ಬೆಂಗಳೂರು: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಲು ಮುಂದಾಗಿದೆ. ಅತಿ ಶೀಘ್ರದಲ್ಲಿಯೇ ಸರ್ಕಾರ ಪ್ರತಿ ಲೀಟರ್ ಹಾಲಿಗೆ 1 ರೂ. ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಪ್ರತಿ ಲೀಟರ್‌ಗೆ 5 ರೂ. ದರ ಹೆಚ್ಚಳ ಮಾಡಬೇಕೆಂದು ಹಾಲು ಒಕ್ಕೂಟಗಳು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿವೆ.
14 ಹಾಲು ಒಕ್ಕೂಟಗಳು ಏಪ್ರಿಲ 10ರೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಿವೆ. ಈ ಕುರಿತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರ ಜೊತೆಯೂ ಚರ್ಚೆ ನಡೆಸಿ ಹಾಲಿನ ದರ ಹೆಚ್ಚಳದ ಬೇಡಿಕೆ ಇಡಲಾಗುವುದು ಎಂದು ತಿಳಿಸಿವೆ.
ಹಾಲಿನ ದರ ಹೆಚ್ಚಳ ಮಾಡಬೇಕೆಂದು 14 ಒಕ್ಕೂಟಗಳು ಸರ್ಕಾರದ ಮುಂದೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರ್ಕಾರ ಬೇರೆ ಬೇರೆ ಕಾರಣಗಳಿಂದ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಕೊರೊನಾ ಕಾರಣದಿಂದಾಗಿ ಮುಂದೂಡುತ್ತಾ ಬಂದಿತ್ತು.
ಸದ್ಯ ಅಡುಗೆ ಎಣ್ಣೆ ಸಹಿತ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರವೂ ಹೆಚ್ಚಳವಾಗಿದೆ. ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ಒತ್ತಾಯ ಕೇಳಿ ಬಂದಿದೆ. ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ದರ ಹೆಚ್ಚಳದ ಬಗ್ಗೆ ನಿರ್ಧರಿಸಲಾಗುತ್ತದೆ. ರೂ. 3ರಂತೆ ದರ ಹೆಚ್ಚಳ ಮಾಡಿದರೆ, ಪ್ರತಿ ಲೀಟರ್ ಹಾಲಿಗೆ 42 ರೂ. ಆಗುತ್ತದೆ. ಹೀಗೆ ಹೆಚ್ಚುವರಿ ಮೊತ್ತವನ್ನು ರೈತರಿಗೆ ನೀಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.
ಸದ್ಯ ಪ್ರತಿ ಲೀಟರ್ ಹಾಲು ಖರೀದಿಗೆ ರೈತರಿಗೆ 24.5 ರೂ.ನಿಂದ 26ರೂ.ವರೆಗೆ (ಹಾಲಿನ ಕೊಬ್ಬಿನಾಂಶದ ಆಧಾರದ ಮೇಲೆ ದರ ವ್ಯತ್ಯಾಸ) ಕೊಡಲಾಗುತ್ತಿದೆ. ಏಪ್ರಿಲ್ 1ರಿಂದ ರೈತರಿಗೆ ನೀಡುತ್ತಿರುವ ದರದಲ್ಲಿ ಹೆಚ್ಚಳ ಮಾಡಲು ನಿರ್ಧರಿಲಾಗಿದೆ.
ಹಲವು ದಿನಗಳ ಹಿಂದೆಯೇ ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವು. ಆದರೆ, ಕೋವಿಡ್ ಮೂರನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಕೆಲ ಕಾಲ ಈ ಪ್ರಸ್ತಾವನೆಯನ್ನು ಮುಂದೂಡಿ ಎಂದು ಸಲಹೆ ನೀಡಿದ್ದರಂತೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಇನ್ನು ತಡಮಾಡದೆ ಬೆಲೆ ಏರಿಕೆ ಮಾಡಿ ಕೈತೊಳೆದುಕೊಳ್ಳಬೇಕು ಎಂಬ ಹವಣಿಕೆಯಲ್ಲಿ ಎಲ್ಲರೂ ಇದ್ದಾರೆ. ದರ ಏರಿಕೆ ನಿಶ್ಚಿತ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್ ಮಂಡಳಿಯ ಸಭೆ ಕರೆದು ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಹಾಲಿನ ದರ ಹೆಚ್ಚಿಸುವುದು ಸರಿಯಲ್ಲ ಹೆಚ್ ಡಿ ರೇವಣ್ಣ
ದೆಹಲಿಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಒಟ್ಟು 13 ಒಕ್ಕೂಟಗಳು ಇವೆ. ಹಾಸನ ಒಕ್ಕೂಟಕ್ಕೆ 12 ಲಕ್ಷ ಲೀಟರ್ ಹಾಲು ಬರುತ್ತಿದೆ. ನಾವೇನು ಹಣ ಹೆಚ್ಚು ಮಾಡಿ ಎಂದು ಕೇಳಿಲ್ಲ. ಯಾವ ಒಕ್ಕೂಟದವರು ಕೇಳಿದ್ದಾರೋ ಗೊತ್ತಿಲ್ಲ. ಈ ಸಮಯದಲ್ಲಿ ಬೆಲೆ ಹೆಚ್ಚಳ ಮಾಡುವುದು ಸೂಕ್ತವಲ್ಲ. ನಷ್ಟ ತೂಗಿಸಲು ದರ ಹೆಚ್ಚಳ ಮಾಡುವುದು ಸರಿಯಲ್ಲ. ಖಾಸಗಿಯವರ ಹಾಲು ಮಾರಾಟ ವ್ಯವಸ್ಥೆಗಳು ಹೋಗಬೇಕು. ಬೆಂಗಳೂರಿನಲ್ಲಿ 10 ಲಕ್ಷ ಲೀಟರ್ ಖಾಸಗೀಯವರು ಮಾರಾಟ ಮಾಡ್ತಿದ್ದಾರೆ. ಅದನ್ನು ಕೇಳುವವರು ಯಾರೂ ಇಲ್ಲ. ಗ್ರಾಹಕರು ಮತ್ತು ರೈತರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.