– ಟಿ ಯಶವಂತ
ಕೃಷಿ ಕಾಯ್ದೆಗಳ ರದ್ದತಿ, ವಿದ್ಯುತ್ ಮಸೂದೆ ವಾಪಾಸ್ಸಾತಿ ಹಾಗೂ ರೈತರ ಉತ್ಪನ್ನಗಳಿಗೆ ಶಾಸನ ಬದ್ದ ಕನಿಷ್ಠ ಬೆಂಬಲ ಬೆಲೆ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಒಂಬತ್ತು ತಿಂಗಳಿಂದಲೂ ದೆಹಲಿ ಗಡಿಗಳಲ್ಲಿ ರೈತ ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸಿದ್ದವಿಲ್ಲದ ಇದೇ ಕೇಂದ್ರ ಸರ್ಕಾರದ ರೈತ ಕಲ್ಯಾಣ ಮತ್ತು ಕೃಷಿ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ರವರು ಸ್ವತಃ ಗದ್ದೆಗಿಳಿದು ನಾಟಿ ಕೆಲಸದಲ್ಲಿ ಭಾಗಿಯಾಗಿ ಮಾಧ್ಯಮಗಳಿಗೆ ಪೋಟೋ ಪೋಸ್ ನೀಡಿದ್ದಾರೆ.
ಆದರೆ ತಾನೂ ಇರುವ ಸಂಪುಟ ಅನುಮೋದನೆ ನೀಡಿರುವ ವಿದ್ಯುತ್ ಮಸೂದೆ-2021 ರ ಬಗ್ಗೆ ಅಪ್ಪಿ ತಪ್ಪಿಯೂ ಮಾತಾಡಿಲ್ಲ. ಈಗಷ್ಟೇ ಮೊಟುಕುಗೊಂಡು ಮುಕ್ತಾಯವಾದ ಸಂಸತ್ತಿನಲ್ಲಿ ಮಂಡನೆಯಾಗದೇ ಈ ಮಸೂದೆ ಉಳಿದುಕೊಂಡಿದೆ.! ಈ ವಿದ್ಯುತ್ ಮಸೂದೆಯನ್ನು ವಾಪಸ್ಸು ಪಡೆಯುವುದಾಗಿ ಪ್ರತಿಭಟನಾ ರೈತರಿಗೆ ಇದೇ ಕೇಂದ್ರ ಸರ್ಕಾರ ವಾಗ್ದಾನ ಮಾಡಿತ್ತು. ಈ ಮಾತನ್ನೂ ಸಹ ಉಳಿಸಿಕೊಳ್ಳಲಿಲ್ಲ.
ಇದನ್ನು ಓದಿ: ದರ ಏರಿಕೆಯ ಶಾಕ್ ಮೇಲೆ ಶಾಕ್! ರಾಜ್ಯ ಸರಕಾರದಿಂದ ಕರೆಂಟ್ ಶಾಕ್
ಈ ವಿದ್ಯುತ್ ಮಸೂದೆ-2021 ಸಂಸತ್ತಿನಲ್ಲಿ ಮಂಡನೆಯಾಗುವ ದಿನ ಇಡೀ ದೇಶದಾದ್ಯಂತ ವಿದ್ಯುತ್ ಕಾರ್ಮಿಕರು ಮುಷ್ಕರಕ್ಕೆ ತಯಾರಿ ನಡೆಸಿದ್ದರು. ದೇಶದೆಲ್ಲೆಡೆ ರೈತರ ಆಕ್ರೋಶ ಭುಗಿಲೇಳುವ ಸ್ಪಷ್ಟ ಸೂಚನೆಯಿಂದಾಗಿ ಈ ಮಸೂದೆ ಮಂಡನೆ ಮುಂದೂಡಲ್ಪಟ್ಟಿದೆ.
ಮೋದಿ ಸರ್ಕಾರ ಅಂಗೀಕರಿಸಿರುವ ಕೃಷಿ ಕಾಯ್ದೆಗಳಿಂದ ವಿದ್ಯುತ್ ಮಸೂದೆ-2021 ಅನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ದೇಶದ ರೈತರಲ್ಲಿ ಶೇಕಡಾ 70 ಕ್ಕೂ ಹೆಚ್ಚು ಇರುವ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರನ್ನು ಕೃಷಿ ರಂಗದಿಂದಲೇ ಒಕ್ಕಲೆಬ್ಬಿಸುವ ಉದ್ದೇಶದ ಕೃಷಿ ಕಾಯ್ದೆಗಳ ವೇಗವರ್ಧಕವಾಗಿ ಈ ಪ್ರಸ್ತಾಪಿತ ವಿದ್ಯುತ್ ಕಾಯ್ದೆ ಕೆಲಸ ಮಾಡಲಿದೆ.
