ನವದೆಹಲಿ : ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್‌ನಲ್ಲಿ ಭಾರಿ ಇಳಿಕೆಯಾಗಿದೆ. 2016-17ರಲ್ಲಿ 9503 ವಿದ್ಯಾರ್ಥಿಗಳು ಅದೇ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದು, 2020-21ರಲ್ಲಿ ಇದು 3986ಕ್ಕೆ ಇಳಿದಿದೆ. ನಾಲ್ಕು ವರ್ಷಗಳಲ್ಲಿ ಈ ಕುಸಿತವು ಸುಮಾರು 58% ನಷ್ಟಿದೆ.
ಅದೇ ರೀತಿಯಲ್ಲಿ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ರೂಪಿಸಿದ ಮತ್ತು ಅನುದಾನಿತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್‌ನಲ್ಲಿ ಭಾರಿ ಇಳಿಕೆ ಕಂಡುಬಂದಿದೆ. 2016-17ನೇ ಸಾಲಿನಲ್ಲಿ 4141 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದಿದ್ದು, 2020-21ರಲ್ಲಿ ಫಲಾನುಭವಿಗಳ ಸಂಖ್ಯೆ 2348ಕ್ಕೆ ಇಳಿದಿದೆ. ಈ ಕುಸಿತವು ನಾಲ್ಕು ವರ್ಷಗಳಲ್ಲಿ ಸುಮಾರು 43% ನಷ್ಟಿದೆ.
ಯುಜಿಸಿ ಫೆಲೋಶಿಪ್ ಗಳ ಸಂಖ್ಯೆಯನ್ನು ಕಡಿತಗೊಳಿಸುವಂತಹ ಹಲವು ಆತಂಕಕಾರಿ ಅಂಕಿ-ಅಂಶಗಳು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸದಸ್ಯ ಡಾ.ವಿ. ಶಿವದಾಸನ್ ಪ್ರಶ್ನೆಯಿಂದ ಬೆಳಕಿಗೆ ಬಂದಿವೆ. ಶಿವದಾಸನ್ ಎಸ್‍ಎಫ್‍ಐನ ಮಾಜಿ ಅಧ್ಯಕ್ಷರೂ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ರಾಜ್ಯಸಭೆಯಲ್ಲಿ ನೀಡಿದ ಇನ್ನೂ ಕೆಲವು ಅಂಕಿ-ಅಂಶಗಳು ಹೀಗಿವೆ:
2016-17 ಮತ್ತು 2020-21 ರ ನಡುವೆ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪೋಸ್ಟ್ ಡಾಕ್ಟರೇಟ್ ಫೆಲೋಶಿಪ್‌ಗಳ ಸಂಖ್ಯೆಯನ್ನು 554 ರಿಂದ 332 ಕ್ಕೆ ಇಳಿಸಲಾಗಿದೆ.
ಅದೇ ಅವಧಿಯಲ್ಲಿ, ಮಹಿಳೆಯರಿಗೆ ಪೋಸ್ಟ್ ಡಾಕ್ಟರೇಟ್ ಫೆಲೋಶಿಪ್ ಪಡೆಯುವವರ ಸಂಖ್ಯೆಯನ್ನು 642 ರಿಂದ 434 ಕ್ಕೆ ಇಳಿಸಲಾಗಿದೆ.
ಡಾ. ಎಸ್ ರಾಧಾಕೃಷ್ಣನ್ ಮಾನವಿಕ ವಿಷಯಗಳಲ್ಲಿ ಡಾಕ್ಟರೇಟ್ ಫೆಲೋಶಿಪ್ ಅನ್ನು 2016 ರಿಂದ 2020 ರ ನಡುವೆ 559 ರಿಂದ 14 ಕ್ಕೆ ಇಳಿಸಲಾಗಿದೆ. ಶಿಕ್ಷಕರ ಕೇಂದ್ರಿತ ಯೋಜನೆಗಳ ಫಲಾನುಭವಿಗಳ ಪ್ರಮಾಣ 76% ರಷ್ಟು ಕಡಿಮೆಯಾಗಿದೆ; 2020-21 ರಲ್ಲಿ ಕೇವಲ 14 ವಿದ್ಯಾರ್ಥಿಗಳಿಗೆ ಮಾತ್ರ ಯುಜಿಸಿ ಎಮೆರಿಟಸ್ ಫೆಲೋಶಿಪ್ ನೀಡಲಾಯಿತು – ನಾಲ್ಕು ವರ್ಷಗಳ ಹಿಂದೆ ಈ ಸಂಖ್ಯೆ 559 ಆಗಿತ್ತು.
