ಮೂಲ : ದಿನೇಶ್ ಸಿ ಶರ್ಮ ಅನುವಾದ : ಜಿ.ಎಸ್.ಮಣಿ
(‘ದಿ ಹಿಂದು’ ಪತ್ರಿಕೆಯಲ್ಲಿ ಮೇ ಎರಡನೇ ತಾರೀಕಿನಂದು ಪ್ರಕಟವಾದ ಲೇಖನದ ಕನ್ನಡ ಅನುವಾದ)
‘ವಿಜ್ಞಾನ ದಿನ’ದ ಕೆಲವು ದಿನಗಳ ಮೊದಲು, ಸ್ವಾಯತ್ತ ಸಂಸ್ಥೆಯಾದ ‘ವಿಜ್ಞಾನ್ ಪ್ರಸಾರ್’ ನ್ನು ಮುಚ್ಚುವುದನ್ನು ಸೂಚ್ಯವಾಗಿ ಘೋಷಿಸಿತು. ‘ವಿಜ್ಞಾನ್ ಪ್ರಸಾರ್’ ವಿಜ್ಞಾನ ಸಂವಹನ ಮತ್ತು ವೈಜ್ಞಾನಿಕ ಅರಿವಿನ ನೆಹರು ಕಾಲದ ಕಲ್ಪನೆಯಾಗಿದ್ದು, ಸ್ವಾತಂತ್ರ್ಯದ ಆರಂಭಿಕ ದಿನಗಳ ಕಲ್ಪನೆಯಾಗಿ ತನ್ನನ್ನು ತಾನೇ ಗುರುತಿಸಿಕೊಂಡಿದೆ. ಇತ್ತೀಚೆಗೆ, ‘ವಿಜ್ಞಾನ್ ಪ್ರಸಾರ’ ವು ತನ್ನ ಮೂಲ ಉದ್ದೇಶದಿಂದ ದೂರ ಸರಿದಿದೆ. ನಿರ್ವಾಹಕ ಮಂಡಳಿ ‘ವಿಜ್ಞಾನ್ ಪ್ರಸಾರ್’ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ‘ವಿಜ್ಞಾನ ಭಾರತಿ’ (ಅಂದರೆ VIBHA- ವಿಭಾ) ನಡುವೆ ತಿರುಗುವ ಬಾಗಿಲು ತೆರೆದಿದೆ. ವಿಜ್ಞಾನ ಪ್ರಸಾರ ಸಂಸ್ಥೆಯು ವೈಜ್ಞಾನಿಕ ಮನೋಭಾವ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವ ಸಂಸ್ಥೆ ಎಂಬ ಕಲ್ಪನೆ ಸತ್ತಿದೆ.
ಈ ವರ್ಷದ ‘ವಿಜ್ಞಾನ ದಿನ’ದ (ಫೆಬ್ರವರಿ 28) ಕೆಲವು ದಿನಗಳ ಮೊದಲು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ಅಧಿಕೃತ ಪತ್ರಿಕಾ ಪ್ರಕಟಣೆಯು ಅದರ ವ್ಯಾಪ್ತಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾದ ‘ವಿಜ್ಞಾನ್ ಪ್ರಸಾರ್’ ನ್ನು ಮುಚ್ಚುವುದನ್ನು ಸೂಚ್ಯವಾಗಿ ಘೋಷಿಸಿತು. ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಸಂವಹನದ ಮೂಲಕ ವಿಜ್ಞಾನದ ಸಾರ್ವಜನಿಕ ತಿಳುವಳಿಕೆಯನ್ನು ಹೆಚ್ಚಿಸುವ ಕಾರ್ಯವನ್ನು ಹೊಂದಿರುವ ಏಜೆನ್ಸಿಯನ್ನು ಮುಚ್ಚುವ ತನ್ನ ನಿರ್ಧಾರವನ್ನು ಅದು ವಿವರಿಸಲಿಲ್ಲ. ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ಕಾರ್ಯನಿರ್ವಹಣೆಯನ್ನು ತರ್ಕಬದ್ಧಗೊಳಿಸಲು ‘ನೀತಿ ಆಯೋಗ್’ ಪ್ರಾರಂಭಿಸಿದ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂದು ಅಧಿಕಾರಿಗಳು ಈ ಕ್ರಮವನ್ನು ವಿವರಿಸಲು ಪ್ರಯತ್ನಿಸಿದ್ದಾರೆ.
