ವಿಜ್ಞಾನ ಸಾಹಿತಿ, ಹೋರಾಟಗಾರ ಮತ್ತು ಪ್ರಖರ ವಿಜ್ಞಾನ ಸಂವಹನಕಾರ- ನಾಗೇಶ ಹೆಗಡೆ

  • ಅಹಮದ್ ಹಗರೆ

ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮ ತೀರ ಅಗತ್ಯ, ಆದರೆ ಮಾದ್ಯಮದೊಳಗೆ ಪ್ರಜಾಪ್ರಭುತ್ವವನ್ನು ಉಳಿಸುವವರು ಯಾರು?ಪಿ.ಸಾಯಿನಾಥ್

ಇವತ್ತಿನ ಸಂದರ್ಭದ ಜರ್ನಲಿಸಂ ಅನ್ನು ನಾನು ಕನ್ನಡದಲ್ಲಿ ಹೇಗೆ ಭಾಷಾಂತರಿಸುವುದು?

ಇದಕ್ಕೆ ಸಮಾನಾರ್ಥಕವಾದ ಕನ್ನಡ ಶಬ್ದ ಇಲ್ಲ. ಜರ್ನಲಿಸಂಗೆ ಪತ್ರಿಕೋದ್ಯಮ ಅಂದರೆ ಉದ್ಯಮದ ಪರಿಭಾಷೆ ಬರುತ್ತೆ ಜರ್ನಲಿಸಂ ಅನ್ನುವುದು ಒಂದು ಸಿದ್ಧಾಂತ (ಫಿಲಾಸಫಿ), ಸಿದ್ಧಾಂತಕ್ಕೆ ಒಂದು ಸಾಮಾಜಿಕ ತುಡಿತ ಇರುತ್ತೆ ಹಾಗಿದ್ದರೆ ಮಾತ್ರ ಅದನ್ನು ಸಿದ್ಧಾಂತ ಅಂತ ಕರೀತಾರೆ ಆದರೆ ಜರ್ನಲಿಸಂ ಅನ್ನೋದು ಈಗ ಒಂದು ಸಾಮಾಜಿಕ ತುಡಿತವಾಗಿದೆಯೆ? ಅನ್ನುವ ಪ್ರಶ್ನೆ ನನ್ನಂತಹವರನ್ನು ಕಾಡುತ್ತದೆ. ಸಂಪೂರ್ಣ ವ್ಯಾಪಾರೀಕರಣಗೊಂಡಿರುವ ಜರ್ನಲಿಸಂನ ನಡುವೆ ಜನರ ಆಶೋತ್ತರಗಳನ್ನು, ಜನರ ಬಯಕೆಗಳನ್ನು, ಜನರ ದುಃಖ-ದುಮ್ಮಾನಗಳನ್ನು, ಈ ನೆಲದ ಪ್ರಜಾತಂತ್ರವನ್ನು ಗಟ್ಟಿಯಾಗಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಜರ್ನಲಿಸ್ಟರ ಸಂಖ್ಯೆಗಳನ್ನು ಲೆಕ್ಕಹಾಕಿದರೆ ಬೆರಳೆಣಿಕೆಯಷ್ಟು ಮಾತ್ರ! ಪಿ.ಸಾಯಿನಾಥ್, ಡಿ.ಉಮಾಪತಿ, ಸಂವರ್ಥಸಾಹಿಲ್, ಪ್ರಣಯ್‍ರಾಯ್, ರವೀಶ್‍ಕುಮಾರ್, ದಿನೇಶ್ ಅಮಿನ್‍ಮಟ್ಟು ಅಂತಹವರು ನಮ್ಮ ಕಣ್ಣ ಮುಂದೆ ಅಲ್ಲಲ್ಲಿ ಅಲ್ಲಿ ಕಂಡುಬರುತ್ತಾರೆ ಇವರೆಲ್ಲರ ನಡುವೆ ಎದ್ದು ಕಾಣುವ ಇನ್ನೊಂದು ಪರ್ಸನಾಲಿಟಿ. ಡಾ. ನಾಗೇಶ್ ಹೆಗಡೆ.

