ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ
(ಸೆಪ್ಟೆಂಬರ್ 9ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ವಸಂತ ನಡಹಳ್ಳಿ ಅವರ ‘ವಿಜ್ಞಾನ ಎಂಬ ಅಹಂಕಾರ’ಕ್ಕೆ ಪ್ರತಿಕ್ರಿಯೆ)
ವಸಂತ ನಡಹಳ್ಳಿ ಅವರು ತಮ್ಮ ಲೇಖನಕ್ಕೆ ಕೊಟ್ಟಿರುವ ‘ವಿಜ್ಞಾನ ಎಂಬ ಅಹಂಕಾರ’ ಎಂಬ ಶೀರ್ಷಿಕೆಯು ಅವೈಜ್ಞಾನಿಕ ದೃಷ್ಟಿಯ ‘ವಿಜ್ಞಾನಿಗಳು’ ಅನುಸರಿಸುವ ‘ವಿಜ್ಞಾನ’ವನ್ನೇ ನಿಜವಾದ ವಿಜ್ಞಾನವೆಂದು ತಪ್ಪಾಗಿ ಗ್ರಹಿಸಿ ಕೊಟ್ಟ ಶೀರ್ಷಿಕೆಯಾಗಿದೆ. ವಿಜ್ಞಾನ-ತಂತ್ರಜ್ಞಾನಗಳ ಜೀವಪೋಷಕ ಫಲಗಳು ದುರ್ಬಲರಿಗೆ ದೊರೆಯುತ್ತಿಲ್ಲ. ಇದಕ್ಕಾಗಿ ಇವುಗಳ ಮೇಲೆ ಹಿಡಿತವಿಟ್ಟುಕೊಂಡಿರುವ ಬಲಿಷ್ಠರನ್ನು ಹೊಣೆಮಾಡುವ ಬದಲು ವಿಜ್ಞಾನ- ತಂತ್ರಜ್ಞಾನಗಳನ್ನು ಹೊಣೆಮಾಡುವ ಕ್ರಮ, ನಾವು ಬದುಕುವ ಸಮಾಜವು ಹೇಗೆ ಸಂಘಟಿತವಾಗಿದೆ ಮತ್ತು ಅದರ ಬದಲಾವಣೆಯ ಚುಕ್ಕಾಣಿ ಯಾರ ನಿಯಂತ್ರಣದಲ್ಲಿದೆ ಎಂಬುದರ ಬಗ್ಗೆ ಇರುವ ಅಜ್ಞಾನದ ಫಲ.
ಈಚೆಗೆ ವಾರ್ತಾಭಾರತಿಯಲ್ಲಿ ‘ವಿಜ್ಞಾನದ ಎಂಬ ಅಹಂಕಾರ’ ಎನ್ನುವ ಶೀರ್ಷಿಕೆಯೊಂದಿಗೆ ನಡಹಳ್ಳಿ ವಸಂತ ಎಂಬುವರ ಲೇಖನವೊಂದು ಪ್ರಕಟವಾಯಿತು. (ವಾರ್ತಾಭಾರತಿ. ಸೆಪ್ಟೆಂಬರ್ 9)
ಆ ಲೇಖನದ ಮೊದಲ ಪ್ಯಾರಾ ಹೀಗಿದೆ:
“ಇವತ್ತು ವಿಜ್ಞಾನ ತಂತ್ರಜ್ಞಾನಗಳ ಹೆಸರಿನಲ್ಲಿ ನಡೆಯುತ್ತಿರವುದನ್ನು ಪರಾಮರ್ಷೆಗೆ ಒಡ್ಡುವವರಿಗೆ ವಿಜ್ಞಾನದ ವಿರೋಧಿಗಳು ಎಂಬ ಹಣೆಪಟ್ಟಿಯನ್ನು ಹಚ್ಚಲಾಗುತ್ತದೆ. ಇಂತಹವರನ್ನು ಅವಾಸ್ತವಿಕ ಕಲ್ಪನೆಗಳನ್ನಿಟ್ಟುಕೊಂಡು ಕಾಲವನ್ನು ಹಿಂದಿರುಗಿಸುವ ಭ್ರಮೆಯಲ್ಲಿ ಬದುಕುತ್ತಿರುವವರು ಎಂದು ಕಡೆಗಣಿಸಲಾಗುತ್ತದೆ. ದುರದೃಷ್ಟವೆಂದರೆ ಸಾಕಷ್ಟು ಚಿಂತನಶೀಲ ವೈಜ್ಞಾನಿಕ ಮನೋಭಾವವಿರುವವರಲ್ಲಿಯೂ ಇಂತಹದೇ ಅಭಿಪ್ರಾಯಗಳಿವೆ. ಇದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನ, ಯಾಂತ್ರೀಕರಣ, ಕಾರ್ಪೊರೇಟೀಕರಣ, ಜಾಗತೀಕರಣಗಳನ್ನು ಒಳಗೊಂಡಿರುವ ನವಿರಾದ ಬಲೆಯನ್ನು ಸರಿಸಿ ನೋಡಬೇಕಾಗುತ್ತದೆ.“
ನಡಹಳ್ಳಿಯವರು ತಮ್ಮ ಲೇಖನದಲ್ಲಿ ಬಳಸುವ ವಿಜ್ಞಾನದ ನಿರ್ವಚನೆಯು ಗೊಂದಲದಿಂದ ಕೂಡಿದ್ದರೂ ಅವರ ನಿಲುವು ಮಾನವರ ಇತಿಹಾಸದಲ್ಲಿ ‘ವಿಜ್ಞಾನ’ದ ಪಾತ್ರವನ್ನು ಗುರುತಿಸುವಾಗ ಕೆಲಮಟ್ಟಿಗೆ ಮಟ್ಟಿಗೆ ಸಂಗತವಾಗಿಯೇ ಇದೆ. ಆದರೆ, ಅವರ ಪ್ರಕಾರ ‘ವಿಜ್ಞಾನ’ವು ಮನುಷ್ಯರಲ್ಲಿ ಮಾತ್ರವಲ್ಲ ಇತರ ಮಾನವೇತರ ಜೀವಿಗಳಲ್ಲಿಯೂ ಇದೆ. ಜೀವಿಗಳು ಪ್ರತಿಕೂಲ ಸನ್ನಿವೇಶಗಳಲ್ಲಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಸಂತಾನವನ್ನು ಮುಂದುವರೆಸಲು ಅಗತ್ಯವಾದ ವಿವಿಧ ರೂಪದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಶಕ್ತಿಯೇ ವಿಜ್ಞಾನ. ಪ್ರಕೃತಿಯು ಆ ಶಕ್ತಿಯನ್ನು ಮನುಷ್ಯರ ಮೆದುಳಿಗೆ ‘ಕೊಟ್ಟಿರಬೇಕು’. ಎಂದೂ, ಅದೇ ರೀತಿಯಲ್ಲಿ, ಈ ಶಕ್ತಿಯು ಅಂದರೆ ‘ವಿಜ್ಞಾನ’ವು ಇತರ ಜೀವಿಗಳಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಸಂತಾನವನ್ನು ಮುಂದುವರೆಸಲು ಪ್ರಕತಿಯೇ ‘ನೀಡಿರಬಹುದಾದ’ ವಿವಿಧ ರೂಪಗಳಲ್ಲಿರುವ ಪ್ರವೃತ್ತಿಯಾದ್ದರಿಂದ ‘ವಿಜ್ಞಾನ’ವನ್ನು ಮನುಷ್ಯರಿಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ. ಹೀಗಾಗಿ, ನಡಹಳ್ಳಿಯವರ ಪ್ರಕಾರ, “ವಿಜ್ಞಾನ ತಂತ್ರಜ್ಞಾನಗಳು ಕೇವಲ ಮಾನವನಿಗೆ ಸೀಮಿತ ಎನ್ನುವ ತಿಳುವಳಿಕೆಯಲ್ಲಿಯೇ ಅನಗತ್ಯ ಹೆಚ್ಚುಗಾರಿಕೆಯಿದೆ. ಇಲ್ಲಿಂದಲೇ ವಿಜ್ಞಾನದ ಅಹಂಕಾರ ಪ್ರಾರಂಭವಾಗುತ್ತದೆ.”