ಈ ಕಸರತ್ತಿನಲ್ಲಿ ಸೇರಿರುವುದು ‘ವಿಜ್ಞಾನ್ ಪ್ರಸಾರ್’ ಒಂದೇ ಅಲ್ಲ ಎಂಬುದು ಸಮಾಧಾನ ತರುವ ಸಂಗತಿಯೇನಲ್ಲ. ಯಾವುದೇ ಸಾರ್ವಜನಿಕ ಸಮಾಲೋಚನೆ ಇಲ್ಲದೆ ಇಡೀ ಪ್ರಕರಣವನ್ನು ಗೌಪ್ಯವಾಗಿ ಮಾಡಲಾಗಿದೆ. ಇದು ಸ್ವಾಯತ್ತ ಸಂಸ್ಥೆಗಳನ್ನು ಗುರಿಯಾಗಿಸುವ ಪ್ರಕ್ರಿಯೆಯಾಗಿ ಪ್ರಾರಂಭವಾದಾಗಿನಿಂದ, ಸರ್ಕಾರವು ತನ್ನ ಎಲ್ಲಾ ಏಜೆನ್ಸಿಗಳನ್ನು ಕೇಂದ್ರೀಯವಾಗಿ ನಡೆಸಬೇಕೆಂದು ಬಯಸುತ್ತದೆ ಮತ್ತು ಅವುಗಳಿಗೆ ಕ್ರಿಯಾತ್ಮಕ, ಸಾಂಸ್ಥಿಕ ಮತ್ತು ಬೌದ್ಧಿಕ ಸ್ವಾಯತ್ತತೆ ಇಲ್ಲ ಎಂಬುದನ್ನು ಸೂಚಿಸುತ್ತದೆ.
“ವಿಜ್ಞಾನ್ ಪ್ರಸಾರ್” ನ ಮೂಲಗಳು
‘ವಿಜ್ಞಾನ್ ಪ್ರಸಾರ್’ 1989 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರೂ, ಇದು ವಿಜ್ಞಾನ ಸಂವಹನ ಮತ್ತು ವೈಜ್ಞಾನಿಕ ಅರಿವಿನ ನೆಹರು ಕಾಲದ ಕಲ್ಪನೆಯಾಗಿದ್ದು, ಸ್ವಾತಂತ್ರ್ಯದ ಆರಂಭಿಕ ದಿನಗಳ ಕಲ್ಪನೆಯಾಗಿ ತನ್ನನ್ನು ತಾನೇ ಗುರುತಿಸಿಕೊಂಡಿದೆ. ಇದು 1947 ರಿಂದ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು ಮತ್ತು ನೀತಿಗಳ ಮುರಿಯದ ಸರಪಳಿಯ ಭಾಗವಾಗಿದೆ.
