ಹಾಸನ: ವಿಜ್ಞಾನ ಬಹಳ ರೋಚಕ. ಅದು ಮಾನವನ ಜೀವನವನ್ನು ಸುಂದರ ಹಾಗೂ ಸುಗಮಗೊಳಿಸಿದೆ. ಕೋವಿಡ್ ಕಾಲದಲ್ಲಿ ದೇಶ ಮತ್ತು ಜಗತ್ತನ್ನು ಕಾಪಾಡಿದ್ದು ವಿಜ್ಞಾನವೇ. ಆದರೆ ಅದೇ ಸಂದರ್ಭದಲ್ಲಿ ವೈಜ್ಞಾನಿಕ ಪ್ರಜ್ಞೆ ಇಲ್ಲದೆ ಅದನ್ನು ಮಾನವ ವಿರೋಧಿ ಶಕ್ತಿಯಾಗಿಯೂ ಬಳಸುತ್ತಿರುವುದು ಅಪಾಯಕಾರಿ ಎಂದು ರಷ್ಯಾ-ಉಕ್ರೇನ್ ಯುದ್ಧ ಉಲ್ಲೇಖಿಸಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ ಹೇಳಿದರು.
ಅವರು ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್), ಹಾಸನ ನಗರ ಘಟಕ ತನ್ನ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನವನ್ನು ವಿನೂತನವಾಗಿ ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿ: ಹಾಸನ: ಧೂಮಕೇತು ವೀಕ್ಷಣೆಗೆ ಅಡ್ಡಿ ಮಾಡಿದ ಮೋಡ
ಮಾದರಿ ಜೀವನಶೈಲಿಯಿಂದ ಇಂಗಾಲದ ಸಂಯುಕ್ತಗಳು ವಾತಾವರಣದಲ್ಲಿ ಸೇರಿಕೊಂಡಿವೆ. ಹಾಗೆಯೇ ಕಾಡುಗಳನ್ನು ಕಡಿದು ನೆಲದ ಮೇಲೆ ಆಮ್ಲಜನಕದ ಪ್ರಮಾಣ ಕಡಿಮೆ ಆಗಿದೆ. ಜೊತೆಗೆ ಒತ್ತಡ ಹಾಗೂ ವ್ಯಾಯಾಮ ಕಡೆಗಣಿಸಿದ ಕಾರಣ ಹೊಸ ಹೊಸ ಖಾಯಲೆಗೆಳು ಮಾನವನಲ್ಲಿ ಆವರಿಸಿಕೊಳ್ಳುತ್ತಿದೆ. ಭಾರತ ಸರ್ಕಾರ ಮಾನವನನ್ನು ಇಂತಹ ಖಾಯಿಲೆಗಳಿಂದ ರಕ್ಷಿಸಲು ವಿವಿಧ ಕಡೆ ಸಂಶೋಧಾನಾಲಯಗಳನ್ನು ಸ್ಥಾಪಿಸಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳುತ್ತಿವೆ ಆ ಮೂಲಕ ಜನಾರೋಗ್ಯ ವೃದ್ಧಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿದ್ದ ಹಾಸನದ ಮಲ್ನಾಡ್ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ||ಉಮಾ ಮಾತನಾಡಿ, ಜನರಲ್ಲಿ ವೈಜ್ಞಾನಿಕ ಮನೋವೃತ್ತಿ ಉಂಟು ಮಾಡಿ ಆ ಮೂಲಕ ಅವರ ದೈನಂದಿನ ಜೀವನದಲ್ಲಿ ಅಳವಡಿಸುವಂತೆ ಪ್ರೇರೇಪಿಸುವುದು ಅತ್ಯಂತ ಪ್ರಮುಖವಾದ ಕೆಲಸ ಹಾಗೂ ಮತ್ತದು ಮಾಡಲೇ ಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜ್ಞಾನದ ಪ್ರಯೋಗಗಳನ್ನು, ವಿಜ್ಞಾನದ ವಿಚಾರವನ್ನು ಸಣ್ಣ ಸಣ್ಣ ಪ್ರಯೋಗ, ಘಟನೆಗಳು ಹಾಗೂ ಕಥೆಗಳ ಮೂಲಕ ಅರ್ಥವಾಗುವಂತೆ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ವಿಜ್ಞಾನ ಜನಪ್ರಿಯಗೊಳಿಸಲು ಸರ್.ಸಿ.ವಿರಾಮನ್, ಶ್ರೀನಿವಾಸ ರಾಮನುಜನ್ ಹಾಗೂ ಮೇಡಂ ಕ್ಯೂರಿ ಜನರ ನಡುವೆ ಮಾಡಿದ ಸರಳ ಪ್ರಯೋಗ ಹಾಗೂ ಮಾದರಿಗಳನ್ನು ಹೇಳಿದ ಡಾ||ಉಮಾ ಅವರು, ವಿಜ್ಞಾನವನ್ನು ಸ್ವಯಂಪ್ರೇರಣೆಯಿಂದ ಜನಪರ ಹಾಗೂ ಜನಪ್ರಿಯಗೊಳಿಸುತ್ತಿರುವ ಬಿಜಿವಿಎಸ್ ಕೆಲಸ ಶ್ಲಾಘನೀಯ ಎಂದರು.