ನಡಹಳ್ಳಿಯವರ ಮಾತುಗಳಲ್ಲೇ ಹೇಳುವುದಾದರೆ, “ವಿಜ್ಞಾನವೆಂದರೆ, ಸುತ್ತಲಿನ ಭೌತಿಕ ಜಗತ್ತಿನ ಆಗುಹೋಗುಗಳ ಬಗೆಗೆ ಹೆಚ್ಚು ನಿಖರವಾಗಿ ಹಾಗೂ ತಾರ್ಕಿಕವಾಗಿ ತಿಳಿಯುವುದು ಮತ್ತು ತಂತ್ರಜ್ಞಾನವೆಂದರೆ ಹೀಗೆ ದೊರೆತ ಜ್ಞಾನದಿಂದ ನಿತ್ಯಜೀವನವನ್ನು ಹೆಚ್ಚು ಸುರಕ್ಷಿತ ಮತ್ತು ಸಹನೀಯವಾಗಿಸಿಕೊಳ್ಳಲು ಬಳಸುವುದು” ಆದರೆ ನಡಹಳ್ಳಿಯವರ ಪ್ರಕಾರ ಇದು ವಿಜ್ಞಾನ ತಂತ್ರಜ್ಞಾನಗಳ ‘ಸರಳ ವ್ಯಾಖ್ಯೆ’. ಮತ್ತು ಇದನ್ನು “ಇಟ್ಟುಕೊಂಡರೆ’ ಮಾನವನ ಉಗಮವಾದಾಗಿನಿಂದಲೇ ಇವು ನಡೆಯುತ್ತಾ ಬಂದಿರಬೇಕಲ್ಲವೆ?” ಎಂಬ ತಮ್ಮ ಊಹೆಯನ್ನು ಆಧರಿಸಿದ ಅನುಮಾನವನ್ನೂ ವ್ಯಕ್ತಪಡಿಸುತ್ತಾರೆ. ಅವರ ಈ ಮಾತುಗಳ ಹಿಂದೆ, ಮನುಷ್ಯರ ವಿಕಾಸವನ್ನು ಮತ್ತು ಅವರ ಬದುಕಿನ ಸಾಮಾಜಿಕ ಹಂತಗಳನ್ನು ಚಾರಿತ್ರಿಕವಾಗಿ ನೋಡದ ಅಥವಾ ನೋಡಲಾರದ ನಿಲುವಿದೆ. ಅವರು ವಿಜ್ಞಾನವನ್ನು ನಿರ್ದಿಷ್ಟ ಸಾಮಾಜಿಕ ಹಂತಗಳನ್ನು ಆಧರಿಸಿ ರೂಪುಗೊಂಡ ವೈಚಾರಿಕ ಮತ್ತು ತಾರ್ಕಿಕ ಚಿಂತನಾ ವಿಧಾನವನ್ನಾಗಿ ನೋಡದೆ, ನಿಗೂಢವಾಗಿಸಿ ಅದನ್ನು ಒಂದು ಪ್ರಕೃತಿದತ್ತ ಶಕ್ತಿಯೆಂದು ನಂಬುತ್ತಾರೆ. ಪ್ರಾರಂಭದಲ್ಲಿ ಅವರು ವಿಜ್ಞಾನವೆಂದರೆ ಒಂದು ಆಲೋಚನಾ ವಿಧಾನವೆಂದು ತಾತ್ವಿಕವಾಗಿ ಒಪ್ಪಿದರೂ, ಸಾಮಾನ್ಯವಾಗಿ ಅನುಷ್ಠಾನ ಮತ್ತು ಆನ್ವಯಿಕ ನೆಲೆಗಳಲ್ಲಿ ರೂಢಿಗತವಾಗಿರುವ ಜನಸಾಮಾನ್ಯರ ಅರ್ಥದ ವಿಜ್ಞಾನದ ನಿರ್ವಚನೆಯನ್ನೇ ಅನುಸರಿಸುತ್ತಾರೆ. ಅಂದರೆ, ವಿಜ್ಞಾನವೆಂಬುದು ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರ ಮುಂತಾದ ನಿರ್ದಿಷ್ಟ ಬಗೆಯ ಜ್ಞಾನಶಾಖೆಗಳಿಗೆ ಕೊಟ್ಟಿರುವ ಸಾಮಾನ್ಯ ಹೆಸರೆಂಬ ಅರ್ಥದಲ್ಲೇ ಬಳಸುತ್ತಾರೆ. ಜೊತೆಗೆ ಮೇಲೆ ಹೇಳಿದಂತೆ ಎಲ್ಲಾ ಪ್ರಾಣಿಗಳಲ್ಲೂ ಇರುವ ಪ್ರಕೃತಿದತ್ತವಾದ ‘ಶಕ್ತಿ’ ಎಂದೂ ಅಭಿಪ್ರಾಯಪಡುತ್ತಾರೆ.
ಭೌತಿಕ ವಸ್ತುಸ್ಥಿತಿಯನ್ನು ಆಧರಿಸಿ ದತ್ತವಾಗುವ ಮನುಷ್ಯರ ಯಾವುದೇ ಅನುಭವವನ್ನು ತಾರ್ಕಿಕವಾಗಿ, ವೈಚಾರಿಕವಾಗಿ ಮತ್ತು ಪುರಾವೆಗಳ ಸಹಿತ ಯಾರಾದರೂ ಪರೀಕ್ಷಿಸಿ ನೋಡಬಹುದಾದ ಕ್ರಮದಲ್ಲಿ ಮಂಡಿಸುವ ಯಾವುದೇ ನಿರಪೇಕ್ಷ ತೀರ್ಮಾನ, ವೈಜ್ಞಾನಿಕ ತೀರ್ಮಾನ ಎನಿಸಿಕೊಳ್ಳುತ್ತದೆ. ಹೀಗಾಗಿ ವಿಜ್ಞಾನ ಎನ್ನುವುದು ಒಂದು ಪಠ್ಯವಲ್ಲ, ಅಥವಾ ನಿರ್ದಿಷ್ಟ ಜ್ಞಾನಸಂಗ್ರಹವಲ್ಲ. ವಸ್ತುಪ್ರಪಂಚವನ್ನು ಮತ್ತು ಮನುಷ್ಯರ ಸಾಮಾಜಿಕ ಸಂಬಂಧಗಳನ್ನು ನಿರ್ದಿಷ್ಟ ಕಾಲದ, ನಿರ್ದಿಷ್ಟ ಸಾಮಾಜಿಕ ಸಂದರ್ಭಗಳಲ್ಲಿ ಗ್ರಹಿಸುವ ಮತ್ತು ಅವನ್ನು ಸಾಧ್ಯವಿದ್ದಷ್ಟೂ ನಿಖರವಾಗಿ ವಿವರಿಸುವ ಒಂದು ವೈಚಾರಿಕ ವಿಧಾನ. ನಿಸರ್ಗ ವಿಜ್ಞಾನದ ಎಲ್ಲಾ ಶಾಖೆಗಳೂ ಮತ್ತು ಮಾನವ ವಿಜ್ಞಾನದ ಎಲ್ಲಾ ಶಾಖೆಗಳೂ ಸೇರಿ ಪೂರ್ಣ ವಿಜ್ಞಾನ ಎನಿಸುತ್ತದೆ. ಇದಕ್ಕೆ ಹೊರತಾದ, ಕೇವಲ ವ್ಯಕ್ತಿಗತ ಪ್ರಯೋಜನ, ವೈಯಕ್ತಿಕ ಅನುಭವ, ನಂಬಿಕೆ, ಊಹೆ, ಅಭಿಪ್ರಾಯಗಳನ್ನು ಆಧರಿಸಿದ ತೀರ್ಮಾನಗಳನ್ನು ವಿಜ್ಞಾನ ಎನ್ನುವುದಿಲ್ಲ. ಹೆಚ್ಚೆಂದರೆ ಅವನ್ನು ಅನುಭವವಾದೀ (ಎಂಪಿರಿಕಲ್) ತೀರ್ಮಾನಗಳೆನ್ನುತ್ತೇವೆ.
