‘ವಿಜ್ಞಾನ ಎಂದರೆ ಏನು?’

ಈಗ್ಗೆ 75 ವರ್ಷಗಳ ಹಿಂದೆ ಅಂದರೆ 1945ರಲ್ಲಿ ಇಂಗ್ಲೆಂಡಿನ ಟ್ರಿಬ್ಯೂನ್ ಪತ್ರಿಕೆಯಲ್ಲಿ ಜಾರ್ಜ್ ಆರ್ವೆಲ್ ‘ವಿಜ್ಞಾನ ಎಂದರೇನು?’ ಎಂಬ ಒಂದು ಲೇಖನವನ್ನು ಪ್ರಕಟಿಸಿದ್ದರು. ಅದೇ ಪತ್ರಿಕೆಯ ಹಿಂದಿನ ವಾರದ ಸಂಚಿಕೆಯಲ್ಲಿ ಜೆ. ಸ್ಟ್ಯೂಅರ್ಟ್ ಕುಕ್ ಎಂಬುವರು ಬರೆದಿದ್ದ ಕಾಗದಕ್ಕೆ ಪ್ರತಿಕ್ರಿಯೆಯಾಗಿ ಆರ್ವೆಲ್ ಬರೆದ ಲೇಖನ ಇದು.

ಆರ್ವೆಲ್ ಸಂಗ್ರಹಿಸಿ ಕೊಡುವಂತೆ, ಕುಕ್ ತಮ್ಮ ಕಾಗದದಲ್ಲಿ ಎರಡು ಸಂಗತಿಗಳನ್ನು ಹೇಳುತ್ತಾರೆ: 1. ‘ವೈಜ್ಞಾನಿಕ ಶ್ರೇಣೀಕರಣ’ದ ಅಪಾಯವನ್ನು ತಡೆಯುವ ಉತ್ತಮೋತ್ತಮ ಉಪಾಯವೆಂದರೆ ಎಲ್ಲಾ ಸಾರ್ವಜನಿಕರಿಗೂ ಸಾಧ್ಯವಾದ ಮಟ್ಟಿಗೆ ವೈಜ್ಞಾನಿಕ ಶಿಕ್ಷಣವನ್ನು ಕೊಡುವುದು. 2. ಜೊತೆಗೆ  ವಿಜ್ಞಾನಿಗಳನ್ನು ಅವರ ಗೂಡುಗಳಿಂದ ಹೊರತಂದು ರಾಜಕೀಯ ಮತ್ತು ಆಡಳಿತದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವುದು.

ಕುಕ್ ಹೇಳಿಕೆಯನ್ನು ಅದರ ಸಾಮಾನ್ಯ ಅರ್ಥದಲ್ಲಿ  ಒಪ್ಪಬಹುದೆಂದು ಆರ್ವೆಲ್ ಹೇಳುತ್ತಾರೆ. ಆದರೆ  ಮಾಮೂಲಾಗಿ ಎಲ್ಲರೂ ಮಾಡುವಂತೆ ‘ವಿಜ್ಞಾನದ ನಿರ್ವಚನ’ವನ್ನು ಕುಕ್ ಕೊಡುವುದಿಲ್ಲವೆಂದು ಆಕ್ಷೇಪಿಸುತ್ತಾರೆ. ಮುಂದುವರೆದು ಆರ್ವೆಲ್ ಹೇಳುವುದನ್ನು ಸಂಗ್ರಹವಾಗಿ ಹೀಗೆ ಹೇಳಬಹುದು: ವಿಜ್ಞಾನಕ್ಕೆ ಎರಡು ಬಗೆಯ ಪರಿಚಿತ ನಿರ್ವಚನಗಳಿವೆ:

  1. ವಿಜ್ಞಾನವೆಂದರೆ ಪ್ರಯೋಗಶಾಲೆಯ ಗೊತ್ತುಪಾಡಿನಲ್ಲಿ ಪ್ರಯೋಗಗಳನ್ನು ನಡೆಸಬಹುದಾದ ನಿಖರ ವಿಜ್ಞಾನಶಾಖೆಗಳು. ಇದರ ಪ್ರಕಾರ ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳು ವಿಜ್ಞಾನಶಾಖೆಗಳಲ್ಲವಾದ್ದರಿಂದ ಸಾಹಿತ್ಯಕ, ಆರ್ಥಿಕ ಮತ್ತು ಸಾಮಾಜಿಕ ವಿಷಯಗಳನ್ನು ವೈಜ್ಞಾನಿಕವಾಗಿ ಅಭ್ಯಸಿಸುವುದು ಸಾಧ್ಯವಿಲ್ಲವೆಂದು ಜನರಿಗೆ ಹೇಳಿದಂತಾಗುತ್ತದೆ.
  2. ವಿಜ್ಞಾನವೆಂದರೆ ಗಮನಿಸಿದ ವಾಸ್ತವಾಂಶಗಳನ್ನು ತರ್ಕಬದ್ಧವಾದ ವಿಚಾರದ ಮೂಲಕ, ಪರೀಕ್ಷಿಸಿ ನೋಡಬಹುದಾದ ತೀರ್ಮಾನಗಳಿಗೆ ಬರುವ ಆಲೋಚನಾ ಪದ್ಧತಿ.

ಯಾವುದೇ ವಿಜ್ಞಾನಿಯನ್ನು ಅಥವಾ ಸುಶಿಕ್ಷಿತ ವ್ಯಕ್ತಿಯನ್ನು ‘ವಿಜ್ಞಾನವೆಂದರೆ ಏನು?’ ಎಂದು ಕೇಳಿದರೆ ಎರಡನೆಯ ನಿರ್ವಚನದ ಅರ್ಥಕ್ಕೆ ಸಮೀಪದ ಉತ್ತರವನ್ನೇ ಕೊಟ್ಟಾರು. ಆದರೆ ದಿನನಿತ್ಯದ ವ್ಯವಹಾರದಲ್ಲಿ ಜನರಿಗೆ ವಿಜ್ಞಾನವೆಂದರೆ ಪ್ರಯೋಗಶಾಲೆಯಲ್ಲಿ ಏನು ನಡೆಯುತ್ತದೆಯೋ ಅದು. ವಿಜ್ಞಾನವೆಂದ ತಕ್ಷಣ ಜನಸಾಮಾನ್ಯರ ಕಣ್ಮುಂದೆ ಬುನ್ಸೆನ್ ಬರ್ನರ್, ಗಾಜಿನ ಪ್ರನಾಳಗಳು, ಛಾರ್ಟುಗಳು, ಅಳತೆಯ ಸಾಧನಗಳು ಮತ್ತು ಸೂಕ್ಷ್ಮದರ್ಶಕ ಯಂತ್ರಗಳು ಬಂದು ನಿಲ್ಲುತ್ತವೆ. ಜೀವಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ಬಹುಶಃ ಮನಶ್ಶಾಸ್ತ್ರಜ್ಞನನ್ನೂ ವಿಜ್ಞಾನಿಯೆಂದು ಕರೆಯಬಹುದು. ಆದರೆ, ‘ವಿಜ್ಞಾನಿ’ಯೆಂಬ ಪದವನ್ನು ರಾಜನೀತಜ್ಞ, ಕವಿ, ಪತ್ರಕರ್ತ, ಅಥವಾ ತತ್ವಶಾಸ್ತ್ರಜ್ಞನಿಗೂ ಸಂಬಂಧಿಸಿದಂತೆ ಬಳಸಬಹುದೆಂದು ಯಾರೂ ಯೋಚಿಸುವುದಿಲ್ಲ. ನಮ್ಮ ಯುವಜನರಿಗೆ ವೈಜ್ಞಾನಿಕ ಶಿಕ್ಷಣ ಸಿಗಬೇಕೆಂದು ಹೇಳುವವರ ಗ್ರಹಿಕೆಯಲ್ಲಿ ವಿಜ್ಞಾನವೆಂದರೆ, ಅವರಿಗೆ ನಿಖರವಾಗಿ ಆಲೋಚಿಸಲು ಕಲಿಸಬೇಕೆಂಬ ಅರ್ಥದ ಬದಲು ರೇಡಿಯೋ ಆಕ್ಟಿವಿಟಿಯ ಬಗ್ಗೆ, ನಕ್ಷತ್ರಗಳ ಬಗ್ಗೆ, ಶರೀರರಚನಾಶಾಸ್ತ್ರದ ಬಗ್ಗೆ ಅವರದೇ ಶರೀರಗಳ ಬಗ್ಗೆ ಕಲಿಸಬೇಕೆಂಬ ಅರ್ಥವಿರುತ್ತದೆ.

ನಾಗೇಶ್ ಹೆಗಡೆಯವರ “ವೈದ್ಯ ವಿಜ್ಞಾನವೇ ಎತ್ತಿತು ಸುತ್ತಿಗೆ” ಎಂಬ ಲೇಖನ ಪ್ರಜಾವಾಣಿಯಲ್ಲಿ (12/11/2020) ಪ್ರಕಟವಾಗಿದೆ. ಇದರಲ್ಲಿ  ಅಮೆರಿಕಾ ಮತ್ತು ಇಂಗ್ಲೆಂಡುಗಳ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳು ಅಮೆರಿಕಾದ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಅವರ ರಾಜಕಾರಣವನ್ನು ತೀಕ್ಷ್ಣವಾಗಿ ಟೀಕಿಸಿ ಗಟ್ಟಿ ರಾಜಕೀಯ ನಿಲುವನ್ನು ಪ್ರದರ್ಶಿಸಿದ ಅಪೂರ್ವ ಸಂಗತಿಯನ್ನು ನಾಗೇಶ್ ಹೆಗಡೆ ನಮೂದಿಸುತ್ತಾರೆ.  ಲೇಖನದ ಶೀರ್ಷಿಕೆಯಲ್ಲಿನ  ದ್ವಂದ್ವಾರ್ಥದ ‘ಸುತ್ತಿಗೆ’‘ಚುನಾವಣಾ ಕಾಲದ ರಾಜಕೀಯ’ (ರಾಜಕಾರಣ?)ದ ಬಗ್ಗೆ ವಿಜ್ಞಾನ ಪತ್ರಿಕೆಗಳು ‘ತಲೆಹಾಕುʼವುದು, ವಿಜ್ಞಾನಿ-ಸಾಹಿತಿ ಗಣೇಶಯ್ಯ ಅವರ “ತಲೆ ಹಾಕಲೂ ಬಾರದು” ಎಂಬ ಮಾತುಗಳಲ್ಲಿ ಪ್ರತಿಫಲಿತವಾಗುವ ಗೊಂದಲ ‘ವಿಜ್ಞಾನ ಎಂದರೆ ಏನು?’ ಎಂಬ ಬಗ್ಗೆ ಜನಸಾಮಾನ್ಯರಿಗೆ ಮಾತ್ರವಲ್ಲ, ವಿಜ್ಞಾನಿಗಳಿಗೂ ವೈಜ್ಞಾನಿಕ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಹೇಳುತ್ತವೆ. 75 ವರ್ಷಗಳ ಹಿಂದೆ ಆರ್ವೆಲ್ ಈ ಕುರಿತು ಬರೆದ ಲೇಖನವನ್ನು ಮತ್ತೆ ಮುನ್ನೆಲೆಗೆ ತರುತ್ತವೆ.