ಇದನ್ನು ಓದಿ: ʻಪ್ಲಾಸ್ಟಿಕ್ ಬಂಧನ-ಪರಿಸರ ಸ್ಪಂದನ ಜಾಗೃತಿ ಜಾಥಾʼ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ
ಪ್ರಾಸ್ತವಿಕವಾಗಿ ಮಾತನಾಡಿದ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಹಾಗೂ ವಿಜ್ಞಾನ ಸಂವಹನ ಸಂಚಾಲಕಿ ಪ್ರಮೀಳ, ಸಂವಿಧಾನದ ಆಶಯದಂತೆ ಜನತೆಯಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸದೆ, ತಮ್ಮ ಸಮಸ್ಯೆಗಳಿಗೆ ವಿಜ್ಞಾನದ ಮಾರ್ಗವನ್ನೇ ಅಂತಿಮ ಮಾರ್ಗವಾಗಿ ಆಯ್ದುಕೊಳ್ಳದೆ ಜಾಗತಿಕ ನೆಮ್ಮದಿ ಸಾಧ್ಯವಿಲ್ಲ. ಭಾರತ ಜಾಗತಿಕ ನೆಮ್ಮದಿಗಾಗಿ ಜಾಗತಿಕವಾಗಿ ವಿಜ್ಞಾನದ ಮಾರ್ಗ ಅನುಸರಿಸಬೇಕು ಎಂದು ಘೋಷಿಸಿರುವುದು ಶ್ಲಾಘನೀಯ ಎಂದರು.
ಬಿಜಿವಿಎಸ್ ಜಿಲ್ಲಾ ಸಹಕಾರ್ಯದರ್ಶಿ ಕೆ.ವಿ.ಕವಿತ ಅವರು, ರಾಮನ್ ಪರಿಣಾಮದ ಕುರಿತು ಸರಳವಾಗಿ ಪ್ರಾಯೋಗಿಕವಾಗಿ ತೋರಿಸಿ ರಾಮನ್ ಪರಿಣಾಮ ಎಂದರೇನು ಎಂದು ವಿವರಿಸಿ, ಆಕಾಶ ಮತ್ತು ಸಮುದ್ರದ ನೀರು ಮಾತ್ರವೇ ಏಕೆ ನೀಲಿಯಾಗಿದೆ ಕೆರೆ, ನದಿಗಳ ನೀರು ಏಕೆ ನೀಲಿಯಾಗಿಲ್ಲ ಎಂದು ಪ್ರಯೋಗದ ಮೂಲಕ ತೋರಿಸಿದರು. ರಾಮನ್ ಪರಿಣಾಮದಿಂದಾಗಿ ರಸಾಯನ ವಿಜ್ಞಾನ ಬಣ್ಣಗಳ ವಿಜ್ಞಾನ, ಬೆಳಕಿನ ವಿಜ್ಞಾನ, ಬಟ್ಟೆ ವಿಜ್ಞಾನವೂ ಸೇರಿದಂತೆ ಎಲ್ಲ ವಿಜ್ಞಾನ ಪ್ರಕಾರಗಳು ವೈವಿಧ್ಯಮಾನವಾಗಿ ವಿಕಾಸವಾಗಲು ಸಹಕಾರಿಯಾಗಿದೆ ಎಂದು ಕೆಲವು ಉದಾಹರಣೆಗಳ ಮೂಲಕ ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಅವರು ಸರ್ ಸಿ ವಿ ರಾಮನ್ ಭಾರತವನ್ನು ಸ್ವಾಭಿಮಾನದ ನೆಲೆಯಲ್ಲಿ ಕಟ್ಟಲಿಕ್ಕೆ ವಿದೇಶಿ ರಾಷ್ಟ್ರಗಳ ಕೈಗೊಂಬೆಯಾಗದೆ ಕೇವಲ 160 ರೂ.ಗಳ ಸ್ಥಳೀಯ ಪರಿಕರ ಬಳಸಿ ನೋಬೆಲ್ ಗಳಿಸಿ ಭಾರತದಲ್ಲಿ ವಿಜ್ಞಾನ ಸಂಶೋಧನಾಲಯವನ್ನು ಕಟ್ಟಲು ಅಂದಿನ ಭಾರತ ಸರ್ಕಾರಕ್ಕೆ ನೆರವಾಗಿ ಭಾರತದಲ್ಲಿ ಸಾವಿರಾರು ವಿಜ್ಞಾನಿಗಳು ಉಗಮಿಸಲು ಕಾರಣರಾದರು. ಹಾಗಾಗಿ ವಿಜ್ಞಾನ ದಿನ ಭಾರತಕ್ಕೆ ಸ್ವತಂತ್ರ ನೋಬೆಲ್ ಕನಸುಕಟ್ಟಲು ತವಕಿಸುವ ದಿನ ಎಂದು ವಿವರಿಸಿ ಭಾರತದ ವಿಜ್ಞಾನ ಸಾಧನೆಗಳನ್ನು