ನಡಹಳ್ಳಿಯವರು ಸರಿಯಾಗೇ ಗುರುತಿಸುವಂತೆ, ಬದುಕಿನ ಸಂದರ್ಭದಲ್ಲಿ ನಮ್ಮ ಕರಣಗಳ ಮೂಲಕ ಸಿಗುವ ಅನುಭವಗಳನ್ನು ವೈಜ್ಞಾನಿಕ ವಿಧಾನದಲ್ಲಿ ಪರಿಷ್ಕರಿಸಿ, ಅನ್ವಯಿಸಿ, ನಿತ್ಯ ಜೀವನಕ್ಕೆ ಬೇಕಾದ ಉಪಕರಣ, ಸಲಕರಣೆ ಮತ್ತು ಸಾಧನಗಳನ್ನು ಆವಿಷ್ಕರಿಸಿಕೊಳ್ಳುವ ಕಲೆಯೇ ತಂತ್ರಜ್ಞಾನ. ಆದರೆ ಈ ಕಲೆಯು ಇದ್ದಕ್ಕಿದ್ದಂತೆ ರೂಪುಗೊಳ್ಳುವುದಿಲ್ಲ. ಅಥವಾ ಚಾರಿತ್ರಿಕ ಸಂದರ್ಭಗಳ ವಸ್ತುಸ್ಥಿತಿಗಳಿಂದ ಪ್ರತ್ಯೇಕವಾಗಿರುವುದಿಲ್ಲ. ಆದಿಮಾನವರು ನೆಲಕೆರೆದು ಬೀಜ ಬಿತ್ತುತ್ತಿದ್ದ ಚೂಪುಕೋಲು, ಬೇಟೆಗೆ ಬಳಸುತ್ತಿದ್ದ ಚೂಪುಗಲ್ಲಿನಿಂದ ಹಿಡಿದು, ಮಧ್ಯಯುಗದ ಕೃಷಿಸಲಕರಣೆಯಾದ ನೇಗಿಲು, ರಕ್ಷಣೆ-ಆಕ್ರಮಣಕ್ಕೆ ಬಳಸುವ ಬಂದೂಕು, ಸಂಗೀತವಾದ್ಯ, ಆಧುನಿಕ ಕಾಲದ ರೈಲು ಬಸ್ಸು, ವಿಮಾನ ಕಂಪ್ಯೂಟರ್, ರೊಬೋಟ್ ರಾಕೆಟ್ಟುಗಳವರೆಗೆ ಎಲ್ಲವೂ ಆಯಾ ಕಾಲದ ಚಾರಿತ್ರಿಕ ವಸ್ತುಸ್ಥಿತಿಗಳನ್ನು ಆಧರಿಸಿ, ಜೀವನದ ಮಟ್ಟವನ್ನು ಸುಧಾರಿಸುವಂತೆ, ವಾಣಿಜ್ಯ-ವ್ಯಾಪಾರಗಳ ತೆಕ್ಕೆಗೆ ಸಿಗುವಂತೆ ಆವಿಷ್ಕರಿಸಿದ ಎಲ್ಲಾ ವಸ್ತುಗಳೂ ಆಯಾ ಕಾಲದ ತಂತ್ರಜ್ಞಾನದ ಫಲಗಳೇ. ಅವುಗಳ ಹಿಂದಿರುವ ಆಲೋಚನಾ ವಿಧಾನ, ಅವುಗಳ ಸೃಷ್ಟಿಗೆ ಆಧಾರವಾದ ಪ್ರತಿಭೆ-ಬುದ್ಧಿವಂತಿಕೆ-ಜ್ಞಾನಗಳೂ ಸಹ ಈಗ ನಾವು ವೈಜ್ಞಾನಿಕವೆಂದು ಕರೆಯುವ ವೈಚಾರಿಕ ವಿಧಾನದಲ್ಲಿ ರೂಪಗೊಂಡ ತಿಳುವಳಿಕೆಯೇ.
ಕಾವ್ಯ, ಸಾಹಿತ್ಯ, ಚಿತ್ರಕಲೆ, ತತ್ವಶಾಸ್ತ್ರ ಮುಂತಾದವುಗಳು ಆಯಾ ಕಾಲದ ವಸ್ತುಗಳನ್ನು, ಮನುಷ್ಯ-ಪ್ರಕೃತಿಗಳ ನಡುವಿನ ಒಡನಾಟದಲ್ಲಿ ಹುಟ್ಟುವ ಆಲೋಚನೆ ಮತ್ತು ಭಾವನೆಗಳನ್ನು, ಒಟ್ಟಿನಲ್ಲಿ ಮನುಷ್ಯರ ಜೀವನಾನುಭವವನ್ನು ಆಧರಿಸಿ, ಹಿಗ್ಗಿಸಿ, ಕುಗ್ಗಿಸಿ ಅಥವಾ ವಿಸ್ತರಿಸಿ ಮಾಡಿದ ಮಾನಸಿಕ ಸೃಷ್ಟಿಗಳು. ಅವು ಭೌತಿಕ ವಸ್ತುಗಳ ಪ್ರತೀಕಗಳೇ ಹೊರತು ಅವೇ ವಸ್ತುಗಳಲ್ಲ. ಅಂದರೆ, ಅವು ಭೌತಿಕ ವಸ್ತುಗಳಾಗಿರದೆ, ಮಾನಸಿಕ ಕ್ರಿಯೆಗಳಾದ ಊಹೆ, ಕಲ್ಪನೆ, ವ್ಯಕ್ತಿಗತ ಅನುಭವ ಮತ್ತು ನಂಬಿಕೆಗಳನ್ನು ಆಧರಿಸಿ ರೂಪುಗೊಳ್ಳುವುದರಿಂದ ಅವುಗಳನ್ನು ವಿಜ್ಞಾನವೆನ್ನುವುದಿಲ್ಲ. ಆದರೆ, ಅವನ್ನು ಮನುಷ್ಯರ ಬದುಕಿಗೆ ನಿರುಪಯುಕ್ತವೆಂದು ತಿರಸ್ಕರಿಸುವುದಿಲ್ಲ. ಅವುಗಳ ಮೂರ್ತರೂಪವನ್ನು ಭೌತಿಕವಾಗಿ ಸೃಷ್ಟಿಸಲು ಮತ್ತು ಆಸ್ವಾದಿಸಲು ಸೂಕ್ತ ತಂತ್ರಜ್ಞಾನ ಹಾಗೂ ವೈಜ್ಞಾನಿಕ ದೃಷ್ಟಿ ಬೇಕೇಬೇಕು. ಪುಸ್ತಕ, ಚಿತ್ರ, ಶಿಲ್ಪಕಲಾಕೃತಿ, ದೇವರ ವಿಗ್ರಹ, ರಾಕ್ಷಸಾಕೃತಿಗಳು ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಗೊಮ್ಬೇಮಟೇಶ್ವರನ ಸುಂದರ ಮೂರ್ತಿ, ಬೇಲೂರು-ಹಳೇಬೀಡು ದೇವಸ್ಥಾನಗಳ ಕಲಾಕುಸುರಿ, ತಾಜ್ಮಹಲ್ ನ ಅಳತೆಬದ್ಧ ಸೌಂದರ್ಯ ಇವುಗಳಿಗೆ ಆಧಾರ ವೈಜ್ಞಾನಿಕ ದೃಷ್ಟಿ ಮತ್ತು ಕಲ್ಲು-ಮಣ್ಣು, ಲೋಹ, ಮುಂತಾದ ಭೌತಿಕ ವಸ್ತುಗಳು, ಜೊತೆಗೆ ಮನುಷ್ಯರಿಗೆ ಮಾತ್ರ ವಿಶಿಷ್ಟವಾದ ಅಳತೆ- ಮಾನಕ-ಸೌಂದರ್ಯಪ್ರಜ್ಞೆಗಳನ್ನು ಮೇಳೈಸುವ ವಾಸ್ತುಶಿಲ್ಪಗಳ ತಂತ್ರಜ್ಞಾನಗಳೇ.
ಕೆಲವು ಜಾತಿಯ ಹಕ್ಕಿಗಳು ಮತ್ತು ಜೇನುಹುಳುಗಳಂಥ ಕೀಟಗಳು ಮನುಷ್ಯರ ತಂತ್ರಜ್ಞಾನ ಕೌಶಲಗಳನ್ನೂ ಮೀರಿಸುವಂಥ ಗೂಡುಗಳನ್ನು ನಿರ್ಮಿಸಿದರೂ ಅವು ಮನುಷ್ಯೇತರ ಜೀವಿಗಳ ‘ಪ್ರಕೃತಿದತ್ತ’ ಪ್ರವೃತ್ತಿಗಳ ಫಲವೇ ಹೊರತು ಮನುಷ್ಯರಲ್ಲಿರುವಂತೆ ಸಾಮಾಜಿಕವಾಗಿ ಮತ್ತು ಚಾರಿತ್ರಿಕವಾಗಿ ವಿಕಾಸಗೊಂಡ ಪ್ರಜ್ಞಾಪೂರ್ವಕ ಕ್ರಿಯೆಗಳ ಫಲವಲ್ಲ. ಮನುಷ್ಯರಲ್ಲಿರುವಂತೆ ಪೂರ್ವಾಲೋಚನೆ, ತಾರ್ಕಿಕ ಯೋಜನೆ ಮತ್ತು ಬುದ್ಧಿವಂತಿಕೆ-ಜ್ಞಾನಗಳನ್ನು ಚಾರಿತ್ರಿಕ ಬದುಕಿನ ಸಂದರ್ಭಗಳಲ್ಲಿ ರೂಪುಗೊಂಡ ಉಪಕರಣಗಳೊಂದಿಗೆ ಬೆರೆಸಿ ನಿರ್ಮಿಸಿದ ಭೌತಿಕ ಅಥವಾ ಮಾನಸಿಕ ಸೃಷ್ಟಿಗಳಲ್ಲ. ಕವಿಗಳು ವರ್ಣಿಸುವ ಕೀಟಗಳ ಝೇಂಕಾರದಲ್ಲಿ, ಕೋಗಿಲೆಯ ಸುಮಧುರ ಉಲುಹಿನಲ್ಲಿ, ನವಿಲಿನ ನರ್ತನದಲ್ಲಿ ಇರುವುದು ಹಸಿವು-ಬೇಟೆಗಳ ಸಂದರ್ಭದಲ್ಲಿ ಆಯಾ ಜೀವಿಗಳ ವಿಶಿಷ್ಟತೆಗನುಗುಣವಾಗಿ ವ್ಯಕ್ತವಾಗುವ ಪ್ರಾಣಿಸಹಜ ಪ್ರವೃತ್ತಿಗಳೇ ಹೊರತು ಅವು ಮನುಷ್ಯರಲ್ಲಿರುವಂತೆ ಪೂರ್ವಾಲೋಚನೆ, ತಾರ್ಕಿಕ ಯೋಜನೆ, ಉಪಕರಣಗಳನ್ನು ಬಳಸುವ ಕೌಶಲ, ಸಾಮಾಜಿಕ ತರಬೇತಿ, ಮತ್ತು ಸೌಂದರ್ಯಮೀಮಾಂಸೆಯ ಫಲಗಳಲ್ಲ. ಮನುಷ್ಯರು ಸಾಮಾಜಿಕವಾಗಿ ಸೃಷ್ಟಿಸುವ ವಸ್ತುಗಳಿಗೆ ಬದುಕನ್ನು ಸಾಧ್ಯಮಾಡುವ ಉಪಯೋಗ ಮೌಲ್ಯ ಮತ್ತು ಅದನ್ನಾಧರಿಸಿ, ವಾಣಿಜ್ಯ-ವ್ಯಾಪಾರಗಳನ್ನು ಸಾಧ್ಯಮಾಡುವ ವಿನಿಮಯ ಮೌಲ್ಯ ಎಂಬ ಎರಡು ಮುಖಗಳಿವೆ. ಈ ಆಯಾಮಗಳು ಮನುಷ್ಯೇತರ ಜೀವಿಗಳು ತಮ್ಮ ಪ್ರವೃತ್ತಿಯಾಗಿ ಸೃಷ್ಟಿಸುವ ಕೃತಿಗಳಿಗೆ ಇಲ್ಲ.