ನವ ಉದಾರೀಕರಣ ಆರ್ಥಿಕ ನೀತಿಗಳು ಜಾರಿಗೆ ಬಂದ ನಂತರ ದೇಶದ ಪ್ರತಿಯೊಂದು ರಂಗವನ್ನು ಖಾಸಗಿ ಕಾರ್ಪೊರೇಟ್ ದೈತ್ಯರಿಗೆ ವಹಿಸಲು ಮತ್ತು ಅನುಕೂಲ ಕಲ್ಪಿಸಲು ಕಾಯ್ದೆಗಳು ರೂಪುಗೊಂಡಿವೆ. ವಿದ್ಯುತ್ ರಂಗದ ಇಂತಹ ಒಂದು ಕಾಯ್ದೆಯಾಗಿ ವಿದ್ಯುತ್ ಕಾಯ್ದೆ 2003 ಜಾರಿಗೆ ಬಂತು. ಈ ಕಾಯ್ದೆಯ ಮುಂದಿನ ಅವತರಣಿಕೆಯೇ ವಿದ್ಯುತ್ ಮಸೂದೆ-2021 ಆಗಿದೆ.
ಹಲವಾರು ದಶಕಗಳಿಂದ ರಾಜ್ಯ ಸರ್ಕಾರಗಳಿಂದ ಸ್ಥಾಪಿಸಲ್ಪಟ್ಟು ಅವುಗಳ ಮಾಲೀಕತ್ವದಲ್ಲಿರುವ ವಿದ್ಯುತ್ ಚ್ಛಕ್ತಿ ಸರಬರಾಜು ಜಾಲವನ್ನು ಖಾಸಗೀಕರಣಗೊಳಿಸುವುದೇ ಈ ಕಾಯ್ದೆಯ ಗುರಿಯಾಗಿದೆ. ಇದನ್ನು ಈ ಮಸೂದೆ ಬಹಳ ಸ್ಪಷ್ಟವಾಗಿ ಹೇಳುತ್ತಿದೆ.
ವಿದ್ಯುತ್ ಚ್ಛಕ್ತಿಯು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇರುವುದನ್ನು ನಿರ್ಲಕ್ಷಿಸಿ ಹಲವಾರು ವಿಷಯಗಳ ಮೇಲೆ ರಾಜ್ಯಕ್ಕೆ ಇರುವ ಹಕ್ಕುಗಳನ್ನು ಈ ಮಸೂದೆ ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಆದರೆ ಜನತೆಯನ್ನು ವಿದ್ಯುತ್ ಚ್ವಕ್ತಿ ದರ ಹೆಚ್ಚಳದ ಅಪಘಾತದಿಂದ ಪಾರು ಮಾಡಲು ಇರುವ ಸಬ್ಸಿಡಿಯನ್ನು ನೀಡಲು ಬೇಕಾದ ಹಣಕಾಸಿನ ಭಾರವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ರಾಜ್ಯಗಳ ಮೇಲೆ ಹಾಕಿದೆ.
ಇದನ್ನು ಓದಿ: ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್‌ಸಿ ಅನುಮೋದನೆ
ರಾಜ್ಯ ನಿಗಮಗಳಿಗೆ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಈ ಮಸೂದೆ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಇಂತಹ ಕ್ರೂರ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ಮೇಲೆ ದಬ್ಬಾಳಿಕೆ ನಡೆಸಲು ಅನುವು ಮಾಡಿಕೊಡುತ್ತದೆ. ಇದು ದೇಶದ ಒಕ್ಕೂಟ ಪದ್ದತಿಯ ಮೇಲೆ ಮಾಡುವ ಸರ್ವಾಧಿಕಾರಿ ಧಾಳಿಯಲ್ಲದೇ ಬೇರೇನಲ್ಲ.
