ವಿದ್ಯುತ್ ವಲಯದ ಉದ್ದಿಮೆಗಳ ನಷ್ಟಕ್ಕೆ ಯಾರು ಹೊಣೆ? ವರ್ಷಗಳು ಗತಿಸಿದರೂ ಅನುಷ್ಠಾನಗೊಳ್ಳದ ಯೋಜನೆಗಳು? ಸಿಎಜಿ ವರದಿ ಬಿಚ್ಚಿಟ್ಟ ಸತ್ಯವೇನು?!!
ವಿಧಾನಸಭೆಯಲ್ಲಿ ಮಂಡನೆಯಾದ ಸಿಎಜಿ ವರದಿ ಹಲವು ಆತಂಕಗಳನ್ನು ಹೊರಹಾಕಿದೆ. ಏನು ಆ ಆತಂಕಗಳು ಎನ್ನುವದನ್ನೊ ಒಂದೊಂದಾಗಿ ತಿಳಿಸಿಯುತ್ತಾ ಹೋಗೋಣ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯಾಪ್ತಿಯ 50 ಯೋಜನೆಗಳಿಗೆ ವಿವಿಧ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆಯೋದಕ್ಕೆ ವಿಳಂಬ ಆಯ್ತು, ಇದರಿಂದಾಗಿ 1556 ದಶ ಲಕ್ಷ ಯೂನಿಟ್ ಗಳನ್ನು ನಾವು ಕಳೆದುಕೊಳ್ಳುವಂತಾಯಿತು. ಇದರ ಒಟ್ಟು ಮೌಲ್ಯ 556 ಕೋಟಿ ರೂ ಆಗಿದೆ ಎಂದು ಸಿಎಜಿ ವರದಿ ಆತಂಕವನ್ನು ವ್ಯಕ್ತಪಡಿಸಿದೆ.
ಅನುಷ್ಠಾನಗೊಳ್ಳಲು ವಿಳಂಬವಾದ ಯೋಜನೆಗಳು ಈ ರೀತಿ ಇವೆ : ಮೂಲ್ಕಿ ಉಪಕೇಂದ್ರವನ್ನು ಮೇಲ್ದರ್ಜೆಗೇರಿಸುವ ಹಾಗೂ ನಂದಿಕೂರಿನಿಂದ ಮೂಲ್ಕಿಗೆ 11 ಕೆ.ವಿ ಮಾರ್ಗವು, 2008 ರ ಜನವರಿಯಲ್ಲಿ ಆರಂಭವಾಗಿ, ಆಗಸ್ಟ್‌ನಲ್ಲಿ ಪೂರ್ಣಗೊಳಿಸಬೇಕಿತ್ತು. ಈ ವಿಳಂಬಕ್ಕೆ ಕಾರಣ ಗುತ್ತಿಗೆದಾರರು ಎಂಬುದು ತನಿಖೆಯಿಂದ ಸಾಬೀತಾದರೂ ಯಾವುದೆ ಕ್ರಮವನ್ನು ಜರುಗಸಿಲ್ಲ. ಇದರಿಂದಾಗಿ 11 ವರ್ಷ ಕಳೆದರೂ ಈ ಯೋಜನೆ ಪೂರ್ಣವಾಗಿಲ್ಲ. ಈ ಯೋಜನೆಗೆ 13.40 ಕೋಟಿ ರೂ ಯನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ.
ಬೆಳಗಾವಿಯಿಂದ ಘಟಪ್ರಭಾ ಉಪ ಸ್ಟೇಷನ್ನಿಗೆ 110 ಕೆವಿ ಮಾರ್ಗ 2007ರ ಜೂನ್‌ನಲ್ಲಿ ಪ್ರಾರಂಭವಾಗಿ ಡಿಸೆಂಬರ್‌ನಲ್ಲಿ ಮುಗಿಯಬೇಕಿತ್ತು. ಈ ಮಾರ್ಗದ ಉದ್ದಕ್ಕೂ ಅರಣ್ಯ ಭೂಮಿ ಹೆಚ್ಚಾಗಿದ್ದರಿಂದ ಮಾರ್ಗವನ್ನು ರಚಿಸುವುದಕ್ಕಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿತ್ತು. ಅನುಮತಿಯನ್ನು ಪಡೆಯುವದಕ್ಕೆ ಆರು ವರ್ಷಗಳವರೆಗೆ ಕಾಯಬೇಕಾಯಿತು. ಈ ಕಾರಣದಿಂದಾಗಿ ಯೋಜನೆಯ ಅನಿಷ್ಠಾನಕ್ಕೆ 10 ವರ್ಷ ಮೂರು ತಿಂಗಳು ಕಾಲ ವಿಳಂಬವಾಯಿತು.