ನಡಹಳ್ಳಿಯವರು ಮನುಷ್ಯೇತರ ಜೀವಿಗಳಲ್ಲಿರುವುದೆಂದು ನಂಬುವ ವಿಜ್ಞಾನವೆಂಬ ಶಕ್ತಿಯು ಮನುಷ್ಯರಿಗೆ ಮಾತ್ರ ಇರುವ ವಿಶಿಷ್ಟ ಶಕ್ತಿಯೆಂದು ‘ವೈಜ್ಞಾನಿಕವಾಗಿ ಯೋಚಿಸುವವರೂ’ ಹೇಳುತ್ತಾರೆಂದೂ, ವಿಜ್ಞಾನದ ‘ಸರಳ ವಾಖ್ಯೆ’ಯನ್ನು ಅನುಸರಿಸುವ ಅವರು ಹೇಳುವ ವಿಜ್ಞಾನದ ‘ಅಹಂಕಾರ’ ಇಲ್ಲಿಂದ ಪ್ರಾರಂಭವಾಗುತ್ತದೆಯೆಂದೂ ಅಭಿಪ್ರಾಯಪಡುತ್ತಾರೆ. ವಾಸ್ತವವಾಗಿ ಸಮಸ್ಯೆ ಇರುವುದು ವಿಜ್ಞಾನದಲ್ಲಲ್ಲ. ನಡಹಳ್ಳಿಯವರೂ ಸೇರಿದಂತೆ ‘ಅವರು ವೈಜ್ಞಾನಿಕವಾಗಿ ಯೋಚಿಸುವವರು’ ಎಂದು ಯಾರನ್ನು ನಿರ್ದೇಶಿಸುತ್ತಾರೋ ಅಂಥವರು ಮಾಡುವ ವಿಜ್ಞಾನದ ವ್ಯಾಖ್ಯೆಯಲ್ಲಿದೆ. ವಿಜ್ಞಾನವೆಂದರೆ, ವಿಜ್ಞಾನಿಗಳೆಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಗಣಿತ, ಮನೋವಿಜ್ಞಾನ ಖಗೋಳ ವಿಜ್ಞಾನ, ಅಣುವಿಜ್ಞಾನ ಮುಂತಾದ, ಜ್ಞಾನಶಿಸ್ತುಗಳಲ್ಲಿ ಪರಿಣಿತರಾದವರನ್ನು ಮಾತ್ರ ವಿಜ್ಞಾನಿಗಳೆಂದೂ, ಚರಿತ್ರೆ, ಸಾಹಿತ್ಯ, ಕಲೆ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಜ್ಞಾನ ಶಿಸ್ತುಗಳಲ್ಲಿ ಪರಿಣಿತರಾದವರನ್ನು ವಿಜ್ಞಾನಿಗಳಲ್ಲವೆಂದೂ ಪರಿಗಣಿಸುವ ಅವೈಜ್ಞಾನಿಕ ಮತ್ತು ತಪ್ಪು ವಿಧಾನ ಬಹಳ ಹಿಂದಿನಿಂದಲೂ ವಿಶ್ವದಾದ್ಯಂತ ರೂಢಿಯಲ್ಲಿದೆ. ತಮ್ಮ ತಮ್ಮ ವಿಷಯಗಳಲ್ಲಿ ಮಾತ್ರ ವೈಜ್ಞಾನಿಕ ವಿಧಾನವನ್ನು ಬಳಸಿ, ಅವುಗಳ ಪರಿಧಿಯ ಹೊರಗೆ ಯಾವುದೇ ಸಾಮಾನ್ಯ ವ್ಯಕ್ತಿಯಷ್ಟೇ, ಅಥವಾ ಅವರಿಗಿಂತಲೂ ಹೆಚ್ಚು ಅವೈಜ್ಞಾನಿಕವಾಗಿ ಯೋಚಿಸುವ, ತೀರ್ಮಾನಿಸುವ, ವಿಜ್ಞಾನದ ಹೆಸರಿನಲ್ಲಿ ಅಂಥ ತೀರ್ಮಾನಗಳಿಂದ ಜನರನ್ನು ಪ್ರಭಾವಿಸುವ ‘ವಿಜ್ಞಾನಿ’ಗಳು ವಿಜ್ಞಾನ ಪ್ರಪಂಚದಲ್ಲಿ ಹೇರಳವಾಗಿದ್ದಾರೆ. ಹಾಗೆಯೇ ವೈಜ್ಞಾನಿಕ ವಿಧಾನವನ್ನು ‘ಮಾನವೀಯ ಶಾಸ್ತ್ರ’ಗಳಲ್ಲಿ ಅವು ಸಾಧ್ಯಮಾಡುವಷ್ಟು ವೈಜ್ಞಾನಿಕ ವಿಧಾನವನ್ನು ಬಳಸಿ ಆ ಮಟ್ಟಿನ ನಿಖರ ತೀರ್ಮಾನಗಳನ್ನು ಕೊಡುವ ವೈಜ್ಞಾನಿಕ ಚಿಂತಕರು ನಮ್ಮ ನಡುವೆ ಇದ್ದರೂ ಅವರನ್ನು ಸಾಮಾನ್ಯವಾಗಿ ವಿಜ್ಞಾನಿಗಳೆಂದು ಬಹುಶಃ ನಡಹಳ್ಳಿಯಂಥ ಜನರು ಸೇರಿದಂತೆ ಗುರುತಿಸುವುದಿಲ್ಲ.
ಈ ಮೊದಲು ಹೇಳಿದ್ದನ್ನು ಮತ್ತೊಮ್ಮೆ ಸಂಗ್ರಹಿಸಿ ಹೇಳುವುದಾದರೆ, ಮನುಷ್ಯರು ಪ್ರಕೃತಿಯನ್ನು ವಸ್ತುವಾಗಿ ಪರಿಗಣಿಸಿ ಮಾಡುವ ವೈಜ್ಞಾನಿಕ ಅಧ್ಯಯನ ಶಿಸ್ತುಗಳನ್ನು ಒಟ್ಯಾರೆಯಾಗಿ ‘ನಿಸರ್ಗ ವಿಜ್ಞಾನ’ ಅಥವಾ ವಸ್ತು ವಿಜ್ಞಾನವೆಂದೂ, ಮನುಷ್ಯರನ್ನೇ ಅಧ್ಯಯನ ವಸ್ತುವಾಗಿ ಪರಿಗಣಿಸಿ ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಜ್ಞಾನಶಿಸ್ತುಗಳನ್ನು ಒಟ್ಟಾರೆಯಾಗಿ `ಮಾನವ ವಿಜ್ಞಾನ’ವೆಂದೂ ಕರೆಯುತ್ತಾರೆ. ವಿಜ್ಞಾನವೆಂದಾಗ ಇವೆರಡೂ ಅದರಲ್ಲಿ ಸೇರಿವೆ ಎಂದು ತಿಳಿದರೆ ಅದು ಪೂರ್ಣಾರ್ಥದಲ್ಲಿ ವಿಜ್ಞಾನವಾಗುತ್ತದೆ. ನಡಹಳ್ಳಿಯವರು ತಮ್ಮ ಲೇಖನಕ್ಕೆ ಕೊಟ್ಟಿರುವ ‘ವಿಜ್ಞಾನದ ಅಹಂಕಾರ’ ಎಂಬ ಶೀರ್ಷಿಕೆಯು ಅವೈಜ್ಞಾನಿಕ ದೃಷ್ಟಿಯ `ವಿಜ್ಞಾನಿಗಳು’ ಅನುಸರಿಸುವ ‘ವಿಜ್ಞಾನ’ವನ್ನೇ ನಿಜವಾದ ವಿಜ್ಞಾನವೆಂದು ತಪ್ಪಾಗಿ ಗ್ರಹಿಸಿ ಕೊಟ್ಟ ಶೀರ್ಷಿಕೆಯಾಗಿದೆ.