ಪ್ರದರ್ಶಿಸುವುದು, ಭಾರತದಲ್ಲಿ ವಿಜ್ಞಾನ ಶಿಕ್ಷಣಗಳನ್ನು ಬೆಳೆಸುವುದು, ಭಾರತದ ಜನತೆಯಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬಿತ್ತುವುದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಗಳ ಮಹತ್ವ ಎಂದ ಅವರು, ಈ ನಿಟ್ಟಿನಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳು, ಆಡಳಿತ ವ್ಯವಸ್ಥೆ ಹಾಗೂ ಮಾದ್ಯಮಗಳು ಪಾರಮಾರ್ಥಿಕ ಆಲೋಚನಾ ಮಾರ್ಗ ಕೈಬಿಟ್ಟು ಪ್ರಜಾಸತ್ತಾತ್ಮಕವಾಗಿ ವಿಜ್ಞಾನದ ಹಾದಿ ಹಿಡಿದು ತಮ್ಮ ತಮ್ಮ ಕೆಲಸ ಮಾಡಬೇಕು. ಹಾಗಾದರೆ ಮಾತ್ರ ಜಾಗತಿಕ ನೆಮ್ಮದಿ ಉಕ್ಕಲು ಸಾಧ್ಯ ಎಂದು ಪಿಪಿಟಿ ಮೂಲಕ ಹಲವಾರು ನಿದರ್ಶನಗಳ ಮೂಲಕ ವಿವರಿಸಿದರು.
ಇದನ್ನು ಓದಿ: ದೇಶದಲ್ಲಿ ವಿಜ್ಞಾನಕ್ಕಿಂತ ಮೌಢ್ಯಾಚರಣೆ ಹೆಚ್ಚು ಬೆಳೆಯುತ್ತಿವೆ: ಪ್ರೊ.ಪಾಲಹಳ್ಳಿ ವಿಶ್ವನಾಥ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಆರ್.ಶೇಖರ್ ಮಾತನಾಡಿ ರಾಷ್ಟ್ರೀಯ ವಿಜ್ಞಾನ ದಿನ ಭಾರತಕ್ಕೆ ವಿಜ್ಞಾನದ ಹಾದಿಯೇ ಅಭಿವೃದ್ಧಿಯ ಮಾರ್ಗ ಎಂದು ನೆನಪಿಸಲು, ಪ್ರತಿವರ್ಷ ಹಾಕಿಕೊಡುವ ಘೋಷಣೆಗಳೇ ಸಾಕ್ಷಿ. ಆದರೆ ಅವೆಲ್ಲವೂ ಬರೀ ಘೋಷಣೆಗಳೇ ಆಗುತ್ತಿವೆ. ಅದನ್ನು ಜಾರಿಗೊಳಿಸುವವರು ಹಳೆಯ ಕಂದಾಚಾರದ ಮೂಢನಂಬಿಕೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ನುಡಿದು ಭಾರತ ವಿಜ್ಞಾನ ಜ್ಞಾನವನ್ನು ಸಂಪಾದಿಸಿದರೆ ಮಾತ್ರ ಜಾಗತಿಕ ನಾಯಕತ್ವ ಪಡೆಯಲು ಸಾಧ್ಯ ಎಂದರು.
ತಾಲ್ಲೂಕು ಉಸ್ತುವಾರಿ ನಗರದ ವೈದ್ಯ ಡಾ. ಮಂಜುನಾಥ್ ಭಾಗವಹಿಸಿ ಮಾತನಾಡಿದರು. ಬಿಜಿವಿಎಸ್ ಹಾಸನ ನಗರ ಘಟಕದ ಸಹ ಕಾರ್ಯದರ್ಶಿ ಶ್ವೇತಮೋಹನ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು. ಶಿಕ್ಷಕಿ ದೇವಿರಮ್ಮ ಜ್ಞಾನದೀಪ ಹಿಡಿದು ಬನ್ನಿ ಎನ್ನುವ ವಿಜ್ಞಾನ ಗೀತೆ ಹಾಡಿದರು. ಘಟಕದ ಕಾರ್ಯದರ್ಶಿ ರಮೇಶ್ ಸ್ವಾಗತಿಸಿದರೆ, ಉಪಾಧ್ಯಕ್ಷೆ ಆಶಾ ವಂದಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