ಆರ್ವೆಲ್ ಹೇಳುವಂತೆ, ವಿಜ್ಞಾನದ ಅರ್ಥದ ಬಗ್ಗೆ ಕೆಲಮಟ್ಟಿಗೆ ಉದ್ದೇಶಪೂರ್ವಕವಾದ ಈ ಗೊಂದಲದಲ್ಲಿ ಒಂದು ದೊಡ್ಡ ಅಪಾಯವಿದೆ. ಜನರು ‘ವೈಜ್ಞಾನಿಕ’ ಶಿಕ್ಷಣ ಪಡೆದುಬಿಟ್ಟರೆ ಅವರು ಉಳಿದೆಲ್ಲಾ ವಿಷಯಗಳನ್ನು ಗ್ರಹಿಸುವಷ್ಟು ಬುದ್ಧಿವಂತರಾಗಿಬಿಡುತ್ತಾರೆ ಎಂಬ ನಂಬಿಕೆಗೆ ಅದು ದಾರಿಮಾಡಿಕೊಡುತ್ತದೆ. ರಾಜಕೀಯ, ಸಮಾಜಶಾಸ್ತ್ರೀಯ, ನೈತಿಕ, ತತ್ವಶಾಸ್ತ್ರೀಯ, ಅಷ್ಟೇ ಅಲ್ಲ, ಸಾಹಿತ್ಯಕ ಪ್ರಶ್ನೆಗಳನ್ನು ಕುರಿತಂತೆ ಒಬ್ಬ ವಿಜ್ಞಾನಿಯ ಅಭಿಪ್ರಾಯಕ್ಕೆ ಸಾಮಾನ್ಯ ಜನರ ಅಭಿಪ್ರಾಯಕ್ಕಿಂತ ಹೆಚ್ಚು ಬೆಲೆ ಇದೆ. ಒಟ್ಟಿನಲ್ಲಿ ವಿಜ್ಞಾನಿಗಳ ನಿಯಂತ್ರಣದಲ್ಲಿರುವ ಪ್ರಪಂಚವು ಉತ್ತಮ ಪ್ರಪಂಚ ಎಂದಾಗುತ್ತದೆ. ಆದರೆ ಈಗ ರೂಢಿಗತವಾಗಿರುವ ವಿಜ್ಞಾನದ ನಿರ್ವಚನೆಯ ಪ್ರಕಾರ ವಿಜ್ಞಾನಿಗಳು ಕೇವಲ ಅವರವರ ಅಧ್ಯಯನ ಶಾಖೆಗಳಲ್ಲಿ ವಿಶೇಷ ಪರಿಣಿತರು. ಅಂದರೆ ಒಬ್ಬ ಭೌತಶಾಸ್ತ್ರಜ್ಞ, ಅಥವಾ ರಸಾಯನಶಾಸ್ತ್ರಜ್ಞ ಆಗಿರುವುದರಿಂದಲೇ ಅವನು ಒಬ್ಬ ಕವಿ ಅಥವಾ ಲಾಯರ್ ಆಗಿರುವುದಕ್ಕಿಂತಾ ಹೆಚ್ಚು ಬುದ್ಧಿವಂತ ಎಂದಾಗುತ್ತದೆ. ಈಗಾಗಲೇ ಹಾಗೆಂದು ನಂಬುವ ಲಕ್ಷಾಂತರ ಜನರಿದ್ದಾರೆ.