ಜವಾಹರಲಾಲ್ ನೆಹರು ಅವರಿಗೆ, ರಾಷ್ಟ್ರ ನಿರ್ಮಾಣ ಯೋಜನೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಅತ್ಯಗತ್ಯವೆಂಬ ವಿಚಾರವಿತ್ತು. ಇಂತಹ ವಿಚಾರ ರಾಷ್ಟ್ರೀಯ ಪ್ರಯೋಗಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ದೊಡ್ಡ ಅಣೆಕಟ್ಟುಗಳು ಇತ್ಯಾದಿಗಳ ರಚನೆಯಲ್ಲಿ ಪ್ರತಿಫಲಿತವಾಯಿತು. ಅತಾರ್ಕಿಕತೆ ಮತ್ತು ಅಂಧಶ್ರದ್ದೆಯ ವಿರುದ್ಧ ಹೋರಾಡಲು, ನೆಹರೂ ಅವರು ‘ವಿಜ್ಞಾನ ಮಂದಿರ’ಗಳನ್ನು ತೆರೆಯುವ ಯೋಜನೆಯನ್ನು ಬೆಂಬಲಿಸಿದರು. ಗ್ರಾಮೀಣ ಜನರಲ್ಲಿ ವೈಜ್ಞಾನಿಕ ವಿಚಾರಗಳನ್ನು ಜನಪ್ರಿಯಗೊಳಿಸಲು ಸ್ಥಾಪಿಸಲಾದ ಈ ವಿಜ್ಞಾನ ಕೇಂದ್ರಗಳು ಮೂಲಭೂತ ವೈಜ್ಞಾನಿಕ ಉಪಕರಣಗಳು, ಪುಸ್ತಕಗಳು, ಫಿಲ್ಮ್ ಸ್ಲೈಡ್ ಗಳು ಇತ್ಯಾದಿಗಳನ್ನು ಹೊಂದಿದ್ದವು. 1960 ರ ದಶಕದಲ್ಲಿ, ಆಲ್ ಇಂಡಿಯಾ ರೇಡಿಯೋ ಮತ್ತು ‘ಕೃಷಿ ವಿಜ್ಞಾನ ಕೇಂದ್ರಗಳ’ ಮೂಲಕ ವಿಜ್ಞಾನ ಸಂವಹನವು, ಈ ದಿನಗಳಲ್ಲಿ ಹಸಿರು ಕ್ರಾಂತಿಗೆ ಶಕ್ತಿ ತುಂಬಿದ ಹೊಸ, ಹೆಚ್ಚು ಇಳುವರಿ ನೀಡುವ ಬೆಳೆಗಳ ತಳಿಗಳ ಅಳವಡಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.
ಶಕ್ತಿಇಂಧನ ಬಿಕ್ಕಟ್ಟು ಮತ್ತು ಮೂಢ ನಂಬಿಕೆಗಳಂತಹ ಹೊಸ ಸಾಮಾಜಿಕ ಸವಾಲುಗಳು ಹೊರಹೊಮ್ಮುತ್ತಿದ್ದಂತೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಸಾರ್ವಜನಿಕ ಚರ್ಚೆಯನ್ನು ಉತ್ತೇಜಿಸಲು ‘ವಿಜ್ಞಾನ ತಂತ್ರಜ್ಞಾನ ಇಲಾಖೆ’ ಒಂದು ಹೊಸ ಸಂಸ್ಥೆಯನ್ನು ರಚಿಸಿತು. ಹೀಗೆ 1982 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ (NCSTC- ವಿಜ್ಞಾನ ತಂತ್ರಜ್ಞಾನ ಸಂವಹನೆಯ ರಾಷ್ಟ್ರಮಂಡಳಿ) ಜನಿಸಿತು. ಇದು ಹಲವಾರು ಸ್ವಯಂಪ್ರೇರಿತ ಗುಂಪುಗಳು ಮತ್ತು ತಳಮಟ್ಟದ ವಿಜ್ಞಾನ ಚಳುವಳಿಗಳನ್ನು ಬೆಂಬಲಿಸಿತು. ಅದರ ಪ್ರಮುಖ ಕೊಡುಗೆಗಳಲ್ಲಿ ಒಂದು “ಭಾರತ ಜನ ವಿಜ್ಞಾನ ಜಾಥಾ’ (BJVJ) ಚಳುವಳಿ. ಅದರ ಯಶಸ್ವಿ ಮುಕ್ತಾಯದ ನಂತರ, ಸ್ವಯಂಸೇವಾ ಸಂಸ್ಥೆಗಳ ಜಾಲಕ್ಕೆ ಅದು ಜನ್ಮ ನೀಡಿತು. ಇದು ಆಲ್ ಇಂಡಿಯಾ ಪೀಪಲ್ಸ್ ಸಾಯನ್ಸ್ ನೆಟ್‌ವರ್ಕ್ ನ (All India People’s Science Network- ಅಖಿಲ ಭಾರತ ಜನ ವಿಜ್ಞಾನ ಜಾಲ) ರೂಪವನ್ನು ಪಡೆದುಕೊಂಡಿದೆ ಮತ್ತು ಈ ಜಾಲ ಇಲ್ಲಿಯವರೆಗೆ ಉಳಿದುಕೊಂಡಿದೆ.