ರಾಜ್ಯಗಳಿಗೆ ತಮ್ಮದೇ ಆದ ಅಭಿವೃದ್ಧಿ ಕಣ್ಣೋಟವನ್ನು ಯೋಜಿಸಲು, ಅಂದಾಜಿಸಲು ಹಾಗೂ ಜಾರಿ ಮಾಡಲು ಅಧಿಕಾರವಿದೆ. ಆದರೆ ಈ ಕಾಯ್ದೆ ಇಂತಹ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಇದರಿಂದ ಪೂರ್ತಿಯಾಗಿ ರಾಜ್ಯಗಳ ಅಧಿಕಾರ ನಾಶವಾಗಲಿದೆ. ಈ ಕಾಯ್ದೆ ಸಂಪೂರ್ಣವಾಗಿ ಸಂವಿಧಾನದ ಮೂಲಭೂತ ತತ್ವ ಫೆಡರಿಲಿಸಂ(ಒಕ್ಕೂಟವಾದ) ಕ್ಕೆ ವಿರುದ್ದವಾಗಿದೆ.
ಈ ಕಾಯ್ದೆಯು ವಿದ್ಯುತ್ ವ್ಯಾಪಾರದ ರಾಷ್ಟ್ರೀಯ ಗಡಿಗಳನ್ನು ಕೂಡ ತೆಗೆದುಹಾಕುತ್ತದೆ ಅಂದರೆ ಮುಕ್ತವಾಗಿ ಯಾವುದೇ ಗಡಿಗಳ ಹಂಗಿಲ್ಲದೇ ಅಫ್ಘಾನಿಸ್ತಾನದ ತಾಲಿಬಾನ್ ಗಳಿಗೆ, ಪಾಕಿಸ್ತಾನಗಳಿಗೂ ವಿದ್ಯುತ್ ಫೂರೈಸಬಹುದು. ಇದು ದೇಶದ ಭದ್ರತೆಗೆ ಭಾರೀ ಅಪಾಯವನ್ನು ತಂದೊಡ್ಡುವ ದೇಶದ್ರೋಹಿ ಕ್ರಮ ಕೂಡ ಆಗಿದೆ.
ಈ ಕಾಯ್ದೆಯ ಕಾರಣದಿಂದ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆಗಳ ನಡುವಿನ ಸಮನ್ವಯ ಹಾಗೂ ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ ದ್ವಂಸವಾಗುತ್ತದೆ. ಖಾಸಗಿ ಕಂಪನಿಗಳ ಲಾಭಕೋರತನ ಮತ್ತು ವ್ಯಾಪಕವಾದ ಭ್ರಷ್ಟಾಚಾರಕ್ಕೂ ದೊಡ್ಡ ಪ್ರಮಾಣದಲ್ಲಿ ಅವಕಾಶವನ್ನು ಮಾಡಿಕೊಡಲಿದೆ.
ವಿದ್ಯುತ್ ರಂಗದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟ ವಿದ್ಯುತ್ ಕಾಯ್ದೆ-2003 ರ ನಂತರವೇ ವಿದ್ಯುತ್ ಖರೀದಿ ಹಗರಣಗಳು ನಡೆದಿರುವುದನ್ನು ನಾವು ಗಮನಿಸಬಹುದು.
ಉತ್ಪಾದನಾ ಸಾಮಾರ್ಥ್ಯವನ್ನು ದಕ್ಷವಾಗಿ ಪರಿಸರ ಸ್ನೇಹಿಯಾಗಿ ಬಳಸಿಕೊಳ್ಳುವುದಕ್ಕೆ ಈ ಕಾಯ್ದೆ ಅಡ್ಡಿಯಾಗುತ್ತದೆ. ಖಾಸಗಿ ಕಂಪನಿಗಳಿಗೆ ಲಾಭ ಮಾತ್ರವೇ ಮುಖ್ಯವಾಗುವುದರಿಂದ ಈ ಕಾಯ್ದೆಯಿಂದ ಪರಿಸರ ನಾಶಕ್ಕೆ ಅತಿ ಹೆಚ್ಚಿನ ಉತ್ತೇಜನ ಸಿಗಲಿದೆ.