ನಾಗೇಶ ಹೆಗಡೆ ಜನರ ಪತ್ರಕರ್ತ

“ಎಲ್ಲಿಗೆ ನಾಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು, ನನ್ನವನಾಗಿರುವುದರಿಂದಲೇ ಅಮ್ಮ ಚಂದಿರ ನಿನ್ನವನು”.. ನನಗೆ ಬಹಳ ಇಷ್ಟವಾದ ಪದ್ಯ…. ಇದನ್ನ ಸ್ವಲ್ಪ ಬದಲಿಸಿದರೆ(ಕವಿಯ ಕ್ಷಮೆ ಕೋರಿ) ಎಲ್ಲಿಗೆ ನಾಗೇಶಹೆಗ್ಡೆ ಹೋದರೆ ನಾವಲ್ಲಿಗೆ ಹೋಗುವೆವು, ಹೆಗಡೆ ನಮ್ಮವರಾಗಿರುವುದರಿಂದಲೇ ಅವರು ಗೋವಿನ ಬಗ್ಗೆ ಬರೆದರೆ ನಾವು ಗೋವಿನೊಳಗೆ ನುಗ್ಗಿ ಮೂವತ್ತಮೂರುಕೋಟಿ ದೇವತೆಗಳನ್ನ ಕಣ್ಣಾರೆ ಕಂಡು ಬರುತ್ತೇವೆ, ಅವರು ಪುರಾತನ ತಲೆಬುರುಡೆಯ ಕಮರಿಯೊಳಗೆ ನುಗ್ಗಿದರೆ ನಾವು ಅವರ ಹಿಂದೆಯೇ ಆ ಬುರುಡೆಯ ಮಿದುಳನ್ನೆಲ್ಲಾ ನೋಡಿ ಮಾತನಾಡಿಸಿಕೊಂಡು ಬರುತ್ತೇವೆ, ಅವರು ನೀರಿನಾಳಕ್ಕಿಳಿದರೆ ಹಿಂದಿನಿಂದಲೇ ನಾವು ಅಲ್ಲಿಯ ಜೀವವೈವಿದ್ಯಗಳನ್ನೆಲ್ಲಾ ಮಾತನಾಡಿಸಿಕೊಂಡು ಬರುತ್ತೇವೆ. ಅವರು ಕಾನನ ಗರ್ಭ ಹೊಕ್ಕರೆ ನಾವು ಹಿಂದೆಯೇ ನುಗ್ಗಿ ಅಲ್ಲಿ ಖಗ-ಮೃಗಗಳ ಜೊತೆ ಆಟವಾಡಿಕೊಂಡು ಬರುತ್ತೇವೆ ಅವರು ಪಾತಾಳಗಂಗೆಯೊಳಕ್ಕಿಳಿದರೆ ನಾವು ಹಿಂದೆಯೇ ಭೂಗರ್ಭಕ್ಕೆ ನುಗ್ಗಿ ಶಿಲಾರಾಳಗಳ ಜೊತೆ ಗುದ್ದಾಡಿ ಬರುತ್ತೇವೆ.

ಇಡಿ ಪತ್ರಿಕೋಧ್ಯಮವೇ ಕೋವಿಡ್-19ನ್ನು ಜನರನ್ನು ಹೆದರಿಸಲು ಭಯೋತ್ಪಾತ ಮಾಡುತ್ತಿದ್ದಾಗ ಜನರ ಪ್ರತಿನಿಧಿಯಾಗಿ ನಾಡಿನ ಜನಕ್ಕೆ ಕೋವಿಡ್ ಸತ್ಯಾಸತ್ಯತೆಯ ಕುರಿತು ಮೂರ್ನಾಲ್ಕು ಲೇಖನ ಬರೆದರು ನಾನದನ್ನ ಧ್ವನಿ ನಿಡಿ ನಾಡಿನುದ್ದಕ್ಕೂ ಹಂಚಿದೆ ಅದರಲ್ಲೊಂದು ಅತಿ ಹೆಚ್ಚು ವೈರಲ್ ಆಯಿತು, ಕೋವಿಡ್ಗೊಂದು ಥ್ಯಾಂಕ್ಸ್. ನಾಗೇಶಹೆಗಡೆಯವರ ನಿರರರ್ಗಳ ವಾಗ್ಝರಿ, ಅತ್ಯಂತ ಸರಳವಾಗಿ ವಿಜ್ಞಾನದ ವಿಷಯಗಳನ್ನ ವೆಬಿನಾರ್ ಮೂಲಕ ನಾಡುದಾಟಿ ಕನ್ನಡಬಲ್ಲ-ಬರದ ಜನಗಳು ನೋಡಿ ಹೆಚ್ಚೆಚ್ಚು ಮುಂತಳ್ಳುವಂತಾಯಿತು. ಹೀಗಾಗಲಿಕ್ಕೆ ಅವರಲ್ಲಿರುವ ಸಂವಹನ ಕಲೆಯೇ ಕಾರಣ.