ಬೆಂಗಳೂರಿನ ದೇವರಬೀಸನಹಳ್ಳಿ ಉಪ ಕೇಂದ್ರ ಹಾಗೂ ಪ್ರಸರಣ ಮಾರ್ಗದ ಕಾಮಗಾರಿಯಲ್ಲಿ ಅನುಮತಿ ಪಡೆಯಲು ವಿಳಂಬ ಮಾಡಿದ್ದರಿಂದ ಯೋಜನೆ ಐದೂವರೆ ವರ್ಷ ತಡವಾಯಿತು. ಉಪ ಕೇಂದ್ರಕ್ಕಾಗಿ ಭರಿಸಲಾದ 131.90 ಕೋಟಿ ಮೊತ್ತವು ಐದು ವರ್ಷಗಳಿಂದ ಖರ್ಚಾಗದೆ ಹಾಗೇ ಉಳಿದಿದೆ.
ಕರ್ನಾಟಕದ ವಿದ್ಯುತ್ ವಲಯದ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಅದರ ಕಾರ್ಯವೈಖರಿಯಲ್ಲಿ ಹಲವು ನಷ್ಟಗಳನ್ನು ಕಂಡುಕೊಂಡಿದೆ. ಸಿಇಜಿ ವರದಿ ಪ್ರಕಾರ, 11 ಉದ್ದಿಮೆಗಳ ಪೈಕೆ ಆರು ಉದ್ದಿಮೆಗಳು 2019 ಕ್ಕೆ 2,928 ಕೋಟಿ ನಷ್ಟವನ್ನು ಅನುಭವಿಸಿವೆ. ಐದು ಉದ್ದಿಮೆಗಳು ಮಾತ್ರ ಲಾಭವನ್ನು ಗಳಿಸಿವೆ. ರಾಯಚೂರು ಪವರ್ ಕಾರ್ಪೊರೇಶನ್ ಲಿಮಿಟೆಡ್ 1,251. 1 ಕೋಟಿ ರೂ ನಷ್ಟವನ್ನು ಅನುಭವಿಸಿದೆ. ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ 992.06 ಕೋಟಿ ರೂ ನಷ್ಟವನ್ನು ಅನುಭವಿಸಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ 209.35 ಕೋಟಿ ರೂ , ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ 472.63 ಕೋಟಿ ರೂ ನಷ್ಟವನ್ನು ಅನುಭವಿಸಿದೆ.
ಐದು ಉದ್ದಿಮೆಗಳು ಲಾಭ ಗಳಿಸಿದ್ದು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ 690 ಕೋಟಿ ರೂ ಲಾಭ ಗಳಿಸಿದೆ. ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ 212.14 ಕೋಟಿ ರೂ ಲಾಭ ಗಳಿಸಿದೆ. ಒಟ್ಟು 1086.71 ಕೋಟಿ ರೂ ಲಾಭವಾಗಿದೆ. ವಿದ್ಯುತ್ ವಲಯದ ಉದ್ದಿಮೆಗಳಲ್ಲಿನ ಹೂಡಿಕೆ 52.75% ರಷ್ಟು ಏರಿಕೆಯಾಗಿದ್ದು, 2014-15ರಲ್ಲಿ, 9,495.8 ಕೋಟಿಯಿಂದ 2018-19ರಲ್ಲಿ ₹ 14,504.76 ಕೋಟಿಗೆ ಏರಿದೆ.