ವಿದ್ಯುತ್ ದರ ಏರಿಕೆಯ ಪ್ರಸ್ತಾಪಕ್ಕೆ ಸಾರ್ವಜನಿಕ ಅಹವಾಲು ಆಲಿಸಿ, ಪರಿಣಾಮಗಳನ್ನು ಅಂದಾಜಿಸುವ ಕರ್ನಾಟಕ ವಿದ್ಯುತ್ ಚ್ವಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ದಂತಹ ನಿಯಂತ್ರಕ ವ್ಯವಸ್ಥೆ ರದ್ದಾಗಿ ಕೃಷಿಕರು, ನೇಕಾರರು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಅಹವಾಲಿಗೆ ಈ ಕಾಯ್ದೆಯಿಂದ ಅವಕಾಶವೇ ಇರುವುದಿಲ್ಲ.
ಇದನ್ನು ಓದಿ: ಮೂರು ಕಾಯ್ದೆಗಳನ್ನು ರದ್ದು ಮಾಡದಿದ್ದರೆ ತೀವ್ರತಮ ರೈತ ಹೋರಾಟ
ಈ ಕಾಯ್ದೆಯಿಂದ ನಿಗಮಗಳ ನಡುವೆ ಅಂದರೆ ನಗರ ಪ್ರದೇಶದ ವಿದ್ಯುತ್ ನಿಗಮಗಳು ಹಾಗೂ ಗ್ರಾಮೀಣ ಪ್ರದೇಶದ ನಿಗಮಗಳ ನಡುವೆ ಇದ್ದ ಕ್ರಾಸ್ ಸಬ್ಸಿಡಿ ಮತ್ತು ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ರಾಹಕರುಗಳ ನಡುವೆ ಇದ್ದ ಕ್ರಾಸ್ ಸಬ್ಸಿಡಿಗಳು ರದ್ದಾಗಲಿವೆ. ಇದರಿಂದಾಗಿ ನಿರುದ್ಯೋಗ ಬಹಳಷ್ಟು ಹೆಚ್ಚಲಿದೆ. ನೀರಾವರಿ ಪಂಪ್ ಸೆಟ್ ಗಾಗಲಿ, ಕುಟೀರ ಜ್ಯೋತಿ – ಭಾಗ್ಯಜ್ಯೋತಿ ಬಳಕೆದಾರರಿಗಾಗಲಿ ರಿಯಾಯಿತಿ ವಿದ್ಯುತ್ ಸೌಲಭ್ಯ ವಿದ್ಯುತ್ ಕಂಪನಿಗಳಿಂದ ಸಿಗುವುದಿಲ್ಲ.
ವಿದ್ಯುತ್ ವಿತರಣೆಯಲ್ಲಿ ಪ್ರಾಂಚೈಸಿಗಳು, ಗುತ್ತಿಗೆ, ಹೊರಗುತ್ತಿಗೆ, ಏಜೆಂಟ್, ದಲ್ಲಾಳಿಗಳ ವ್ಯವಸ್ಥೆ ಜಾರಿಗೆ ಈ ಕಾಯ್ದೆ ಅವಕಾಶ ಮಾಡಿಕೊಡಲಿದೆ.
ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಮತ್ತು ಏಕಸ್ವಾಮ್ಯ ಸಾಧಿಸಲು ಅಂಬಾನಿಯ ಹಿತಾಸಕ್ತಿ ಹೇಗೆ ಕೃಷಿ ಕಾನೂನುಗಳ ಜಾರಿಯ ಹಿಂದೆ ಕೆಲಸ ಮಾಡಿದೆಯೋ ಅದೇ ರೀತಿ ವಿದ್ಯುತ್ ರಂಗದ ಮೇಲೆ ನಿಯಂತ್ರಣ ಮತ್ತು ಏಕಸ್ವಾಮ್ಯ ಸಾಧಿಸುವ ಅದಾನಿಯ ಹಿತಾಸಕ್ತಿ ಈ ಪ್ರಸ್ತಾಪಿತ ಕಾಯ್ದೆಯ ಹಿಂದೆ ಅಡಗಿದೆ. ವಿದ್ಯುತ್ ಆಟೋ ಮೊಬೈಲ್ ಇಂಡಸ್ಟ್ರಿಯ ವಹಿವಾಟಿನ ಮೇಲೆ ಏಕಸ್ವಾಮ್ಯ ಸಾಧಿಸಲು ವಿದ್ಯುತ್ ಉತ್ಪಾದನೆ, ಸರಬರಾಜು, ವಿತರಣೆ ಮೇಲೆ ಏಕಸ್ವಾಮ್ಯ ಸಾಧಿಸಲು ಅದಾನಿಯಂತಹ ಕಾರ್ಪೊರೇಟ್ ದೈತ್ಯರಿಗೆ ನೆರವಾಗುವುದು ಈ ಮಸೂದೆಯ ಗುಪ್ತ ಕಾರ್ಯಸೂಚಿಯಾಗಿದೆ.