NCSTC- ವಿಜ್ಞಾನ ತಂತ್ರಜ್ಞಾನ ಸಂವಹನೆಯ ರಾಷ್ಟ್ರಮಂಡಳಿಯ ಕೆಲಸದಿಂದ ಮತ್ತು ಭಾರತ್ ಜನ ವಿಜ್ಞಾನ ಜಾಥಾದ ಪ್ರಭಾವದಿಂದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಸಂಸ್ಥೆಯ ಕಲ್ಪನೆಯು ಮೂಡಿ ಬಂತು. ಇದು ‘ವಿಜ್ಞಾನ್ ಪ್ರಸಾರ್’ ವಾಗಿತ್ತು. ವಿಜ್ಞಾನ ತಂತ್ರಜ್ಞಾನ ಸಂವಹನೆಯ ರಾಷ್ಟ್ರಮಂಡಳಿ ಮತ್ತು ವಿಜ್ಞಾನ್ ಪ್ರಸಾರ್ ಎರಡಕ್ಕೂ ಸಾಮಾನ್ಯ ಚಾಲನಾ ಶಕ್ತಿಯಾಗಿ ಕೆಲಸ ಮಾಡಿದವರು: ನರೇಂದರ್ ಕೆ ಸೆಹಗಲ್. ವಿಜ್ಞಾನ್ ಪ್ರಸಾರ್ ವೈಜ್ಞಾನಿಕ ಮನೋಭಾವದ ವಿಷಯವನ್ನು ಸಿದ್ಧಪಡಿಸಿತು ಮತ್ತು 1990 ರ ದಶಕದಲ್ಲಿ ರೇಡಿಯೋ ಮತ್ತು ಟಿವಿ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಿತು. ಇದು “ವಿಜ್ಞಾನ ವಿಧಿ” (16 ಭಾಷೆಗಳಲ್ಲಿ ವಿಜ್ಞಾನದ ವಿಧಾನದ 13 ಭಾಗಗಳ ರೇಡಿಯೊ ಸರಣಿ), “ಭಾರತ್ ಕಿ ಚಾಪ್’ (ಭಾರತದ ವಿಜ್ಞಾನದ ಇತಿಹಾಸದ 13 ಭಾಗಗಳ ಟಿವಿ ಸರಣಿ), ಮಾನವ್ ಕಾ ವಿಕಾಸ್'(ಮಾನವನ ವಿಕಾಸ) (144-ಭಾಗಗಳ ರೇಡಿಯೋ ಸರಣಿಯಲ್ಲಿ 18 ಭಾಷೆಗಳಲ್ಲಿ ಮಾನವ ವಿಕಾಸ), ‘ಕ್ಯೋನ್ ಔರ್ ಕೈಸೆ ‘ (ವಿಮರ್ಶಾತ್ಮಕ ಚಿಂತನೆಯ ಟಿವಿ ಸರಣಿ), ಮತ್ತು ‘ಎ ಕ್ವೆಶ್ಶನ್ ಆಫ್ ಸೈನ್ಸ್’ (ವೈಜ್ಞಾನಿಕ ಪ್ರಶ್ನೆಗಳ ಮೇಲೆ ಟಿವಿ ಕಾರ್ಯಕ್ರಮ). ಇದು ಪ್ರಮುಖ ವಿಜ್ಞಾನಿಗಳು, ವಿಜ್ಞಾನದ ಇತಿಹಾಸ ಮತ್ತು ಅಂತಹುದೇ ವಿಷಯಗಳ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಚಲನಚಿತ್ರ ನಿರ್ಮಾಪಕರನ್ನು ನಿಯೋಜಿಸಿತು. 1995 ರ ಸಂಪೂರ್ಣ ಸೂರ್ಯಗ್ರಹಣದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುರಕ್ಷಿತ ವೀಕ್ಷಣಾ ಅವಕಾಶಗಳನ್ನು ಸೃಷ್ಟಿಸಲು ಒಂದು ವರ್ಷದ ಅವಧಿಯ ಕಾರ್ಯಕ್ರಮವಾದ ಎಕ್ಲಿಪ್ಸ್-95 (ಗ್ರಹಣ-95) ಒಂದು ಗಮನಾರ್ಹವಾದ ಜನರನ್ನು ತಲುಪುವ ಯೋಜನೆಯಾಗಿದೆ. ಅಂದಿನಿಂದ, ಜನಪ್ರಿಯ ಖಗೋಳಶಾಸ್ತ್ರವು ವೈಜ್ಞಾನಿಕ ಸಾಕ್ಷರತೆ ಮತ್ತು ಜಾಗೃತಿಯನ್ನು ಹರಡುವ ಸಾಧನವಾಗಿ ಏಜೆನ್ಸಿಯ ಚಟುವಟಿಕೆಗಳ ಪ್ರಮುಖ ಅಂಶವಾಗಿದೆ.