ಸಂಕುಚಿತ ಅರ್ಥದಲ್ಲಿ ‘ವಿಜ್ಞಾನಿ’ಎನಿಸಿಕೊಂಡವರು ‘ವಿಜ್ಞಾನೇತರ’ವಿಷಯಗಳಲ್ಲಿ ಉಳಿದವರಿಗಿಂತಲೂ ಹೆಚ್ಚು ವಸ್ತುನಿಷ್ಠವಾಗಿ ಯೋಚಿಸಬಲ್ಲರೆ? ಇದಕ್ಕೊಂದು ಸರಳ ಪರೀಕ್ಷೆ ಸಾಕು. ಸ್ಥೂಲ ಅರ್ಥದಲ್ಲಿ ವಿಜ್ಞಾನವು ಅಂತಾರಾಷ್ಟ್ರೀಯ ಎಂದು  ಹೇಳಲಾಗುತ್ತದೆ. ಆದರೆ ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಹೆಚ್ಚುಕಡಿಮೆ ಎಲ್ಲಾ ವೈಜ್ಞಾನಿಕ ಜನರೂ ಅವರವರ ಸರ್ಕಾರಗಳ ಬೆನ್ನಿಗೆ ಸಾಲುಗಟ್ಟಿ ನಿಲ್ಲುತ್ತಾರೆ. ಫ್ಯಾಸಿಸ್ಟ್ ಜರ್ಮನಿಯ ಉದಾಹರಣೆ ಸಾಕು. ವಿಜ್ಞಾನಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಯುದ್ಧಗಳು ನಡೆಯುವುದು ಅಸಾಧ್ಯ. ಅಣ್ವಸ್ತ್ರಗಳನ್ನು ಯಾತಕ್ಕಾಗಿ ಬಳಸುತ್ತಾರೆ ಎಂಬುದು ವಿಜ್ಞಾನಿಗಳಿಗೆ ಗೊತ್ತಿದ್ದೂ ತಮ್ಮ ಮಹಾನ್ ಸರ್ಕಾರಗಳ ರಹಸ್ಯ ಯೋಜನೆಗಳಿಗೆ ಕೈಜೋಡಿಸಿ ಕೀರ್ತಿ-ಪ್ರಶಸ್ತಿ-ಬಹುಮಾನಗಳನ್ನು ಪಡೆಯುವವರಲ್ಲಿ  ಇಂಥ ವಿಜ್ಞಾನಿಗಳ ಸಂಖ್ಯೆಯೇ ದೊಡ್ಡದು. ನಿಜವಾಗಿಯೂ ವೈಜ್ಞಾನಿಕವಾಗಿ ಯೋಚಿಸಿ, ಸರ್ಕಾರಗಳನ್ನು ಎದುರುಹಾಕಿಕೊಂಡು ತೊಂದರೆ ತಂದುಕೊಂಡವರ ಪೈಕಿ ವಿಜ್ಞಾನಿಗಳಿಗಿಂತಾ ಲೇಖಕರು ಮತ್ತು ಪತ್ರಕರ್ತರ ಸಂಖ್ಯೆಯೇ ಹೆಚ್ಚು.

ಬಂಡವಾಳವಾದೀ ಸಮಾಜದ ಸಂರಚನೆಯನ್ನು ಪ್ರಶ್ನಿಸದೆ, ಆಳುವವರ ಬಿರುದು-ಬಾವಲಿಗಳನ್ನು ಪಡೆಯುವ ವಿಜ್ಞಾನಿಗಳು ಎಲ್ಲ ದೇಶಗಳಲ್ಲೂ ಇದ್ದರು-ಇದ್ದಾರೆ.

ಇಂಗ್ಲೆಂಡಿನಲ್ಲಿ ವ್ಯವಸ್ಥೆಯ ಯಥಾಸ್ಥಿತಿಯನ್ನು ಒಪ್ಪಿಕೊಂಡು ಸರ್ಕಾರೀ ಗೌರವಗಳಿಗೆ ಪಾತ್ರರಾದ ವಿಜ್ಞಾನಿಗಳೇ ಹೆಚ್ಚು. ವಿರೋಧಿಸಿದ ಬೆರಳೆಣಿಕೆಯ ವಿಜ್ಞಾನಿಗಳು ಕಮ್ಯುನಿಸ್ಟರಾಗಿದ್ದರು.