ಕೃಷಿ ಅರ್ಥಿಕತೆ ಮೇಲೆ ಈ ಕಾಯ್ದೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಸಕ್ರಮ ಪಂಪ್‌ಸೆಟ್‌ಗಳು ಸೇರಿ ಸುಮಾರು 40 ಲಕ್ಷ ನೀರಾವರಿ ಪಂಪ್‌ಸೆಟ್‌ಗಳು ಇವೆ. ದುಬಾರಿ ವಿದ್ಯುತ್ ದರಗಳಿಂದಾಗಿ ದೇಶದೆಲ್ಲೆಡೆ ಕೋಟ್ಯಾಂತರ ಕೃಷಿಕರು ದಿವಾಳಿಯಾಗಲಿದ್ದಾರೆ. ಇದರಿಂದ ಆಹಾರದ ಬೆಲೆಗಳ ತೀವ್ರ ಏರಿಕೆ ಜೊತೆಗೆ ದೇಶದ ಆಹಾರ ಭದ್ರತೆಗೆ ಭಾರೀ ದೊಡ್ಡ ಅಪತ್ತು ಬರಲಿದೆ.
ಸಾರ್ವಜನಿಕ ತೆರಿಗೆ ಹಣದಿಂದ ನಿರ್ಮಿಸಿರುವ ಸರ್ಕಾರಿ ಪವರ್ ಗ್ರಿಡ್ ಮುಂತಾದ ಮೂಲಭೂತ ಸೌಕರ್ಯಗಳು ಪೂರ್ತಿಯಾಗಿ ಖಾಸಗಿ ಕೈಗಳಿಗೆ ಹಸ್ತಾಂತರವಾಗುವುದರಿಂದ ಗ್ರಿಡ್ ಚಾನಲ್‌ಗಳನ್ನು ಮರು ಜೋಡಿಸಿಕೊಳ್ಳುತ್ತಾರೆ ಮತ್ತು ಪ್ರತ್ಯೇಕ ಗ್ರಿಡ್‌ಗಳನ್ನು ಸ್ಥಾಪಿಸಿಕೊಳ್ಳುತ್ತಾರೆ. ಇದರಿಂದ ಮೀಟರ್ ಕಿತ್ತು ಹಾಕಿದರೂ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯ ಜಾಲವೇ ಇಲ್ಲದಂತಾಗುತ್ತದೆ.
ಈಗ ಇರುವ ದುಬಾರಿ ವಿದ್ಯುತ್ ದರದಿಂದ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ನರಳುತ್ತಿವೆ. ಖಾಸಗೀಕರಣಗೊಂಡ ಮೇಲೆ ಈ ವಿದ್ಯುತ್ ದರಗಳು ಮತ್ತಷ್ಟು ದುಬಾರಿಯಾಗುವುದರಿಂದ ಈ ಕ್ಷೇತ್ರಗಳ ಉತ್ಪಾದನೆ ಮತ್ತು ಉದ್ಯೋಗದ ಪರಿಸ್ಥಿತಿ ಸಂಪೂರ್ಣ ನಾಶವಾಗಲಿದೆ.
ಇತ್ತೀಚೆಗೆ ಕರ್ನಾಟಕದ ನೂತನ ವಿದ್ಯುತ್ ಮಂತ್ರಿ ಸುನೀಲ್ ಕುಮಾರ್, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದಿಲ್ಲ, ಇವೆಲ್ಲಾ ಉಹಾಪೋಹ ಎಂದು ಹೇಳಿಕೆ ನೀಡಿದ್ದಾರೆ. ಇದೇ ರೀತಿ ಕಳೆದ ವರ್ಷ ಕೂಡ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳು ಮುಚ್ವುವುದಿಲ್ಲ ಎಂದು ಹೇಳಿದ್ದರು. ಆದರೆ ಕೇವಲ ಒಂದೇ ವರ್ಷದಲ್ಲಿ ರಾಜ್ಯದ ಎಪಿಎಂಸಿಗಳು ಮುಚ್ಚುವ ಹಂತಕ್ಕೆ ಬಂದಿವೆ. ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕಲಿಲ್ಲ ಅಂದರೆ ವಿದ್ಯುತ್ ಸಂಪರ್ಕವೇ ಇರುವುದಿಲ್ಲ!