ವಿಜ್ಞಾನದ ಶಬ್ದಗಳಿಗೆ ಕನ್ನಡದಲ್ಲಿ ಶಬ್ದಗಳು ಹುಡುಕುವುದು ಬಹಳ ಕಷ್ಟ ಆದರೆ ಅತ್ಯಂತ ಆಕರ್ಷಕವಾಗಿರುವಂತೆ ಸಮನಾರ್ಥಕ ಕನ್ನಡ ಶಬ್ದಗಳನ್ನು ಕಟ್ಟಿಕೊಡುವಲ್ಲಿ ಸಿದ್ಧಹಸ್ತರು ಉದಾಹರಣೆಗೆ ‘ಜೀನ್’ ಗೆ ‘ಗುಣಾಣು’, ‘ಕ್ಲೋನಿಂಗ್’ಗೆ ‘ಕುಲಾಂತರಿ’, ‘ಜೀನ್ ಸ್ಕ್ರೀನಿಂಗ್’ಗೆ ‘ತಳಿ ತಂತುಗಳ ಹೊಲಿಗೆ’ ಹೀಗೆ ಹುಡುಕಿದರೆ ಸಾವಿರಾರು ಅಪ್ಯಾಯಮಾನವಾದ ಶಬ್ಧಗಳು ಸಿಕ್ಕುತ್ತವೆ ನಿಜಕ್ಕೂ ಇವುಗಳು ಕನ್ನಡ ವಿಜ್ಞಾನ ಶಬ್ಧಕೋಶಕ್ಕೆ ಇವರ ಕೊಡುಗೆ.

ವಿಜ್ಞಾನದ ಸರಕುಗಳನ್ನು ಜನರ ಭಾಷೆಯಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು ಮಾಡುವವನನ್ನು ವಿಜ್ಞಾನ ಸಂವಹನಕಾರ ಅಂತ ಕರೀತೀವಿ. ಕನ್ನಡದ ಗಟ್ಟಿ ವಿಜ್ಞಾನ ಸಂವಹನಕಾರ ಅಂತ ಯಾರಾದರೂ ಇದ್ದರೆ ಅದು ನಾಗೇಶ್‍ಹೆಗಡೆ ಇವರ ನಂತರದಲ್ಲಿ ನಾನು ಪೂರ್ಣಚಂದ್ರ ತೇಜಸ್ವಿಗೆ ಆ ಸ್ಥಾನ ಕೊಡ್ತೀನಿ.

ನಮ್ಮದೊಂದು ಸಣ್ಣ ಬಳಗ ಇತ್ತು ಹಗರೆಯಲ್ಲಿ ನಾವು ಪ್ರಜಾವಾಣಿಯ ಸೋಮವಾರ ಮತ್ತು ಗುರುವಾರದ ಪತ್ರಿಕೆಯನ್ನು ಯಾವಕಾರಣಕ್ಕೂ ಮಿಸ್ ಮಾಡುತ್ತಿರಲಿಲ್ಲ. ನಮ್ಮಲ್ಲೊಂದು ಪ್ರಬುದ್ಧ ರಾಜಕೀಯ ಚಿಂತನೆ ಬೆಳೆಯಲಿಕ್ಕೆ ಪ್ರತಿ ಸೋಮವಾರ ಬರ್ತಿದ್ದ ದಿನೇಶ್ ಅಮೀನ್ ಮಟ್ಟು ಅವರ ರಾಜಕೀಯ ವಿಶ್ಲೇಷಣೆಯ ಅಂಕಣ ಮತ್ತು ಗುರುವಾರದ “ವಿಜ್ಞಾನ ವಿಶೇಷ”. ವಿಜ್ಞಾನ ವಿಶೇಷ ಇದ್ಯಲ್ಲ ಅದು ಕಬ್ಬಿಣದ ಕಡಲೆಯಂತಹ ವಿಜ್ಞಾನದ ಸಂಶೋಧನೆಗಳನ್ನು ಸುಲಿದ ಬಾಳೆಹಣ್ಣಿನ ರೀತಿಯಲ್ಲಿ ಸರಳ ಕನ್ನಡದಲ್ಲಿ ಅರ್ಥೈಸಿ ಬರ್ತಾ ಇದ್ದ ಕಾರಣಕ್ಕೋಸ್ಕರ ಓದುಗರ ಸಂಖ್ಯೆ ಜಾಸ್ತಿಯಾದರೆ ನಾನು ಕೂಡ ಒಬ್ಬ ಈಗಲೂ ಯಾರಾದರೂ ನೋಡ್ತೀವಿ ಅನ್ನೋದಾದ್ರೆ ಪ್ರಜಾವಾಣಿಯ ವಿಜ್ಞಾನ ವಿಶೇಷದಲ್ಲಿ ಬರೆದಂತ ನೂರಾರು ಅಂಕಣಗಳ ಪುಸ್ತಕಗಳ ಪಟ್ಟಿ ಶತ್ರುವಿಲ್ಲದ ಸಮರ, ಕೆರೆಯಲ್ಲಿ ಚಿನ್ನ ಕೆರೆಯೇ ಚಿನ್ನ, ಸೈನ್ಸ್ ಸಫಾರಿ, ಸೈನ್ಸ್ ಮತ್ತು ಪರಿಸರ ಸಿಂಚನ, ಭೂಮಿಯೆಂಬ ಗಗನನೌಕೆ, ವಿಜ್ಞಾನ ಗಂಗೆಯ ಬಿಂದುಸಾರ ಒಮ್ಮೆ ಓದಿನೋಡಿ ವಿಜ್ಞಾನ ಪ್ರಪಂಚದೊಳಗೆ ಲೀಲಾಜಲವಾಗಿ ಈಜಾಡಿ ಬಂದ ಅನುಭವವಾಗುತ್ತದೆ.