ಆರ್ವೆಲ್ ರ ಈ ಲೇಖನ ಪ್ರಕಟವಾಗಿ 75 ವರ್ಷಗಳೇ ಕಳೆದಿವೆ.  ಈಗ ಕನ್ನಡದ ವಿಜ್ಞಾನ ಪತ್ರಕರ್ತ ನಾಗೇಶ್ ಹೆಗಡೆಯವರ “ವೈದ್ಯ ವಿಜ್ಞಾನವೇ ಎತ್ತಿತು ಸುತ್ತಿಗೆ”ಎಂಬ ಲೇಖನ ಪ್ರಜಾವಾಣಿಯಲ್ಲಿ (12/11/2020) ಪ್ರಕಟವಾಗಿದೆ. ಇದರಲ್ಲಿ ಅಮೆರಿಕಾ ಮತ್ತು ಇಂಗ್ಲೆಂಡುಗಳ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಾದ “ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸನ್”, “ಸೈಂಟಿಫಿಕ್ ಅಮೆರಿಕನ್”, ಮತ್ತು “ನೇಚರ್”, ಅಮೆರಿಕಾದ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್ ಅವರ ರಾಜಕಾರಣವನ್ನು ತೀಕ್ಷ್ಣವಾಗಿ ಟೀಕಿಸಿ ಗಟ್ಟಿ ರಾಜಕೀಯ ನಿಲುವನ್ನು ಪ್ರದರ್ಶಿಸಿದ ಅಪೂರ್ವ ಸಂಗತಿಯನ್ನು ನಾಗೇಶ್ ಹೆಗಡೆ ನಮೂದಿಸುತ್ತಾರೆ. ಭಾರತದಲ್ಲಿ “ಅಧಿಕಾರದಲ್ಲಿದ್ದವರನ್ನು ಟೀಕಿಸುವ ಧೈರ್ಯವನ್ನು ನಮ್ಮ ವಿಜ್ಞಾನ ಪತ್ರಿಕೆಗಳೂ ಅಪರೂಪಕ್ಕೆ ತೋರಿಸುತ್ತಿವೆʼʼ ಎಂದು ಶ್ಲಾಘಿಸುವ ಹೆಗೆಡೆ, ಇದಕ್ಕೆ ದೃಷ್ಟಾಂತವಾಗಿ “ಪುರಾಣಕಾಲದ ವಿಜ್ಞಾನವನ್ನು ಅತಿಯಾಗಿ ಶ್ಲಾಘಿಸಿದ್ದಕ್ಕೆ ನರೇಂದ್ರ ಮೋದಿಯವರನ್ನು ಮತ್ತು ಹಿಂದುತ್ವವಾದಿಗಳನ್ನು, ಬೆಂಗಳೂರಿನಿಂದ ಪ್ರಕಟವಾಗುವ ಪ್ರತಿಷ್ಠಿತ ‘ಕರೆಂಟ್ ಸೈನ್ಸ್’ ಪತ್ರಿಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿ’ದ್ದನ್ನು ಪ್ರಸ್ತಾಪಿಸುತ್ತಾರೆ. “ಹಾಗೆಂದು ಚುನಾವಣಾ ಕಾಲದ ರಾಜಕೀಯದ ಬಗ್ಗೆ”ವಿಜ್ಞಾನ ಪತ್ರಿಕೆಗಳು “ಎಂದೂ ಇವು ತಲೆ ಹಾಕಲಿಲ್ಲ”ಎನ್ನುತ್ತಾರೆ. ಜೊತೆಗೆ, ತಲೆ “ಹಾಕಲೂ ಬಾರದು” ಎಂಬ ‘ಹೆಸರಾಂತ ಸಸ್ಯವಿಜ್ಞಾನಿ ಮತ್ತು ಕನ್ನಡದ ಜನಪ್ರಿಯ ಸಾಹಿತಿ”ಪ್ರೊ.ಕೆ.ಎನ್.ಗಣೇಶಯ್ಯ”ನವರ ಅಭಿಪ್ರಾಯವನ್ನು ಪ್ರಸ್ತಾಪಿಸುತ್ತಾರೆ.