ವಿತರಣಾ ಟ್ರಾನ್ಸ್‌ಫಾರ್ಮರ್ ಕೇಂದ್ರಗಳು ಅಂದ್ರೆ ಡಿಟಿಸಿ ಅಂತಾ ನಾವೇನು ಕರೆಯುತ್ತೇವೆ, ಅಲ್ಲಿ ಮೀಟರ್ ಅಳವಡಿಸುವದರಲ್ಲೂ ದೊಡ್ಡ ಲೋಪದೋಷಗಳಾಗಿದ್ದು, ಲೆಕ್ಕಪರಿಶೋಧನೆಯನ್ನು ನಡೆಸಲು ಎಸ್ಕಾಮ್‌ಗಳು ವಿಫಲವಾಗಿವೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಬೆಸ್ಕಾಮ್ ಮತ್ತು ಹೆಸ್ಕಾಮ್ನಲ್ಲಿ 60% ಡಿಟಿಸಿಗಳಿಗೆ ಮತ್ತು 43% ಮೆಸ್ಕಾಂನಲ್ಲಿ ಮಾತ್ರ ಮೀಟರ್ ಅಳವಡಿಕೆ ಮಾಡಲಾಯಿತು. ಮಾರ್ಚ್ 2019 ರ ಹೊತ್ತಿಗೆ ಮೂರು ಎಸ್ಕಾಂಗಳು ಡಿಟಿಸಿ ಮೀಟರ್ ಗಳ ಅಳವಡಿಕೆಗೆ 449.81 ಕೋಟಿ ರೂ ವೆಚ್ಚವನ್ನು ಮಾಡಿದವು. ಸಾಲವನ್ನು ಪಡೆದ ಪರಿಣಾಮ 133.63 ಕೋಟಿ ರೂ ಬಡ್ಡಿಯನ್ನು ಪಾವತಿಸಲಾಯಿತು. ಬಾಕಿ ಇರುವ ಸಾಲದ ಮೇಲೆ ಈಗ ವರ್ಷಕ್ಕೆ 40.43 ಕೋಟಿ ರೂ ಬಡ್ಡಿಯನ್ನು ಕಟ್ಟಬೇಕಾಗಿದೆ.
ವಿದ್ಯುತ್ ಕಾಯ್ದೆ (ತಿದ್ದುಪಡಿ)-2020 ರೈತಾಪಿ ಕೃಷಿಯನ್ನು ಸರ್ವನಾಶ ಮಾಡುವ ಹುನ್ನಾರ
2014-18ರ ಅವಧಿಯಲ್ಲಿ 18 ಸಾರ್ವಜನಿಕ ಉದ್ದಿಮೆಗಳು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) 84.27 ಕೋಟಿ ರೂಪಾಯಿಯನ್ನು ಭರಿಸಬೇಕಿತ್ತು. ಆದರೆ, 65.3 ಕೋಟಿಯನ್ನಷ್ಟೇ ಭರಿಸಿವೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ 14.28 ಕೋಟಿ ಮೊತ್ತವನ್ನು ಅನರ್ಹ ಕಾರ್ಯಚಟುವಟಿಕೆಗಳ ಮೇಲೆ ಭರಿಸಲಾಗಿತ್ತು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಿತಿಯ ಶಿಫಾರಸು ಇಲ್ಲದೆಯೇ 14.63 ಕೋಟಿ ವ್ಯಯಿಸಲಾಗಿತ್ತು. ಇದರ ಮೇಲ್ವಿಚಾರಣಾ ವ್ಯವಸ್ಥೆ ಸಹ ಅಸಮರ್ಪಕವಾಗಿತ್ತು ಎಂದು ಸಿಎಜಿ ಆಕ್ಷೇಪಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 25.42% ಹಾಗೂ ರಾಜ್ಯದ ಇತರೆಡೆ 17.15% ವಿದ್ಯುತ್ ದರ ಏರಿಕೆಯಾಗಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ 30,000 ಮೆಗಾವ್ಯಾಟ್, ನಮ್ಮಲ್ಲಿರುವ ಬೇಡಿಕೆ ಪ್ರಮಾಣ 8000 ದಿಂದ 10,500 ಮೆಗಾವ್ಯಾಟ್ ಇದೆ. ನಾವೇ ವಿದ್ಯುತ್ ಅನ್ನು ಮಾರುವಂತಹ ಸದೃಢ ಸ್ಥಿತಿಯಲ್ಲಿ ಇದ್ದೇವೆ, ಹೀಗಿದ್ದಾಗ ನಷ್ಟ ಆಗೋಕೆ ಹೇಗೆ ಸಾಧ್ಯ? ಸರಕಾರ ಇದಕ್ಕೆ ಉತ್ತರಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ವಿದ್ಯುತ್ ಖಾಸಗೀಕರಣದಿಂದಾಗಿ ಉದ್ದಿಮೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳುತ್ತಿದೆ. ಯೋಜನೆಗಳು ಅನುಷ್ಠಾನಗೊಳ್ಳದಿರುವುದಕ್ಕೆ ಸರಕಾರದ ನಿರ್ಲಕ್ಷಗಳೆ ಕಾರಣವಾಗಿವೆ ಎಂದು ಬೆಸ್ಕಾಂ ನ ನಿವೃತ್ತ ಡಿಜೆಎಂ ಎಂ.ಜಿ. ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ವಿದ್ಯುತ್ (ತಿದ್ದುಪಡಿ) ಮಸೂದೆ 2020 ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೇಂದ್ರ ಜಂಟಿ ಕಾರ್ಮಿಕ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಿದವು.
ಸಾರ್ವಜನಿಕ ವಲಯದಿಂದ ಖಾಸಗಿ ಕಂಪನಿಗೆ ವಿದ್ಯುತ್ ಖಾಸಗೀಕರಣದ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಬೇಕು. ವಿದ್ಯುತ್ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಖಾಸಗಿ ಪರವಾನಿಗೆಗಳನ್ನು ಮತ್ತು ಫ್ರ್ಯಾಂಚೈಸ್‌ಗಳನ್ನು ರದ್ದುಗೊಳಿಸಿಬೇಕು. ಕೇರಳ ರಾಜ್ಯ ವಿದ್ಯುತ್ ಮಂಡಳಿ ಲಿಮಿಟೆಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿ ಲಿಮಿಟೆಡ್‌ನಲ್ಲಿ ಪ್ರಚಲಿತದಲ್ಲಿರುವ ಯಶಸ್ವಿ ವ್ಯವಸ್ಥೆಯಂತಹ ಯೋಜನೆಗಳನ್ನು ಜಾರಿಗೊಳಿಸುವಂತೆ ಎಲ್ಲಾ ರಾಜ್ಯಗಳ ಉತ್ಪಾದನೆ, ಪ್ರಸರಣ ಮತ್ತು ವಿದ್ಯುತ್ ವಿತರಣೆಯ ಕಾರ್ಯಗಳನ್ನು ಮರುಸಂಘಟಿಸಿಬೇಕು ವಿದ್ಯುತ್ ತಿದ್ದುಪಡಿ ಕಾಯ್ದೆಯು ರೈತರಿಗೆ ಅಪಾಯಕಾರಿಯಾಗಿದ್ದು ಆ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯವನ್ನು ಮಾಡಿದವು.
ಜನರಿಗೆ ‘ಕರೆಂಟ್ ಶಾಕ್’ ನೀಡಿದ ಸರಕಾರ
ಸಿಎಜಿ ಹೊರ ಹಾಕಿರುವ ಆತಂಕಕಾರಿ ವಿಚಾರಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ವಿದ್ಯತ್ ಉಳಿಸುವ ಮತ್ತು ಬೆಳಸುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಬಲಪಡಿಸಬೇಕಿದೆ. ವಿದ್ಯುತ್ ಜನ ಸ್ನೇಹಿಯಾಗಿ, ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸರಕಾರ ಖಾಸಗೀಕರಣ ನೀತಿಗಳನ್ನು ಕೈ ಬಿಡಬೇಕಿದೆ.