ಓದುವನಿಗೆ ಓದಲಿಕ್ಕೆ ಹಚ್ಚಲಿಕ್ಕೆ ಬೇಕಾಗಿರುವ ಮೊದಲ ಅಂಶ ಶೀರ್ಷಿಕೆ, ಎಷ್ಟೋ ವೇಳೆ ನಾವು ಟೈಟಲ್ ನೋಡಿ ಕುತೂಹಲಕ್ಕೆ ಓದಲಿಕ್ಕೆ ಪ್ರಾರಂಬಿಸುತ್ತೇವೆ. ಬರಹಗಾರ ತನ್ನ ಬರವಣಿಗೆಯನ್ನ ಅಥವ ವರದಿಗಾರ ತನ್ನವರದಿಯನ್ನ ಜನಾಕರ್ಷಣೆಗೆ ಒಡ್ಡಿಕೊಳ್ಳುವ ಮೊದಲ ಯಶಸ್ಸಿನ ಗುಟ್ಟೇ ಬರಹಕ್ಕೆ ಕೊಡುವ ಶೀರ್ಷಿಕೆ. ಬಹುಶ: ಕನ್ನಡದ ಪತ್ರಿಕಾ ಬರಹಗಾರರಲ್ಲಿ ಈ ವಿಷಯದಲ್ಲಿ ಇವರನ್ನು ಮೀರಿಸಿದವರಿಲ್ಲ ಎನಿಸುತ್ತದೆ. ಉದಾಹರಣೆಗೆ ಪಾತಾಳಗಂಗೆಯ ಕೂಲಂಕಲ್ಮಶ ಕಥನ, ಪುರಾತನ ಕಮರಿಯ ಬುರುಡೆಯೊಳಗೆ ಮಾನವನ ಗುಟ್ಟು, ಪ್ರಾಣಾಯಾಮ ಮತ್ತು ಪ್ರಾಣ ಹೀರುವ ಔಷಧಗಳು, ಮುಗಿಲಾಚೆ ಜಗದಲ್ಲಿ ಮುಳುಗೇಳುವ ಕ್ಷಣಗಳು, ಖುಷಿ ಇದ್ದರೆ ಇನ್ನೂ ಖುಷಿ, ಶತ್ರುವಿಲ್ಲದ ಸಮರದಲ್ಲಿ ಸೋಲಿಗೆ ಸಿದ್ಧತೆ, ಮುಂದೊಮ್ಮೆ ಅಮೋಘ ಹರಿದಳು ಗಂಗೆ, ಕೃತಕ ಜೀವಿಗಳ ಅಂತರಂಗ ಅವಾಂತರಂಗ,  ಹುಲಿಗಳ ರಕ್ಷಣೆಗೆಂದೇ ಹುಲಿಗಳ ಬಲಿ, ನಿರಂತರ ನೀರಿಗಾಗಿ ನಿಂತಲ್ಲೇ ಓಟ, ಭೂರಮೆಯ ಗಂಟಲಿಗೆ ಕಾಂಕ್ರೀಟ್ ಗೋಲಿಗಳು, ತವಕ-ತಲ್ಲಣಗಳಲ್ಲಿ ಹೆಣ್ಣಿನಿಂದ ಹೆಣ್ಣೆ ಜನನ, ದೊಡ್ಡಾಲದಮರ ಮತ್ತು ಚಂದ್ರಯಾನ ….ಹೀಗೆ ನೋಡಿ ಈ ಟೈಟಲ್ ನಲ್ಲಿನ ಅತ್ಯಾಕರ್ಷಣೆ!.

