ಹಾವೇರಿ: ಹಾವೇರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ||ಶಿವಕುಮಾರ್ ಗುಣಾರೆ ಅವರನ್ನು ಭೇಟಿ ನೀಡಿದ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ಕಾರ್ಯಕರ್ತರು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಮನವಿ ಸಲ್ಲಿಸಿದರು.
ನಗರದ ಗಾಂಧಿ ವೃತ್ತದ ಹತ್ತಿರ ಇರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣ, ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ವಿದ್ಯಾರ್ಥಿನೀಯರಿಗೆ, ಮಹಿಳೆಯರಿಗೆ ಚುಡಾಯಿಸುವುದು, ರೇಗಿಸುವ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದ್ದು ಒಬ್ಬಂಟಿಯಾಗಿ ಓಡಾಡಲು ವಿದ್ಯಾರ್ಥಿನೀಯರು, ಮಹಿಳೆಯರು ಭಯ ಪಡುವಂತ ವಾತಾವರಣ ನಿರ್ಮಾಣವಾಗಿದೆ ಎಂದರು.
ಇದನ್ನು ಓದಿ: ಎಲ್ಲಾ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲು ಎಸ್‌ಎಫ್‌ಐ ಹೋರಾಟ
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಶೋಷಣೆ, ಲೈಂಗಿಕ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು ಸೂಕ್ತ ಭದ್ರತೆ, ರಕ್ಷಣೆ ಇಲ್ಲವಾಗಿದೆ. ದೇಶಾದ್ಯಂತ, ಒಂದಲ್ಲಾ ಒಂದು ಕಡೆ ಇಂತಹ ಅಮಾನವೀಯ ಘಟನೆಗಳು ಜರುಗುತ್ತಿವೆ. ಇಷ್ಟಾದರೂ ಸರ್ಕಾರ ಇವುಗಳ ಬಗ್ಗೆ ಗಮನ ನೀಡದೆ ಇರುವುದೇ ಕೃತ್ಯಗಳು ಹೆಚ್ಚಳ ಕಾರಣವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ – ಕಾಲೇಜು, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಮಾಡಬೇಕೆಂಬ ಕಾನೂನು ಇದ್ದರೂ ಸರ್ಕಾರ ಜಾರಿ ಮಾಡಿಲ್ಲ ತಕ್ಷಣವೇ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಕಾರ್ಯದರ್ಶಿ ಕಾವ್ಯ ಹನ್ನಗೊಡಿಮಠ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಪ್ರತಿನಿತ್ಯ ಮಹಿಳೆಯರ ವಿದ್ಯಾರ್ಥಿನೀಯರ ಮೇಲಿನ ದೌರ್ಜನ್ಯ, ಕೊಲೆಗಳು ನಡೆಯುತ್ತಿದ್ದು ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಬಸ್ ನಿಲ್ದಾಣ, ಶಾಲಾ-ಕಾಲೇಜು, ತಡೆಗೋಡೆಗಳ ಮೇಲೆ ಕುಳಿತುಕೊಂಡು ರೇಗಿಸುವುದು, ಚೂಡಾಯಿಸುವ ಕೃತ್ಯ ಜರುಗುತ್ತಲೇ ಇವೆ. ಇವರ ವಿರುದ್ಧ ಕ್ರಮಕೈಗೊಳಲು ಹೇಳಿದರೆ ಪೊಲೀಸರು ಸಾಕ್ಷಿ ಕೇಳುತ್ತಾರೆ. ವಿವರವಾಗಿ ಕೊಡಿ ಎನ್ನುತ್ತಾರೆ. ಕಾನೂನಾತ್ಮಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳುವುದಿಲ್ಲ. ಇಂದಿಗೂ ಕೆಲ ಮನೆತನಗಳಲ್ಲಿ ಹೆಣ್ಣು ಹೊರಗೆ ಓದಲು ಕಳಿಸುವುದ ಕಷ್ಟ. ಈ ಸಂದರ್ಭದಲ್ಲಿ ಆ ಮಹಿಳೆ, ವಿದ್ಯಾರ್ಥಿನೀಯರು ಪೋಲಿಸ್ ಠಾಣೆ, ಕೋರ್ಟ್ ಅಂತಾ ಓಡಾಡಲು ಸಾದ್ಯವೇ? ಇಡೀ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳು ಇಲ್ಲ. ಕೆಲವೊಂದು ಕಡೆ ಇದ್ದರೂ ಹೆಸರಿಗೆ ಅಷ್ಟೇ ಇದ್ದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದರು.
ಇದನ್ನು ಓದಿ: ವಿದ್ಯಾರ್ಥಿ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಎಸ್‌ಎಫ್‌ಐ ಆಗ್ರಹ
ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ವಿದ್ಯಾರ್ಥಿನಿಯರಿಗೆ- ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಹಾಗೂ ಕೆಎಸ್ಆರ್‌ಟಿಸಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಿಡಿಪಿಐ, ಡಿಡಿಪಿಯು ಎಲ್ಲಾ ಶಾಲಾ ಕಾಲೇಜುಗಳಿಗೆ ನೋಟಿಸ್ಸು ಕಳುಹಿಸಿ ವಿದ್ಯಾರ್ಥಿನೀಯರ ರಕ್ಷಣೆಗಾಗಿ ಸಭೆ, ಕಾರ್ಯಕ್ರಮಗಳು ಆಯೋಜನೆ ಮಾಡಬೇಕು ಎಂದು ಎಸ್‌ಎಫ್‌ಐ ಮನವಿ ಮಾಡಿದೆ.
ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಗಸ್ತು ತಿರುವಂತೆ ಮಾಡಬೇಕು. ವರದ ಪಡೆ ತನ್ನ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಬೇಕು. ದುರಸ್ತಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಬದಲಿಸಬೇಕು. ಪ್ರೋ ವರ್ಮಾ ಸಮಿತಿಯ ಶಿಪಾರಸ್ಸುಗಳನ್ನು ಜಾರಿ ಮಾಡಬೇಕು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ದೂರ ಪೆಟ್ಟಿಗೆ ಹಾಕಿ ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು ಎಂಬ ವಿಚಾರಗಳನ್ನು ಸಹ ಮನವಿಯಲ್ಲಿ ಮನವಿ ಮೂಲಕ ತಿಳಿಸಲಾಗಿದೆ.
ಇದನ್ನು ಓದಿ: ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡದ ಸಮಾಜ ಕಲ್ಯಾಣ ಇಲಾಖೆ-ಮೈಸೂರು ವಿವಿ ವಿರುದ್ಧ ಎಸ್‌ಎಫ್‌ಐ ಆಕ್ರೋಶ
ಮನವಿ ಪತ್ರ ಸ್ವೀಕರಿಸಿದ ಪೋಲಿಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ|| ಶಿವಕುಮಾರ್ ಗುಣಾರೆ ಮಾತನಾಡಿ, ಈಗಾಗಲೇ ವರದ ಪಡೆ ಜಾಗೃತಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ವಿಚಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್‌ಎಫ್‌ಐ ಮುಖಂಡರಾದ ಕವಿತಾ ಜಕ್ಕಣ್ಣನವರ, ವಿದ್ಯಾ ಮುಂದಲಮನಿ, ಪೂಜಾ ಎಲಿ, ಗಾಯತ್ರಿ ದೊಡ್ಡಮನಿ, ಜ್ಯೋತಿ ರಿತ್ತಿ, ಪ್ರೀತಿ ಚೂರಿ, ದಿವ್ಯಾ ವಿರಕ್ತಮಠ ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