ಕೊರೊನಾ ಕಾಲದಲ್ಲಿ…”ನಮ್ಮಲ್ಲೂ ವಿಜ್ಞಾನರಂಗದಲ್ಲಿ ರಾಜಕೀಯ ದೃಢವಾಗಿ ತೂರಿಕೊಂಡಿದೆ.… ಸುರಕ್ಷತೆಯ ದೃಷ್ಟಿಯಿಂದಲೋ ಏನೊ, ವಿಜ್ಞಾನದ ವಕ್ತಾರರು ಮುಖಕ್ಕೆ ಕವಚ ಧರಿಸಿ, ಸಾಮಾಜಿಕ ಅಂತರವನ್ನು ಶಿಸ್ತಾಗಿ ಕಾಯ್ದುಕೊಂಡಿದ್ದಾರೆ!” ಎಂದು ನಾಗೇಶ್ ಹೆಗಡೆ ಲೇಖನವನ್ನು ಮುಗಿಸುತ್ತಾರೆ.

ಲೇಖನದ ಶೀರ್ಷಿಕೆಯಲ್ಲಿನ  ದ್ವಂದ್ವಾರ್ಥದ ‘ಸುತ್ತಿಗೆ’‘ಚುನಾವಣಾ ಕಾಲದ ರಾಜಕೀಯ’(ರಾಜಕಾರಣ?)ದ ಬಗ್ಗೆ ವಿಜ್ಞಾನ ಪತ್ರಿಕೆಗಳು ‘ತಲೆಹಾಕು’ವುದು, ವಿಜ್ಞಾನಿ-ಸಾಹಿತಿ ಗಣೇಶಯ್ಯ ಅವರ “ತಲೆ ಹಾಕಲೂ ಬಾರದು” ಎಂಬ ಅಭಿಪ್ರಾಯ, “ಪುರಾಣ ಕಾಲದ ವಿಜ್ಞಾನದ ಅತಿಯಾದ ಶ್ಲಾಘನೆ”ಗೆ ‘ಕರೆಂಟ್ ಸೈನ್ಸ್’ ನ  ‘ತೀವ್ರ ತರಾಟೆ’, “ವಿಜ್ಞಾನರಂಗದಲ್ಲಿ ರಾಜಕೀಯ ದೃಢವಾಗಿ ತೂರಿಕೊಂಡಿದೆ”, ‘ವಿಜ್ಞಾನದ ವಕ್ತಾರರು ಕಾಯ್ದುಕೊಂಡಿರುವ ಸಾಮಾಜಿಕ ಅಂತರ’ ಈ ಮಾತುಗಳು 75 ವರ್ಷಗಳ ಹಿಂದೆ ಆರ್ವೆಲ್ ಬರೆದ ಲೇಖನವನ್ನು ಮತ್ತೆ ಮುನ್ನೆಲೆಗೆ ತರುತ್ತವೆ. ವಿಜ್ಞಾನದ ಬಗ್ಗೆ ನಾಗೇಶ್ ಹೆಗಡೆ ಮತ್ತು ಗಣೇಶಯ್ಯನವರ ಮಾತುಗಳಲ್ಲಿ ಪ್ರತಿಫಲಿತವಾಗುವ ಗೊಂದಲ ‘ವಿಜ್ಞಾನ ಎಂದರೆ ಏನು?’ ಎಂಬ ಬಗ್ಗೆ ಜನಸಾಮಾನ್ಯರಿಗೆ ಮಾತ್ರವಲ್ಲ, ವಿಜ್ಞಾನಿಗಳಿಗೂ ವೈಜ್ಞಾನಿಕ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಹೇಳುತ್ತವೆ.

ಮನುಷ್ಯ ಚರಿತ್ರೆಯಲ್ಲಿ ವಿಜ್ಞಾನದ ಪಾತ್ರವನ್ನು ಹೇಳುವ ಲೇಖನದಲ್ಲಿ, ದ್ವಂದ್ವಾರ್ಥದ ಪದಗಳ ಮೂಲಕ ಅವರು ಸೂಚಿಸಬಯಸುವ ಸತ್ಯವನ್ನು ಕೊನೆಗೂ ಸಾಹಿತ್ಯಕ ಭಾಷೆಯಲ್ಲಿ ಹೇಳಬೇಕಾಗಿದೆ ಎಂಬುದು ‘ಸಾಹಿತ್ಯದ ವೈಜ್ಞಾನಿಕತೆ’, ‘ವಿಜ್ಞಾನದ ಮನುಷ್ಯತ್ವ’ ಈ ಎರಡರ ಸಾಂಗತ್ಯ ಮತ್ತು ಐಕ್ಯತೆಗಳನ್ನು ಹೇಳುತ್ತವೆ.

