ಬೆಂಗಳೂರು : ವಿದ್ಯುತ್ ದರ ಏರಿಕೆ ಹಿಂಪಡೆಯಲು, ಮೂರು ತಿಂಗಳ ವಿದ್ಯುತ್ ದರವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಸಂಘಟನೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವ ಮೂಲಕ ವ್ಯಾಪಕ ಆಕ್ರೋಶವನ್ನು ಹೊರಹಾಕಿದೆ.
ರಾಜ್ಯಾದ್ಯಂತ ಡಿವೈಎಫ್ಐ ಘಟಕ ಮಟ್ಟದಲ್ಲಿ ಚಿಮಣಿ, ಲಾಟೀನು, ದೊಂದಿ, ಕ್ಯಾಂಡಲ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ರಾಜ್ಯ ಸರಕಾರ ವಿದ್ಯುತ್ ದರವನ್ನು ಸತತವಾಗಿ ಏರಿಸುತ್ತಿದೆ. ವಿದ್ಯುತ್ ಬಳಕೆಯ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ಇಂದು ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕೊರೊನಾ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ವಿದ್ಯುತ್ ದರ ಏರಿಸಿರುವುದು ಸರಕಾರದ ಜನ ವಿರೋಧಿ ಧೋರಣೆಗೆ ಸ್ಪಷ್ಟ ಉದಾಹರಣೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಕೊರೊನಾ ಎರಡನೇ ಅಲೆಯ ನಿರ್ವಹಣೆಯ ಭಾಗವಾಗಿ ರಾಜ್ಯ ಸರಕಾರ ಯಾವುದೇ ಪ್ರಾಯೋಗಿಕ ಸಿದ್ದತೆ ಇಲ್ಲದೆ ಸತತ ಎರಡು ತಿಂಗಳಿಗೂ ಹೆಚ್ಚು ಕಾಲ ಲಾಕ್ಡೌನ್ ವಿಧಿಸಿ ಜನರನ್ನು ಮನೆಯೊಳಗಡೆ ಇರುವಂತೆ ಬಲವಂತವಾಗಿ ನಿರ್ಬಂಧಿಸಿದೆ. ಇದರಿಂದಾಗಿ ಜನತೆಯ ದುಡಿಮೆಯ ಅವಕಾಶಗಳು ಪೂರ್ಣವಾಗಿ ಕಸಿಯಲ್ಪಟ್ಟಿದ್ದು, ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ. ಲಾಕ್ಡೌನ್ ಸರಕಾರವೇ ವಿಧಿಸಿದ ನಿರ್ಬಂಧವಾಗಿರುವ ಕಾರಣ ಜನತೆಯ ಜೀವನ ನಿರ್ವಹಣೆಯ ಕನಿಷ್ಟ ಬೇಡಿಕೆಗಳ ಪೂರೈಕೆ ಸರಕಾರದ ಕರ್ತವ್ಯ. ಆದರೆ ಯಾವುದೆ ಪ್ರಾಯೋಗಿಕ ಪರಿಹಾರ ಪ್ಯಾಕೇಜ್ ಒದಗಿಸದ ಸರಕಾರ ಜನ ಸಾಮಾನ್ಯರ ಬದುಕನ್ನು ಅತಂತ್ರಗೊಳಿಸಿದೆ ಎಂದು ಡಿವೈಎಫ್ಐ ಆರೋಪಿಸಿದೆ.
ಸರಕಾರದ ಅಧೀನದಲ್ಲಿರುವ ವಿದ್ಯುತ್, ಕುಡಿಯುವ ನೀರಿನ ದರಗಳನ್ನು ಸರಕಾರ ಸ್ವಯಂ ಪ್ರೇರಣೆಯಿಂದ ಮನ್ನಾ ಮಾಡಬೇಕಿತ್ತು. ಆದರೆ ಲಾಕ್ಡೌನ್ ಅವಧಿಯಲ್ಲಿಯೂ ದುಬಾರಿ ವಿದ್ಯುತ್ ಬಿಲ್ ಪ್ರತಿ ಮನೆಗೂ ನೀಡಲಾಗುತ್ತಿದೆ. ಇದೇ ಅವಧಿಯಲ್ಲಿ ಬಿಲ್ ಪಾವತಿಗೆ ಬಲವಂತ ಇಲ್ಲ ಎಂದು ಹೇಳುತ್ತಲೇ ಲಾಕ್ಡೌನ್ ತೆರವಿನ ನಂತರ ಬಾಕಿ ಮೊತ್ತಗಳನ್ನು ಒಟ್ಟಿಗೆ ಪಾವತಿಸುವ ಅನಿವಾರ್ಯ ಸ್ಥಿತಿಯನ್ನು ಸರಕಾರ ನಿರ್ಮಿಸುತ್ತಿದೆ. ಇದು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಭರಿಸಲಾಗದ ಬಹುದೊಡ್ಡ ಹೊರೆಯಾಗಲಿದೆ. ಆದುದರಿಂದ ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಮೊತ್ತವನ್ನು ಸರಕಾರ ಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಡಿವೈಎಫ್ಐ ಸಂಘಟನೆಯು ತಿಳಿಸಿದೆ.
ಡಿವೈಎಫ್ಐ ಎತ್ತಿರುವ ಬೇಡಿಕೆ ಸರಿಯಾಗಿ ಇದೆ ಸಾರ್ವಜನಿಕರು ವ್ಯಾಪಕ ಬೆಂಬಲವನ್ನು ಘೋಷಿಸಿದ್ದಾರೆ. ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸರಕಾರ ಮೂರು ತಿಂಗಳ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ವಿದ್ಯುತ್ ದರ ಏರಿಕೆಯ ಬರೆಯನ್ನು ನೀಡಿದೆ. ಬಹಳಷ್ಟು ಜನ ಸರಕಾರದ ಕ್ರಮವನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ಸರಕಾರ ಕೂಡಲೇ ವಿದ್ಯುತ್ ದರ ಏರಿಕೆಯನ್ನು ವಾಪಸ್ಸ ಪಡೆಯಬೇಕು ಮತ್ತು ಮೂರು ತಿಂಗಳ ವಿದ್ಯುತ್ ಬಿಲ್ ನ್ನು ಮನ್ನಾ ಮಾಡಲು ಸರಕಾರ ಮುಂದಾಗಬೇಕಿದೆ.