ಮೂಲ ಉದ್ದೇಶದಿಂದ ದೂರವಾಗಿದೆ
ತೀರಾ ಇತ್ತೀಚೆಗೆ, ‘ವಿಜ್ಞಾನ್ ಪ್ರಸಾರ’ ವು ತನ್ನ ಮೂಲ ಉದ್ದೇಶದಿಂದ ದೂರ ಸರಿದಿದೆ. ಸಾಕಷ್ಟು ಸಿದ್ಧತೆ ಮತ್ತು ಸಮನ್ವಯವಿಲ್ಲದೆ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಉದಾಹರಣೆಗೆ, ಏಜೆನ್ಸಿಯು ದೂರದರ್ಶನಗಳ ಸಹಯೋಗದೊಂದಿಗೆವಿಜ್ಞಾನಕ್ಕಾಗಿ ಒಂದು ಗಂಟೆಯ ದೈನಂದಿನ ಕಾರ್ಯಕ್ರಮವನ್ನು ‘ಡಿಡಿ ಸೈನ್ಸ್’ ಎಂಬ ಹೆಸರಿನಲ್ಲಿ ಪ್ರಾರಂಭಿಸಿತು. ಆದರೆ ಅದು ಮೊದಲು ಪ್ರಸಾರವಾದ ಸಾಕ್ಷ್ಯ ಚಿತ್ರಗಳನ್ನು ತನಗೆ ಬೇಕಾದಂತೆ ಮರುಹೊಂದಿಸಲು ಪ್ರಾರಂಭಿಸಿತು. ಇದರ ನಂತರ ‘IndiaScience.in’ ಎಂಬ ಓಟಿಟಿ (OTT) ಚಾನೆಲ್ ಆರಂಭವಾಯಿತು. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ವಿಜ್ಞಾನ್ ಪ್ರಸಾರ್ ದ ನಾಯಕತ್ವವು ಸರ್ಕಾರದ ಪ್ರಚಾರದೊಂದಿಗೆ ವಿಜ್ಞಾನ ಸಂವಹನವನ್ನು ಸಮೀಕರಿಸುವ ಬಲೆಗೆ ಬಿದ್ದಿತು. ಓಟಿಟಿ ವಿಜ್ಞಾನ ವಾಹಿನಿಯು ಪ್ರಧಾನ ಮಂತ್ರಿಯವರ ಗಣರಾಜ್ಯೋತ್ಸವದ ಭಾಷಣ ಮತ್ತು ‘ಪರೀಕ್ಷಾ ಪೇ ಚರ್ಚಾ’ದಂತಹ ವಾಡಿಕೆಯ ಘಟನೆಗಳನ್ನು ಒಳಗೊಂಡ ಪ್ರಚಾರ ವೇದಿಕೆಯಾಗಿ ಅವನತಿ ಹೊಂದಿತು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರ ಕ್ಷೇತ್ರದಲ್ಲಿ ನಡೆದ ಸಣ್ಣ ಘಟನೆಗಳನ್ನು ಸಹ ‘ವಿಜ್ಞಾನ ಚಾನೆಲ್’ ಕರ್ತವ್ಯವೆಂಬಂತೆ ಎತ್ತಿ ತೋರಿಸತೊಡಗಿತು. ಪುರಾತನ ಗ್ರಂಥಗಳು ಮತ್ತು ಯೋಗದ “ವೈಜ್ಞಾನಿಕ ಪ್ರಯೋಜನಗಳನ್ನು” ವೈಭವೀಕರಿಸಲು ಇದು ಯಾವುದೇ ಅವಕಾಶವನ್ನೂ ಬಿಡಲಿಲ್ಲ.