ಮೂಲಭೂತ ವಿಜ್ಞಾನ ಸಂಶೋಧನಾ ಫೆಲೋಶಿಪ್ ಅದರ ಫಲಾನುಭವಿಗಳಲ್ಲಿ 83% ರಷ್ಟು ಕುಸಿತವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವಿವಿಧ ಯುಜಿಸಿ ಫೆಲೋಶಿಪ್ ಪಡೆಯುವ ಸಂಶೋಧನಾ ವಿದ್ವಾಂಸರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಫೆಬ್ರವರಿ 2 ರಂದು ರಾಜ್ಯಸಭೆಯಲ್ಲಿ ಡಾ ವಿ ಶಿವದಾಸನ್ ಅವರ ನಕ್ಷತ್ರರಹಿತ ಪ್ರಶ್ನೆ ಸಂಖ್ಯೆ 24 ಕ್ಕೆ ಉತ್ತರಿಸುವಾಗ ಈ ಮಾಹಿತಿಗಳನ್ನು ಕೊಟ್ಟಿದೆ. ಫಲಾನುಭವಿಗಳ ಸಂಖ್ಯೆಯಲ್ಲಿನ ಈ ಕಡಿತವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ದಾಳಿಗೆ ಒಳಗಾಗಿರುವ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವ ವಿಷಯದಲ್ಲಿ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ ಎಂದು ಎಸ್‍ಎಫ್‍ಐ ಆತಂಕ ವ್ಯಕ್ತಪಡಿಸಿದೆ.
ಈ ಅನೇಕ ಫೆಲೋಶಿಪ್‌ಗಳನ್ನು ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಮುಂದುವರಿಸಲು ಅಂಚಿನಲ್ಲಿರುವ ವಿಭಾಗಗಳ ವಿದ್ಯಾರ್ಥಿಗಳನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ಪ್ರಾರಂಭಿಸಲಾಗಿದೆ ಎಂಬುದನ್ನು ನೆನಪಿಸಿರುವ ಎಸ್‍ಎಫ್‍ಐ, ಸಾಂಸ್ಥಿಕ ಬೆಂಬಲದ ಕೊರತೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ ಸಂಶೋಧನೆ ಮತ್ತು ಉನ್ನತ ವ್ಯಾಸಂಗದಿಂದ ಹೊರಗುಳಯುವ ಪರಿಸ್ಥಿತಿ ಉಂಟಾಗಿರುವಾಗ ಈ ಅನ್ಯಾಯವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಖಂಡಿಸಿದೆ. ಫೆಲೋಶಿಪ್‌ಗಳ ನಿಧಾನ ಹತ್ಯೆಯು ಭಾರತದಲ್ಲಿ ಉನ್ನತ ಶಿಕ್ಷಣದ ರಂಗದಲ್ಲಿ ಹೊರಗಿಡುವ ಪ್ರಯತ್ನ ಇನ್ನಷ್ಟು ತೀವ್ರಗೊಳ್ಳುತ್ತದೆ. ಈ ಕಾರ್ಯವನ್ನು ನಿರ್ವಹಿಸಲು ಖಾಸಗಿಯವರನ್ನು ಆಹ್ವಾನಿಸುವ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವಿದ್ಯಾರ್ಥಿ ವೇತನವನ್ನು ಒದಗಿಸುವ ತನ್ನ ಕರ್ತವ್ಯದಿಂದ ಹಿಂದೆ ಸರಿಯಲು ಸರ್ಕಾರ ಪ್ರಯತ್ನಿಸುತ್ತಿದೆ.
ಕಳೆದೆರಡು ವರ್ಷಗಳಿಂದ ವಿವಿಧ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ತೀವ್ರವಾದ ಶುಲ್ಕ ಹೆಚ್ಚಳವಾಗಿದೆ. ಇದನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಪಾಂಡಿಚೇರಿ ವಿವಿಯಲ್ಲಿ ಮಾಡಿದಂತೆ ಪಿಯು ನಂತಹ ಕ್ಯಾಂಪಸ್‌ಗಳಲ್ಲಿ ಅಮಾನತುಗೊಳಿಸಲಾಗಿದೆ. ಇದಲ್ಲದೆ ಕಳೆದ ಎರಡು ವರ್ಷಗಳಲ್ಲಿ ಮೂರು ಅವಧಿಗಳಿಗೆ NET-JRF ಪರೀಕ್ಷೆಗಳನ್ನು ನಡೆಸಿಲ್ಲವಾದ್ದರಿಂದಲೂ ಮತ್ತು ಫೆಲೋಶಿಪ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಫೆಲೋಶಿಪ್‌ಗಳ ಹಂಚಿಕೆಯನ್ನು ತಕ್ಷಣವೇ ಹೆಚ್ಚಿಸಬೇಕು ಮತ್ತು ಸಂಖ್ಯೆಯನ್ನು ಕಡಿಮೆ ಮಾಡುವ ಬದಲು ಪ್ರತಿ ವರ್ಷ ಸಾಂಸ್ಥಿಕ ಬೆಂಬಲದೊಂದಿಗೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಇವು ಸಿಗುವಂತೆ ಮಾಡಬೇಕು ಹಾಗೂ ಅಂಚಿನಲ್ಲಿರುವ ವಿಭಾಗಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಫೆಲೋಶಿಪ್‌ಗಳನ್ನು ಆರಂಭಿಸಬೇಕು ಎಂದಿರುವ ಎಸ್‍ಎಫ್‍ಐ, ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಉನ್ನತ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.