ನಾನು ಕಳೆದ ಮೂವತ್ತು ವರ್ಷಗಳಿಂದ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತರಬೇತಿ ಕೊಡುವಾಗ ಸಂಪನ್ಮೂಲ ವ್ಯಕ್ತಿಗಳು ಯಾವಾಗಲೂ ಕಾರ್ಯಕರ್ತರಲ್ಲಿ ಹೇಳುವ ಮಾತು ವಿಜ್ಞಾನ ಕಾರ್ಯಕರ್ತ ವಿಜ್ಞಾನ ಬರಹಗಳನ್ನು ಗಂಭೀರವಾಗಿ ಓದಬೇಕು. ಜನವಿಜ್ಞಾನ ಚಳುವಳಿಯಲ್ಲಿ ವಿಜ್ಞಾನ ಸಂವಹನಕ್ಕೆ ವಿಶೇಷವಾಗಿ ತೇಜಸ್ವಿ ಮತ್ತು ನಾಗೇಶಹೆಗಡೆಯವರ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಂಡಿರಬೇಕು. ನಿಮ್ಮಬಳಿ ಬರುವ ಎಲ್ಲ ಸಮಸ್ಯೆಗಳಿಗೆ ಆ ಪುಸ್ತಕಗಳಲ್ಲಿ ಪರಿಹಾರ ಇರುತ್ತದೆ ಎಂದು. ನಿಜವಾಗಿಯೂ ಗೋಮಾಂಸದ ಕುರಿತ ಸಂದರ್ಬ, ಆರ್ಯರ ವಲಸೆಯ ಗುಟ್ಟು ಬಿಚ್ಚಿಟ್ಟ ರಾಖಿಗಡಿಯ ಸಂಶೋಧನೆ ಸಂದರ್ಬ, ಜಾಗತೀಕರಣ ಉಂಟುಮಾಡಿದ ಅಲ್ಲೋಲ ಕಲ್ಲೋಲ ಸಂದರ್ಬದಲ್ಲಿ ಇವರ ಬರಹಗಳು ವಿಜ್ಞಾನ ಸಂವಹನಕಾರರಿಗೆ ಗೈಡ್ ಬುಕ್.

ಕೊನೆಯದಾಗಿ ನನಗೆ ತೃಪ್ತಿ ಇದೆ ಹೆಗಡೆಯ ಬರಹಗಳಲ್ಲಿ ಬರೀ ವಿಜ್ಞಾನ ಇರುವುದಿಲ್ಲ ಜನವಿಜ್ಞಾನ ಇರುತ್ತದೆ, ಹೆಗಡೆಯ ಜರ್ನಲಿಸಂನಲ್ಲಿ ಬರಿ ವರದಿಗಾರಿಕೆ ಇರುವುದಿಲ್ಲ ಜನಸಮುದಾಯದ ದನಿ ಇರುತ್ತದೆ, ಅವರ ಬರವಣಿಗೆಯಲ್ಲಿ ಭೂಯಿಷ್ಠತೆ ಇರುವುದಿಲ್ಲ ಕೆಳಸ್ಥರದ ಜನರ ಹಕ್ಕಿನ ದನಿ ಇರುತ್ತದೆ, ಹೆಗಡೆ ಜಡ ಪರಿಸರವಾದಿ ಅಲ್ಲ, ಜಡ ಪತ್ರಕರ್ತನೂ ಅಲ್ಲ. ಆತನೊಬ್ಬ ಮಹಾನ್ ಆಶಾವಾದಿ, ಮಹಾನ್ ಜನವಾದಿ ನಮ್ಮ ಅಭಿವೃದ್ಧಿ ಮಾದರಿಯಲ್ಲಿ ಕೇಂದ್ರ ಸ್ಥಳವನ್ನು ಆಕ್ರಮಿಸಬೇಕಾದ ಕೊನೆಯ ವ್ಯಕ್ತಿ ವ್ಯವಸ್ಥಿತವಾಗಿ ಅಂಚಿಗೆ ತಳ್ಳಲ್ಪಟ್ಟಿದ್ದಾನೆ ಮತ್ತು ಅಕ್ಷರಶಃ ಹೊರಹಾಕಲ್ಪಟ್ಟಿದ್ದಾನೆ. ನಮ್ಮ ಅಭಿವೃದ್ದಿಗಳು, ವಿಜ್ಞಾನದ ಫಲಗಳು ಅತ್ಯಂತ ಕೊನೆಯ ವ್ಯಕ್ತಿಯನ್ನು ಘನತೆಯಿಂದ ಜೀವಿಸುವ ಬದುಕನ್ನ ಕಟ್ಟಿಕೊಡುವುದಾಗಿದೆ. ಇಂದಿನ ವಿಜ್ಞಾನ ಜನಸಾಮಾನ್ಯರ ಕೈಗೆ ಬರಬೇಕು ಎನ್ನುವ ನಿಲುವಾಗಿದೆ.