ನಿರ್ವಾಹಕ ಮಂಡಳಿ ‘ವಿಜ್ಞಾನ್ ಪ್ರಸಾರ್’ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ‘ವಿಜ್ಞಾನ ಭಾರತಿ’ (ಅಂದರೆ VIBHA- ವಿಭಾ) ನಡುವೆ ತಿರುಗುವ ಬಾಗಿಲು ತೆರೆಯಿತು. ವಿಜ್ಞಾನ ಪ್ರಸಾರದ ಹಿರಿಯ ಅಧಿಕಾರಿಗಳು ‘ವಿಭಾ’ದಲ್ಲಿ ಹುದ್ದೆಗಳನ್ನು ಹೊಂದಿದ್ದರು ಮತ್ತು ಈ ಎರಡೂ ಏಜೆನ್ಸಿಗಳು ಸೇರಿ ‘ವಿಜ್ಞಾನ್ ಪ್ರಸಾರ್’ ದಿಂದ ಧನಸಹಾಯ ಪಡೆದ ಜಂಟಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ‘ವಿಜ್ಞಾನ ವಿದ್ಯಾರ್ಥಿ ಮಂಥನ್’ ಎಂಬ ಜಾಲತಾಣ ವಿಜ್ಞಾನ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲು ವರ್ಷಕ್ಕೆ ಅಂದಾಜು ರೂ.1.5 ಕೋಟಿಯನ್ನು ‘ವಿಭಾ’ ಗೆ ನೀಡಲಾಯಿತು; ಇದು “ಪ್ರಾಚೀನ ವಿಜ್ಞಾನ” ದ ಮೇಲೆ ಒಂದು ಘಟಕವನ್ನು ಒಳಗೊಂಡಿತ್ತು. ವಿಭಾದ ಉದಯವು ಕಳೆದ ಐದು ವರ್ಷಗಳಲ್ಲಿ ವಿಜ್ಞಾನ್ ಪ್ರಸಾರ್ ದ ಅವನತಿಯೊಂದಿಗೆ ಮೇಳೈಸಿರುವುದು ವಿಚಿತ್ರ ಸತ್ಯವಾಗಿದೆ.
‘ವಿಜ್ಞಾನ್ ಪ್ರಸಾರ್’ ಅನ್ನು ಮುಚ್ಚುವ ಉದ್ದೇಶವನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಅದೇನೇ ಇರಲಿ, ವಿಜ್ಞಾನ ಪ್ರಸಾರ ಸಂಸ್ಥೆಯು ವೈಜ್ಞಾನಿಕ ಮನೋಭಾವ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವ ಸಂಸ್ಥೆ ಎಂಬ ಕಲ್ಪನೆ ಸತ್ತಿದೆ. ಅಸ್ತಿತ್ವವನ್ನು ಬೇರೆ ಯಾವುದೇ ರೂಪದಲ್ಲಿ ಉಳಿಸಿದರೆ ಅದು ಅಪ್ರಸ್ತುತವಾಗುತ್ತದೆ.