಗುರಿಗಳಿರುವ ದೊಡ್ಡ ಹೂಡಿಕೆ ಇರುವ ಯೋಜನೆ ಇಲ್ಲದೆ ವಿಜ್ಞಾನ-ತಂತ್ರಜ್ಞಾನ ದಲ್ಲಿ ನಿರ್ಣಾಯಕ ಮುನ್ನಡೆ ಮತ್ತು ಸ್ವಾವಲಂಬನೆ ಸಾಧಿಸುವುದು ಸಾಧ್ಯವಿಲ್ಲ.

* ಈ ನೀತಿ ಹೆಚ್ಚಿನ ಸಂಪನ್ಮೂಲವನ್ನು ಹೊಂಚುವುದರ ಕುರಿತು ಅಸ್ಪಷ್ಟವಾಗಿದ್ದರೂ, ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳ ಹಲವು ಆಯಾಮಗಳನ್ನು ನಿರ್ವಹಿಸಲು ಏಳಕ್ಕೂ ಹೆಚ್ಚು ಕೇಂದ್ರೀಯ ಮೇಲುಸ್ತುವಾರಿ ಸಂಸ್ಥೆಗಳ ಸ್ಪಷ್ಟ ಪ್ರಸ್ತಾವ ಮುಂದಿಟ್ಟಿದೆ. ಈಗಾಗಲೇ ವೀಪರೀತ ‘ತಲೆಭಾರ’ ಇರುವ ದೇಶದ ವಿಜ್ಞಾನ-ತಂತ್ರಜ್ಞಾನ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚು ‘ತಲೆಭಾರ’ ಉಳ್ಳ ಅಧಿಕಾರಶಾಹಿಯಾಗಿಸಿ ಇದು ಸಂಶೋಧನೆಗೆ ಮಾರಕವಾಗುತ್ತದೆ.

* ಹಿಂದಿನ ನೀತಿಗಳಲ್ಲಿ ಒತ್ತು ನೀಡಲಾಗಿದ್ದ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಹರಡುವ ಕುರಿತು ನೀತಿ ಮೌನವಾಗಿದೆ. ಮಾತ್ರವಲ್ಲ, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗೆ ಉತ್ತೇಜನ ಕೊಡುವ ಹೆಸರಲ್ಲಿ ಅವೈಜ್ಞಾನಿಕ ‘ಹಸು ವಿಜ್ಞಾನ’ದಂತಹ ಮೂಢನಂಬಿಕೆಗೆ ಉತ್ತೇಜನ ಕೊಡುವ ಅಪಾಯವಿದೆ.

* ವಿಜ್ಞಾನ-ತಂತ್ರಜ್ಞಾನಗಳಲ್ಲಿ ಸಾಮರ್ಥ್ಯ, ಕೌಶಲ್ಯ ಬೆಳವಣಿಗೆ ಮತ್ತು ಸಂಶೋಧನೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರದ ಕುರಿತು ಇನ್ನೂ ಚರ್ಚೆಯ ಹಂತದಲ್ಲಿರುವ ಹೊಸ ಶಿಕ್ಷಣ ನೀತಿಯ ಖಾಸಗೀಕರಣ, ವ್ಯಾಪಾರೀಕರಣ ಮತ್ತು ವಿದೇಶೀ ಹೂಡಿಕೆಯ ನೀತಿಯನ್ನು ಈ ನೀತಿ ಅನುಮೋದಿಸುವ ಮೂಲಕ ಎರಡೂ ನೀತಿಗಳೂ ನವ-ಉದಾರವಾದಿ ಚೌಕಟ್ಟಿನ ಒಳಗೆ ಬಂಧಿಸಲ್ಪಟ್ಟಿವೆ ಎಂಬುದನ್ನು ತೋರ್ಪಡಿಸುತ್ತವೆ.

* ವಿಜ್ಞಾನ ಸಂವಹನ ಮತ್ತು ಪ್ರಸಾರಕ್ಕೆ ಒತ್ತು ಕೊಡುವುದು ಸ್ವಾಗತಾರ್ಹವಾದರೂ ಈ ಜವಾಬ್ದಾರಿಯನ್ನು ಹೊಸದಾಗಿ ಸೃಷ್ಟಿಸಲ್ಪಡುವ ವಿಜ್ಞಾನ ಚಳುವಳಿಗಳು ಮತ್ತು ವಿಜ್ಞಾನಿಗಳ ಮೇಲೆ ಹೊರಿಸಿರುವುದು ಸಂಶಯಕ್ಕೆಡೆ ಮಾಡಿಕೊಡುತ್ತದೆ. ನಾಲ್ಕು ದಶಕಗಳಿಂದಲೂ ದೀರ್ಘ ಕಾಲ ತಳಮೂಲದ ವಿಜ್ಞಾನ ಸಂವಹನ ಮತ್ತು ಪ್ರಸಾರ ಸಮರ್ಥವಾಗಿ ನಿರ್ವಹಿಸುತ್ತಿರುವ ಜನ ವಿಜ್ಞಾನ ಚಳುವಳಿಗಳ ಜಾಲವೇ ಇರುವಾಗ ಇದರ ಅಗತ್ಯವೇನು? ಈ ಕ್ಷೇತ್ರದಲ್ಲೂ ಸಂಘಪರಿವಾರದ ಸಂಘಟನೆಗಳನ್ನು ಸರಕಾರದ ಪ್ರಾಯೋಜಕತ್ವದಲ್ಲಿ ಹರಿಯಬಿಡುವ ದುರುದ್ದೇಶವೇ ಕಾಣುತ್ತದೆ.