ತಂತ್ರಜ್ಞಾನದ ಬಗ್ಗೆ ನಡಹಳ್ಳಿಯವರು ಎತ್ತುವ ಆಕ್ಷೇಪದಲ್ಲಿ ಅವರು ಗಣನೆಗೆ ತೆಗೆದುಕೊಳ್ಳದ ಮತ್ತೊಂದು ಬಹು ಮುಖ್ಯ ಅಂಶವಿದೆ. ಬಲಿಷ್ಠರು ದುರ್ಬಲರನ್ನು ತಮ್ಮ ಗುಲಾಮರನ್ನಾಗಿಸಿ ತಮ್ಮ ಬದುಕಿನ ಆಧಾರಗಳಿಗಾಗಿ ಅವರ ಸೃಜನಶಕ್ತಿಯನ್ನು ದುಡಿಸಿಕೊಳ್ಳಲು ಆರಂಭಿಸಿದ ಕಾಲದಿಂದಲೂ ಕಂಡುಬರುವ ಅಂಶ ಅದು. ಯಾವುದೇ ಸೃಷ್ಟಿಯು ಭೂಮಿಯನ್ನು ಬಳಸಿಕೊಂಡು ಮನುಷ್ಯರು ತಮ್ಮ ಸೃಜನಶಕ್ತಿಯನ್ನು ವಸ್ತು-ಚಿಂತನೆಗಳನ್ನಾಗಿ ಪರಿವರ್ತಿಸುವ ಕ್ರಿಯೆಗಳ ಫಲವೇ ಆಗಿದೆ. ಆದರೆ ಬಲಿಷ್ಠರು ಭೂಮಿಯನ್ನು ಆಯಾ ಕಾಲದ ದುರ್ಬಲರ ಸೃಜನಶಕ್ತಿಯನ್ನು, ಅವರು ಸೃಷ್ಟಿಸಲು ಬಳಸುವ ಉಪಕರಣಗಳನ್ನು ತಮ್ಮ ವಶದಲ್ಲಿರಿಸಿಕೊಂಡು ದುರ್ಬಲರನ್ನು ಆಳುವುದರಿಂದ ಚರಿತ್ರೆಯುದ್ದಕ್ಕೂ ಬಲಿಷ್ಠರ ಧೋರಣೆ-ಆಲೋಚನೆಗಳೇ ದುರ್ಬಲರ ಧೋರಣೆ-ಆಲೋಚನೆಗಳು ಎಂಬಂತಾಗಿದೆ. ಭೂಮಿ ಹಾಗೂ ದುರ್ಬಲರ ಸೃಜನಶಕ್ತಿಯ ಫಲಗಳಾದ ವಸ್ತು, ಚಿಂತನೆ, ಹಾಗೂ ಆವಿಷ್ಕಾರಗಳನ್ನು ತಮ್ಮ ವಶದಲ್ಲಿರಿಸಿಕೊಂಡು, ಅವುಗಳ ಬಳಕೆ-ಪ್ರಯೋಜನಗಳನ್ನು ಬಳಸಿಕೊಂಡು ದುರ್ಬಲರ ಜೀವನ ಹಸನಾಗುವಂತೆ ಮಾಡುವ ಬದಲು, ವಾಣಿಜ್ಯ-ವ್ಯಾಪಾರಗಳನ್ನು ಆಧರಿಸಿದ ತಮ್ಮ ಸುಖ-ಲೋಲುಪತೆಗಾಗಿ ಬಳಸಿಕೊಳ್ಳುವುದು ಇಂದಿಗೂ ನಡೆದಿದೆ. ಹೀಗೆ ವಿಜ್ಞಾನ-ತಂತ್ರಜ್ಞಾನಗಳ ಲಾಭಗಳು ಎಲ್ಲರಿಗೂ ಸಿಗುವ ಬದಲು, ಅವುಗಳ ಮೇಲಿನ ಬಲಿಷ್ಠರ ಹಿಡಿತದಿಂದಾಗಿ ವಿಜ್ಞಾನ-ತಂತ್ರಜ್ಞಾನಗಳೇ ಜನವಿರೋಧಿಯಾಗಿರುವಂತೆ, ಮಾನವೀಯತೆಗೆ ಕುರುಡಾಗಿರುವಂತೆ ತೋರುತ್ತವೆ. ಜನವಿರೋಧಿಯಾಗಿರುವುದು ವಿಜ್ಞಾನ-ತಂತ್ರಜ್ಞಾನಗಳಲ್ಲ, ಅವುಗಳನ್ನು ತಮ್ಮ ವಶದಲ್ಲಿರಿಸಿಕೊಂಡು, ನಿಯಂತ್ರಿಸುವ ಬಲಿಷ್ಠರು.
ಒಂದು ಕಾಲದಲ್ಲಿ ನಗ್ನವಾಗಿದ್ದ ದುರ್ಬಲರ ಮೇಲಿನ ದಮನಕಾರೀ ಭೌತಿಕ ಬಲಾತ್ಕಾರ ಆಧುನಿಕ ಕಾಲಗಳಲ್ಲಿ ಪ್ರಭುತ್ವ, ಸಂವಿಧಾನ, ಕಾನೂನು, ಕಟ್ಟಳೆ ಮುಂತಾದ ರೂಪಗಳ ಹಿಂದೆ ಮುಖ ಮರೆಸಿಕೊಂಡಿದೆ. ಇತರ ಸೃಜನಶೀಲ ಮನುಷ್ಯರಂತೆ ವಿಜ್ಞಾನಿಗಳೂ ದುರ್ಬಲರ ಗುಂಪಿಗೆ ಸೇರಿರುವುದರಿಂದ ಅವರ ಆಲೋಚನೆ-ಅಭಿಪ್ರಾಯಗಳು, ಬಲಿಷ್ಠರ ಧೋರಣೆ-ನಿಲುವುಗಳಿಗೆ ಅನುಸಾರವಾಗಿ ಇಲ್ಲದಿದ್ದರೆ, ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಅವನ್ನು ತಮ್ಮದಾಗಿಸಿಕೊಳ್ಳದಿದ್ದರೆ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸದಿದ್ದರೆ ಅವರಿಗೆ ಉಳಿಗಾಲವಿರುವುದಿಲ್ಲ. ಬಲಿಷ್ಠರ ಧೋರಣೆಯನ್ನು ಬೆಂಬಲಿಸಿ ಅವರ ದಾರಿಯನ್ನು ತುಳಿಯುವ ವಿಜ್ಞಾನಿ-ತಂತ್ರಜ್ಞಾನಿಗಳಿಗೆ ಹಣಸಹಾಯ, ಪದವಿ, ಬಿರುದು ಬಾವಲಿಗಳು, ಸ್ಥಾನಮಾನಗಳು ಸಿಗುತ್ತವೆ. ವಿರೋಧಿಸಿದರೆ ಹಣಸಹಾಯದ ನಿರಾಕರಣೆಯ ಜೊತೆಗೆ ನಾನಾ ಬಗೆಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಭಾವಂತರಾಗಿದ್ದೂ ಅವಕಾಶವಂಚಿತರಾಗಿ ಮೂಲೆಗುಂಪಾಗಬೇಕಾಗುತ್ತದೆ. ಈ ಕಾರಣಕ್ಕಾಗಿಯೇ, ದುರ್ಬಬಲರಲ್ಲಿನ ಬಹಳಷ್ಟು ಜನ ಚಿಂತಕರು, ಸಾಹಿತಿಗಳು, ಕಲಾವಿದರು ಮತ್ತು ವಿಜ್ಞಾನಿ-ತಂತ್ರಜ್ಞಾನಿಗಳು, ಬಲಿಷ್ಠರನ್ನು ಬೆಂಬಲಿಸುತ್ತಾರೆ. ಸದಾ ಅವರ ಕೃಪಾದೃಷ್ಟಿಯಲ್ಲಿರಲು ಬಯಸುತ್ತಾರೆ. ಅವರು ಕೊಡಮಾಡುವ ಹಣ-ಸಾಧನ-ಸೌಲಭ್ಯಗಳನ್ನು ಬಳಸಿಕೊಂಡು ಅವರ ಆಣತಿ-ನಿರೀಕ್ಷೆ-ನಿರ್ಧಾರಗಳಿಗನುಸಾರವಾಗಿ ದುರ್ಬಲರಿಗೆ ಮಾರಕವಾದ ಆವಿಷ್ಕಾರ-ಸಂಶೋಧನೆಗಳಲ್ಲಿ ತೊಡಗುತ್ತಾರೆ. ಜೀವಮಾರಕವಾದ ಯಾವುದೇ ಕಾಲದ ಯುದ್ಧಗಳು, ವಾಣಿಜ್ಯ-ವ್ಯಾಪಾರಗಳ ಶಿಷ್ಟ ರೂಪಗಳು ಆಯಾ ಕಾಲದ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ಸಹಯೋಗವಿಲ್ಲದೆ ನಡೆಯುವುದು ಸಾಧ್ಯವೇ ಇಲ್ಲ. ಬಲಿಷ್ಠರು ಮತ್ತು ವಿಜ್ಞಾನ-ತಂತ್ರಜ್ಞಾನಗಳ ನಡುವೆ ಇರುವ ಒಳಸಂಬಂಧಗಳ ಯಾವ ಪರಿಚಯವೂ ಇಲ್ಲದೆ ಹೊರಗಿನಿಂದ ನೋಡುವವರಿಗೆ ವಿಜ್ಞಾನ-ತಂತ್ರಜ್ಞಾನಗಳೇ ಸಗಟಾಗಿ ಮಾನವತೆಗೆ ಮಾರಕವಾಗಿರುವಂತೆ, ಜನವಿರೋಧಿಯಾಗಿರುವಂತೆ ತೋರುತ್ತವೆ.