ಇದನ್ನು ಓದಿ: ವಿದ್ಯುತ್ ಕಾಯ್ದೆ (ತಿದ್ದುಪಡಿ)-2020 ರೈತಾಪಿ ಕೃಷಿಯನ್ನು ಸರ್ವನಾಶ ಮಾಡುವ ಹುನ್ನಾರ
ನೋಟು ರದ್ದು, ಜಿಎಸ್‌ಟಿ ಮುಂತಾದ ಕ್ರಮಗಳಿಂದ ಈಗಾಗಲೇ ಭಾರೀ ಸಂಕಟದಲ್ಲಿರುವ ರೈತರು, ಸಣ್ಣ ಕೈಗಾರಿಕೆಗಳು ಈ ವಿದ್ಯುತ್ ಕಾಯ್ದೆಯಿಂದ ಮೇಲೆ ಏಳಲಾರದ ಹೊಡೆತ ಅನುಭವಿಸಲಿದ್ದಾರೆ.
ವಿದ್ಯುತ್ ಕ್ಷೇತ್ರದ ಕಾರ್ಮಿಕರು ಅತ್ಯಂತ ಕೆಟ್ಟ ರೀತಿಯಲ್ಲಿ ಬಲಿಪಶುಗಳಾಗಲಿದ್ದಾರೆ. ಬಹುಸಂಖ್ಯಾತ ಖಾಯಂ ನೌಕರರು ಹಂಗಾಮಿ ನೌಕರರಾಗಿ ಪರಿವರ್ತಿತರಾಗಲಿದ್ದಾರೆ. ಹೊರಗುತ್ತಿಗೆ, ಗುತ್ತಿಗೆ ಆಧಾರದ ನೇಮಕಾತಿ ಹಾಗೂ ಫ್ರಾಂಚೈಸಿಗಳನ್ನು ತೊಡಗಿಸಿಕೊಳ್ಳುವುದು ಸರ್ವೆ ಸಾಮಾನ್ಯವಾಗಲಿದೆ. ವೇತನ, ಸಾಮಾಜಿಕ ಭದ್ರತೆಯೂ ಸೇರಿದಂತೆ ಎಲ್ಲಾ ಕಾನೂನಾತ್ಮಕ ಸೌಲಭ್ಯ ಮತ್ತು ಪರಿಹಾರ-ಸವಲತ್ತುಗಳಲ್ಲಿ ತೀವ್ರ ಕಡಿತ ಉಂಟಾಗುತ್ತದೆ. ಇದರಿಂದ ವಿದ್ಯುತ್ ರಂಗದ ಕಾರ್ಮಿಕರು ಬೀದಿಗೆ ಬೀಳುತ್ತಾರೆ.
ಇಂದಿನ ಆಧುನಿಕವಾದ ಪರಿಸ್ಥಿತಿಯಲ್ಲಿ ವಿದ್ಯುತ್ ಮತ್ತು ಸಾರಿಗೆ ಅತ್ಯಂತ ಆಯಕಟ್ಟಿನ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳ ಖಾಸಗೀಕರಣವು ಇಡೀ ದೇಶವನ್ನೇ ದಿವಾಳಿಯಂಚಿಗೆ ಕೊಂಡೊಯ್ಯಲಿದೆ . ಎನ್ರೋನ್ ನಂತಹ ವಿದ್ಯುತ್ ಹಗರಣಗಳು ಇನ್ನು ಮುಂದೆ ಸರಣಿಯೋಪಾದಿಯಲ್ಲಿ ಬರಲಿವೆ. ಅದ್ದರಿಂದ ಈ ಕಾಯ್ದೆ ಕುರಿತು ಜಾಗೃತಿ ಬೆಳೆಸಿಕೊಂಡು ವಿದ್ಯುತ್ ಖಾಸಗೀಕರಣದ ವಿರುದ್ಧ ನಡೆಯುತ್ತಿರುವ ಪ್ರತಿರೋಧದಲ್ಲಿ ಎಲ್ಲರೂ ಭಾಗವಹಿಸಬೇಕಾಗಿದೆ. ಬೆಂಬಲಕ್ಕೆ ನಿಲ್ಲಬೇಕಿದೆ.