“ಕೇವಲ ವೈಜ್ಞಾನಿಕ ಸಿದ್ಧಿಯಲ್ಲದೆ ಅದರ ಹಾದಿಯಲ್ಲಿ ಇರುವ ಕಂದಕಗಳ ಆಳವನ್ನೂ ಗಮನಿಸಬೇಕಾದುದು ಅತ್ಯಂತ ಅಗತ್ಯವಿದೆ.” ಟಾಗೋರರ ಈ ಮಾತು ಅಕ್ಷರಶಃ ಸತ್ಯ… ಈ ಮಾತಿಗೆ ಪೂರಕವೆಂಬಂತೆ ಹೆಗಡೆಯವರದೊಂದು ಪುಸ್ತಕ ಇದೆ ‘ಪ್ರತಿದಿನ ಪರಿಸರ ದಿನ’ ಅಂತ ಅದರ ಮುಖಪುಟದಲ್ಲೊಂದು ವಾಕ್ಯ ಇದೆ “ಪರಿಸರವೆಂಬುದು ಅಪ್ಪನಿಂದ ಬಂದ ಆಸ್ತಿಯಲ್ಲ ಮಕ್ಕಳಿಂದ ಪಡೆದ ಸಾಲ !” ಈ ಸಾಲವನ್ನ ನಾಗೇಶ ಹೆಗಡೆ ಬಡ್ಡಿ ಸಮೇತ ತೀರಿಸಿದ್ದಾರೆ. ಸಾವಿರಾರು ಲೇಖನಗಳ ಮೂಲಕ ಮತ್ತಾ ಲೇಖನಗಳನ್ನ ಗಂಟುಕಟ್ಟುವ ಮೂಲಕ, ನೂರಾರು ವಿಜ್ಞಾನ ಬರಹಗಾರರನ್ನು ಸೃಷ್ಠಿಸುವ ಮೂಲಕ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಕಟ್ಟಡ ಕಟ್ಟುವ ಮೂಲಕ, ವಿಜ್ಞಾನದ ಫಲಗಳೆಲ್ಲವನ್ನೂ ನೆಲದ ಕಟ್ಟಕಡೆಯ ಮನುಷ್ಯನಿಗೆ ತಲುಪಿಸುವ ಬದ್ಧತೆಯ ಜೊತೆ ವಿಜ್ಞಾನ ಮತ್ತು ಪರಿಸರ ಪತ್ರಿಕೋದ್ಯಮಕ್ಕೆ ತಲಸ್ಪರ್ಷಿ ನಂಟು ಕಟ್ಟುವ ಮೂಲಕ.

ಕನ್ನಡದ ಈ ಆಸ್ತಿ ಪ್ರತಿದಿನ ಪರಿಸರದ ಜೊತೆ ಬಾಳುತ್ತಾ ನನ್ನಂತಹ ಸಾವಿರಾರು ಹೊಸಪೀಳಿಗೆ ಜನರಿಗೆ ಪಾಠಹೇಳುತ್ತಾ, ಮಾರ್ಗದರ್ಶನ ಮಾಡುತ್ತ ಮಕ್ಕಳ ಸಾಲತೀರಿಸುವ ಎಚ್ಚರಿಕೆಯನ್ನು ಕೊಡುತ್ತಾ ನೋರ್ಕಾಲ ಬಾಳಲಿ.

Donate Janashakthi Media

Leave a Reply

Your email address will not be published. Required fields are marked *