ಮನುಷ್ಯರ ಜೀವನಾಧಾರ ಅಗತ್ಯಗಳಾದ ಆಹಾರ, ವಸ್ತ್ರ, ವಸತಿ, ವಿದ್ಯೆ, ಔಷಧಿ ಮತ್ತು ನಾನಾ ವಿಧದ ಸೌಲಭ್ಯಗಳ ಸೃಷ್ಟಿಯ ಹಿಂದೆ ಮತ್ತು ನಿತ್ಯನೂತನವಾದ ಆವಿಷ್ಕಾರಗಳ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಮಹತ್ತರ ಪಾತ್ರವಿದೆ. ವಸ್ತು ಮತ್ತು ಸೌಲಭ್ಯಗಳನ್ನು ಎಲ್ಲಾ ಮನುಷ್ಯರ ಬಳಕೆಗಾಗಿ, ಪ್ರಯೋಜನಗಳಿಗಾಗಿ ಸೃಷ್ಟಿಸದೆ, ವ್ಯಾಪಾರಕ್ಕಾಗಿ, ಲಾಭಗಳಿಕೆಗಾಗಿ ಸೃಷ್ಟಿಸುವಂತೆ ಸೃಜನಶೀಲರ ಮೇಲೆ ಬಲಿಷ್ಠರು ಹಾಕುವ ಒತ್ತಡದಿಂದಾಗಿ, ಸೃಜನಕ್ರಿಯೆಯ ಮೇಲಿನ ಬಲಿಷ್ಠರ ಹಿಡಿತದಿಂದಾಗಿ ವಿಜ್ಞಾನ-ತಂತ್ರಜ್ಞಾನಗಳೇ ಆಧುನಿಕ ಕಾಲದ ದುರ್ಬಲರ, ಅಥವಾ ಜನಸಾಮಾನ್ಯರ ಬದುಕಿಗೆ ಮಾರಕವಾದ, ಅಥವಾ ಅನಪೇಕ್ಷಿತವಾದ ಚಟುವಟಿಕೆಗಳಲ್ಲಿ ತೊಡಗಿರುವಂತೆ ಭಾಸವವಾಗುತ್ತದೆ.
ಬಲಿಷ್ಠರ ನಿಯಂತ್ರಣದ ಹೊರತಾಗಿಯೂ ನಮ್ಮ ಪೂರ್ವಿಕರಿಗೆ ಹೋಲಿಸಿದರೆ, ವಿಜ್ಞಾನ ತಂತ್ರಜ್ಞಾನಗಳ ಆವಿಷ್ಕಾರಗಳಿಂದಾಗಿ ಆಧುನಿಕ ಕಾಲದ ಜನಸಾಮಾನ್ಯರ ಸರಾಸರಿ ಆಯಸ್ಸು ಹೆಚ್ಚಾಗಿದೆ. ಯಾವ ಚಕ್ರವರ್ತಿಯೂ ಅನುಭವಿಸಲಾಗದಿದ್ದ ನವಿರಾದ ವಸ್ತ್ರಗಳು, ತಿನಿಸುಗಳು, ಹಣ್ಣು ತರಕಾರಿಗಳು ಇಂದು ವಿಶ್ವದ ಯಾವ ಭಾಗಕ್ಕೆ ಹೋದರೂ ಬಲಿಷ್ಠರಿಗೆ ಸಿಗುತ್ತವೆ. ವಾಣಿಜ್ಯ-ವ್ಯಾಪಾರದಿಂದಾಗಿ ಮರಳುಗಾಡಿನಲ್ಲೂ ಶುದ್ಧೀಕರಿಸಿದ ನೀರು ದೊರೆಯುತ್ತದೆ. ಆಹಾರದ ವೈವಿಧ್ಯ ಮತ್ತು ಸಮೃದ್ಧಿ ಯಾವ ಕಾಲದಲ್ಲೂ ಇಷ್ಟು ಅಗಾಧ ಪ್ರಮಾಣದಲ್ಲಿರಲಿಲ್ಲ. ಮಕ್ಕಳ ಹೆರಿಗೆಯಲ್ಲಿ ಸಾಯುತ್ತಿದ್ದ ಎಳೆ ಪ್ರಾಯದ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಗಣನೀಯವಾಗಿ ಕಡಿಮೆಯಾಗಿದೆ. ನೆಗಡಿಯಾದರೆ ಸಾವನ್ನಪ್ಪುತ್ತಿದ್ದ ಕಾಲ ಹೋಗಿದೆ. ವರ್ಷಕ್ಕೊಂದು ಸಲ ತಪ್ಪದೆ ದಾಳಿಯಿಟ್ಟು ನೂರಾರು ಜನರ ಪ್ರಾಣತೆಗೆದುಕೊಳ್ಳುತ್ತಿದ್ದ, ಹಣವಿದ್ದವರನ್ನೂ ಅಂಗವಿಕಲರನ್ನಾಗಿ ಮಾಡುತ್ತಿದ್ದ ಸಿಡುಬು, ಪ್ಲೇಗು, ಮಲೇರಿಯಾ, ಕಾಲರಾ ಮುಂತಾದ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಜಾಡ್ಯಗಳು ಇಂದು ಇಲ್ಲವೇ ಇಲ್ಲವೆನ್ನುವಷ್ಟು ಕಾಣದಾಗಿವೆ. ಶ್ರೀಮಂತರನ್ನೂ ಬಿಡದೆ ಕೊಲ್ಲುತ್ತಿದ್ದ ಕ್ಷಯರೋಗವು ಇಂದು ಕಡುಬಡವರನ್ನು ಮಾತ್ರ ಬಲಿ ತೆಗೆದುಕೊಳ್ಳುವ ಆರೋಗ್ಯ ಸಮಸ್ಯೆಯಾಗಿದೆ. ಕೆಲವರಿಗೆ ಮಾತ್ರ ಸಿಗುತ್ತಿದ್ದ ಶಿಸ್ತುಬದ್ಧ ಜ್ಞಾನ ಬಲಿಷ್ಠರ ಧೋರಣೆಯ ಹೊರತಾಗಿಯೂ ಇಂದು ಬಹುಜನರಿಗೆ ಲಭ್ಯವಿದೆ. ಇವೆಲ್ಲದರ ಹಿಂದೆ ವಿಜ್ಞಾನ-ತಂತ್ರಜ್ಞಾನಗಳ ಆವಿಷ್ಕಾರಗಳಿವೆ. ಆದರೆ, ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಬಲಿಷ್ಠರ ಹಿಡಿತದಲ್ಲಿರುವುದರಿಂದ, ವಾಣಿಜ್ಯ-ವ್ಯಾಪಾರದ ಸರಕುಗಳಾಗಿರುವುದರಿಂದ, ವಿಜ್ಞಾನ-ತಂತ್ರಜ್ಞಾನಗಳ ಜೀವಪೋಷಕ ಫಲಗಳು ದುರ್ಬಲರಿಗೆ ದೊರೆಯುತ್ತಿಲ್ಲ. ಇದಕ್ಕಾಗಿ ಇವುಗಳ ಮೇಲೆ ಹಿಡಿತವಿಟ್ಟುಕೊಂಡಿರುವ ಬಲಿಷ್ಠರನ್ನು ಹೊಣೆಮಾಡುವ ಬದಲು ವಿಜ್ಞಾನ- ತಂತ್ರಜ್ಞಾನಗಳನ್ನು ಹೊಣೆಮಾಡುವ ಕ್ರಮ ನಾವು ಬದುಕುವ ಸಮಾಜವು ಹೇಗೆ ಸಂಘಟಿತವಾಗಿದೆ, ಮತ್ತು ಅದರ ಬದಲಾವಣೆಯ ಚುಕ್ಕಾಣಿ ಯಾರ ನಿಯಂತ್ರಣದಲ್ಲಿದೆ ಎಂಬುದರ ಬಗ್ಗೆ ಇರುವ ಅಜ್ಞಾನದ ಫಲ.
ಇತ್ತೀಚಿನ ಉದಾಹರಣೆಯನ್ನೇ ತೆಗೆದು ಕೊಳ್ಳುವುದಾದರೆ, ಕೋವಿಡ್ ಜಾಡ್ಯದ ಮಾರಕ ಶಕ್ತಿಯ ಬಗೆಗಿನ ಜ್ಞಾನ ನೇರವಾಗಿ ವಿಜ್ಞಾನದ ಫಲ. ಕೋವಿಡ್ ಸೂಕ್ಷ್ಮಾಣುಗಳನ್ನು ಮನುಷ್ಯರ ಜೀವನಕ್ಕೆ ಮಾರಕವಾದ ಮತ್ತೊಂದು ಜೀವಿಯೆಂದು ಪರಿಶೋಧಿಸಿ, ತಮ್ಮ ಪ್ರಾಣವನ್ನೇ ಒತ್ತೆಯಾಗಿರಿಸಿ, ವೈದ್ಯಕೀಯ ಪರಿಹಾರಕ್ಕಾಗಿ ಹೆಣಗುತ್ತಿರುವ ಪರಿಣಿತರ ದೃಷ್ಟಿಕೋನ ಮತ್ತು ಆಲೋಚನಾ ಕ್ರಮಗಳನ್ನು ರೂಪಿಸಿರುವುದು ವಿಜ್ಞಾನ-ತಂತ್ರಜ್ಞಾನಗಳು. ಈ ಜಾಡ್ಯವನ್ನು ಹತೋಟಿಗೆ ತರಲು ಈವರೆಗೆ ಆವಿಷ್ಕರಿಸಲಾಗಿರುವ ಲಸಿಕೆಗಳು ವಿಜ್ಞಾನ-ತಂತ್ರಜ್ಞಾನಗಳ ನೇರ ಕೊಡುಗೆ. ಇವೆಲ್ಲದರ ನಡುವೆ ಈಗಲೂ ನಡೆಯುತ್ತಿರುವ ದುರ್ಬಲರ ನರಳಿಕೆ, ಸಾವು-ನೋವುಗಳು, ಜೀವನ ಮಟ್ಟದ ಕುಸಿತ, ಆರ್ಥಿಕ ಕಷ್ಟನಷ್ಟಗಳು, ಬಡತನ-ಹಸಿವು-ನಿರುದ್ಯೋಗಗಳ ಹಿಂದೆ, ಬಲಿಷ್ಠರ ಧೋರಣೆಗಳನ್ನು ಬೆಂಬಲಿಸುವ, ನಡಹಳ್ಳಿಯವರು ಹೇಳುವ ‘ವೈಜ್ಞಾನಿಕವಾಗಿ ಯೋಚಿಸುವವರ’ ಪರದೆಯೆಂದು ಕರೆಯುವ ಜಾಗತೀಕರಣ, ಕಾರ್ಪೊರೇಟೀಕರಣಗಳ ಅಮಾನುಷತೆ ಮತ್ತು ಅವೈಜ್ಞಾನಿಕತೆಗಳಿವೆ. ಕೋವಿಡ್ ನ ಪರದೆಯ ಹಿಂದೆ ಬಲಿಷ್ಠರು ಮರೆಮಾಚುತ್ತಿರುವ ಜನರ ತೀರದ ಬವಣೆಗಳಿಗೆ ನೇರ ಕಾರಣ ವಿಜ್ಞಾನ-ತಂತ್ರಜ್ಞಾನಗಳಲ್ಲ. ಕೋವಿಡ್ ಜಾಡ್ಯವೂ ಅಲ್ಲ. ಬದಲು, ಕೋವಿಡ್ ಜಾಡ್ಯವನ್ನೂ, ಅದರ ಪರಿಹಾರೋಪಾಯಗಳ ಲಭ್ಯತೆ-ಅಲಭ್ಯತೆಗಳನ್ನು ಈ ಸಂಕಷ್ಟದ ಕಾಲದಲ್ಲೂ ತಮ್ಮ ಲಾಭಕ್ಕಾಗಿ ನಿಯಂತ್ರಿಸುತ್ತಿರುವ ಅಮಾನುಷ ಬಲಿಷ್ಠರು, ಮತ್ತು ಅವರ ಆರ್ಥಿಕ ಹಾಗೂ ರಾಜಕೀಯ ಹಿತಾಸಕ್ತಿಗಳು. ಇವನ್ನು ನಡಹಳ್ಳಿಯಂಥವರು ನೋಡಲಾಗದಿರುವುದಕ್ಕೆ ಕಾರಣ ವಿಜ್ಞಾನದ ಅಹಂಕಾರವಲ್ಲ, ಅವರ ಚಿಂತನಾಕ್ರಮಕ್ಕೆ ಬಲಿಷ್ಠರು ಹೊದ್ದಿಸಿರುವ ನವಿರಾದ ಬಲೆಯಾದ ಸಾಮಾಜಿಕ ಮತ್ತು ರಾಜಕೀಯ ಅಜ್ಞಾನ.