* ಭಾರತೀಯ ಸಂಶೋಧನಾ ಸಂಸ್ಥೆಗಳ ಫಲಿತಗಳನ್ನು ಸಾರ್ವಜನಿಕರಿಗೆ ತೆರೆಯುವ ಹೆಸರಲ್ಲಿ, ಅವನ್ನು ಭಾರತೀಯ ಕಾರ್ಪೊರೆಟುಗಳಿಗೆ ಮತ್ತು ವಿದೇಶೀ ಕಂಪನಿಗಳಿಗೆ ಲಾಭ ಮಾಡಿಕೊಳ್ಳಲು ಉಚಿತವಾಗಿ ಕೊಡುವ ಹುನ್ನಾರ ಕಾಣಿಸುತ್ತದೆ.

* ದುಬಾರಿಯಾಗಿರುವುದರಿಂದ ಭಾರತೀಯ ಸಂಶೋಧಕರ ಮತ್ತು ಸಂಸ್ಥೆಗಳಿಗೆ ನಿಲುಕದಿರುವ ವಿದೇಶೀ ಸಂಶೋಧನಾ ಪತ್ರಿಕೆಗಳಿಗೆ ಇಡೀ ದೇಶದ ಪರವಾಗಿ ಚಂದಾ ಕೊಡುವ ಪ್ರಸ್ತಾವ ಸ್ವಾಗತಾರ್ಹ. ಆದರೆ ಇಲ್ಲೂ ಸಂಶೋಧನಾ ಪತ್ರಿಕೆಯನ್ನು ಏಕಸ್ವಾಮ್ಯ ವ್ಯಾಪಾರವಾಗಿಸುವ ಕಂಪನಿಗಳಿಗೆ ಮಣಿಯುವ ಬದಲು, ಅದರ ವಿರುದ್ಧ ಈಗ ಜಾಗತಿಕವಾಗಿ ಆರಂಭವಾಗಿರುವ ಮುಕ್ತ ಪತ್ರಿಕೆಗಳ ಚಳುವಳಿಗೆ ಬೆಂಬಲ ನೀಡುವ ಅಗತ್ಯವಿತ್ತು.

* ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ಅಲೆ ಉದ್ಯೋಗಗಳ, ಜೀವನೋಪಾಯಗಳ ಮೇಲೆ ಬೀರುವ ಪರಿಣಾಮಗಳನ್ನು ನಿಭಾಯಿಸಿ ಜನರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಏನು ಕ್ರಮ ವಹಿಸಬಹುದು ಎಂಬುದರ ಬಗೆಗೂ, ಹಾಗೆನೇ ಕೃಷಿ, ಕೈಕಸುಬುಗಳ ತಂತ್ರಜ್ಞಾನಗಳ ಉನ್ನತೀಕರಣ ಕುರಿತು ಈ ನೀತಿ ಮೌನವಾಗಿದೆ.

ಒಟ್ಟಂದದಲ್ಲಿ ಹೇಳುವುದಾದರೆ, STIP 2020 (ಸರಕಾರದ ಇತರ ಸಚಿವಾಲಯಗಳೂ ಸೇರಿದಂತೆ) ಎಲ್ಲ ಆಸಕ್ತ ಸಂಸ್ಥೆ, ವ್ಯಕ್ತಿಗಳ ಜತೆ ಸಮಾಲೋಚನೆ ನಡೆಸದೆ ಗಡಿಬಿಡಿಯಲ್ಲಿ ರೂಪಿಸಿ ಬಿಡುಗಡೆ ಮಾಡಿದ ನೀತಿ. ಇದು ವಿಜ್ಞಾನ-ತಂತ್ರಜ್ಞಾನ ಸಚಿವಾಲಯದ ದಸ್ತಾವೇಜು ಮಾತ್ರ. ರಾಷ್ಟ್ರೀಯ ನೀತಿ ಖಂಡಿತ ಅಲ್ಲ. ಇದು ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ಅಲೆಗೆ ಭಾರತವನ್ನು ಸಜ್ಜುಗೊಳಿಸುವ ಯಾವ ಅಂಶಗಳನ್ನೂ ಹೊಂದಿಲ್ಲ. ನವ-ಉದಾರವಾದಿ ಚೌಕಟ್ಟಿನ ಒಳಗೆ ಎಲ್ಲ ನೀತಿಗಳನ್ನು ತುರುಕಿಸುವ ಜಾಗತಿಕ ಬಂಡವಾಳದ ಮತ್ತು ಪುರೋಹಿತಶಾಹಿಯ ಒತ್ತಡಕ್ಕೆ ಮಣಿಯುವ ತವಕ ಬಿಟ್ಟರೆ, ಕೊವಿದ್ ಪರಿಸ್ಥಿತಿಯಲ್ಲಿ ಇಷ್ಟು ಗಡಿಬಿಡಿಯಲ್ಲಿ ಇದನ್ನು ರೂಪಿಸುವ ತುರ್ತು ಖಂಡಿತ ಇಲ್ಲ.

Donate Janashakthi Media

Leave a Reply

Your email address will not be published. Required fields are marked *