ಕಾರ್ಲ್ ಮಾರ್ಕ್ಸ್ ಮತ್ತು ಫೆಡರಿಕ್‌ ಎಂಗಲ್ಸ್ ಪ್ರತಿಪಾದಿಸಿದ ಚಾರಿತ್ರಿಕ ಭೌತವಾದವು, ವಿಜ್ಞಾನವೂ ಸೇರಿದಂತೆ ಮನುಷ್ಯನ ಪ್ರಜ್ಞೆ ಮತ್ತು ಶ್ರಮಗಳಿಂದ ಸೃಷ್ಟಿಯಾದ ಎಲ್ಲವನ್ನೂ ಒಳಗೊಳ್ಳುವ ಸಮಗ್ರ ಲೋಕದೃಷ್ಟಿ. ಬರಿ ವಿಜ್ಞಾನ ಎಂಬುದಿಲ್ಲ. ಇರುವುದು ವಿಜ್ಞಾನದ ಚರಿತ್ರೆ ಮಾತ್ರ. ನಿಸರ್ಗ ವಿಜ್ಞಾನದೊಂದಿಗೆ ಮನುಷ್ಯ ವಿಜ್ಞಾನ, ಅಂದರೆ ಮನುಷ್ಯ ಸಂಬಧಗಳ ವಿಜ್ಞಾನವನ್ನು ಕೂಡಿಸಿದಾಗ ಮಾತ್ರ ಪೂರ್ಣ ವಿಜ್ಞಾನ ಸಾಧ್ಯವಾಗುತ್ತದೆ. ವಾಸ್ತವವಾಗಿ ಅವು ಎರಡಲ್ಲ. ಒಂದೇ ವಿಜ್ಞಾನದ ಎರಡು ಮುಖಗಳು ಅಷ್ಟೆ ಎಂದು ಹೇಳುವ ಮಾರ್ಕ್ಸ್ ನ ಮಾತುಗಳು ಚಾರಿತ್ರಿಕ ಭೌತವಾದೀ ದೃಷ್ಟಿಕೋನದ ಸಮಗ್ರತೆಯನ್ನು ಹೇಳುತ್ತವೆ. ಇಂಥ ಸಮಗ್ರ ದೃಷ್ಟಿಕೋನವಿಲ್ಲದೆ ಮಾಡುವ ವಸ್ತುಗಳ ವಿಶ್ಲೇಷಣೆ ಮತ್ತು ಅವುಗಳ ನಡುವಿನ ಪರಸ್ಪರ ಸಂಬಂಧಗಳ ಅನ್ವೇಷಣೆಯು ನಿಸರ್ಗ ವಿಜ್ಞಾನದ ಶಾಖೆಗಳಲ್ಲಿ ಗೊಂದಲಮಯವಾದ ಪ್ರಶ್ನೆಗಳನ್ನು ಎತ್ತುತ್ತವೆ.

ಜೆ.ಸ್ಟ್ಯೂಅರ್ಟ್ ಕುಕ್ ಹೇಳುವಂತೆ, ವಿಜ್ಞಾನಿಗಳನ್ನು ಅವರ ಗೂಡುಗಳಿಂದ ಹೊರತಂದು ರಾಜಕೀಯ ಮತ್ತು ಆಡಳಿತದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವ ಅಗತ್ಯವಿದೆ.

 

Donate Janashakthi Media

Leave a Reply

Your email address will not be published. Required fields are marked *